ಬುಧವಾರ, ಜೂನ್ 29, 2022
24 °C

ಮೂವತ್ತು ನಿಮಿಷದಲ್ಲಿ ಲೆಮನ್‌ ಗ್ರಿಲ್ಡ್‌ ಚಿಕನ್‌!

ಇಬ್ಬನಿ Updated:

ಅಕ್ಷರ ಗಾತ್ರ : | |

ನಿಂಬೆಹಣ್ಣು ಹಿಂಡಿದರೆ ಹಾಲು ಕೆಡಬಹುದು. ಆದರೆ ಮಾಂಸಾಹಾರ ಖಾದ್ಯಗಳಿಗೆ ಹುಳಿ ಹಿಂಡಿದಷ್ಟೂ ರುಚಿ ಹೆಚ್ಚು. ನಿಂಬೆಹಣ್ಣಿನ ಗ್ರಿಲ್ಡ್‌ ಚಿಕನ್‌ ಬಾಯಲ್ಲಿ ನೀರೂರಿಸುತ್ತದೆ. ಇದನ್ನು ಮನೆಯಲ್ಲೇ ಸುಲಭ ವಿಧಾನದಲ್ಲಿ, ಅರ್ಧ ಗಂಟೆಗೊಳಗೆ ತಯಾರಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಮೂಳೆ ರಹಿತ, ಚರ್ಮ ರಹಿತ 6 ಚಿಕನ್‌ ಬ್ರೆಸ್ಟ್‌ ಪೀಸ್‌ಗಳು, 1/4 ಕಪ್‌ ಅಡುಗೆ ಎಣ್ಣೆ, 3 ನಿಂಬೆಹಣ್ಣು, ಸ್ವಲ್ಪ ತಾಜಾ ಅಥವಾ ಒಣಗಿದ ಒರೆಗನೊ ಸೊಪ್ಪು (ಪುದೀನ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಸೊಪ್ಪು), 4 ಬೆಳ್ಳುಳ್ಳಿ ಎಸಳು, 1/2 ಟೀ ಸ್ಪೂನ್‌ ಉಪ್ಪು, 1/4 ಟೀ ಸ್ಪೂನ್‌ ಕಾಳು ಮೆಣಸು, ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ: ಚಿಕನ್‌ ಪೀಸ್‌ಗಳನ್ನು ಚೆನ್ನಾಗಿ ತೊಳೆಯಿರಿ. ದೊಡ್ಡ ಪಾತ್ರೆಯಲ್ಲಿ ಅಡುಗೆ ಎಣ್ಣೆ, ನಿಂಬೆರಸ, ಒರೆಗನೊ, ಬೆಳ್ಳುಳ್ಳಿ, ಉಪ್ಪು ಮತ್ತು ಕಾಳುಮೆಣಸನ್ನು ಸೇರಿಸಿಕೊಳ್ಳಿ. ಬ್ರೆಸ್ಟ್‌ ಪೀಸ್‌ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀರಿನ ಹನಿಗಳು ಸೋಕದಂತೆ 30 ನಿಮಿಷಗಳ ಕಾಲ ಹಾಗೆ ಸಂರಕ್ಷಿಸಿ ಇಡಿ.

ಗ್ರಿಲ್‌ ಪ್ಯಾನ್‌ಅನ್ನು ಸಾಧಾರಣ ಫ್ಲೇಮ್‌ನಲ್ಲಿ ಬಿಸಿ ಮಾಡಿ. ಬ್ರೆಸ್ಟ್‌ ಪೀಸ್‌ಗಳನ್ನು 7 ರಿಂದ10 ನಿಮಿಷಗಳ ಕಾಲ ಗ್ರಿಲ್‌ ಮೇಲೆ ಇಡಿ. ನಂತರ ಹೆಂಚಿನ ಕಡ್ಡಿ ಸಹಾಯದಿಂದ ಮಗುಚಿ ಹಾಕುತ್ತ ಬೇಯಿಸಿ. ಮುಂದಿನ ಹತ್ತು ನಿಮಿಷದಲ್ಲಿ ದ್ರವಾಂಶವೆಲ್ಲ ಆರಿಹೋಗಿ ಡ್ರೈ ಆಗುತ್ತದೆ. ಗ್ರಿಲ್‌ನಿಂದ ಚೆನ್ನಾಗಿ ಬೆಂದ ಬ್ರೆಸ್ಟ್‌ ಪೀಸ್‌ಗಳನ್ನು ಹೊರಗೆ ತೆಗೆದಿಡಿ. ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಕತ್ತರಿಸಿದ ನಿಂಬೆಹಣ್ಣಿನ ತುಂಡುಗಳನ್ನು ಪಕ್ಕದಲ್ಲಿಡಿ. ಹುಳಿಯನ್ನು ಹೆಚ್ಚು ಇಷ್ಟಪಡುವವರು ನಿಂಬೆ ಹಿಂಡಿಕೊಂಡರೆ ರುಚಿ ದುಪ್ಪಟ್ಟಾಗುತ್ತದೆ.

ಬಂಗುಡೆ ತವಾ ಫ್ರೈ

 ಮೀನಿನ ಫ್ರೈ ಎಂದರೆ ಇಷ್ಟ. ಆದರೆ ಅದನ್ನು ಸ್ವಚ್ಛಗೊಳಿಸುವುದು ಫ್ರೈ ಮಾಡುವುದಕ್ಕಿಂತ ಕಷ್ಟ ಎಂದು ಭಾವಿಸುವವರೇ ಹೆಚ್ಚು. ಆದರೆ ಈಗೀಗ ಹೆಚ್ಚಿನ ಮೀನು ಮಾರುಕಟ್ಟೆಗಳಲ್ಲಿ ಅವರೇ ಮೀನುಗಳನ್ನು ಸ್ವಚ್ಛಗೊಳಿಸಿ ಕೊಡುತ್ತಾರೆ. ಮಸಾಲೆ ಪೇಸ್ಟ್‌ ಸಿದ್ಧ ಪಡಿಸಿಕೊಳ್ಳುವುದನ್ನು ಕರಗತ ಮಾಡಿಕೊಂಡರೆ, ತವಾದಲ್ಲಿ ಮೀನು ಫ್ರೈ ಆಗುವವರೆಗೆ ತಾಳ್ಮೆ ಕಂಡುಕೊಂಡರೆ ಗರಿಗರಿ ತವಾ ಫ್ರೈ ಊಟದ ಗಮ್ಮತ್ತೇ ಬೇರೆ.

ಬೇಕಾಗುವ ಸಾಮಗ್ರಿಗಳು: 3 ಬಂಗುಡೆ ಮೀನು, ಸ್ವಲ್ಪ ಅಡುಗೆ ಎಣ್ಣೆ, 2 ನಿಂಬೆಹಣ್ಣು (1 ಮಸಾಲೆಗೆ, 1 ಸಿದ್ಧಗೊಂಡ ಫ್ರೈ ಜೊತೆಗೆ), 1 ಈರುಳ್ಳಿ, 1 ಚಮಚ ಕೆಂಪು ಮೆಣಸಿನ ಪುಡಿ, 1/2 ಚಮಚ ಕೊತ್ತಂಬರಿ ಪುಡಿ,  1/2 ಪೂನ್‌ ಕಾಳು ಮೆಣಸಿನ ಪುಡಿ, 1/4 ಚಮಚ ಅರಿಶಿಣ ಪುಡಿ, 1/2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಚಮಚ ಪುಡಿ ಉಪ್ಪು, 2 ಚಮಚಗಳಷ್ಟು ಅಕ್ಕಿಹಿಟ್ಟು, 2 ಚಮಚ ಜೋಳದ ಹಿಟ್ಟು, 1 ಚಮಚ ಮೈದಾ ಹಿಟ್ಟು

ತಯಾರಿಸುವ ವಿಧಾನ: ಮೀನುಗಳನ್ನು ಚೆನ್ನಾಗಿ ತೊಳೆಯಿರಿ. ನೀರು ಆರಿದ ಬಳಿದ ಸ್ವಲ್ಪ ಅರಿಶಿಣ ಪುಡಿ ಮತ್ತು ಉಪ್ಪನ್ನು ಮೀನುಗಳ ಎರಡು ಬದಿಯ ಮೇಲೆ ಹಾಕಿ. ಸ್ವಲ್ಪ ಹೊತ್ತಿನ ಬಳಿಕ ಪುನಃ ಮೀನುಗಳನ್ನು ತೊಳೆಯಿರಿ. ನಂತರ ಮೀನುಗಳ ಎರಡು ಬದಿಯಲ್ಲಿ ಎರಡೆರಡು ಅಡ್ಡ ಪಟ್ಟಿಗಳಂತೆ ಕೊಂಚ ಆಳವಾಗಿ ಚಾಕುವಿನಿಂದ ಗೀರಿ. ಇದು ಮಸಾಲೆಯನ್ನು ಮೀನಿನ ಮಾಂಸದೊಳಗೆ ಸೇರಿಕೊಳ್ಳಲು ಸಹಕರಿಸುತ್ತದೆ.

ಒಂದು ಸಣ್ಣ ಪಾತ್ರೆಯಲ್ಲಿ ಈರುಳ್ಳಿಯನ್ನು ಹೊರತು ಪಡಿಸಿ ಮೇಲೆ ಸೂಚಿಸಿದ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಒಂದು ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲೆಸಿ. ರುಚಿಗೆ ತಕ್ಕಷ್ಟು ಉಪ್ಪಿರಲಿ. ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್‌ನಂತೆ ಸಿದ್ಧಪಡಿಸಿಕೊಳ್ಳಿ. ಮೀನುಗಳ ಎರಡೂ ಬದಿಗೆ ಮಸಾಲೆಯನ್ನು ಚೆನ್ನಾಗಿ ತಿಕ್ಕಿ. ಒಂದು ಗಂಟೆ ಕಾಲ ಹಾಗೆಯೇ ಇಡಿ.

ತವಾಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಸ್ಟವ್‌ ಆನ್‌ ಮಾಡಿ. ತವಾ ಸುತ್ತಲೂ ಎಣ್ಣೆ ಹರಡುವಂತೆ, ಚೆನ್ನಾಗಿ ಬಿಸಿಯಾಗುವಂತೆ ನೋಡಿಕೊಳ್ಳಿ. ಬಾಲದ ಸಹಾಯದಿಂದ ಮೆದುವಾಗಿ ತವಾದ ಮೇಲೆ ಮೀನುಗಳನ್ನು ಇರಿಸಿ. ಸ್ಟವ್‌ ಸಾಧಾರಣ ಫ್ಲೇಮ್‌ನಲ್ಲಿರಲಿ.  ಎರಡರಿಂದ ಮೂರು ನಿಮಿಷದ ಬಳಿಕ ಮೀನುಗಳನ್ನು ಮಗುಚಿ ಬೇಯಿಸಿ. ಸ್ವಲ್ಪ ಹೊತ್ತಿನ ಬಳಿಕ ಪುನಃ ಮಗುಚಿ ಬೇಯಿಸಿ. ಮೀನಿನ ಮೇಲಿನ ಎಣ್ಣೆ/ದ್ರವಾಂಶವೆಲ್ಲ ಆರುವಂತೆ ನೋಡಿಕೊಳ್ಳಿ. ಸಿದ್ಧಗೊಂಡ ಬಂಗುಡೆ ತವಾ ಫ್ರೈ ಜೊತೆಗೆ ಕತ್ತರಿಸಿದ ನಿಂಬೆ, ಈರುಳ್ಳಿಯನ್ನು ಇಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು