ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ | ಪಶ್ಚಿಮ ಘಟ್ಟದ ರಕ್ಷಣೆಗೆ ಪರ್ಯಾಯಗಳೇನು?

ದೂಳು ಹಿಡಿದಿರುವ ಹಲವು ವರದಿಗಳು
Last Updated 10 ಆಗಸ್ಟ್ 2022, 22:00 IST
ಅಕ್ಷರ ಗಾತ್ರ

ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸುವ ಸಂಬಂಧ ವಿಜ್ಞಾನಿ ಡಾ.ಮಾಧವ್‌ ಗಾಡ್ಗೀಳ್ ಮತ್ತು ಡಾ. ಕಸ್ತೂರಿರಂಗನ್‌ ವರದಿಗಳು ಸದಾ ತಣ್ಣಗೇ ಇರುವ ಮಲೆನಾಡು ಪ್ರದೇಶದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದವು. ಈ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನರಾಜ್ಯಗಳು ಈ ವರದಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿವೆ. ಇವುಗಳ ಜಾರಿ ಸಾಧ್ಯವೇ ಇಲ್ಲ ಎಂದೂ ಕೇಂದ್ರಕ್ಕೂ ಪದೇ ಪದೇ ಹೇಳಿವೆ. ಮತ್ತೊಂದೆಡೆ ಪಶ್ಚಿಮಘಟ್ಟ ಕಳೆದ ಕೆಲವು ವರ್ಷಗಳಿಂದ ಪ್ರಚಂಡ ಪ್ರಾಕೃತಿಕ ವಿಕೋಪದ ಮೂಲಕ ಬೇರೆಯದೇ ‘ಸಂದೇಶ’ ನೀಡುತ್ತಿದೆ.

ನಿಸರ್ಗದ ಈ ‘ಆಕ್ರೋಶ’ಕ್ಕೆ ಕಿವಿಗೊಡುವವರು ಯಾರು? ಇವೆರಡೂ ತಲ್ಲಣಗಳ ಮಧ್ಯೆ ಸಮತೋಲನವನ್ನು ಕಾಯ್ದುಕೊಳ್ಳುವುದು ಹೇಗೆ? ಪಶ್ಚಿಮಘಟ್ಟದ ಸಂರಕ್ಷಣೆಗಾಗಿ ಸರ್ಕಾರಕ್ಕೆ ಕಾಲ ಕಾಲಕ್ಕೆ ಹಲವು ತಜ್ಞರು ವರದಿಗಳ ಮೂಲಕ ಶಿಫಾರಸುಗಳನ್ನು ನೀಡಿದ್ದಾರೆ. ಆ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆಯೇ? ಅವುಗಳ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಪರಿಶೀಲಿಸಿದರೆ ಉತ್ತರ ಮಾತ್ರ ಶೂನ್ಯ. ಎಂದಿನಂತೆ ವರದಿಗಳು ದೂಳು ಹಿಡಿದು ಕುಳಿತಿವೆ.

ಅವುಗಳಲ್ಲಿಪಶ್ಚಿಮಘಟ್ಟ ಕಾರ್ಯಪಡೆ ವರದಿ, ರಾಜ್ಯ ಯೋಜನಾ ಇಲಾಖೆಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ವರದಿ,ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಆಡಿಟ್‌ ಮತ್ತು ಹಸಿರು ಬಜೆಟ್‌ ವರದಿ,ಪಶ್ಚಿಮ ಘಟ್ಟದಲ್ಲಿ ಭೂಕುಸಿತಗಳು ಕುರಿತ ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ತಜ್ಞರ ಸಮಿತಿ ವರದಿಗಳು ಉಲ್ಲೇಖನೀಯ.

ಕಳೆದ 30–35 ವರ್ಷಗಳಲ್ಲಿ ನೆಡುತೋಪುಗಳನ್ನು ಬೆಳೆಸುವ ಆಂದೋಲನಗಳಂತೂ ಯಶಸ್ವಿಯಾಗಿವೆ. ಇದರ ಪರಿಣಾಮ ಕರ್ನಾಟಕ ಭೂಪ್ರದೇಶದ ಉಪಗ್ರಹ ಆಧರಿತ ಚಿತ್ರಗಳನ್ನು ಪರಿಶೀಲಿಸಿದಾಗ ರಾಜ್ಯದಲ್ಲಿ ಹಸಿರು ಪ್ರದೇಶದ ವ್ಯಾಪ್ತಿ ಹಿಗ್ಗಿರುವುದು ಕಂಡುಬರುತ್ತದೆ. ಆದರೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಲಕ್ಷಗಟ್ಟಲೆ ವರ್ಷಗಳಿಂದ ವಿಕಸನಗೊಂಡು ಬಂದಿರುವ ಅಮೂಲ್ಯ ಜೀವ ವೈವಿಧ್ಯಗಳ ಸೂಕ್ಷ್ಮ ತಾಣಗಳಿಗೆ ಘಾಸಿಯಾಗುತ್ತಿರುವುದಂತೂ ನಿಜ. ವಿಶ್ವ ಜೈವಿಕ ವೈವಿಧ್ಯಗಳ ಪ್ರಮುಖ ಎಂಟು ತಾಣಗಳಲ್ಲಿ ಪಶ್ಚಿಮಘಟ್ಟವೂ ಒಂದು ಎಂದು ಯುನೆಸ್ಕೋ ಗುರುತಿಸಿದೆ. ಸರೀಸೃಪ, ಉಭಯಚರ, ಮೀನುಗಳು, ಪಕ್ಷಿಗಳು ಮತ್ತು ಸಸ್ತನಿಗಳ ಪ್ರಭೇದಗಳ ಪೈಕಿ ದೇಶದ ಶೇ 30 ರಷ್ಟು ಪಶ್ಚಿಮಘಟ್ಟದಲ್ಲಿವೆ. ಹೀಗಾಗಿ ಅಪರೂಪದ ಜೀವ ವೈವಿಧ್ಯಗಳ ಕಣಜ ಎಂದೇ ಕರೆಯಲಾಗುತ್ತದೆ. ಇವೆಲ್ಲಾ ಕಣ್ಮರೆಯಾಗುತ್ತಿವೆ. ಈ ನಷ್ಟವನ್ನು ‘ಹಸಿರೀಕರಣ ಆಂದೋಲನ’ಗಳು ಸರಿದೂಗಿಸಲು ಸಾಧ್ಯವೇ?

ಪಶ್ಚಿಮಘಟ್ಟದಲ್ಲಿನ ಪ್ರಾಕೃತಿಕ ಅವಘಡಗಳನ್ನು ತಪ್ಪಿಸಲುಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳೇ ರೂಪಿಸಿರುವ ಕಾಯ್ದೆಗಳು–ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿ, ಪಾಲನೇ ಮಾಡಿದ್ದೇ ಆದಲ್ಲಿ ಪಶ್ಚಿಮಘಟ್ಟದ ರಕ್ಷಣೆ ಸಾಧ್ಯ ಎನ್ನುವುದು ಈವರೆಗೆ ಸಲ್ಲಿಕೆಯಾಗಿರುವ ಅಷ್ಟೂ ವರದಿಗಳ ಆಶಯ.

ಅಚ್ಚರಿ ಎಂದರೆ, ಪಶ್ಚಿಮಘಟ್ಟದಲ್ಲಿ ಮಳೆ ಪ್ರಮಾಣ, ಬೆಟ್ಟ– ಇಳಿಜಾರು ಮತ್ತು ಅರಣ್ಯ ಪ್ರದೇಶದ ಪರಿಸರ ಸೂಕ್ಷ್ಮತೆ ಸರ್ಕಾರದ ಯಾವುದೇ ‘ಅಭಿವೃದ್ಧಿ’ಪರ ಯೋಜನೆಗಳಲ್ಲೂ ಬಿಂಬಿತವಾಗಿಲ್ಲ. ಅಂದರೆ, ಈ ಭಾಗವನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಭೂಬಳಕೆ ವಿಚಾರದಲ್ಲಂತೂ ವೈಜ್ಞಾನಿಕ ಆಲೋಚನೆಗಳೇ ಇಲ್ಲ ಎಂಬುದಕ್ಕೆ ಹಲವು ನಿದರ್ಶನಗಳನ್ನು ನೀಡಬಹುದು. ಉದಾಹರಣೆಗೆ ಹೆದ್ದಾರಿ ನಿರ್ಮಾಣದ ವಿಚಾರವನ್ನೇ ತೆಗೆದುಕೊಂಡರೆ, ಬಯಲುಸೀಮೆ ಪ್ರದೇಶದಲ್ಲಿ ಹೆದ್ದಾರಿ ನಿರ್ಮಾಣ ಮಾಡಲು ಅನುಸರಿಸುವ ಮಾನದಂಡಗಳನ್ನೇ ಪಶ್ಚಿಮಘಟ್ಟಕ್ಕೂ ಅನ್ವಯಗೊಳಿಸುತ್ತಾರೆ. ಹೀಗಾಗಿ ಬೇಕಾಬಿಟ್ಟಿಯಾಗಿ ಮರಗಳ ಹನನ ಮಾಡುತ್ತಾರೆ, ಗುಡ್ಡಗಳನ್ನು ಕತ್ತರಿಸುತ್ತಾರೆ.

ಈ ಪ್ರದೇಶಕ್ಕೆ ಪ್ರತ್ಯೇಕ ನೀತಿಯೇ ಇಲ್ಲ. ಅಷ್ಟೇ ಅಲ್ಲ ಜಲಾಶಯ, ರಸ್ತೆ, ಗಣಿಗಾರಿಕೆ, ಪ್ರವಾಸೋದ್ಯಮ ಹೀಗೆ ಯಾವುದನ್ನೇ ತೆಗೆದುಕೊಂಡರೂ ಇಡೀ ರಾಜ್ಯಕ್ಕೆ ಒಂದೇ ಮಾನದಂಡ ಎಂಬಂತೆ ನಿರ್ಧರಿಸಲಾಗುತ್ತದೆ. ಮಲೆನಾಡು ಭಾಗಕ್ಕೆಂದೇ ಭಿನ್ನವಾಗಿ ಯೋಚಿಸಿ ಕಾರ್ಯಕ್ರಮಗಳನ್ನು ರೂಪಿಸುವ ಆಸಕ್ತಿ ಅಧಿಕಾರಸ್ತರಿಗೆ ಇಲ್ಲ. ಆರ್ಥಿಕ ಅಭಿವೃದ್ಧಿ ಕೇಂದ್ರಿತವಾದ ಯಾವುದೇ ಯೋಜನೆಗಳು ಸುಸ್ಥಿರಗೊಳ್ಳಬೇಕಿದ್ದರೆ, ಪಶ್ಚಿಮಘಟ್ಟದ ಪರಿಸರ, ಮಳೆ, ಇಳಿಜಾರು ಮತ್ತು ಅರಣ್ಯ ಹಾಗೂ ಪರಿಸರಕ್ಕೆ ಹೊಂದಿಕೊಳ್ಳುವಂತಿರಬೇಕು. ಅದಕ್ಕಾಗಿ ಭೂಬಳಕೆಯ ಬಗ್ಗೆ ಸರ್ಕಾರ ನೀತಿಯೊಂದನ್ನು (ಲ್ಯಾಂಡ್‌ ಯೂಸ್‌ ಪಾಲಿಸಿ) ರೂಪಿಸಿ ಕಾನೂನು ಬದ್ಧಗೊಳಿಸಬೇಕು.

ಪಶ್ಚಿಮಘಟ್ಟದ ನಿರ್ವಹಣೆಯು ಮೂರು ಇಲಾಖೆಗಳು ಅಥವಾ ಸರ್ಕಾರಿ ವ್ಯವಸ್ಥೆಯಲ್ಲಿ ಹಂಚಿ ಹೋಗಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಅಡಿ ಅರಣ್ಯ ಭೂಮಿ ನಿರ್ವಹಣೆ ಆಗುತ್ತಿದೆ. ಪರಿಸರದ ಸೂಕ್ಷ್ಮತೆಗೆ ಭಂಗ ಬಾರದಂತೆ ಹೇಗೆ ನಿರ್ವಹಿಸಬೇಕು ಎಂಬ ನಿಯಮ ಮತ್ತು ಮಾರ್ಗಸೂಚಿಗಳೇನೊ ಈ ಇಲಾಖೆಗಳ ಕಾಯ್ದೆಗಳಲ್ಲಿ ಉಲ್ಲೇಖಿತವಾಗಿವೆ. ಆದರೆ, ಅವುಗಳನ್ನು ಚಾಚೂತಪ್ಪದೇ ಅನುಷ್ಠಾನ ಮಾಡುವಲ್ಲಿ ಮಾತ್ರ ವಿಫಲವಾಗಿವೆ.

ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ, ಬೆಂಗಳೂರಿನಂತಹ ನಗರಗಳಲ್ಲಿ ರಾಜಕಾಲುವೆ ಒತ್ತುವರಿ ಆದ ಪರಿಣಾಮ ನಗರದಲ್ಲಿ ಪ್ರವಾಹ ಬರುತ್ತದೆಯಲ್ಲ ಅದೇ ರೀತಿ ಮಲೆನಾಡು ಪ್ರದೇಶದಲ್ಲಿ ನದಿ, ತೊರೆ, ಹಳ್ಳಗಳು ಸಹಜವಾಗಿ ಹರಿಯುವ ಮಾರ್ಗಗಳು ಅತಿಕ್ರಮಣವಾಗಿವೆ ಅಥವಾ ನೀರು ಹರಿಯುವಿಕೆಗೆ ಅಡ್ಡಿ ಉಂಟಾಗಿದೆ.ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಪ್ರವಾಹಕ್ಕೆ ಇದೂ ಒಂದು ಮುಖ್ಯ ಕಾರಣ. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಹೊಳೆ, ತೊರೆಗಳಿಗೆ ಇದ್ದ ಅಡ್ಡಿಗಳನ್ನು ತೆಗೆದು ನೀರು ಹರಿಯುವ ದಾರಿ ಸುಗಮಗೊಳಿಸುವ ಪರಿಪಾಟ ಇತ್ತು. ಈಗ ಆ ಪದ್ಧತಿ ಇಲ್ಲ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಜೆಸಿಬಿ ಯಂತ್ರಗಳು ಮಾಡುತ್ತಿರುವ ಹಾನಿ ಅಷ್ಟಿಷ್ಟಲ್ಲ. ಒಂದು ಬುಟ್ಟಿ ಮಣ್ಣು ತೆಗೆಯಬೇಕಾದ ಕಡೆ ಜೆಸಿಬಿ ಯಂತ್ರ ಒಂದು ಲಾರಿಯಷ್ಟು ಮಣ್ಣು ತೆಗೆದು ಹಾಕುತ್ತದೆ. ಸೂಕ್ಷ್ಮ ಪ್ರದೇಶಗಳಲ್ಲಿ ಈ ಯಂತ್ರವನ್ನು ಹೇಗೆ ಬಳಸಬೇಕು ಎಂಬ ಪಾಠ ಹೇಳಿಕೊಡುವವರೂ ಇಲ್ಲ. ನಿಯಮಗಳ ಪ್ರಕಾರ, ಘಟ್ಟ ಪ್ರದೇಶಗಳಲ್ಲಿ ರಸ್ತೆ ಬದಿ 45 ಡಿಗ್ರಿ ಕೋನದಲ್ಲಿ ಗುಡ್ಡ ಕತ್ತರಿಸಬೇಕು. ಹೀಗೆ ಕತ್ತರಿಸಿ ಆದ ನಂತರ ಹುಲ್ಲಿನ ಬೀಜ ಹಾಕಿ ಹುಲ್ಲು ಬೆಳೆಯುವ ವ್ಯವಸ್ಥೆ ಮಾಡಿ ಸುಸ್ಥಿರಗೊಳಿಸಬೇಕು ಎಂಬ ನಿಯಮ ಇದೆ. ಆದರೆ, ಅದನ್ನು ಉಲ್ಲಂಘಿಸುವವರೇ ಹೆಚ್ಚು.

ಮಲೆನಾಡು ಭಾಗದಲ್ಲಿ ‘ಅಕ್ರಮ– ಸಕ್ರಮ’ ಒಂದು ರಾಜಕೀಯ ಕಾರ್ಯಸೂಚಿ ಮತ್ತು ಚುನಾವಣೆಗಳಲ್ಲಿ ಮತ ಪಡೆಯುವ ದಾಳವಾಗಿದೆ. ಬಡ ರೈತರು ಒಂದೆರಡು ಎಕರೆ ಅತಿಕ್ರಮಣ ಮಾಡಿದ್ದರೆ, ಅದನ್ನು ಆತನಿಗೆ ಸಕ್ರಮ ಮಾಡಿಕೊಡುವುದು ನ್ಯಾಯೋಚಿತ. ಆದರೆ, ಅಕ್ರಮ– ಸಕ್ರಮ ರಿಯಲ್‌ ಎಸ್ಟೇಟ್‌ ಆಗಿ ಪರಿವರ್ತನೆಗೊಂಡಿದೆ. ಈ ರೀತಿ ಭೂಮಿ ಪಡೆದವರಲ್ಲಿ ಹಲವರು ಕೆಲವು ವರ್ಷಗಳ ಕಾಲ ಶುಂಠಿ ಬೆಳೆದು ಬಳಿಕ ಭೂಮಿಯನ್ನು ಅಕ್ರಮವಾಗಿ ವಿವಿಧ ಉದ್ದೇಶಗಳಿಗೆ ಮಾರಾಟ ಮಾಡುತ್ತಿರುವ ದೂರುಗಳೂ ಇವೆ. ಇದರಿಂದ ಮಲೆನಾಡಿನ ಚಹರೆಯೇ ಕ್ಷಿಪ್ರವಾಗಿ ಬದಲಾಗುತ್ತಿದೆ. ಅರಣ್ಯ ಇರುವುದೇಅತಿಕ್ರಮಣಕ್ಕಾಗಿ ಎಂಬ ಭಾವನೆ ದಟ್ಟವಾಗಿ ಬೆಳೆದಿದೆ ಎಂಬ ಆರೋಪಗಳೂ ಇವೆ.

ಈ ಪ್ರದೇಶವನ್ನು ಬಹುವಾಗಿ ಕಾಡುತ್ತಿರುವ ವನ್ಯಜೀವಿ– ಮಾನವ ಸಂಘರ್ಷವನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು. ಅರಣ್ಯ ಪ್ರದೇಶವೂ ಕಡಿಮೆ ಆಗುತ್ತಿರುವುದರಿಂದ ಸಂಘರ್ಷ ತಪ್ಪಿಸುವುದು ಸುಲಭವೂ ಅಲ್ಲ. ಆದರೆ, ವನ್ಯಜೀವಿಗಳಿಂದ ಬೆಳೆ ನಷ್ಟ ಹೊಂದುವ ರೈತರು ಮತ್ತು ಬುಡಕಟ್ಟು ಜನರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಅವರ ವಿಶ್ವಾಸಗಳಿಸುವ ಪ್ರಯತ್ನ ನಡೆಸಿದರೆ, ವನ್ಯಜೀವಿಗಳ ಉಳಿವಿಗೆ ಸಹಾಯಕವಾಗುತ್ತದೆ.

ಗೋಮಾಳ, ಸಾಮಾನ್ಯ ಭೂ ನಿರ್ವಹಣೆ ಮತ್ತು ಅತಿಕ್ರಮಣ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ಸೇರಿದ್ದು. ಆದರೆ ಅವರು, ಇತರ ಕಾರ್ಯಗಳ ಬಾಹುಳ್ಯದಿಂದಾಗಿ ಅತ್ತ ಗಮನಹರಿಸುವುದೇ ಕಡಿಮೆ. ಇದಕ್ಕಾಗಿ ಅರಣ್ಯ, ಕಂದಾಯ ಮತ್ತು ಇತರ ಇಲಾಖೆಗಳು ಪ್ರತ್ಯೇಕ ನಿರ್ವಹಣಾ ಕೇಂದ್ರಗಳನ್ನು ರಚಿಸಿ, ಅವುಗಳ ಮೂಲಕವೇ ನಿರ್ವಹಣೆ ಮಾಡುವಂತಾಗಬೇಕು. ಇವುಗಳ ಕಾರ್ಯವನ್ನು ಕಾಲ– ಕಾಲಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲೇ ಪರಾಮರ್ಶೆ ನಡೆಸಬೇಕು. ಅದರಲ್ಲೂ ವಿಶೇಷವಾಗಿ ಪಶ್ಚಿಮಘಟ್ಟದ ಪ್ರತಿ ಆರು ತಿಂಗಳ ಭೂಬಳಕೆಯ ಬಗ್ಗೆ ವರದಿ ಒಪ್ಪಿಸಬೇಕು. ಇವೆಲ್ಲ ಕ್ರಮಗಳಿಂದಾಗಿ ಈಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದರೆ ಪಶ್ಚಿಮ ಘಟ್ಟ ಉಳಿಸಲು ಸಾಧ್ಯ.

ಸಲ್ಲಿಕೆಯಾದ ಪ್ರಮುಖ ವರದಿಗಳು

lಪಶ್ಚಿಮಘಟ್ಟ ಕಾರ್ಯಪಡೆ ವರದಿ

lಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ರಾಜ್ಯ ಯೋಜನಾ ಅಭಿವೃದ್ಧಿ ವರದಿ

lಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಆಡಿಟ್‌ ಮತ್ತು ಹಸಿರು ಬಜೆಟ್‌ ವರದಿ

lಪಶ್ಚಿಮ ಘಟ್ಟದಲ್ಲಿ ಭೂಕುಸಿತಗಳು ಕುರಿತ ಕರ್ನಾಟಕ ಸರ್ಕಾರದ ಉನ್ನತ ಮಟ್ಟದ ತಜ್ಞರ ಸಮಿತಿ ವರದಿ

‘ಜನರಿಗೆ ಸಂಕಷ್ಟ’

ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಪಶ್ಚಿಮಘಟ್ಟದಲ್ಲಿರುವ ಜನರು ಸಹಜವಾದ ಕೃಷಿ ಚಟುವಟಿಕೆಯನ್ನು ರೂಢಿಸಿಕೊಂಡಿರುವವರು. ಜೀವ ವೈವಿಧ್ಯ ಕಾಯ್ದೆ, ಅರಣ್ಯ ಸಂರಕ್ಷಣೆ ಕಾಯ್ದೆಗಳಂತಹ ಕಾನೂನುಗಳ ಮೂಲಕ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಈಗಾಗಲೇ ಆದ್ಯತೆ ನೀಡಲಾಗಿದೆ. ಪಶ್ಚಿಮ ಘಟ್ಟವನ್ನುಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದರಿಂದ, ಆ ಪ್ರದೇಶದಲ್ಲಿನ ಬಹುತೇಕ ಅಭಿವೃದ್ಧಿ ಚಟುವಟಿಕೆಗಳಿಗೆ ತಡೆ ಬೀಳುತ್ತದೆ. ಇದರಿಂದ ಅಲ್ಲಿನ ಜನರ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಅಂತಿಮವಾಗಿ ಜನರು ಸಂಕಷ್ಟಕ್ಕೆ ತುತ್ತಾಗುತ್ತಾರೆ.

ಚಿದಾನಂದ ಕಟಗಿ

‘ವಿರೋಧಿಗಳಿಗೆ ಸಂರಕ್ಷಣೆಯ ಮಹತ್ವ ತಿಳಿದಿಲ್ಲ’

ಜಗತ್ತಿನ ಅಪರೂಪದ ಜೀವ‌-ವೈವಿಧ್ಯಗಳನ್ನು ಹೊಂದಿರುವ ತಾಣಗಳಲ್ಲಿ ಪಶ್ಚಿಮಘಟ್ಟವು ಪ್ರಮುಖವಾದುದು. ಅದರ ಸಂರಕ್ಷಣೆಗೆ ಕೇಂದ್ರ ಸರ್ಕಾರವು ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ ಏನಿದೆ ಎಂಬುದನ್ನೂ ತಿಳಿದುಕೊಳ್ಳದೆಯೇ, ಹಲವರು ಆ ಅಧಿಸೂಚನೆಯನ್ನು ವಿರೋಧಿಸುತ್ತಿದ್ದಾರೆ. ಅಂತಹವರಿಗೆ ಪಶ್ಚಿಮ ಘಟ್ಟ ಸಂರಕ್ಷಣೆಯ ಮಹತ್ವ ತಿಳಿದಿಲ್ಲ. ವಿರೋಧಿಗಳಲ್ಲಿ,ಯಾವುದೋ ಲಾಬಿಗಳ ಸಮೂಹಸನ್ನಿಗೆ ಒಳಗಾಗಿ ಅಭಿವೃದ್ಧಿಯ ಕನಸುಕಂಡವರೇ ಹೆಚ್ಚು. ಸರ್ಕಾರವು ಸಹ ಲಾಬಿಗಳ ಸುಳಿಯಲ್ಲಿ ಸಿಲುಕಿರುವುದು ದುರಂತ. ಪರಿಸರ ಸಂರಕ್ಷಣೆ ಎಂಬುದು ಅಭಿವೃದ್ಧಿಯ ವಿರೋಧಿಯಲ್ಲ. ಸುಸ್ಥಿರ ಅಭಿವೃದ್ಧಿಯು ಪರಿಸರ ಸಂರಕ್ಷಣೆಯನ್ನೂ ಒಳಗೊಂಡಿರುತ್ತದೆ. ವಿರೋಧಿಗಳು ಆ ದೃಷ್ಟಿಕೋನದಲ್ಲೂ ನೋಡಬೇಕಿದೆ.

ಮಹೇಶ. ಪಿ,ಪುಟ್ಟೇಗೌಡನಹುಂಡಿ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT