ಗುರುವಾರ , ಜೂನ್ 24, 2021
29 °C

ಮಹಾರಾಷ್ಟ್ರದಲ್ಲಿ ಕೋವಿಡ್–19 ಭೀತಿ ನಡುವೆ ಗಣೇಶೋತ್ಸವ: ಈ ವರ್ಷ ಹೇಗಿದೆ ಆಚರಣೆ?

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Maharashtra Ganeshotsav

ಮುಂಬೈ: ಮಹಾರಾಷ್ಟ್ರ ಮತ್ತು ಮುಂಬೈಯಲ್ಲಿ ಈ ವರ್ಷ ಗಣೇಶೋತ್ಸವ ಆಚರಣೆಗೆ ಕೊರೊನಾ ವೈರಸ್ ಸೋಂಕಿನ ಕರಿನೆರಳು ಆವರಿಸಿದೆ. ನೂರಾರು ವರ್ಷಗಳಿಂದ ವೈಭವೋಪೇತವಾಗಿ ನಡೆಯುತ್ತಿದ್ದ ಗಣೇಶೋತ್ಸವ ಈ ಬಾರಿ ಕೋವಿಡ್–19 ಪರಿಣಾಮ ಕಳೆಗುಂದಿದೆ.

ಮುಂಬೈ ಮೆಟ್ರೊಪಾಲಿಟನ್ ಪ್ರದೇಶದ (ಎಂಎಂಆರ್) ಅನೇಕ ಮಂಡಲಗಳು ಸಾರ್ವಜನಿಕ ಆಚರಣೆಯನ್ನು ರದ್ದುಗೊಳಿಸಿವೆ. ಮುಂಬೈ ನಗರ, ಮುಂಬೈ ಉಪನಗರ, ಥಾಣೆ, ಪಾಲ್ಘರ್ ಮತ್ತು ರಾಯಗಢ ಎಂಎಂಆರ್ ವ್ಯಾಪ್ತಿಯಲ್ಲಿ ಬರುತ್ತವೆ.

ಮಹಾರಾಷ್ಟ್ರದಲ್ಲಿ 11 ದಿನಗಳ ಕಾಲ ಗಣೇಶೋತ್ಸವ ಆಚರಣೆ ನಡೆಯಲಿದ್ದು, ಆಗಸ್ಟ್ 22ರ ಗಣೇಶ ಚತುರ್ಥಿಯಂದು ಆರಂಭಗೊಳ್ಳುತ್ತದೆ. ಸೆಪ್ಟೆಂಬರ್ 1ರ ಅನಂತ ಚತುರ್ದಶಿಯಂದು ಸಮಾರೋಪಗೊಳ್ಳಲಿದೆ.

ಇದನ್ನೂ ಓದಿ: 

ಎಂಎಂಆರ್ ವ್ಯಾಪ್ತಿಯಲ್ಲಿ ಸುಮಾರು 4,500ರಿಂದ 5,000 ಸಾರ್ವಜನಿಕ ಮಂಡಲಗಳು ಗಣೇಶೋತ್ಸವ ಆಚರಿಸುತ್ತವೆ. ಮುಂಬೈಯೊಂದರಲ್ಲೇ 2,700ಕ್ಕೂ ಹೆಚ್ಚು ಮಂಡಲಗಳಿವೆ ಎನ್ನಲಾಗಿದೆ.

ಬ್ರುಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದ ಪ್ರಕಾರ, ‘ಬ್ರುಹನ್ಮುಂಬೈ ಸಾರ್ವಜನಿಕ್ ಗಣೇಶೋತ್ಸವ್ ಸಮನ್ವಯ್ ಸಮಿತಿ’ಯು (ಗಣೇಶ ಮಂಡಲಗಳ ಸರ್ವೋಚ್ಚ ಸಮಿತಿ/ಬಿಎಸ್‌ಜಿಎಸ್‌ಎಸ್) ಈ ವರ್ಷ ಅನೇಕ ಮಂಡಲಗಳ ಸಾರ್ವಜನಿಕ ಆಚರಣೆಯನ್ನು ರದ್ದುಗೊಳಿಸಿದೆ.

ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಸಲ್ಲಿಕೆಯಗಿರುವ ಅರ್ಜಿಗಳ ಪ್ರಮಾಣದಲ್ಲಿಯೂ ಗಣನೀಯ ಇಳಿಕೆಯಾಗಿದೆ.

‘ಆರೋಗ್ಯ, ನೈರ್ಮಲ್ಯ, ಅಂತರ ಕಾಯ್ದುಕೊಳ್ಳುವಿಕೆ, ವೇತನ ಕಡಿತ, ಕಂಪನಿಗಳಿಗೆ ಆಗಿರುವ ನಷ್ಟ ಇತ್ಯಾದಿ ಅನೇಕ ಕಾರಣಗಳಿಂದಾಗಿ ಈ ಬಾರಿ ಸಂಭ್ರಮ ಕಡಿಮೆಯಾಗಿದೆ’ ಎಂದು ಬಿಎಸ್‌ಜಿಎಸ್‌ಎಸ್ ಅಧ್ಯಕ್ಷ ನರೇಶ್ ದಹಿಭಾವ್‌ಬಕಾರ್ ತಿಳಿಸಿದ್ದಾರೆ.

ಇದನ್ನೂ ಓದಿ: 

ಅನೇಕ ಹೌಸಿಂಗ್ ಸೊಸೈಟಿಗಳೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕೈಬಿಟ್ಟಿವೆ ಎನ್ನಲಾಗಿದೆ.

ಗಣೇಶೋತ್ಸವ ಆಚರಣೆ ಬದಲು ರಕ್ತ, ಪ್ಲಾಸ್ಮಾ ದಾನ ಶಿಬಿರ: ವಡಾಲಾದ ಗೌಡ ಸಾರಸ್ವತ ಬ್ರಾಹ್ಮಣ ಮಂಡಲ ಮತ್ತು ಖೇತ್‌ವಾಡಿಯ ‘21 ಗಣೇಶ ಮಂಡಲ’ಗಳೂ ಈ ಬಾರಿ ಆಚರಣೆ ರದ್ದುಗೊಳಿಸಿವೆ. ಲಾಲ್‌ಬಗ್‌ಚಾ–ರಾಜಾ ಮಂಡಲವೂ ಗಣೇಶೋತ್ಸವ ಆಚರಣೆ ರದ್ದುಗೊಳಿಸಿದ್ದು, ರಕ್ತದಾನ ಮತ್ತು ಪ್ಲಾಸ್ಮಾ ದಾನ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಿದೆ. ಶಿವಾಜಿ ಪಾರ್ಕ್‌ನ ‘ಸಾರ್ವಜನಿಕ ಗಣೇಶ ಉತ್ಸವ್ ಮಂಡಲ್‌’ ಕೂಡ ರಕ್ತದಾನ ಶಿಬಿರ ಆಯೋಜಿಸುವುದಾಗಿ ತಿಳಿಸಿದೆ.


ಲಾಲ್‌ಬಗ್‌ಚಾ–ರಾಜಾ ಮಂಡಲ 2019ರಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ – ಪಿಟಿಐ ಚಿತ್ರ

ಕರಾವಳಿಯ ಕೊಂಕಣ ಪ್ರದೇಶ ಗಣೇಶೋತ್ಸವ ಆಚರಣೆಗೆ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಈ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಸಾರ್ವಜನಿಕ ಉತ್ಸವಗಳು ಆಚರಣೆಯಾಗುತ್ತವೆ. ಈ ವರ್ಷ ರತ್ನಗಿರಿ, ಸಿಂಧೂದರ್ಗ್ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಗ್ರಾಮಕ್ಕೊಂದರಂತೆ ಗಣೇಶ ಪ್ರತಿಮೆ ಪ್ರತಿಷ್ಠಾಪಿಸಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಉದ್ಯಮಕ್ಕೂ ಹೊಡೆತ: ‘ಮುಂಬೈಯ ಗಣೇಶೋತ್ಸವದಲ್ಲಿ ಸಾಮಾನ್ಯವಾಗಿ ₹1,500 – ₹2,000 ಕೋಟಿ ವಹಿವಾಟು ನಡೆಯುತ್ತದೆ’ ಎಂದಿದ್ದಾರೆ ಮುಂಬೈಯ ತಜ್ಞ ಲೇಖಕ ಅಜಿತ್ ಜೋಶಿ.

‘ಗಣೇಶೋತ್ಸವದ ಮಾರುಕಟ್ಟೆ ಬಹಳ ದೊಡ್ಡದು. ಗಣೇಶ ಮೂರ್ತಿ ತಯಾರಿಕೆ, ಅಲಂಕಾರಿಕಾ ವಸ್ತುಗಳು, ಹೂವು, ಸಿಹಿ ತಿಂಡಿ ತಯಾರಿಕೆ, ಹಣ್ಣು, ತೆಂಗಿನ ಕಾಯಿ, ಎಲೆಕ್ಟ್ರಿಕ್ ವಸ್ತುಗಳು, ಆಭರಣ ಮಾರಾಟ... ಇವೆಲ್ಲದರ ವಹಿವಾಟು ಹಬ್ಬದ ವೇಳೆ ಜೋರಾಗಿರುತ್ತವೆ’ ಎಂದೂ ಅವರು ಹೇಳಿದ್ದಾರೆ. ಈ ಬಾರಿ ಹಬ್ಬದ ಸಂಭ್ರಮ ಕಳೆಗುಂದಿರುವುದು ಈ ಎಲ್ಲ ವಹಿವಾಟಿಗೂ ಹೊಡೆತ ನೀಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: 

ಮೂರ್ತಿ ತಯಾರಿಕೆ, ಮಾರಾಟಕ್ಕೂ ಹೊಡೆತ: ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಕಚ್ಚಾ ವಸ್ತುಗಳ ಲಭ್ಯತೆ ಕಡಿಮೆಯಾಗಿದ್ದು, ಗಣೇಶ ಮೂರ್ತಿ ತಯಾರಿಕೆ ಪ್ರಮಾಣವೂ ಕಡಿಮೆಯಾಗಿದೆ. ಮಾರಾಟದಲ್ಲೂ ಇಳಿಕೆಯಾಗಿದೆ. ಒಟ್ಟಾರೆಯಾಗಿ ಮೂರ್ತಿ ತಯಾರಿಕೆ, ಮಾರಾಟ ಉದ್ಯಮ ತೀವ್ರ ಹಿನ್ನಡೆ ಅನುಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಸರಳ ಆಚರಣೆಗೆ ಸರ್ಕಾರದಿಂದಲೂ ಕರೆ: ಕೋವಿಡ್‌–19 ಹಿನ್ನೆಲೆಯಲ್ಲಿ ಈ ವರ್ಷ ಗಣೇಶೋತ್ಸವವನ್ನು ಸರಳವಾಗಿ ಆಚರಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಈಚೆಗೆ ಕರೆ ನೀಡಿದ್ದಾರೆ. ಗಣೇಶೋತ್ಸವ ಮಂಡಳಿ ಪದಾಧಿಕಾರಿಗಳ ಜತೆಗೆ ವಿಡಿಯೊ ಸಂವಾದ ನಡೆಸಿದ್ದ ಅವರು, ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ಸರಳವಾಗಿ ಹಬ್ಬ ಆಚರಿಸುವಂತೆ ಸೂಚಿಸಿದ್ದಾರೆ.

ಶತಮಾನದ ಇತಿಹಾಸವುಳ್ಳ ಮಹಾರಾಷ್ಟ್ರ ಗಣೇಶೋತ್ಸವ

ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಪುಣೆಯಲ್ಲಿ 1893ರಲ್ಲಿ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದರು. ಅಂದಿನಿಂದ ತೊಡಗಿ ಇಂದಿನವರೆಗೂ ಸಾರ್ವಜನಿಕ ಗಣೇಶೋತ್ಸವ ಎಂಬುದು ಮಹಾರಾಷ್ಟ್ರದ ಪ್ರಮುಖ ಆಚರಣೆಯಾಗಿದೆ. ಆ ದಿನಗಳಲ್ಲಿ ಗಣೇಶೋತ್ಸವವೂ ಸ್ವಾತಂತ್ರ್ಯ ಹೋರಾಟದ ಒಂದು ಅಂಗ ಎನಿಸಿತ್ತು. ಗಣೇಶೋತ್ಸದ ಆರಂಭದ ದಿನಗಳಲ್ಲಿಯೂ ‘ಕೇಸರಿ’ ಪತ್ರಿಕೆಯಲ್ಲಿ ರಾಷ್ಟ್ರ ಜಾಗೃತಿಯ ಸಂಪಾದಕೀಯ, ಕೊನೆಯ ದಿನ ಅನಂತ ಚತುರ್ದಶಿಯಂದು ಪುಣೆಯಲ್ಲಿ ತಿಲಕರ ಭಾಷಣ, ಭಾವಗೀತೆ, ನಾಟಕಗಳ ಪ್ರದರ್ಶನ... ಹೀಗೆ ದೇಶಾಭಿಮಾನ ಹುಟ್ಟಿಸುವ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದವು.

ವರ್ಷವೀಡೀ ನಡೆಯುತ್ತೆ ಗಣೇಶ ಮೂರ್ತಿ ತಯಾರಿ

ಮುಂಬೈಯಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ, ರಾಯಗಢ ಜಿಲ್ಲೆಯ ಪೇಣ್ ತಾಲ್ಲೂಕಿನಲ್ಲಿ ವರ್ಷವಿಡೀ ಗಣೇಶ ಮೂರ್ತಿ ತಯಾರಿಸುತ್ತಾರೆ. ಈ ಊರಿನಲ್ಲಿ ತಯಾರಾಗುವ ಗಣೇಶ ಮೂರ್ತಿಗಳಿಗೆ ಮುಂಬೈ ಸೇರಿ ಮಹಾರಾಷ್ಟ್ರದ ಇತರೆಡೆಗಳಲ್ಲೂ ಭಾರಿ ಬೇಡಿಕೆ ಇದೆ. ಪೇಣ್‌ನಲ್ಲಿ ತಯಾರಿಸಲಾದ ಗಣೇಶ ಮೂರ್ತಿಗಳಿಗೆ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು