ಶನಿವಾರ, ಸೆಪ್ಟೆಂಬರ್ 18, 2021
28 °C

ಆಳ–ಅಗಲ | ಹತ್ತರ ನಂತರ ಆಸಕ್ತಿಗೇ ಮಹತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಸ್‌ಎಸ್‌ಎಲ್‌ಸಿ ನಮ್ಮ ಶಿಕ್ಷಣದ ಒಂದು ಮಹತ್ವದ ಘಟ್ಟ. ಪಿಯುಸಿ ಪೂರ್ಣಗೊಂಡ ಬಳಿಕ ವಿದ್ಯಾಭ್ಯಾಸ ಮುಂದುವರಿಸಲು ನೂರಾರು ಆಯ್ಕೆಗಳಿವೆ. 10ನೇ ತರಗತಿಯ ಬಳಿಕ ಇರುವ ಆಯ್ಕೆಗಳು ಸೀಮಿತ. ಆದರೆ, 10ನೇ ತರಗತಿಯ ಬಳಿಕ ಯಾವ ಕೋರ್ಸ್‌ಗೆ ಸೇರಬೇಕು ಎಂಬ ನಿರ್ಧಾರವು ಉನ್ನತ ವ್ಯಾಸಂಗ ಮತ್ತು ಯಾವ ವೃತ್ತಿ ಕೈಗೊಳ್ಳಬೇಕು ಎಂಬ ಹಾದಿಯನ್ನು ತೀರ್ಮಾನಿಸುತ್ತದೆ. 

10ನೇ ತರಗತಿ ನಂತರ, ಮುಖ್ಯವಾಗಿ ಇರುವ ಆಯ್ಕೆ ಪಿಯುಸಿ (+2) ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. +2ನಲ್ಲಿ ಕಲೆ, ವಿಜ್ಞಾನ, ವಾಣಿಜ್ಯದಲ್ಲಿ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಹಲವರಲ್ಲಿ ಇರಬಹುದು. ಇದು ಪೋಷಕರನ್ನು ಕೂಡ ಕಾಡುವ ಪ್ರಶ್ನೆ. ಈ ಎಲ್ಲ ವಿಭಾಗಗಳಲ್ಲಿಯೂ ಉನ್ನತ ವ್ಯಾಸಂಗಕ್ಕೆ ಅವಕಾಶ ಇದೆ ಮತ್ತು ವೃತ್ತಿಯ ಸಾಧ್ಯತೆಗಳಿಗೆ ಕೊರತೆ ಇಲ್ಲ. ವಿದ್ಯಾರ್ಥಿ/ವಿದ್ಯಾರ್ಥಿನಿಗೆ ನಿಜವಾಗಿಯೂ ಆಸಕ್ತಿ ಇರುವ ಕ್ಷೇತ್ರ ಯಾವುದು ಎಂಬುದನ್ನು ಗುರುತಿಸಿ, ಅದನ್ನೇ ಆಯ್ಕೆ ಮಾಡಿಕೊಳ್ಳುವುದು ಬುದ್ಧಿವಂತಿಕೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರವು ತಪ್ಪಾದರೆ ಅದು ವೃತ್ತಿ ಜೀವನದ ಮೇಲೆಯೂ ಪರಿಣಾಮ ಬೀರಬಹುದು. ಒಂದು ವೇಳೆ, ನಿರ್ಧಾರ ತಪ್ಪಾದರೂ ಮುಂದೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ಇದ್ದೇ ಇದೆ ಎಂಬುದನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು.

ಕಲೆ ಅಥವಾ ಮಾನವಿಕ ವಿಷಯದಲ್ಲಿ ಅತೀವವಾದ ಆಸಕ್ತಿ ಇರುವವರು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದೇ ಸೂಕ್ತ. ಈ ವಿಭಾಗದಲ್ಲಿ ಭಾಷೆ, ಸಾಹಿತ್ಯ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮದಂತಹ ವಿಷಯಗಳನ್ನು ಕಲಿಯಲು ಅವಕಾಶ ಇದೆ. ಈ ವಿಭಾಗದಲ್ಲಿ ಕಲಿತರೆ ಉದ್ಯೋಗ ಅವಕಾಶಗಳಿಗೆ ಕೊರತೆಯೇನೂ ಇಲ್ಲ.

ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ತುಡಿತ ಇರುವವರು, ಗಣಿತ, ಜೀವವಿಜ್ಞಾನ ವಿಷಯಗಳಲ್ಲಿ ತೀವ್ರ ಆಸಕ್ತಿ ಇರುವವರು ವಿಜ್ಞಾನ ವಿಷಯಗಳನ್ನು ಕಲಿಯಬಹುದು. ಈ ಕ್ಷೇತ್ರದಲ್ಲಿ ಇರುವ ಅವಕಾಶಗಳು ಅಪಾರ. 

ವಾಣಿಜ್ಯವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ವಿಭಾಗ. ವ್ಯಾಪಾರ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರದಂತಹ ವಿಷಯಗಳಲ್ಲಿ ಉಮೇದು ಇರುವವರು ಈ ವಿಭಾಗಕ್ಕೆ ಸೇರಬಹುದು. ಈ ಕ್ಷೇತ್ರದಲ್ಲಿ ವೃತ್ತಿಯ ಆಯ್ಕೆ ಮತ್ತು ಅವಕಾಶಗಳು ವಿಪುಲ.

ಇಲ್ಲಿ ಒಂದು ವಿಚಾರವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು: ವಿಜ್ಞಾನ ವಿಷಯಕ್ಕೆ ಸೇರಿದವರು ಮುಂದಿನ ದಿನಗಳಲ್ಲಿ ಕಲೆ ಅಥವಾ ವಾಣಿಜ್ಯ ವಿಭಾಗಕ್ಕೆ ವರ್ಗಾವಣೆ ಆಗಬಹುದಾದ ಅವಕಾಶಗಳು ಹೆಚ್ಚು. ಕಲೆ ಅಥವಾ ವಾಣಿಜ್ಯ ವಿಭಾಗದಲ್ಲಿ ಕಲಿತವರು ವಿಜ್ಞಾನ ವಿಭಾಗಕ್ಕೆ ಹೊರಳಿಕೊಳ್ಳುವುದು ಸ್ವಲ್ಪ ಕಷ್ಟ. 

ಈ ಮೂರು ವಿಭಾಗಗಳಲ್ಲಿ ಯಾವುದನ್ನೇ ಆಯ್ಕೆ ಮಾಡಿಕೊಂಡರೂ ವೃತ್ತಿಯೊಂದನ್ನು ಕಂಡುಕೊಳ್ಳಲು ಐದರಿಂದ ಏಳೆಂಟು ವರ್ಷ ವ್ಯಾಸಂಗ ನಡೆಸಬೇಕು. ಆದಷ್ಟು ಬೇಗನೆ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಹುರುಪು ಮತ್ತು ಅಗತ್ಯ ಇರುವವರು ನೇರವಾಗಿ ವೃತ್ತಿಪರ ಕೋರ್ಸ್‌ಗಳಿಗೆ ಸೇರಬಹುದು. ಐಟಿಐ ಮತ್ತು ಡಿಪ್ಲೊಮಾ ಕೋರ್ಸ್‌ಗಳು ಇಂತಹವರಿಗೆ ಸೂಕ್ತ. ಒಂದು ಅಥವಾ ಎರಡು ವರ್ಷದ ಐಟಿಐ ಕೋರ್ಸ್‌ಗಳು ವಿವಿಧ ಕೌಶಲಗಳನ್ನು ಕಲಿಸುತ್ತವೆ. ಕೋರ್ಸ್‌ ಪೂರ್ಣಗೊಳಿಸಿ ನೇರವಾಗಿ ವೃತ್ತಿ ಆರಂಭಿಸಬಹುದು. ಸ್ವ–ಉದ್ಯೋಗ ಕಂಡುಕೊಳ್ಳಬಹುದಾದ ಹಲವು ಕೋರ್ಸ್‌ಗಳೂ ಈ ವಿಭಾಗದಲ್ಲಿ ಲಭ್ಯ ಇವೆ. 

10ನೇ ತರಗತಿ ನಂತರದ ವಿದ್ಯಾಭ್ಯಾಸದ ಆಯ್ಕೆಯು ಹೆಚ್ಚು ಮಹತ್ವದ್ದಾಗಿರುವುದರಿಂದ ಇಲ್ಲಿ ಒತ್ತಡವೂ ಹೆಚ್ಚು. ಇಂತಹ ಒತ್ತಡಗಳನ್ನು ಮೆಟ್ಟಿ ನಿಂತು ಸರಿಯಾದ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆಯ ಮೇಲೆ ಒತ್ತಡ ಸೃಷ್ಟಿಸುವ ಅಂಶಗಳ ಬಗ್ಗೆ ಎಚ್ಚರದಿಂದ ಇರಬೇಕು.

ಗೆಳೆಯರ ಅನುಸರಣೆ: 10ನೇ ತರಗತಿಯವರೆಗೆ ಜತೆಗೆ ಓದಿದ ಗೆಳೆಯ/ಗೆಳತಿಯರು ವಿಜ್ಞಾನವನ್ನೋ ಕಲೆಯನ್ನೋ ಆಯ್ಕೆ ಮಾಡಿಕೊಂಡರು ಎಂಬ ಕಾರಣಕ್ಕೆ ನಾವೂ ಅದನ್ನು ಆಯ್ಕೆ ಮಾಡುವುದು ಸಾಮಾನ್ಯವಾಗಿ ಮಾಡುವ ತಪ್ಪು.

ಪೋಷಕರ ಒತ್ತಡ: ಮಗ ಅಥವಾ ಮಗಳು ವಿಜ್ಞಾನ ವಿಷಯವನ್ನೇ ಆಯ್ಕೆ ಮಾಡಬೇಕು, ಅದರಲ್ಲಿಯೇ ವೃತ್ತಿ ಕಂಡುಕೊಳ್ಳಬೇಕು ಎಂಬ ಭಾವನೆ ಪೋಷಕರಲ್ಲಿ ಇರಬಹುದು. ತಮ್ಮ ಸಹೋದ್ಯೋಗಿಗಳು, ಗೆಳೆಯರು ಅಥವಾ ಸಂಬಂಧಿಕರ ಮಕ್ಕಳು ಆಯ್ಕೆ ಮಾಡಿಕೊಂಡ ವಿಭಾಗವನ್ನೇ ತಮ್ಮ ಮಗ ಅಥವಾ ಮಗಳು ಆಯ್ಕೆ ಮಾಡಿಕೊಳ್ಳಲಿ ಎಂದು ಪೋಷಕರು ಬಯಸಬಹುದು. ಆದರೆ, ಕೋರ್ಸ್‌ ಆಯ್ಕೆ ಮಾಡಿಕೊಳ್ಳಲು ಇದು ಮಾನದಂಡ ಆಗಬಾರದು. 

ಮಾಹಿತಿಯ ಕೊರತೆ: ಈಗ ನಮ್ಮ ಮುಂದೆ ಇರುವ ವಿದ್ಯೆ ಮತ್ತು ವೃತ್ತಿಯ ಅವಕಾಶಗಳು ನೂರಾರು. ಇಂತಹ ಆಯ್ಕೆಗಳನ್ನು ತಿಳಿದುಕೊಂಡು ನಿರ್ಧಾರ ಕೈಗೊಳ್ಳುವುದು ಉತ್ತಮ. 

ವಿದ್ಯಾರ್ಥಿ/ವಿದ್ಯಾರ್ಥಿನಿಯ ಆಸಕ್ತಿಯೇ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ನೆಲೆಗಟ್ಟಾಗಲಿ. ಇತರ ಒತ್ತಡಗಳಿಂದ ಹೊರಬರಲು ಅವರಿಗೆ ಪೋಷಕರ ನೆರವೂ ಬೇಕಾದೀತು.

ಪೋಷಕರಿಗೆ ಕಿವಿಮಾತು

* ಪೋಷಕರು ತಮ್ಮ ಇಷ್ಟದ ವಿಷಯ ಮತ್ತು ಕೋರ್ಸ್‌ಗಳನ್ನು ತೆಗೆದುಕೊಳ್ಳುವಂತೆ ಮಕ್ಕಳ ಮೇಲೆ ಒತ್ತಡ ಹೇರಬಾರದು

* ಮಕ್ಕಳು ಯಾವ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಿ, ಆ ವಿಷಯಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹ ನೀಡಬೇಕು. ಮಕ್ಕಳ ಆಸಕ್ತಿಯ ವಿಷಯವೇ ಅವರಿಗೆ ಅತ್ಯಂತ ಸರಿಹೊಂದುವ ವಿಷಯವಾಗಿರುತ್ತದೆ

* ಮಕ್ಕಳ ಸಾಮರ್ಥ್ಯ (ಆ್ಯಪ್ಟಿಟ್ಯೂಡ್‌), ವ್ಯಕ್ತಿತ್ವ (ಪರ್ಸನಾಲಿಟಿ) ಮತ್ತು ಆಸಕ್ತಿ (ಇಂಟರೆಸ್ಟ್‌) (ಎಪಿಐ) ಅನ್ನು ಗುರುತಿಸಬೇಕು. ಇವುಗಳನ್ನು ಗುರುತಿಸುವ ಮೂಲಕ ಮಕ್ಕಳ ಆಸಕ್ತಿಯ ವಿಷಯಗಳನ್ನು ಪತ್ತೆಮಾಡಬೇಕು

* ಕುಟುಂಬದ ವ್ಯವಹಾರ/ಉದ್ದಿಮೆಗಳಿಗೆ ಸಂಬಂಧಿಸಿದ ಕೋರ್ಸ್‌ಗಳಿಗೆ ಸೇರುವಂತೆ ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳಿಗೆ ಆಸಕ್ತಿ ಇದ್ದರೆ ಅದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ಇಲ್ಲದಿದ್ದಲ್ಲಿ ಬೇರೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು

* ಮಕ್ಕಳ ಆಸಕ್ತಿಯ ವಿಷಯ ಯಾವುದು, ಅವರ ಸಾಮರ್ಥ್ಯದ ಮಟ್ಟ ಯಾವುದು ಮತ್ತು ಅವರಿಗೆ ಸರಿಹೊಂದುವ ಕೋರ್ಸ್‌ ಯಾವುದು ಎಂದು ಗುರುತಿಸಲು ಸಾಧ್ಯವಾಗದೇ ಇದ್ದರೆ, ತಜ್ಞರನ್ನು ಸಂಪರ್ಕಿಸಬೇಕು. ಮಕ್ಕಳ ಎಪಿಐ ಪರೀಕ್ಷೆ ಮಾಡಿಸುವ ಮೂಲಕ ಅವರಿಗೆ ಸರಿಹೊಂದುವ ವಿಷಯ/ಕೋರ್ಸ್ ಯಾವುದು ಎಂದು ಗುರುತಿಸಬಹುದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು