ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ | ಬರುತಿದೆ ಮಾವು ಹಂಗಾಮು: ಕೊರೊನಾ ಭೀತಿಯಲ್ಲಿ ವಹಿವಾಟು ಕಷ್ಟಕಷ್ಟ

ಜಿಲ್ಲಾಡಳಿತದತ್ತ ಜನರ ನಿರೀಕ್ಷೆ
Last Updated 27 ಏಪ್ರಿಲ್ 2020, 8:16 IST
ಅಕ್ಷರ ಗಾತ್ರ
ADVERTISEMENT
""
""
""
""

ಶ್ರೀನಿವಾಸಪುರದ ಮಾವು ದೇಶಪ್ರಸಿದ್ಧ. ಲಕ್ಷಾಂತರ ಟನ್‌ ಮಾವು ವಹಿವಾಟು ನಡೆಯುವ ಈ ಪುಟ್ಟ ಪಟ್ಟಣದಲ್ಲಿ ಮಾವು ಹಂಗಾಮು ಬಂತೆಂದರೆ ಹಬ್ಬದ ವಾತಾವರಣ. ಆದರೆ ಈ ಬಾರಿ ಮಾತ್ರ ವಹಿವಾಟಿನ ಮೇಲೆ ಕೊರೊನಾ ಕಾರ್ಮೋಡ ದಟ್ಟವಾಗಿ ಕವಿದಿದೆ. ಕೋಲಾರ ಜಿಲ್ಲಾಡಳಿತ ಶೀಘ್ರ ಎಚ್ಚೆತ್ತುಕೊಳ್ಳದಿದ್ದರೆಇಷ್ಟಪಡುವ ಗ್ರಾಹಕರ ಪಾಲಿಗೆಮಾವು ಸವಿಯಾಗಿ ಉಳಿಯಲಾರದು. ಕೈಗೆಟುಕದಷ್ಟು ದುಬಾರಿಯಾಗುವ ಅಪಾಯದ ಜೊತೆಗೆನಮ್ಮೂರ ಮಾರುಕಟ್ಟೆಗಳು ಮಾವಿನಿಂದ ದೂರವೇ ಉಳಿಯುವ ಅಪಾಯವೂ ಉಂಟು.

---

ಮೊದಲಿಗೆ ಒಂದು ಸ್ಪಷ್ಟನೆ. ಇದು ನೇರವಾಗಿ ಮಾವು ಬೆಳೆಗಾರರು ಮತ್ತು ಮಂಡಿ ವಹಿವಾಟುದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಲೇಖನ. ಆದರೆ, ಪರೋಕ್ಷವಾಗಿ ಮಾವಿನ ಹಣ್ಣು ಸವಿಯಲು ಇಷ್ಟಪಡುವ ಕೋಟ್ಯಂತರ ಜನರಿಗೆ ಸಂಬಂಧಿಸಿದ ಲೇಖನವೂ ಹೌದು. ಶ್ರೀನಿವಾಸಪುರದಲ್ಲಿ ಮಾವು ವಹಿವಾಟು ನಡೆಯದಿದ್ದರೆ ಅದರ ಪರಿಣಾಮ ಇಡೀ ದೇಶದ ಮೇಲಾಗುತ್ತದೆ. ನಿಮ್ಮೂರ ಮಾರುಕಟ್ಟೆಯಲ್ಲಿ ಹಣ್ಣು ದುಬಾರಿಯಾಗಬಹುದು, ಕಳಪೆ ಹಣ್ಣು ಬರಬಹುದು ಅಥವಾ ನಿಮ್ಮೂರಿಗೆ ಮಾವಿನ ಸವಿ ಸವಿಯುವ ಅವಕಾಶವೇ ಇಲ್ಲದಂತಾಗಬಹುದು.

ಈಗ ವಿಷಯಕ್ಕೆ ಬರೋಣ...

ಮಾವಿಗೆ ಪ್ರಸಿದ್ಧವಾದ ಶ್ರೀನಿವಾಸಪುರದಲ್ಲಿ (ಕೋಲಾರ ಜಿಲ್ಲೆ) ಈ ವರ್ಷದ ಮಾವಿನ ಹಂಗಾಮು ಜೂನ್‌ನಿಂದ ಪ್ರಾರಂಭಗೊಳ್ಳಲಿದೆ. ಸೀಸನ್‌ನಲ್ಲಿ ಏನಿಲ್ಲವೆಂದರೂ ಸಾವಿರಾರು ಟನ್‌ಗಳಷ್ಟು ಮಾವು ದೇಶದ ವಿವಿಧ ರಾಜ್ಯಗಳಿಗೆ ರವಾನೆಯಾಗುತ್ತದೆ. ಫಸಲಿನ ಇಳುವರಿಯನ್ನಾಧರಿಸಿ ಈ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಆಗುವುದುಂಟು.

ಇಷ್ಟು ದೊಡ್ಡ ವಹಿವಾಟು ನಡೆಯಲು ಅದಕ್ಕೆ ಪೂರಕವಾದ ಒಂದು ಕಾರ್ಯಜಾಲ ವ್ಯವಸ್ಥೆಗೊಳ್ಳುತ್ತದೆ. ಸಾವಿರಾರು ಜನರ ದುಡಿಮೆ ಸಲ್ಲುತ್ತದೆ. ತೋಪುಗಳಿಂದ ಕಾಯಿ ಇಳಿಸುವುದರಿಂದ ಪ್ರಾರಂಭವಾಗುವ ಪ್ರಕ್ರಿಯೆ ಕೊನೆಗೊಳ್ಳುವುದು, ಮಾಲು ತುಂಬಿಕೊಂಡ ಲಾರಿಗಳು ಶ್ರೀನಿವಾಸಪುರವನ್ನು ದಾಟಿದ ನಂತರ.

ಇಲ್ಲಿ ಸ್ತ್ರೀ-ಪುರುಷ ಕಾರ್ಮಿಕರು, ಲಾರಿಗಳ ಚಾಲಕರು-ಅವರ ಸಹಾಯಕರು, ಹೊರ ರಾಜ್ಯಗಳ ವರ್ತಕರು ಅಥವಾ ಅವರ ಏಜೆಂಟರು, ಕೂಲಿಕಾರರನ್ನು ಅವಲಂಬಿಸಿದ ಮಕ್ಕಳು, ಮಂಡಿ ಮಾಲೀಕರ ಪರಿವಾರ, ರೈತರು, ಗೃಹ ಬಳಕೆಗಾಗಿ ಬರುವ ಗ್ರಾಹಕರು ಮತ್ತು ತಾತ್ಕಾಲಿಕ ಹೋಟೆಲುಗಳು, ತಳ್ಳುಗಾಡಿಯ (ಕಂದಾರಿಗಳು) ಬಟ್ಟೆ ವ್ಯಾಪಾರಿಗಳು ಸೇರುತ್ತಾರೆ. ಜನ ಸಾಂದ್ರತೆಯುಳ್ಳ ಪುಟ್ಟ ಪಟ್ಟಣವೊಂದು ತಾತ್ಕಾಲಿಕವಾಗಿ ನಿರ್ಮಾಣವಾಗುತ್ತದೆ.

ಇಂತಹ ದೀರ್ಘ ಕ್ರಿಯಾ ಚರಿತ್ರೆಯಲ್ಲಿ ಯಾವ ಆತಂಕದ ದಾಖಲೆಯೂ ಇಲ್ಲ. ಆದರೆ ಈ ವರ್ಷ ಕೊರೋನಾ ಸೋಂಕು ಆತಂಕವನ್ನು ಮಾತ್ರವಲ್ಲದೆ ಭಯವನ್ನೂ ಹುಟ್ಟಿಸಿದೆ. ಜನರಲ್ಲಿ ತಲ್ಲಣವುಂಟಾಗಿ ಎಪಿಎಂಸಿ ತಾಲ್ಲೂಕು ಆಡಳಿತ, ಕರ್ನಾಟಕ ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳತ್ತ ನೋಡುತ್ತಿದ್ದಾರೆ. ಮುಖ್ಯವಾಗಿ ಜಿಲ್ಲಾಧಿಕಾರಿ ಕೈಗೊಳ್ಳುವ ಕ್ರಮಗಳ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸಮಸ್ಯೆ ಪರಿಹಾರ ಕಷ್ಟ, ಆದರೆ ಸಾಧ್ಯ

ಇಲ್ಲಿನ ಸಮಸ್ಯೆಯನ್ನು ಒಂದು ಕೊರೊನಾ ಸೋಂಕಿತ ಪ್ರದೇಶವನ್ನು ಲಾಕ್‌ಡೌನ್ ಅಥವಾ ಸೀಲ್‌ಡೌನ್ ಮಾಡಿ ಪರಿಹರಿಸಲು ಸಾಧ್ಯವಿಲ್ಲ. ಏಕೆಂದರೆ ಮಾವಿನ ಮಾರುಕಟ್ಟೆಯ ವ್ಯವಹಾರ ಕ್ಷಣಕ್ಷಣ ಚಲನಶೀಲವಾದುದು. ಋತುವಿಗೆ ಬಂದಾಗ ಕಾಯಿಯು ಮರದಲ್ಲಿಯೂ ಉಳಿಯುವುದಿಲ್ಲ, ಮಂಡಿಯಲ್ಲಿ ಮೂರು ದಿನಗಳಿಗಿಂತ ಹೆಚ್ಚು ಉಳಿಯುವುದಿಲ್ಲ. ಹಾಗಾಗಿ ಮಂಡಿಗೆ ಬಂದ ಮಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚಾಗಿ ವಿಲೇವಾರಿಗೊಳ್ಳುತ್ತದೆ. ಇದಕ್ಕಾಗಿ ಕಾರ್ಮಿಕರು ಇರುಳಿನಲ್ಲಿಯೂ ಕಾರ್ಯನಿರತರಾಗಿರುತ್ತಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ದೊಡ್ಡ ಸವಾಲು.

ಹೀಗೆ ಆಲೋಚಿಸುವಾಗ ಕೆಲವರು ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ಟೊಮೆಟೊ ವ್ಯವಹಾರವನ್ನು ಮುಂದಿಟ್ಟು ಅದರಂತೆ ಮಾವಿನ ವ್ಯವಹಾರವನ್ನು ಮಾಡಬಹುದೆಂದು ವಾದಿಸುವುದುಂಟು. ಆದರೆ ಇಲ್ಲಿ ಒಂದು ಭಿನ್ನವಾದ ಪರಿಸರದ ನಿರ್ಮಾಣವಿದೆ. ಟೊಮೆಟೊ ಸಾಗಣೆಗೆ ಬಂದ ವಾಹನಗಳು ನಿಲ್ಲುವುದಿಲ್ಲ. ಹೆಚ್ಚಿನ ಕೆಲಸಗಾರರು, ವಿತರಕರು ಸ್ಥಳೀಯರೇ ಆಗಿರುತ್ತಾರೆ ಎಂಬುದನ್ನು ಗಮನಿಸಬೇಕು.

ಮಾವಿನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಈ ಕ್ರಮ ಇರುವುದಿಲ್ಲ. ಸರಕಿಗಾಗಿ ಬರುವ ಅಂತರರಾಜ್ಯ ಭಾರೀ ವಾಹನಗಳು ಎರಡರಿಂದ ಐದು ದಿನಗಳವರೆಗೆ ಕಾಯಬೇಕಿರುತ್ತದೆ. ಅಂಕಿಅಂಶಗಳ ಪ್ರಕಾರ ಆಂದ್ರ, ತೆಲಂಗಾಣ, ಮಹಾರಾಷ್ಟ್ರ, ರಾಜಾಸ್ಥಾನ, ಗುಜರಾತ್, ಗೋವಾ ಮತ್ತು ಸ್ಥಳೀಯವೂ ಸೇರಿ ಸುಮಾರು 500 ಭಾರೀ ವಾಹನಗಳು ಬರುತ್ತವೆ. ಅಂದರೆ ವಾಹನ ನಿರ್ವಾಹಕರ ಸಂಖ್ಯೆಯೇ ಸಾವಿರವನ್ನು ದಾಟುತ್ತದೆ. ಇವರು ಊಟ ತಿಂಡಿಗಾಗಿ ಟೆಂಟು ಹೋಟೆಲುಗಳನ್ನು ಅವಲಂಬಿಸುತ್ತಾರೆ.

ಕಳೆದ ವರ್ಷದ ಲೆಕ್ಕಾಚಾರದಂತೆ ಕರ್ನಾಟಕದಲ್ಲಿ 11ರಿಂದ 12 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಉತ್ಪಾದನೆಯಾದ ಒಟ್ಟು ಮಾವಿನ ಪ್ರಮಾಣ ಒಂದು ಲಕ್ಷ ಟನ್. ಜಿಲ್ಲೆಯಲ್ಲಿ ಸುಮಾರು 48,000 ಹೆಕ್ಟೇರಿನಲ್ಲಿ ಮಾವಿನ ಬೆಳೆಯಿದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿಯೇ 22,000 ಹೆಕ್ಟೇರಿನಲ್ಲಿ ಮಾವಿನ ಬೆಳೆಯಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ 15,000 ಹೆಕ್ಟೇರ್‌ನಲ್ಲಿ ಬೆಳೆಯುವ ಮಾವಿಗೆ ಶ್ರೀನಿವಾಸಪುರವೇ ಮಾರುಕಟ್ಟೆಯಾಗಿದೆ.

ಪ್ರತೀ ವರ್ಷ ಮಾವಿನ ಮಾರುಕಟ್ಟೆ ಪ್ರಾರಂಭವಾಗುವುದು ಮತ್ತು ಅಂತ್ಯಗೊಳ್ಳುವುದು ಶ್ರೀನಿವಾಸಪುರದಲ್ಲಿಯೇ. ಹಾಗಾಗಿ ಹೆಚ್ಚು ದಿನ ಈ ಮಾರುಕಟ್ಟೆ ಜೀವಂತವಾಗಿರುತ್ತದೆ. ಕರೋನಾ ಕಾಣಿಸಿಕೊಂಡಿರುವ ಈ ವರ್ಷ ದೊಡ್ಡ ಮಾರುಕಟ್ಟೆಯ ವಿಚಾರವೇ ತಲೆನೋವಾಗಿ ಪರಿಣಮಿಸಿದೆ.

ಮಾವು ಬೆಳೆಗಾರ, ಇತರ ಬೆಳೆಗಾರರಂತೆ ಕಷ್ಟದ ದಿನಗಳಲ್ಲಿದ್ದಾನೆ. ಹಿಂದಿನ ವರ್ಷಗಳಲ್ಲಿ ತೋಪುಗಳ ಮೇಲೆಯೇ ವ್ಯಾಪಾರ ನಡೆಯುತ್ತಿತ್ತು. ಕಳೆದೆರೆಡು ವರ್ಷಗಳಿಂದ ವಾತಾವರಣದಲ್ಲಿ ಉಂಟಾದ ವೈಪರಿತ್ಯಗಳಿಂದ ಮಾವು ರೈತನಿಗೆ ಬರೆ ಎಳೆದಿತ್ತು. ಇದರಿಂದಾಗಿ ಮುಂಗಡ ಕೊಳ್ಳುದಾರರು ಮುಂದೆ ಬರಲಿಲ್ಲ. ಈ ಹಂತದಲ್ಲಿ ಕ್ರಿಮಿನಾಶಕ ಇತ್ಯಾದಿಗಳಿಗೆ ಸಾಲ ಮಾಡಿಕೊಂಡ. ಅವನ ಅನೇಕ ಕಷ್ಟಗಳಲ್ಲಿ ಕೆಲವು ಕಷ್ಟಗಳಾದರೂ ಕಳೆಯಲು ಮಾವಿಗೆ ಸರಿಯಾದ ಬೆಲೆ ಸಿಗಬೇಕಿದೆ.

ಈಗ ಎದುರುಗೊಳ್ಳುವ ಪ್ರಶ್ನೆಗಳೆಂದರೆ, ಮಾವಿನ ಕಾಯಿಯನ್ನು ತೋಪಿನಲ್ಲಿಯೇ ಇಳಿಸಿ ಲಾರಿಗಳನ್ನು ಹೊರ ವಲಯದಿಂದ ಲೋಡು ಮಾಡಿ ಕಳಿಸಬಹುದೇ...? ಹೀಗೆ ಮಾಡಿದರೆ ದಲ್ಲಾಳಿತನವೇ ಪ್ರಮುಖವಾಗಿರುವ ಮಂಡಿ ವ್ಯವಸ್ಥೆಯಲ್ಲಿ ತೋಪು-ತೋಪುಗಳಿಗೆ ಹೋಗಲು ಸಾಧ್ಯವಿಲ್ಲ. ಇದಕ್ಕೆ ಮಂಡಿ ವರ್ತಕರು ಸಮ್ಮತಿಸುವುದಿಲ್ಲ. ಈಗಿರುವ ಮಂಡಿಗಳಲ್ಲಿ ವಿಭಜಿಸಿ ಗುರುತಿಸಿದ ಪ್ರದೇಶಗಳಿಗೆ ವರ್ಗಾಯಿಸಿ ಮಾರುಕಟ್ಟೆಯನ್ನು ವಿಕೇಂದ್ರೀಕರಣಗೊಳಿಸಲು ಸಾಧ್ಯವೇ...? ಇದಕ್ಕೂ ಸರ್ವ ಸಮ್ಮತಿ ದೊರಕದು. ಇಂತಹ ಇನ್ನಿತರೆ ಸಮಸ್ಯೆಗಳ ಪರಿಹಾರಕ್ಕೆ ಕೋವಿದ್-19 ಎಲ್ಲ ದಿಕ್ಕುಗಳ ದಾರಿಯನ್ನು ಮಸುಕುಮಾಡಿದೆ.

ಹಸಿರು ವಲಯವಾಗಿ ಉಳಿಯುವುದು ಕಷ್ಟ

ಪ್ರಸ್ತುತ ಇರುವ ಕೊರೋನಾ ನಿಯಂತ್ರಣದ ನಿಯಮಗಳನ್ನು ಜಾರಿಗೆ ತಂದರೆ ಮಾವು ತೋಪುಗಳಲ್ಲಿಯೇ ಕೊಳೆಯಬೇಕಾಗುತ್ತದೆ. ಆಗ ಮಾವು ಬೆಳೆಗಾರರ ಸಂಕಷ್ಟ ಹೆಚ್ಚುತ್ತದೆ. ಆತ್ಮಹತ್ಯೆಗಳು ವರದಿಯಾಗುವ ಅಪಾಯವೂ ಇದೆ. ಈಗಿನ ಇಲ್ಲಿನ ಮಾವು ಬೆಳೆಗಾರರಲ್ಲಿ ಸಣ್ಣ ಪ್ರಮಾಣದ ಬೆಳೆಗಾರರು ತೀವ್ರವಾದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಕಾಲಕ್ಕೆ ಮಾವು ಮಾರಾಟವಾಗದಿದ್ದರೆ ಅವರ ಬದುಕು ರೌರವ ನರಕವಾಗುವುದಂತೂ ನಿಜ. ವ್ಯವಹಾರ ನಡೆಯದೇ ಮಾವು ವರ್ತಕರು ದಿವಾಳಿಯಾಗುವ ಅಪಾಯವೂ ಇದೆ.

ಕೊರೋನಾ ವಿಷಯವಾಗಿ ಕೋಲಾರ ಜಿಲ್ಲೆ, ಹಾಗೂ ಅದರ ಭಾಗವಾದ ಶ್ರೀನಿವಾಸಪುರ ಹಸಿರು ವಲಯದಲ್ಲಿದೆ. ಹೊರ ರಾಜ್ಯಗಳಿಂದ ಕೂಲಿಕಾರರು ಲಾರಿ ಸಿಬ್ಬಂದಿ ಪ್ರವೇಶವಾದರೆ ಇದು ಹಸಿರು ವಲಯವಾಗಿ ಉಳಿಯುವುದು ಅನುಮಾನ. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಸೋಂಕಿಲ್ಲದ ಕಾರ್ಮಿಕರಿಗೆ ಪ್ರವೇಶ ಕೊಡುವ ಪ್ರಕ್ರಿಯೆ ಗಂಟೆಗಳಲ್ಲಿ ಮುಗಿಯುವುದಿಲ್ಲ. ಈ ನಡುವೆ ಕಾರ್ಮಿಕರು ಸಿಕ್ಕ ಬಿಡುವಿನಲ್ಲಿ ಕುಟುಂಬಗಳವರನ್ನು ಕಂಡು ಬರಲು ಗಳಿಸಿದ ಹಣವನ್ನು ತಲುಪಿಸಲು ಹೋಗಿ ಬರುವುದುಂಟು. ಈ ಕ್ರಮ ಅವರ ಜೀವನಕ್ಕೆ ಅನಿವಾರ್ಯ. ಇದನ್ನು ತಡೆಯುವುದೆಂದರೆ ಆ ಕುಟುಂಬಗಳನ್ನು ಉಪವಾಸ ಇಡುವುದೇ ಆಗುತ್ತದೆ. ಲಾರಿ ಚಾಲಕ ಕಾರ್ಮಿಕರನ್ನು ಕೊರೋನ ವೈರಾಣು ಪರೀಕ್ಷೆಗೆ ಒಳಪಡಿಸಿ ಪ್ರವೇಶ ಕೊಡಬಹುದಾದರೂ, ಅವರು ಇಲ್ಲಿದ್ದ ದಿನಗಳಲ್ಲಿ ಸೋಂಕು ತಗುಲಿ ಹಿಂದಿರುಗುವಾಗಿನ ಪರೀಕ್ಷೆಯಲ್ಲಿ ಅದು ದೃಢಪಟ್ಟರೆ ಮಾಲು ಅದು ಹೋಗಬೇಕಾದೆಡೆಗೆ ತಲುಪುವುದಿಲ್ಲ. ಹಾಗೆಂದು ಮಾವು ಸಾಗಾಣಿಕೆಯನ್ನು ತಡೆಯುವಂತಿಲ್ಲ. ಇದರಿಂದಲೂ ರೈತ ಮಂಡಿ ಮಾಲೀಕ ಹೊರಗಿನ ವರ್ತಕ ಎಲ್ಲರೂ ಒಟ್ಟಿಗೆ ಸಂಕಷ್ಟದಲ್ಲಿ ಸಿಲುಕುತ್ತಾರೆ.

ಪರಿಸ್ಥಿತಿ ಹೇಗಿದೆ ಎಂದರೆ ಹುಲಿಯ ಮೇಲಿನ ಸವಾರಿಯಂತಿದೆ. ಇಳಿದರೂ ಅಪಾಯವೇ– ಸವಾರಿ ಮಾಡುತ್ತಲೇ ಇದ್ದರೂ ಅಪಾಯವೇ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಶಾಹಿ ಧೋರಣೆಗಳು ಪ್ರಯೋಜನಕ್ಕೆ ಬರುವುದಿಲ್ಲ. ರಾಜಕಾರಣಿಗಳು ಸಹಜವಾದ ನಿರ್ಲಕ್ಷ್ಯ ಮತ್ತು ತಡ ಪ್ರತಿಕ್ರಿಯೆಗಳನ್ನು ಬಿಟ್ಟು ಸೂಕ್ಷ್ಮಮತಿಯಿಂದ ಆಲೋಚಿಸಿ ಪರಿಹಾರಗಳನ್ನು ತುರ್ತಾಗಿ ಹುಡುಕಬೇಕಿದೆ.

ಮಾವು ವಹಿವಾಟಿಗೆ ಹೇಗೆ ನೆರವಾಗಬಹುದು...

1) ರೈತ ಹಿತ ಬಯಸುವ ಮಂಡಿ ಮಾಲಿಕರು, ಅನುಭವಿ ಮಾವು ಬೆಳೆಗಾರರು, ಆರೋಗ್ಯ ಇಲಾಖೆ, ಅಧಿಕಾರಿಗಳು, ವೈದ್ಯರೊಂದಿಗೆ ಜನಾರೋಗ್ಯ ಚಿಂತನೆಯುಳ್ಳ ಸೇವಾ ನಿರತ ಖಾಸಗಿ ವೈದ್ಯರನ್ನು ಗುರುತಿಸಿ ಅವರನ್ನು ಮಾರುಕಟ್ಟೆ ನಿರ್ವಹಣೆ ಅಧಿಕಾರಿಗಳನ್ನೊಳಗೊಂಡಂತೆ ಶೀರ್ಘ ಕ್ರಿಯಾಶೀಲ ಸಮಿತಿ ರಚಿಸುವುದು. ಒಟ್ಟಾರೆ ನಿರ್ವಹಣೆಗೆ ಪಾರದರ್ಶಕತೆ ಬರಲು ಖಾಸಗಿ ವೈದ್ಯರ ಸೇರ್ಪಡೆಯಿಂದ ಅನುಕೂಲವಾಗುತ್ತೆ.

2) ಮಾರುಕಟ್ಟೆಯ ಒಳ ಮತ್ತು ಹೊರ ಪ್ರದೇಶಗಳಲ್ಲಿ ಕೊರೊನ ನಿಯಮಗಳ ಕಡ್ಡಾಯ ಜಾರಿಗೆ ಸ್ಥಳೀಯರಲ್ಲದ, ಹೊರ ಪೊಲೀಸರನ್ನು ನೇಮಿಸುವುದು. ದಿನವಹಿ ಕನಿಷ್ಠ ಮೂರು ಬಾರಿ ಹಸಿ ಕಸ ವಿಲೇವಾರಿ ಮಾಡಲು ಪುರಸಭೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸುವುದು. ಕಸ ವಿಲೇವಾರಿ ಆಗಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಪುರಸಭೆಯ ಆರೋಗ್ಯ ನಿರೀಕ್ಷಕರಿಗೆ ವಹಿಸುವುದು.

3) ಮಾವಿನ ಸಾಗಾಣಿಕೆಗೆ ಯಾವ ಅಡೆತಡೆಯೂ ಇಲ್ಲದೆ ಸರಾಗಗೊಳಿಸುವುದು. ಈ ಮಾರುಕಟ್ಟೆಯ ಹಂಗಾಮಿಗೆ ಅನ್ವಯಿಸುವಂತೆ ಹೊರ ರಾಜ್ಯಗಳಿಂದ ಬರುವ ಲಾರಿಗಳಿಗೆ ಅನುಮತಿಸದೆ, ರೈಲು ಮಾರ್ಗವನ್ನು ಬಳಸಿ ಗೂಡ್ಸ್ ಗಾಡಿಗಳ ಸೇವೆಯನ್ನು ಪಡೆಯುವುದು. ಶ್ರೀನಿವಾಸಪುರದಲ್ಲಿರುವ ಅನುಕೂಲವೆಂದರೆ ಮಾವಿನ ಮಂಡಿಗಳಿಗೆ ತೀರ ಹತ್ತಿರದಲ್ಲಿ ರೈಲು ಹಳಿ ಹಾದು ಹೋಗುವುದು. ರಾತ್ರಿವೇಳೆ ಈ ಮಾರ್ಗದಲ್ಲಿ ರೈಲುಗಳ ಸಂಚಾರವಿಲ್ಲದಿರುವುದರಿಂದ ಅಲ್ಲಿ ನಿಲುಗಡೆ ಕೊಟ್ಟು ಸರಕನ್ನು ಲೋಡು ಮಾಡಬಹುದು. ಈ ಮಾರ್ಗ ಬಂಗಾರಪೇಟೆಯವರೆಗೆ ಮತ್ತು ಚಿಕ್ಕಬಳ್ಳಾಪುರ ಮಾರ್ಗವಾಗಿ ಯಲಹಂಕ, ಕಂಟೋನ್‌ಮೆಂಟ್/ಯಶವಂತಪುರ ಮಾರ್ಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗಾಗಿ ಗೂಡ್ಸ್ ರೈಲಿನ ಮೂಲಕ ಮಾವು ರವಾನೆಯಾದಲ್ಲಿ ಯಾವ ಅಡ್ಡಿಯೂ ಇರುವುದಿಲ್ಲ. ಮಿಗಿಲಾಗಿ ಸಾಗಾಣಿಕೆಯ ವೆಚ್ಚವು ಕಡಿಮೆಯಾಗುತ್ತದೆ.

4) ಮಾವು ಮಂಡಿ ಮಾಲೀಕರಲ್ಲಿ ರಾಜಕೀಯ ಪಕ್ಷಗಳ ಲಾಬಿ ಕಂಡು ಬರುತ್ತದೆ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ನಿರಾಕರಿಸುವ ಸಾಧ್ಯತೆ ಸಾಮಾನ್ಯ. ಹೀಗಿರುವ ಸಂದರ್ಭದಲ್ಲಿ ಸಮನ್ವಯಕ್ಕಾಗಿ ಜಿಲ್ಲಾ ಮಟ್ಟದ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಪ್ರಯತ್ನಿಸಬೇಕು. ಎಲ್ಲರ ಅನುಕೂಲದ ಸಲಹೆಗಳನ್ನು ತಿರಸ್ಕರಿಸುವ ಮಂಡಿಗಳ ವ್ಯವಹಾರವನ್ನು ಈ ಹಂಗಾಮಿನ ಮಟ್ಟಿಗೆ ರದ್ಧುಗೊಳಿಸಬೇಕು. ಇಂತಹ ಕಟ್ಟುನಿಟ್ಟಿನ ಇರುವ ಅಧಿಕಾರಿಯನ್ನು ಒಟ್ಟು ವ್ಯವಹಾರಗಳ ಮೇಲುಸ್ತುವಾರಿ ಅಧಿಕಾರ ನೀಡಿ ನೇಮಿಸಬೇಕು.

5) ಹೊರಗಿನ ಕಾರ್ಮಿಕರನ್ನು ಕಾರ್ಯಾನುಭವ ಹಿನ್ನೆಲೆಯಲ್ಲಿ ಕರೆಸಿಕೊಳ್ಳುವುದು ಅನಿವಾರ್ಯವೆಂಬ ನಿಲುವಿಗೆ ಮಂಡಿಗಳ ಮಾಲೀಕರು ಅಂಟಿಕೊಳ್ಳುವುದಾದರೆ ಅವರ ಆರೋಗ್ಯ, ಆಹಾರ ನಿರ್ವಹಣೆಯ ಎಲ್ಲ ಜವಾಬ್ದಾರಿಯನ್ನು ಮಂಡಿ ಮಾಲೀಕರು ವಹಿಸಿಕೊಳ್ಳಬೇಕು.

6) ಒಂದು ರೀತಿಯ ಆಲೋಚನೆಯಲ್ಲಿ ಕಷ್ಟ ಎನಿಸಿದರೂ ಉದ್ಯಮಿಗಳಿಗೆ ನಷ್ಟಗೊಳಿಸುವ ಹಣಕಾಸು ಸಂಸ್ಥೆಗಳ ಪುನರುತ್ಥಾನಕ್ಕಾಗಿ ಸಾವಿರಾರು ಕೋಟಿ ಸುರಿಯುವ ಸರಕಾರಗಳಿಗೆ ಈ ಮಾವನ್ನು ಕೊಳ್ಳುವ ಮತ್ತು ಹಂಚಿಕೆ ಮಾಡುವುದು ಇಂದಿನ ತಾಂತ್ರಿಕ ಯುಗದಲ್ಲಿ ಕಷ್ಟವೇನಲ್ಲ. ಹೀಗೆ ಕೊಳ್ಳುವುದೇ ಆದರೆ ವರ್ತಕರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುವುದಾಗುತ್ತದೆ ಎಂಬ ಆರೋಪವನ್ನು ನಿವಾರಿಸಲು ಮಂಡಿಗಳ ಮೂಲಕವೇ ಕೊಳ್ಳಬಹುದು. ಅಂತಯೇ ರಾಜ್ಯದ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಾಮರ್ಥ್ಯವಿರುವ ಶೈತ್ಯಾಗಾರಗಳಲ್ಲಿ ಮಾವನ್ನು ಸಂಗ್ರಹಿಸಿಟ್ಟು, ಅನುಕೂಲ ಬೇಡಿಕೆಯಿದ್ದಂತೆ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಇದರಿಂದಾಗಿ ಗ್ರಾಹಕರಿಗೆ ಧೀರ್ಘಕಾಲ ಮಾವು ಸಿಕ್ಕಂತಾಗುತ್ತದೆ. ಇದಲ್ಲದೆ ದೇಶದಲ್ಲಿರುವ ಪ್ರಮುಖ ಹಣ್ಣುಗಳ ರಸ ಉತ್ಪಾದಿಸುವ ಕಾರ್ಖಾನೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಪೂರೈಸಬಹುದು. ಇದರಿಂದ ಸರಕಾರ ಹೂಡಿದ ಬಂಡವಾಳಕ್ಕೆ ಲಾಭವೂ ಬರುತ್ತದೆ.

ಈ ಪ್ರತಿಯೊಂದು ಅಂಶಗಳ ಸಾಧ್ಯತೆಗಳನ್ನು ಚಿಂತಿಸುವಾಗ ಅಧಿಕಾರಶಾಹಿ ತೋರುವ ನಿಯಮಗಳ ನೆಪದ ನಿರ್ಲಕ್ಷ್ಯ ಸ್ವಹಿತ ಸಾಧಕರ ಸ್ವಾರ್ಥ ಹೇಗೆಲ್ಲ ಕೆಲಸ ಮಾಡುವುದು ಎಂಬುದನ್ನು ಚಿಂತಿಸಿಯೇ ಮುಂದಿನ ಹೆಜ್ಜೆ ಇಡಬೇಕು ಎಂಬುದನ್ನು ಮರೆಯಲಾಗದು. ಇಲ್ಲಿ ಇರಬೇಕಾಗಿರುವುದು ರೈತ ವಂಚಿತನಾಗಬಾರದು. ಅವನನ್ನು ಆದರಿಸಿದ ವಲಯಗಳೂ ನಷ್ಟಕ್ಕೆ ಗುರಿಯಾಗಬಾರದು. ಅಷ್ಟೇ ಪ್ರಮುಖವಾಗಿ ಕೋಲಾರ ಜಿಲ್ಲೆ ಕೊರೊನಾದ ವೈರಸ್ಸಿಗೆ ಔತಣವಾಗಬಾರದು. ಇದು ಮಾವಿನ ಹಂಗಾಮಿನ ನಂತರವೂ ಹಸಿರು ವಲಯವಾಗಿಯೇ ಉಳಿಯಬೇಕೆಂಬ ತೀರ್ವ ಬಯಕೆಯಲ್ಲಿ ಜಿಲ್ಲೆಯ ಜನ ಒಂದು ಉತ್ತಮ ಆರೋಗ್ಯಕರವಾದ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರದ ರಾಜಕಾರಣಿಗಳು ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮಲ್ಲಿ ಏನಾದರೂ ಒಳವಿಭೇದಗಳಿದ್ದರೆ ಅದನ್ನು ಈ ದುರಿತ ಕಾಲದಲ್ಲಿ ಪಕ್ಕಕ್ಕಿಟ್ಟು ಆರೋಗ್ಯಕರ ವ್ಯವಸ್ಥೆಯನ್ನು ಸ್ಥಾಪಿಸಲು ಸಹಕರಿಸಿ ನಿಜ ಜನಪ್ರತಿನಿಧಿಗಳಾಗಿ ಜನರ ಮೆಚ್ಚುಗೆ ಪಡೆಯಬೇಕು. ಇಲ್ಲವೆಂದಾದಲ್ಲಿ ರೈತ ಜನ ತಮ್ಮ ಕೃಷಿ ಜೀವನದ ಅಸ್ತಿತ್ವಕ್ಕಾಗಿ ಬೀದಿಗಿಳಿಯುವ ಪರಿಸ್ಥಿತಿ ಒದಗಬಹುದು. ಇದು ಕಲ್ಪನೆಯ ಮಾತಲ್ಲ ಇಂತಹ ಮಾತುಗಳು ಮಾವು ಬೆಳೆಯನ್ನು ಕಾಯುತ್ತಿರುವ ರೈತರು ತೋಪುಗಳಲ್ಲಿ ಮಾತನಾಡಿಕೊಳ್ಳುತ್ತಿರುವುದನ್ನು ಆಸಕ್ತಿಯಿರುವವರು ಕೇಳಿಸಿಕೊಳ್ಳಬಹುದು.

ಈಗ ಜಿಲ್ಲೆಯ ಜನತೆಯ ಚಿತ್ತ ಸರಕಾರದ ನೇರ ಪ್ರತಿನಿಧಿಯಾದ ಜಿಲ್ಲಾಧಿಕಾರಿಗಳತ್ತ ತಿರುಗಿದೆ. ಜೂನ್ ತಿಂಗಳಲ್ಲಿ ರಾಜಗೀರ ತಳಿಯ ಫಸಲಿನೊಂದಿಗೆ ಮಾರುಕಟ್ಟೆ ಪ್ರಾರಂಭವಾಗಲಿದೆ. ಅಷ್ಟರ ಒಳಗೆ ಒಂದು ನಿಖರ ಹಾಗೂ ಸ್ಪಷ್ಟ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕಿದೆ. ಇದು ಶೀಘ್ರವಾಗಿ ಆಗಬೇಕಿದೆ ಎಂಬುದನ್ನು ಕಡೆಗಣಿಸುವಂತಿಲ್ಲ.

(ಲೇಖಕರು: ಕನ್ನಡ ಮತ್ತು ತೆಲುಗಿನ ಖ್ಯಾತ ಬರಹಗಾರರು ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT