*ಹುಲಿ ಸಂರಕ್ಷಣೆ ಉದ್ದೇಶದಿಂದಆರಂಭಿಸಲಾಗಿದ್ದ ‘ಹುಲಿ ಯೋಜನೆ’ಗೆ ಇಂದಿಗೆ (ಏಪ್ರಿಲ್ 9) 50 ವರ್ಷ ತುಂಬಿದೆ. ಹುಲಿ ಕಾರ್ಯ ಪಡೆಯು 1972ರ ತನ್ನ ವರದಿಯಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹುಲಿಗಳ ಸಂರಕ್ಷಣೆಗೆ ತಕ್ಷಣವೇ ಅಗತ್ಯ ಕ್ರಮ ತೆಗೆದುಕೊಳ್ಳದೇ ಇದ್ದರೆ, ಅವು ನಾಮಾವಶೇಷವಾಗುತ್ತವೆ ಎಂದು ಹೇಳಿತ್ತು. ಕಾರ್ಯಪಡೆಯ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಿದ ಇಂದಿರಾ ಗಾಂಧಿ ಸರ್ಕಾರವು 1973ರ ಏಪ್ರಿಲ್ 9ರಂದು ಸ್ವತಂತ್ರ ಭಾರತದ ಮೊದಲ ಹುಲಿ ಯೋಜನೆ ಆರಂಭಿಸಿತು*
ಹುಲಿ ಸಂರಕ್ಷಣೆ ಉದ್ದೇಶದಿಂದಆರಂಭಿಸಲಾಗಿದ್ದ ‘ಹುಲಿ ಯೋಜನೆ’ಗೆ ಇಂದಿಗೆ (ಏಪ್ರಿಲ್ 9) 50 ವರ್ಷ ತುಂಬಿದೆ. ಹುಲಿ ಕಾರ್ಯ ಪಡೆಯು 1972ರ ತನ್ನ ವರದಿಯಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹುಲಿಗಳ ಸಂರಕ್ಷಣೆಗೆ ತಕ್ಷಣವೇ ಅಗತ್ಯ ಕ್ರಮ ತೆಗೆದುಕೊಳ್ಳದೇ ಇದ್ದರೆ, ಅವು ನಾಮಾವಶೇಷವಾಗುತ್ತವೆ ಎಂದು ಹೇಳಿತ್ತು. ಕಾರ್ಯಪಡೆಯ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಿದ ಇಂದಿರಾ ಗಾಂಧಿ ಸರ್ಕಾರವು 1973ರ ಏಪ್ರಿಲ್ 9ರಂದು ಸ್ವತಂತ್ರ ಭಾರತದ ಮೊದಲ ಹುಲಿ ಯೋಜನೆ ಆರಂಭಿಸಿತು.
ಹುಲಿ ಯೋಜನೆ ಆರಂಭವಾದಾಗ ದೇಶದಲ್ಲಿದ್ದ ಹುಲಿಗಳ ಸಂಖ್ಯೆ 1,827 ಮಾತ್ರ. ಆಗ ದೇಶದ ಪ್ರಮುಖ ಹುಲಿ ಆವಾಸಸ್ಥಾನಗಳನ್ನು ಗುರುತಿಸಿ, ಅವನ್ನು ಸಂರಕ್ಷಿತ ಪ್ರದೇಶಗಳಾಗಿ ಘೋಷಿಸ ಲಾಗಿತ್ತು. ಕರ್ನಾಟಕದ ಬಂಡೀಪುರವೂ ಸೇರಿ ದೇಶದ ಒಟ್ಟು 9 ಪ್ರದೇಶಗಳಲ್ಲಿ ಹುಲಿ ಸಂರಕ್ಷಣಾ ಯೋಜನೆಗಳನ್ನು ಮೊದಲ ಬಾರಿಗೆ ಜಾರಿ ಮಾಡಲಾಗಿತ್ತು. ಈ ಐವತ್ತು ವರ್ಷಗಳಲ್ಲಿ ದೇಶದಲ್ಲಿನ ಹುಲಿ ಸಂರಕ್ಷಣೆಗಾಗಿ ಮೀಸಲಿರಿಸಿದ ಕಾಡುಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ 35 ಹುಲಿ ಸಂರಕ್ಷಿತ ಪ್ರದೇಶಗಳಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮಾನ್ಯತೆ ನೀಡಿದೆ.
ಹುಲಿ ಯೋಜನೆಗೆ ಕೇಂದ್ರ ಸರ್ಕಾರವು ವಿಶೇಷ ಅನುದಾನವನ್ನು ತೆಗೆದಿರಿಸುತ್ತಾ ಬಂದಿದೆ. ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಕಾರಣ, ಹುಲಿಗಳ ಸಂಖ್ಯೆ 2018ರ ವೇಳೆಗೆ 2,967ಕ್ಕೆ ಏರಿಕೆಯಾಗಿತ್ತು. ಹುಲಿಗಣತಿಯ ಮತ್ತೊಂದು ವರದಿ ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು, ಹುಲಿಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ದೇಶದ ಹುಲಿ ಸಂರಕ್ಷಣೆ ಕಾರ್ಯಕ್ರಮದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಮಹತ್ವದ ಸ್ಥಾನವಿದೆ.1973ರಲ್ಲಿ ಆರಂಭಿಸಲಾದ ಹುಲಿ ಸಂರಕ್ಷಣೆ ಪ್ರದೇಶಗಳಲ್ಲಿ ಬಂಡೀಪುರವೂ ಒಂದು.
1973ರಲ್ಲಿ ಹುಲಿ ಯೋಜನೆ ಆರಂಭಿಸುವ ಮೊದಲೇ ಈ ಪ್ರದೇಶದಲ್ಲಿ ಹುಲಿ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿತ್ತು. 1900ರಲ್ಲೇ ಮೈಸೂರಿನ ಅರಸರು ‘ಮೈಸೂರು ಅರಣ್ಯ ಕಾಯ್ದೆ’ ಜಾರಿಗೆ ತಂದಿದ್ದರು. ಈಗಿನ ಬಂಡೀಪುರ ಪ್ರದೇಶದಲ್ಲಿ ಕೆಲವು ಭಾಗಗಳನ್ನು ಗುರುತಿಸಿ, ಅಲ್ಲಿ ಬೇಟೆಯಾಡುವುದನ್ನು ನಿಷೇಧಿಸಲಾಗಿತ್ತು. ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನೂ ಒಳ ಗೊಂಡಿದ್ದ 30 ಚದರ ಕಿ.ಮೀ.ನಷ್ಟು ಪ್ರದೇಶವನ್ನು ವೇಣುಗೋಪಾಲ ವನ್ಯಜೀವಿ ಉದ್ಯಾನ ಎಂದು ಕರೆಯಲಾಗಿತ್ತು.ವೇಣುಗೋಪಾಲ ವನ್ಯಜೀವಿ ಉದ್ಯಾನ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಸೇರಿಸಿ 1941ರ ಫೆಬ್ರುವರಿ 19ರಂದು ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿತ್ತು.
ಈ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿ, 1973ರ ನವೆಂಬರ್‌ನಲ್ಲಿ ಹುಲಿ ಯೋಜನೆಗೆ ಈ ಪ್ರದೇಶವನ್ನು ಸೇರಿಸಲಾಯಿತು. ‘ಹುಲಿ ಯೋಜನೆ ಘೋಷಣೆ ಯಾದಾಗ ಬಂಡೀಪುರ ಅರಣ್ಯದಲ್ಲಿ 12 ಹುಲಿಗಳಿದ್ದವು. 2020ರ ಮಾಹಿತಿ ಪ್ರಕಾರ 143 ಹುಲಿಗಳಿವೆ. 2022ರ ಹುಲಿ ಗಣತಿ ವರದಿ ಬಿಡುಗಡೆಯಾದರೆ, ಈ ಪ್ರದೇಶದಲ್ಲಿ ಈಗ ಇರುವ ಹುಲಿಗಳ ಸಂಖ್ಯೆ ಎಷ್ಟು ಎಂಬುದರ ನಿಖರ ಅಂದಾಜು ಸಂಖ್ಯೆ ಸಿಗಲಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವು ಈಗ ದೇಶದ ಅತ್ಯಂತ ಪ್ರಮುಖ ಹುಲಿ ಆವಾಸಸ್ಥಾನಗಳಲ್ಲಿ ಮೊದಲ ಸಾಲಿನಲ್ಲಿದೆ. 1985ರಲ್ಲಿ ಈ ಹುಲಿ ಯೋಜನೆ ಪ್ರದೇಶವನ್ನು ಮತ್ತಷ್ಟು ವಿಸ್ತರಿಸಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಎಂದು ಹೆಸರಿಸಲಾಗಿತ್ತು. ಆಗ ಈ ಉದ್ಯಾನದ ವಿಸ್ತೀರ್ಣ 874.20 ಚದರ ಕಿ.ಮೀ ಇತ್ತು. ನಂತರದ ವರ್ಷಗಳಲ್ಲಿ ಸುತ್ತಮುತ್ತಲಿನ ಅರಣ್ಯವನ್ನು ಮತ್ತಷ್ಟು ಸೇರ್ಪಡೆ ಮಾಡಲಾಗಿದೆ. ತಮಿಳುನಾಡಿನ ಮುಧುಮಲೆ, ಕೇರಳದ ವಯನಾಡು ಹಾಗೂ ನಮ್ಮದೇ ಆದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಸಂರಕ್ಷಿತ ಪ್ರದೇಶ ಸದ್ಯ 912.04 ಚದರ ಕಿ.ಮೀ ವಿಸ್ತೀರ್ಣವಿದೆ. ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಮುಧುಮಲೆ, ಸತ್ಯಮಂಗಲ ಮತ್ತು ವಯನಾಡ್ ಹುಲಿ ಯೋಜನೆ ಪ್ರದೇಶಗಳನ್ನು ನೀಲಗಿರಿ ಜೈವಿಕ ತಾಣವು 12,134 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವು ದೇಶದ ಅತ್ಯಂತ ದೊಡ್ಡ ಹುಲಿ ಆವಾಸಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಲ್ಲದೇ, ಈ ಪ್ರದೇಶದಲ್ಲಿ ಹುಲಿ ಸಾಂದ್ರತೆಯು ದೇಶದಲ್ಲೇ ಹೆಚ್ಚು. ಈ ಪ್ರದೇಶದಲ್ಲಿ 724 ವಯಸ್ಕ ಹುಲಿಗಳಿವೆ ಎಂದು 2018ರ ಹುಲಿಗಣತಿಯಲ್ಲಿ ಅಂದಾಜಿಸಲಾಗಿತ್ತು. ಈಗ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ನಿರೀಕ್ಷಿಸಲಾಗಿದೆ. ದೇಶದ ಬೇರೆ ಯಾವುದೇ ಹುಲಿ ಆವಾಸ ಸ್ಥಾನಗಳಲ್ಲಿ ಇಷ್ಟೊಂದು ಹುಲಿಗಳು ಇಲ್ಲ.
ಹುಲಿಗಳ ಸಂರಕ್ಷಣೆಯ ಉದ್ದೇಶದಿಂದ ದೇಶದಲ್ಲಿ ರಕ್ಷಿತ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳ ಸಂಖ್ಯೆ ಏರಿಕೆಯಾಗಿದೆ. ಈ ಉದ್ಯಾನಗಳಲ್ಲಿ ಇತರೆ ಬೇಟೆ ಮತ್ತು ಬಲಿ ಪ್ರಾಣಿಗಳ ಸಂಖ್ಯೆಯೂ ಏರಿಕೆಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವು ಇದಕ್ಕೆ ಉತ್ತಮ ನಿದರ್ಶನ. ಈ ಉದ್ಯಾನದಲ್ಲಿ ಈಗ 200ಕ್ಕೂ ಹೆಚ್ಚು ಚಿರತೆಗಳು ಮತ್ತು 3,046 ಆನೆಗಳಿವೆ ಎನ್ನುತ್ತಾರೆ ಹುಲಿ ಯೋಜನೆ ಅಧಿಕಾರಿಗಳು. ದೇಶದ ಬೇರೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲೂ ಇದೇ ರೀತಿಯ ಪ್ರಗತಿ ಸಾಧ್ಯವಾಗಿದೆ.
ಸವಾಲುಗಳು ಮತ್ತು ಆಕ್ಷೇಪಗಳು: ದೇಶದಲ್ಲಿನ ಹುಲಿ ಸಂರಕ್ಷಣೆ ಯೋಜನೆಯ ಎದುರು ಹಲವು ಸವಾಲುಗಳಿವೆ. ಹುಲಿ ಸಂರಕ್ಷಣೆಯ ಸ್ವರೂಪದ ಬಗ್ಗೆ ಆಕ್ಷೇಪಗಳೂ ವ್ಯಕ್ತವಾಗುತ್ತಿವೆ. ಭಾರತದಲ್ಲಿ ಈಗ ಇರುವ ಹುಲಿಗಳಲ್ಲಿ ತಳಿ ವೈವಿಧ್ಯತೆ ಇಲ್ಲ ಎಂಬುದು ಇಂತಹ ಆಕ್ಷೇಪಗಳಲ್ಲಿ ಒಂದು.
‘ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ ಎಂದು ನಾವೆಲ್ಲಾ ಸಂಭ್ರಮಪಡುತ್ತಿದ್ದೇವೆ. ಆದರೆ, ಅವುಗಳ ದೀರ್ಘಕಾಲದ ಉಳಿಯುವಿಕೆ ಬಗ್ಗೆಯೂ ವೈಜ್ಞಾನಿಕ ವಿಧಾನದಡಿ ಚಿಂತಿಸಬೇಕಿದೆ. ಜೀವ ಪರಿಸರದಲ್ಲಿ ಪ್ರಬೇಧವೊಂದು ದೀರ್ಘಕಾಲ ಬದುಕುಳಿಯಲು ಸದೃಢವಾದ ತಳಿಗಳ ಪಾತ್ರ ಅತ್ಯಂತ ಮಹತ್ವದ್ದು. ಆ ಪ್ರಬೇಧದ ಗುಣಮಟ್ಟದ ವಂಶವಾಹಿನಿ ಪರಿಣಾಮಕಾರಿ ಹಾಗೂ ನಿರಂತರವಾಗಿ ಪ್ರವಹಿಸುತ್ತಿರಬೇಕು. ಆಗ ಮಾತ್ರ ಆ ಜೀವ ಸಂಕುಲದ ಭವಿಷ್ಯದಲ್ಲಿ ಸದೃಢವಾಗಿರುತ್ತದೆ. ಆದರೆ, ಭಾರತದಲ್ಲಿರುವ ಹುಲಿಗಳ ವಂಶವಾಹಿ ಗುಣಮಟ್ಟದಿಂದ ಕೂಡಿಲ್ಲ. ಕಾಡುಗಳು ದ್ವೀಪ ಸ್ವರೂಪದಲ್ಲಿ ಇರುವುದೇ ಇದಕ್ಕೆ ಮೂಲ ಕಾರಣ. ಹುಲಿ ಸಂಕುಲದ ದೀರ್ಘಕಾಲದ ಬಾಳಿಕೆಗೆ ಒಂದು ಪ್ರದೇಶದಲ್ಲಿ ಕನಿಷ್ಠ 500 ಸದೃಢವಾದ ಹುಲಿಗಳು ಇರಬೇಕು ಎಂದು ಜೀವ ವಿಜ್ಞಾನ ಹೇಳುತ್ತದೆ. ನಮ್ಮಲ್ಲಿ ಕಾಡುಗಳು ದ್ವೀಪ ಸ್ವರೂಪದಲ್ಲಿದೆ. ಹುಲಿಗಳ ಸಂಚಾರಕ್ಕೆ ಕಾಡುಗಳ ನಡುವೆ ಸಂಪರ್ಕ ಕೊಂಡಿಯಾದ ಕಾರಿಡಾರ್‌ಗಳೇ ಇಲ್ಲ. ಕೆಲವೆಡೆ ಇರುವ ಕಾರಿಡಾರ್‌ಗಳು ದುರ್ಬಲ ವಾಗಿವೆ. ಇದರಿಂದ ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಸಂಪರ್ಕವೇ ಇಲ್ಲದಂತಾಗಿದೆ. ಹಾಗಾಗಿ, ತಳಿ ವೈವಿಧ್ಯತೆ ಕಾಣಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ವನ್ಯಜೀವಿ ತಜ್ಞ ಕೃಪಾಕರ.
‘ಜೀವಿಗಳ ತಳಿ ವೈವಿಧ್ಯತೆ ಎಷ್ಟು ಮುಖ್ಯ ಎಂಬುದಕ್ಕೆ ತಾಂಜಾನಿ ಯಾದ ಸೆರೆಂಗೆಟ್ಟಿ ಕಾಡಿನಲ್ಲಿ 20 ವರ್ಷಗಳ ಹಿಂದೆ ಸಾಕು ನಾಯಿಗಳಿಗೆ ಕಾಣಿಸಿಕೊಂಡ ಕೆನನ್ ಡಿಸ್ಟೆಂಪರ್ ವೈರಾಣು ದಾಳಿ ನಿದರ್ಶನವಾಗಿದೆ. ಅಲ್ಲಿ ಈ ವೈರಾಣು ದಾಳಿಗೆ 300ಕ್ಕೂ ಹೆಚ್ಚು ಸಿಂಹಗಳು ಪ್ರಾಣ ಕಳೆದುಕೊಂಡವು. ಆದರೆ, ಕಾಡಿನ ಬೇರೆ ಬೇರೆ ಪ್ರದೇಶದಲ್ಲಿ ಜೀವಿಸಿದ್ದ ಸಿಂಹಗಳಿಂದ ಮತ್ತೆ ಅವುಗಳ ಸಂತತಿ ಅಲ್ಲಿ ವೃದ್ಧಿಸಿದ್ದು ಈಗ ಇತಿಹಾಸ. ಅಲ್ಲಿನ ಸಿಂಹಗಳಲ್ಲಿ ತಳಿವೈವಿಧ್ಯ ಇದ್ದುದ್ದರಿಂದ ಅದು ಸಾಧ್ಯವಾಯಿತು. ಭಾರತದ ಅರಣ್ಯಗಳಲ್ಲಿ ಅಂತಹ ಗಂಡಾಂತರ ಸಂಭವಿಸಿದರೆ ಇಲ್ಲಿನ ಹುಲಿಗಳು ಬದುಕುಳಿಯುವುದು ಕಷ್ಟ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ.
‘ತಳಿ ವೈವಿಧ್ಯತೆ ಸದೃಢವಾಗಿದ್ದಾಗ ಮಾತ್ರ ಪರಿಸರದ ಎಲ್ಲಾ ಸವಾಲುಗಳನ್ನು ಜಯಿಸಿ ಜೀವಿಗಳು ಬದುಕುಳಿಯಲು ಸಾಧ್ಯ. ದೇಶದ ಕಾಡುಗಳಲ್ಲಿರುವ ಹುಲಿಗಳಿಗೂ ಈ ಮಾತು ಅನ್ವಯಿಸುತ್ತದೆ. ಆದರೆ, ನಮ್ಮಲ್ಲಿನ ಅರಣ್ಯಗಳಲ್ಲಿ ಹುಲಿಗಳ ತಳಿ ವೈವಿಧ್ಯತೆ ಬೆಳೆಯುವ ಅವಕಾಶ ಇರುವುದು ತೀರಾ ಕಡಿಮೆ. ಆದರೆ, ನೀಲಗಿರಿ ಜೈವಿಕ ತಾಣ ಈ ನಿಟ್ಟಿನಲ್ಲಿ ಭವಿಷ್ಯದ ಭರವಸೆಯಾಗಿ ನಿಲ್ಲಬಲ್ಲದು ಎನ್ನಲು ಅಡ್ಡಿಯಿಲ್ಲ. ಕರ್ನಾಟಕ, ತಮಿಳುನಾಡು ಮತ್ತು ಕೇರಳ ಒಳಗೊಂಡ ನೀಲಗಿರಿ ಜೈವಿಕ ವಲಯದಲ್ಲಿ ಹುಲಿ ಸಂತತಿ ದೀರ್ಘಕಾಲ ಬದುಕುಳಿಯುವಂತಹ ಅವಕಾಶಗಳು ಹೆಚ್ಚಿವೆ. ಇಲ್ಲಿನ ಪರಿಸರಕ್ಕೆ ಧಕ್ಕೆಯಾಗದಂತೆ ಆಳುವವರು ಎಚ್ಚರವಹಿಸಬೇಕಿದೆ’ ಎಂದು ಅವರು ವಿವರಿಸಿದ್ದಾರೆ.
ಹುಲಿ ಯೋಜನೆ ಪ್ರದೇಶಗಳಲ್ಲಿ ಜನವಸತಿ ಇರುವುದು, ಹುಲಿಗಳ ಸಂರಕ್ಷಣೆಯಲ್ಲಿ ಎದುರಾಗಿರುವ ದೊಡ್ಡ ಸವಾಲು ಎಂಬ ವಾದವಿದೆ. ಯಾವುದೇ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಇರುವ ಬುಡಕಟ್ಟು ನಿವಾಸಿಗಳನ್ನು ಹೊರಗಿಡಬೇಕು. ಮನುಷ್ಯನ ಚಟುವಟಿಕೆಗಳಿಂದ ಅವು ಮುಕ್ತವಾಗಿರಬೇಕು ಎಂಬುದು ಬಹುತೇಕ ಪರಿಸರವಾದಿಗಳ ಪ್ರತಿಪಾದನೆ. ವನ್ಯಜೀವಿಗಳು ಮತ್ತು ಮಾನವರು ಸಹಜೀವನ ನಡೆಸಬೇಕು. ಪರಸ್ಪರರಿಗೆ ಧಕ್ಕೆಯಾಗದೇ ಇರುವ ರೀತಿಯಲ್ಲಿ ಜೀವನಕ್ರಮವನ್ನು ರೂಪಿಸಿಕೊಳ್ಳಬೇಕು ಎಂಬ ವಾದವೂ ಇದೆ. ಆದರೆ, ಜನವಸತಿ ಪ್ರದೇಶಗಳನ್ನು ಸಂರಕ್ಷಿತ ಅರಣ್ಯ ಪ್ರದೇಶಗಳಿಂದ ಹೊರಗಿಡಬೇಕು ಎಂಬ ಪ್ರತಿಪಾದನೆಯನ್ನು ಆಧರಿಸಿಯೇ ಕೇಂದ್ರ ಸರ್ಕಾರದ ಯೋಜನೆಗಳು ರೂಪುಗೊಂಡಿವೆ. ಆದರೆ, ಇಂತಹ ಪುನರ್ವಸತಿ ಯೋಜನೆಗಳೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಜನವಸತಿ ಪ್ರದೇಶಗಳ ಪುನರ್ವಸತಿ ಪರಿಣಾಮಕಾರಿಯಾಗಿ ಜಾರಿಯಾಗದೇ ಇರುವುದು ಇದಕ್ಕೆ ತಾಜಾ ಉದಾಹರಣೆ ಎನ್ನುತ್ತಾರೆ ‘ವೈಲ್ಡ್ ಲೈಫ್ ಫಸ್ಟ್’ನ ವ್ಯವಸ್ಥಾಪಕ ಟ್ರಸ್ಟಿ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಪ್ರವೀಣ್ ಭಾರ್ಗವ್.
‘ಹುಲಿ ಮತ್ತು ಮನುಷ್ಯ ಒಟ್ಟಾಗಿ ಜೀವಿಸುವುದು, ಹುಲಿಗಳ ಸಂರಕ್ಷಣೆ ದೃಷ್ಟಿಯಿಂದ ಸೂಕ್ತವಲ್ಲ. ಕಾಡಿನೊಳಗಿರುವ ಜನರು ಸ್ವಯಂಪ್ರೇರಿತರಾಗಿ ಹೊರಗೆ ಬರುವುದಾದರೆ ಅವರಿಗೆ ಸೂಕ್ತ ಪುನರ್ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. 2018ರಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿಯೇ ಕಾಡಿನೊಳಗಿರುವ ಜನರುಸ್ವಯಂಪ್ರೇರಿತರಾಗಿ ಹೊರಬಂದರೆ ಅವರಿಗೆ ಪುನರ್ವಸತಿ ಕಲ್ಪಿಸಲು ಹೊಸ ಮಾರ್ಗಸೂಚಿಯನ್ನೂ ರಚಿಸಲಾಗಿದೆ. ಇದರಡಿ ₹ 48 ಸಾವಿರ ಕೋಟಿ ಇದೆ. ಇದರಡಿ ಕರ್ನಾಟಕಕ್ಕೆ ₹ 1,300 ಕೋಟಿ ಅನುದಾನ ಹಂಚಿಕೆಯಾಗಿದೆ. ಆದರೆ, ಈ ಅನುದಾನವನ್ನು ಬಳಸಿಕೊಂಡಿಲ್ಲ’ ಎಂಬುದು ಭಾರ್ಗವ್ ಅವರ ಅಸಮಾಧಾನ.
ಹುಲಿ ರಕ್ಷಿತಾರಣ್ಯದ ಹೃದಯಭಾಗವಾದ ಕೇಂದ್ರ ವಲಯದಲ್ಲಿ ಕಾಡಿನ ಮೇಲೆ ಒತ್ತಡ ಕಡಿಮೆ ಇರಬೇಕು. ಅಲ್ಲಿ ಸ್ಥಳೀಯರ ಸಂಚಾರ ಇರಬಾರದು. ಪ್ರವಾಸೋದ್ಯಮಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶಗಳು ಮತ್ತು ಪರಿಸರ ಸಂರಕ್ಷಣಾ ಕಾನೂನುಗಳು ಕೂಡ ಹೇಳುತ್ತವೆ. ಆದರೆ, ಅದು ಜಾರಿಗೊಂಡಿಲ್ಲ. ಈ ನಿಯಮದ ಅನುಷ್ಠಾನ ಕೇವಲ ಹುಲಿ ಸಂಕುಲದ ಸಂರಕ್ಷಣೆಗಷ್ಟೇ ಸೀಮಿತವಲ್ಲ. ಉಳಿದ ವನ್ಯಜೀವಿಗಳ ಬದುಕಿಗೂ ಸಹಕಾರಿಯಾಗಲಿದೆ ಎನ್ನುವುದು ಅಲ್ಲಗಳೆಯುವಂತಿಲ್ಲ ಎಂಬುದು ಭಾರ್ಗವ್ ಅವರ ಅಭಿಮತ.
ಲಂಟಾನಾ ಕಳೆ ಸಸ್ಯವು ದೇಶದ ಕಾಡುಗಳಿಗೆ, ವನ್ಯಜೀವಿಗಳಿಗೆ ಮಾರಕ ಎನ್ನುತ್ತವೆ ಹಲವು ಅಧ್ಯಯನ ವರದಿಗಳು. ಭಾರತದ ಕಾಡುಗಳಲ್ಲಿ ಲಂಟಾನಾ ಕಮಾರಾ ಜೀವ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಿದೆ. ದೇಶದಾದ್ಯಂತ ಇರುವ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳ ಒಟ್ಟು ವಿಸ್ತೀರ್ಣ 1.54 ಲಕ್ಷ ಚದರ ಕಿ.ಮೀ.ನಷ್ಟಾಗುತ್ತದೆ. ಇದರಲ್ಲಿ ಶೇ 40ರಷ್ಟು ಲಂಟಾನಾ ಆವರಿಸಿದೆ ಎನ್ನುತ್ತದೆ ಇತ್ತೀಚೆಗೆ ಬಿಡುಗಡೆಯಾಗಿರುವ ಗ್ಲೋಬಲ್ ಇಕಾಲಜಿ ಮತ್ತು ಕನ್ಸರ್ವೇಷನ್ ವರದಿ. ಅದರಲ್ಲೂ ಶಿವಾಲಿಕ್ ಪರ್ವತ ಪ್ರದೇಶ, ಮಧ್ಯ ಭಾರತ ಹಾಗೂ ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಲಂಟಾನಾ ಹಾವಳಿ ಮಿತಿಮೀರಿದೆ. ಗಣತಿ ಪ್ರಕಾರ ಹುಲಿಗಳ ಸಾಂದ್ರತೆ ಹೆಚ್ಚಿರುವುದು ಈ ಭಾಗದಲ್ಲಿಯೇ. ಆದರೆ, ಈ ಪ್ರದೇಶದಲ್ಲೇ ಲಂಟಾನಾ ಹಾವಳಿ ವಿಪರೀತವಾಗಿರುವುದು ಹುಲಿ ಸಂರಕ್ಷಣೆಯಲ್ಲಿನ ಅತ್ಯಂತ ದೊಡ್ಡ ತೊಡಕುಗಳಲ್ಲಿ ಒಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಜೀವಜಾಲದಲ್ಲಿ ಹುಲ್ಲಿನ ಪಾತ್ರ ಮಹತ್ವಪೂರ್ಣವಾದುದು. ಅರಣ್ಯ ಪ್ರದೇಶಗಳಲ್ಲಿನ ಬಹುತೇಕ ಬಲಿಪ್ರಾಣಿಗಳ ಪ್ರಧಾನ ಆಹಾರ ಹುಲ್ಲು. ಲಂಟಾನಾ ಬೆಳೆದಲ್ಲಿ, ಹುಲ್ಲು ನಾಶವಾಗುತ್ತದೆ. ಇದರಿಂದ ಹುಲ್ಲನ್ನು ಅವಲಂಬಿಸಿರುವ ಬಲಿ ಪ್ರಾಣಿಗಳ ಆಹಾರ ಕೊರತೆಯಾಗುತ್ತದೆ. ಬಲಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಲೂ ಇದು ಕಾರಣವಾಗುತ್ತದೆ. ಪರಿಣಾಮವಾಗಿ ಹುಲಿ, ಚಿರತೆಯಂತಹ ಬೇಟೆ ಪ್ರಾಣಿಗಳಿಗೆ ಆಹಾರ ಲಭ್ಯತೆ ಪ್ರಮಾಣ ಕಡಿಮೆಯಾಗುತ್ತದೆ. ಲಂಟಾನಾದಿಂದಾಗಿ ದೇಶದ ಕಾಡುಗಳಲ್ಲಿನ ಆಹಾರ ಸರಪಳಿಗೆ ಧಕ್ಕೆಯಾಗುತ್ತಿದೆ. ಹುಲಿಗಳ ಸಂಖ್ಯಾವೃದ್ಧಿಯನ್ನು ಇದು ಕುಂಠಿತಗೊಳಿಸುತ್ತದೆ. ದೇಶದ ಹುಲಿ ಸಂರಕ್ಷಣೆ ಯೋಜನೆಯಲ್ಲಿ ಇದು ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಂದು. ಆದರೂ, ವೈಜ್ಞಾನಿಕ ವಿಧಾನದಡಿ ಲಂಟಾನಾ ಸಮಸ್ಯೆಯ ನಿರ್ವಹಣೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ಕ್ರಮವಹಿಸಿಲ್ಲ.
––––––
ಹುಲಿಗಳ ಸಂರಕ್ಷಣೆಗೆ ತಂತ್ರಜ್ಞಾನದ ನೆರವು
ದೇಶದಲ್ಲಿ ಅತ್ಯುತ್ತಮ ಹತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಐದು ಪ್ರದೇಶಗಳು ನಮ್ಮ ರಾಜ್ಯದಲ್ಲಿಯೇ ಇವೆ. ಅಂದರೆ, ನಮ್ಮಲ್ಲಿರುವ ಐದು ಹುಲಿ ಸಂರಕ್ಷಿತ ಪ್ರದೇಶಗಳೂ ಅತ್ಯುತ್ತಮ ಎನಿಸಿವೆ. ನಮ್ಮ ರಾಜ್ಯದ ಒಟ್ಟು ಅರಣ್ಯ ಪ್ರದೇಶದಲ್ಲಿ ಶೇ 25ರಷ್ಟನ್ನು ವನ್ಯಜೀವಿ ಸಂರಕ್ಷಣೆಗೆ ನಾವು ಬಳಸುತ್ತಿದ್ದೇವೆ. ಅರಣ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದರೆ ತಕ್ಷಣ ಮಾಹಿತಿ ರವಾನಿಸುವ ಮತ್ತು ಕಾರ್ಯಾಚರಣೆ ನಡೆಸುವುದಕ್ಕೆ ತಂತ್ರಜ್ಞಾನದ ನೆರವು ಪಡೆಯುತ್ತಿದ್ದೇವೆ. ಅರಣ್ಯ ರಕ್ಷಕರಿಗೆ ಉತ್ತಮ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗಿದೆ. ಕಳ್ಳಬೇಟೆ ತಡೆಗೆ ಶಿಬಿರಗಳನ್ನು ಹೆಚ್ಚಿಸಲಾಗಿದೆ. ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಹುಲಿಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಗುತ್ತಿದೆ.
ರಾಜೀವ್ ರಂಜನ್, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)
****
ಹುಲಿಗಳ ಕಳ್ಳಬೇಟೆ ನಿಂತಿದೆ
ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಕಳ್ಳಬೇಟೆ ತಡೆ ಶಿಬಿರ ಮಾಡಲಾಗಿದೆ. ಸುಮಾರು 20 ವರ್ಷಗಳ ಹಿಂದೆ ಹುಲಿಗಳ ಕಳ್ಳಬೇಟೆ ಹೆಚ್ಚಾಗಿತ್ತು. ಅವುಗಳ ಚರ್ಮ, ಉಗುರುಗಳಿಗಾಗಿ ಕೊಲ್ಲಲಾಗುತ್ತಿತ್ತು. ಈಗ ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ನಾವು ಕೈಗೊಳ್ಳುತ್ತಿರುವ ಹುಲಿಗಳ ಸಂರಕ್ಷಣಾ ಕಾರ್ಯದಿಂದ ಇದು ಸಾಧ್ಯವಾಗಿದ್ದು, ಇದರಲ್ಲಿ ಅರಣ್ಯ ಸಿಬ್ಬಂದಿಯ ಶ್ರಮ ಹೆಚ್ಚಿದೆ. ಪ್ರತಿ ಶಿಬಿರದಲ್ಲಿ ನಾಲ್ವರು ಅರಣ್ಯ ವೀಕ್ಷಕರನ್ನು (ವಾಚರ್ಸ್) ನಿಯೋಜಿಸಲಾಗಿದ್ದು, ಅವರಿಗೆ ಎಲ್ಲಾ ಸೌಲಭ್ಯ ನೀಡಲಾಗುತ್ತಿದೆ ಮತ್ತು ಹುಲಿ ಸಂರಕ್ಷಣೆಗೆ ಸ್ಥಳೀಯರ ನೆರವನ್ನೂ ಪಡೆಯಲಾಗುತ್ತಿದೆ.
ಕುಮಾರ್ ಪುಷ್ಕರ್
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)
–––––
ಹುಲಿ ಸಂಖ್ಯೆಯಲ್ಲಿ ಏರಿಕೆ
ವರ್ಷ;ಹುಲಿಗಳ ಸಂಖ್ಯೆ
1972;1,827
2006;1,411
2010;1,706
2014;2,226
2018;2,969
––––
ದೇಶದಲ್ಲಿ ಹುಲಿ ಹೆಜ್ಜೆ
ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಬ್ಲಾಕ್‌ಗಳು;ವಿಸ್ತೀರ್ಣ;ಹುಲಿಗಳ ಸಂಖ್ಯೆ
ರಾಜಾಜಿ–ಕಾರ್ಬೆಟ್–ರಾಮನಗರ್–ಪಿಲಿಭಿತ್–ದುಧವಾ;7,390 ಚ.ಕಿ.ಮೀ.;604
ವಾಲ್ಮೀಕಿ–ಸೋಹಾಗಿ ಬರ್ವಾ;956 ಚ.ಕಿ.ಮೀ.;42
ಸರಿಸ್ಕಾ;534 ಚ.ಕಿ.ಮೀ.;11
ರಣಥಂಬೋರ್–ಮುಕುಂದರ ಹಿಲ್ಸ್–ಕುನೊ;1,288 ಚ.ಕಿ.ಮೀ.;59
ಪನ್ನಾ;1,941 ಚ.ಕಿ.ಮೀ.;36
ಸಂಜಯ ದುಬರಿ–ಬಾಂಧವಗಡ–ಗುರುಗಾಸಿದಾಸ್;3,607 ಚ.ಕಿ.ಮೀ.;141
ಕನ್ಹಾ–ಪೆಂಚ್–ಅಚಾನಕ್‌ಮಾರ್;10,850 ಚ.ಕಿ.ಮೀ;308
ಮಾನಸ್–ಬಕ್ಸಾ;652 ಚ.ಕಿ.ಮೀ.;30
ದಿಬಾಂಗ್–ನಮದಾಪಾ–ಕಮಲಾಂಗ್;1,117 ಚ.ಕಿ.ಮೀ.;29
ಕಾಜೀರಂಗ–ಒರಾಂಗ್–ಕರ್ಬಿ–ಪಕ್ಕೆ–ನಮೇರಿ;1,543 ಚ.ಕಿ.ಮೀ.;160
ಸುಂದರಬನ್;2,313 ಚ.ಕಿ.ಮೀ.;88
ಸೀಮಲೀಪಾಲ್–ಸತ್ಕೋಸಿಯಾ;1,969 ಚ.ಕಿ.ಮೀ.;18
ಉದಾಂತಿ–ಸೀತಾನದಿ–ಸಿನಾಬೇದ;764 ಚ.ಕಿ.ಮೀ.;3
ಇಂದ್ರಾವತಿ;989 ಚ.ಕಿ.ಮೀ.;3
ಎನ್‌ಎಸ್‌ಟಿಆರ್–ಜಿಬಿಎಂ;5,749 ಚ.ಕಿ.ಮೀ.;59
ಪರಾಂಬುಕುಲಂ–ಅಣ್ಣಾಮಲೈ;3,581 ಚ.ಕಿ.ಮೀ.;58
ಕಾಲಕ್ಕಾಡಾ ಮುಂದಾಂತುರೈ–ಪೆರಿಯಾರ್;4,483 ಚ.ಕಿ.ಮೀ.;42
ರತಪಾನಿ–ರಾಯಸೆನ್;2,084 ಚ.ಕಿ.ಮೀ.;45
ಸಾತ್ಪುರ–ಮೆಲಘಾಟ್;6,668 ಚ.ಕಿ.ಮೀ.;99
ತಾಬೋಡಾ–ನವೆಗಾಂವ್–ನಾಗ್ಸಿರಾ;7,208 ಚ.ಕಿ.ಮೀ.;219
ಸಹ್ಯಾದ್ರಿ–ಸಿಂಧುದುರ್ಗ;409 ಚ.ಕಿ.ಮೀ.;3
ಮೂಕಾಂಬಿಕಾ–ಕಾಳಿ–ಮಹಾದಾಯಿ–ಕುದುರೆಮುಖ–ಭದ್ರಾ;6,855 ಚ.ಕಿ.ಮೀ.;150
ನಾಗರಹೊಳೆ–ಬಂಡೀಪುರ–ವಯನಾಡ್–ಮದುಮಲೈ–ಸತ್ಯಮಂಗಲ–ಬಿಆರ್‌ಟಿ;12,134 ಚ.ಕಿ.ಮೀ.;724
–––––
ಪೂರಕ ಮಾಹಿತಿ: ಕೆ.ಎಚ್.ಓಬಳೇಶ್, ಸೂರ್ಯನಾರಾಯಣ ವಿ., ಅಮೃತಕಿರಣ ಬಿ.ಎಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.