ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್ | ‘ಮೋದಿ ಮಸಾಲೆ’ ಆಗಿಲ್ಲ ‘ಕಾಂಗ್ರೆಸ್ ಕಡ್ಲೆಬೀಜ’

Last Updated 8 ಜೂನ್ 2019, 3:48 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರಿನ ಜನಪ್ರಿಯ ಸಂಜೆ ಕುರುಕಲು‘ಕಾಂಗ್ರೆಸ್ ಕಡ್ಲೆಬೀಜ’ ಕಳೆದ ವಾರ ಸುದ್ದಿಯಲ್ಲಿತ್ತು.

1956ರಲ್ಲಿ ಮಸಾಲೆಯುಕ್ತ ಘಮಲನ್ನು ಹರಡಿದ್ದ ಶ್ರೀನಿವಾಸ ಬ್ರಾಹ್ಮಿನ್ಸ್ ಬೇಕರಿ, ತನ್ನ ವಿಶೇಷ ಕುರುಕಲು ತಿಂಡಿಗಳಲ್ಲೊಂದಾದ ‘ಕಾಂಗ್ರೆಸ್ ಕಡ್ಲೆಬೀಜ’ ಹೆಸರನ್ನು ‘ಮೋದಿ ಮಸಲಾ’ ಎಂದು ಬದಲಾಯಿಸಿದ್ದಾಗಿ ವದಂತಿ ಇದೆ. ಕಡಲೆ ಬೀಜ (ಶೇಂಗಾ ಕಾಳಿನ ಬೇಳೆ) ‘ಕಡ್ಲೆಬೀಜ’ ಎಂದು ಬೇಕರಿಯಲ್ಲಿ ಹೆಸರಿಸಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಇಂಥದ್ದೊಂದು ಸಂದೇಶ ಹರಿದಾಡಿದೆ.

1956ರಲ್ಲಿ ಕಾಂಗ್ರೆಸ್ ಕಡ್ಲೆಬೀಜ ಪರಿಚಯಿಸಿದ ಬೇಕರಿ
1956ರಲ್ಲಿ ಕಾಂಗ್ರೆಸ್ ಕಡ್ಲೆಬೀಜ ಪರಿಚಯಿಸಿದ ಬೇಕರಿ

ಈ ಬೇಕರಿ ಬಸವನಗುಡಿಯ ಗಾಂಧಿ ಬಜಾರ್‌ನ ಡಿವಿಜಿ ರಸ್ತೆಯಲ್ಲಿದೆ. ಇಲ್ಲಿನ ತಿಂಡಿಗಳು ದಾರಿಹೋಕರನ್ನು ಸೆಳೆಯುತ್ತವೆ. ಮನೆಗೆ ಹೋಗುವವರು ಒಂದೆರೆಡು ಪಾಕೆಟ್‌ಗಳನ್ನು ಖರೀದಿಸಿಯೇ ತೆರಳುತ್ತಾರೆ. ಇನ್ನು ಬಸವನಗುಡಿಯಿಂದ ಅಮೆರಿಕಕ್ಕೆ ತೆರಳಿ ನೆಲೆಸಿರುವ ಅನಿವಾಸಿ ಭಾರತೀಯರೂ ಇಲ್ಲಿಂದ ತಿಂಡಿಗಳನ್ನು ತರಿಸಿಕೊಳ್ಳುತ್ತಾರೆ.

‘ಕಾಂಗ್ರೆಸ್‌ ಕಡ್ಲೆಬೀಜ’ಯಿಂದ ‘ಮೋದಿ ಮಸಾಲ’ಕ್ಕೆ ಹೆಸರು ಬದಲಿಸಿ ಎಂದು ಬಸವನಗುಡಿಯ ನಿವಾಸಿ ಸುಬ್ಬಮ್ಮ ಅಂಗಂಡಿ ಎಂಬುವರು ತಮ್ಮ ಕಾಂಡಿಮೆಂಟ್ಸ್‌ನ ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.

‘ಪ್ರಜಾವಾಣಿ’ ಶ್ರೀನಿವಾಸ ಬ್ರಾಹ್ಮಿನ್ಸ್‌ ಬೇಕರಿಗೆ ಭೇಟಿ ನೀಡಿದಾಗ, ಮರುನಾಮಕರಣದ ಬಗ್ಗೆ ವದಂತಿ ಹಬ್ಬಿದೆ. ಇದು ನಿಜವೇ ಎಂದು ಅನೇಕ ಗ್ರಾಹಕರು ಮಾಲೀಕರನ್ನು ಕೇಳಿದ್ದಾರೆಂದು ಗೊತ್ತಾಯಿತು.

ಬಸವನಗುಡಿಯ ಗಾಂಧಿ ಬಜಾರ್‌ನ ಡಿವಿಜಿ ರಸ್ತೆಯಲ್ಲಿರುವಶ್ರೀನಿವಾಸ ಬ್ರಾಹ್ಮಿನ್ಸ್‌ ಬೇಕರಿ
ಬಸವನಗುಡಿಯ ಗಾಂಧಿ ಬಜಾರ್‌ನ ಡಿವಿಜಿ ರಸ್ತೆಯಲ್ಲಿರುವಶ್ರೀನಿವಾಸ ಬ್ರಾಹ್ಮಿನ್ಸ್‌ ಬೇಕರಿ

ಈ ಕುರಿತ ವದಂತಿಗಳನ್ನು ತಳ್ಳಿಹಾಕಿದ ಮಾಲೀಕರಾದ ವತ್ಸಲಾ ರಾಮಪ್ರಸಾದ್‌ ಅಯ್ಯಂಗಾರ್‌, ತಮ್ಮ ಬೇಕರಿಯ ತಿನಿಸುಗಳ 63 ವರ್ಷದ ಇತಿಹಾಸವನ್ನು ನೆನಪಿಸಿಕೊಂಡರು.

‘ಇದು ನನ್ನ ಮಾವ ರಾಮಸ್ವಾಮಿ ಅಯ್ಯಂಗಾರ್‌ ಅವರು 1956ರಲ್ಲಿ ಕಾಂಗ್ರೆಸ್ ಎಂದು ಹೆಸರಿಸಿದರು. ಅಂದು ಇದ್ದ ರೇಷನಿಂಗ್‌ನಿಂದಾಗಿ ಮೈದಾ ಪೂರೈಕೆ ಕೊರತೆ ಇತ್ತು. ಆ ವೇಳೆ, ಅವರು ಹಲವು ತಿಂಡಿಗಳ ಜತೆಗೆ ಶೇಂಗಾ ಬೀಜದ ಬೇಳೆಗಳ ತಿಂಡಿಯನ್ನು ತಯಾರಿಸಲು ಆರಂಭಿಸಿದರು’ ಎಂದು ಅಂದಿನ ಪ್ರಾರಂಭದ ದಿನಗಳನ್ನು ಮೆಲುಕುಹಾಕಿದರು.

ಅದರ ಖ್ಯಾತಿ ಏನು?

‘ನನ್ನ ಮಾನವ ನಂತರ ಪತಿ ರಾಮಪ್ರಸಾದ್‌ ಅಯ್ಯಂಗಾರ್‌ ಈ ವ್ಯವಹಾರವನ್ನು ವಹಿಸಿಕೊಂಡರು. ಅವರು ಬಹಳಷ್ಟು ಪ್ರಯೋಗಗಳನ್ನು ಮಾಡಿದರು ಮತ್ತು ರುಚಿಯನ್ನು ಹೆಚ್ಚಿಸಲು ಹಲವು ಪದಾರ್ಥಗಳನ್ನು ಸೇರಿಸಿದರು. ಗುಣಮಟ್ಟ ಮತ್ತು ರುಚಿಯಿಂದಾಗಿ ಈ ತಿನಿಸು ಹೆಚ್ಚು ಹೆಚ್ಚು ಖ್ಯಾತಿ ಪಡೆಯಿತು. ಮೂಲ ರುಚಿಯನ್ನು ಹಾಗೇ ಉಳಿಸಿಕೊಂಡು ಬರಲಾಗಿದೆ’ ಎಂದು ವಿವರಿಸಿದರು.

ಮೋದಿ ವಿಜಯದ ನಂತರ ತಿನಿಸಿಗೆ ಮರುನಾಮಕರಣ ಮಾಡುತ್ತೀರಾ?

ಇಲ್ಲ. ನಾವು ಅದನ್ನು ಎಂದಿಗೂ ಮಾಡುವುದಿಲ್ಲ. ಈ ಪ್ರದೇಶದಲ್ಲಿನ ಕೆಲವು ಸಣ್ಣ ಅಂಗಡಿಗಳು ತಮ್ಮ ಕಡ್ಲೆಕಾಯಿ ತಿನಿಸುಗಳಿಗೆ ಹೆಸಿರಿಸಿರಬಹುದು. ಆದರೆ, ಇದು ನಮ್ಮ ಮೂಲ ಉತ್ಪನ್ನ ಮತ್ತು ನಾವು ಅದನ್ನು ಎಂದಿಗೂ ಮರು ನಾಮಕರಣ ಮಾಡುವುದಿಲ್ಲ.

ವದಂತಿ ಹೇಗೆ ಹರಡಿತು?

ಕೆಲವು ಟಿ.ವಿ ವಾಹಿನಿಗಳು ನಾವು ಬದಲಾವಣೆ ಮಾಡಿದ್ದೇವೆ ಎಂದು ಹೇಳಿಕೊಂಡವು. ಆದರೆ, ನಾವು ಮರುನಾಮಕರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ಅದನ್ನು ಅಲ್ಲಿಗೆ ಕೈಬಿಟ್ಟರು. ಈ ಕುರಿತು ಅನೇಕ ಗ್ರಾಹಕರೂ ಕೇಳಿದ್ದಾರೆ.

ಉತ್ತಮ ಹಾಸ್ಯ!

‘ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ‘ಕಾಂಗ್ರೆಸ್‌’ ಒಂದೇ ಒಂದು ಸ್ಥಳದಲ್ಲಿ ಗಟ್ಟಿಯಾಗಿ ನಿಂತಿದೆಯೆಂದರೆ ಅದು ಶ್ರೀನಿವಾಸ ಬ್ರಾಹ್ಮಿನ್ಸ್‌ ಬೇಕರಿಯಲ್ಲಿ!’

ಎರಡು ತಿನಿಸುಗಳು

ಶ್ರೀನಿವಾಸ ಬ್ರಾಹ್ಮಿನ್ಸ್‌ ಬೇಕರಿಯಲ್ಲಿ ಅತ್ಯಂತ ಜನಪ್ರಿಯ ತಿನಿಸು ಕಾಂಗ್ರೆಸ್: ಕರಿಬೇವು, ಇಂಗು, ಅರಿಶಿಣ ಪುಡಿ, ಉಪ್ಪು ಬಳಸಿ ಹದವಾಗಿ ಮಾಡಿದ ‘ಕಾಂಗ್ರೆಸ್ ಕಡ್ಲೆಬೀಜ’. ಇದರ ಜತೆಗೆ ಬೇಕರಿಯಲ್ಲಿ ‘ಕಾಂಗ್ರೆಸ್‌ ಬನ್‌ ಮಸಲಾ’ ಕೂಡಾ ಒಂದು. ಬೆಣ್ಣೆ ಮತ್ತು ಕಾಂಗ್ರೆಸ್‌ ಕಡ್ಲೆಕಾಯಿ ತುಂಬಿದ ಬನ್‌ ತಯಾರಿಸಲಾಗುತ್ತದೆ.

ದಕ್ಷಿಣ ಬೆಂಗಳೂರಿನಲ್ಲಿ ಸಂಜೆ ತಳ್ಳುವ ಗಾಡಿಗಳಲ್ಲಿ ಮತ್ತೊಂದು ಬಗೆಯ ತಿನಿಸನ್ನೂ ನೀಡುತ್ತವೆ. ಕೊತ್ತಂಬರಿ, ಈರುಳ್ಳಿ, ತುರಿದ ಕ್ಯಾರೆಟ್‌ ಹಾಗೂ ಕಾಂಗ್ರೆಸ್‌ ಕಡ್ಲೆಕಾಯಿಯಿಂದ ಅಲಂಕರಿಸಿದ ಸ್ನ್ಯಾಕ್ಸ್‌ ಜನರ ಬಾಯಿಗೆ ರುಚಿ ನೀಡುತ್ತಿವೆ.

‘ಕಾಂಗ್ರೆಸ್‌ ಕಡ್ಲೆಬೀಜ’
‘ಕಾಂಗ್ರೆಸ್‌ ಕಡ್ಲೆಬೀಜ’

‘ಕಾಂಗ್ರೆಸ್‌ ಕಡ್ಲೆಕಾಯಿ’ ಮನೆಯಲ್ಲಿ ತಯಾರಿಸುವುದು ಹೇಗೆ?

ಎರಡು ಕಪ್‌ ಒಣ ಕಡಲೆ(ಶೇಂಗಾ) ಬೀಜವನ್ನು 10 ನಿಮಿಷ ಮಧ್ಯಮ–ಕಡಿಮೆ ಶಾಖದಲ್ಲಿ ಹದವಾಗಿ ಉರಿಯಬೇಕು. ಕೆಲ ಸಮಯ ತಣ್ಣಗಾಗಲು ಬಿಡಬೇಕು. ಬಳಿಕ, ಸಿಪ್ಪೆಯನ್ನು ತೆಗೆಯಬೇಕು. ಸಿಪ್ಪೆ ತೆಗೆಯಲು ಟವೆಲ್‌ ಬಳಸಬಹುದು. ನಂತರ, ಕಾಳನ್ನು ಹಿಸುಕಿ ಬೇಳೆಗಳನ್ನಾಗಿಸಬೇಕು.

ಸಣ್ಣದಾದ ಉರಿಯಲ್ಲಿ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ. ಅದರಲ್ಲಿ ಕರಿಬೇವು ಹಾಕಿ ಹದವಾಗಿ ಕರಿಯಿರಿ. ಬಳಿಕ, ಇಂಗು ಹಾಕಿ. ನಂತರ, ಬೇಳೆಯಾಗಿರುವ ಕಡಲೆ ಬೀಜಗಳನ್ನು ಹಾಕಿ, ಅದರ ಮೇಲೆ ಅರಿಶಿಣ ಪುಡಿ, ಖಾರದ ಪುಡಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಹಾಕಿ. ಸಣ್ಣದಾದ ಉರಿಯಲ್ಲಿಯೇ ಒಂದೆರೆಡು ನಿಮಿಷ ಚನ್ನಾಗಿ ಮಿಶ್ರಣ ಮಾಡಿ, ಒಲೆಯಿಂದ ಕೆಳಗಿಳಿಸಿ. ತಣ್ಣಗಾದ ಬಳಿಕ ಕೈಯಿಂದ ಮತ್ತೊಮ್ಮೆ ಮಿಶ್ರಣ ಮಾಡಿ. ಈ ವೇಳೆ ಕರಿಬೇವಿನ ಕರಿದ ಎಲೆಗಳು ಪುಡಿಯಾಗುತ್ತವೆ. ಅದಕ್ಕೆ ಹೊಂದಿಕೆಯಾಗುತ್ತದೆ.
ಸಿದ್ಧವಾದ ‘ಕಡ್ಲೆಕಾಯಿ’ಯನ್ನು ಬೆಚ್ಚಗಿರುವಾಗಲೇ ಅಥವಾ ತಣ್ಣಗಾದ ಮೇಲೆ ಸವಿಯಿರಿ. ಅದು ನಿಮ್ಮ ಆಯ್ಕೆ. ಗಾಳಿ, ಬೆಳಕು ಇರುವ ಸ್ಥಳದಲ್ಲಿ ಅದನ್ನು ಸಂಗ್ರಹಿಸಿಡಬಹುದು.

‘ಕಾಂಗ್ರೆಸ್‌ ಬನ್‌ ಮಸಲಾ’
‘ಕಾಂಗ್ರೆಸ್‌ ಬನ್‌ ಮಸಲಾ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT