ಮಂಗಳವಾರ, ಮೇ 24, 2022
30 °C

ನಳಪಾಕ: ಯುಗಾದಿಗೆ ಸಿಹಿ ತಿನಿಸಿನ ತೋರಣ

ವೇದಾವತಿ. ಎಚ್. ಎಸ್. Updated:

ಅಕ್ಷರ ಗಾತ್ರ : | |

Prajavani

ಯುಗಾದಿಗೆ ಸಿಹಿ ತಿನಿಸಿನ ತೋರಣ

* ಸೂರ್ಯಕಲಾ

ಬೇಕಾಗುವ ಸಾಮಗ್ರಿಗಳು: ಕರಿಯಲು ಎಣ್ಣೆ. ಹಿಟ್ಟು ತಯಾರಿಸಲು: ಮೈದಾ – 2ಕಪ್ (250 ಗ್ರಾಂ), ತುಪ್ಪ – 3 ಟೇಬಲ್ ಚಮಚ, ಉಪ್ಪು – ಕಾಲು ಟೀ ಚಮಚ, ನೀರು – ಅಂದಾಜು ಅರ್ಧ ಕಪ್.

ಸಕ್ಕರೆ ಪಾಕ ತಯಾರಿಸಲು: ಸಕ್ಕರೆ – ಒಂದೂವರೆ ಕಪ್, ನೀರು – ಒಂದೂವರೆ ಕಪ್, ಏಲಕ್ಕಿ ಪುಡಿ – ಅರ್ಧ ಟೀ ಚಮಚ, ಕೇಸರಿ ದಳ – ಅರ್ಧ ಟೀ ಚಮಚ, ನಿಂಬೆರಸ – 1 ಟೀ ಚಮಚ 

ಹೂರಣ ತಯಾರಿಸಲು: ಸಿಹಿ ಇಲ್ಲದ ಕೋವಾ – 200 ಗ್ರಾಂ, ಚಿಕ್ಕದಾಗಿ ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾ ಎಲ್ಲವನ್ನೂ 10ರಂತೆ ತೆಗೆದುಕೊಳ್ಳಿ, ಪುಡಿ ಮಾಡಿದ ಸಕ್ಕರೆ 3 ಟೇಬಲ್ ಚಮಚ, ಏಲಕ್ಕಿ ಪುಡಿ – ಕಾಲು ಟೀ ಚಮಚ.

ತಯಾರಿಸುವ ವಿಧಾನ: ಕೋವಾವನ್ನು ಪುಡಿ ಮಾಡಿಕೊಳ್ಳಿ. ತಿಳಿಸಿರುವ ಡ್ರೈಫ್ರೂಟ್ಸ್ ಸೇರಿಸಿ. ಸಕ್ಕರೆಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಯನ್ನು ತಯಾರಿಸಿಟ್ಟುಕೊಳ್ಳಿ. ಬೌಲಿಗೆ ಮೈದಾಹಿಟ್ಟನ್ನು ಹಾಕಿ ಜೊತೆಗೆ ತುಪ್ಪ, ಉಪ್ಪನ್ನು ಸೇರಿಸಿ 2 ರಿಂದ 3 ನಿಮಿಷ ಕೈಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರನ್ನು ಸ್ವಲ್ಪ ಸ್ವಲ್ಪವೇ ಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲೆಸಿಕೊಳ್ಳಿ. 20 ನಿಮಿಷ ಮುಚ್ಚಿಡಿ. ತಯಾರಿಸಿದ ಹಿಟ್ಟಿನಿಂದ ದೊಡ್ಡ ದೊಡ್ಡ ಉಂಡೆಗಳನ್ನು ತಯಾರಿಸಿಕೊಳ್ಳಿ. ಚಪಾತಿಯಂತೆ ಲಟ್ಟಿಸಿಕೊಳ್ಳಿ. ತುಂಬಾ ತೆಳುವಾಗಿ ಅಥವಾ ದಪ್ಪವಾಗಿ ಇರದೇ ಒಂದೇ ರೀತಿಯಲ್ಲಿರಲಿ. ಚಿಕ್ಕ ಬೌಲಿನಿಂದ ಒತ್ತಿ ವೃತ್ತಾಕಾರದಲ್ಲಿ ಕತ್ತರಿಸಿಟ್ಟುಕೊಳ್ಳಿ. ಇದು ಚಿಕ್ಕ ಪೂರಿಯಂತೆ ಇರಲಿ. ಕತ್ತರಿಸಿಕೊಂಡ ಹಿಟ್ಟಿನ ಕೊನೆಯ ಸುತ್ತಲೂ ನೀರನ್ನು ಹಾಕಿ. ಎಲ್ಲದಕ್ಕೂ ಹಾಗೇ ಮಾಡಿ. ಮಧ್ಯದಲ್ಲಿ ಹೂರಣದ ಉಂಡೆಯನ್ನಿಡಿ. ಅದರ ಮೇಲೆ ಇನ್ನೊಂದು ವೃತ್ತಾಕಾರದ ಚಿಕ್ಕ ಪೂರಿಯನ್ನಿಡಿ. ಸುತ್ತಲೂ ಕೊನೆಯನ್ನು ಗಟ್ಟಿಯಾಗಿ ಒತ್ತಿ. ನಂತರ ಕೊನೆಯನ್ನು ಮಡುಚುತ್ತಾ ಬನ್ನಿ. ಎಲ್ಲವನ್ನೂ ಹಾಗೇ ತಯಾರಿಸಿಟ್ಟುಕೊಳ್ಳಿ. ಸಕ್ಕರೆಗೆ ನೀರನ್ನು ಸೇರಿಸಿ ಕುದಿಸಿ. ಕೇಸರಿದಳ ಮತ್ತು ಏಲಕ್ಕಿಪುಡಿಯನ್ನು ಹಾಕಿ 5 ನಿಮಿಷ ಕುದಿಸಿ. ಪಾಕ ಅಂಟಿರಲಿ. ಕೊನೆಯಲ್ಲಿ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ. ಪಾಕವನ್ನು ಮುಚ್ಚಿಡಿ.

ಎಣ್ಣೆಯನ್ನು ಬಿಸಿ ಮಾಡಿ. ತಯಾರಿಸಿದ ಸೂರ್ಯಕಲಾವನ್ನು ಹಾಕಿ. ಸಣ್ಣ ಉರಿಯಲ್ಲಿ ಎರಡೂ ಬದಿಯನ್ನು ಬೇಯಿಸಿ. ಕೆಂಬಣ್ಣ ಬಂದ ನಂತರ ಎಣ್ಣೆಯಿಂದ ತೆಗೆಯಿರಿ. ಬೆಚ್ಚಗಿರುವ ಸಕ್ಕರೆ ಪಾಕಕ್ಕೆ ಸೂರ್ಯಕಲಾವನ್ನು ಹಾಕಿ 5 ನಿಮಿಷ ಸಕ್ಕರೆ ಹೀರುವಂತೆ ಪಾಕದಲ್ಲಿ ನೆನೆಸಿಡಿ. ಕೊನೆಯಲ್ಲಿ ಪಿಸ್ತಾದಿಂದ ಅಲಂಕರಿಸಿ ಸವಿಯಲು ಕೊಡಿ. ರುಚಿಕರವಾದ ಸೂರ್ಯಕಲಾವನ್ನು ಹಬ್ಬಕ್ಕೆ ತಯಾರಿಸಿ ಸವಿಯಿರಿ.

* ಬಾಸುಂದಿ

ಬೇಕಾಗುವ ಸಾಮಗ್ರಿಗಳು: ಹಾಲು– 2 ಲೀಟರ್‌, ಕೇಸರಿದಳ – 1 ಟೀ ಚಮಚ, ಚಿಕ್ಕದಾಗಿ ಕತ್ತರಿಸಿದ ಬಾದಾಮಿ, ಗೋಡಂಬಿ, ಪಿಸ್ತಾ ಹತ್ತರಂತೆ ಹಾಕಿ, ಸಕ್ಕರೆ – ಅರ್ಧ ಕಪ್‌, ಏಲಕ್ಕಿಪುಡಿ – ಅರ್ಧ ಟೀ ಚಮಚ .

ತಯಾರಿಸುವ ವಿಧಾನ: ದಪ್ಪ ತಳದ ಬಾಣಲೆಗೆ ಹಾಲನ್ನು ಹಾಕಿ ಕುದಿ ಬರಿಸಿ. ಕೇಸರಿದಳವನ್ನು ಹಾಕಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಹಾಲು ಕುದಿ ಬಂದಾಗ ಕಟ್ಟಿದ ಕೆನೆಯನ್ನು ತೆಗೆದು ಹಾಲಿನ ಮಧ್ಯದಲ್ಲಿ ಹಾಕುತ್ತಾ ಬನ್ನಿ. ಹೀಗೆ ಪ್ರತಿ ಬಾರಿಯೂ ಮಾಡುತ್ತಾ ಬನ್ನಿ. ಹಾಲು ಕೆನೆಯೊಂದಿಗೆ ಗಟ್ಟಿಯಾಗುತ್ತಾ ಬಂದಾಗ ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾವನ್ನು ಹಾಕಿ ಮಿಶ್ರಣ ಮಾಡಿ. ಹಾಲು ಗಟ್ಟಿಯಾಗಲು ಅರ್ಧ ಗಂಟೆ ಬೇಕಾಗುತ್ತದೆ. ನಂತರ ಸಕ್ಕರೆಯನ್ನು ಸೇರಿಸಿ. 5 ನಿಮಿಷ ಕುದಿಸಿ. ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಹಾಲು ದಪ್ಪವಾದ ಬಳಿಕ ಒಲೆಯಿಂದ ಇಳಿಸಿ. ಪೂರ್ತಿ ಆರಲು ಬಿಡಿ. ಈಗ ಬಾಸುಂದಿ ಸವಿಯಲು ಸಿದ್ಧ. ಇದನ್ನು ಫ್ರಿಜ್‌ನಲ್ಲಿಟ್ಟು ತಣ್ಣಗೆ ಮಾಡಿ ಸವಿಯಬಹುದು ಅಥವಾ ಹಾಗೆಯೇ ಸವಿಯಬಹುದು.

ಮಾವಿನ ಹಣ್ಣಿನ ರಬ್ಡಿ

ಬೇಕಾಗುವ ಸಾಮಗ್ರಿಗಳು: ಬ್ರೆಡ್ ಸ್ಲೈಸ್ – 3, ದಪ್ಪನೆಯ ಹಾಲು – ಅರ್ಧ ಲೀಟರ್, ಹಾಲಿನ ಪುಡಿ – 4 ಟೇಬಲ್ ಚಮಚ, ಕತ್ತರಿಸಿದ ಬಾದಾಮಿ, ಪಿಸ್ತಾ, ಗೋಡಂಬಿ ಎಲ್ಲವೂ ಒಂದೊಂದು ಟೀ ಚಮಚ, ಸಕ್ಕರೆ – ಕಾಲು ಕಪ್, ಏಲಕ್ಕಿ ಪುಡಿ – 1ಟೀ ಚಮಚ, ತುಪ್ಪ – ಅರ್ಧ ಟೀ ಚಮಚ, ಮಾವಿನ ಹಣ್ಣಿನ ಗಟ್ಟಿ ರಸ – ಅರ್ಧ ಕಪ್ ಅಥವ ಒಂದು ಮಾವಿನ ಹಣ್ಣಿನ ರಸ, ಒಂದು ಮಾವಿನ ಹಣ್ಣಿನ ಚಿಕ್ಕ ಚಿಕ್ಕ ತುಂಡುಗಳು.

ತಯಾರಿಸುವ ವಿಧಾನ: ಮೊದಲು ಬ್ರೆಡಿನ ಸುತ್ತಲೂ ಕತ್ತರಿಸಿಕೊಳ್ಳಿ. ಬಿಳಿಯ ಭಾಗವನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಹಾಲನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಕಾಯಿಸಿಕೊಳ್ಳಿ. ಕಾದ ಹಾಲಿಗೆ ಬ್ರೆಡ್‌ನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಸಕ್ಕರೆಯನ್ನು ಸೇರಿಸಿ. ನಂತರ ಕತ್ತರಿಸಿದ ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಸೇರಿಸಿ. ಈ ಮಿಶ್ರಣಕ್ಕೆ ತುಪ್ಪವನ್ನು ಸೇರಿಸಿ. ಮಿಶ್ರಣವು ಗಟ್ಟಿಯಾಗುತ್ತ ಬಂದಾಗ ಒಲೆಯಿಂದ ಇಳಿಸಿ ಆರಲು ಬಿಡಿ. ಆರಿದ ನಂತರ ಮಾವಿನ ಹಣ್ಣಿನ ಗಟ್ಟಿಯಾದ ರಸವನ್ನು ಹಾಕಿ ಮಿಶ್ರಣ ಮಾಡಿ. ನಂತರ ಚಿಕ್ಕದಾಗಿ ಕತ್ತರಿಸಿದ ಮಾವಿನ ಹಣ್ಣಿನ ಹೋಳುಗಳನ್ನು ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಅಲಂಕಾರ ಮಾಡಲು ಚಿಕ್ಕದಾಗಿ ಕತ್ತರಿಸಿದ ಮಾವಿನ ಹಣ್ಣಿನ ಹೋಳುಗಳು, ಬಾದಾಮಿ, ಗೋಡಂಬಿ, ಪಿಸ್ತಾವನ್ನು ಹಾಕಿ ಸವಿಯಲು ಕೊಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು