ಶನಿವಾರ, ಏಪ್ರಿಲ್ 4, 2020
19 °C

ದೀಪಾವಳಿಗೆ ಸಿಹಿ ತಿನಿಸುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಬ್ಬವೆಂದರೆ ಸಿಹಿ ಇಲ್ಲದೇ ಆಚರಿಸಲು ಸಾಧ್ಯವೇ? ಅದರಲ್ಲೂ ದೀಪಾವಳಿಯೆಂದರೆ ಮೂರು ದಿನಗಳ ಹಬ್ಬ. ಆರಂಭದ ನರಕ ಚತುರ್ದಶಿಯಂದು ಸಿಹಿ ಕಡುಬಿನ ಊಟವಾದರೆ, ಮಧ್ಯದ ಅಮಾವಾಸ್ಯೆಯ ಲಕ್ಷ್ಮಿ ಪೂಜೆಗೆ ಭಕ್ಷ್ಯದ ಪ್ರಸಾದ. ಪಾಡ್ಯದಂದು ಬರ್ಫಿ, ಖಾರದ ಕಡ್ಡಿಯ ಸವಿ. ಜೊತೆಗೆ ಪಾಯಸ. ದೀಪಾವಳಿ ರಜೆಯ ಜೊತೆ ಈ ರುಚಿಕರ ತಿನಿಸುಗಳನ್ನು ಮಾಡಿ ಸವಿಯಿರಿ ಎನ್ನುತ್ತಾರೆ ಉಷಾ ದಿವಾಕರ ಹಲಗೇರಿ.

ಸಿಹಿಕುಂಬಳಕಾಯಿ (ಚೀನಿಕಾಯಿ) ಕಡುಬು
ಬೇಕಾಗುವ ಸಾಮಗ್ರಿ (ಸಿಹಿ ಕಡುಬಿಗೆ) :
ಸಿಹಿಕುಂಬಳಕಾಯಿ ಚಿಕ್ಕದಾಗಿ ಹೆಚ್ಚಿದ್ದು– 2 ಕಪ್‌, ಅಕ್ಕಿ– ಎರಡು ಕಪ್‌, ಬೆಲ್ಲ– ಅರ್ಧ ಕಪ್‌, ಹಸಿ ತೆಂಗಿನಕಾಯಿ ತುರಿ– ಒಂದು ಕಪ್‌, ಏಲಕ್ಕಿ ಪುಡಿ ಸ್ವಲ್ಪ, ಚಿಟಿಕೆ ಉಪ್ಪು.

ತಯಾರಿಸುವ ವಿಧಾನ: ಸಿಹಿಕುಂಬಳಕಾಯಿಯ ಸಿಪ್ಪೆ, ಬೀಜ ಪ್ರತ್ಯೇಕಿಸಿ ಚಿಕ್ಕದಾಗಿ ಹೆಚ್ಚಿಕೊಳ್ಳಿ. ಕೆಲವರು ತುರಿದು ಮಾಡುವುದೂ ಇದೆ. ಆದರೆ ಇದು ನೀರು ಬಿಟ್ಟುಕೊಂಡು ಬಿಡುತ್ತದೆ. ಅಕ್ಕಿಯನ್ನು 2–3 ಗಂಟೆ ನೆನೆಹಾಕಿ. ನೆನೆದ ಅಕ್ಕಿಯನ್ನು ನಯವಾಗಿ, ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಬೆಲ್ಲ, ತೆಂಗಿನ ತುರಿ ಹಾಗೂ ಹೆಚ್ಚಿದ ಸಿಹಿಕುಂಬಳಕಾಯಿ ಚೂರುಗಳನ್ನು ಸೇರಿಸಿ. ಏಲಕ್ಕಿ ಪುಡಿ ಹಾಗೂ ಚಿಟಿಕೆ ಉಪ್ಪು ಹಾಕಿ ಕಲೆಸಿ. ತುಪ್ಪ ಸವರಿದ ಇಡ್ಲಿ ಪ್ಲೇಟ್‌ನಲ್ಲಿ ಹಾಕಿ ಹಬೆಯಲ್ಲಿ 20 ನಿಮಿಷ ಬೇಯಿಸಿ. ರುಚಿಕರವಾದ ಸಿಹಿ ಕಡುಬನ್ನು ಗಟ್ಟಿ ತುಪ್ಪದೊಂದಿಗೆ ತಿನ್ನಿ.

ಖಾರ ಕಡುಬು: ಮೇಲೆ ಹೇಳಿದ ಸಾಮಗ್ರಿಗಳಲ್ಲಿ ಬೆಲ್ಲ ಹಾಗೂ ಏಲಕ್ಕಿ ಪುಡಿಯ ಬದಲು 7–8 ಒಣಮೆಣಸಿನಕಾಯಿ, 2 ಚಮಚ ಕೊತ್ತಂಬರಿ ಬೀಜ, ಒಂದು ಚಮಚ ಓಮದ ಕಾಳು, ಚಿಟಿಕೆ ಇಂಗನ್ನು ನೆನೆದ ಅಕ್ಕಿಯ ಜೊತೆ ರುಬ್ಬಿ. ಈ ಮಿಶ್ರಣದೊಂದಿಗೆ ಹೆಚ್ಚಿದ ಸಿಹಿಕುಂಬಳಕಾಯಿ ಚೂರು, ಉಪ್ಪು ಸೇರಿಸಿ ಪ್ಲೇಟ್‌ನಲ್ಲಿಟ್ಟು ಹಬೆಯಲ್ಲಿ ಬೇಯಿಸಿ. ತುಪ್ಪ ಮತ್ತು ಚಟ್ನಿಯೊಂದಿಗೆ ಸವಿಯಬಹುದು.

**

7 ಕಪ್‌ ಬರ್ಫಿ
ಬೇಕಾಗುವ ಸಾಮಗ್ರಿ:
ಚಿರೋಟಿ ರವೆ– 1 ಕಪ್‌, ತುಪ್ಪ– 1 ಕಪ್‌, ಹಸಿ ತೆಂಗಿನಕಾಯಿ ತುರಿ– 1 ಕಪ್‌, ಹಾಲು– 1 ಕಪ್‌, ಸಕ್ಕರೆ– 3 ಕಪ್‌, ಎರಡು ಟೀ ಚಮಚ ಕಡಲೆ ಹಿಟ್ಟು, ಚಿಟಿಕೆ ಏಲಕ್ಕಿ ಪುಡಿ.

ತಯಾರಿಸುವ ವಿಧಾನ: ಕಡಲೆ ಹಿಟ್ಟನ್ನು ಹಸಿ ವಾಸನೆ ಹೋಗುವವರೆಗೆ ಹುರಿದಿಟ್ಟುಕೊಳ್ಳಿ. ಏಲಕ್ಕಿ ಪುಡಿ ಬಿಟ್ಟು ಉಳಿದ ಸಾಮಗ್ರಿಗಳನ್ನು ದಪ್ಪ ತಳದ ಪಾತ್ರೆಯಲ್ಲಿ ಮಿಶ್ರ ಮಾಡಿ, ಸಣ್ಣ ಉರಿಯಲ್ಲಿ ಸೌಟಿನಿಂದ ತಿರುವುತ್ತ ಹೋಗಿ. ನೊರೆನೊರೆಯಾಗಿ ಕುದಿಯುವ ಮಿಶ್ರಣ ಕ್ರಮೇಣ ಪಾತ್ರೆಯ ಒಳ ಬದಿಗೆ ಅಂಟಿಕೊಳ್ಳದೇ ಬಿಡುತ್ತ ಹೋಗುತ್ತದೆ. ಆಗ ಏಲಕ್ಕಿ ಪುಡಿ ಸೇರಿಸಿ, ಸ್ಟವ್‌ ಆರಿಸಿ. ಪ್ಲೇಟ್‌ಗೆ ತುಪ್ಪವನ್ನು ಸವರಿ. ಈ ಬೆಂದ ಮಿಶ್ರಣವನ್ನು ಪ್ಲೇಟ್‌ ಮೇಲೆ ಸಮವಾಗಿ ಹರಡಿ. ಸ್ವಲ್ಪ ಆರಿದ ನಂತರ ಚಾಕುವಿನಿಂದ ಬೇಕಾದ ಆಕಾರಕ್ಕೆ ಕತ್ತರಿಸಿ. ಪೂರ್ತಿ ಆರಿದ ನಂತರ ಈ ಚೂರುಗಳ ನಡುವೆ ಪೊಳ್ಳು ಬಿಟ್ಟು ಹಗುರಾಗುತ್ತದೆ. ಹಾಲು, ತುಪ್ಪ, ಸಕ್ಕರೆ ಹದವಾಗಿ ಬೆರೆತ ಇದು ತಿನ್ನಲು ಬಲು ರುಚಿ. ಸಿಹಿ ಕಡಿಮೆ ಬೇಕಾದವರು ಸಕ್ಕರೆ ಪ್ರಮಾಣವನ್ನು 2 ಕಪ್‌ಗೆ ಇಳಿಸಬಹುದು.

**

ಮಹಾಲಕ್ಷ್ಮಿ ಭಕ್ಷ್ಯ

ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು– 1 ಕಪ್‌, ತುಪ್ಪ– ಅರ್ಧ ಕಪ್‌, ಸಕ್ಕರೆ– 1 ಕಪ್‌, ಹಾಲು– ಮೂರು ಕಪ್‌, ಏಲಕ್ಕಿ ಪುಡಿ ಮತ್ತು ಉಪ್ಪು– ಚಿಟಿಕೆ, ಗೋಡಂಬಿ ಮತ್ತು ಒಣ ದ್ರಾಕ್ಷಿ ಸ್ವಲ್ಪ

ತಯಾರಿಸುವ ವಿಧಾನ: ತುಪ್ಪ ಮತ್ತು ಗೋಧಿ ಹಿಟ್ಟನ್ನು ಮಿಶ್ರ ಮಾಡಿ ದಪ್ಪ ತಳದ ಪಾತ್ರೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಘಂ ಎಂದು ಸುವಾಸನೆ ಬಂದ ನಂತರ ಇದಕ್ಕೆ ಬಿಸಿ ಮಾಡಿದ ಹಾಲನ್ನು ಸ್ವಲ್ಪ ಸ್ವಲ್ಪ ಸೇರಿಸುತ್ತ, ಸೌಟಿನಿಂದ ಕೈಯಾಡಿಸಿ. ಬೆಂದ ನಂತರ ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಗೂ ಚಿಟಿಕೆ ಉಪ್ಪು ಸೇರಿಸಿ. ಮುಚ್ಚಿಡಿ. ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಚೂರು, ಒಣ ದ್ರಾಕ್ಷಿ ಸೇರಿಸಿ.

**

ಅಕ್ಕಿಯ ಖಾರದ ಕಡ್ಡಿ

ಬೇಕಾಗುವ ಸಾಮಗ್ರಿ: ಅಕ್ಕಿ– 2 ಕಪ್‌, ಮುಳ್ಳು ಸೌತೆಕಾಯಿ– 1, ಹಸಿ ಮೆಣಸಿನಕಾಯಿ– ನಾಲ್ಕು, ಜೀರಿಗೆ– ಒಂದು ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಅಕ್ಕಿಯನ್ನು 2–3 ಗಂಟೆ ನೆನೆಹಾಕಿ. ಎಳೆ ಸೌತೆಕಾಯಿಯಾದರೆ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿಯಲ್ಲಿ ತಿರುವಿ. ಇದಕ್ಕೆ ನೆನೆದ ಅಕ್ಕಿ ಮತ್ತು ಮೆಣಸಿನಕಾಯಿ, ಸ್ವಲ್ಪ ಜೀರಿಗೆಯನ್ನು ಹಾಕಿ ರುಬ್ಬಿ. ಬಲಿತ ಸೌತೆಕಾಯಿಯಾದರೆ ಬೀಜ ತೆಗೆದು ಹಾಕಿ. ಇದಕ್ಕೆ ಉಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ಸೌಟಿನಿಂದ ತಿರುವಿ. ಹಿಟ್ಟು ಬೆಂದು ಸ್ವಲ್ಪ ಗಟ್ಟಿಯಾದ ನಂತರ ಚೆನ್ನಾಗಿ ಕೈಯಿಂದ ಹಿಸುಕಬೇಕು. ಹಿಟ್ಟು ತೀರಾ ಮೆದುವಾದರೆ ಒಣ ಅಕ್ಕಿ ಹಿಟ್ಟನ್ನು ಸೇರಿಸಿ ಕಲೆಸಿ. ಇದನ್ನು ಚಕ್ಕುಲಿ ಒತ್ತುವ ಒರಳಿನಲ್ಲಿ ತೆಂಗೊಳಲು ಮಾಡುವ ಪ್ಲೇಟ್‌ ಹಾಕಿಕೊಂಡು ಎಣ್ಣೆ ಬಾಂಡ್ಲಿಗೆ ಬಿಡಿ. ಚೆನ್ನಾಗಿ ಬೇಯಿಸಿ. ಈ ಖಾರದ ಕಡ್ಡಿಯನ್ನು ಡಬ್ಬಿಯಲ್ಲಿ ಹಾಕಿಟ್ಟರೆ ತಿಂಗಳ ಕಾಲ ಕೆಡುವುದಿಲ್ಲ.

**

ಮಣಿ ಪಾಯಸ

ಬೇಕಾಗುವ ಸಾಮಗ್ರಿ: ಅಕ್ಕಿ– ಎರಡು ಕಪ್‌, ಬೆಲ್ಲ– ಒಂದು ಕಪ್‌, ತೆಂಗಿನಕಾಯಿ ಹಾಲು– ಒಂದು ಕಪ್‌, ಹಾಲು– ಒಂದು ಕಪ್‌. ಗಸಗಸೆ ಸ್ವಲ್ಪ. ಜಾಯಿಕಾಯಿ ಪತ್ರೆ– ಸ್ವಲ್ಪ.

ತಯಾರಿಸುವ ವಿಧಾನ: ಅಕ್ಕಿಯನ್ನು ಎರಡು ಗಂಟೆ ಕಾಲ ನೆನೆಹಾಕಿ. ನಂತರ ಅದನ್ನು ಸ್ವಲ್ಪ ಗಟ್ಟಿಯಾಗಿ, ನಯವಾಗಿ ರುಬ್ಬಿಕೊಳ್ಳಿ. ಒಂದು ಅಗಲವಾದ ಪಾತ್ರೆಯಲ್ಲಿ ಎರಡು ಕಪ್‌ ನೀರು ಹಾಕಿ ಕುದಿಸಿ. ಅದಕ್ಕೆ ಅರ್ಧ ಕಪ್‌ ಬೆಲ್ಲ ಹಾಕಿ ಕರಗಿಸಿ. ಒಂದು ಸ್ಟೀಲ್‌ ಜರಡಿ ತೆಗೆದುಕೊಂಡು ಅದರಲ್ಲಿ ಒಂದು ಸೌಟು ಹಿಟ್ಟು ಹಾಕಿ, ಸೌಟಿನಿಂದ ಹರಡಿ. ಅದು ಮಣಿಯಂತೆ ಜರಡಿಯ ಮೂಲಕ ಕುದಿಯುವ ಬೆಲ್ಲದ ನೀರಿಗೆ ಬೀಳುತ್ತದೆ. ಒಂದೆರಡು ನಿಮಿಷಗಳಲ್ಲೇ ಬೆಂದು ಬಿಡುತ್ತದೆ. ಈ ನೀರಿಗೆ ತೆಂಗಿನತುರಿ ರುಬ್ಬಿ ತೆಗೆದ ಹಾಲು ಹಾಗೂ ಗಟ್ಟಿಯಾದ ಹಸುವಿನ ಹಾಲು, ಬೆಲ್ಲ ಮತ್ತು ಗಸಗಸೆ ಸೇರಿಸಿ ಕುದಿಸಿ. ಪಾಯಸ ಮಂದವಾದ ಬಳಿಕ ಜಾಯಿಕಾಯಿ ಪತ್ರೆಯನ್ನು ಹಾಕಿ. ಬೇಕಿದ್ದರೆ, ತುಪ್ಪದಲ್ಲಿ ಹುರಿದ ಗೋಡಂಬಿ, ಒಣದ್ರಾಕ್ಷಿ ಸೇರಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)