ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ ಎಲ್ಲೆಲ್ಲೂ ಕಳೆಗಟ್ಟಿದೆ. ಹಿಂದೆಲ್ಲ ಕೆಲವು ಸಮುದಾಯಗಳಿಗಷ್ಟೇ ಸೀಮಿತವಾಗಿದ್ದ ಗೋಕುಲಾಷ್ಟಮಿ ಇಂದು ಸರ್ವರಿಗೂ ಪ್ರಿಯವಾದ ಹಬ್ಬವಾಗಿದೆ. ಅಷ್ಟಮಿಯ ದಿನ ಎಲ್ಲರ ಮನೆ–ಮನಗಳಲ್ಲೂ ಬಾಲಕೃಷ್ಣರ ರಂಗು ಹಬ್ಬದ ಸಂಭ್ರಮವನ್ನು ಇಮ್ಮಡಿಯಾಗಿಸುತ್ತದೆ. ತಮ್ಮ ಕಂದಮ್ಮನಿಗೆ ಕೃಷ್ಣವೇಷ ತೊಡಿಸಿ ‘ಗೋಪಾಲಕ’ನ ಅಂದವನ್ನು ಕಣ್ತುಂಬಿಕೊಳ್ಳುವ ಪಾಲಕರು, ಮೊಬೈಲ್ನಲ್ಲಿ ಆ ದೃಶ್ಯಗಳನ್ನು ಸೆರೆಹಿಡಿದು ಸಂಭ್ರಮಿಸುತ್ತಾರೆ.

ಪ್ರೀತಿ, ಸಹಾನುಭೂತಿ, ಜ್ಞಾನದ ಸಂಕೇತವಾಗಿರುವ ಮುರಾರಿಯು ತಿಂಡಿಪ್ರಿಯನೂ ಹೌದು. ಭಾದ್ರಪದ (ಶ್ರಾವಣ) ಮಾಸದ ಕತ್ತಲೆಯ ಹದಿನೈದು ದಿನಗಳಲ್ಲಿ ಬರುವ (ಕೃಷ್ಣಪಕ್ಷ) ಎಂಟನೇ ದಿನ ರೋಹಿಣಿ ನಕ್ಷತ್ರದಲ್ಲಿ ಕೃಷ್ಣನ ಜನನವಾಗುತ್ತದೆ. ಆ ದಿನದಂದು ಜನ್ಮಾಷ್ಟಮಿಯನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಸಂಪ್ರದಾಯಬದ್ಧವಾಗಿ ಹಬ್ಬವನ್ನು ಆಚರಿಸುವ ಕುಟುಂಬಗಳಲ್ಲಿ ತರಹೇವಾರಿ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯಕ್ಕೆ ಇಡಲಾಗುತ್ತದೆ. ಮಾಧವನಿಗೆ ಅನ್ನ, ಈರುಳ್ಳಿ, ಬೆಳ್ಳುಳ್ಳಿ ವರ್ಜ್ಯ. ಅವಲಕ್ಕಿ, ಬೆಣ್ಣೆ, ಬೆಲ್ಲ ಎಂದರೆ ಅಚ್ಚುಮೆಚ್ಚು. ಅಂದು ತಯಾರಿಸುವ ಬಹುತೇಕ ಖಾದ್ಯಗಳಲ್ಲಿ ಅವಲಕ್ಕಿ, ಬೆಣ್ಣೆ ಸಮ್ಮಿಳಿತಗೊಂಡಿರುತ್ತವೆ. ವಾಸುದೇವನಿಗೆ ಪ್ರಿಯವಾದ ಸಿಹಿ, ಖಾರ, ಕುರುಕಲು ತಿಂಡಿಗಳು ಮನೆ–ಮನೆಗಳಲ್ಲಿ ತಯಾರಾಗುತ್ತವೆ. ನೈವೇದ್ಯಕ್ಕೆ ಏನಿಲ್ಲವೆಂದರೂ ಅವಲಕ್ಕಿ, ಬೆಣ್ಣೆ, ಬೆಲ್ಲದ ಹಾಜರಿ ಇದ್ದೇ ಇರುತ್ತದೆ.

‘ಅನಾದಿ ಕಾಲದಿಂದಲೂ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿದ್ದು, ಆತನಿಗೆ ಪ್ರಿಯವಾದ 60 ಬಗೆಯ ತಿನಿಸುಗಳನ್ನು ನಮ್ಮ ಅಜ್ಜಿ, ಅಮ್ಮ ತಯಾರಿಸುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಬೆಂಗಳೂರಿನಲ್ಲಿ ಕೇಟರಿಂಗ್ ನಡೆಸುವ ರೂಪಾ ಚಕ್ರಪಾಣಿ. ಜನ್ಮಾಷ್ಟಮಿಯ ದಿನಗಳಲ್ಲಿ ಸಾಂಪ್ರದಾಯಿಕ ತಿನಿಸುಗಳನ್ನು ಮಾಡಿ ಮಾರಾಟ ಮಾಡುವ ಅವರು, ಒಂದೂವರೆ ತಿಂಗಳ ಮುಂಚಿತವಾಗೇ ಖಾದ್ಯಗಳ ತಯಾರಿಯಲ್ಲಿ ತೊಡಗುತ್ತಾರೆ.

‘ಪ್ರತಿ ಖಾದ್ಯವನ್ನೂ ಮಡಿ, ಶುಚಿಯಿಂದಲೇ ಮಾಡಬೇಕು. ಅದಕ್ಕಾಗಿ ಶ್ರಮ, ಸಮಯ ತುಸು ಹೆಚ್ಚೇ ಬೇಕು. ಕೃಷ್ಣನಿಗಾಗಿ ಅಜ್ಜಿ, ಅಮ್ಮ ಮಾಡುತ್ತಿದ್ದಷ್ಟು ತಿನಿಸುಗಳನ್ನು ಈಗ ಮಾಡಲಾಗದಿದ್ದರೂ ಒಂದಷ್ಟು ರೂಢಿಸಿಕೊಂಡಿರುವೆ. ಇಂದಿನ ಒತ್ತಡದ ಬದುಕಿನಲ್ಲಿ ಬಹುತೇಕರಿಗೆ ತಾವೇ ತಯಾರಿಸುವಷ್ಟು ಸಮಯ ಇರುವುದಿಲ್ಲ. ಹಾಗಾಗಿ, ರೆಡಿಮೇಡ್ ತಿಂಡಿಗಳಿಗೆ ಹೆಚ್ಚು ಬೇಡಿಕೆ ಇದೆ. ಏನೇ ಆದರೂ ಅಂದಿನ ಬಹುತೇಕ ಖಾದ್ಯಗಳು ಇಂದು ತೆರೆಮರೆಗೆ ಸರಿದಿವೆ’ ಎನ್ನುತ್ತಾ ಅಕ್ಕಿ ಹುರಿಯುವುದರಲ್ಲಿ ತಲ್ಲೀನರಾದರು ರೂಪಾ.

ಮಾಡಿ ಸವಿಯಿರಿ ಮಾವುಂಡೆ

ಅಯ್ಯಂಗಾರ್ ಸಮುದಾಯದವರ ಸಾಂಪ್ರದಾಯಿಕ ಖಾದ್ಯಗಳಲ್ಲಿ ಮಾವುಂಡೆ ಸಹ ಒಂದು. ಇದರೊಂದಿಗೆ ಕಲ್ಮಾವುಂಡೆ ಕೂಡ ಜನಪ್ರಿಯ. ಬೆಲ್ಲದ ಗಟ್ಟಿ ಪಾಕದಲ್ಲಿ ತಯಾರಿಸುವ ಕಲ್ಮಾವುಂಡೆ ಸುಲಭಕ್ಕೆ ಚೂರಾಗದು. ಕಲ್ಲಿನಂತೆ ಗಟ್ಟಿಯಾದ, ತಿನ್ನಲು ಸಾಹಸವನ್ನೇ ಮಾಡಬೇಕಾದ ಕಲ್ಮಾವುಂಡೆ ಈಗ ತೆರೆಮರೆಗೆ ಸರಿದಿದೆ. ಈ ಉಂಡೆಯ ಗುಣಕ್ಕೆ ತದ್ವಿರುದ್ಧವಾದ ಮಾವುಂಡೆ ಮೃದುವಾಗಿರುತ್ತದೆ. ಹೆಚ್ಚು ಜನರಿಗೆ ತಿಳಿದಿಲ್ಲದ, ಅಪರೂಪದ ಮಾವುಂಡೆ ತಯಾರಿಸುವ ವಿಧಾನ ಇಲ್ಲಿದೆ:

ಬೇಕಾಗುವ ಸಾಮಗ್ರಿ

ಒಂದು ಕಪ್ ಹೆಸರುಬೇಳೆ, ಒಂದು ಕಪ್ ಕಡಲೆಬೇಳೆ, ಒಂದೂವರೆ ಕಪ್ ಬೂರಾ ಸಕ್ಕರೆ, ಮುಕ್ಕಾಲು ಕಪ್ ಸಣ್ಣದಾಗಿ ತುರಿದ ಒಣಕೊಬ್ಬರಿ, ಉಂಡೆ ಕಟ್ಟಲು ಬೇಕಾಗುವಷ್ಟು ತುಪ್ಪ, ಗೋಡಂಬಿ, ದ್ರಾಕ್ಷಿ, ಸ್ವಲ್ಪ ಏಲಕ್ಕಿ ಪುಡಿ.

ಹೀಗೆ ಮಾಡಿ

ಹೆಸರುಬೇಳೆ ಹಾಗೂ ಕಡಲೆಬೇಳೆಯನ್ನು ಕೆಂಪಗಾಗುವವರೆಗೆ ಹುರಿದು ತಣ್ಣಗಾದ ಬಳಿಕ ಗಿರಣಿಯಲ್ಲಿ ಹಿಟ್ಟು ಮಾಡಿಸಬೇಕು. ನಂತರ ಈ ಹಿಟ್ಟಿಗೆ ಬೂರಾ ಸಕ್ಕರೆ, ಒಣಕೊಬ್ಬರಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಕರಿದ ಗೋಡಂಬಿ, ದ್ರಾಕ್ಷಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಉಳಿದ ತುಪ್ಪವನ್ನು ಬಿಸಿ ಮಾಡಿ ಈ ಮಿಶ್ರಣಕ್ಕೆ ಸೇರಿಸಬೇಕು. ಉಂಡೆ ಕಟ್ಟುವ ಹದಕ್ಕೆ ತುಪ್ಪ ಹಾಕಿಕೊಂಡು ಉಂಡೆ ಕಟ್ಟಬೇಕು.

ಹಿಟ್ಟು ಮಾಡಿಸಿಟ್ಟುಕೊಂಡರೆ ಬೇಕೆಂದಾಗ ಸುಲಭದಲ್ಲಿ ಮಾಡಿಕೊಳ್ಳಬಹುದಾದ ಮಾವುಂಡೆ, ಮಕ್ಕಳಿಗೆ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ. ಬಿಸಿಯಾಗಿ ಇದ್ದಾಗಲೇ ಕಟ್ಟಬೇಕು, ಪಾಕ ಹಿಡಿಯಬೇಕು ಎಂಬ ಗೋಜಲಿಲ್ಲ.

ಹೀಗಿರುತ್ತದೆ ಆಚರಣೆ...

ಬಾಳೆಕಂದುಗಳಿಂದ ಸಿಂಗರಿಸಿದ ಮಂಟಪದಲ್ಲಿ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಗ್ಗುಲಲ್ಲೇ ಪುಟ್ಟದೊಂದು ತೊಟ್ಟಿಲನ್ನೂ ಕಟ್ಟಲಾಗುತ್ತದೆ. ಮಂಟಪದ ಸುತ್ತ ಹಣ್ಣು, ತರಕಾರಿ, ಚಕ್ಕುಲಿ, ನಿಪ್ಪಟ್ಟು, ಕರ್ಜಿಕಾಯಿಯಂತಹ ತಿಂಡಿಗಳನ್ನು ದಾರದಲ್ಲಿ ತೂಗು ಹಾಕಲಾಗುತ್ತದೆ. ಆ ದಿನ ಮನೆಯವರೆಲ್ಲರೂ ಉಪವಾಸವಿದ್ದು, ರಾತ್ರಿ 11 ಗಂಟೆಯ ಬಳಿಕ ಕೃಷ್ಣನಿಗೆ ಮಹಾಮಂಗಳಾರತಿ, ನೈವೇದ್ಯ ಅರ್ಪಿಸಿದ ಬಳಿಕ ಮೃಷ್ಟಾನ್ನ ಭೋಜನವನ್ನು ಸವಿಯುತ್ತಾರೆ. ಕೃಷ್ಣನು ಮಧ್ಯರಾತ್ರಿ ಜನಿಸಿದ ಎಂಬ ಪ್ರತೀತಿ ಇದ್ದು, ಬಹುತೇಕ ಕುಟುಂಬಗಳು ಆ ಸಮಯದಲ್ಲೇ ಜನ್ಮಾಷ್ಟಮಿ ಆಚರಣೆ ಮಾಡುತ್ತವೆ.

ಮಾರನೇ ದಿನ ‘ಆರತಿ’ ಬೆಳಗಲಾಗುತ್ತದೆ. ಮುತ್ತೈದೆಯರನ್ನು ಮನೆಗೆ ಕರೆದು, ಮನೆಯಲ್ಲಿ ತಯಾರಿಸಿದ ಚಕ್ಕುಲಿ, ಪುರಿಯುಂಡೆ, ಚುಂಡುಲು, ಪುಳಿಯೋಗರೆಯಂತಹ ತಿನಿಸುಗಳನ್ನು ಬಾಗಿನದೊಂದಿಗೆ ಕೊಡುವ ಸಂಪ್ರದಾಯ ಅನೂಚಾನವಾಗಿ ನಡೆದುಬಂದಿದೆ. ಹಬ್ಬ ಆಗಿ ಎರಡು ಅಥವಾ ಮೂರು ದಿನಗಳ ನಂತರ ಬರುವ ದ್ವಾದಶಿಯಂದು ಮಂಟಪವನ್ನು ಕದಲಿಸಲಾಗುತ್ತದೆ.

‘ಮನ್ನಾರ್ ಸಂಪ್ರದಾಯ ಪಾಲಿಸುವ ಕುಟುಂಬಗಳಲ್ಲಿ ರೋಹಿಣಿ ನಕ್ಷತ್ರದಂದು ಕೃಷ್ಣಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ತೋಳಪ್ಪರ್ ಸಂಪ್ರದಾಯದವರು ಅಷ್ಟಮಿ ತಿಥಿಯಂದು ಆಚರಿಸುತ್ತಾರೆ. ಈ ಆಚರಣೆ ಕೆಲವೊಮ್ಮೆ ಒಂದೇ ದಿನ ಬರುತ್ತದೆ. ಇನ್ನು ಕೆಲವೇಳೆ ಕೆಲವು ದಿನಗಳ ವ್ಯತ್ಯಾಸದಲ್ಲಿ ಬರುತ್ತದೆ’ ಎನ್ನುವ ರೂಪಾ, ಆಚರಣೆಯ ವಿವಿಧ ಮಜಲುಗಳನ್ನು ವಿವರಿಸಿದರು.

ಚಿತ್ತುಂಡೆ, ಚುಂಡುಲು, ಬರವಡೆ...

ಅವಲಕ್ಕಿಪ್ರಿಯ ಕೃಷ್ಣನಿಗೆ ಕುರುಕಲು ತಿಂಡಿಗಳೆಂದರೆ ಅಷ್ಟೇ ಪ್ರೀತಿಯಂತೆ. ಹಾಗಾಗಿ, ಎಣ್ಣೆಯಲ್ಲಿ ಕರಿದ ಖಾದ್ಯಗಳಿಗೆ ಜನ್ಮಾಷ್ಟಮಿಯಲ್ಲಿ ಅಗ್ರಸ್ಥಾನ. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ತೇಂಗೊಳಲು, ಮುಚ್ಚೋರೆ, ತೆಂಗಿನ ವಡೆ, ಚಿತ್ತುಂಡೆ, ಬರವಡೆ, ಪುರಿಯುಂಡೆ, ಶೇಂಗಾ ಉಂಡೆ, ಹುರಿಗಡಲೆ ಉಂಡೆ, ಎಳ್ಳುಂಡೆ, ಅವಲಕ್ಕಿ ಉಂಡೆ, ಮೊಸರವಲಕ್ಕಿ, ಗೊಜ್ಜವಲಕ್ಕಿ, ಕಾಬೂಲ್ ಕಡಲೆ ಅಥವಾ ಹೆಸರುಕಾಳಿನಿಂದ ತಯಾರಿಸುವ ಚುಂಡುಲು, ಮಾವುಂಡೆ, ಕಲ್ಮಾಉಂಡೆ... ಹೀಗೆ ತರಾವರಿ ನೈವೇದ್ಯಗಳನ್ನು ಕೃಷ್ಣನಿಗಾಗಿ ಇಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.