ಶನಿವಾರ, ಜನವರಿ 23, 2021
24 °C
ರೋಗನಿರೋಧಕ ಶಕ್ತಿ ವೃದ್ಧಿಗೆ ಹೆಚ್ಚಿದ ಒಲವು

PV Web Exclusive: ಇಮ್ಯುನಿಟಿಯತ್ತ ಎಲ್ಲರ ಚಿತ್ತ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

2020ರಲ್ಲಿ ಅತಿ ಹೆಚ್ಚು ಜನರು ಚಿಂತಿಸಿದ್ದು, ಚರ್ಚಿಸಿದ್ದು, ತಡಕಾಡಿದ್ದು ‘ಇಮ್ಯುನಿಟಿ’ ಬಗ್ಗೆ ಎನ್ನುತ್ತದೆ ಸಮೀಕ್ಷೆಯೊಂದು...

ಇಮ್ಯುನಿಟಿ, ರೋಗನಿರೋಧಕ ಶಕ್ತಿ– ಈ ಎರಡು ಪದಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಮೌಲ್ಯ ಪಡೆದುಕೊಂಡಿವೆ. ಆರೋಗ್ಯ ಸಿಬ್ಬಂದಿ, ವೈದ್ಯರು, ರೋಗಿಗಳ ಬಾಯಲ್ಲಿ ಮಾತ್ರ ಕೇಳಿಬರುತ್ತಿದ್ದ ಈ ಪದಗಳು ಈಗ ಎಲ್ಲರ ಬಾಯಲ್ಲೂ ಓಡಾಡುವ ಮಾತುಗಳಾಗಿವೆ. ಅಷ್ಟೇ ಅಲ್ಲ, ಎಲ್ಲರ ಜೀವನದಲ್ಲೂ ನಿರ್ಣಾಯಕ ಪಾತ್ರ ವಹಿಸುವಷ್ಟು ಶಕ್ತಿಶಾಲಿಯಾಗಿವೆ.

ಕಳೆದ 10-11 ತಿಂಗಳಿಂದ ಅತಿ ಹೆಚ್ಚು ಜನರು ಇಮ್ಯುನಿಟಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಚಿಂತಿಸುತ್ತಿದ್ದಾರೆ ಮತ್ತು ಅದಕ್ಕೆ ಪೂರಕವಾದ ಆಹಾರ, ಖಾದ್ಯ, ಪಾನೀಯ, ವ್ಯಾಯಾಮಗಳಿಗಾಗಿ ತಡಕಾಡುತ್ತಿದ್ದಾರೆ. ಕೆಲವರಿಗೆ ಗೂಗಲ್‌ ಗುರುವಾದರೆ, ಇನ್ನು ಕೆಲವರು ಬಲ್ಲ ಮೂಲಗಳಲ್ಲಿ ಮಾಹಿತಿ ಹೆಕ್ಕುತ್ತಿದ್ದಾರೆ. ಮತ್ತೆ ಕೆಲವರು ಬಂಧು–ಮಿತ್ರರಲ್ಲಿ, ಸ್ನೇಹಿತರು–ಸಹೋದ್ಯೋಗಿಗಳಲ್ಲಿ ಈ ಕುರಿತು ಚರ್ಚಿಸುತ್ತಿದ್ದಾರೆ. ರೋಗನಿರೋಧಕ ಶಕ್ತಿ ವೃದ್ಧಿಗೆ ವೃತ್ತಿಪರ ಮಾರ್ಗದರ್ಶನ ಕೋರುವವರೂ ಸಾಕಷ್ಟು ಜನ ಇದ್ದಾರೆ.

ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರು ಅಥವಾ ಜೀವನಶೈಲಿ ಕಾಯಿಲೆಗಳೊಂದಿಗೆ ಬದುಕುತ್ತಿರುವವರು ಕೋವಿಡ್‌–19 ಸೇರಿದಂತೆ ವೈರಸ್‌ಗಳ ಹಾವಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಹೇಳುತ್ತಲೇ ಇದ್ದಾರೆ. ಸಾಕಷ್ಟು ಅಧ್ಯಯನಗಳು ಸಹ ಇದನ್ನೇ ಒತ್ತಿ ಹೇಳುತ್ತವೆ. ಈ ಅಂಶ ಎಲ್ಲಾ ವಯೋಮಾನ, ಎಲ್ಲಾ ಪ್ರದೇಶಗಳ ಜನರನ್ನು ಎಚ್ಚರಿಸಿದಂತಿದೆ. ಕೋವಿಡ್‌-19ನ ಸಂದೇಶವೂ ಇದೇ ಆಗಿರುವುದರಿಂದ ಹೆಚ್ಚು ಜನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.

ಇದು ಕೇವಲ ಮಾತು–ಚರ್ಚೆಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಜನರ ವರ್ತನೆಯಲ್ಲಿ, ಮನಸ್ಥಿತಿಯಲ್ಲಿಯೂ ಸಹ ವ್ಯಕ್ತವಾಗುತ್ತಿದೆ. ಕಳೆದ 10 ತಿಂಗಳ ಅವಧಿಯಲ್ಲಿ ಜನರು, ಅದರಲ್ಲೂ ಮುಖ್ಯವಾಗಿ ಯುವಪೀಳಿಗೆ ಇಮ್ಯುನಿಟಿಯನ್ನು ಪ್ರೋತ್ಸಾಹಿಸುವ ಆಹಾರ–ವ್ಯಾಯಾಮ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ.

ಹೌದು, ಕೊರೊನಾ ಸಾಂಕ್ರಾಮಿಕ ರೋಗವು ಭಾರತ ಸೇರಿದಂತೆ ವಿಶ್ವದಾದ್ಯಂತ ಆರೋಗ್ಯ ನಿರ್ವಹಣೆಯ ದೃಷ್ಟಿಕೋನವನ್ನೇ ಬದಲಿಸಿದೆ. ಜನರ ವರ್ತನೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ಉಂಟುಮಾಡುತ್ತಿದೆ ಎನ್ನುತ್ತದೆ ಅಧ್ಯಯನವೊಂದು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜನರು ಯಾವ ರೀತಿಯ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಅವರ ಆರೋಗ್ಯ ಮಂತ್ರ ಯಾವುದು ಎನ್ನುವ ಬಗ್ಗೆ ವಿಎಲ್‌ಸಿಸಿ ಸಮೀಕ್ಷೆಯೊಂದನ್ನು ನಡೆಸಿದೆ. ಶೇ 78ರಷ್ಟು ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಪ್ರಜ್ಞಾಪೂರ್ವಕವಾಗಿ ಪ್ರಾರಂಭಿಸಿದ್ದಾರೆ. ಶೇ 35ರಷ್ಟು ಜನರು ತಮ್ಮ ಆಹಾರದಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದುಕೊಂಡಿದ್ದಾರೆ ಮತ್ತು ಶೇ 34ರಷ್ಟು ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮ, ಯೋಗ, ದೈಹಿಕ ಚಟುವಟಿಕೆಗಳಲ್ಲಿ ನಿಯಮಿತವಾಗಿ ತೊಡಗುತ್ತಿದ್ದಾರೆ ಎನ್ನುತ್ತದೆ ಈ ಸಮೀಕ್ಷೆ.

‘ಸ್ಥೂಲಕಾಯ ವಿರೋಧಿ ದಿನ’ದ ನೆಪದಲ್ಲಿ ನಡೆಸಲಾದ ವೆಬಿನಾರ್‌ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಭಾರತದ 135 ನಗರಗಳಿಂದ 220 ವಿಎಲ್‌ಸಿಸಿ ಸ್ವಾಸ್ಥ್ಯ ಮತ್ತು ಸೌಂದರ್ಯ ಚಿಕಿತ್ಸಾಲಯಗಳ, 22 ರಿಂದ 65 ವರ್ಷದೊಳಗಿನ 5 ಸಾವಿರಕ್ಕೂ ಹೆಚ್ಚು ಜನರನ್ನು ಒಳಗೊಂಡ ಈ ಸಮೀಕ್ಷೆಯಲ್ಲಿ ಅತಿಹೆಚ್ಚು ಯುವಜನರು ರೋಗನಿರೋಧಕ ಶಕ್ತಿಯ ವೃದ್ಧಿ ತಮ್ಮ ಪ್ರಮುಖ ಆದ್ಯತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶೇ 82ರಷ್ಟು ಜನರು ಲಸಿಕೆ ಪಡೆಯುವವರೆಗೆ, ಸ್ವಯಂ-ಪ್ರಯೋಗಕ್ಕಿಂತ ಹೆಚ್ಚಾಗಿ ಸ್ವಾಸ್ಥ್ಯ ಅಗತ್ಯಗಳಿಗಾಗಿ ವೃತ್ತಿಪರ ಮಾರ್ಗದರ್ಶನ ಪಡೆಯಲು ಬಯಸುತ್ತಾರೆ. ಶೇ 51ರಷ್ಟು ಭಾರತೀಯರು ತಮ್ಮ ಸ್ವಾಸ್ಥ್ಯ ಮತ್ತು ತೂಕ ನಿರ್ವಹಣೆಯ ಅಗತ್ಯಗಳಿಗಾಗಿ ವೃತ್ತಿಪರ ಮಾರ್ಗದರ್ಶನವನ್ನು ಬಯಸುತ್ತಾರೆ ಎನ್ನುತ್ತದೆ ಅಧ್ಯಯನ.

ಆದರೆ ಆರೋಗ್ಯ ಕೇಂದ್ರಗಳಲ್ಲಿ ಸುರಕ್ಷತೆ ಮತ್ತು ನೈರ್ಮಲ್ಯ ಇರಲೇಬೇಕು. ಈ ವಿಷಯದಲ್ಲಿ ರಾಜಿ ಇಲ್ಲ. ಆಸ್ಪತ್ರೆಗಳಲ್ಲಿ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳದೇ ವೃತ್ತಿಪರ ಮಾರ್ಗದರ್ಶನ ಪಡೆಯಲು ಸಿದ್ಧರಿಲ್ಲ ಎನ್ನುವವರ ಪ್ರಮಾಣ ಶೇ 95ರಷ್ಟಿದೆ. ಶೇ 60ರಷ್ಟು ಜನರು ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಶೇ 15 ರಿಂದ 40ರಷ್ಟು ಪ್ರೀಮಿಯಂ ಮೊತ್ತವನ್ನು ಪಾವತಿಸಲೂ ಸಹ ಸಿದ್ಧರಿದ್ದಾರೆ. ಇನ್ನೂ ಶೇ 26ರಷ್ಟು ಜನರು ವೃತ್ತಿಪರರ ಸಹಾಯ ಪಡೆಯಲು ಅನುಭವಿ ವೈದ್ಯಕೀಯ ತಂಡ ಅಥವಾ ವೈದ್ಯರನ್ನು ಹೊಂದಿರುವ ಸುರಕ್ಷಿತ ಕೇಂದ್ರಗಳಿಗೆ ಆದ್ಯತೆ ನೀಡುತ್ತಾರೆ.

2020 ಆರೋಗ್ಯದ ದೃಷ್ಟಿಯಲ್ಲಿ ನಿರ್ಣಾಯಕವಾದ ಕಾಲವೆಂದೇ ಹೇಳಬಹುದು. ಈ ಸಾಲಿನಲ್ಲಿ ಜನರು ಆರೋಗ್ಯದ ಬಗ್ಗೆ ಮಾತಾಡಿದಷ್ಟು, ಚರ್ಚಿಸಿದಷ್ಟು, ಚಿಂತಿಸಿದಷ್ಟು ಹಿಂದಿನ ಯಾವ ವರ್ಷಗಳಲ್ಲಿಯೂ ಮಾಡಿಲ್ಲ. ಆರೋಗ್ಯವಾಗಿರುವುದು ಮತ್ತು ಸದೃಢವಾಗಿರುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಮುಖ್ಯವಾಗಿದೆ. ಎಲ್ಲಾ ವಯೋಮಾನದವರು ಸಹ ಆರೋಗ್ಯ ನಿರ್ವಹಣೆಯತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಮನಸ್ಸು, ದೇಹದ ಸ್ವಾಸ್ತ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿ ಪ್ರತಿಯೊಬ್ಬರ ಪ್ರಾಮುಖ್ಯತೆಯಾಗಿದೆ. ಅದರಲ್ಲೂ ‘ಇಮ್ಯುನಿಟಿ’ ಬಗ್ಗೆ ಜನರು ತುಸು ಹೆಚ್ಚೇ ಎನ್ನುವಷ್ಟು ಚಿಂತಿತರಾಗಿದ್ದಾರೆ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು