ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆಯ ತಿಂಡಿಗೆ ಬೆಂಡೆಕಾಯಿ ಪಕೋಡ, ಅಣಬೆ ಭಜ್ಜಿ

Last Updated 14 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""

ನಳಪಾಕ: ಸಂಜೆಯಾಗುತ್ತಿದ್ದಂತೆ ಬಾಯಿಯಾಡಿಸಲು ಏನಾದ್ರೂ ಬೇಕು ಎನ್ನಿಸುವುದು ಸಹಜ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳು ಸಂಜೆ ಹೊತ್ತಿಗೆ ತಿಂಡಿಗಾಗಿ ಹಪಹಪಿಸುತ್ತಾರೆ. ಅವರಿಗೆ ಬೇಕರಿ ತಿಂಡಿಗಳನ್ನು ನೀಡಿ ಖುಷಿ ಪಡಿಸುವ ಬದಲು ಮನೆಯಲ್ಲೇ ಕುರುಕಲು ತಿಂಡಿ ತಯಾರಿಸಿ ನೀಡಬಹುದು. ಮನೆಯಲ್ಲಿ ತಯಾರಿಸುವ ಸಿಹಿ ಜೋಳದ ವಡೆ, ಬೆಂಡೆಕಾಯಿ ಪಕೋಡ, ಅಣಬೆ ಭುಜಿಯಾದಂತಹ ತಿಂಡಿಗಳು ಆರೋಗ್ಯಕ್ಕೂ ಉತ್ತಮ. ಇದನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ ಸರಿತಾ ಪುರುಷೋತ್ತಮ್

ಸಿಹಿ ಜೋಳದ ವಡೆ

ಬೇಕಾಗುವ ಸಾಮಗ್ರಿಗಳು: ಸಿಹಿ ಜೋಳ – 1 ಕಪ್‌, ಅಕ್ಕಿಹಿಟ್ಟು – 1 ಕಪ್‌, ಹಸಿಮೆಣಸು – 3– 4, ಕರಿಬೇವು, ಬೆಳ್ಳುಳ್ಳಿ – 4– 5 ಎಸಳು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ, ಎಣ್ಣೆ – ಕರಿಯಲು.


ತಯಾರಿಸುವ ವಿಧಾನ: ಬಿಡಿಸಿದ ಸಿಹಿ ಜೋಳವನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು ಇವೆಲ್ಲವನ್ನೂ ತರಿತರಿಯಾಗಿ ರುಬ್ಬಿಕೊಂಡು ಆ ಮಿಶ್ರಣಕ್ಕೆ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪನ್ನು ಸೇರಿಸಿ. ಅದಕ್ಕೆ ಉಪ್ಪು ಹಾಗೂ ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ವಡೆ ತರಹ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಬಿಸಿ ಬಿಸಿ, ರುಚಿ ರುಚಿಯಾದ ಸಿಹಿ ಜೋಳದ ವಡೆ ರೆಡಿ.

ಬೆಂಡೆಕಾಯಿ ಪಕೋಡ

ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ – 100 ಗ್ರಾಂ, ಮೈದಾಹಿಟ್ಟು – 100 ಗ್ರಾಂ, ಜೋಳದಹಿಟ್ಟು – 100 ಗ್ರಾಂ, ಖಾರದಪುಡಿ – ಸ್ವಲ್ಪ, ಗರಂ ಮಸಾಲೆ– ಸ್ವಲ್ಪ, ಉಪ್ಪು, ಎಣ್ಣೆ.

ತಯಾರಿಸುವ ವಿಧಾನ: ಬೆಂಡೆಕಾಯಿಯನ್ನು ಚೆನ್ನಾಗಿ ಉದ್ದಕ್ಕೆ ಸೀಳಿಕೊಳ್ಳಿ. ನಂತರ ಸಮಪ್ರಮಾಣದಲ್ಲಿ ಮೈದಾಹಿಟ್ಟು ಹಾಗೂ ಜೋಳದಹಿಟ್ಟನ್ನು ಸೇರಿಸಿಕೊಳ್ಳಿ. ಅದಕ್ಕೆ ಖಾರದಪುಡಿ, ಗರಂಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಓಂಕಾಳು ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ. ನಂತರ ಎಣ್ಣೆಯಲ್ಲಿ ಕರಿದರೆ ಗರಿಗರಿ ಬೆಂಡೆಕಾಯಿ ಪಕೋಡ ಸಿದ್ಧ.

ಅಣಬೆ ಭಜ್ಜಿ

ಬೇಕಾಗುವ ಸಾಮಗ್ರಿಗಳು: ಬಟನ್ ಅಣಬೆ – 10, ಕಾರ್ನ್‌ಪ್ಲೋರ್ – 1/2 ಕಪ್‌, ಅಕ್ಕಿಹಿಟ್ಟು – 1/2 ಕಪ್‌, ಕರಿಬೇವು, ಬೆಳ್ಳುಳ್ಳಿ – 5– 6 ಎಸಳು, ಹಸಿಮೆಣಸಿನಕಾಯಿ – 5– 6, ಜೀರಿಗೆಪುಡಿ – ಸ್ವಲ್ಪ, ಕೊತ್ತಂಬರಿಪುಡಿ, ಖಾರದ ಪುಡಿ – ಸ್ವಲ್ಪ, ಉಪ್ಪು, ಎಣ್ಣೆ – ಕರಿಯಲು.


ತಯಾರಿಸುವ ವಿಧಾನ: ತೊಳೆದು ಸ್ವಚ್ಛಗೊಳಿಸಿದ ಅಣಬೆಯನ್ನು ದಪ್ಪನಾಗಿ ಹೆಚ್ಚಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಸಮಪ್ರಮಾಣದಲ್ಲಿ ಅಕ್ಕಿಹಿಟ್ಟು ಮತ್ತು ಕಾರ್ನ್‌ಫ್ಲೋರ್ ತೆಗೆದುಕೊಂಡು ಅದಕ್ಕೆ ಉಪ್ಪು, ಸ್ಪಲ್ಪ ಖಾರದಪುಡಿ, ಜೀರಿಗೆ, ಕೊತ್ತಂಬರಿಪುಡಿ ಮತ್ತು ತರಿತರಿಯಾಗಿ ರುಬ್ಬಿಕೊಂಡ ಬೆಳ್ಳುಳ್ಳಿ, ಕರಿಬೇವು, ಹಸಿಮೆಣಸಿನಕಾಯಿ ಹಾಗೂ ನೀರು ಸೇರಿಸಿ ಕಲೆಸಿ. ಆ ಹಿಟ್ಟಿನಲ್ಲಿ ಅಣಬೆ ತುಂಡುಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಈಗ ರುಚಿ ರುಚಿಯಾದ ಅಣಬೆ ಭಜ್ಜಿ ತಿನ್ನಲು ಸಿದ್ಧ.

ಮಿಶ್ರಬೇಳೆ ಚಕ್ಕುಲಿ

ಬೇಕಾಗುವ ಸಾಮಗ್ರಿಗಳು: ಅಕ್ಕಿಹಿಟ್ಟು – 4 ಕಪ್‌, ಕಡ್ಲೆಬೇಳೆ – 1/4 ಕಪ್‌, ಹೆಸರುಬೇಳೆ – 1/4 ಕಪ್‌, ಉದ್ದಿನಬೇಳೆ – 1 ಕಪ್‌, ಹುರಿಗಡಲೆ – 1/4 ಕಪ್‌, ಬಿಳಿ ಎಳ್ಳು – ಸ್ವಲ್ಪ, ಇಂಗು – ಚಿಟಿಕೆ, ಖಾರದಪುಡಿ – ಸ್ವಲ್ಪ, ಎಣ್ಣೆ – ಕರಿಯಲು.‌


ತಯಾರಿಸುವ ವಿಧಾನ: ಕಡ್ಲೆಬೇಳೆ, ಹೆಸರುಬೇಳೆ, ಉದ್ದಿನಬೇಳೆ ಇವುಗಳನ್ನು ಹುರಿದುಕೊಳ್ಳಬೇಕು. ಆರಿದ ನಂತರ ಹುರಿಗಡಲೆ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಅದಕ್ಕೆ ಅಕ್ಕಿಹಿಟ್ಟು ಸೇರಿಸಿ. ನಂತರ ಈ ಮಿಶ್ರಣಕ್ಕೆ ರುಚಿಗೆ ತಕ್ಕಂತೆ ಉಪ್ಪು, ಖಾರದಪುಡಿ, ಬಿಳಿ ಎಳ್ಳು, ಸ್ವಲ್ಪ ಇಂಗು, ಒಂದೆರಡು ಚಮಚ ಬಿಸಿ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಅದಕ್ಕೆ ಬೆಚ್ಚಗಿನ ನೀರು ಹಾಕಿ ಚಕ್ಕುಲಿಹಿಟ್ಟಿನ ಹದಕ್ಕೆ ಕಲೆಸಿ. ಚಕ್ಕುಲಿ ಒರಳಿನಿಂದ ಚಕ್ಕುಲಿ ಮಾಡಿ ಕಾದ ಎಣ್ಣೆಯಲ್ಲಿ ಕರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT