ಬುಧವಾರ, ಅಕ್ಟೋಬರ್ 21, 2020
24 °C

ಆಳ–ಅಗಲ | ಕರ್ನಾಟಕದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಿಲ್ಲ: ಸಿಎಜಿ ವರದಿ ಹೇಳೋದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಅಧಿಕಾರ ವಿಕೇಂದ್ರೀಕರಣ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ರಾಜ್ಯ ಸರ್ಕಾರವು ಸಂಬಂಧಿತ ಕಾನೂನುಗಳನ್ನು ರಚನೆ ಮಾಡಿದೆ ಅಷ್ಟೆ. ಆದರೆ ಅವು ಸರಿಯಾಗಿ ಅನುಷ್ಠಾನವಾಗಿಲ್ಲ. ಬಹುಪಾಲು ಯೋಜನೆಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಅಧೀನ ಸಂಸ್ಥೆಗಳಂತೆ ಕೆಲಸ ಮಾಡುತ್ತಿವೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಹೇಳಲಾಗಿದೆ.

ಸಿಎಜಿ ಸಿದ್ಧಪಡಿಸಿರುವ, ‘ಸಂವಿಧಾನದ 74ನೇ ತಿದ್ದುಪಡಿಯ ಅನುಷ್ಠಾನ ಮತ್ತು ಕಾರ್ಯಕ್ಷಮತೆಯ ಪರಿಶೋಧನೆ–ಕರ್ನಾಟಕ’ ವರದಿಯಲ್ಲಿ ಈ ಮಾಹಿತಿ ಇದೆ. 2014–15ನೇ ಸಾಲಿನಿಂದ 2018–19ನೇ ಸಾಲಿನವರೆಗೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ಸಿಎಜಿ ಈ ವರದಿಯನ್ನು ಸಿದ್ಧಪಡಿಸಿದೆ. ವರದಿಯ ಮುಖ್ಯಾಂಶಗಳನ್ನು ರಾಜ್ಯದ ಹಿಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಿರಬೇಕು. ಆದರೆ, ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಜಿಲ್ಲಾಡಳಿತಗಳು ಮತ್ತು ರಾಜ್ಯಸರ್ಕಾರವು ಬದಲಿಸುವ ಅಧಿಕಾರ ಹೊಂದಿವೆ. ಈ ಪರಿಸ್ಥಿತಿ ಬದಲಾಗಬೇಕು. ಅಧಿಕಾರ ವಿಕೇಂದ್ರೀಕರಣ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಸಂವಿಧಾನದ 74ನೇ ತಿದ್ದುಪಡಿಯ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರಗಳು 18 ಕ್ಷೇತ್ರಗಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹಸ್ತಾಂತರ ಮಾಡಬೇಕಿತ್ತು. ಕರ್ನಾಟಕ ಸರ್ಕಾರವು ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿ, 17 ಕ್ಷೇತ್ರಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮಾಡಿದೆ. ಆದರೆ, ಇವುಗಳಲ್ಲಿ ಮೂರು ಕ್ಷೇತ್ರಗಳ ಸಂಪೂರ್ಣ ಜವಾಬ್ದಾರಿ ಮಾತ್ರ ನಗರ ಸ್ಥಳೀಯ ಸಂಸ್ಥೆಗಳಿಗೆ ದತ್ತವಾಗಿದೆ. ಉಳಿದ 14 ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಜವಾಬ್ದಾರಿಯನ್ನು ಹಂಚಿಕೊಂಡಿವೆ. ಇದು ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಗೆ ವಿರುದ್ಧವಾದುದು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಸ್ವಂತ ಆದಾಯದಿಂದ ಕೈಗೊಂಡ ಯೋಜನೆಗಳಿಗೆ, ಸಂಬಂಧಿತ ಪ್ರಾಧಿಕಾರಗಳಿಂದ ಅನುಮತಿ ಪಡೆದಿದ್ದರೂ, ಜಿಲ್ಲಾಡಳಿತದಿಂದ ಮತ್ತೆ ಅನುಮತಿ ಪಡೆಯಬೇಕಿದೆ. ಸ್ಥಳೀಯ ಸಂಸ್ಥೆಗಳು ತೆಗೆದುಕೊಂಡ ನಿರ್ಧಾರವನ್ನು ರದ್ದುಪಡಿಸುವ ಅಥವಾ ಮಾರ್ಪಡಿಸುವ ಅಧಿಕಾರವನ್ನು ರಾಜ್ಯ ಸರ್ಕಾರ ಉಳಿಸಿ ಕೊಂಡಿದೆ. ಇದೂ ಸಹ ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧ ವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಅಧಿಕಾರ ವಿಕೇಂದ್ರೀಕರಣದ ಧ್ಯೇಯಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಅಗತ್ಯವಾದ ನಿರ್ಣಾಯಕ ಕ್ರಮಗಳನ್ನು ರಾಜ್ಯ ಸರ್ಕಾರವು ಶೀಘ್ರವೇ ತೆಗೆದುಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಿಗೆ ವಹಿಸಲಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಅತ್ಯಗತ್ಯವಾದ ಸ್ವಾಯತ್ತೆಯನ್ನು ಒದಗಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಬಹುಪಾಲು ಸೀಮಿತ ಅಧಿಕಾರ

ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ, ನಗರ ಸ್ಥಳೀಯ ಸಂಸ್ಥೆಗಳಿಗೆ ದತ್ತವಾಗಬೇಕಿದ್ದ 18 ಕ್ಷೇತ್ರಗಳಲ್ಲಿ, 3 ಕ್ಷೇತ್ರಗಳ ಜವಾಬ್ದಾರಿಯನ್ನಷ್ಟೇ ನೀಡಲಾಗಿದೆ.

3 ಸಂಪೂರ್ಣ ಜವಾಬ್ದಾರಿ ಹೊಂದಿರುವ ಕ್ಷೇತ್ರಗಳು: ಸ್ಮಶಾನ, ಬೀದಿನಾಯಿ–ಬಿಡಾಡಿ ದನಗಳು ಮತ್ತು ಹಂದಿಗಳ ನಿರ್ವಹಣೆ, ಕಸಾಯಿಖಾನೆಗಳು

2 ಯಾವುದೇ ಪಾತ್ರವಿಲ್ಲದ ಕ್ಷೇತ್ರಗಳು: ನಗರ ಯೋಜನೆ ಮತ್ತು ಪಟ್ಟಣ ಯೋಜನೆ, ಕೊಳೆಗೇರಿಗಳ ಸುಧಾರಣೆ ಮತ್ತು ಅಭಿವೃದ್ಧಿ

8 ಸೀಮಿತ ಪಾತ್ರವಿರುವ ಕ್ಷೇತ್ರಗಳು: ಭೂಬಳಕೆ–ನಿರ್ಮಾಣ ಸಂಬಂಧಿ ಕಾನೂನು ರಚನೆ ಮತ್ತು ಜಾರಿ, ನೀರು ಸರಬರಾಜು, ಸಾರ್ವಜನಿಕ ಆರೋಗ್ಯ ಮತ್ತು ತ್ಯಾಜ್ಯ ನಿರ್ವಹಣೆ, ನಗರ ಅರಣ್ಯೀಕರಣ, ಉದ್ಯಾನ–ಮೈದಾನಗಳ ನಿರ್ವಹಣೆ, ಸಾಂಸ್ಕೃತಿಕ–ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ, ಸಾರ್ವಜನಿಕ ದತ್ತಾಂಶ ನಿರ್ವಹಣೆ, ಬೀದಿದೀಪ–ಬಸ್‌ನಿಲ್ದಾಣ–ಪಾದಚಾರಿ ಮಾರ್ಗಗಳ ನಿರ್ಮಾಣ

3 ಯೋಜನೆ ಜಾರಿ ಮಾಡುವ ಅಧಿಕಾರವಷ್ಟೇ ಇರುವ ಕ್ಷೇತ್ರಗಳು: ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಅಂಗವಿಕಲರು ಆರ್ಥಿಕ ಸಬಲೀಕರಣ, ನಗರ ಬಡತನ ನಿರ್ಮೂಲನೆ

1 ಜಿಲ್ಲಾಡಳಿತ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಾದ ಕ್ಷೇತ್ರ: ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ

1 ರಾಜ್ಯ ಸರ್ಕಾರವೇ ಉಳಿಸಿಕೊಂಡಿರುವ ಕ್ಷೇತ್ರ: ಅಗ್ನಿಶಾಮಕ ದಳ ಮತ್ತು ತುರ್ತುಸೇವೆಗಳು

ಸಿಎಜಿ ಶಿಫಾರಸುಗಳು

l ವಿಕೇಂದ್ರೀಕರಣವನ್ನು ಇನ್ನಷ್ಟು ವಾಸ್ತವಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು

l ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತೆ ನೀಡಿ

l ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಕೆಎಂಸಿ ಕಾಯ್ದೆ ಅನ್ವಯ ವಾರ್ಡ್ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು

l ಅಧಿಕಾರ ಹಂಚಿಕೆ ಮತ್ತು ಸಾಂಸ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಆಯೋಗದ (ಎಸ್‌ಎಫ್‌ಸಿ) ಶಿಫಾರಸುಗಳ ಜಾರಿಯಲ್ಲಿ ವಿಳಂಬ ಧೋರಣೆ ಸಲ್ಲದು

l ನಗರ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ಪರಿಣತಿಯನ್ನು ಒದಗಿಸುವ ‘ಆಸ್ತಿ ತೆರಿಗೆ ಮಂಡಳಿ’ಯನ್ನು ಕಾರ್ಯಪ್ರವೃತ್ತಗೊಳಿಸಬೇಕು 

l ಯೋಜನೆ, ಕೊಳೆಗೇರಿ ಅಭಿವೃದ್ಧಿ, ನೀರು ಸರಬರಾಜು ಮತ್ತು ನೈರ್ಮಲ್ಯ ಕಾರ್ಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ನಗರ ಸ್ಥಳೀಯ ಸಂಸ್ಥೆಗಳು ಪೂರ್ಣವಾಗಿ ತೊಡಗಿಸಿಕೊಳ್ಳುವ ಅವಶ್ಯಕತೆಯಿದೆ

l ಆಸ್ತಿ ತೆರಿಗೆ, ಜಾಹೀರಾತು ತೆರಿಗೆ, ಘನತ್ಯಾಜ್ಯ ತೆರಿಗೆ ಮುಂತಾದ ಆದಾಯ ಮೂಲಗಳ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ಆದಾಯ ಹೆಚ್ಚಿಸಿಕೊಳ್ಳಲು ಇರುವ ಮಿತಿಗಳನ್ನು ತುರ್ತಾಗಿ ತೆರವುಗೊಳಿಸಬೇಕಿದೆ

l ಹಣ ಸಂಗ್ರಹಣೆ ಹಾಗೂ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ಸ್ಥಳೀಯ ಸಂಸ್ಥೆಗಳು ತಮ್ಮ ಬಜೆಟ್‌ಗಳನ್ನು ವೈಜ್ಞಾನಿಕ ರೀತಿಯಲ್ಲಿ ತಯಾರಿಸಲು ವಿಶೇಷ ಪ್ರಯತ್ನ ಮಾಡಬೇಕಿದೆ

l ಸಮರ್ಪಕ ಕಾರ್ಯ ನಿರ್ವಹಣೆಗೆ ಸಿಬ್ಬಂದಿ ಲಭ್ಯತೆ ಅಗತ್ಯ. ಸಿಬ್ಬಂದಿಗಳ ಮೌಲ್ಯಮಾಪನ ಮತ್ತು ನೇಮಕಾತಿಯಂತಹ ವಿಷಯಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸಾಕಷ್ಟು ಅಧಿಕಾರ ನೀಡಬೇಕು

‘ತೆರಿಗೆ ಸಂಗ್ರಹ ಅಧಿಕಾರ ನೀಡಿ’

ಕರ್ನಾಟಕದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಹಲವು ಸ್ವರೂಪದ ಆಸ್ತಿ ತೆರಿಗೆಗಳನ್ನು ಸಂಗ್ರಹಿಸುವ ಅಧಿಕಾರ ಇಲ್ಲ. ಹೀಗಾಗಿ ಈ ಸಂಸ್ಥೆಗಳು ತಮ್ಮ ನಿಧಿಗಳಿಗಾಗಿ ರಾಜ್ಯ ಸರ್ಕಾರದ ಅನುದಾನವನ್ನು ಅವಲಂಬಿಸಿವೆ. ಎಲ್ಲಾ ಸ್ವರೂಪದ ಆಸ್ತಿ ತೆರಿಗೆಗಳನ್ನು ಸಂಗ್ರಹಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದರೆ, ರಾಜ್ಯ ಸರ್ಕಾರದ ಮೇಲಿನ ಅವುಗಳ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. ಯಾವೆಲ್ಲಾ ತೆರಿಗೆಗಳನ್ನು ಸಂಗ್ರಹಿಸಲು ಅಧಿಕಾರ ನೀಡಬಹುದು ಎಂಬುದನ್ನೂ ಸಿಎಜಿ ಪಟ್ಟಿ ಮಾಡಿದೆ.

ಇದನ್ನು ಜಾರಿಗೆ ತರುವ ಸಲುವಾಗಿ ಅಗತ್ಯ ನಿಯಮಗಳನ್ನು ರೂಪಿಸಲು ಮತ್ತು ತಾಂತ್ರಿಕ ನೆರವು ನೀಡಲು 2013ರಲ್ಲೇ ‘ಕರ್ನಾಟಕ ಆಸ್ತಿ ತೆರಿಗೆ ಮಂಡಳಿ’ಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ. ಆದರೆ ಈವರೆಗೆ ಈ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಿಲ್ಲ. ಆಸ್ತಿ ತೆರಿಗೆ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಿ, ಅದು ಕಾರ್ಯನಿರ್ವಹಿಸುವಂತೆ ಮಾಡುವ ಕೆಲಸವನ್ನು ಶೀಘ್ರ ಮಾಡಬೇಕು ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಭರ್ತಿಯಾಗದ ಖಾಲಿ ಹುದ್ದೆಗಳು

ರಾಜ್ಯದ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು (ಯುಎಲ್‌ಬಿಗಳು) ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಸಿಬ್ಬಂದಿ ಅಗತ್ಯವನ್ನು ನಿರ್ಣಯಿಸುವ ಅಥವಾ ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಧಿಕಾರ ಈ ಸಂಸ್ಥೆಗಳಿಗೆ ಇಲ್ಲ. ಈ ಅಧಿಕಾರಗಳು ಇರುವುದು ರಾಜ್ಯ ಸರ್ಕಾರದ ಕೈಯಲ್ಲಿ. ಸ್ಥಳೀಯ ಸಂಸ್ಥೆಗಳಿಗೆ ಬೇಡಿಕೆಗೆ ಬದಲಾಗಿ, ಆಯಾ ನಗರದ ಜನಸಂಖ್ಯೆಯನ್ನು ಆಧರಿಸಿ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ಸಿಎಜಿ ವರದಿ ಹೇಳಿದೆ. ಗ್ರೂಪ್ ಎ, ಬಿ, ಸಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ನೇಮಕಾತಿ ನಡೆಯುತ್ತದೆ. ಆದರೆ ಇದು ತುಂಬಾ ವಿಳಂಬವಾಗುತ್ತಿದೆ ಎಂದು ವರದಿ ಬೊಟ್ಟು ಮಾಡಿದೆ. ಹುದ್ದೆ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವ ದಿನದಿಂದ ಹಿಡಿದು, ಕೆಪಿಎಸ್‌ಸಿ ನೇಮಕಾತಿ ಪೂರ್ಣಗೊಳಿಸುವವರೆಗೆ 744ರಿಂದ 1,063 ದಿನಗಳು (ವಿವಿಧ ಹುದ್ದೆಗಳಿಗೆ) ತೆಗೆದುಕೊಳ್ಳುತ್ತಿವೆ. 

ವಿವಿಧ ಸಂಸ್ಥೆಗಳಲ್ಲಿ ಶೇ 20ರಿಂದ ಶೇ 55ರವರೆಗೂ ಹುದ್ದೆಗಳು ಖಾಲಿ ಉಳಿದಿವೆ. ದೊಡ್ಡ ಪ್ರಮಾಣದ ಖಾಲಿ ಹುದ್ದೆಗಳಿರುವ ಕಾರಣ, ನಗರ ಸ್ಥಳೀಯ ಸಂಸ್ಥೆಗಳ ಸಮರ್ಪಕ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. 

l ಮಹಾನಗರ ಪಾಲಿಕೆಗಳ ಬಹುಮುಖ್ಯವಾದ ಗ್ರೂಪ್ ಎ ವರ್ಗದಲ್ಲಿ ಶೇ 92ರಷ್ಟು ತಾಂತ್ರಿಕ ಸಹಾಯಕರು (ಪರಿಸರ), ಶೇ 80ರಷ್ಟು ಉಪಆಯುಕ್ತರು (ಆಡಳಿತ), ಶೇ 30ರಷ್ಟು ಮುಖ್ಯಲೆಕ್ಕಪತ್ರ ಅಧಿಕಾರಿ ಮತ್ತು ಶೇ 50ರಷ್ಟು ಅಕೌಂಟ್ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ 

l ಹಿರಿಯ/ಕಿರಿಯ ಆರೋಗ್ಯ ನಿರೀಕ್ಷಕರು, ಸಹಾಯಕ/ಕಿರಿಯ ಎಂಜನಿಯರ್‌ ಹುದ್ದೆಗಳು ಶೇ 22ರಿಂದ ಶೇ 50ರಷ್ಟು ಕೊರತೆಯಿವೆ. ಮಹಾನಗರ ಪಾಲಿಕೆ ಗಳಲ್ಲಿ ಈ ಪ್ರಮಾಣ ಹೆಚ್ಚಿದ್ದು, ಸಮರ್ಪಕ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ

l ಶೇ 65ರಷ್ಟು ಸಹಾಯಕ ಕಂದಾಯ ಅಧಿಕಾರಿ/ಕಂದಾಯ ನಿರೀಕ್ಷಕರ ಹುದ್ದೆಗಳು ಖಾಲಿಯಿದ್ದು, ಆದಾಯ ಸಂಗ್ರಹದ ಮೇಲೆ ಹೊಡೆತ ಬಿದ್ದಿದೆ

l ಶೇ 72ರಷ್ಟು ಅಕೌಂಟೆಂಟ್‌ ಹುದ್ದೆ ಖಾಲಿಯಿವೆ. ಈ ಕಾರಣ, ಸರಿಯಾದ ಲೆಕ್ಕಪತ್ರ ನಿರ್ವಹಣೆ ಮತ್ತು ಮೂಲ ದಾಖಲೆಗಳ ನಿರ್ವಹಣೆ ಕಷ್ಟವಾಗಿದೆ

l ಉದ್ಯಾನಗಳನ್ನು ನೋಡಿಕೊಳ್ಳುವ ಕೆಲಸಗಾರರ ಕೊರತೆಯಿಂದ ಅವುಗಳ ನಿರ್ವಹಣೆ ಸೂಕ್ತವಾಗಿ ಆಗುತ್ತಿಲ್ಲ. 40 ಸ್ಥಳೀಯ ಸಂಸ್ಥೆಗಳಲ್ಲಿ 234 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ 128 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ

ಸಿಬ್ಬಂದಿ ಕೊರತೆ: ರಾಜ್ಯದ ಸಿಟಿ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಜನಸಂಖ್ಯೆಗೆ ತಕ್ಕ ಸಿಬ್ಬಂದಿ ಇಲ್ಲ ಎಂಬುದು ಕಂಡುಬಂದಿದೆ. ಪ್ರತಿ 1,000 ಜನಸಂಖ್ಯೆ ಹಾಗೂ ಸಿಬ್ಬಂದಿ ನಡುವಿನ ಅನುಪಾತ ಬಾಗಲಕೋಟೆ ಹಾಗೂ ಕೊಪ್ಪಳದಲ್ಲಿ 1ಕ್ಕಿಂತ ಕಡಿಮೆಯಿದೆ. 14 ಸಂಸ್ಥೆಗಳಲ್ಲಿ 1–2 ಸಿಬ್ಬಂದಿ ಇದ್ದಾರೆ. 13 ಸಂಸ್ಥೆಗಳಲ್ಲಿ 2–3 ಸಿಬ್ಬಂದಿ ಇದ್ದು, ಐದು ಸಂಸ್ಥೆಗಳಲ್ಲಿ 3ಕ್ಕಿಂತ ಹೆಚ್ಚು ನೌಕರರಿದ್ದಾರೆ.

‘ಶಿಫಾರಸುಗಳನ್ನು ಜಾರಿಗೆ ತರಬೇಕು’

ಸಂವಿಧಾನದ 74ನೇ ತಿದ್ದುಪಡಿಯ ಆಶಯಗಳ ಅನುಷ್ಠಾನವನ್ನು ಸಿಎಜಿ ಸ್ವತಃ ಆಯ್ಕೆ ಮಾಡಿ ವರದಿ ಸಲ್ಲಿಸಿದ್ದು, ವಿಧಾನ ಮಂಡಲದಲ್ಲಿ ಅದು ಮಂಡನೆಯಾಗಿದ್ದು ಭಾರತದಲ್ಲೇ ಇದೇ ಮೊದಲು. ನಗರಗಳ ಆಡಳಿತದ ದೃಷ್ಟಿಯಲ್ಲಿ ಇದೊಂದು ಮೈಲಿಗಲ್ಲು. ರಾಜ್ಯ ಸರ್ಕಾರ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಅದರ ಶಿಫಾರಸುಗಳನ್ನು ಜಾರಿಗೆ ತರಬೇಕು.

ಪಂಚಾಯಿತಿ ರಾಜ್‌ ಸಂಸ್ಥೆಗಳನ್ನು ಬಲಪಡಿಸುವ ವಿಚಾರದಲ್ಲಿ ಕರ್ನಾಟಕವು ದೇಶದ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿತ್ತು. 1980ರ ದಶಕದಲ್ಲಿ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಆಡಳಿತ ಸುಧಾರಣೆ ವಿಚಾರದಲ್ಲಿ ಬಹಳಷ್ಟು ಕೆಲಸಗಳು ರಾಜ್ಯದಲ್ಲಿ ಆಗಿದ್ದವು. ಈಗ ಸಂವಿಧಾನದ 74ನೇ ತಿದ್ದುಪಡಿಯ ಆಶಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ವಿಚಾರದಲ್ಲೂ ಇದೇ ರೀತಿ ಮೇಲ್ಪಂಕ್ತಿ ಹಾಕಿಕೊಡುವ ಸದವಕಾಶ ಕರ್ನಾಟಕ ಸರ್ಕಾರದ ಮುಂದೆ ಒದಗಿ ಬಂದಿದೆ. ಈ ವರದಿಯೂ ಸಿಎಜಿ ನಡೆಸುವ ಮಾಮೂಲಿ ಪ್ರಕ್ರಿಯೆ ಎಂದು ಸರ್ಕಾರ ಪರಿಗಣಿಸಬಾರದು. ನಗರ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಹೊಸ ಮಾದರಿ ರೂಪಿಸಲು ಈ ಸಿಎಜಿ ವರದಿಯಲ್ಲಿರುವ ಅಂಶಗಳನ್ನು ಒಂದು ಅವಕಾಶವನ್ನಾಗಿ ಬಳಸಿಕೊಳ್ಳಬೇಕು. ಅಧಿಕಾರ ವಿಕೇಂದ್ರೀಕರಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. 

21ನೇ ಶತಮಾನದಲ್ಲೂ ನಗರದ ಜನತೆಯನ್ನು ಕಾಡುತ್ತಿರುವ ಹವಾಮಾನ ವೈಪರೀತ್ಯ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ ಮುಂತಾದ ಸವಾಲುಗಳನ್ನು ಸರ್ಕಾರ ಸಮರ್ಥವಾಗಿ ಎದುರಿಸಲು ನಗರ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವುದೊಂದೇ ಮಾರ್ಗ. ಈ ಸಮಸ್ಯೆಗಳನ್ನು ರಾಜ್ಯ ಸರ್ಕಾರವೊಂದೇ ಬಗೆಹರಿಸಲು ಸಾಧ್ಯವಿಲ್ಲ. ಜನರಿಗೆ ಹತ್ತಿರದಲ್ಲಿರುವ ಸರ್ಕಾರ ಮಾತ್ರ ಇವುಗಳಿಗೆ ಪರಿಣಾಮಕಾರಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬಹುದು. ಇದಕ್ಕೆ ಜನರ ಸಹಭಾಗಿತ್ವವೂ ಮುಖ್ಯ. ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ಅನುಷ್ಠಾನಗೊಳಿಸುವ ಹಾಗೂ ಅನುದಾನ ಬಳಕೆಯ ಅಧಿಕಾರಗಳನ್ನು ವಿಕೇಂದ್ರೀಕರಿಸದೇ ಹೋದರೆ, ಭವಿಷ್ಯದಲ್ಲಿ ಸರ್ಕಾರ ಇನ್ನಷ್ಟು ಸಮಸ್ಯೆಗಳ ಸುಳಿಗೆ ಸಿಲುಕಲಿದೆ. ಆಡಳಿತ ವಿಕೇಂದ್ರೀಕರಣವೇ ಒಂದು ಸಮಸ್ಯೆ ಎಂಬಂತೆ ಸರ್ಕಾರ ಭಾವಿಸಬಾರದು. ಈಗಿನ ಎಲ್ಲ ಸಮಸ್ಯೆಗಳಿಗೆ ಆಡಳಿತ ವಿಕೇಂದ್ರೀಕರಣವೇ ಪರಿಹಾರ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. 

- ಶ್ರೀಕಾಂತ್‌ ವಿಶ್ವನಾಥನ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜನಾಗ್ರಹ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.