ಭಾನುವಾರ, ಜನವರಿ 19, 2020
19 °C

ಸಂಕ್ರಾಂತಿಗೆ ಸಿಹಿ ಸುಗ್ಗಿ

ವೇದಾವತಿ ಎಚ್.ಎಸ್. Updated:

ಅಕ್ಷರ ಗಾತ್ರ : | |

ಸಂಕ್ರಾಂತಿ ಎಂದರೆ ನಾಡಿನಾದ್ಯಂತ ಸಂತಸ–ಸಂಭ್ರಮದಿಂದ ಆಚರಿಸುವ ಹಬ್ಬ. ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ಹಬ್ಬದ ಆಚರಣೆ ಬಲು ಜೋರು. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯುವ ಈ ಹಬ್ಬದಲ್ಲಿ ಪೊಂಗಲ್ ತಯಾರಿಸುವುದು ವಿಶೇಷ.

ಸಕ್ಕರೆ ಅಚ್ಚಿನ ಸಿಹಿಯೂ ಈ ಮಕರ ಸಂಕ್ರಾಂತಿಗೆ ಜೊತೆಯಾಗುತ್ತದೆ. ಹಬ್ಬದ ಸೊಗಡು ಇನ್ನಷ್ಟು ಹೆಚ್ಚಬೇಕು ಎಂದರೆ ವಿಶೇಷ ಸಿಹಿ ತಿನಿಸು ಹಾಗೂ ಖಾದ್ಯಗಳನ್ನು ಮನೆಯಲ್ಲಿಯೇ ತಯಾರಿಸಬಹುದು. ಹಲ್ವಾ, ಫ್ರೂಟ್‌ ಕಸ್ಟರ್ಡ್‌, ಹಾಲುಬಾಯಿ, ಕಾಯಿವಡೆ ಮುಂತಾದವುಗಳನ್ನು ತಯಾರಿಸುವ ವಿಧಾನವನ್ನು ತಿಳಿಸಿದ್ದಾರೆ ವೇದಾವತಿ ಎಚ್.ಎಸ್.

ತ್ರೀ ಇನ್ ಒನ್ ಹಲ್ವಾ

ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು - 1/2 ಕಪ್, ಕಡಲೆಹಿಟ್ಟು - 1/2 ಕಪ್, ಮೈದಾಹಿಟ್ಟು - 1/4 ಕಪ್, ತುಪ್ಪ - ½ ಕಪ್, ಸಕ್ಕರೆ - 1/2 ಕಪ್, ನೀರು - 1 ಕಪ್, ಗೋಡಂಬಿ, ದ್ರಾಕ್ಷಿ ಸ್ವಲ್ಪ, ಕೇಸರಿ ದಳಗಳು ಸ್ವಲ್ಪ, ಉಪ್ಪು ಚಿಟಿಕೆ.

ತಯಾರಿಸುವ ವಿಧಾನ: ಮೊದಲು ಪಾತ್ರೆಯೊಂದಕ್ಕೆ ಅರ್ಧ ಅರ್ಧ ಚಮಚ ತುಪ್ಪ ಹಾಕಿ ಎಲ್ಲಾ ಹಿಟ್ಟುಗಳನ್ನು ಬೇರೆ ಬೇರೆಯಾಗಿ ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ತೆಗೆದಿಟ್ಟುಕೊಳ್ಳಿ. ಬಾಣಲೆಯಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ ಸಕ್ಕರೆ ಕರಗುವವರೆಗೆ ಕುದಿಸಿಕೊಳ್ಳಿ. ನಂತರ ಕೇಸರಿದಳಗಳನ್ನು ಮತ್ತು ತುಪ್ಪವನ್ನು ಸೇರಿಸಿ. ನಂತರ ಉರಿ ಕಡಿಮೆ ಮಾಡಿಕೊಂಡು ಕುದಿಯುತ್ತಿರುವ ಸಕ್ಕರೆ ಪಾಕಕ್ಕೆ ಹುರಿದ ಹಿಟ್ಟನ್ನು ಗಂಟಾಗದ ರೀತಿಯಲ್ಲಿ ಸೇರಿಸಿ ಮಗುಚುತ್ತಿರಿ. ಚಿಟಿಕೆ ಉಪ್ಪು ಸೇರಿಸಿ. ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಈಗ ಅದು ತುಪ್ಪ ಬಿಟ್ಟು ಬರುತ್ತದೆ. ನಂತರ ಏಲಕ್ಕಿ ಪುಡಿ ಮತ್ತು ಹುರಿದ ಗೋಡಂಬಿ, ದ್ರಾಕ್ಷಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಒಲೆಯಿಂದ ಇಳಿಸಿ. ಈಗ ರುಚಿಕರವಾದ ತ್ರಿ ಇನ್ ಒನ್ ಹಲ್ವಾ ರೆಡಿ. 

**


ರವಾ ಪೊಂಗಲ್

ಬೇಕಾಗುವ ಸಾಮಗ್ರಿಗಳು: ರವೆ – 1 ಕಪ್/ 250 ಗ್ರಾಂ, ಹೆಸರುಬೇಳೆ – 150ಗ್ರಾಂ, ನೀರು – 5 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಗೋಡಂಬಿ ಸ್ವಲ್ಪ, ತುಪ್ಪ – 4 ಟೇಬಲ್ ಚಮಚ/ ಜಾಸ್ತಿ ಬೇಕಿದ್ದರೆ ಹಾಕಬಹುದು. ಕರಿಬೇವು – ಸ್ವಲ್ಪ, ಹಸಿಶುಂಠಿ – ಸ್ವಲ್ಪ, ತರಿ ತರಿಯಾಗಿ ಪುಡಿ ಮಾಡಿದ ಕಾಳುಮೆಣಸು – 1 ಟೀ ಚಮಚ, ಹಸಿಮೆಣಸಿನಕಾಯಿ – 3, ಜೀರಿಗೆ – 1/2 ಟೀ ಚಮಚ, ಇಂಗು ಚಿಟಿಕೆ.

ತಯಾರಿಸುವ ವಿಧಾನ: ಮೊದಲು ಬೇಳೆಯನ್ನು ಪರಿಮಳ ಬರುವವರೆಗೆ ಹುರಿದು ನಂತರ ಕುಕ್ಕರ್‌ನಲ್ಲಿ ಒಂದೂವರೆ ಕಪ್ ನೀರು ಮತ್ತು ಒಂದು ಟೀ ಚಮಚ ತುಪ್ಪ ಹಾಕಿ ಮೂರು ವಿಷಲ್ ಬರುವವರೆಗೆ ಬೇಯಿಸಿಕೊಳ್ಳಿ.

ನಂತರ ರವೆಯನ್ನು ಬಣ್ಣ ಬದಲಾವಣೆ ಆಗುವವರೆಗೆ ಹುರಿದುಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಅದರಲ್ಲಿ ಗೋಡಂಬಿ ಚೂರುಗಳು, ಕರಿಬೇವು, ಹಸಿ ಶುಂಠಿ, ಪುಡಿ ಮಾಡಿದ ಕಾಳುಮೆಣಸು, ಇಂಗು, ಕತ್ತರಿಸಿದ ಹಸಿಮೆಣಸು, ಜೀರಿಗೆಯನ್ನು ಹಾಕಿ ಒಗ್ಗರಣೆ ಮಾಡಿ. ಈ ಒಗ್ಗರಣೆಗೆ ಬೆಂದ ಬೇಳೆ, ಉಳಿದ ನೀರು ಮತ್ತು ಹುರಿದ ರವೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಚೆನ್ನಾಗಿ ಬೇಯುವವರೆಗೆ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಿ. ಬೇಕಿದ್ದರೆ ತುಪ್ಪವನ್ನು ಹಾಕಿ. ನಂತರ ಒಲೆಯಿಂದ ಇಳಿಸಿ. ಬಿಸಿ ಇರುವಾಗಲೇ ತುಪ್ಪವನ್ನು ಅದರ ಮೇಲೆ ಹಾಕಿ ಕಾಯಿಚಟ್ನಿಯೊಂದಿಗೆ ಸವಿಯಿರಿ.

ಕಾಯಿ ಚಟ್ನಿ
ಅರ್ಧ ಕಪ್ ಆಗಲೇ ತುರಿದ ತೆಂಗಿನಕಾಯಿ ತುರಿ ಜೊತೆಗೆ ಹುರಿಗಡಲೆ ಎರಡರಿಂದ ಮೂರು ಚಮಚ, ಹುಣಸೆಹಣ್ಣು ಸ್ವಲ್ಪ, ಚಿಕ್ಕ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಗ್ಗರಣೆಗೆ ಒಂದು ಟೀ ಚಮಚ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ತಯಾರಿಸಿದ ಚಟ್ನಿಗೆ ಒಗ್ಗರಣೆ ಮಾಡಿ. ರುಚಿಕರವಾದ ಸುಲಭವಾಗಿ ತಯಾರಿಸುವ ರವಾ ಪೊಂಗಲ್ ತಯಾರಿಸಿ ಸವಿಯಿರಿ.

**

ಸಾಬುದಾನಿ ಫ್ರೂಟ್ಸ್ ಕಸ್ಟರ್ಡ್
ಬೇಕಾಗುವ ಸಾಮಗ್ರಿಗಳು:
ಸಾಬುದಾನಿ – 1ಕಪ್, ನೀರು – ಒಂದೂವರೆ ಕಪ್, ಹಾಲು – 1/2 ಲೀಟರ್, ವೆನಿಲ್ಲಾ ಕಸ್ಟರ್ಡ್ ಪೌಡರ್ – 2 ಟೇಬಲ್ ಚಮಚ, ಸಕ್ಕರೆ – ಒಂದೂವರೆ ಕಪ್

ಹಣ್ಣುಗಳು: ಸಿಹಿ ಮಾವಿನ ಹಣ್ಣು – 1 ಕಪ್ (ಸಿಕ್ಕರೆ), ದ್ರಾಕ್ಷಿ – 1/2 ಕಪ್, ಸೇಬು – 1/2 ಕಪ್, ಸಪೋಟ – 1/2 ಕಪ್, ದಾಳಿಂಬೆ – 1/2 ಕಪ್, ಬಾಳೆಹಣ್ಣು – 1/2 ಕಪ್, ಎಲ್ಲಾ ಹಣ್ಣುಗಳನ್ನು ಒಂದೇ ರೀತಿಯಲ್ಲಿ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಿಮಗೆ ಇಷ್ಟವಾದ ಹಣ್ಣುಗಳನ್ನು ಹಾಕಬಹುದು.

ತಯಾರಿಸುವ ವಿಧಾನ: ಸಾಬುದಾನಿಯನ್ನು 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಬಾಣಲೆಯಲ್ಲಿ ನೀರನ್ನು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಕುದಿಸಿ. ವೆನಿಲ್ಲಾ ಕಸ್ಟರ್ಡ್ ಪೌಡರ್‌ಗೆ ಸ್ವಲ್ಪ ತಣ್ಣನೆಯ ಹಾಲನ್ನು ಹಾಕಿ ಮಿಶ್ರಣ ಮಾಡಿ. ಕುದಿಸಿದ ಮಿಶ್ರಣಕ್ಕೆ ಕರಗಿಸಿಕೊಂಡ ಕಸ್ಟರ್ಡ್ ಪೌಡರ್ ಮಿಶ್ರಣವನ್ನು ಹಾಕಿ. ಈ ಮಿಶ್ರಣವೂ ಚೆನ್ನಾಗಿ ಒಂದಾಗಿ ಗಟ್ಟಿಯಾಗುತ್ತಾ ಬಂದಾಗ ಒಲೆಯನ್ನು ಆರಿಸಿ ಪೂರ್ತಿ ಆರಲು ಬಿಡಿ. ಆರಿದ ನಂತರ ಹಣ್ಣುಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ 1–2 ಗಂಟೆಯ ಕಾಲ ಫ್ರಿಡ್ಜ್‌ನಲ್ಲಿಟ್ಟು ತಣ್ಣಗೆ ಮಾಡಿ ಸವಿಯಲು ಕೊಡಿ.

**

ಕಾಯಿ ವಡೆ

ಬೇಕಾಗುವ ಸಾಮಗ್ರಿಗಳು: ತುರಿದ ತೆಂಗಿನಕಾಯಿ – 2 ಕಪ್, ಅಕ್ಕಿಹಿಟ್ಟು – 1 ಕಪ್, ಹಸಿಮೆಣಸು – 7-8, ಎಳ್ಳು – 1 ಟೀ ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಜೀರಿಗೆ – 1 ಟೀ ಚಮಚ, ಇಂಗು – ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ ಒಂದೂವರೆ ಟೇಬಲ್ ಚಮಚ, ನೀರು 1/4 ಕಪ್, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ತೆಂಗಿನಕಾಯಿ ತುರಿಯನ್ನು ಹಾಕಿ ಒಂದು ಸುತ್ತು ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಅಕ್ಕಿಹಿಟ್ಟು, ರುಬ್ಬಿದ ಮಿಶ್ರಣ, ಇಂಗು, ಎಳ್ಳು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಈ ಮಿಶ್ರಣವನ್ನು ಕಲೆಸಿಕೊಳ್ಳಿ. ಈ ಮಿಶ್ರಣಕ್ಕೆ ತುಪ್ಪವನ್ನು ಹಾಕಿ ಕಲೆಸಿ. ನಂತರ ಎಷ್ಟು ಬೇಕು ಅಷ್ಟು ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಕಲೆಸಿ. ಅದು ಪುರಿಯಂತೆ ತಟ್ಟುವ ರೀತಿಯಲ್ಲಿ ಇರಲಿ. ನಂತರ ಅದರಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತೆಗೆದುಕೊಂಡು ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ. ತುಂಬಾ ತೆಳ್ಳಗೆ ತಟ್ಟಬೇಡಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ತಟ್ಟಿಕೊಂಡ ಅಕ್ಕಿ ವಡೆಯನ್ನು ಹಾಕಿ. ಅದು ಎರಡೂ ಬದಿಯಲ್ಲಿ ಕೆಂಬಣ್ಣಕ್ಕೆ ಬಂದು ಪೂರಿಯಂತೆ ಉಬ್ಬಿದಾಗ ಎಣ್ಣೆಯಿಂದ ತೆಗೆಯಿರಿ. ರುಚಿಕರವಾದ ಕಾಯಿ ವಡೆ ತಯಾರಿಸಿ ಸವಿಯಿರಿ.

**

ದಿಢೀರ್ ಗೋಡಂಬಿ-ಅಕ್ಕಿಹಿಟ್ಟಿನ ಹಾಲುಬಾಯಿ

ಬೇಕಾಗುವ ಸಾಮಗ್ರಿಗಳು: ಅಕ್ಕಿಹಿಟ್ಟು – 1 ಕಪ್, ಗೋಡಂಬಿ – 1/2 ಕಪ್, ಪುಡಿ ಮಾಡಿದ ಬೆಲ್ಲ – ಒಂದೂವರೆ ಕಪ್, ಏಲಕ್ಕಿ ಬೀಜ– 1/4 ಟೀ ಚಮಚ, ತುಪ್ಪ – 3-4 ಟೇಬಲ್ ಚಮಚ, ನೀರು – ಐದು ಕಪ್.

ತಯಾರಿಸುವ ವಿಧಾನ: ಮೊದಲು ಮಿಕ್ಸಿಯಲ್ಲಿ ಗೋಡಂಬಿಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಅರ್ಧ ಕಪ್ ನೀರನ್ನು ಹಾಕಿ ಪುನಃ ಗೋಡಂಬಿಯನ್ನು ರುಬ್ಬಿಕೊಳ್ಳಿ. ಆಗ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಆಗುತ್ತದೆ. ನಂತರ ರುಬ್ಬಿದ ಗೋಡಂಬಿಯೊಂದಿಗೆ ಅಕ್ಕಿಹಿಟ್ಟು ಜೊತೆಗೆ ಅರ್ಧ ಕಪ್ ನೀರು ಸೇರಿಸಿ ರುಬ್ಬಿಕೊಳ್ಳಿ. ಏಲಕ್ಕಿ ಬೀಜವನ್ನು ಸೇರಿಸಿ ಇವುಗಳೊಂದಿಗೆ ರುಬ್ಬಿಕೊಳ್ಳಿ. ಬೆಲ್ಲವನ್ನು ಒಂದು ಕಪ್ ನೀರನ್ನು ಸೇರಿಸಿ ಕುದಿಸಿ ಸೋಸಿಕೊಳ್ಳಿ. ಅದರಲ್ಲಿ ಕಸಗಳಿದ್ದರೆ ಹೀಗೆ ಮಾಡಿ ಬೆಲ್ಲವನ್ನು ಹಾಕಿ, ಕಸವಿಲ್ಲವಾದರೆ ಬೆಲ್ಲವನ್ನು ಹಾಗೆಯೇ ರುಬ್ಬಿದ ಮಿಶ್ರಣಕ್ಕೆ ಸೇರಿಸಿ. ಬಾಣಲೆಗೆ ರುಬ್ಬಿದ ಮಿಶ್ರಣವನ್ನು ಸೋಸಿಕೊಂಡು ಹಾಕಿ, ಅದರಲ್ಲಿ ನುಣ್ಣಗಾಗದೆ ಉಳಿದ ಗೋಡಂಬಿ ಚೂರುಗಳಿದ್ದರೆ ತೆಗೆದು ಬಿಡಿ.ಬಾಣಲೆಯಲ್ಲಿ ರುಬ್ಬಿದ ಮಿಶ್ರಣ, ಬೆಲ್ಲ, ಉಳಿದ ನೀರು, ಎರಡು ಟೇಬಲ್ ಚಮಚ ತುಪ್ಪವನ್ನು ಹಾಕಿ ಸಣ್ಣ ಉರಿಯಲ್ಲಿ ಮಗುಚುತ್ತಾ ಇರಿ. ಅದು ಐದಾರು ನಿಮಿಷಗಳಲ್ಲಿ ತಳಬಿಟ್ಟು ಬರುತ್ತದೆ. ಹಾಗೆಯೇ ಕೈಯಲ್ಲಿ ಮುಟ್ಟಿದರೆ ಅಂಟುವುದಿಲ್ಲ. ಆಗ ಹಾಲುಬಾಯಿ ತಯಾರಾಗಿದೆ ಎಂದರ್ಥ. ತಯಾರಾದ ಹಾಲುಬಾಯಿಯನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ.ತಣ್ಣಗಾದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು