ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುರುಕಲು ತಿನಿಸಿಗೂ ಉಂಟು ಆರೋಗ್ಯದ ನಂಟು

Published : 22 ಸೆಪ್ಟೆಂಬರ್ 2020, 19:30 IST
ಫಾಲೋ ಮಾಡಿ
Comments
ADVERTISEMENT
""

ಬೆಳಗಿನ ಉಪಾಹಾರ, ಮಧ್ಯಾಹ್ನದ ಹಾಗೂ ಸಂಜೆಯ ಊಟದ ಬಗ್ಗೆ ಅಷ್ಟು ಚಿಂತೆ ಮಾಡಬೇಕಾಗಿಲ್ಲ. ಆದರೆ ಮಧ್ಯೆ ಹಸಿವಾದಾಗ ಒಂದಿಷ್ಟು ಕುರುಕಲು ತಿನಿಸು ಹೊಟ್ಟೆಗೆ ಸೇರಬೇಕಾಗುತ್ತದೆ. ಆದರೆ ಅದು ಆರೋಗ್ಯಕರವಾಗಿರಬೇಕು ಅಷ್ಟೆ.

ನಮ್ಮ ಕಾಲದಲ್ಲೇ ಚೆನ್ನಾಗಿತ್ತು ಎಂಬ ಮಾತು ಹಿರಿಯರಿಂದ ಸಾಕಷ್ಟು ಸಲ ಕೇಳಿರಬಹುದು, ಕೇಳಿ ಬೇಸರದಿಂದ ಲೊಚಗುಟ್ಟಿರಲೂಬಹುದು ಇಂದಿನ ಮಿಲೇನಿಯಲ್‌ ತಲೆಮಾರಿನವರು. ಆದರೆ ಊಟ, ತಿಂಡಿಯ ವಿಷಯಕ್ಕೆ ಬಂದಾಗ ಆ ಕಾಲದ್ದೇ ಈಗ ಮತ್ತೆ ಬಂದಿದೆ. ಹೌದು, ಒಂದು ಕಾಲವಿತ್ತು.. ಎನ್ನುವುದನ್ನು ಬಿಟ್ಟು ಕಳೆದ ಮಾರ್ಚ್‌ಗಿಂತ ಮೊದಲು ಹೇಗಿತ್ತು ಎಂದು ಯೋಚಿಸಿ. ಬೆಳಗಿನ ಉಪಾಹಾರ ತಿಂದರೆ ತಿಂದೆವು, ಇಲ್ಲ ಗಡಿಬಿಡಿಯಲ್ಲಿ ಒಂದಿಷ್ಟು ಬ್ರೆಡ್‌ಗೆ ಜಾಮ್‌ ಅಥವಾ ಬೆಣ್ಣೆಯನ್ನು ಸೋಕಿಸಿ ಬಾಯಲ್ಲಿ ತುರುಕಿಕೊಂಡು ಹತ್ತಿಪ್ಪತ್ತು ಕಿ.ಮೀ. ದೂರವಿರುವ ಕಚೇರಿಯನ್ನು ಸರಿಯಾದ ಸಮಯಕ್ಕೆ ತಲುಪಿದರೆ ಸಾಕು ಎನ್ನುತ್ತಿದ್ದವರು ಎಷ್ಟೋ ಮಂದಿ. ಇನ್ನು ಊಟಕ್ಕೂ ಕೆಲವರು ಜಂಕ್ ಫುಡ್‌ ತಿನ್ನುವುದು, ಖಾಲಿ ಮಾಡುವ ಕಾಫಿ, ಟೀ ಕಪ್‌ಗೆ ಲೆಕ್ಕವೇ ಇರಲಿಲ್ಲ.

ಈಗ... ಬೆಳಿಗ್ಗೆ ಪದ್ಧತಿಯ ಪ್ರಕಾರ ಉಪಾಹಾರಕ್ಕೆ ದೋಸೆ, ಇಡ್ಲಿ, ಉಪ್ಪಿಟ್ಟು, ಅವಲಕ್ಕಿ, ಶ್ಯಾವಿಗೆ ಬಾಥ್‌, ಪೊಂಗಲ್‌, ಚಪಾತಿ, ಪೂರಿ, ಅಕ್ಕಿ ರೊಟ್ಟಿ, ಆಮ್ಲೆಟ್‌.. ಎಂದೆಲ್ಲ ಸಿದ್ಧವಾಗುತ್ತಿವೆ. 11ಕ್ಕೆಲ್ಲ ಕಾಫಿಯ ಜೊತೆ ಬಿಸ್ಕಿಟ್‌, ಮತ್ತೆ ಒಂದು– ಒಂದೂವರೆಗೆಲ್ಲ ಚಪಾತಿ– ಪಲ್ಯವೋ, ಅನ್ನ– ಸಾಂಬಾರ್‌, ಮುದ್ದೆ– ಸಾರು.. ಅವರವರ ಪ್ರಾದೇಶೀಕತೆಗೆ ಅನುಗುಣವಾಗಿ ಊಟ. ಸಂಜೆ ಮತ್ತೆ ಬೇಕಿದ್ದರೆ ಕಾಫಿ, ಇಲ್ಲ ಲೈಟಾಗಿ ಸ್ನ್ಯಾಕ್ಸ್‌, ರಾತ್ರಿ ಎಂಟಕ್ಕೆಲ್ಲ ಲೈಟಾಗಿ ಊಟ.. ಸರಿಯಾದ ಸಮಯಕ್ಕೆ ಊಟ– ತಿಂಡಿ, ಅದೂ ಆರೋಗ್ಯಕರವಾಗಿದ್ದರೆ ಪೊಗದಸ್ತಾಗಿ ನಿದ್ರೆ ಬರದೆ ಇನ್ನೇನು?

ಬೆಳಗಿನ ಉಪಾಹಾರ, ಮಧ್ಯಾಹ್ನದ ಹಾಗೂ ಸಂಜೆಯ ಊಟದ ಬಗ್ಗೆ ಅಷ್ಟು ಚಿಂತೆ ಮಾಡಬೇಕಾಗಿಲ್ಲ. ಆದರೆ ಮಧ್ಯೆ ಹಸಿವಾದಾಗ ಒಂದಿಷ್ಟು ಕುರುಕಲು ತಿನಿಸು ಹೊಟ್ಟೆಗೆ ಸೇರಬೇಕಾಗುತ್ತದೆ. ಅದೂ ಕೂಡ ಆರೋಗ್ಯಕರ ತಿನಿಸು.

ಏನು ತಿನ್ನಬಹುದು?

ಊಟಕ್ಕಿಂತ ತಾಸಿನ ಮುಂಚೆ ಹಸಿವಾದರೆ ಕ್ಯಾರಟ್‌ ಅನ್ನು ಉದ್ದಕ್ಕೆ ಸೀಳಿ, ನಟ್ಟೆಲ್ಲಾ ಅಥವಾ ಪೀನಟ್‌ ಬಟರ್‌ನಲ್ಲಿ ಅದ್ದಿ ತಿನ್ನಬಹುದು. ಕ್ಯಾರಟ್‌ನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ವಿಟಮಿನ್‌ ಎ ಮತ್ತು ಪೋಟ್ಯಾಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ.

ಮಧ್ಯಾಹ್ನ 3–4 ಗಂಟೆಯ ಹೊತ್ತಿಗೆ ಬೇಕಿದ್ದರೆ ಒಂದು ಸಣ್ಣ ಸ್ಯಾಂಡ್‌ವಿಚ್ ಮಾಡಿಕೊಂಡು ಸೇವಿಸಬಹುದು. ಗೋಧಿ ಅಥವಾ ಬಹು ಧಾನ್ಯದ ಸಣ್ಣ ಗಾತ್ರದ ಬ್ರೆಡ್‌ ಪೀಸ್‌ ತೆಗೆದುಕೊಳ್ಳಿ. ಮಧ್ಯೆ ಈರುಳ್ಳಿ, ಕ್ಯಾರಟ್‌, ಸೌತೆಕಾಯಿಯನ್ನು ಸೇರಿಸಿಕೊಳ್ಳಿ. ಮಾಂಸಾಹಾರಿಗಳಾಗಿದ್ದರೆ ಒಂದೆರಡು ಪೀಸ್‌ ಚಿಕನ್‌ ಅಥವಾ ಎಗ್‌ ಸೇರಿಸಬಹುದು. ಇದು ಕೂಡ ಸಾಕಷ್ಟು ವಿಟಮಿನ್‌ ಹಾಗೂ ಖನಿಜಾಂಶ ಹೊಂದಿದ್ದು, ನಿಮ್ಮ ಹಸಿವನ್ನೂ ನೀಗಿಸುತ್ತದೆ. ಹಾಗೆಯೇ ಪೀನಟ್‌ ಬಟರ್‌ ಅನ್ನು ಕೂಡ ಬ್ರೆಡ್‌ ಚೂರಿನ ಮಧ್ಯೆ ಸೇರಿಸಿ.

ಬ್ರೆಡ್‌ ಬೇಡ ಎನ್ನುವವರು ಸೇಬು ಮತ್ತು ಪೀನಟ್‌ ಬಟರ್‌ ಅನ್ನು ಸೇವಿಸಬಹುದು. ಇದು ತನ್ನದೇ ಆದ ವಿಶಿಷ್ಟ ರುಚಿಯನ್ನು ಹೊಂದಿರುತ್ತದೆ. ವಿವಿಧ ಬಗೆಯ ಸೇಬು ಲಭ್ಯವಿದ್ದು, ಇದರಲ್ಲಿ ನಾರಿನಂಶವೂ ಜಾಸ್ತಿ. ಸಕ್ಕರೆರಹಿತ ಪೀನಟ್‌ ಬಟರ್‌ ಅನ್ನು ತಂದಿಟ್ಟುಕೊಳ್ಳಿ.

ಇನ್ನು ಮೊಸರಂತೂ ಮನೆಯಲ್ಲಿ ಇದ್ದೇ ಇರುತ್ತದೆ. ಒಂದು ಕಪ್‌ ಮೊಸರಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ. ಇದಕ್ಕೆ ಒಂದಿಷ್ಟು ಹಣ್ಣಿನ ಚೂರುಗಳನ್ನು ಹಾಕಿಕೊಂಡು ತಿಂದರೆ ಫಲ ಪಂಚಾಮೃತದ ನೆನಪು ಬಾರದಿರದು. ಜೊತೆಗೆ ಪ್ರೊಟೀನ್‌ ಕೂಡ ಸಾಕಷ್ಟು ಲಭ್ಯ.

ಪಾಪ್‌ಕಾರ್ನ್‌ ಕೇವಲ ಟಿವಿ ವೀಕ್ಷಣೆ ಮಾಡುವಾಗ ತಿನ್ನುವ ತಿನಿಸಲ್ಲ. ಎರಡೂ ಊಟದ ಮಧ್ಯೆ ಹಸಿವಾದರೆ ನಾರಿನಂಶ ಜಾಸ್ತಿ ಇರುವ ಪಾಪ್‌ಕಾರ್ನ್‌ ತಿನ್ನಬಹುದು. ಸಾದಾ ಪಾಪ್‌ಕಾರ್ನ್‌ ತಿನ್ನಲು ಬೇಸರವಾದರೆ ಇದಕ್ಕೆ ಚೀಸ್‌ ಸೇರಿಸಿಕೊಳ್ಳಿ.

ಇವೆಲ್ಲವೂ ಬೋರ್‌ ಎನಿಸಿದರೆ ಒಂದಿಷ್ಟು ಉಪ್ಪು– ಸಿಹಿ ಬೆರೆತ ಜೀರಾ ಕ್ರ್ಯಾಕರ್ಸ್‌ ಒಂದು ಪ್ಲೇಟ್‌ನಲ್ಲಿ ಸುರಿದು ಮೇಲೆ ಒಂದಿಷ್ಟು ತುರಿದ ಕ್ಯಾರಟ್‌, ಕ್ಯಾಬೇಜ್‌ ಸೇರಿಸಿ. ವಿಶಿಷ್ಟವಾದ ರುಚಿ ಕೊಡುವ ಇದಕ್ಕೆ ಕಾಟೇಜ್‌ ಚೀಸ್‌ ಕೂಡ ಸೇರಿಸಬಹುದು.

ಇನ್ನು ತಾಜಾ ಹಣ್ಣಿನ ಚೂರುಗಳ ಜೊತೆ ಬಾದಾಮಿ, ಒಣ ದ್ರಾಕ್ಷಿ ಸೇರಿಸಿ ತಿನ್ನಬಹುದು. ಇದರಲ್ಲಿ ಬೇಕಾದಷ್ಟು ವಿಟಮಿನ್‌, ನಾರಿನಂಶ ಹಾಗೂ ಆರೋಗ್ಯಕರ ಕೊಬ್ಬು ಲಭ್ಯ. ಹಾಗೆಯೇ ಬಾಳೆಹಣ್ಣು, ಅಕ್ರೂಟ್‌, ಸೇಬು ಕೂಡಾ ಒಳ್ಳೆಯ ಕಾಂಬಿನೇಶನ್‌.

ಒಂದು ಕಪ್‌ ಸೂಪ್‌ ಕುಡಿದರಂತೂ ಎಷ್ಟು ಹಸಿವಾದರೂ ಹೊಟ್ಟೆ ತುಂಬಿಬಿಡುತ್ತದೆ. ಈಗಂತೂ ಇನ್‌ಸ್ಟಂಟ್‌ ಸೂಪ್‌ ಲಭ್ಯ. ಬಿಸಿ ನೀರಿಗೆ ಹಾಗೆ ಕದಡಿದರೆ ಸೂಪ್‌ ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT