ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯಕ್ಕಿರಲಿ ಹೊಸರುಚಿಯ ರಂಗು

Last Updated 27 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಎಗ್‌ ಡ್ರಾಪ್‌ ಸೂಪ್‌

ಬೇಕಾಗುವ ಸಾಮಗ್ರಿಗಳು: ಚಿಕನ್‌ ಬ್ರಾಥ್‌ (ಕೋಳಿ ಮಾಂಸ, ಕ್ಯಾರಟ್‌, ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪನ್ನು ನೀರಲ್ಲಿ ಬೇಯಿಸಿದ ನಂತರ ಸಿಗುವ ದ್ರವ– ಸಿದ್ಧ ಬ್ರಾಥ್‌ ಸೂಪರ್‌ ಬಝಾರ್‌ನಲ್ಲಿ ಲಭ್ಯ)– 4 ಕಪ್‌, ಈರುಳ್ಳಿ ಗಿಡ ಕತ್ತರಿಸಿದ್ದು– 2 ಟೇಬಲ್‌ ಚಮಚ, ಜಜ್ಜಿದ ಶುಂಠಿ– ಸ್ವಲ್ಪ, ಕಾರ್ನ್‌ ಫ್ಲೋರ್‌– ಒಂದೂವರೆ ಟೀ ಚಮಚ,ಮೊಟ್ಟೆ– 2, ಮೊಟ್ಟೆಯ ಹಳದಿ ಭಾಗ– ಒಂದು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮುಕ್ಕಾಲು ಕಪ್‌ ಚಿಕನ್‌ ಬ್ರಾಥ್‌ ಬಿಟ್ಟು, ಉಳಿದ ಬ್ರಾಥ್‌ ಅನ್ನು ದೊಡ್ಡದಾದ ಪ್ಯಾನ್‌ಗೆ ಸುರಿಯಿರಿ. ಇದಕ್ಕೆ ಉಪ್ಪು, ಜಜ್ಜಿದ ಶುಂಠಿ, ಕತ್ತರಿಸಿದ ಈರುಳ್ಳಿ ಗಿಡ ಹಾಕಿ ಕುದಿಸಿ. ಮೊದಲೇ ಇಟ್ಟುಕೊಂಡ ಬ್ರಾಥ್‌ ಅನ್ನು ಸಣ್ಣ ಬೌಲ್‌ಗೆ ಹಾಕಿ. ಅದಕ್ಕೆ ಕಾರ್ನ್‌ ಫ್ಲೋರ್‌ ಹಾಕಿ ಪೇಸ್ಟ್‌ ಮಾಡಿ.
ಇನ್ನೊಂದು ಪಾತ್ರೆಯಲ್ಲಿ ಮೊಟ್ಟೆ ಒಡೆದು ಹಾಕಿ. ಹಾಗೆಯೇ ಮೊಟ್ಟೆಯ ಹಳದಿ ಭಾಗ ಹಾಕಿ. ಸಣ್ಣ ಫೋರ್ಕ್‌ ಸಹಾಯದಿಂದ ಕುದಿಯುವ ಬ್ರಾಥ್‌ ಮಿಶ್ರಣಕ್ಕೆ ನಿಧಾನವಾಗಿ ಸೇರಿಸಿ. ನಂತರ ಅದಕ್ಕೆ ಕಾರ್ನ್‌ ಫ್ಲೋರ್‌ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ. ಇದು ಸೂಪ್‌ ಹದಕ್ಕೆ ಬಂದ ಕೂಡಲೇ ಗ್ಯಾಸ್‌ ಬಂದ್‌ ಮಾಡಿ.

ಹರ್ಬ್ ರೋಸ್ಟೆಡ್‌ ಸ್ಯಾಮನ್‌

ಬೇಕಾಗುವ ಸಾಮಗ್ರಿಗಳು: ಸ್ಯಾಮನ್ ಮೀನು (ಮೇಲಿನ ಚರ್ಮ ತೆಗಿದಿದ್ದು)ಉಪ್ಪು ಹಾಗೂ ಕಾಳುಮೆಣಸು – ರುಚಿಗೆ, ವೆಜಿಟೇಬಲ್ ಆಯಿಲ್ – ಸ್ವಲ್ಪ, ಬೆಳ್ಳುಳ್ಳಿ – 5ರಿಂದ 6 ಎಸಳು,ಹರ್ಬ್ ಸಾಫ್ಟ್ ಚೀಸ್‌ – 125 ಗ್ರಾಂ

ಟಾಪಿಂಗ್ ಮಾಡಲು:ಬ್ರೆಡ್‌ಕ್ರಂಬ್ಸ್‌ – 30 ಗ್ರಾಂ,ಹೆಚ್ಚಿದ ಚೀಸ್ – 30 ಗ್ರಾಂ, ಕೊತ್ತಂಬರಿ ಸೊಪ್ಪು ಹೆಚ್ಚಿದ್ದು – 2ಚಮಚ,ಲೆಮನ್ ಝೆಸ್ಟ್ – 1ನಿಂಬೆಹಣ್ಣಿನದ್ದು ‌,

ಅಲಂಕರಿಸಲು:ನಿಂಬೆಹೋಳು,ಕೊತ್ತಂಬರಿ ಸೊಪ್ಪಿನ ದಂಟು

ತಯಾರಿಸುವ ವಿಧಾನ: ಚರ್ಮ ತೆಗೆದು ಬದಿಗಿರಿಸಿಕೊಂಡ ಸ್ಯಾಮನ್ ಮೀನಿನ ತುಂಡಿನ ಎರಡೂ ಬದಿಗಳಿಗೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸವರಿ. ನಂತರ ತವಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮೀನಿನ ತುಂಡುಗಳನ್ನು ಅದಕ್ಕೆ ಹಾಕಿ. ನಂತರ ಅದರ ಮೇಲೆ ಹರ್ಬ್ ಸಾಫ್ಟ್ ಚೀಸ್‌ ಅನ್ನು ಸವರಿ.
ನಂತರ ಮೇಲೆ ಹೇಳಿದ ಟಾಪಿಂಗ್ ವಸ್ತುಗಳನ್ನೆಲ್ಲಾ ಸೇರಿಸಿ ಕಲೆಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಅದನ್ನು ಸ್ಯಾಮನ್ ಮೇಲೆ ಹರಡಿ. ನಂತರ ಮೊದಲೇ 220 ಡಿಗ್ರಿ ಸೆ. ನಲ್ಲಿ ಬಿಸಿ ಮಾಡಿಟ್ಟುಕೊಂಡ ಒವನ್‌ನಲ್ಲಿ 15 ನಿಮಿಷ ಬೇಯಿಸಿ. ನಂತರ ನಿಂಬೆಹೋಳು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

ಕ್ರೀಮಿ ಬ್ರೊಕೊಲಿ ಪಾಸ್ತಾ ಸಲಾಡ್‌

ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ಬ್ರೊಕೊಲಿ – 1ಕಪ್‌,ಪಾಸ್ತಾ ಸಲಾಡ್ ಸೀಸರ್ – 1 ಕಪ್‌,ಮೇಯನೇಸ್ – 1/3 ಕಪ್‌,ಹಾಲು – 2 ಟೇಬಲ್ ಚಮಚ,ಚೀಸ್ – 1/2ಕಪ್‌

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ನೀರು ಹಾಕಿ ಕುದಿಯಲು ಇಡಿ. ಆ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ. ನಂತರ 3ರಿಂದ 4 ಬ್ರೊಕೊಲಿ ತುಂಡುಗಳನ್ನು ನೀರಿಗೆ ಹಾಕಿ. ಇದನ್ನು 30 ಸೆಕೆಂಡುಗಳ ಕಾಲ ಕುದಿಸಿ. ಅದು ಗಾಢ ಹಸಿರು ಬಣ್ಣಕ್ಕೆ ತಿರುಗಬೇಕು. ನಂತರ ಅದನ್ನು ನೀರಿನಿಂದ ತೆಗೆದು ತಣ್ಣಗಾಗಲು ಬಿಡಿ. ನಂತರ ಕಾಂಡವನ್ನು ಬೇರ್ಪಡಿಸಿ ಎಲೆಗಳನ್ನು ಸಣ್ಣದಾಗಿ ಹೆಚ್ಚಿ. ನಂತರ ಕುದಿಯುವ ನೀರಿಗೆ ಪಾಸ್ತಾ ಸೇರಿಸಿ. ನಂತರ ಪಾಸ್ತಾ ಪೊಟ್ಟಣದಲ್ಲಿರುವ ವಿವರಣೆಯಂತೆ ಪಾಸ್ತಾವನ್ನು ಬೇಯಿಸಿ. ತಣ್ಣೀರಿನಿಂದ ತೊಳೆಯಿರಿ. ಹೆಚ್ಚಿಕೊಂಡ ಬ್ರೊಕೊಲಿಯೊಂದಿಗೆ ಮೇಯನೇಸ್ ಹಾಗೂ ಹಾಲು ಸೇರಿಸಿ ಸಲಾಡ್ ತಯಾರಿಸಿಕೊಳ್ಳಿ. ಅದಕ್ಕೆ ಪಾಸ್ತಾ ಸೇರಿಸಿ ಚೆನ್ನಾಗಿ ಕಲೆಸಿ. ಅದರ ಮೇಲೆ ಚೀಸ್ ಹಾಕಿ ಮಿಕ್ಸ್ ಮಾಡಿ. ಇದನ್ನು ಬಿಸಿ ಇದ್ದಾಗಲೂ ತಿನ್ನಬಹುದು.

ಆ್ಯಪಲ್ ಹಲ್ವಾ

ಬೇಕಾಗುವ ಸಾಮಗ್ರಿಗಳು: ಮಧ್ಯಮ ಗಾತ್ರದ ಸೇಬು – 1 ( ಸಿಪ್ಪೆ ತೆಗೆದು ಸಣ್ಣಾಗಿ ಕತ್ತರಿಸಿಕೊಂಡಿದ್ದು)
ಹಾಲು – 2 ಕಪ್‌,ರವೆ – 3 ಚಮಚ (ಹುರಿದಿದ್ದು),ಕಂದು ಸಕ್ಕರೆ – 4 ಟೇಬಲ್ ಚಮಚ,ತುಪ್ಪ – 3 ಟೇಬಲ್ ಚಮಚ,ಏಲಕ್ಕಿಪುಡಿ – 1/2 ಟೀ ಚಮಚ,ಬಾದಾಮಿ ತುಂಡುಗಳು – 2 ಟೇಬಲ್ ಚಮಚ,ಉದ್ದನೆಯ ಕಡ್ಡಿ

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಹಾಲು ಕಾಯಿಸಲು ಇಟ್ಟು ಅದಕ್ಕೆ ಸೇಬಿನ ತುಂಡುಗಳನ್ನು ಹಾಕಿ. ಸಣ್ಣ ಉರಿಯಲ್ಲಿ ಹಾಲನ್ನು ಕಾಯಲು ಬಿಟ್ಟು ಆಗಾಗ ತಿರುವುತ್ತಿರಿ. ಸೇಬಿನ ತುಂಡುಗಳನ್ನು ಹಾಲಿನಲ್ಲಿ ನುಣ್ಣಗಾಗುವವರೆಗೂ ಕುದಿಸಿ. ನಂತರ ತುಪ್ಪ ಬಿಟ್ಟು ಉಳಿದ ಸಾಮಗ್ರಿಗಳನ್ನು ಹಾಲಿಗೆ ಸೇರಿಸಿ. ನಂತರ ಅದನ್ನು ಸಣ್ಣ ಉರಿಯಲ್ಲಿ ಕುದಿಸುತ್ತಿರಿ. ಆಗಾಗ ಕೈಯಾಡಿಸಿ. ಆ ಮಿಶ್ರಣ ದಪ್ಪ ಪಾಕ ಆಗುವವರೆಗೂ ಕುದಿಸಿ. ನಂತರ ತುಪ್ಪ ಹಾಕಿ ಮಿಶ್ರಣ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ ಅದನ್ನು ತಣ್ಣಗಾಗಲು ಬಿಡಿ, ಈಗ ಕಡ್ಡಿಗೆ ಬೇಕಾದ ಆಕಾರಕ್ಕೆ ಸುತ್ತಿ. ಅದರ ಮೇಲೆ ಚೆರ‍್ರಿಗಳನ್ನು ಹಾಕಿ ಸಿಂಗರಿಸಿ. ಕಡ್ಡಿಯಲ್ಲೇ ಸ್ವಲ್ಪ ಹಲ್ವಾವನ್ನು ಹಾಗೇ ಬಿಟ್ಟರೆ ನಿಧಾನಕ್ಕೆ ಅದರ ಬಣ್ಣ ಬದಲಾಗುತ್ತದೆ. ಬಿಳಿ ಬಣ್ಣದ ಹಲ್ವಾ ಕಂದ ಬಣ್ಣಕ್ಕೆ ತಿರುಗಿದ ಮೇಲೆ ತಿನ್ನಲು ಕೊಡಿ.

ಕ್ಲಾಸಿಕ್ ಲೆಮನ್ ಟಾರ್ಟ್‌

ಬೇಕಾಗುವ ಸಾಮಗ್ರಿಗಳು: ಬೆಣ್ಣೆ – 100 ಗ್ರಾಂ, ಮೈದಾಹಿಟ್ಟು – 200 ಗ್ರಾಂ,ಉಪ್ಪು – ರುಚಿಗೆ,ಸಕ್ಕರೆ – ಸ್ವಲ್ಪ
ಮೊಟ್ಟೆ – 1,ನಿಂಬೆಹಣ್ಣಿನ ಮಿಶ್ರಣಕ್ಕೆ,ಲೆಮನ್ ಝೆಸ್ಟ್ – 3 ನಿಂಬೆಹಣ್ಣಿನದ್ದು,ನಿಂಬೆಹಣ್ಣು – 2,
ಕ್ರೀಮ್ – 250 ಗ್ರಾಂ,ಮೊಟ್ಟೆ – 2, ಸಕ್ಕರೆ – 100 ಗ್ರಾಂ

‌ತಯಾರಿಸುವ ವಿಧಾನ: ಮೊದಲು ಮೈದಾಹಿಟ್ಟು, ಸಕ್ಕರೆ, ಉಪ್ಪು ಹಾಗೂ ಬೆಣ್ಣೆಯನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಬೇಕಾದ ಟಾರ್ಟ್ ಪಾತ್ರೆ ತೆಗೆದುಕೊಂಡು ಅದರಲ್ಲಿ ಪೇಸ್ಟ್ ಅನ್ನು ಹಾಕಿ.
ಪಾತ್ರೆಯೊಂದಕ್ಕೆ ಲೆಮನ್ ಝೆಸ್ಟ್ ಹಾಕಿ ನಿಂಬೆರಸ ಸೇರಿಸಿ ಕಲೆಸಿ. ನಂತರ ಸಕ್ಕರೆ ಹಾಗೂ ಮೊಟ್ಟೆ ಕಲೆಸಿ ಸಕ್ಕರೆ ಲೆಮನ್ ಝೆಸ್ಟ್ ಹಾಗೂ ನಿಂಬೆರಸದ ಮಿಶ್ರಣ ಸೇರಿಸಿ. ಅದಕ್ಕೆ ಕ್ರೀಮ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಮೊದಲೇ ಸುರಿದುಕೊಂಡ ಟಾರ್ಟ್ ಮೇಲೆ ಹಾಕಿ 160 ಡಿಗ್ರಿ ಉಷ್ಣಾಂಶದಲ್ಲಿ 15 ನಿಮಿಷಗಳ ಕಾಲ ಬೇಯಿಸಿ. ನಂತರ ಅದನ್ನು ತಣ್ಣಗಾಗಲು ಬಿಟ್ಟು ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT