ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡಿಯಲ್ಲಿ ಬಗೆಬಗೆಯ ಖಾದ್ಯ

Last Updated 6 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಶ್ರಾವಣ ಮಾಸ ಮುಗಿದು ವಾರ ಕಳೆದಿದೆ. ತಿಂಗಳುಗಟ್ಟಲೇ ಮಾಂಸಾಹಾರ ತಿನ್ನದೇ ಮಾಂಸಾಹಾರಿಗಳು ಕಾತುರದಿಂದ ಕಾಯುತ್ತಾರೆ. ಶ್ರಾವಣ ಮುಗಿಯುವುದನ್ನೇ ಕಾಯುತ್ತಿದ್ದವರು ಮಾಂಸ ತಿನ್ನಲು ಹಪಹಪಿಸುತ್ತಾರೆ. ಸದಾ ಕೋಳಿ, ಮೀನು, ಮೊಟ್ಟೆ ತಿನ್ನುವುದು ಮಾಂಸಾಹಾರಿಗಳಿಗೆ ವಿಶೇಷವಲ್ಲ. ಆದರೆ ಅಪರೂಪಕ್ಕೊಮ್ಮೆ ಏಡಿ, ಸಿಗಡಿಯಂತಹ ಮಾಂಸಗಳಲ್ಲಿ ವಿಭಿನ್ನ ಖಾದ್ಯಗಳನ್ನು ತಯಾರಿಸಿ ತಿಂದರೆ ಬಾಯಿಗೂ ರುಚಿ, ಮನಸ್ಸಿಗೂ ಹಿತ. ಇದು ಏಡಿಗಳು ಗದ್ದೆ, ಕೆರೆ, ತೊರೆಗಳಲ್ಲಿ ಕಾಲಿಗೆ ತೊಡರುವ ಕಾಲ. ಅಲ್ಲಿಂದಲೇ ತಾಜಾ ಏಡಿ ಹಿಡಿದು ತಂದರೆ ಮನೆಯಲ್ಲಿಯೇ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಸವಿಯಬಹುದು. ಕೊಂಚ ಖಾರ ಜಾಸ್ತಿ ಸೇರಿಸಿ ತಿಂದರೆ ಉತ್ತಮ ಎನ್ನುತ್ತಾರೆ ರೇಷ್ಮಾ

ಏಡಿ ಮಸಾಲ

ಬೇಕಾಗುವ ಸಾಮಗ್ರಿಗಳು: ಏಡಿ – 8, ಹುಣಸೆಹಣ್ಣು – ಸಣ್ಣ ನಿಂಬೆ ಗಾತ್ರದ್ದು, ಬಿಸಿನೀರು – 1/2, ಈರುಳ್ಳಿ – 2 (ಉದ್ದಕ್ಕೆ ಕತ್ತರಿಸಿಕೊಂಡಿದ್ದು), ಟೊಮೆಟೊ – 2 ಸಣ್ಣಗೆ ಹೆಚ್ಚಿಕೊಂಡಿದ್ದು, ಕೆಂಪು ಮೆಣಸಿನಕಾಯಿ – 8, ಶುಂಠಿ –ಬೆಳ್ಳುಳ್ಳಿ ಪೇಸ್ಟ್ – 3 ಟೇಬಲ್ ಚಮಚ, ತೆಂಗಿನತುರಿ – 1, 1/2 ಕಪ್‌, ಕೊತ್ತಂಬರಿ ಪೌಡರ್ – 2 ಟೇಬಲ್ ಚಮಚ, ಜೀರಿಗೆ ಪುಡಿ – 2 ಟೇಬಲ್ ಚಮಚ, ಅರಿಸಿನ ಪುಡಿ – 1/2 ಟೀ ಚಮಚ, ಕೆಂಪುಮೆಣಸಿನ ಪುಡಿ – 1/2 ಟೀ ಚಮಚ, ಹಸಿಮೆಣಸು – 2, ಎಣ್ಣೆ – 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನೀರು – ಬೇಕಾಗುವಷ್ಟು
ತಯಾರಿಸುವ ವಿಧಾನ: ಮೊದಲು ಏಡಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಅದರಿಂದ ಕಾಲುಗಳನ್ನು ಬೇರ್ಪಡಿಸಿ ಇಟ್ಟುಕೊಳ್ಳಿ. ನಂತರ ಏಡಿಯ ದೇಹದ ಭಾಗವನ್ನು ಅರ್ಧಕ್ಕೆ ಕತ್ತರಿಸಿಕೊಳ್ಳಿ. ನಂತರ ಹುಣಸೆಹಣ್ಣನ್ನು ಬಿಸಿನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಕೊಳ್ಳಿ. ನಂತರ ಅದನ್ನು ಚೆನ್ನಾಗಿ ಮಸೆದು ಹುಣಸೆರಸ ತಯಾರಿಸಿಟ್ಟುಕೊಳ್ಳಿ. ನಂತ ಈರುಳ್ಳಿ, ಟೊಮೆಟೊ, ತೆಂಗಿನತುರಿ, ಬೆಳ್ಳುಳ್ಳಿ, ಕೆಂಪುಮೆಣಸನ್ನು ಮಿಕ್ಸಿಗೆ ಜಾರಿಗೆ ಹಾಕಿ, ಅದಕ್ಕೆ ಹುಣಸೆರಸ ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಮಸಾಲೆ ತಯಾರಿಸಿಕೊಳ್ಳಿ.

ನಂತರ ದಪ್ಪ ತಳದ ಪಾತ್ರೆಯೊಂದನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಎಣ್ಣೆಗೆ ಹಸಿಮೆಣಸು ಹಾಗೂ ರುಬ್ಬಿಕೊಂಡ ಮಸಾಲೆ ಸೇರಿಸಿ ಚೆನ್ನಾಗಿ 5 ನಿಮಿಷಗಳ ಕಾಲ ಮಿಕ್ಸ್ ಮಾಡಿ. ಆಗಾಗ ತಳ ಹಿಡಿಯದಂತೆ ಕೈಯಾಡಿಸುತ್ತಿರಿ. ನಂತರ ಅದಕ್ಕೆ ನಿಮಗೆ ಬೇಕಾಗುವಷ್ಟು ಬಿಸಿನೀರು ಸೇರಿಸಿ ಗ್ರೇವಿ ತಯಾರಿಸಿಕೊಳ್ಳಿ. ನಂತರ ಸಣ್ಣ ಉರಿಯಲ್ಲಿ 10 ನಿಮಿಷ ಕುದಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಏಡಿ ತುಂಡುಗಳನ್ನು ಹಾಕಿ 10 ನಿಮಿಷಗಳ ಕಾಲ ಪಾತ್ರೆಯನ್ನು ಮುಚ್ಚಿಟ್ಟು ಚೆನ್ನಾಗಿ ಕುದಿಸಿ.

ಇದನ್ನು ಕುಚ್ಚಲಕ್ಕಿ ಅನ್ನ ಅಥವಾ ಜೀರಾ ರೈಸ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಏಡಿ ಘೀ ರೋಸ್ಟ್‌

ಬೇಕಾಗುವ ಸಾಮಗ್ರಿಗಳು: ಏಡಿ – 6, ತುಪ್ಪ – 2 ಟೇಬಲ್ ಚಮಚ, ತೆಂಗಿನೆಣ್ಣೆ – 5 ಟೇಬಲ್ ಚಮಚ
ನೆನೆಸಿಡಲು: ಮೊಸರು – 1/4 ಕಪ್‌, ಅರಿಸಿನ ಪುಡಿ – 1/4 ಟೀ ಚಮಚ, ಮೆಣಸಿನಪುಡಿ – 1 ಟೀ ಚಮಚ, ಉಪ್ಪು – 1/2 ಟೀ ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ, ಜೋಳದ ಹಿಟ್ಟು – 1 ಟೀ ಚಮಚ, ನಿಂಬೆರಸ – 1 ಟೀ ಚಮಚ
ರುಬ್ಬಿಕೊಳ್ಳಲು: ಈರುಳ್ಳಿ – 1 ಚಿಕ್ಕದು, ಕೊತ್ತಂಬರಿ – 1 ಟೇಬಲ್ ಚಮಚ, ಕೆಂಪುಮೆಣಸು – 8, ಬೆಳ್ಳುಳ್ಳಿ – 6 ಎಸಳು, ಜೀರಿಗೆ – 1/2 ಟೀ ಚಮಚ, ಹುಣಸೆರಸ – ಸ್ವಲ್ಪ, ಉಪ್ಪು – ರುಚಿಗೆ
ತಯಾರಿಸುವ ವಿಧಾನ: ಮಸಾಲ ತಯಾರಿಸಿಕೊಳ್ಳುವುದು: ಮೊದಲು ಮೇಲೆ ನೆನೆಸಿಡಲು ತಿಳಿಸಿದ ಪದಾರ್ಥಗಳನ್ನು ಸೇರಿಸಿ ಮಿಕ್ಸ್‌ ಮಾಡಿ. ಅದರೊಂದಿಗೆ ಏಡಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ. ರುಬ್ಬಿಕೊಳ್ಳಲು ತಿಳಿಸಿದ ಪದಾರ್ಥಗಳನ್ನು ಬಾಣಲೆಯಲ್ಲಿ ಬಿಸಿ ಮಾಡಿಕೊಂಡು ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಪಾನ್ ಒಂದಕ್ಕೆ ತೆಂಗಿನೆಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಏಡಿ ತುಂಡುಗಳನ್ನು ಸೇರಿಸಿ 2 ನಿಮಿಷ ಹುರಿಯಿರಿ. ನಂತರ ಏಡಿಯನ್ನು ತೆಗೆದಿರಿಸಿ ಅದೇ ಪಾನ್‌ನಲ್ಲಿ ಸ್ವಲ್ಪ ಎಣ್ಣೆ ಸೇರಿಸಿ ನೆನೆಸಿಟ್ಟ ಪದಾರ್ಥಗಳು ಹಾಗೂ ರುಬ್ಬಿಕೊಂಡ ಮಸಾಲೆ ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ. ನಂತರ ಮಸಾಲೆ ಕಂದು ಬಣ್ಣಕ್ಕೆ ಬರುವವರೆಗೂ ಕುದಿಸಬೇಕು. ನಂತರ ಮೊದಲೇ ಹುರಿದುಕೊಂಡ ಏಡಿಯನ್ನು ಮಸಾಲೆಗೆ ಸೇರಿಸಿ ಅದಕ್ಕೆ 1/4 ಕಪ್‌ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಏಡಿಗೆ ಪೂರ್ಣವಾಗಿ ಹಿಡಿದುಕೊಳ್ಳಬೇಕು. ನಂತರ ಅದನ್ನು 2 ನಿಮಿಷ ಕುದಿಸಿ ಅದಕ್ಕೆ ತುಪ್ಪ ಸೇರಿಸಿ. ಬಿಸಿ ಇರುವಾಗಲೇ ತಿನ್ನುವುದು ಚೆಂದ.

ಏಡಿ ಸುಕ್ಕ

ಬೇಕಾಗುವ ಸಾಮಗ್ರಿಗಳು: ಏಡಿ – 4, ಈರುಳ್ಳಿ – 1 ಮಧ್ಯಮ ಗಾತ್ರದ್ದು (ಸಣ್ಣಗೆ ಹೆಚ್ಚಿಕೊಂಡಿದ್ದು), ತೆಂಗಿನತುರಿ – 1 ಕಪ್‌, ಕರಿಬೇವಿನ ಎಲೆ – 10 ರಿಂದ 15, ಸಾಸಿವೆ – 1 ಟೀ ಚಮಚ, ಎಣ್ಣೆ – 2 ಚಮಚ, ಉಪ್ಪು – ರುಚಿಗೆ,ಮಸಾಲೆಗೆಕೆಂಪುಮೆಣಸು – 8, ಬೆಳ್ಳುಳ್ಳಿ – 3 ಎಸಳು, ಶುಂಠಿ – 1/2 ಇಂಚು, ಕೊತ್ತಂಬರಿ – 1/2 ಟೀ ಚಮಚ, ಜೀರಿಗೆ – 1/ ಟೀ ಚಮಚ, ಹುಣಸೆಹಣ್ಣು – ನಿಂಬೆಹಣ್ಣು ಗಾತ್ರದ್ದು, ಅರಿಸಿನ – 1/4 ಟೀ ಚಮಚ
ತಯಾರಿಸುವ ವಿಧಾನ: ಮಸಾಲೆಗೆ ರುಬ್ಬಿಕೊಳ್ಳಲು ತಿಳಿಸಿದ ಎಲ್ಲಾ ಸಾಮಗ್ರಿಗಳಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದಕ್ಕೆ ತೆಂಗಿನತುರಿ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಿ. ಅದು ಸಿಡಿಯಲು ಆರಂಭಿಸಿದಾಗ ಕರಿಬೇವಿನಎಲೆ ಹಾಗೂ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಅದಕ್ಕೆ ರುಬ್ಬಿಕೊಂಡ ಮಸಾಲ ಸೇರಿಸಿ ಮಧ್ಯಮ ಉರಿಯಲ್ಲಿ ಹಸಿವಾಸನೆ ಹೋಗಿ ಎಣ್ಣೆ ಬಿಡುವವರೆಗೂ ಕುದಿಸಬೇಕು. ನಂತರ ತೊಳೆದಿಟ್ಟ ಏಡಿ ಹಾಗೂ ಅರ್ಧ ಕಪ್ ನೀರು ಸೇರಿಸಿ 5 ನಿಮಿಷ ಚೆನ್ನಾಗಿ ಕುದಿಸಬೇಕು. ಇದಕ್ಕೆ ಬೇಕಾದರೆ ಒಂದು ಟೀ ಚಮಚ ಎಣ್ಣೆ ಸೇರಿಸಬಹುದು. ಇದರಿಂದ ಮಸಾಲೆಗೆ ಚೆನ್ನಾಗಿ ಬಣ್ಣ ಬರುತ್ತದೆ. ಏಡಿ ಬೆಂದಾದ ಮೇಲೆ ಇಳಿಸಿ ಬಿಸಿಬಿಸಿಯಾಗಿ ತಿಂದರೆ ಸುಕ್ಕ ಚೆನ್ನಾಗಿರುತ್ತದೆ.

ಕೇರಳ ಶೈಲಿ ಏಡಿ ರೋಸ್ಟ್

ಬೇಕಾಗುವ ಸಾಮಗ್ರಿಗಳು: ದೊಡ್ಡ ಏಡಿ – 2, ಈರುಳ್ಳಿ – 2 (ಸಣ್ಣಗೆ ಹೆಚ್ಚಿದ್ದು), ಹಸಿಮೆಣಸು – 2 (ಕತ್ತರಿಸಿದ್ದು), ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಚಮಚ, ಟೊಮೆಟೊ – 1 ಸಣ್ಣದು (ಹೆಚ್ಚಿದ್ದು), ಅರಿಸಿನ ಪುಡಿ – 1/2 ಟೀ ಚಮಚ, ಮೆಣಸಿನಪುಡಿ – 1 ಟೇಬಲ್ ಚಮಚ, ಕೊತ್ತಂಬರಿ ಪುಡಿ – 1ಟೇಬಲ್ ಚಮಚ, ಕಾಳುಮೆಣಸಿನ ಪುಡಿ – 1ಟೇಬಲ್ ಚಮಚ, ಗರಂ ಮಸಾಲ – 1 ಟೀ ಚಮಚ, ಸಾಸಿವೆ – 1 ಟೀ ಚಮಚ, ಕರಿಬೇವಿನ ಎಲೆ – ಸ್ವಲ್ಪ, ಉಪ್ಪು – ರುಚಿಗೆ, ಎಣ್ಣೆ – ಬೇಕಾದಷ್ಟು
ತಯಾರಿಸುವ ವಿಧಾನ:
ಮಸಾಲೆ ತಯಾರಿಸಿಕೊಳ್ಳುವುದು: ಮೊದಲು ಪಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಹಾಕಿ ಸಿಡಿದ ಮೇಲೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಕರಿಬೇವು ಹಾಗೂ ಸ್ವಲ್ಪ ಉಪ‍್ಪು ಸೇರಿಸಿ. ಈರುಳ್ಳಿ ಕಂದು ಬಣ್ಣ ಬರುವವರೆಗೂ ಬಾಡಿಸಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಹೆಚ್ಚಿಕೊಂಡ ಟೊಮೆಟೊ ಸೇರಿಸಿ ಚೆನ್ನಾಗಿ ಕುದಿಸಿ. ಟೊಮೆಟೊ ಚೆನ್ನಾಗಿ ಬಾಡುವವರೆಗೂ ಸಣ್ಣ ಉರಿಯಲ್ಲಿಟ್ಟು ಮಿಕ್ಸ್ ಮಾಡಿ. ಅದಕ್ಕೆ ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ ಹಾಗೂ ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಆ ಮಿಶ್ರಣಕ್ಕೆ ಏಡಿ ಸೇರಿಸಿ ಮಸಾಲೆಯೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ. ಕಾಲು ಲೋಟ ನೀರು ಸೇರಿಸಿ ಮಧ್ಯಮ ಉರಿಯಲ್ಲಿ 6– 8 ನಿಮಿಷ ಕುದಿಸಿ. ನಂತರ ‌ಗ್ರೇವಿ ದಪ್ಪ ಆಗುವವರೆಗೂ ಕುದಿಸಿಬೇಕು. ಜೊತೆಗೆ ಆಗಾಗ ಸೌಟಿನಲ್ಲಿ ಮಿಕ್ಸ್ ಮಾಡುತ್ತಿರಬೇಕು. ಕೊನೆಯಲ್ಲಿ ಕರಿಬೇವಿನ ಎಲೆ ಸೇರಿಸಿ, ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಇರಿಸಿ. ಗ್ಯಾಸ್ ಆರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT