ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂದು ನೋಡಿ - ಪೋರ್ಕ್‌ ಎಗ್ ಫ್ರೈ

Last Updated 16 ನವೆಂಬರ್ 2019, 4:11 IST
ಅಕ್ಷರ ಗಾತ್ರ

ನೀವು ಮಾಂಸಾಹಾರಿಗಳೇ? ಪ್ರತಿದಿನ ಚಿಕನ್‌, ಮೀನು, ಮೊಟ್ಟೆ ಇಷ್ಟೇ ತಿಂದು ಬೇಸರವಾಗಿದೆಯೇ? ಹಾಗಾದರೆ ಒಮ್ಮೆ ಹಂದಿ (ಪೋರ್ಕ್‌) ಖಾದ್ಯಗಳನ್ನು ತಯಾರಿಸಿ ನೋಡಿ. ಮನೆಯಲ್ಲೇ ಅದನ್ನೆಲ್ಲಾ ಹೇಗಪ್ಪಾ ಮಾಡೋದು ಎಂದು ಯೋಚಿಸಬೇಡಿ. ಚಿಕನ್, ಮೀನು ಖಾದ್ಯ ತಯಾರಿಸುವ ಸಮಯದಲ್ಲೇ ಹಂದಿಮಾಂಸದ ಖಾದ್ಯಗಳನ್ನು ತಯಾರಿಸಿ ಸವಿಯಬಹುದು. ಅದರಲ್ಲೂ ಪೋರ್ಕ್ ಡ್ರೈ ಫ್ರೈ, ಬಿರಿಯಾನಿ, ಹಂದಿಮಾಂಸದ ಮೊಟ್ಟೆ ಫ್ರೈ ಇವೆಲ್ಲಾ ಒಮ್ಮೆ ತಯಾರಿಸಿ ತಿಂದರೆ ನಿಮ್ಮ ನಾಲಿಗೆ ಮತ್ತೆ ಮತ್ತೆ ಅದನ್ನೇ ಬೇಕೆನ್ನುವುದು ಸುಳ್ಳಲ್ಲ ಎನ್ನುತ್ತಾರೆ ಎಂ. ಎಸ್. ಧರ್ಮೇಂದ್ರ

ಪೋರ್ಕ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1/2 ಕೆ.ಜಿ. (ಕೆಂಪು ಮಾಂಸ ಮತ್ತು ಸ್ವಲ್ಪ ಚರ್ಬಿ), ಸೋನಾಮಸೂರಿ ಅಕ್ಕಿ – 1/2 ಅರ್ಧ ಕೆ.ಜಿ., ಶುಂಠಿ - ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಬೆಳ್ಳುಳ್ಳಿ – 1 ಉಂಡೆ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಪುದಿನ ಸೊಪ್ಪು – ಸ್ವಲ್ಪ, ಖಾರದ ಪುಡಿ – 3 ಚಮಚ, ಗರಂಮಸಾಲೆ – 1 ಚಮಚ, ಅರಿಸಿನ ಪುಡಿ – ಸ್ವಲ್ಪ, ಕಾಳುಮೆಣಸು – 1/2 ಚಮಚ, ಏಲಕ್ಕಿ – 1, ಲವಂಗ – 6, ಚಕ್ಕೆ – 2 ಚಿಕ್ಕ ತುಂಡುಗಳು, ಸೋಂಪು ಕಾಳು ಸ್ವಲ್ಪ, ಪತ್ರೆ – 2 ಎಸಳು, ಈರುಳ್ಳಿ – 3, ಟೊಮೆಟೊ – 2, ಹಸಿಮೆಣಸಿನಕಾಯಿ – 6, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಚೆನ್ನಾಗಿತೊಳೆದ ಪೋರ್ಕ್‌ಗೆ ಅರಿಸಿನಪುಡಿ, ಖಾರದಪುಡಿ, ಗರಂ ಮಸಾಲೆ, ಕತ್ತರಿಸಿದ 4 ಹಸಿಮೆಣಸಿನಕಾಯಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಒಂದು ಗಂಟೆ ಫ್ರಿಜ್‌ನಲ್ಲಿಡಿ.

ಈರುಳ್ಳಿ, ಟೊಮೆಟೊ, 2 ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಪುದಿನಸೊಪ್ಪುಗಳನ್ನು ಕತ್ತರಿಸಿಟ್ಟುಕೊಳ್ಳಿ.

ಕುಕ್ಕರ್‌ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಸೋಂಪು ಕಾಳು, ಪತ್ರೆ, ಜಜ್ಜಿದ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ, ಕೊತ್ತಂಬರಿಸೊಪ್ಪು, ಪುದಿನಸೊಪ್ಪು, ಸ್ವಲ್ಪ ಉಪ್ಪು ಮತ್ತು ಖಾರದಪುಡಿ ಹಾಕಿ ಫ್ರೈ ಮಾಡಿ. ನಂತರ ಫ್ರಿಜ್‌ನಲ್ಲಿಟ್ಟಿದ್ದ ಪೋರ್ಕ್ ಅನ್ನು ಹಾಕಿ 20 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ. ಆಮೇಲೆ ಒಂದು ಲೋಟ ಅಕ್ಕಿಗೆ ಒಂದೂವರೆಯಷ್ಟು ನೀರನ್ನು ಹಾಕಿ, ರುಚಿ ನೋಡಿ ಕಡಿಮೆಯಿದ್ದನ್ನು (ಉಪ್ಪು, ಖಾರ) ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ ಬೇಯಲು ಇಡಿ.

ಪೋರ್ಕ್ ಡ್ರೈ ಫ್ರೈ

ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1ಕೆ.ಜಿ. (ಮಾಂಸ ಮತ್ತು ಚರ್ಬಿ), ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಕೊತ್ತಂಬರಿಸೊಪ್ಪು – ಸ್ವಲ್ಪ, ಪುದಿನಸೊಪ್ಪು – ಸ್ವಲ್ಪ, ಗರಂಮಸಾಲೆ – 1 ಚಮಚ, ಖಾರದಪುಡಿ – 1 ಚಮಚ, ಕೊತ್ತಂಬರಿಪುಡಿ – 6 ಚಮಚ, ಅರಿಸಿನಪುಡಿ – ಅರ್ಧ ಚಮಚ, ಕಾಳುಮೆಣಸಿನಪುಡಿ – 1 ಚಮಚ, ಈರುಳ್ಳಿ – 3, ಹಸಿಮೆಣಸಿನಕಾಯಿ – 8, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:ಚೆನ್ನಾಗಿ ತೊಳೆದ ಪೋರ್ಕ್‌ಗೆ ಅರಿಸಿನಪುಡಿ, ಖಾರದಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಒಂದು ಗಂಟೆ ಫ್ರಿಜ್‌ನಲ್ಲಿಡಿ.

ಕೊತ್ತಂಬರಿಪುಡಿಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಕಂದು ಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ.

ತೆರೆದ ಪಾತ್ರೆಗೆ ಎಣ್ಣೆ, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಚೆನ್ನಾಗಿ ತೊಳೆದ ಪೋರ್ಕ್, ಉಪ್ಪು, ಕೊತ್ತಂಬರಿಸೊಪ್ಪು, ಪುದಿನಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಆಮೇಲೆ ಗರಂಮಸಾಲೆ, ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಬೇಯಿಸಿ. ನೀರಿನಂಶ ಕಡಿಮೆಯಾದಾಗ ಸ್ವಲ್ಪ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ತಿರುಗಿಸುತ್ತಾ ಬೇಯಿಸುತ್ತಿರಿ. ಬೇಕೆಂದಾಗ ನೀರನ್ನು ಹಾಕಿ. ಮಾಂಸ ಬೆಂದ ನಂತರ ಖಾರದಪುಡಿ ಹಾಕಿ ನೀರಿಲ್ಲದಂತೆ ಡ್ರೈ ಆಗುವ ತನಕ ಬೇಯಿಸಿ. ಕೊನೆಗೆ ಹುರಿದ ಕೊತ್ತಂಬರಿಪುಡಿಯನ್ನು ಹಾಕಿ ಚೆನ್ನಾಗಿ ಮಾಂಸಕ್ಕೆ ಹಿಡಿಯುವಂತೆ ತಿರುಗಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ.

ಹಂದಿಮಾಂಸದ ಸಾರು

ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1 ಕೆ.ಜಿ. (ಮಾಂಸ ಮತ್ತು ಚರ್ಬಿ), ಶುಂಠಿ – 2 ಇಂಚು ಉದ್ದದ್ದು, ಬೆಳ್ಳುಳ್ಳಿ – 1 ಉಂಡೆ, ಕೊತ್ತಂಬರಿಸೊಪ್ಪು – ಸ್ವಲ್ಪ, ಪುದಿನಸೊಪ್ಪು – ಸ್ವಲ್ಪ, ಕೊತ್ತಂಬರಿಪುಡಿ – 3 ಚಮಚ, ಖಾರದಪುಡಿ – 3 ಚಮಚ, ಅರಿಸಿನಪುಡಿ – ಸ್ವಲ್ಪ, ಚಕ್ಕೆ – 2 ಇಂಚು ಉದ್ದದ್ದು, ಲವಂಗ – 5, ಮೆಣಸು – 10, ಕೊಬ್ಬರಿತುರಿ – ಸ್ವಲ್ಪ, ಗಸೆಗಸೆ – ಸ್ವಲ್ಪ, ಈರುಳ್ಳಿ – 3, ಟೊಮೆಟೊ – 3, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಕೊಬ್ಬರಿತುರಿ, ಶುಂಠಿ, ಬೆಳ್ಳುಳ್ಳಿ, ಗಸೆಗಸೆ, ಚಕ್ಕೆ, ಲವಂಗ, ಮೆಣಸುಗಳನ್ನು ರುಬ್ಬಿಟ್ಟುಕೊಳ್ಳಿ.ಈರುಳ್ಳಿ, ಕೊತ್ತಂಬರಿಸೊಪ್ಪು, ಪುದಿನಸೊಪ್ಪು, ಟೊಮೆಟೊ ಕತ್ತರಿಸಿಟ್ಟುಕೊಳ್ಳಿ.

ಚೆನ್ನಾಗಿ ತೊಳೆದ ಪೋರ್ಕ್ ಅನ್ನು ಕುಕ್ಕರ್‌ನಲ್ಲಿ ಹಾಕಿ ಉಪ್ಪು ಬೆರೆಸಿ ನಂತರ ಸ್ವಲ್ಪ ಅರಿಸಿನಪುಡಿ ಮತ್ತು ಕತ್ತರಿಸಿಟ್ಟುಕೊಂಡಿರುವ ಪದಾರ್ಥಗಳು, ರುಬ್ಬಿದ ಮಿಶ್ರಣ, ಕೊತ್ತಂಬರಿಪುಡಿ, ಖಾರದಪುಡಿ, ಸ್ವಲ್ಪ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ. ಮುಕ್ಕಾಲು ಭಾಗ ಬೇಯಿಸಿಕೊಳ್ಳಿ. ಆರಿದ ನಂತರ ಮುಚ್ಚಳ ತೆಗೆದು ಚೆನ್ನಾಗಿ ಬೇಯಿಸಿ (ಒಗ್ಗರಣೆಗೆ ಎಣ್ಣೆಯ ಅವಶ್ಯಕತೆಯಿಲ್ಲ).

ಸಾರಿನ ಹಂದಿಮಾಂಸದ ಮೊಟ್ಟೆ ಫ್ರೈ

ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1/2 ಕೆ.ಜಿ (ಮಾಂಸ ಮತ್ತು ಚರ್ಬಿ), ಮೊಟ್ಟೆ – 2, ಬೆಳ್ಳುಳ್ಳಿ – 1ಉಂಡೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಹಸಿಮೆಣಸಿನ ಕಾಯಿ – 4, ಕೊತ್ತಂಬರಿಸೊಪ್ಪು – ಸ್ವಲ್ಪ, ಪುದಿನಸೊಪ್ಪು – ಸ್ವಲ್ಪ, ಕರಿಬೇವು – ಒಂದು ಕಡ್ಡಿ, ಕೊತ್ತಂಬರಿಪುಡಿ – 1 ಚಮಚ, ಖಾರದಪುಡಿ – 1 ಚಮಚ, ಅರಿಸಿನಪುಡಿ – ಸ್ವಲ್ಪ, ಗರಂಮಸಾಲೆ – ಒಂದು ಚಮಚ (ಮನೆಯಲ್ಲಿ ತಯಾರಿಸಿದ್ದು), ಕಾಳುಮೆಣಸಿನ ಪುಡಿ – ಸ್ವಲ್ಪ, ಜೀರಿಗೆಪುಡಿ – ಸ್ವಲ್ಪ, ಸೋಯಾ ಸಾಸ್ – ಸ್ವಲ್ಪ, ವಿನಿಗರ್ – ಸ್ವಲ್ಪ, ಈರುಳ್ಳಿ – 1, ಸಾಸಿವೆ, ನಿಂಬೆಹಣ್ಣು ಒಂದು, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.‌

ತಯಾರಿಸುವ ವಿಧಾನ:ಹಂದಿಮಾಂಸದ ಸಾಂಬಾರನ್ನು ಮಾಡಿಟ್ಟುಕೊಳ್ಳಿ.ಈರುಳ್ಳಿ, ಕೊತ್ತಂಬರಿಸೊಪ್ಪು, ಹಸಿಮೆಣಸಿನಕಾಯಿ, ಪುದಿನಸೊಪ್ಪು ಕತ್ತರಿಸಿಟ್ಟುಕೊಳ್ಳಿ. ಫ್ರೈ ಪ್ಯಾನ್‍ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ. ಕತ್ತರಿಸಿದ ಹಸಿಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದಿನಸೊಪ್ಪು, ಸ್ವಲ್ಪ ಉಪ್ಪು ಮತ್ತು ಪೆಪ್ಪರ್ ಪುಡಿ ಹಾಕಿ ಫ್ರೈ ಮಾಡಿ. ಆಮೇಲೆ ಸಾಂಬಾರಿನಲ್ಲಿ ಬೆಂದಿರುವ ಮಾಂಸ ಮಾತ್ರ ಹಾಕಿ ಸ್ವಲ್ಪ ಫ್ರೈ ಮಾಡಿದ ಮೇಲೆ ಗರಂಮಸಾಲೆ, ಖಾರದಪುಡಿ, ಕೊತ್ತಂಬರಿಪುಡಿ, ಉಪ್ಪು ಹಾಕಿ ಫ್ರೈ ಮಾಡಿ. ಆಮೇಲೆ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿ. ನಂತರ ಸ್ವಲ್ಪ ಸಾಂಬಾರು ಹಾಕಿ ಬೇಯಿಸಿ ಕೊನೆಗೆ ಕೊತ್ತಂಬರಿ ಉದುರಿಸಿ ನಿಂಬೆರಸ ಹಾಕಿ ಮುಚ್ಚಳ ಮುಚ್ಚಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT