ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ: ಶೈಶವಾವಸ್ಥೆಯಲ್ಲಿ ಶೈತ್ಯಾಗಾರ! ಶೀತಲಗೃಹಗಳ ಸಮಸ್ಯೆಯಿಂದ ರೈತರ ಪಡಿಪಾಟಲು
ಒಳನೋಟ: ಶೈಶವಾವಸ್ಥೆಯಲ್ಲಿ ಶೈತ್ಯಾಗಾರ! ಶೀತಲಗೃಹಗಳ ಸಮಸ್ಯೆಯಿಂದ ರೈತರ ಪಡಿಪಾಟಲು
ರಾಜ್ಯದಲ್ಲಿ ರೈತರು ಬೆಳೆದ ಕೃಷಿ ಬೆಳೆಗಳಿಗೆ ಸೂಕ್ತವಾದ ಶೈತ್ಯಾಗಾರಗಳ ಕೊರತೆ ಇರುವುದರ ಬಗೆಗಿನ ಸಮಗ್ರ ವರದಿ ಇಲ್ಲಿದೆ..
Published 16 ಡಿಸೆಂಬರ್ 2023, 20:45 IST
Last Updated 16 ಡಿಸೆಂಬರ್ 2023, 20:45 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯಪುರದಲ್ಲಿ ವಾರ್ಷಿಕ ಅಂದಾಜು ಒಂದೂವರೆ ಲಕ್ಷ ಟನ್‌ ಒಣದ್ರಾಕ್ಷಿ ಉತ್ಪಾದನೆಯಾಗುತ್ತದೆ. ಆದರೆ ಸೂಕ್ತ ಮಾರುಕಟ್ಟೆಯಿಲ್ಲ, ದೀರ್ಘಕಾಲ ಇಟ್ಟು ಮಾರಾಟ ಮಾಡಲು ಅಗತ್ಯ ಕೋಲ್ಡ್‌ಸ್ಟೋರೇಜ್ ಇಲ್ಲದೆ, ಬೆಳೆಗಾರರು 60 ಕಿ.ಮೀ. ದೂರದ ಮಹಾರಾಷ್ಟ್ರಕ್ಕೆ ಸೇರಿದ ಸಾಂಗ್ಲಿ– ತಾಸ್‌ಗಾವ್‌ನಲ್ಲಿರುವ ಕೋಲ್ಡ್‌ ಸ್ಟೋರೇಜ್‌ಗಳಲ್ಲಿ ದ್ರಾಕ್ಷಿ ರಕ್ಷಿಸಿಟ್ಟು ಯೋಗ್ಯ ಬೆಲೆ ಸಿಕ್ಕಾಗ ಮಾರಾಟ ಮಾಡುತ್ತಾರೆ!

ತುಮಕೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಾರು ಎಕರೆಯಲ್ಲಿ ಹುಣಸೆ ಮರಗಳಿವೆ. ಪ್ರತಿ ವರ್ಷ ಟನ್‌ಗಟ್ಟಲೆ ಹಣ್ಣು ಉತ್ಪಾದನೆಯಾಗುತ್ತದೆ. ಬೆಲೆಯ ಏರಿಳಿತ ಕಾಯಂ. ದೀರ್ಘಕಾಲ ಕಾಪಿಟ್ಟು ಮಾರಾಟ ಮಾಡಲು ಕೋಲ್ಡ್‌ಸ್ಟೋರೇಜ್‌ಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಅದಕ್ಕಾಗಿ ರೈತರು ಮತ್ತು ವರ್ತಕರು ಇಲ್ಲಿ ಬೆಳೆದ ಹುಣಸೆಹಣ್ಣನ್ನು ಪಕ್ಕದ ಆಂಧ್ರಪ್ರದೇಶದ ಹಿಂದೂಪುರದಲ್ಲಿರುವ ಕೋಲ್ಡ್‌ಸ್ಟೋರೇಜ್‌ಗಳಲ್ಲಿ ಇಟ್ಟು, ಒಳ್ಳೆಯ ಬೆಲೆ ಬಂದ ಮೇಲೆ ಅಲ್ಲೇ ಮಾರಾಟ ಮಾಡಿ, ತಮಗೆ ಬೇಕಾದ ಕೃಷಿ ಪರಿಕರಗಳನ್ನು ಅಲ್ಲಿಂದಲೇ ಖರೀದಿಸಿಕೊಂಡು ಬರುತ್ತಾರೆ. ಕೆ.ಜಿಗೆ ಇಂತಿಷ್ಟು ಬಾಡಿಗೆ ಕಟ್ಟುತ್ತಾರೆ. ಅಲ್ಲಿ 20ಕ್ಕೂ ಹೆಚ್ಚು ಕೋಲ್ಡ್‌ ಸ್ಟೋರೇಜ್‌ಗಳಿವೆ.

ರಾಜ್ಯದಲ್ಲಿ ಶೀತಲಗೃಹಗಳ (ಕೋಲ್ಡ್‌ ಸ್ಟೋರೇಜ್‌/ಶೈತ್ಯಾಗಾರ) ಕೊರತೆಯಿಂದ ಎದುರಾಗುವ ಸ್ಥಿತಿಗತಿಯನ್ನು ಈ ಎರಡು ಘಟನೆಗಳು ತೆರೆದಿಡುತ್ತವೆ. 

ಸರ್ಕಾರಿ, ಸಾರ್ವಜನಿಕ ಖಾಸಗಿ ಸಹ ಭಾಗಿತ್ವ, ಖಾಸಗಿ ಕಂಪನಿಗಳು ಹಾಗೂ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಸಹಾಯಧನದ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತಿರುವ ನೂರಾರು ಕೋಲ್ಡ್‌ ಸ್ಟೋರೇಜ್‌ಗಳು ರಾಜ್ಯದಲ್ಲಿವೆ. ಆದರೆ ಇವುಗಳ ಸಂಖ್ಯೆ ಬೆಳೆ ಉತ್ಪಾದನೆ ಪ್ರಮಾಣಕ್ಕೆ ತಕ್ಕಂತೆ ಇಲ್ಲ. ಈ ಶೀತಲ ಗೃಹಗಳ ಬಳಕೆ ಬಗ್ಗೆ ಬಳಕೆದಾರರಲ್ಲಿ (ರೈತರಲ್ಲಿ) ಜಾಗೃತಿಯೂ ಮೂಡಿಲ್ಲ. ಕೋಲ್ಡ್‌ ಸ್ಟೋರೇಜ್‌ ಸ್ಥಾಪನೆಗೆ ತೋಟ
ಗಾರಿಕೆ, ಕೃಷಿ ಇಲಾಖೆಯಲ್ಲಿ (ಕೇಂದ್ರ/ ರಾಜ್ಯ ಸರ್ಕಾರದ) ಯೋಜನೆಗಳಿವೆ.

ಅವುಗಳ ಬಳಕೆ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಮಾತ್ರವಲ್ಲ, ಕೋಲ್ಡ್‌ಸ್ಟೋರೇಜ್‌ಗಳ ಅವಶ್ಯಕತೆ ಹಾಗೂ ಅದನ್ನು ಪೂರೈಸುವ ಕುರಿತು ಈವರೆಗೂ ಸರ್ಕಾರದ ಮಟ್ಟದಲ್ಲಿ ಅಧ್ಯಯನಗಳಾಗಲೀ, ಸಮೀಕ್ಷೆಗಳಾಗಲೀ ನಡೆದಿಲ್ಲ. ಇಷ್ಟೆಲ್ಲ ಇದ್ದರೂ ಯಾವ ಆಧಾರದ ಮೇಲೆ ಪ್ರತಿ ಬಾರಿಯ ಬಜೆಟ್‌ನಲ್ಲಿ ಕೋಲ್ಡ್‌ಸ್ಟೋರೇಜ್‌ಗಾಗಿ ಕೋಟಿಗಟ್ಟಲೆ ಹಣ ತೆಗೆದಿಡುತ್ತಾರೋ ಕಾರಣ ತಿಳಿಯದು.

ಎಷ್ಟೆಷ್ಟಿವೆ ಕೋಲ್ಡ್‌ ಸ್ಟೋರೇಜ್?

ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದ 25 ಜಿಲ್ಲೆಗಳಲ್ಲಿ 162 ಕೋಲ್ಡ್‌ಸ್ಟೋರೇಜ್‌ ಘಟಕಗಳಿವೆ. ಇವುಗಳಲ್ಲಿ 152 ಖಾಸಗಿಯವರದ್ದು. 10 ಮಾತ್ರ ಸರ್ಕಾರಿ ಸ್ವಾಮ್ಯದವು. ಅದರಲ್ಲಿ ಕೆಪೆಕ್ ಅಡಿಯಲ್ಲಿ 9 (ವಿಜಯಪುರದಲ್ಲಿ 4, ಬಾಗಲಕೋಟೆ, ಧಾರವಾಡ, ಬೀದರ್, ಗದಗ್, ಕೊಪ್ಪಳದಲ್ಲಿ ತಲಾ 1) ಹಾಗೂ ತೋಟಗಾರಿಕೆ ಇಲಾಖೆಯಡಿ 1(ಬೆಂಗಳೂರು ಗ್ರಾಮಾಂತರ). ಉಳಿದಂತೆ 49 ಖಾಸಗಿ ಕೋಲ್ಡ್‌ಸ್ಟೋರೇಜ್‌ಗಳು ರಾಷ್ಟ್ರೀಯ ತೋಟಗಾರಿಕಾ ಮಿಷನ್ (ಎನ್‌ಎಚ್‌ಎಂ) ಸಹಾಯಧನದ ಅಡಿ ನಿರ್ಮಾಣವಾಗಿವೆ. 

ಇಲಾಖೆಯ ಲೆಕ್ಕವಲ್ಲದೇ, ರಾಜ್ಯದಲ್ಲಿ 500ಕ್ಕೂ ಹೆಚ್ಚು ಬೃಹತ್‌ ಸಾಮರ್ಥ್ಯದ ಶೀತಲಗೃಹಗಳಿರುವ ಅಂದಾಜು ಇ..ದೆ. ಕೆಲವು ಕಂಪನಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕೋಲ್ಡ್‌ಸ್ಟೋರೇಜ್‌ಗಳನ್ನು ಇಟ್ಟುಕೊಂಡಿವೆ. ಹೀಗೆ ಬಿಡಿಬಿಡಿಯಾಗಿರುವುದರಿಂದ ಅಧಿಕೃತವಾಗಿ ಇಂತಿಷ್ಟೇ ಕೋಲ್ಡ್‌ ಸ್ಟೋರೇಜ್‌ಗಳಿವೆ ಎಂಬ ಲೆಕ್ಕ ಸಿಗುವುದಿಲ್ಲ.

ವರ್ತಕರೇ ಬಳಕೆದಾರರು: ರಾಜ್ಯದಲ್ಲಿರುವ ಎಲ್ಲ ಕೋಲ್ಡ್‌ಸ್ಟೋರೇಜ್‌ಗಳ ಬಹುಪಾಲು ಬಳಕೆದಾರರು ವರ್ತಕರು. ಇವರು ಪದಾರ್ಥಗಳ ಗುಣಮಟ್ಟ ಕಾಪಾಡುವುದಕ್ಕೆ ಶೀತಲಗೃಹಗಳನ್ನು ಬಳಸಿದರೆ, ರೈತರು ಬೆಲೆ ಏರಿಳಿತದ ಹಿನ್ನೆಲೆಯಲ್ಲಿ ಬಳಕೆ ಮಾಡುತ್ತಾರೆ.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಬೆಳೆಗಾರರು ಶುಂಠಿ, ಕಾಳುಮೆಣಸು, ಅಡಿಕೆಯನ್ನು ಶೀತಲಗೃಹದಲ್ಲಿ ಇಡುತ್ತಾರೆ. ವಿಜಯಪುರದಲ್ಲಿ ಒಣದ್ರಾಕ್ಷಿ, ಹಾವೇರಿ ಜಿಲ್ಲೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ, ಶುಂಠಿ, ಹುಣಸೆಹಣ್ಣು, ಅರಿಶಿಣ ಬೆಳೆಗಳನ್ನಿಡುತ್ತಾರೆ. ಗದಗದಲ್ಲಿ ಹೆಸರುಕಾಳಿನಂತಹ ಧಾನ್ಯಗಳನ್ನು ಇಡುತ್ತಾರೆ. ಹಾಸನ, ಚಿಕ್ಕಬಳ್ಳಾಪುರ ಭಾಗದಲ್ಲಿ ಆಲೂಗೆಡ್ಡೆಗಳನ್ನಿಡುತ್ತಾರೆ.

(2022-23ರ ಮಾಹಿತಿ: ತೋಟಗಾರಿಕೆ ಇಲಾಖೆ, ಹಣ್ಣು ಮತ್ತು ತರಕಾರಿಗಳ ವಿಭಾಗ, ಲಾಲ್‌ಬಾಗ್‌, ಬೆಂಗಳೂರು)

(2022-23ರ ಮಾಹಿತಿ: ತೋಟಗಾರಿಕೆ ಇಲಾಖೆ, ಹಣ್ಣು ಮತ್ತು ತರಕಾರಿಗಳ ವಿಭಾಗ, ಲಾಲ್‌ಬಾಗ್‌, ಬೆಂಗಳೂರು)

  • ಚಾಮರಾಜನಗರ, ದಾವಣಗೆರೆ, ಕೊಡಗು, ಮಂಡ್ಯ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಲ್ಡ್‌ ಸ್ಟೋರೇಜ್‌ಗಳಿಲ್ಲ.

  • ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ 49 ಕೋಲ್ಡ್‌ ಸ್ಟೋರೇಜ್‌ಗಳಿವೆ.

  • ಸರ್ಕಾರಿ ಸ್ವಾಮ್ಯದ 10 ಕೋಲ್ಡ್‌ ಸ್ಟೋರೇಜ್‌ಗಳಿವೆ. ಇದರಲ್ಲಿ 9 ಕೆಪಕ್‌ ಅಡಿಯಲ್ಲಿವೆ.(ವಿಜಯಪುರ–4, ಕೊಪ್ಪಳ, ಗದಗ, ಧಾರವಾಡ ಬೀದರ್‌, ಬಾಗಲಕೋಟೆ ತಲಾ 1). ಇನ್ನೊಂದು ತೋಟಗಾರಿಕೆ ಇಲಾಖೆಯಡಿ ಬೆಂಗಳೂರು ನಗರದಲ್ಲಿದೆ.

ಯಾವ್ಯಾವ ಉತ್ಪನ್ನಗಳಿಗೆ ಶೀತಲಗೃಹ?

ಪ್ರತಿ ಸಾರಿ ಟೊಮೆಟೊ, ಈರುಳ್ಳಿಯಂತಹ ಉತ್ಪನ್ನಗಳ ದರ ಕುಸಿದು, ರೈತರು ಉತ್ಪನ್ನಗಳನ್ನು ಬೀದಿಗೆ ಚೆಲ್ಲಿ ಪ್ರತಿಭಟಿಸಿದಾಗ, ‘ಕೋಲ್ಡ್‌ಸ್ಟೋರೇಜ್‌’ ಬೇಕೆಂಬ ಬೇಡಿಕೆ ಮುನ್ನೆಲೆಗೆ ಬರುತ್ತದೆ. ಆದರೆ, ತಜ್ಞರ ಪ್ರಕಾರ ಎಲ್ಲ ತರಕಾರಿಗಳನ್ನು, ಹಣ್ಣುಗಳನ್ನು (ಅದರಲ್ಲೂ ತೇವಾಂಶ ಹೆಚ್ಚಿರುವ ಉತ್ಪನ್ನಗಳು) ದೀರ್ಘಕಾಲ ಕೋಲ್ಡ್‌ ಸ್ಟೋರೇಜ್‌ನಲ್ಲಿಟ್ಟು ಮಾರಾಟ ಮಾಡಲು ಸಾಧ್ಯವಿಲ್ಲ.

ಪ್ರತಿ ತರಕಾರಿ, ಹಣ್ಣು ಅಥವಾ ಹೂವು, ಒಣ ಪದಾರ್ಥಗಳು... ಹೀಗೆ ಒಂದೊಂದಕ್ಕೂ ಒಂದೊಂದು ಗುಣವಿರುತ್ತದೆ. ಪ್ರತಿಯೊಂದನ್ನೂ ನಿರ್ದಿಷ್ಟ ಆರ್ದ್ರತೆ ಹಾಗೂ ಉಷ್ಣಾಂಶದಲ್ಲಿಡಬೇಕಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆಯೇ ನ್ಯಾಷನಲ್‌ ಕೋಲ್ಡ್ ಚೈನ್ ಡೆವಲಪ್‌ಮೆಂಟ್ ಕಾರ್ಪೊರೇಷನ್(ಎನ್‌ಸಿಸಿಡಿಸಿ) ಸಂಶೋಧನೆ ನಡೆಸಿ ಯಾವ ಉತ್ಪನ್ನವನ್ನು ಎಷ್ಟು ಡಿಗ್ರಿ ಉಷ್ಣಾಂಶದಲ್ಲಿಡಬೇಕೆಂಬ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ)ಯನ್ನು ಕೊಟ್ಟಿದೆ. ಆ ಪ್ರಕಾರ ಶೇ 30 ರಿಂದ 40 ಕ್ಕಿಂತ ಹೆಚ್ಚು ತೇವಾಂಶ ಹೆಚ್ಚಿರುವ ಟೊಮೆಟೊ, ಬಾಳೆಹಣ್ಣು, ಕಲ್ಲಂಗಡಿ, ಈರುಳ್ಳಿಯಂತಹ ಉತ್ಪನ್ನಗಳನ್ನು ದೀರ್ಘಕಾಲ ಕೋಲ್ಡ್‌ ಸ್ಟೋರೇಜ್‌ನಲ್ಲಿಟ್ಟರೆ ಕೊಳೆಯುತ್ತವೆ. ಎಲ್ಲ ತರಕಾರಿಗಳನ್ನು ದೀರ್ಘಕಾಲ ಇಟ್ಟು ಮಾರಾಟ ಮಾಡುವುದು ಕಷ್ಟ.

ಟೊಮೆಟೊವನ್ನು 14 ಡಿಗ್ರಿ ಸೆ. ತಾಪಮಾನದಲ್ಲಿಡಬಹುದು. ಹೆಚ್ಚುದಿನ ಸಂರಕ್ಷಿಸಿ ಇಡುವುದು ಕಷ್ಟ. ಮಾವು, ದಾಳಿಂಬೆ, ನಿಂಬೆಯಂತಹ ಹಣ್ಣುಗಳನ್ನು, ಬ್ರೊಕೊಲಿಯಂತಹ ತರಕಾರಿಗಳನ್ನು 8 ಡಿಗ್ರಿ ಸೆ.ನಲ್ಲಿ, ಅಣಬೆಯನ್ನು 4 ಡಿಗ್ರಿ ಸೆ.ನಲ್ಲಿ, ಒಣಗಿದ ಶುಂಠಿ, ಧಾನ್ಯ, ಬೇಳೆಕಾಳುಗಳು, ಒಣ ಮೆಣಸಿನಕಾಯಿಯಂಥ ಒಣ ಉತ್ಪನ್ನಗಳನ್ನು 8 ರಿಂದ 12 ಡಿಗ್ರಿ ಸೆ. ತಾಪಮಾನದಲ್ಲಿಡಬಹುದು. ಯಾವುದೇ ಒಣ ಉತ್ಪನ್ನಗಳನ್ನು 4 ರಿಂದ 6 ಡಿಗ್ರಿ ಸೆ.ನಲ್ಲಿ ಇಡಬಹುದು. ಆಲೂಗೆಡ್ಡೆಯನ್ನು 6 ಡಿಗ್ರಿ ಸೆ.ನಲ್ಲಿ ಇಡುತ್ತಿದ್ದಾರೆ. ಸದ್ಯ ರಾಜ್ಯದಲ್ಲಿರುವ ದೊಡ್ಡ ಪ್ರಮಾಣದ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಕೋಲ್ಡ್‌ ಸ್ಟೋರೇಜ್‌ಗಳು ಹೆಚ್ಚು ಬಳಕೆಯಾಗುತ್ತಿರುವುದು ಶುಂಠಿ, ಒಣದ್ರಾಕ್ಷಿ, ಆಲೂಗಡ್ಡೆ, ಮೆಣಸಿನಕಾಯಿ ಮತ್ತು ದವಸ–ಧಾನ್ಯಗಳಂತಹ ಉತ್ಪನ್ನಗಳಿಗೆ.

‘ಕೋಲ್ಡ್‌ ಸ್ಟೋರೇಜ್‌ನಲ್ಲಿ ಮೆಣಸಿನಕಾಯಿ ಮಾತ್ರವಲ್ಲ, ಯಾವುದೇ ತೇವಾಂಶವಿರುವ ವಸ್ತುಗಳನ್ನಿಟ್ಟಾಗ ತೂಕ ಕಡಿಮೆಯಾಗುತ್ತದೆ. 30 ಕೆ.ಜಿ. ಚೀಲ ಒಣ ಮೆಣಸಿನಕಾಯಿ ಇಟ್ಟರೆ, ಒಂದು ವರ್ಷಕ್ಕೆ ಒಂದರಿಂದ ಒಂದೂವರೆ ಪರ್ಸೆಂಟ್ ತೂಕ ಕಡಿಮೆಯಾಗಬಹುದು. ಆದರೆ ಗುಣಮಟ್ಟ ಸಿಗುತ್ತದೆ. ಹೊರಗಡೆ ಇಟ್ಟರೆ, ಇದಕ್ಕಿಂತ ಹೆಚ್ಚು ನಷ್ಟವಾಗುತ್ತದೆ. ಕೀಟಗಳು, ಇಲಿಗಳು ತಿಂದು ಹಾಳಾಗುತ್ತವೆ‘ ಎನ್ನುತ್ತಾರೆ ಬ್ಯಾಡಗಿಯ ವರ್ತಕರು.

ವಿಜಯಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಣದ್ರಾಕ್ಷಿ ವಹಿವಾಟು ಸಂಕೀರ್ಣದಲ್ಲಿ ಶನಿವಾರ ಇ–ಟ್ರೇಡಿಂಗ್‌ನಲ್ಲಿ ಭಾಗವಹಿಸಿದ್ದ ರೈತರು ದ್ರಾಕ್ಷಿಯನ್ನು ಜೋಡಿಸಿಟ್ಟರು

ವಿಜಯಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಣದ್ರಾಕ್ಷಿ ವಹಿವಾಟು ಸಂಕೀರ್ಣದಲ್ಲಿ ಶನಿವಾರ ಇ–ಟ್ರೇಡಿಂಗ್‌ನಲ್ಲಿ ಭಾಗವಹಿಸಿದ್ದ ರೈತರು ದ್ರಾಕ್ಷಿಯನ್ನು ಜೋಡಿಸಿಟ್ಟರು

ಪ್ರಜಾವಾಣಿ ಚಿತ್ರ

ಕೊಯ್ಲೋತ್ತರ ನಷ್ಟ ತಪ್ಪಿಸಲು

ಕೋಲ್ಡ್‌ಸ್ಟೋರೇಜ್‌, ಕೇವಲ ಪದಾರ್ಥಗಳನ್ನಿಟ್ಟು ಬೆಲೆ ಹೆಚ್ಚಾದಾಗ ಮಾರಾಟ ಮಾಡುವುದಕ್ಕಷ್ಟೇ ಅಲ್ಲ. ಕೊಯ್ಲೋತ್ತರ ನಷ್ಟದ ಪ್ರಮಾಣ (ಪೋಸ್ಟ್‌ ಹಾರ್ವೆ‌ಸ್ಟ್‌ ಲಾಸ್‌) ತಗ್ಗಿಸುವುದಕ್ಕೂ ಸಹಾಯವಾಗುತ್ತದೆ. ಧಾನ್ಯಗಳನ್ನು ದೂಳು, ಕೀಟಗಳು, ಇಲಿ–ಹೆಗ್ಗಣಗಳ ಹಾವಳಿಯಿಂದ ರಕ್ಷಿಸಿ, ಅವುಗಳ ಗುಣಮಟ್ಟವನ್ನೂ ಕಾಪಾಡಿಕೊಳ್ಳಲು ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಲು ಕೋಲ್ಡ್‌ಸ್ಟೋರೇಜ್ ಸಹಾಯವಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೆ. ವೆಂಕಟೇಶ್. 

‘ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಕೊಯ್ಲೋತ್ತರ ನಷ್ಟ ಅಂದಾಜು ಶೇ 18ರಿಂದ 20ರಷ್ಟು. ರಾಜ್ಯದಲ್ಲಿ ಸರಾಸರಿ 390 ಲಕ್ಷ ಟನ್‌ನಷ್ಟು ತೋಟಗಾರಿಕೆ ಬೆಳೆ ಉತ್ಪಾದನೆಯಾಗುತ್ತದೆ. ಇದರಲ್ಲಿ ಶೇ 15 ನಷ್ಟವಾದರೂ, ಕೋಟಿ ಕೋಟಿ ರೂಪಾಯಿಯಷ್ಟು ಹಣ ವ್ಯರ್ಥವಾಗುತ್ತದೆ. ಉತ್ಪನ್ನದ ನಷ್ಟದ ಜೊತೆಗೆ ಅದಕ್ಕಾಗಿ ವ್ಯಯಿಸಿದ ಬೀಜ, ಗೊಬ್ಬರ, ನೀರು, ಹಣ, ಸಮಯ ಎಲ್ಲವೂ ಪರೋಕ್ಷವಾಗಿ ನಷ್ಟವೇ. ರೈತರಿಗೆ ಕೈಗೆಟುಕುವ ಬಾಡಿಗೆ ದರದಲ್ಲಿ ಹಾಗೂ ಅವರ ಜಮೀನಿನ ಹತ್ತಿರದಲ್ಲಿ ಕೋಲ್ಡ್‌ಸ್ಟೋರೇಜ್ ಲಭ್ಯವಾದರೆ, ಈ ನಷ್ಟವನ್ನು ತಪ್ಪಿಸಲು ಸಾಧ್ಯವಿದೆ‘ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಧಾನ್ಯಗಳು, ಮೆಣಸಿನಕಾಯಿಯಂತಹ ಒಣ ಪದಾರ್ಥಗಳು ಗ್ರಾಹಕರಿಗೆ ತಲುಪುವವರೆಗೂ ಗುಣಮಟ್ಟದಲ್ಲಿರಬೇಕೆಂದರೆ, ಅವುಗಳನ್ನು ಕೋಲ್ಡ್‌ಸ್ಟೋರೇಜ್‌ನಲ್ಲಿಟ್ಟು ರಕ್ಷಿಸಬೇಕು. ನಾವು ಈ ಎಲ್ಲ ಉತ್ಪನ್ನಗಳನ್ನು ಕೋಲ್ಡ್‌ಸ್ಟೋರೇಜ್‌ನಲ್ಲಿಟ್ಟು, ಕಂಪನಿಗಳಿಗೆ ಅಗತ್ಯಕ್ಕೆ ತಕ್ಕಂತೆ ಪೂರೈಸುತ್ತೇನೆ. ಉತ್ತಮ ಬೆಲೆಯೂ ಸಿಗುತ್ತದೆ’ ಎನ್ನುತ್ತಾರೆ ಬ್ಯಾಡಗಿಯ ಕಬ್ಬೂರ್ ಎಂಟರ್‌ಪ್ರೈಸಸ್‌ನ ಬಸವರಾಜ್.

ನಮ್ಮ ರಾಜ್ಯಕ್ಕಿಂತ ಬೆಳೆ ಉತ್ಪಾದನೆ ಕಡಿಮೆ ಇರುವ ಗುಜರಾತ್‌, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್‌ ರಾಜ್ಯಗಳಲ್ಲಿ ಉತ್ತಮ ಕೋಲ್ಡ್‌ಸ್ಟೋರೇಜ್‌ಗಳಿವೆ. ಅಲ್ಲಿ ಕೊಯ್ಲೋತ್ತರ ನಷ್ಟ ಶೇ 5ರಿಂದ 6ರಷ್ಟು ಮಾತ್ರ. ಇವೆಲ್ಲವೂ ಕೋಲ್ಡ್‌ಸ್ಟೋರೇಜ್‌ಗಳಿಂದ ಸಾಧ್ಯವಾಗಿದೆ ಎನ್ನುತ್ತಾರೆ ತಜ್ಞರು. ಕರ್ನಾಟಕ, ಕೋಲ್ಡ್​ಸ್ಟೋರೇಜ್ ಸೌಲಭ್ಯ ಪಡೆಯುವಲ್ಲಿ 10ನೇ ಸ್ಥಾನದಲ್ಲಿದೆ ಎನ್ನುತ್ತಾರೆ ತೋಟಗಾರಿಕೆ ವಿಜ್ಞಾನಿ ಎಸ್‌.ಎಲ್‌. ಜಗದೀಶ್.

ಸರ್ಕಾರದ ಕೆಪಕ್‌ ವಿಭಾಗದ ಅಡಿ ಗದಗದಲ್ಲಿ ನಿರ್ಮಾಣವಾಗಿರುವ ಶೈತ್ಯಾಗೃಹ

ಸರ್ಕಾರದ ಕೆಪಕ್‌ ವಿಭಾಗದ ಅಡಿ ಗದಗದಲ್ಲಿ ನಿರ್ಮಾಣವಾಗಿರುವ ಶೈತ್ಯಾಗೃಹ

ಪ್ರಜಾವಾಣಿ ಚಿತ್ರ

ಸ್ಥಾಪನೆ, ನಿರ್ವಹಣೆ ಕಠಿಣ

ಕೋಲ್ಡ್‌ಸ್ಟೋರೇಜ್– ಕೃಷಿ–ತೋಟಗಾರಿಕೆ ಕ್ಷೇತ್ರದ ಅಗತ್ಯ ಸೌಲಭ್ಯಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದನ್ನು ಸ್ಥಾ‍ಪಿಸಿ ನಿರ್ವಹಿಸುವುದು ಸುಲಭವಲ್ಲ, ಸಾಧಾರಣ ರೈತರೊಬ್ಬರಿಂದಂತೂ ಸಾಧ್ಯವಿಲ್ಲ ಎನ್ನುವುದು ತಜ್ಞರ ಅಭಿಮತ.

‘ಒಂದು ಸಾಧಾರಣ ಸಾಮರ್ಥ್ಯದ ಕೋಲ್ಡ್‌ಸ್ಟೋರೇಜ್ ನಿರ್ಮಾಣಕ್ಕೆ ₹4 ಕೋಟಿಯಿಂದ ₹5 ಕೋಟಿ ಖರ್ಚಾಗಬಹುದು’ ಎಂದು ಅಂದಾಜಿಸುತ್ತಾರೆ ಹಾವೇರಿ ಜಿಲ್ಲೆಯ ಹಿರಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಕುರಬರ. ಮೂಲದ ಪ್ರಕಾರ, ಅಂದಾಜು ನಾಲ್ಕು ಸಾವಿರ ಟನ್‌ ಸಾಮರ್ಥ್ಯದ ಸೋಲಾರ್‌ ಮತ್ತು ವಿದ್ಯುತ್ ಆಧಾರಿತ ಕೋಲ್ಡ್‌ಸ್ಟೋರೇಜ್‌ ನಿರ್ಮಾಣಕ್ಕೆ ಸುಮಾರು ₹10 ಕೋಟಿ ಬಂಡವಾಳ, ವಾರ್ಷಿಕ ನಿರ್ವಹಣೆಗೆ ಅಂದಾಜು ಏಳೆಂಟು ಲಕ್ಷ ರೂಪಾಯಿ ಬೇಕಾಗುತ್ತದೆ. 10 ಟನ್‌ ಸಾಮರ್ಥ್ಯದ ಸೌರಶಕ್ತಿ ಆಧಾರಿತ ಸಣ್ಣ ಘಟಕ ಸ್ಥಾಪನೆಗೆ ಅಂದಾಜು ₹25 ಲಕ್ಷ ಬೇಕಾಗುತ್ತದೆ. ಅಷ್ಟೇ ಅಲ್ಲ, ಶೀತಲಗೃಹ ಆರಂಭಿಸಿದ ಮೇಲೆ ನಿರಂತರವಾಗಿ ವಿದ್ಯುತ್ ಇರಬೇಕು. ವಿದ್ಯುತ್‌ ಕೈಕೊಟ್ಟರೆ, ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರಬೇಕು.

ಇಂಥ ಕಠಿಣ ಕಾರಣಗಳಿಗಾಗಿಯೇ ರೈತರು ವೈಯಕ್ತಿಕವಾಗಿ ಕೋಲ್ಡ್‌ಸ್ಟೋರೇಜ್ ಹೊಂದುವುದು ಕಷ್ಟ. ಹಾಗೆಯೇ, ಸಣ್ಣ ಹಿಡುವಳಿದಾರರು, ಖಾಸಗಿಯವರ ಶೀತಲಗೃಹಗಳಲ್ಲಿ ಉತ್ಪನ್ನಗಳನ್ನಿಟ್ಟು ದುಬಾರಿ ಬಾಡಿಗೆ ಕಟ್ಟವುದು ಕಷ್ಟ. ಇವೆಲ್ಲದರ ನಡುವೆಯೂ ಒಣದ್ರಾಕ್ಷಿ, ಮೆಣಸಿನ ಕಾಯಿ, ಶುಂಠಿ, ಕಾಳುಮೆಣಸು, ಅಡಿಕೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಆರ್ಥಿಕವಾಗಿ ಸಬಲರಾಗಿರುವ ರೈತರು ಬಾಡಿಗೆ ಭರಿಸಿ ಶೀತಲಗೃಹಗಳನ್ನು ಬಳಸುತ್ತಿದ್ದಾರೆ.

ಪರಿಹಾರ ಸಾಧ್ಯತೆಗಳು

ಈಗ ರಾಜ್ಯದಾದ್ಯಂತ ಕ್ರಿಯಾಶೀಲವಾಗಿರುವ 800ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪನಿಗಳಿವೆ (ಫಾರ್ಮರ್‌ ಪ್ರೊಡ್ಯೂಸರ್ಸ್‌ ಆರ್ಗನೈಸೇಷನ್‌ (ಎಫ್‌ಪಿಒ)/ಕಂಪನಿ (ಎಫ್‌ಪಿಸಿ). ತೋಟಗಾರಿಕೆ ಇಲಾಖೆ, ನಬಾರ್ಡ್, ಕೃಷಿ ಇಲಾಖೆ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳ ಅಡಿಯಲ್ಲಿ ಈ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಕೋಲ್ಡ್‌ಸ್ಟೋರೇಜ್ ಸ್ಥಾಪನೆ ಮತ್ತು ನಿರ್ವಹಣೆಗೆ ಸರ್ಕಾರ ಆದ್ಯತೆ ನೀಡಬೇಕು. ಈ ಪ್ರಯತ್ನ ಆರಂಭವಾಗಿದ್ದರೂ, ಇದಕ್ಕೆ ವೇಗ ಕೊಡಬೇಕಿದೆ. ಮುಖ್ಯವಾಗಿ ರೈತರಿಗೆ, ಶೀತಲಗೃಹಗಳಿಂದ ಏನೆಲ್ಲ ಪ್ರಯೋಜನವಿದೆ, ಅದನ್ನು ಬಳಸಿಕೊಳ್ಳುವುದು ಹೇಗೆ ಎಂಬ ಜಾಗೃತಿಯನ್ನೂ ಮೂಡಿಸಬೇಕಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಸರ್ಕಾರ ಈ ರೀತಿ ಪ್ರೋತ್ಸಾಹಿಸಿ, ಅದರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಹೊರಗಿನವರಿಗೆ ಕೊಟ್ಟು, ಆ ಕೋಲ್ಡ್ ಸ್ಟೋರೇಜ್‌ಗಳಲ್ಲಿ ರೈತರಿಗೆ ಆದ್ಯತೆ ನೀಡಿ, ದರವನ್ನು ಕಡಿಮೆ ಇಡಲು ಸೂಚಿಸಿದರೆ, ಆಗ ಕೋಲ್ಡ್ ಸ್ಟೋರೇಜ್ ಬಳಕೆ ವ್ಯಾಪಕವಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಇಂಥದ್ದೇ ಬೆಳೆಗೆಂದು ಕೋಲ್ಡ್‌ಸ್ಟೋರೇಜ್ ಸ್ಥಾಪಿಸಿದರೂ, ಇದರಲ್ಲಿ ಆ ಉತ್ಪನ್ನಗಳನ್ನೇ ಇಡಬೇಕಿಲ್ಲ. ಸುತ್ತಮುತ್ತಲಿನ ರೈತರಿಗೆ ಅಗತ್ಯವಿರುವ  ತರಕಾರಿ, ಹಣ್ಣು, ಧಾನ್ಯಗಳು, ಗೆಡ್ಡೆಗಳಂತಹ ಎಲ್ಲ ಪದಾರ್ಥಗಳನ್ನು ಇಡುವಂತೆ ವ್ಯವಸ್ಥೆ ಮಾಡಬಹುದು. ಈ ಬಗ್ಗೆ ಬೆಳೆಗಾರರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಆಗ ಬಳಕೆಯೂ ವ್ಯಾಪಕವಾಗುತ್ತದೆ.

ಅಧ್ಯಯನ, ‘ಜಾಗೃತಿ’ಯೂ ಅಗತ್ಯ

ರಾಜ್ಯದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಿತಿಗತಿ, ಅಗತ್ಯಗಳ ಬಗ್ಗೆ ಅಧ್ಯಯನವಾಗಬೇಕು. ರಾಷ್ಟ್ರೀಯ ಕೋಲ್ಡ್‌ಚೈನ್ ಅಭಿವೃದ್ಧಿ ಕೇಂದ್ರ(ಎನ್‌ಸಿಸಿಡಿ) ಮತ್ತು ನಬಾರ್ಡ್‌ ಕನ್ಸಲ್ಟೆನ್ಸಿ ಸರ್ವೀಸ್ ಪ್ರೈ.ಲಿ. ಸಹಯೋಗದಲ್ಲಿ 2014–15ನಲ್ಲಿ ಇಂಥದ್ದೊಂದು ಅಧ್ಯಯನ ಮಾಡಿ, ವರದಿ ನೀಡಿದೆ. ಆ ನಂತರದಲ್ಲಿ ಇಂಥ ಪ್ರಯತ್ನಗಳಾಗಿಲ್ಲ.

ಕೋಲ್ಡ್‌ಸ್ಟೋರೇಜ್‌ ಕುರಿತು ಜಾಗೃತಿ ಮೂಡಿಸುವ ಮತ್ತು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಸರ್ಕಾರ, ಯಾವುದಾದರೂ ಒಂದು ನಿರ್ದಿಷ್ಟ ಇಲಾಖೆಗೆ ವಹಿಸಬೇಕಿದೆ. ಕೃಷಿ, ತೋಟಗಾರಿಕೆ, ಕೃಷಿ ಉತ್ಪನ್ನ ಮಾರುಕಟ್ಟೆ ವಿಭಾಗಗಳು, ಉತ್ಪಾದನೆ, ಮಾರಾಟಕ್ಕಷ್ಟೇ ಸೀಮಿತವಾಗಿವೆ. ‘ಶೀತಲಗೃಹ’ಗಳ ಅನುಷ್ಠಾನ ನಿರ್ವಹಣೆಯನ್ನು ಕೇಳುವವರಿಲ್ಲದಂತಾಗಿದೆ.

ಸರ್ಕಾರವು ಎಲ್ಲ ಎಪಿಎಂಸಿಗಳಲ್ಲೂ ಶೀತಲಗೃಹಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು. ಕೈಗೆಟಕುವ ದರದಲ್ಲಿ ಬಾಡಿಗೆ ನಿಗದಿಪಡಿಸಬೇಕು. ಳಕೆಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ರೈತರು ಎಪಿಎಂಸಿಗೆ ಧಾನ್ಯಗಳನ್ನು ತಂದು, ನಿರೀಕ್ಷಿತ ಬೆಲೆ ಸಿಗದಿದ್ದಾಗ, ಅಲ್ಲೇ ಇರುವ ಕೋಲ್ಡ್‌ಸ್ಟೋರೇಜ್‌ನಲ್ಲಿಟ್ಟು  ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವಂತಹ ವ್ಯವಸ್ಥೆಯಾಗಬೇಕು ಎನ್ನುವುದು ತಜ್ಞರ ಅಭಿಮತ.

‘ಸೌರ’ ಆಧಾರಿತ ಕೋಲ್ಡ್‌ಸ್ಟೋರೇಜ್‌!

ತೆಲಂಗಾಣ, ಒಡಿಶಾ, ಮಹಾರಾಷ್ಟ್ರ ರಾಜ್ಯಗಳಲ್ಲಿ, ಅಲ್ಲಿನ ಸರ್ಕಾರಗಳು ‘ಸೌರ ಆಧಾರಿತ‘ ಕೋಲ್ಡ್‌ ಸ್ಟೋರೇಜ್‌ ಅಳವಡಿಕೆಯನ್ನು ಪ್ರೋತ್ಸಾಹಿಸುತ್ತಿವೆ. ಇನ್ನೊಂದೆಡೆ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳ ರೈತ ಉತ್ಪಾದಕ ಸಂಸ್ಥೆ/ಕಂಪನಿಗಳೂ (ಎಫ್‌ಪಿಒ/ಎಫ್‌ಪಿಸಿ) ಸಣ್ಣ ಗಾತ್ರದ ಸೌರಶಕ್ತಿ ಮತ್ತು ವಿದ್ಯುತ್ ಆಧಾರಿತ ಕೋಲ್ಡ್‌ಸ್ಟೋರೇಜ್‌ ಅಳವಡಿಸಿಕೊಂಡಿವೆ. ಬೆಂಗಳೂರಿನ ಸೆಲ್ಕೊ ಸಂಸ್ಥೆ, ಇಂಥ ಕೋಲ್ಡ್‌ಸ್ಟೋರೇಜ್‌ಗಳ ಅನುಷ್ಠಾನಕ್ಕೆ ತಾಂತ್ರಿಕ ಹಾಗೂ ಆರ್ಥಿಕ ಬೆಂಬಲ ನೀಡುತ್ತಿದೆ.

ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಯಲ್ಲಿ ಶಾರದಾ ವಿವಿಧೋದ್ದೇಶ ಕೋಲ್ಡ್‌ಸ್ಟೋರೇಜ್‌ ಘಟಕವಿದೆ. ಇದು ಕೂಡ ಸೌರಶಕ್ತಿ ಮತ್ತು ವಿದ್ಯುತ್ ಚಾಲಿತ ಘಟಕ. ಸುಮಾರು 4.4 ಸಾವಿರ ಟನ್‌ ಸಾಮರ್ಥ್ಯದ್ದು. ನಾಲ್ಕು ಅಂತಸ್ತುಗಳ ಘಟಕ. ರೈತರು ಮತ್ತು ಟ್ರೇಡರ್ಸ್‌ ಇಬ್ಬರೂ ಶುಂಠಿ, ಕಾಳುಮೆಣಸು, ಅಡಿಕೆ ಇಡುತ್ತಾರೆ. ಸೌರವಿದ್ಯುತ್ ಹೆಚ್ಚು ಉತ್ಪಾದನೆಯಾದರೆ, ಅದನ್ನು ಗ್ರಿಡ್‌ಗೆ ಮಾರಾಟ ಮಾಡುತ್ತಾರೆ.

‘ಬಿಸಿಲು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಸರ್ಕಾರ ಸೌರಶಕ್ತಿ ಆಧಾರಿತ ಬೃಹತ್ ಗಾತ್ರದ  ಕೋಲ್ಡ್‌ಸ್ಟೋರೇಜ್‌ಗಳನ್ನು ಮಾಡಲು ವಿಪುಲ ಅವಕಾಶಗಳಿವೆ. ಇದರಿಂದ ನಿರ್ವಹಣಾ ವೆಚ್ಚವೂ ಕಡಿಮೆಯಾಗುತ್ತದೆ’ ಎನ್ನುತ್ತಾರೆ ತಜ್ಞರು.

ಒಣ ದ್ರಾಕ್ಷಿಯನ್ನು ಕೋಲ್ಡ್‌ಸ್ಟೋರೇಜ್ ಒಳಗೆ ಬಾಕ್ಸ್‌ಗಳಲ್ಲಿಟ್ಟು ಜೋಡಿಸಿರುವುದು.

ಒಣ ದ್ರಾಕ್ಷಿಯನ್ನು ಕೋಲ್ಡ್‌ಸ್ಟೋರೇಜ್ ಒಳಗೆ ಬಾಕ್ಸ್‌ಗಳಲ್ಲಿಟ್ಟು ಜೋಡಿಸಿರುವುದು.

ಸೆಲ್ಕೊ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನ ಸಹಜ ಆರ್ಗ್ಯಾನಿಕ್ಸ್‌ – ರೈತ ಉತ್ಪಾದಕ ಕಂಪನಿ, ತನ್ನ ಕಚೇರಿಯ ಆವರಣದಲ್ಲಿ ಸುಮಾರು ₹ 25 ಲಕ್ಷ ವೆಚ್ಚದ, 10 ಟನ್‌ ಸಾಮರ್ಥ್ಯದ ಮೂರು ಕೋಣೆಗಳ ಕೋಲ್ಡ್‌ಸ್ಟೋರೇಜ್ ಅಳವಡಿಸಿದೆ. ‘ಒಂದೊಂದು ಉತ್ಪನ್ನಕ್ಕೆ ಒಂದೊಂದು ತಾಪಮಾನ ಅಗತ್ಯ. ಅದಕ್ಕೆ ಮೂರು ಕೋಣೆಗಳನ್ನು ಮಾಡಿಸಿದ್ದೇವೆ. 6 ಡಿಗ್ರಿಯಲ್ಲಿ ಆಲೂಗೆಡ್ಡೆ, 8 ರಿಂದ 12 ಡಿಗ್ರಿಯಲ್ಲಿ ಧಾನ್ಯಗಳನ್ನು ಇಡುತ್ತೇವೆ. ಸೀಸನ್‌ನಲ್ಲಿ ಆಲೂಗೆಡ್ಡೆ ಖರೀದಿಸಿ, ಆರು ತಿಂಗಳವರೆಗೂ ಇಡುತ್ತೇವೆ. ಹುಳು ಬಾಧೆ ತಡೆಯಲು ಧಾನ್ಯ, ಹುಣಸೆಹಣ್ಣು ಇಡುತ್ತೇವೆ. ತರಕಾರಿ ಇಟ್ಟು ಬಳಸುವುದು ಕಷ್ಟ. ಸೌರ ಆಧಾರಿತ ಘಟಕವಾದರೂ, ಎಮರ್ಜೆನ್ಸಿಗಾಗಿ ವಿದ್ಯುತ್ ಸಂಪರ್ಕವೂ ಇದೆ. ಆದರೆ ಈ ವರೆಗೂ ಒಂದು ಯೂನಿಟ್ ಬಳಸಿಲ್ಲ. ಒಂದೂವರೆ ವರ್ಷದಿಂದ ಈ ಘಟಕವನ್ನು ಸೌರಶಕ್ತಿಯಿಂದ ಬಳಸುತ್ತಿದ್ದೇವೆ. ಈವರೆಗೆ ನಿರ್ವಹಣೆಗಾಗಿ ಒಂದು ಪೈಸೆ ಕೂಡ ಖರ್ಚಾಗಿಲ್ಲ’.
ಸೋಮೇಶ್, ಸೆಲ್ಕೊ ಕಂಪನಿಯ ಸಿಇಒ
6-8 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಒಣಮೆಣಸಿನಕಾಯಿ, ಒಣಶುಂಠಿ, ಅರಿಷಿಣ, ಹುಣಸೆಹಣ್ಣು, ಹೆಸರು, ಅಲಸಂದಿ, ಗೋವಿನಜೋಳವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲು ಅವಕಾಶವಿದೆ.
ವಿ.ಎಸ್. ಮೋರಿಗೇರಿ, ಗೌರವ ಕಾರ್ಯದರ್ಶಿ, ವರ್ತಕರ ಸಂಘ ಬ್ಯಾಡಗಿ

ಕೋಲ್ಡ್‌ ಸ್ಟೋರೇಜ್‌ ಕೊರತೆ– ಆರ್ಥಿಕ ವಹಿವಾಟಿಗೆ ಪೆಟ್ಟು

ವಿಜಯಪುರ ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್‌, ಬಾಗಲಕೋಟೆ ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್‌ ಮತ್ತು ಬೆಳಗಾವಿ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಕೃಷಿ ಮಾಡಲಾಗುತ್ತಿದೆ. ವಾರ್ಷಿಕ ಸರಾಸರಿ 5 ಲಕ್ಷದಿಂದ 6 ಲಕ್ಷ ಟನ್‌ಗೂ ಅಧಿಕ ಹಸಿ ದ್ರಾಕ್ಷಿ ಬೆಳೆಯಲಾಗುತ್ತದೆ. ಇದರಲ್ಲಿ ಸುಮಾರು 1.60 ಲಕ್ಷ ಟನ್‌ ಒಣದ್ರಾಕ್ಷಿ ತಯಾರಿಸುತ್ತಾರೆ. ಕನಿಷ್ಠ ₹ 2,500 ರಿಂದ ₹ 3,000 ಕೋಟಿ ವಾರ್ಷಿಕ ಒಣ ಮತ್ತು ಹಸಿ ದ್ರಾಕ್ಷಿ ವಹಿವಾಟು ನಡೆಯುತ್ತದೆ. ಇಷ್ಟಾದರೂ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲ. ವರ್ಷಾನುಗಟ್ಟಲೆ ಸಂಗ್ರಹಿಸಿಟ್ಟುಕೊಳ್ಳಲು ಶೈತ್ಯಾಗಾರಗಳ (ಕೋಲ್ಡ್‌ ಸ್ಟೋರೇಜ್‌) ಕೊರತೆ ಇದೆ. ಅದಕ್ಕೆ ದ್ರಾಕ್ಷಿ ಬೆಳೆಗಾರರು 60 ಕಿ.ಮೀ ದೂರವಿರುವ ಮಹಾರಾಷ್ಟ್ರದ ತಾಸ್‌ಗಾಂವ್‌, ಸಾಂಗ್ಲಿ ಮಾರುಕಟ್ಟೆ ಅವಲಂಬಿಸಿದ್ದಾರೆ.

‘ನಾವು ಬೆಳೆದ ಬಹುತೇಕ ಒಣದ್ರಾಕ್ಷಿಯನ್ನು ಪ್ರತಿ ಟನ್‌ಗೆ ತಿಂಗಳಿಗೆ ₹650 ಬಾಡಿಗೆ ನೀಡಿ, ಸಾಂಗ್ಲಿ ಮತ್ತು ತಾಸ್‌ಗಾಂವ್‌ನ ಶೈತ್ಯಾಗಾರಗಳಲ್ಲಿ ಇಡುತ್ತೇವೆ. ಉತ್ತಮ ದರ ಸಿಕ್ಕಾಗ, ಅಲ್ಲಿಯೇ ಮಾರಿ, ಅದೇ ಹಣದಲ್ಲಿ ಬೆಳೆಗೆ ಬೇಕಾದ ಗೊಬ್ಬರ, ಔಷಧ ಸೇರಿ ಇನ್ನಿತರ ಯಂತ್ರೋಪಕರಣ ಖರೀದಿಸುತ್ತೇವೆ’ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರು.

ಸದ್ಯ ವಿಜಯಪುರ ಜಿಲ್ಲೆಯಲ್ಲಿರುವ ಶೈತ್ಯಾಗಾರಗಳ ಒಟ್ಟಾರೆ ಸಂಗ್ರಹ ಸಾಮರ್ಥ್ಯ ಕೇವಲ 40 ಸಾವಿರ ಟನ್‌. ಶೈತ್ಯಾಗಾರದ ಕೊರತೆ ಮತ್ತು ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದಕ್ಕೆ 1.20 ಲಕ್ಷ ಟನ್‌ ಒಣ ದ್ರಾಕ್ಷಿ ಮಹಾರಾಷ್ಟ್ರ ಮಾರುಕಟ್ಟೆ ಸೇರುತ್ತಿದೆ.

‘ವಿಜಯಪುರ ನಗರ ಸಮೀಪದ ತೊರವಿಯಲ್ಲಿ ದ್ರಾಕ್ಷಿ ಮತ್ತು ವೈನ್‌ ಮಂಡಳಿಯಿಂದ ₹40.75 ಕೋಟಿ ಅನುದಾನದಲ್ಲಿ 10 ಸಾವಿರ ಟನ್‌ ಸಾಮಾರ್ಥ್ಯದ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸುವ ಯೋಜನೆಯಿದ್ದು ಟೆಂಡರ್‌ ಹಂತದಲ್ಲಿ ಇದೆ’ ಎನ್ನುತ್ತಾರೆ ವಿಜಯಪುರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಹುಲ್‌ಕುಮಾರ್‌ ಬಾವಿದಡ್ಡಿ.

ಗದಗ ಜಿಲ್ಲೆ ಹೆಸರುಕಾಳು ಬೆಳೆಗೆ ಪ್ರಸಿದ್ಧಿ. ಒಂದು ಸೀಸನ್‌ನಲ್ಲಿ 5 ಸಾವಿರದಿಂದ 10 ಸಾವಿರ ಟನ್‌ ಹೆಸರುಕಾಳು ಉತ್ಪಾದನೆಯಾಗುತ್ತದೆ ಇಲ್ಲಿರುವುದು 20 ಕೋಲ್ಡ್‌ಸ್ಟೋರೇಜ್‌ ಘಟಕಗಳು. ಗದಗ ಎಪಿಎಂಸಿಯಲ್ಲಿ ಕೆಪೆಕ್‌ನಿಂದ 2 ಕೋಲ್ಡ್‌ಸ್ಟೋರೇಜ್‌ಗಳಿವೆ. ಇದನ್ನು ಶೇ 2ರಷ್ಟು ರೈತರಷ್ಟೇ ಬಳಸುತ್ತಾರೆ. ಉಳಿದವರು ವರ್ತಕರು. ಶೀತಲಗೃಹ ಬಳಕೆ ತಿಳಿಯದ ರೈತರು, ಹೊರ ರಾಜ್ಯಗಳಿಗೆ ಹೆಸರುಕಾಳು ಮಾರಾಟ ಮಾಡುತ್ತಾರೆ.

ತುಮಕೂರಿನಲ್ಲಿ ಕೋಲ್ಡ್‌ಸ್ಟೋರೇಜ್ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ವರ್ತಕರು, ಬೆಳೆಗಾರರು ಇಲ್ಲಿ ಬೆಳೆಯುವ ಹುಣಸೆಹಣ್ಣುನ್ನು ಆಂಧ್ರದ ಮಡಕಶಿರಾ, ಹಿಂದೂಪುರದ ಕೋಲ್ಡ್‌ಸ್ಟೋರೇಜ್‌ಗಳಲ್ಲಿಟ್ಟು, ಅಲ್ಲೇ ಮಾರಾಟ ಮಾಡುತ್ತಾರೆ. ‘ಸರ್ಕಾರ ಸುಸಜ್ಜಿತ ಕೋಲ್ಡ್‌ಸ್ಟೋರೇಜ್‌ ಸ್ಥಾಪಿಸಿ, ರೈತರಿಗೆ ಕೈಗೆಟಕುವ ಬಾಡಿಗೆ ನಿಗದಿಪಡಿಸಿದರೆ, ರೈತರ ಜೊತೆಗೆ, ವರ್ತಕರೂ  ಬಳಸಿಕೊಳ್ಳುತ್ತಾರೆ’ ಎನ್ನುವುದು ತೋವಿನಕೆರೆ ಹುಣಸೆಹಣ್ಣು ಬೆಳೆಗಾರ ರಮೇಶ್‌ ಅವರ ಅಭಿಪ್ರಾಯ.

ಸರ್ಕಾರಕ್ಕೆ ಬಿ.ಸಿ.ಪಾಟೀಲ್‌ ಪತ್ರ

ಬಿ.ಸಿ ಪಾಟೀಲ್ ಅವರು ಕೃಷಿ ಸಚಿವರಾಗಿದ್ದಾಗ, ₹124.10 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 13 ಕೋಲ್ಡ್‌ ಸ್ಟೋರೇಜ್‌ ಮಂಜೂರು ಮಾಡಿಸಿದ್ದರು. ಅವುಗಳ ಕೆಲಸ ಈಗ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ ₹43.43 ಕೋಟಿ ಬೇಕಾಗಿದ್ದು, ಅನುದಾನ ಬಿಡುಗಡೆ ಮಾಡುವಂತೆ ನವೆಂಬರ್‌ 28 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಿರುವ ಕುರಿತು ಮಾಹಿತಿ ಲಭ್ಯವಿಲ್ಲ.

–––––––––

ಪೂರಕ ಮಾಹಿತಿ: ಬಸವರಾಜ ಸಂಪಳ್ಳಿ, ವಿಜಯಪುರ. ಸಿದ್ದು ಆರ್.ಜಿ.ಹಳ್ಳಿ, ಹಾವೇರಿ. ಸತೀಶ್ ಬೆಳ್ಳಕ್ಕಿ, ಗದಗ. ಸಂಧ್ಯಾ ಹೆಗಡೆ, ಮಂಗಳೂರು. ಓದೇಶ್, ರಾಮನಗರ.

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT