ಬುಧವಾರ, ಆಗಸ್ಟ್ 10, 2022
25 °C

ಆಳ-ಅಗಲ: ಐಎಎಸ್‌ ಅಧಿಕಾರಿಗಳ ನಿಯೋಜನೆ; ಕೇಂದ್ರ–ರಾಜ್ಯ ಜಟಾಪಟಿ

ಜಯಸಿಂಹ ಆರ್., ಅಮೃತ್‌ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕಾರ ಹಂಚಿಕೆ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಏರ್ಪಟ್ಟಿದೆ. ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿಗಳನ್ನು ನಿಯೋಜನೆ ಮಾಡುವ ಬಗ್ಗೆ ಸರ್ಕಾರಗಳು ವಾದ–ಪ್ರತಿವಾದಕ್ಕೆ ಇಳಿದಿವೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ರಾಜ್ಯಗಳ ಅನುಮತಿ ಪಡೆದು ವರ್ಗಾವಣೆ ಮಾಡುವ ಪರಿಪಾಟವನ್ನು ಕೇಂದ್ರ ಸರ್ಕಾರ ಈವರೆಗೆ ಪಾಲಿಸಿಕೊಂಡು ಬರುತ್ತಿತ್ತು. ಆದರೆ, ರಾಜ್ಯಗಳ ಅನುಮತಿ ಪಡೆಯದೇ, ಅಧಿಕಾರಿಗಳನ್ನು ನಿಯೋಜನೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲು ಮುಂದಾಗಿದೆ. ಕೇಂದ್ರ ಸರ್ಕಾರದ ಅಧಿಕಾರ ‘ಅತಿಕ್ರಮಣ’ಕ್ಕೆ ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಐಎಎಸ್‌ (ಕೇಡರ್) ನಿಯಮಗಳು–1954ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದೇ 12ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಇದನ್ನು ವಿವರಿಸಲಾಗಿದೆ. 

ಹೇಗಿದೆ ಈಗಿನ ವ್ಯವಸ್ಥೆ?

ಪ್ರತಿ ವರ್ಷ, ರಾಜ್ಯ ಕೇಡರ್‌ನಿಂದ ಕೇಂದ್ರ ಸರ್ಕಾರಕ್ಕೆ ನಿಯೋಜನೆ ಮೇರೆಗೆ ಹೋಗಲು ಸಿದ್ಧರಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪಟ್ಟಿಯಿಂದ ಕೆಲವರನ್ನು ಕೇಂದ್ರ ಆಯ್ಕೆ ಮಾಡುತ್ತದೆ. ಮಂಜೂರಾದ ಹುದ್ದೆಗಳಲ್ಲಿ ಇಂತಿಷ್ಟನ್ನು ರಾಜ್ಯಗಳು ಕಳುಹಿಸಬೇಕು ಎಂಬುದನ್ನು ‘ಕೇಂದ್ರೀಯ ನಿಯೋಜನೆ ಮೀಸಲು’ (ಸಿಡಿಆರ್‌) ನಿಯಮ ವಿವರಿಸುತ್ತದೆ. ಒಮ್ಮೆ ಕೇಂದ್ರ ಸೇವೆಗೆ ನಿಯೋಜನೆಗೊಂಡ ನಂತರ, ಈ ಅಧಿಕಾರಿಗಳು ಅವರು ಮೂಲತಃ ವರದಿ ಮಾಡಿಕೊಂಡಿದ್ದ ರಾಜ್ಯ ಸರ್ಕಾರಗಳಿಗೆ ಬದಲಾಗಿ ಕೇಂದ್ರ ಸಚಿವಾಲಯಗಳು, ಇತರ ರಾಜ್ಯಗಳು ಅಥವಾ ಕೇಂದ್ರದ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳ ಅನುಮೋದನೆಯೊಂದಿಗೆ ಮಾತ್ರ ಅಧಿಕಾರಿಗಳನ್ನು ತನ್ನ ಸೇವೆಗಳಿಗೆ ವರ್ಗಾಯಿಸಿಕೊಳ್ಳಬಹುದು. ಐಎಎಸ್ (ಕೇಡರ್) ನಿಯಮಗಳು–1954ರ ನಿಯಮ 6 (1) ಇದನ್ನು ವಿವರಿಸುತ್ತದೆ. ಒಂದು ವೇಳೆ ನಿಯೋಜನೆ ವಿಚಾರದಲ್ಲಿ ಕೇಂದ್ರ–ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾದರೆ, ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ. ಈ ನಿರ್ಧಾರವನ್ನು ರಾಜ್ಯ ಸರ್ಕಾರಗಳು ಪಾಲಿಸಬೇಕು ಎಂದು ನಿಯಮಗಳು ತಿಳಿಸುತ್ತವೆ.

ಕೇಂದ್ರದಲ್ಲಿ ಐಎಎಸ್ ಅಧಿಕಾರಿಗಳ ಸೇವೆಯನ್ನು ಖಾತರಿಪಡಿಸುವ ನಿಬಂಧನೆಗಳನ್ನು ಉಲ್ಲೇಖಿಸಲಾಗಿದೆ. ಕೇಂದ್ರದ ನಿಯೋಜನೆ ಬೇಡಿಕೆಯು ಒಂದು ಕೇಡರ್‌ಗೆ ಮಂಜೂರಾದ ಡ್ಯೂಟಿ ಪೋಸ್ಟ್‌ಗಳ‌ (ಎಸ್‌ಡಿಪಿ) ಶೇ 40ರಷ್ಟನ್ನು ಮೀರಬಾರದು. ರಾಜ್ಯ ಕೇಡರ್‌ನಿಂದ ಕೇಂದ್ರದ ಪಾಲನ್ನು ಕೇಂದ್ರದ ನಿಯೋಜನೆ ಕೋಟಾ ನಿಗದಿಪಡಿಸುತ್ತದೆ. ಪ್ರತಿ ರಾಜ್ಯ ಸರ್ಕಾರವು ವಿವಿಧ ಹಂತದ ಅರ್ಹ ಅಧಿಕಾರಿಗಳನ್ನು ಕೇಂದ್ರ ಸರ್ಕಾರದ ನಿಯೋಜನೆಗಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಕಾಯ್ದೆಯ ನಿಯಮ 4 (1)ರಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ನಿಯೋಜಿಸಬೇಕಾದ ಅಧಿಕಾರಿಗಳ ಸಂಖ್ಯೆಯನ್ನು ಕೇಂದ್ರವು ಸಂಬಂಧಪಟ್ಟ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧರಿಸುತ್ತದೆ.

ಕೇಂದ್ರದ ಪ್ರಸ್ತಾವ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಜಂಟಿ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳ ಸಂಖ್ಯೆ ಇಳಿಕೆಯಾಗುತ್ತಿರುವ ಕಾರಣ, ಕೇಂದ್ರ ಈ ಬದಲಾವಣೆ ತರುತ್ತಿದೆ. 2011ರಲ್ಲಿ ಈ ದರ್ಜೆಯ 309 ಅಧಿಕಾರಿಗಳಿದ್ದರು. ಇವರ ಸಂಖ್ಯೆ ಈಗ 223ಕ್ಕೆ ಇಳಿಕೆಯಾಗಿದೆ. 2011ರಲ್ಲಿ ಕೇಂದ್ರೀಯ ನಿಯೋಜನೆ ಮೀಸಲು ಶೇ 25ರಷ್ಟಿತ್ತು. ಅದು ಈಗ ಶೇ 18ಕ್ಕೆ ಕುಸಿದಿದೆ. ಈ ಸಂಖ್ಯೆ ಸಾಲುತ್ತಿಲ್ಲ ಎಂದು ಕೇಂದ್ರ ಸರ್ಕಾರ ಪದೇ ಪದೇ ಹೇಳುತ್ತಾ ಬಂದಿದೆ. ಬಹುತೇಕ ರಾಜ್ಯಗಳು ಸಿಡಿಆರ್ ಪಾಲಿಸುತ್ತಿಲ್ಲ ಎಂಬುದು ಕೇಂದ್ರದ ಆರೋಪ. ವಿವಿಧ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಅಧಿಕಾರಿಗಳನ್ನು ಕಳುಹಿಸುತ್ತಿಲ್ಲ ಎಂದು 2021ರ ಡಿಸೆಂಬರ್ 20ರಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿತ್ತು.

ಈ ಸಮಸ್ಯೆಯನ್ನು ಸರಿಪಡಿಸುವ ದಿಸೆಯಲ್ಲಿ ಐಎಎಸ್ (ಕೇಡರ್) ನಿಯಮಗಳು–1954ರ ನಿಯಮ 6 (1)ಕ್ಕೆ ಹೆಚ್ಚುವರಿ ಅಂಶವನ್ನು ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಿರುವ ನಿಯಮದ ಪ್ರಕಾರ, ಭಿನ್ನಾಭಿಪ್ರಾಯ ಉಂಟಾದಾಗ, ಕೇಂದ್ರದ ನಿರ್ಧಾರವನ್ನು ರಾಜ್ಯಗಳು ಪಾಲಿಸಬೇಕು. ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ್ದಾಗಿದ್ದರೂ, ಅದಕ್ಕೆ ಕಾಲಮಿತಿ ಇರಲಿಲ್ಲ. ಪ್ರಸ್ತಾವಿತ ನಿಯಮಗಳಲ್ಲಿ ಕಾಲಮಿತಿಯನ್ನು ಸೇರಿಸಲಾಗಿದೆ. ಕೇಂದ್ರ ತೆಗೆದುಕೊಂಡ ನಿರ್ಧಾರವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ಹೊಸ ನಿಯಮ ವಿವರಿಸುತ್ತದೆ.

‘ರಾಜ್ಯಗಳ ಅಧಿಕಾರ ಕಸಿಯುವ ಹುನ್ನಾರ’

ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ಬದಲಾವಣೆಗೆ ಹಲವು ರಾಜ್ಯ ಸರ್ಕಾರಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ‘ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ’ ಎಂದು ಹಲವು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಈವರೆಗೆ ಆರು ರಾಜ್ಯಗಳು ಈ ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿವೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸಗಡ, ಜಾರ್ಖಂಡ್, ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆಕ್ಷೇಪ ಪತ್ರ ರವಾನಿಸಿವೆ. ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ಸರ್ಕಾರಗಳು ಅಧಿಕಾರದಲ್ಲಿವೆ.

ಕೇಂದ್ರ ಸರ್ಕಾರವು ಈ ಬದಲಾವಣೆ ತರುವ ಮೂಲಕ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ. ರಾಜ್ಯ ಸೇವೆಯಲ್ಲಿರುವ ಐಎಎಸ್‌ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸುವ ಪ್ರಸ್ತಾವವನ್ನು ತಿರಸ್ಕರಿಸುವ ಅಥವಾ ಮುಂದೂಡುವ ಅಧಿಕಾರವನ್ನು ರಾಜ್ಯಗಳ ಕೈಯಿಂದ ಕಸಿದುಕೊಳ್ಳಲಾಗುತ್ತಿದೆ. ಪ್ರಸ್ತಾವ ಕಳುಹಿಸಿದ 12 ದಿನಗಳ ನಂತರ ಆ ಅಧಿಕಾರಿ ಕಡ್ಡಾಯವಾಗಿ ಕೇಂದ್ರ ಸೇವೆಗೆ ಹೋಗಬೇಕಾಗುತ್ತದೆ. ಆ ಅಧಿಕಾರಿ ರಾಜ್ಯದಲ್ಲಿ ವಹಿಸಿಕೊಂಡಿರುವ ಹುದ್ದೆ, ನಡೆಸುತ್ತಿರುವ ಕಾರ್ಯಕ್ರಮ ಮತ್ತು ಅಭಿಯಾನಗಳನ್ನು ಅರ್ಧದಲ್ಲೇ ಕೈಬಿಟ್ಟು ಕೇಂದ್ರ ಸೇವೆಗೆ ಹೋಗಬೇಕಾಗುತ್ತದೆ. ಇದರಿಂದ ರಾಜ್ಯಗಳಲ್ಲಿ ಆಡಳಿತ ಯಂತ್ರ ಕುಸಿದು ಬೀಳುತ್ತದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಇದು ರಾಜ್ಯಗಳನ್ನು ತುಳಿದು, ಕೇಂದ್ರ ಸರ್ಕಾರ ಮಾತ್ರ ಪ್ರಬಲವಾಗುವ ಹುನ್ನಾರ. ಇದು ದಬ್ಬಾಳಿಕೆ ಮಾತ್ರ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

‘ಐಎಎಸ್‌ ಅಧಿಕಾರಿಗಳನ್ನು ತನಗೆ ಬೇಕಾದಂತೆ ಕೇಂದ್ರ ಸೇವೆಗೆ ನಿಯೋಜನೆ ಮಾಡಿಕೊಳ್ಳುವ ಮತ್ತು ವರ್ಗಾವಣೆ ಮಾಡುವ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಈ ಬದಲಾವಣೆಯು ನೀಡುತ್ತದೆ. ಈ ಬದಲಾವಣೆ ಜಾರಿಗೆ ಬಂದರೆ, ಅಧಿಕಾರಿಗಳು ಕೇಂದ್ರದ ನಿಯೋಜನೆ ಮತ್ತು ವರ್ಗಾವಣೆಯ ಭಯದ ತೂಗುಕತ್ತಿಯ ಅಡಿಯಲ್ಲೇ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಅವರು ರಾಜ್ಯ ಸರ್ಕಾರಗಳ ಆಣತಿಯಂತೆ ಕೆಲಸ ಮಾಡಲು ಹಿಂದೇಟು ಹಾಕುವ ಸ್ಥಿತಿ ಬರುತ್ತದೆ. ಇದು ಯಾವ ರೀತಿಯಲ್ಲೂ ಒಳ್ಳೆಯದಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘ದೇಶಕ್ಕ ಸ್ವಾತಂತ್ರ್ಯ ಬಂದಾಗಿನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದೇ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಷ್ಟು ವರ್ಷಗಳಲ್ಲಿ ಆಗದೇ ಇರುವ ಸಮಸ್ಯೆ ಈಗ ಹೇಗೆ ಆಗುತ್ತಿದೆ? ಇದು ಐಎಎಸ್‌ ಅಧಿಕಾರಿಗಳನ್ನು ಹಿಡಿತದಲ್ಲಿ ಇರಿಸಿಕೊಳ್ಳುವ ಮತ್ತು ಆ ಮೂಲಕ ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಕೇಂದ್ರವು ಹಸ್ತಕ್ಷೇಪ ಮಾಡುವ ಹುನ್ನಾರ’ ಎಂದು ಟಿಎಂಸಿ ಉಪಾಧ್ಯಕ್ಷ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ.

ಬದಲಾವಣೆಗೆ ಕೇಂದ್ರದ ಸಮರ್ಥನೆ

ಈಗ ಇರುವ ನಿಯಮದ ಪ್ರಕಾರ ರಾಜ್ಯ ಕೇಡರ್‌ನ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವ ಕಳುಹಿಸಬೇಕು. ಅದನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅಥವಾ ನಿಯೋಜನೆಯನ್ನು ಮುಂದೂಡುವ ಅಧಿಕಾರ ರಾಜ್ಯ ಸರ್ಕಾರಗಳ ಕೈಯಲ್ಲಿ ಇದೆ. ಆದರೆ ಈಚಿನ ವರ್ಷಗಳಲ್ಲಿ ಬಹುತೇಕ ರಾಜ್ಯಗಳು ಇಂತಹ ಪ್ರಸ್ತಾವಗಳನ್ನು ತಿರಸ್ಕರಿಸುತ್ತಿವೆ. ಹೀಗಾಗಿ ಕೇಂದ್ರ ಸೇವೆಗೆ ಐಎಎಸ್‌ ಆಧಿಕಾರಿಗಳ ಕೊರತೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.

ಕೇಂದ್ರ ಸರ್ಕಾರವು ಐಎಎಸ್‌ ಅಧಿಕಾರಿಗಳ ನೇಮಕಾತಿ ಪ್ರಮಾಣವನ್ನು ಏರಿಸಿದೆ. ಆದರೆ ರಾಜ್ಯ ಸರ್ಕಾರಗಳು ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡುವ ಪ್ರಸ್ತಾವವನ್ನು ತಿರಸ್ಕರಿಸುತ್ತಿವೆ. ಇದರಿಂದ ಕೇಂದ್ರ ಸೇವೆಗೆ ಲಭ್ಯವಿರುವ ಅಧಿಕಾರಿಗಳ ಕೊರತೆ ತೀವ್ರವಾಗಿದೆ. ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೇಳಿದೆ.

ರಾಜ್ಯಗಳ ಸೇವೆಗಳಲ್ಲಿ ಇರುವ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಲು ಕೇಂದ್ರ ಸರ್ಕಾರ ಶೀಘ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತಿದ್ದರೆ, ಅಧಿಕಾರಿಗಳ ಕೊರತೆ ಉಂಟಾಗುವುದಿಲ್ಲ. ಹೀಗಾಗಿ ನಿಯಮಗಳಿಗೆ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐಎಎಸ್‌ ಎಂಬುದು ಅಖಿಲ ಭಾರತ ಸೇವೆಗಳಲ್ಲಿ ಒಂದು. ಅಂತಹ ಅಧಿಕಾರಿಗಳು ಕೇವಲ ಒಂದು ರಾಜ್ಯದ ಸೇವೆಗೆ ಮಾತ್ರ ಸೀಮಿತವಾಗಬಾರದು. ರಾಜ್ಯಗಳು ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡದೇ ಇದ್ದರೆ, ಅಧಿಕಾರಿಗಳು ರಾಜ್ಯ ಸೇವೆಗಳಲ್ಲೇ ಉಳಿಯುತ್ತಾರೆ. ಇದು ಅಧಿಕಾರಿಗಳ ವೃತ್ತಿಬದುಕನ್ನು ಕುಂಠಿತಗೊಳಿಸುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೇಳಿದೆ.

ಆಧಾರ:‍‍‍‍ಪಿಟಿಐ, ಐಎಎಸ್ (ಕೇಡರ್) ನಿಯಮಗಳು–1954

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು