ಸೋಮವಾರ, ಮೇ 17, 2021
31 °C

'ಶಾಹೀನ್‌ಬಾಗ್ ಮಹಿಳೆಯರಿಗೆ ಹಣ ನೀಡಲಾಗುತ್ತಿದೆ' ಎಂಬುದು ಸುಳ್ಳು ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

FactCheck

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಹಣ ಹಂಚಲಾಗುತ್ತಿದೆ ಎಂಬ ಶೀರ್ಷಿಕೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಫೆಬ್ರುವರಿ 29ರಂದು ವಿ ಸಪೋರ್ಟ್ ನರೇಂದ್ರ ಮೋದಿ ಎಂಬ ಫೇಸ್‌ಬುಕ್  ಪುಟದಲ್ಲಿ ಶೇರ್ ಆಗಿರುವ ಈ ವಿಡಿಯೊ ಇಲ್ಲಿಯವರಿಗೆ  64000 ಬಾರಿ ಶೇರ್ ಆಗಿದೆ. ಈ ಪೋಸ್ಟಿಗೆ ಬಂದ ಕಾಮೆಂಟ್‌ನಲ್ಲಿ ಹಲವಾರು ನೆಟಿಜನ್‌ಗಳು ಮುಸ್ಲಿಂ ಸಮುದಾಯದ ವಿರುದ್ಧ ಕಿಡಿ ಕಾರಿದ್ದಾರೆ. ಇದೇ ವಿಡಿಯೊವನ್ನು ದೆಹಲಿ ಬಿಜೆಪಿಯ ಹಲವು ಮುಖಂಡರು  ಹಂಚಿಕೊಂಡಿದ್ದರು. ಅವರ ಅನುಯಾಯಿಗಳು ‘ಈ ಮಹಿಳೆಯರನ್ನು ಕೊಲ್ಲಿ’ ಎಂದೂ ಕರೆ ನೀಡಿದ್ದರು. 

ಗಲಭೆ ಮತ್ತು ಕಲ್ಲು ತೂರಾಟ ಮಾಡುವುದಕ್ಕೆ ಹಣ ನೀಡಲಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂಬ ಶೀರ್ಷಿಕೆಯೊಂದಿಗೆ ಅಮಿತ್ ಬಜಾಜ್ ಎಂಬ ವ್ಯಕ್ತಿ ಈ ವಿಡಿಯೊವನ್ನು ಶೇರ್ ಮಾಡಿದ್ದರು. ಶಾಹೀನ್‌ಬಾಗ್ ಪ್ರತಿಭಟನೆಕಾರರು ಮಹಿಳೆಯರಿಗೆ  ಹಣ ಹಂಚುತ್ತಿದ್ದಾರೆ ಎಂದು ಏಷ್ಯಾನೆಟ್ ನ್ಯೂಸ್ ಇದೇ ವಿಡಿಯೊ ಆಧಾರವನ್ನಾಗಿರಿಸಿ ಸುದ್ದಿ ಪ್ರಕಟಿಸಿತ್ತು.

ಈ ವೈರಲ್ ವಿಡಿಯೊ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದ್ದು, ವಿಡಿಯೊದ ಅಸಲಿಯತ್ತು ಏನು ಎಂಬುದನ್ನು ವರದಿ ಮಾಡಿದೆ.

ಫ್ಯಾಕ್ಟ್‌ಚೆಕ್  
ಚೆನ್ನೈ ಮೂಲದ ಸಾಮಾಜಿಕ ಕಾರ್ಯಕರ್ತ ಚಂದ್ರ ಮೋಹನ್ ಎಂಬವರು ವೈರಲ್ ವಿಡಿಯೊದಲ್ಲಿರುವ ಅದೇ ಜಾಗಕ್ಕೆ ಭೇಟಿ ಕೊಟ್ಟು ಸತ್ಯ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.  ಫೆಬ್ರುವರಿ 28ರಂದು ಚಂದ್ರ ಮೋಹನ್ ಅವರು ಬಾಬು ನಗರ್, ಎ ಬ್ಲಾಕ್, ಗಲಿ ನಂಬರ್ 9ಗೆ ಭೇಟಿ ನೀಡಿದ್ದಾರೆ. ಶಿವ್ ವಿಹಾರದ ಸಂತ್ರಸ್ತರು  ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಿವ್ ವಿಹಾರದಲ್ಲಿ ಮನೆ ಕಳೆದುಕೊಂಡವರಾಗಿದ್ದಾರೆ ಇವರು. ಇಲ್ಲಿನ ಜನರು ಸಂತ್ರಸ್ತರಿಗೆ ಇರಲು ಜಾಗ ಕೊಟ್ಟು ಮಾನವೀಯತೆ ಮೆರೆದಿದ್ದಾರೆ ಎಂದು ಚಂದ್ರ ಮೋಹನ್ ತಮ್ಮ ವಿಡಿಯೊದಲ್ಲಿ ಹೇಳಿದ್ದಾರೆ.

ಚಂದ್ರ ಮೋಹನ್ ತಮ್ಮ ವಿಡಿಯೊದಲ್ಲಿ ಶಹಜಾದ್ ಮಲಿಕ್ ಎಂಬ ವ್ಯಕ್ತಿಯನ್ನು ಪರಿಚಯಿಸಿದ್ದಾರೆ.  ಹೀಗಂತಾರೆ ಚಂದ್ರ ಮೋಹನ್ -'  ಹಣ ಹಂಚುತ್ತಿರುವ ವಿಡಿಯೊದಲ್ಲಿ ಕಂಡ ವ್ಯಕ್ತಿ ಇವರು. ಮಲಿಕ್ ಈಗ ನಮ್ಮೊಂದಿಗೆ  ಇದ್ದಾರೆ. ಆ ದಿನ ಅವರು ತೊಟ್ಟಿದ್ದ ಅದೇ ಬಟ್ಟೆಯನ್ನು ತೊಡಲು ನಾನವರಿಗೆ ಹೇಳಿದ್ದೆ.
ಮಲಿಕ್ ಅವರು ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳನ್ನು ನೀಡಿದ್ದರು. ಆದರೆ ಸಂತ್ರಸ್ತರ ಸಂಖ್ಯೆ ಜಾಸ್ತಿ ಇದ್ದುದರಿಂದ ಎಲ್ಲರಿಗೂ ನೀಡಲು ಸಾಧ್ಯವಾಗಿಲ್ಲ. ಈ ಮನುಷ್ಯನ ಹೃದಯ ದೊಡ್ಡದು. ಇವರು ₹70,000 ಖರ್ಚು ಮಾಡಿದ್ದಾರೆ. ಇವರು ಪ್ರತಿಯೊಬ್ಬರಿಗೂ ₹500 ನೀಡಿದ್ದಾರೆ. ಜನರ ಕಣ್ಣಿಗೆ ಒಳ್ಳೆಯ ಸಂಗತಿ ಕಾಣಿಸುವುದಿಲ್ಲ. ಅವರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗದೇ  ಇದ್ದಾಗ ಅವರು ಸುಳ್ಳು ಹಬ್ಬಿಸುತ್ತಾರೆ .

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಮತ್ತು ಚಂದ್ರ ಮೋಹನ್ ಅವರ ವಿಡಿಯೊ ಹೋಲಿಕೆ ಮಾಡಿ ನೋಡಿದರೆ ಅಲ್ಲಿರುವ ಹೋಲಿಕೆ ತಿಳಿಯುತ್ತದೆ

ಕೆಂಪು- ಗೋಡೆಯಲ್ಲಿರುವ ಚಿಕ್ಕ ಕವಾಟ
ಹಸಿರು:   ಗೋಡೆ ಪಕ್ಕದಲ್ಲಿರುವ ಚರಂಡಿ
ನೀಲಿ:  ಚರಂಡಿ ಮೇಲಿರುವ ಕಲ್ಲು ಹಾಸು

ಈ ಬಗ್ಗೆ ಆಲ್ಟ್ ನ್ಯೂಸ್‌ನೊಂದಿಗೆ ಮಾತನಾಡಿದ ಚಂದ್ರ ಮೋಹನ್,  ಈ ಜಾಗ ಹಳೇ ಮುಸ್ತಫಾಬಾದ್. ಇದನ್ನು ಬಾಬು ನಗರ್, ಗಲ್ಲಿ ನಂಬರ್ 9 ಎಂದು ಹೇಳುತ್ತಾರೆ. ನಾನು  ಚೆನ್ನೈ ಮೂಲದ ಸಾಮಾಜಿಕ, ರಾಜಕೀಯ ಕಾರ್ಯಕರ್ತ. ಇಲ್ಲಿ ಪರಿಹಾರ ಕಾರ್ಯಗಳನ್ನು ಮಾಡುವುದಕ್ಕಾಗಿ 5 ದಿನಗಳ ಹಿಂದೆ ದೆಹಲಿಗೆ ಬಂದೆ. ಇಲ್ಲಿನ ಯುವಕರು,  ವ್ಯಾಪಾರಿ ಸಂಘಟನೆಗಳ ಸಹಾಯದಿಂದ  ನಾನು ಈ ಕೆಲಸ ಮಾಡುತ್ತಿದ್ದೇನೆ. ಶಿವ್ ವಿಹಾರ್ ಪಕ್ಕದಲ್ಲಿರುವ ಮುಸ್ತಫಾಬಾದ್‌ಗೆ ನಾವೀಗ ಬಂದಿದ್ದೇವೆ. ಇಲ್ಲಿ ಸಂತ್ರಸ್ತರ ಶಿಬಿರಗಳನ್ನು ತೆರೆಯಲಾಗಿದೆ. ನಿನ್ನೆ ನಾನು ಈ ವಿಡಿಯೊ ನೋಡಿದಾಗ ಸ್ಥಳೀಯರಲ್ಲಿ ವಿಚಾರಿಸಿದೆ. ಹಣ ವಿತರಿಸಿದ ವ್ಯಕ್ತಿಯನ್ನು ಗೊತ್ತು ಎಂದು ಅವರು ಹೇಳಿದರು. ವೈರಲ್ ವಿಡಿಯೊದಲ್ಲಿ ಕಾಣುತ್ತಿರುವ ಜಾಗವೂ ಇದೆ. ಹಾಗಾಗಿ ವೈರಲ್ ವಿಡಿಯೊದ ಸತ್ಯಾಸತ್ಯತೆಯನ್ನು ತಿಳಿಸಲು ಸುಲಭವಾಯಿತು ಎಂದಿದ್ದಾರೆ. 

ಹಣ ಹಂಚುತ್ತಿರುವ ವ್ಯಕ್ತಿ ಶಹಜಾದ್ ಮಲಿಕ್. ಅವರು ಪರಿಹಾರ ಕಾರ್ಯಗಳನ್ನು ಮಾಡುತ್ತಿದ್ದರು. ಹಣ ಪಡೆಯಲು ಮಹಿಳೆಯರು ಸರದಿ ಸಾಲಿನಲ್ಲಿ ನಿಂತಿದ್ದರು. ವಿಡಿಯೊವನ್ನು ಗಮನಿಸಿ ಕೇಳಿದರೆ ಮಹಿಳೆಯರು ಶಹಜಾದ್‌ನ ಹೆಸರು ಕೂಗುತ್ತಿರುವುದೂ ಕೇಳಿಸುತ್ತದೆ.  ಸಹಾಯ ಅಗತ್ಯವಿದ್ದವರಿಗೆ ಮಾತ್ರ ನಗದು ನೀಡಲಾಗುತ್ತದೆ ಎಂದು ಹೇಳುತ್ತಿರುವುದು ಇಲ್ಲಿ ಕೇಳಿಸುತ್ತದೆ.

ಆಲ್ಟ್ ನ್ಯೂಸ್ ಶಹಜಾದ್ ಮಲಿಕ್ ಜತೆ ಮಾತನಾಡಿದ್ದು ಮಲಿಕ್ ಮಾತುಗಳು ಹೀಗಿವೆ. ನಾನು ಕಾರ್ ಪಾಲಿಶ್ ವ್ಯವಹಾರ ಮಾಡುತ್ತಿದ್ದೇನೆ. ಇಲ್ಲಿ ಹಲವಾರು ಜನ ಮನೆ ಕಳೆದುಕೊಂಡವರಿದ್ದಾರೆ.  ಆಹಾರ ಸಾಮಾಗ್ರಿಗಳನ್ನು ತಂದುಕೊಟ್ಟೆವು. ಆದರೆ ಇಲ್ಲಿರುವ 100-150  ಮಂದಿ ಮಹಿಳೆಯರ ಬಳಿ ಏನೂ ಇಲ್ಲ.. ಕೆಲವರ ಬಳಿ ಪುಟ್ಟ ಮಕ್ಕಳಿವೆ. ನನಗೆ ಅವರ ಕಷ್ಟ ನೋಡಲಾಗಲಿಲ್ಲ. ಮನೆಗೆ ಹೋಗಿ ಹಣ ತಂದು ಪ್ರತಿಯೊಬ್ಬರಿಗೂ ತಲಾ ₹500 ನೀಡಿದೆ. ಈಗ  ಯಾರೋ ಆ ವಿಡಿಯೊ  ಚಿತ್ರೀಕರಿಸಿ ತಪ್ಪಾದ ಮಾಹಿತಿಯೊಂದಿಗೆ ಹರಿ ಬಿಟ್ಟಿದ್ದಾರೆ. ಫೆಬ್ರುವರಿ 28ರಂದು ಈ ವಿಡಿಯೊ ಶೂಟ್ ಮಾಡಲಾಗಿದ್ದು ಕೇವಲ 30 ಸೆಕೆಂಡ್ ಅವಧಿಯ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ.  ನನ್ನ ವಿಡಿಯೊ 3 ನಿಮಿಷ ಅವಧಿಯದ್ದು. ಅದರಲ್ಲಿ ಸಹಾಯ ಅಗತ್ಯವಿರುವವರು ಮಾತ್ರ ಈ ಹಣ ಪಡೆದುಕೊಳ್ಳಿ ಎಂದು ನಾನು ಹೇಳಿದ್ದೆ. ಅದನ್ನು ವಿಡಿಯೊದಿಂದ ತೆಗೆದು ಹಾಕಿ ಅಪ್‌ಲೋಡ್ ಮಾಡಲಾಗಿದೆ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು