ಸೋಮವಾರ, ಜೂನ್ 21, 2021
30 °C

Explainer | ಯುಗಾದಿ: ಹೊಸ ಸಂಕಲ್ಪಕ್ಕೆ ನಾಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುಗಾದಿ ಎಂದರೆ ಹೊಸ ವರ್ಷದ ಮೊದಲ ಹಬ್ಬದ ಸಂಭ್ರಮ. ಆದರೆ, ಈ ಸಲ ಕೊರೊನಾ ವೈರಸ್‌ನ ಹಾವಳಿಯಿಂದಾಗಿ ಆ ಹಬ್ಬದ ಸಂಭ್ರಮವೇ ಮರೆಯಾಗಿದೆ. ಪ್ರತಿವರ್ಷವೂ ಹೊಸತನ್ನು ತರುವ ಈ ಯುಗಾದಿ ಆಚರಣೆಯ ಹಳತು ಹೇಗಿತ್ತು ಎಂದು ಅವಲೋಕಿಸುತ್ತಾ ಹೋದರೆ ಸಾಂಕ್ರಾಮಿಕ ರೋಗಗಳ ಕುರಿತ ಜಾಗೃತಿಯೂ ಕೆಲವೆಡೆ ಎದ್ದು ಕಾಣುತ್ತದೆ. ಕೃಷಿ ಭವಿಷ್ಯದ ಮುನ್ಸೂಚನೆಯನ್ನು ರೈತರು ಇದೇ ಸಂದರ್ಭದಲ್ಲಿ ಪಡೆಯುವ ರೀತಿ ಕೂಡ ಕುತೂಹಲ ಮೂಡಿಸುತ್ತದೆ. ಹಾಗೆಯೇ ದೇಶ–ವಿದೇಶಗಳಲ್ಲಿ ಹೊಸ ವರ್ಷಗಳ ಆಚರಣೆ ಹೇಗಿರುತ್ತದೆ ಎಂಬುದರ ಝಲಕ್‌ ಸಹ ಇಲ್ಲಿದೆ...

ಸೋಂಕು ನಿವಾರಣೆಗೆ ಮುಸುರೆ ಹಬ್ಬ

ಕೊರೊನಾ ವೈರಸ್‌ನಂತಹ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರಲ್ಲವೇ? ದಕ್ಷಿಣ ಕರ್ನಾಟಕದ ಕೆಲವು ಊರುಗಳಲ್ಲಿ ಆಚರಿಸುವ ಯುಗಾದಿಯಲ್ಲೂ ಈ ಸೋಂಕು ನಿವಾರಕ ಸಂಪ್ರದಾಯವಿದೆ ಎಂದರೆ ನಂಬುತ್ತೀರಾ?

ಹೌದು, ದಕ್ಷಿಣ ಕರ್ನಾಟಕ ಈ ಹಳ್ಳಿಗಳಲ್ಲಿ ಯುಗಾದಿಯನ್ನು ಮೂರು ದಿನ ಆಚರಿಸುತ್ತಾರೆ. ಮೊದಲ ದಿನ ಮುಸುರೆ ಹಬ್ಬ. ಮನೆಯ ಪಾತ್ರೆ ಪಗಡ, ಗೋಡೆ, ಮಾಡು, ಸಂದುಗೊಂದುಗಳನ್ನೆಲ್ಲಾ ಸಾರಿಸಿ, ಗುಡಿಸಿ ತೊಳೆದು ಸ್ವಚ್ಛಗೊಳಿಸುವ ಕಾರ್ಯ. ಈ ಸಂದರ್ಭದಲ್ಲೇ ಹಳೆಯ ವಸ್ತುಗಳನ್ನೆಲ್ಲ ಸುಟ್ಟು ಹಾಕುವುದು ರೂಢಿ. ಕಟ್ಟಿಗೆಯಿಂದ ಮಾಡಿದ ಕೊಟ್ಟಿಗೆಗಳನ್ನೂ ಸಂಪೂರ್ಣವಾಗಿ ತೆಗೆದು ಹೊಸದನ್ನು ಕಟ್ಟಲಾಗುತ್ತದೆ. ಎರಡನೇ ದಿನ ಸಿಹಿ ಅಡುಗೆ. ಹೋಳಿಗೆ ವಿಶೇಷ ತಿನಿಸು. ಮೂರನೇ ದಿನ ಹೊಸತಡುಕು. ಮಾಂಸದೂಟ, ಸಾಂಕೇತಿಕವಾಗಿ ಕೆಲವು ಪಂಗಡಗಳಲ್ಲಿ ಬೇಟೆಗೆ ಹೋಗುವುದೂ ಉಂಟು. ಚಿತ್ರದುರ್ಗ, ತುಮಕೂರು ಭಾಗದ ಬೇಡ ಹಾಗೂ ಗೊಲ್ಲ ಸಮುದಾಯದಲ್ಲಿ ಈ ಪದ್ಧತಿ ಈಗಲೂ ರೂಢಿಯಲ್ಲಿದೆ.

ಭವಿಷ್ಯ ಹೇಳುವ ಜಾಗಾರ ಮೊಳಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಕನಕಪುರ ತಾಲ್ಲೂಕುಗಳ ಕೆಲವು ಹಳ್ಳಿಗಳಲ್ಲಿ ‘ಜಾಗಾರ’ದಲ್ಲಿ ಧಾನ್ಯಗಳನ್ನು ಹಾಕಿ, ಮೊಳಕೆ ಪರಿಶೀಲಿಸುವ ವಿಶಿಷ್ಟ ಪರಂಪರೆ ಇದೆ. ಬಿದಿರಿನ ಬುಟ್ಟಿ ಅಥವಾ ಮಣ್ಣು ಇಲ್ಲವೆ ಹಸಿ ಸಗಣಿಯಲ್ಲಿ ಮಾಡಿದ ಬಟ್ಟಲಿನಲ್ಲಿ (ಅದೇ ಜಾಗಾರ) ಕೆಮ್ಮಣ್ಣನ್ನು ಹಾಕಿ, ಮುಂಗಾರಿನಲ್ಲಿ ಬಿತ್ತಲು ಉದ್ದೇಶಿಸಿರುವ 5, 7 ಅಥವಾ 9 ಜಾತಿಯ ಬೀಜಗಳನ್ನು ಅದರಲ್ಲಿ ಹಾಕಲಾಗುತ್ತದೆ. ಸಾಮಾನ್ಯವಾಗಿ ರಾಗಿ, ಭತ್ತ, ಅವರೆ, ತೊಗರಿ, ಜೋಳ, ನವಣೆ, ಹರಳು ಹಾಗೂ ಹುರುಳಿಯನ್ನು ಹಾಕುವುದು ರೂಢಿ. 

ಬೀಜ ಇರುವ ಜಾಗಾರಕ್ಕೆ ಒಂಬತ್ತನೇ ದಿನದವರೆಗೆ ನೀರು ಹಾಕಿ, ಕೊನೆಯ ದಿನ ಮೊಳಕೆಯನ್ನು ಪರೀಕ್ಷೆ ಮಾಡಲಾಗುತ್ತದೆ. ಯಾವ ಬೆಳೆ ಎಷ್ಟೆಷ್ಟು ಪ್ರಮಾಣದಲ್ಲಿ ಮೊಳಕೆ ಬಂದಿದೆಯೋ ಅದರ ಆಧಾರದ ಮೇಲೆ ಮುಂದಿನ ಹಂಗಾಮಿನಲ್ಲಿ ಯಾವ ಬೆಳೆ ಎಷ್ಟೆಷ್ಟು ಬರುತ್ತದೆ ಎಂಬುದನ್ನು ರೈತರು ಲೆಕ್ಕ ಹಾಕುತ್ತಾರೆ ಎಂದು ವಿವರಿಸುತ್ತಾರೆ ಯುಗಾದಿ ಆಚರಣೆಗಳ ಕುರಿತು ಅಧ್ಯಯನ ನಡೆಸಿರುವ ಮಲ್ಲಿಕಾರ್ಜುನ ಹೊಸಪಾಳ್ಯ.

ಯಾವುದು ಹೆಚ್ಚು ಹುಲುಸಾಗಿ ಮೊಳಕೆ ಬಂದಿರುತ್ತದೆಯೋ ಅದನ್ನೇ ಜಾಸ್ತಿ ಪ್ರಮಾಣದಲ್ಲಿ (ಒಂದ್ ಕೈ ಮುಂದೆ ಮಾಡಿ ಬಿತ್ಬೇಕು) ಬಿತ್ತಬೇಕೆಂದು ತೀರ್ಮಾಸುವುದು ರೂಢಿ. ಹೀಗೆ ನಿರ್ಧಾರ ಮಾಡಿದ ಬಳಿಕ ಊರವರೆಲ್ಲರೂ ತೆರಳಿ ಎಲ್ಲಾ ಮೊಳಕೆ ಬಟ್ಟಲುಗಳನ್ನು ಗಂಗಮ್ಮನಿಗೆ (ನೀರಿನ ಸೆಲೆ) ಬಿಡುವುದು ಸಂಪ್ರದಾಯ.

ಯುಗಾದಿ ಮಾರ್ಚ್‌-ಏಪ್ರಿಲ್‍ನಲ್ಲಿ ಬರುತ್ತದೆ. ಡಿಸೆಂಬರ್, ಜನವರಿಯಲ್ಲಿ ಕುಯಿಲು, ಒಕ್ಕಣೆಮಾಡಿ ಸಂಗ್ರಹ ಮಾಡಿದಂತಹ ಬೀಜಗಳನ್ನು ಜೂನ್-ಜುಲೈ ತಿಂಗಳಲ್ಲಿ ತೆಗೆದು ಬಿತ್ತನೆ ಮಾಡಬೇಕಿರುತ್ತದೆ. ಈ ಎರಡೂ ಅವಧಿಗಳ ನಡುವೆ ಜಾಗಾರ ಪೂಜೆ ನೆಪದಲ್ಲಿ ಬೀಜವನ್ನು ಒಮ್ಮೆ ಬಿಚ್ಚಿ ನೋಡಿದಂತಾಗುತ್ತದೆ. ಹುಳ ಬಿದ್ದಿದ್ದರೆ ಗೊತ್ತಾಗುತ್ತದೆ. ಪೂಜೆಯಲ್ಲಿ ಚೆನ್ನಾಗಿ ಮೊಳಕೆ ಬರದಿದ್ದಾಗ ಬೀಜ ಹಾಳಾಗಿದೆ ಎಂಬುದೂ ತಿಳಿಯುತ್ತದೆ ಎಂದು ಹೊಸಪಾಳ್ಯ ಹೇಳುತ್ತಾರೆ. 

‘ಮೂರೆಲೆ’ ಆಟದ ಗಮ್ಮತ್ತು!

ಯುಗಾದಿ ಬಂತೆಂದರೆ ಮಂಡ್ಯ ಜಿಲ್ಲೆಯಾದ್ಯಂತ ಯುವಜನರ ಬಾಯಲ್ಲಿ ‘ಮೂರೆಲೆ ಆಟ’ ಆಡುವುದರದ್ದೇ ಮಾತು. ಈ ಯುಗಾದಿಯ ತಗಾದೆಯಲ್ಲಿ ಹಳ್ಳಿಮನೆಯ ಜಗುಲಿಯ ಮೇಲೆ, ರಂಗದ ಬೀದಿಯ ನಡುವೆ, ಅರಳಿ ಕಟ್ಟೆಗಳ ಮೇಲೆ, ಕೆರೆ ಏರಿಯ ಕೆಳಗೆ, ಹೊಂಗೆ ಮರದ ನೆರಳಲ್ಲಿ, ತಂಪಾದ ಗದ್ದೆ ಬಯಲಲ್ಲಿ, ನಾಲೆಗಳ ತೂಬಿನ ಮೇಲೆ ಕೂರುವ ಯುವಜನರು ಇಸ್ಪೀಟ್‌ ಆಟಕ್ಕೆ ತೆರೆದುಕೊಳ್ಳುತ್ತಾರೆ.

ಹೋಳಿಗೆ ಉಂಡು, ಬೇವು–ಬೆಲ್ಲ ಮೆದ್ದು ಆಟಕ್ಕಿಳಿಯುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಉರಿವ ಬಿಸಿಲಿನಲ್ಲಿ ಊರಿನ ಬೀದಿಗಳು ಜೂಜಾಟದ ಅಡ್ಡೆಗಳಾಗಿ ಮಾರ್ಪಾಡಾಗುತ್ತವೆ. ಯುಗಾದಿ ಅಂಗವಾಗಿ ಮೂರು ದಿನದ ಮಟ್ಟಿಗೆ ಯಾವುದೇ ತಗಾದೆ ಇರುವುದಿಲ್ಲ. ಊರಿನ ಹಿರಿಯರ ಮಾನ್ಯತೆಯೂ ಇರುತ್ತದೆ. ಪೊಲೀಸರು ಮೂಕ ಪ್ರೇಕ್ಷಕರಾಗುತ್ತಾರೆ.

ಹಬ್ಬದ ಮಾರನೇ ದಿನ ಯುಗಾದಿ ತೊಡಕು (ವರ್ಷ ತೊಡಕು) ಇರುವ ಕಾರಣ ಆಡು, ಕುರಿ, ಕೋಳಿಗಳ ಬಲಿ ಕೊಡುವುದು ನಡೆಯುತ್ತದೆ. ಬೀದಿಗಳಲ್ಲಿ ಗುಡ್ಡೆಬಾಡು ರಾರಾಜಿಸುತ್ತದೆ. ಬಾಡೂಟ ಸವಿದು ಮತ್ತೆ ಜೂಜಿಗೆ ಮರಳುತ್ತಾರೆ. ಅಂದು ಆಟದ ಜೊತೆಗೆ ಮದ್ಯವೂ ಜೊತೆಯಾಗುತ್ತದೆ.

ಇದು ಮಹಿಳೆಯರಿಗೂ ಅಚ್ಚುಮೆಚ್ಚಿನ ಆಟ. ನೆಪಕ್ಕಷ್ಟೇ ಅಲ್ಪ ಹಣ ಕಟ್ಟಿಕೊಂಡು ಗಂಟೆಗಟ್ಟಲೆ ಆಡುವ ‘ಜಾಕ್‌ ಪಾಟ್‌’ ಆಟ ಕೂಡ ಪ್ರಸಿದ್ಧಿ ಪಡೆದಿದೆ.

ಇಸ್ಪೀಟ್‌ ಇಷ್ಟಪಡದವರು ‘ಪಚ್ಚಿ’ ಆಟಕ್ಕೆ ಮೊರೆ ಹೋಗುತ್ತಾರೆ. ಹುಣಸೆ ಬೀಜವನ್ನು ಎರಡು ಭಾಗ (ಬೇಳೆ) ಮಾಡಿ ಪಚ್ಚಿ ಮಾಡಿಕೊಂಡು ಆಡುತ್ತಾರೆ. ಇನ್ನು ಕೆಲವರು ಅಳಗುಳಿ ಮನೆ ಆಟವನ್ನೂ ಆಡುತ್ತಾರೆ. ಕೆಲವು ಮನೆಗಳಲ್ಲಿ ಹಳೆ ಕಾಲದ ಅಳಗುಳಿ ಮಣೆಗಳು ಇರುವುದು ವಿಶೇಷ!

ಗುಡಿಪಾಡ್ವದಿಂದ ಚಿಟೀಚಂಡ್‌ವರೆಗೆ...

ದೇಶದ ಕೆಲವು ರಾಜ್ಯಗಳಲ್ಲಿ ವಿಶಿಷ್ಟ ರೀತಿಯಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಬಹುತೇಕ ಎಲ್ಲಾ ಆಚರಣೆಗಳೂ ಕೃಷಿ ಚಟುವಟಿಕೆಯ ಹಿನ್ನೆಲೆಯನ್ನೇ ಹೊಂದಿರುತ್ತವೆ.

* ಮಹಾರಾಷ್ಟ್ರ

ಚೈತ್ರಮಾಸದ ಮೊದಲ ದಿನ ಮಹಾರಾಷ್ಟ್ರದಲ್ಲಿ ಹೊಸ ವರ್ಷಾಚರಣೆ ‘ಗುಡಿಪಾಡ್ವ’ ನಡೆಯುತ್ತದೆ. ಉದ್ದನೆಯ ಬಿದಿರಿನ ಕೋಲಿನ ತುದಿಗೆ ಹಳದಿ ಬಣ್ಣದ ಬಟ್ಟೆಯನ್ನು ತೂಗುಹಾಕಿ, ಅದರ ಮೇಲೆ ತಾಮ್ರದ ಚೆಂಬನ್ನು ತಲೆ ಕೆಳಗಾಗಿಟ್ಟು, ಅದಕ್ಕೆ ಹೂಮಾಲೆ ತೊಡಿಸಿದರೆ ‘ಗುಡಿ’ ಸಿದ್ಧವಾಗುತ್ತದೆ. ಹೊಸ ವರ್ಷದಂದು ಅದನ್ನು ಮನೆಯ ಮುಖ್ಯದ್ವಾರದ ಬಲಬದಿಯಲ್ಲಿ ಇಡಲಾಗುತ್ತದೆ.

* ಪಂಜಾಬ್‌ 

ಪ್ರತಿವರ್ಷ ಏಪ್ರಿಲ್‌ 13ರಂದು (ಅಪರೂಪಕ್ಕೊಮ್ಮೆ ಎ. 14 ಆಗುವುದಿದೆ) ಬಹುತೇಕ ಉತ್ತರ ಭಾರತದಲ್ಲಿ ‘ಬೈಸಾಖಿ’ ಆಚರಣೆ ನಡೆಯುತ್ತದೆ. ಗೋಧಿಯ ಕಣಜವಾದ ಪಂಜಾಬ್‌ನಲ್ಲಿ ಸಿಖ್‌ ಧರ್ಮದ (ಖಾಲ್ಸಾ) ಸ್ಥಾಪನಾ ದಿನವಾಗಿಯೂ ಇದನ್ನು ಆಚರಿಸಲಾಗುತ್ತದೆ. ಸ್ವರ್ಣಮಂದಿರ ಹಾಗೂ ಖಾಲ್ಸಾ ಜನ್ಮಸ್ಥಳದಲ್ಲಿ ವಿಶೇಷ ಆಚರಣೆಗಳು ನಡೆಯುತ್ತವೆ. ಅಮೆರಿಕ, ಕೆನಡಾ ಹಾಗೂ ಬ್ರಿಟನ್‌ನಲ್ಲೂ ಸಿಖ್‌ ಸಮುದಾಯದವರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

* ತಮಿಳುನಾಡು

ತಮಿಳುನಾಡಿನಲ್ಲಿ ಏಪ್ರಿಲ್‌ 13 ಅಥವಾ 14ರಂದು ‘ಪುತ್ತಾಂಡು’ ನಡೆಯುತ್ತದೆ. ಅಂದು ಮಧುರೆ ಮೀನಾಕ್ಷಿ ದೇವಾಲಯದಲ್ಲಿ ವಿಶೇಷ ಅಚರಣೆಗಳು ಇರುತ್ತವೆ. ಮಾವಿನಕಾಯಿ, ಬೆಲ್ಲ ಹಾಗೂ ಬೇವಿನ ಹೂವುಗಳನ್ನು ಬಳಸಿ ತಯಾರಿಸುವ ತಿಂಡಿ ಈ ಹಬ್ಬದ ವಿಶೇಷ.

* ಅಸ್ಸಾಂ

ಕೃಷಿ ಚಟುವಟಿಕೆಗಳ ಆರಂಭದ ಕುರುಹಾಗಿ ಏಪ್ರಿಲ್‌ ತಿಂಗಳಲ್ಲಿ ಅಸ್ಸಾಂನಲ್ಲಿ ಬೊಹಾಗ್‌ ಬಿಹು ಆಚರಣೆ ನಡೆಯುತ್ತದೆ. 

* ಪಶ್ಚಿಮ ಬಂಗಾಳ

ಬಂಗಾಳಿ ನವವರ್ಷ (ನಬೊ ಬರ್ಷೊ) ‘ಪೊಹೆಲ ಬೊಯಿಶಾಖ್‌’ ಸಾಮಾನ್ಯವಾಗಿ ಏಪ್ರಿಲ್‌ ತಿಂಗಳ ಮಧ್ಯಭಾಗದಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇದು ವಿವಾಹಕ್ಕೆ ಅತ್ಯುತ್ತಮ ಕಾಲ ಎಂದು ಪರಿಗಣಿಸಲಾಗುತ್ತದೆ.

* ಗುಜರಾತ್‌

ಗುಜರಾತ್‌ನಲ್ಲಿ ದೀಪಾವಳಿಯ ಮರುದಿನ (ಸಾಮಾನ್ಯವಾಗಿ ನವೆಂಬರ್‌ ತಿಂಗಳು) ‘ಬೆಸ್ತು ವರಸ್‌’ ಆಚರಣೆ ನಡೆಯುತ್ತದೆ. ಮಾರ್ವಾಡಿ ಸಮುದಾಯದವರು ದೀಪಾವಳಿಯನ್ನೇ ಹೊಸವರ್ಷವೆಂದು ಆಚರಿಸುತ್ತಾರೆ. ಯಾವುದೇ ಹೊಸ ಕೆಲಸ ಆರಂಭಿಸಲು ಇದು ಶುಭದಿನ ಎಂಬುದು ನಂಬಿಕೆ.

* ಕೇರಳ

ಕೇರಳದಾದ್ಯಂತ ಏಪ್ರಿಲ್‌ 14 ರಂದು ‘ವಿಶು’ ಆಚರಿಸಲಾಗುತ್ತದೆ. ಅಂದು ಮುಂಜಾನೆ ಎದ್ದ ಕೂಡಲೇ ನೋಡುವ ಮೊದಲ ವಸ್ತು ಯಾವುದು (ವಿಶು ಕ್ಕಣಿ) ಎಂಬ ಕುರಿತು ವಿಶೇಷ ಮಹತ್ವ ನೀಡಲಾಗುತ್ತದೆ. ಮುಂಜಾನೆ ಕಣ್ಣು ಮುಚ್ಚಿಕೊಂಡು ಧಾನ್ಯದ ರಾಶಿ ಅಥವಾ ಇನ್ನಾವುದೋ ಪವಿತ್ರ ವಸ್ತುವಿನ ಮುಂದೆ ಬಂದು, ನಿಂತು ಕಣ್ಣು ತೆರೆಯುವ ಸಂಪ್ರದಾಯವನ್ನೂ ಕೆಲವರು ಪಾಲಿಸುತ್ತಾರೆ.

* ಸಿಕ್ಕಿಂ

ಸಿಕ್ಕಿಂನ ಹೊಸ ವರ್ಷ ‘ಲೊಸೂಂಗ್‌’ ಡಿಸೆಂಬರ್‌ ತಿಂಗಳಲ್ಲಿ ಬರುತ್ತದೆ. ಛಮ್‌ ನೃತ್ಯ ಈ ಹಬ್ಬದ ಪ್ರಮುಖ ಆಕರ್ಷಣೆ

* ಜಮ್ಮು ಕಾಶ್ಮೀರ

ಚೈತ್ರ ನವರಾತ್ರಿಯ ಮೊದಲ ದಿನ ಜಮ್ಮು ಕಾಶ್ಮೀರದಲ್ಲಿ ‘ನವರೇಹ್‌’ ಆಚರಣೆ ನಡೆಯುತ್ತದೆ. ಕಾಶ್ಮೀರಿ ಸಮುದಾಯದವರಿಗೆ ಇದು ಶಿವರಾತ್ರಿಯಷ್ಟೆ ಪವಿತ್ರವಾದ ಹಬ್ಬ

* ಸಿಂಧಿ ಸಮುದಾಯ

ಚೈತ್ರ ಮಾಸದ ಎರಡನೆಯ ದಿನ ಸಿಂಧಿ ಸಮುದಾಯದವರು ಹೊಸವರ್ಷ ‘ಚಿಟೀಚಂಡ್‌’ ಆಚರಿಸುತ್ತಾರೆ. ಸಿಂಧಿ ಸಮುದಾಯದವರ ಇಷ್ಟದೇವತೆ ‘ಝೂಲೆಲಾಲ್‌’ ಅವರನ್ನು ಗೌರವಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ.

ನವ ವಸಂತದ ಗಾಳಿ ಬೀಸಲು...

ಥಾಯ್ಲೆಂಡ್‌ನ ಸೊಂಕ್ರಾನ್

ಥಾಯ್ ಜನರು ‘ಸೊಂಕ್ರಾನ್’ ಹೆಸರಿನ ನವ ವರ್ಷವನ್ನು ಆಚರಿಸುತ್ತಾರೆ. ಏಪ್ರಿಲ್ 13–15 ಹಬ್ಬದ ಸಮಯ. ಆಗ್ನೇಯ ಏಷ್ಯಾದ ಲಾವೋಸ್ ಸೇರಿದಂತೆ ಕೆಲವು ದೇಶಗಳಲ್ಲೂ ಇದು ಆಚರಣೆಯಲ್ಲಿದೆ. ಇದು ಶುದ್ಧೀಕರಣದ ಹಬ್ಬ. ಪರಸ್ಪರ ನೀರು ಎರಚುವ ಆಚರಣೆ. ಮೂರು ದಿನಗಳ ಕಾಲ ನೀರು ಎರಚಾಡುವ ಸ್ಪರ್ಧೆಯೇ ಆಗಿ ಇದು ಮಾರ್ಪಡುತ್ತದೆ. ಇದು ಆಶೀರ್ವಾದಕ್ಕೆ ಸಮ ಎಂಬ ನಂಬಿಕೆ ಇಲ್ಲಿಯದು. ಮತ್ತೊಂದು ಆಕರ್ಷಣೆ ಎಂದರೆ ಡ್ರ್ಯಾಗನ್ ಬೋಟ್ ರೇಸ್. ನದಿ, ದೊಡ್ಡ ಸರೋವರಗಳಲ್ಲಿ ದೋಣಿ ಸ್ಪರ್ಧೆಯನ್ನು ನೋಡುವುದೇ ಒಂದು ಚೆಂದ.

ಚೀನಿಯರ ಹೊಸ ವರ್ಷ

ಚೀನಾದ ಹೊಸ ವರ್ಷ ಜನವರಿ ಕೊನೆ ಹಾಗೂ ಫೆಬ್ರುವರಿ ಮಧ್ಯದಲ್ಲಿ ಆಚರಿಸಲಾಗುತ್ತದೆ. ವಿಯೆಟ್ನಾಂ, ಕೊರಿಯಾದಲ್ಲೂ (ಇಲ್ಲಿ ‘ಟೆಟ್’ ಎಂಬ ಹೆಸರಿದೆ) ಇದು ಆಚರಣೆಯಲ್ಲಿದೆ. ಕೆಲವು ಸಮುದಾಯಗಳಲ್ಲಿ ಭಿನ್ನ ಪದ್ಧತಿಗಳಿವೆ. ಸಾಧ್ಯವಾದಷ್ಟೂ ಸಾಲ ತೀರಿಸುತ್ತಾರೆ. ಸಾಲ ಇಟ್ಟುಕೊಂಡು ವರ್ಷ ಸ್ವಾಗತಿಸುವುದು ಒಳ್ಳೆಯದಲ್ಲ ಎಂಬ ನಂಬಿಕೆ. ಮಕ್ಕಳಿಗೆ ಹಣವನ್ನು ಕೆಂಪು ಕವರ್‌ನಲ್ಲಿ ಇರಿಸಿ ಉಡುಗೊರೆ ನೀಡಲಾಗುತ್ತದೆ. ಹಬ್ಬದ ವಿಶೇಷವೆಂದರೆ ಔತಣಕೂಟ. ಒಂದೊಂದು ಖಾದ್ಯಕ್ಕೂ ಒಂದೊಂದು ಅರ್ಥ. ನೂಡಲ್ಸ್ ದೀರ್ಘಾಯುಷ್ಯ, ಮೀನು ಸಮೃದ್ಧಿ, ಸಿಹಿ ಪದಾರ್ಥ ಸಿಹಿ ಜೀವನ ಪ್ರತಿನಿಧಿಸುತ್ತವೆ. ವರ್ಷಕ್ಕೊಂದು ಪ್ರಾಣಿಯ ಸಂಕೇತಗಳಿದ್ದು, ಪ್ರತಿ 12 ವರ್ಷಗಳಿಗೆ ಅವು ಪುನರಾವರ್ತನೆಯಾಗುತ್ತವೆ. ಹಾವು ಸಂಕೇತಿಸುವ ವರ್ಷದಲ್ಲಿ ಜನಿಸಿದ ಹುಡುಗ, ಇಲಿ ಸಂಕೇತಿಸುವ ವರ್ಷದಲ್ಲಿ ಹುಟ್ಟಿದ ಹುಡುಗಿಯನ್ನು ಮದುವೆಯಾದರೆ ಕಷ್ಟ ಎದುರಾಗುತ್ತದೆ ಎನ್ನಲಾಗುತ್ತದೆ.

ಜಪಾನ್‌ನಲ್ಲಿ ಗಂಟೆ ಸದ್ದು

1873ರಲ್ಲಿ ಆಧುನಿಕ ಕ್ಯಾಲೆಂಡರ್ ಅಳವಡಿಕೆ ಬಳಿಕ ಜನವರಿ 1ರಂದು ಜಪಾನ್ ಹೊಸ ವರ್ಷ ಬರಮಾಡಿಕೊಳ್ಳುತ್ತಿದೆ. ಸಾಂಪ್ರದಾಯಿಕ ವರ್ಷಾಚರಣೆ ಮಾಡುವವರೂ ಇದ್ದಾರೆ. ಅಂದು ಮನೆಯನ್ನು ಸ್ವಚ್ಛಗೊಳಿಸಿ, ಎಲ್ಲ ಕೋಣೆಗಳಲ್ಲಿ ಸೋಯಾಬೀನ್ ಹರಡಲಾಗುತ್ತದೆ. ಹೀಗೆ ಮಾಡಿದರೆ ದುಷ್ಟ ಶಕ್ತಿಗಳ ತೊಂದರೆ ಇರುವುದಿಲ್ಲ ಎಂಬುದು ನಂಬಿಕೆ. ಎಲ್ಲ ಬೌದ್ಧ ದೇಗುಲಗಳಲ್ಲಿ 108 ಬಾರಿ ಗಂಟೆ ಬಾರಿಸಲಾಗುತ್ತದೆ.

ಇಂಡೊನೇಷ್ಯಾದಲ್ಲಿ ಮೌನ

ಜಪಾನ್‌ನಲ್ಲಿ ಗಂಟಾನಾದ ಮೊಳಗಿದರೆ, ಇಂಡೊನೇಷ್ಯಾದಲ್ಲಿ ಮೌನಾಚರಣೆ ಮಾಡಲಾಗುತ್ತದೆ. ಇಲ್ಲಿನ ‘ನೈಪಿ’ ಹೊಸ ವರ್ಷದಲ್ಲಿ ಬೀದಿಗಳು ಖಾಲಿಖಾಲಿ. ಮನೆಯಲ್ಲಿ ಅಡುಗೆ ಇಲ್ಲ. ಸಂಗೀತವೂ ನಿರ್ಬಂಧ. ಟಿ.ವಿ., ರೇಡಿಯೊ ಬಂದ್. ಸ್ವಯಂ ನಿಯಂತ್ರಣವೇ ಇದರ ಅರ್ಥ. ಇಲ್ಲಿನ ಹಬ್ಬಗಳು ಸೌರಮಾನ ಅಥವಾ ಚಂದ್ರಮಾನ ಪದ್ಧತಿಗೆ ಅಂಟಿಕೊಳ್ಳದೇ ಪ್ರತಿ 210 ದಿನಗಳಿಗೊಮ್ಮೆ ಪುನರಾವರ್ತನೆಯಾಗುತ್ತವೆ.

ಬಾಲಿಯಲ್ಲಿರುವ ಮುಸ್ಲಿಮರು ಮೊಹರಂನ ಮೊದಲ ದಿನವನ್ನು (ಮುಸ್ಲಿಂ ಕ್ಯಾಲೆಂಡರ್ ಪ್ರಕಾರ) ಹೊಸ ವರ್ಷವಾಗಿ ಆಚರಿಸುತ್ತಾರೆ. ಇದೇ ದಿನ ಷಿಯಾ ಮುಸ್ಲಿಮರಿಗೆ ಶೋಕದ ದಿನ. ಜೊರಾಸ್ಟ್ರಿಯನ್ ಅನುಸರಿಸುವ ಶಿಯಾ ಮುಸ್ಲಿಮರು ‘ನೌರುಜ್’ (ಸಂಕ್ರಾಂತಿ) ಹೆಸರಿನಲ್ಲಿ ಹೊಸ ವರ್ಷ ಮಾಡುತ್ತಾರೆ. ಬೀದಿಗಳಲ್ಲಿ ಸಂಗೀತಗಾರರು ಹಾಡುತ್ತಾರೆ. ದೀಪ ಬೆಳಗಿಸಲಾಗುತ್ತದೆ. ಖಾದ್ಯವಾಗಿ ಮೊಟ್ಟೆಯನ್ನು ಬಳಸುತ್ತಾರೆ. ಇದು ಹೊಸ ಜೀವನ ಆರಂಭದ ಸಂಕೇತ. 

ಸೌದಿ ಅರೇಬಿಯಾ

ಇಲ್ಲಿ ಇಸ್ಲಾಮಿಕ್ ಹಾಗೂ ಗ್ರೆಗೋರಿಯನ್ ಕ್ಯಾಲೆಂಡರ್‌ಗಳೆರಡೂ ಬಳಕೆಯಲ್ಲಿವೆ. ಸಾಂಪ್ರದಾಯಿಕ ಹೊಸವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಡಿಯಿಡುತ್ತದೆ. ಹೊರ ಹೋಗಿ ಪಾರ್ಟಿ ಮಾಡುವ ಪದ್ಧತಿ ಇಲ್ಲಿಲ್ಲ. ಅಕ್ಕಪಕ್ಕದ ಮನೆಯವರು ಒಂದೆಡೆ ಸೇರಿ ಹೊಸ ವರ್ಷವನ್ನು ಸ್ವಾಗತಿಸುತ್ತಾ ಊಟ ಮಾಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು