ಗುರುವಾರ , ಆಗಸ್ಟ್ 11, 2022
26 °C

ಆಳ-ಅಗಲ | ಗ್ರಾಮ ಪಂಚಾಯಿತಿ ಚುನಾವಣೆ: ಮುನ್ನೆಲೆಯಲ್ಲೇ ನಡೆಯುತ್ತಿದೆ ಪಕ್ಷಗಳ ‘ಆಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗ್ರಾಮಗಳ ಅಭಿವೃದ್ಧಿ’ಯೇ ಗ್ರಾಮಪಂಚಾಯಿತಿಗಳ ಉದ್ದೇಶ ಆಗಿರಬೇಕು ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷರಾಜಕೀಯವನ್ನು ದೂರವಿಡಲಾಗಿದೆ. ಆದರೆ, ವಾಸ್ತವದಲ್ಲಿ ಅದು ಪಾಲನೆಯಾಗುತ್ತಿದೆಯೇ? ಈ ಚುನಾವಣೆಗಳಲ್ಲೂ ರಾಜಕೀಯ ಪಕ್ಷಗಳು ‘ಪಕ್ಷದ ಪರ’ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ, ಗೆಲ್ಲಿಸುವ ಸಕಲ ಪ್ರಯತ್ನ ಮಾಡುತ್ತಿವೆ. ಈ ಆಟ ತೆರೆಮರೆಯಲ್ಲೇನೂ ನಡೆಯುತ್ತಿಲ್ಲ...

***

ಸ್ಪರ್ಧಾಕಾಂಕ್ಷಿಗಳು ನಾಪತ್ತೆ!
-ಗಣೇಶ ಚಂದನಶಿವ

ಕಲಬುರ್ಗಿ: ವಿಧಾನಸಭೆ ಉಪ ಚುನಾವಣೆ ನಡೆಯಲಿರುವ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ಬಿಜೆಪಿ– ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಗ್ರಾಮ ಪಂಚಾಯಿತಿ ಚುನಾವಣಾ ರಾಜಕೀಯದಿಂದ ದೂರವೇ ಉಳಿದಿದ್ದಾರೆ.

‘ಕಣದಲ್ಲಿರುವ ಪಕ್ಷದ ಕಾರ್ಯಕರ್ತರಿಗೆ ಚುನಾವಣೆಗೆ ಖರ್ಚು ಕೊಡಬೇಕಾಗುತ್ತದೆ, ಒಬ್ಬರ ಪರ ಮತಕೇಳಿದರೆ ಉಳಿದವರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬ ಭಯ ಅವರಿಗೆ’ ಎಂದು ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.

ಯಾದಗಿರಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌, ‘ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ’ ಎಂದು ಬಹಿರಂಗವಾಗಿ ಕರೆ ನೀಡಿದ್ದಾರೆ. ನೀತಿ ಸಂಹಿತೆಯ ಉಲ್ಲಂಘನೆ ಎಂದು ಕೆಲವರು ಆರೋಪಿಸಿದರಾದರೂ, ದೂರು ದಾಖಲಿಸಿಲ್ಲ. ಜಿಲ್ಲಾ ಆಡಳಿತವೂ ಕ್ರಮ ಕೈಗೊಂಡಿಲ್ಲ.

ಸುರಪುರ ಶಾಸಕ ರಾಜುಗೌಡ, ಹುಣಸಗಿ ತಾಲ್ಲೂಕಿನ ಹೆಬ್ಬಾಳ, ಕೂಡಲಗಿ ಗ್ರಾಮಗಳಲ್ಲಿ ಹಲವು ಪ್ರಮುಖರನ್ನು ಬಿಜೆಪಿಗೆ ಬರಮಾಡಿಕೊಂಡು ‘ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವಂತೆ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಸಭೆಯಲ್ಲಿ ಬಿಜೆಪಿ ಧ್ವಜ ರಾರಾಜಿಸಿದವು.

ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಶನಿವಾರ ನಡೆಸಿದ ಹೆದ್ದಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯ ವರ್ಚ್ಯುವಲ್‌ ಕಾರ್ಯಕ್ರಮ ಬೀದರ್‌ ಜಿಲ್ಲೆಯಲ್ಲಿ ಬಿಜೆಪಿ–ಕಾಂಗ್ರೆಸ್ ಜಟಾಪಟಿಗೆ ಕಾರಣವಾಗಿದೆ.

‘ಬೀದರ್–ಔರಾದ್, ಬೀದರ್‌–ಹುಮನಾಬಾದ್‌ ಮಧ್ಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಬಿಜೆಪಿ ಮುಖಂಡರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರ ಭಾವಚಿತ್ರಗಳಿರುವ ಫಲಕವನ್ನು ಸಂಸದ ಭಗವಂತ ಖೂಬಾ ಹಾಕಿಸಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

‘ಖಂಡ್ರೆ ಅವರು ಕ್ಷುಲ್ಲಕ ಆರೋಪ ಮಾಡುವ ಮೂಲಕ ಅಭಿವೃದ್ಧಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಬೀದರ್‌ ಸಂಸದ ಭಗವಂತ ಖೂಬಾ ಪ್ರತ್ಯಾರೋಪ ಮಾಡಿದ್ದಾರೆ. ಕೆಲ ಶಾಸಕರು ತಮ್ಮ ಹಿಂಬಾಲಕರಿಗೆ ಮದ್ಯ, ಬಾಡೂಟ ಕೊಡಿಸುತ್ತಿರುವ ಸುದ್ದಿಗಳೂ ಕೇಳಿಬರುತ್ತಿವೆ.

ಪೇಚಿಗೆ ಸಿಲುಕಿದ ಕೆಕೆಆರ್‌ಡಿಬಿ ಅಧ್ಯಕ್ಷ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ‘ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿಗಾಗಿ ₹ 1 ಕೋಟಿ ವಿಶೇಷ ಅನುದಾನವನ್ನು ಮಂಡಳಿಯಿಂದ ನೀಡಲಾಗುವುದು’ ಎಂದು ಘೋಷಿಸಿ ಪೇಚಿಗೆ ಸಿಲುಕಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ಸಿಗರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ‘ದೂರಿನನ್ವಯ ರೇವೂರ ವಿರುದ್ಧ  ಕ್ರಮ ಕೈಗೊಳ್ಳಬೇಕು’ ಎಂದು ಆಯೋಗ ಕಲಬುರ್ಗಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಆದರೆ, ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಈವರೆಗೂ ಬಹಿರಂಗ ಪಡಿಸಿಲ್ಲ. ಇನ್ನೊಂದೆಡೆ ಕೋಟಿ ಕೋಟಿ ಕೊಡಲು ಮಂಡಳಿಯಲ್ಲಿ ಹಣವೆಲ್ಲಿದೆ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಕಾಲೆಳೆಯುತ್ತಿದ್ದಾರೆ.


ಕನಕಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಗ್ರಾ.ಪಂ. ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿರುವುದು

ಘಟಾನುಘಟಿಗಳಿಂದ ಪ್ರಚಾರದ ಅಬ್ಬರ

ರಾಮನಗರ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಚಾರ ಕಾರ್ಯವು ವಿಧಾನಸಭಾ ಚುನಾವಣೆಗೆ ಕಡಿಮೆ ಇಲ್ಲದಂತೆ ನಡೆಯುತ್ತಿದೆ. ಜಿದ್ದಾ ಜಿದ್ದಿಯ ಹೋರಾಟಕ್ಕೆ ಚುನಾವಣೆ ಸಾಕ್ಷಿಯಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಅವರು ಜಿಲ್ಲೆಯಲ್ಲಿ ಮೂರು ಪ್ರಮುಖ ‍ಪಕ್ಷಗಳ ಪ್ರಚಾರದ ಹೊಣೆಹೊತ್ತಿದ್ದಾರೆ. ಹೋಬಳಿ– ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸಿದ್ದಾರೆ. ಪ್ರಚಾರ ಸಭೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನೇ ಗೆಲ್ಲಿಸಿ ಎಂದು ನೇರ ಆಹ್ವಾನ ನೀಡುತ್ತಿದ್ದಾರೆ.

ಘಟಾನುಘಟಿ ನಾಯಕರು ಗ್ರಾ.ಪಂ. ಪ್ರಚಾರಕ್ಕೆ ಬರುತ್ತಿರುವುದನ್ನು ಕಂಡು ಮತದಾರರೇ ದಂಗಾಗಿದ್ದಾರೆ. ಕೆಲವು ನಾಯಕರಂತೂ ಅಭ್ಯರ್ಥಿಗಳ ಹೆಸರಿನ ಕರಪತ್ರಗಳನ್ನೂ ಮತದಾರರಿಗೆ ಹಂಚುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯ ಹಿಂದೆ– ಮುಂದೆ ಕೈ, ಕಮಲ ಹಾಗೂ ತೆನೆ ಹೊತ್ತ ಮಹಿಳೆಯ ಚಿಹ್ನೆಗಳೇ ಹೆಚ್ಚು ರಾರಾಜಿಸುತ್ತಿವೆ.

***

ಹೆಸರಿಗಷ್ಟೇ ‘ಪಕ್ಷಾತೀತ’

ಹೊಸಪೇಟೆ: ಬಳ್ಳಾರಿ, ಗದಗ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಪಂಚಾಯಿತಿ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳು ನಡೆಸುತ್ತಿರುವ ಕಸರತ್ತು ನೋಡಿದರೆ, ಇದು ಪಕ್ಷಾತೀತ ಚುನಾವಣೆ ಎಂದು ಯಾರಿಗೂ ಅನಿಸದು.

ಪಂಚಾಯಿತಿ ಚುನಾವಣೆ ಘೋಷಣೆಗೂ ಮುನ್ನ ಈ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಬೃಹತ್ ಸಮಾವೇಶಗಳನ್ನು ನಡೆಸಿತ್ತು.

‘ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆಯಾದರೂ ಶೇ 80ರಷ್ಟು ಸ್ಥಾನಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿ, ತಳಮಟ್ಟದಲ್ಲಿ ಪಕ್ಷ ಬಲಪಡಿಸಲಾಗುವುದು. ಕಾರ್ಯಕರ್ತರನ್ನು ಗೆಲ್ಲಿಸುವುದು ಪಕ್ಷದ ಮುಖಂಡರ ಜವಾಬ್ದಾರಿ. ನೀವು ನಮ್ಮನ್ನು ಗೆಲ್ಲಿಸಿದ್ದೀರಿ, ಈಗ ಆ ಕೆಲಸ ನಮ್ಮದು’ ಎಂದು ಬಿಜೆಪಿಯ ಹಾಲಿ ಸಚಿವರು, ಶಾಸಕರು, ಮುಖಂಡರು ಬಹಿರಂಗವಾಗಿಯೇ ಹೇಳಿದ್ದರು. ಈಗಲೂ ಹಳ್ಳಿಗಳಲ್ಲಿ ಸಣ್ಣ ಸಣ್ಣ ಸಭೆ ನಡೆಸಿ ಹೇಳುತ್ತಿದ್ದಾರೆ. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿ ತರುವ ಜವಾಬ್ದಾರಿಯನ್ನು ಆ ಪಕ್ಷದ ಸಚಿವರು, ಶಾಸಕರಿಗೆ ವಹಿಸಲಾಗಿದೆ.

ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಹೇಳದಿದ್ದರೂ ಒಳಗೊಳಗೆ ಅವರ ಪಕ್ಷದ ಹಿಂಬಾಲಕರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಬೆಳಗಾವಿಯಲ್ಲಂತೂ ಶಾಸಕ ಸತೀಶ ಜಾರಕಿಹೊಳಿ ಅವರು, ಈ ಚುನಾವಣೆಯನ್ನು ಪ್ರತಿಷ್ಠೆಗೆ ತೆಗೆದುಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ. ಹೆಲಿಕಾಪ್ಟರ್ ಮೂಲಕ ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕೂಡ ಹಿಂದೆ ಬಿದ್ದಿಲ್ಲ. ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮನದಾಳ ಅರಿಯುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ರಾಜಕಾರಣಿಗಳು ಮತದಾರರನ್ನು ಸೆಳೆಯಲು ಬಾಡೂಟದ ಮೊರೆ ಹೋಗಿದ್ದಾರೆ. ಅನೇಕ ಕೃಷಿಕರು ಸ್ಪರ್ಧಿಸಿದ್ದು, ದಿನವಿಡೀ ಕೆಲಸ ಮಾಡಿ, ಸಂಜೆ ವೇಳೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.

ಹಾವೇರಿ ಜಿಲ್ಲೆಯಲ್ಲಂತೂ ಕೆಲ ಅಭ್ಯರ್ಥಿಗಳು ಕರ ಪತ್ರದ ಮೇಲೆ ರಾಜಕೀಯ ಪಕ್ಷಗಳ ಚಿಹ್ನೆ, ಮುಖಂಡರ ಭಾವಚಿತ್ರ ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳ್ಳಿ ಹಳ್ಳಿಯಲ್ಲೂ ಬಿಜೆಪಿ ಸಭೆ ನಡೆಸುತ್ತಿದೆ. ವಿಜಯಪುರ, ಬಳ್ಳಾರಿಯೂ ಹಿಂದೆ ಬಿದ್ದಿಲ್ಲ. ಪಂಚಾಯಿತಿಗಳ ಮೇಲೆ ಹಿಡಿತ ಸಾಧಿಸಬೇಕೆಂದು ಪಣ ತೊಟ್ಟಿರುವಂತೆ ಕಾಣಿಸುತ್ತಿರುವ ಬಿಜೆಪಿಯು ಅವರ ಕಾರ್ಯಕರ್ತರನ್ನು ಗೆಲ್ಲಿಸಲು ನಾನಾ ತಂತ್ರ ಹೆಣೆದು, ಹಗಲಿರುಳು ಪ್ರಚಾರ ಮಾಡುತ್ತಿದೆ. ಜೆಡಿಎಸ್‌ ಎಲ್ಲೂ ಸಕ್ರಿಯವಾಗಿಲ್ಲ.

***

ಪ್ರಚಾರದಲ್ಲಿ ಸಚಿವರು, ಶಾಸಕರು, ಮುಖಂಡರು

ಚಾಮರಾಜನಗರ/ಮಡಿಕೇರಿ/ಮೈಸೂರು: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರದಲ್ಲಿ ಪಕ್ಷಗಳ ಚಿಹ್ನೆ, ರಾಷ್ಟ್ರೀಯ, ರಾಜ್ಯ ನಾಯಕರ ಭಾವಚಿತ್ರಗಳು ಕಾಣಿಸುತ್ತಿಲ್ಲ. ಆದರೆ, ಪಕ್ಷ ಹಾಗೂ ನಾಯಕರ ಹೆಸರಿನಲ್ಲಿ ಮತ ಕೇಳುವುದು ಎಗ್ಗಿಲ್ಲದೆ ನಡೆಯುತ್ತಿದೆ.

ಸ್ಥಳೀಯ ಶಾಸಕರು, ಪಕ್ಷಗಳ ಜಿಲ್ಲಾ, ತಾಲ್ಲೂಕು ಮಟ್ಟದ ಮುಖಂಡರು ಪ್ರಚಾರದಲ್ಲಿ ನಿರತರಾಗಿದ್ದಾರೆ.


ಹನೂರು ತಾಲ್ಲೂಕಿನ ಗ್ರಾಮಗಳಲ್ಲಿ ಶಾಸಕ ಆರ್‌.ನರೇಂದ್ರ, ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರಿಂದ ಮನೆ ಮನೆಗೆ ತೆರಳಿ ಪ್ರಚಾರ

ಚಾಮರಾಜನಗರ ಜಿಲ್ಲಾ ಉಸ್ತು ವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರೇ ಎರಡು ದಿನ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳ ವಿವಿಧ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಮುಖಂಡರು, ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಸಭೆ ನಡೆಸಿದ್ದಾರೆ. ಪಕ್ಷದ ಪ್ರಚಾರ ಹಾಗೂ ಚುನಾವಣೆಯ ಆಗು ಹೋಗು ಗಳ ನಿರ್ವಹಣೆಗಾಗಿ ಬಿಜೆಪಿಯು, ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿಯನ್ನೇ ನೇಮಿಸಿದೆ. ಸ್ಥಳೀಯ ಮುಖಂಡರು ಜಿಲ್ಲೆಯಾದ್ಯಂತ ಪ್ರಚಾರ ಮಾಡುತ್ತಾ ಅಭ್ಯರ್ಥಿಗಳ ಪರವಾಗಿ ಮತಯಾಚಿಸುತ್ತಿದ್ದಾರೆ.

ಕಾಂಗ್ರೆಸ್‌ ಕೂಡ ಹಿಂದೆ ಬಿದ್ದಿಲ್ಲ. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ ಅವರು ಬೆಂಬಲಿಗರ ಪರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಕೂಡ ಪ್ರಚಾರದಲ್ಲಿ ಭಾಗವಹಿಸಿದ್ದರು. ಕೆಲವು ಗ್ರಾಮಗಳಲ್ಲಿ ಪಾದಯಾತ್ರೆಗಳನ್ನೂ ನಡೆಸಿದ್ದಾರೆ.

ಕೊಡಗಿನಲ್ಲಿ ಸಚಿವ ಸೋಮಣ್ಣ ಸುತ್ತಾಟ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಅವರು ಕೊಡಗಿನಲ್ಲೇ ಮೂರು ದಿನ ಬೀಡುಬಿಟ್ಟು ಬಿಜೆಪಿ ಕಾರ್ಯಕರ್ತರ ಸಭೆಯ ಹೆಸರಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ನಡೆಸಿದ್ದಾರೆ. ಸೋಮಣ್ಣ ಅವರು ಸಂಪಾಜೆ, ಟಿ.ಶೆಟ್ಟಿಗೇರಿ, ಸುಂಟಿಕೊಪ್ಪ, ಶನಿವಾರಸಂತೆ, ಕುಶಾಲನಗರ, ಸೋಮವಾರಪೇಟೆಯಲ್ಲಿ ನಡೆಸಿದ್ದ ಸಭೆಗಳಲ್ಲಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಇದ್ದರು.

‘ಜಿಲ್ಲೆಯ 101 ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತರೇ ಗೆಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಬಲತುಂಬಬೇಕು’ ಎಂದು ಸೋಮಣ್ಣ ಕರೆ ನೀಡಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸಮಾವೇಶ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ‘ಗ್ರಾಮ್‌ ಜನಾಧಿಕಾರ’ ಸಮಾವೇಶ ಆಯೋ ಜಿಸಲಾಗಿತ್ತು. ಪಕ್ಷದ ಬೆಂಬಲಿತ ಅಭ್ಯರ್ಥಿ ಗಳನ್ನು ಗೆಲ್ಲಿಸಿಕೊಡುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದರು.ಚಾಮರಾಜನಗರ ತಾಲ್ಲೂಕಿನ ಪುಟ್ಟನಪುರ ಗ್ರಾಮದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್‌

***

ಬೆಂಬಲಿಗರಿಗಾಗಿ ನಾಯಕರ ‘ಮತಬೇಟೆ’

ದಾವಣಗೆರೆ: ತಮ್ಮ ‘ರಾಜಕೀಯ ಭವಿಷ್ಯ’ವನ್ನು ಭದ್ರಪಡಿಸಿಕೊಳ್ಳಲು ಬಹುತೇಕ ಶಾಸಕರು ತಮ್ಮ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಲು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಈ ಬಾರಿ ಶೇ 80ರಷ್ಟು ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿಗರು ಅಧಿಕಾರ ಹಿಡಿಯಲಿದ್ದಾರೆ ಎಂದು ಘೋಷಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಹಳ್ಳಿಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ‘ಕಾಂಗ್ರೆಸ್ ಬೆಂಬಲಿಗರು ಗ್ರಾಮೀಣ ಸಾಧನೆಯ ಆಧಾರದಲ್ಲಿ ಮತಯಾಚಿಸುತ್ತಿದ್ದಾರೆ. ಆದರೆ, ಬಿಜೆಪಿ ಹಣ ಬಲದಿಂದ ಬೆಂಬಲಿಗರಿಗೆ ಅಧಿಕಾರ ಕೊಡಿಸಲು ಪ್ರಯತ್ನಿಸುತ್ತಿದೆ’ ಎಂದು ಕಿಮ್ಮನೆ ದೂರಿದ್ದಾರೆ.

ಹಿಂದಿನ ಚುನಾವಣಾ ಸಮಯದಲ್ಲಿ ಜಿಲ್ಲೆಯಲ್ಲಿ ಮೂವರು ಶಾಸಕರನ್ನು ಹೊಂದಿದ್ದ ಜೆಡಿಎಸ್‌ ಈಗ ದುರ್ಬಲವಾಗಿದೆ. ಸೊರಬದಲ್ಲಿ ಮಧು ಬಂಗಾರಪ್ಪ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕೆ ಇಳಿದಿದ್ದಾರೆ. ‘ಸೊರಬದಲ್ಲಿ ಮಾತ್ರ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ’ ಎಂದು ಬೇಳೂರು ನೀಡಿರುವ ಹೇಳಿಕೆ, ಪಂಚಾಯಿತಿ ಚುನಾವಣೆಯಲ್ಲೂ ‘ಪಕ್ಷ ರಾಜಕಾರಣ’ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ತಮ್ಮ ಬೆಂಬಲಿಗರನ್ನು ಅಖಾಡಕ್ಕೆ ಇಳಿಸಿ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದಾರೆ. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಅವರೂ ಹಳ್ಳಿಗೆ ತೆರಳಿ ಪ್ರಚಾರದಲ್ಲಿ ನಿರತರಾಗಿದ್ದಾರೆ.

ರಘುಮೂರ್ತಿ ಅವರು ಸ್ವಗ್ರಾಮ ಕಡಬನಕಟ್ಟೆಯ ಆರು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವಂತೆ ನೋಡಿಕೊಂಡಿದ್ದಾರೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋವಿಂದಪ್ಪ, ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುಧಾಕರ್ ಅವರು ಬೆಂಬಲಿಗರನ್ನು ಕಣಕ್ಕೆ ಇಳಿಸಿ ಮುಂದಿನ ಚುನಾವಣೆಯ ಸಿದ್ಧತೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಮೊಳಕಾಲ್ಮುರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು, ಹಳ್ಳಿ ರಾಜಕೀಯವನ್ನು ನಿಯಂತ್ರಿಸುತ್ತಿದ್ದಾರೆ. ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹಾಗೂ ಮಾಜಿ ಸಚಿವ ಎಚ್. ಆಂಜನೇಯ ಅವರು ತೆರೆಮರೆಯಲ್ಲೇ ಬೆಂಬಲಿಗರ ಪರ ಕೆಲಸ ಮಾಡುತ್ತಿದ್ದಾರೆ.

ಮದುವೆಗೆ ಹೋದಾಗಲೂ ಪ್ರಚಾರ: ದಾವಣಗೆರೆ ಜಿಲ್ಲೆಯಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿರುವ ಮದುವೆಗಳಿಗೆ ತೆರಳುತ್ತಿರುವ ಶಾಸಕರು, ಅಲ್ಲಿಯೇ ಪಂಚಾಯಿತಿ ಚುನಾವಣಾ ಪ್ರಚಾರವನ್ನೂ ಮಾಡುತ್ತಿದ್ದಾರೆ.

ಪ್ರಚಾರ ಕಾರ್ಯದಲ್ಲಿ ಮುಂದಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಚುನಾವಣೆ ಘೋಷಣೆಯಾದ ಆರಂಭದಲ್ಲಿಯೇ ಜಿಲ್ಲಾ ಪಂಚಾಯಿತಿಯ ಆರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿದ್ದಾರೆ. ಕಾರ್ಯಕರ್ತರು ಚುನಾವಣೆ ನಿಂತಾಗ ಯಾವ ರೀತಿ ಕೆಲಸ ಮಾಡಬೇಕು ಎಂಬ ಸೂಚನೆಯನ್ನೂ ನೀಡಿದ್ದಾರೆ.

ರಾಜಕೀಯ ಪಕ್ಷಗಳ ಮುಖಂಡರು ಹಳ್ಳಿಗಳಲ್ಲಿ ‘ಬಾಡೂಟ’ ಹಾಕಿಸಿ, ಬೆಂಬಲಿಗರ ಪರ ‘ಮತಬೇಟೆ’ಯಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು