ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35ರ ನಂತರವೂ ಅರಳಲಿ ತ್ವಚೆಯ ಅಂದ

Last Updated 1 ಜನವರಿ 2021, 19:30 IST
ಅಕ್ಷರ ಗಾತ್ರ

35ರ ನಂತರವೂ ಅಂದದ ತ್ವಚೆ ತಮ್ಮದಾಗಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಅದಕ್ಕೆಂದು ಸಾವಿರಗಟ್ಟಲೆ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುವುದು, ಸಿಕ್ಕ ಸಿಕ್ಕ ಕ್ರೀಮ್‌ಗಳನ್ನು ಹಚ್ಚುವುದು ಸರಿಯಲ್ಲ. 35 ವಯಸ್ಸಿನ ನಂತರವೂ ನಿಮ್ಮ ತ್ವಚೆ 20ರ ತರುಣಿಯ ತ್ವಚೆಯಂತೆ ಹೊಳೆಯಬೇಕು ಎಂದರೆ ಹೀಗೆ ಮಾಡಿ.

ಮುಖದಲ್ಲಿನ ಕೊಬ್ಬು ಕಡಿಮೆ ಮಾಡಿಕೊಳ್ಳಿ: 35 ವರ್ಷದ ನಂತರ ಮುಖದ ಅಂದ ಕೆಡಿಸುವ ಪ್ರಮುಖ ಅಂಶವೆಂದರೆ ಕತ್ತಿನ ಸುತ್ತಲಿನ ಕೊಬ್ಬು. ಇದರಿಂದ ಮುಖ ಹೆಚ್ಚು ಅಗಲವಾಗಿ, ಇಳಿಬಿದ್ದಿರುವ ಹಾಗೇ ಕಾಣುತ್ತದೆ. ಆ ಕಾರಣಕ್ಕೆ ಕುತ್ತಿಗೆ ಹಾಗೂ ಮುಖದ ಕೊಬ್ಬು ಕರಗಿಸುವ ಸುಲಭವಾದ ಹಾಗೂ ಸರಳವಾದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ. ನಿತ್ಯ ತಪ್ಪದೇ ಅದನ್ನು ಪಾಲಿಸಿ.

ತೂಕದ ಮೇಲೆ ಗಮನವಿರಲಿ: ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹೆಚ್ಚು ಹೆಚ್ಚು ಕೊಬ್ಬಿನಂಶ ಶೇಖರಣೆಯಾಗುತ್ತದೆ. ಹಲವರು ಮಗುವಾದ ಬಳಿಕ ದೇಹದ ಬಗ್ಗೆ ಜಾಸ್ತಿ ಕಾಳಜಿ ತೋರಿಸುವುದಿಲ್ಲ. ಮಕ್ಕಳಾದ ಮೇಲೆ ಯೋಗ ತರಗತಿ ಅಥವಾ ಜಿಮ್‌ಗೆ ಹೋಗಿ ತೂಕ ಇಳಿಸಿ. ಪ್ರತಿನಿತ್ಯ ಅರ್ಧ ತಾಸು ದೈಹಿಕ ಚಟುವಟಿಕೆಗೆ ಮೀಸಲಿಡಿ. ವಾಕಿಂಗ್‌, ಡಾನ್ಸ್‌, ಯೋಗ ಅಥವಾ ವ್ಯಾಯಾಮ ಯಾವುದೂ ಆಗಬಹುದು.

ಫೇಶಿಯಲ್ ಯೋಗ ಅಭ್ಯಾಸ ಮಾಡಿ: ಯೋಗ ದೇಹದ ಅಂದವನ್ನು ಕಾಪಾಡುವುದು ಮಾತ್ರವಲ್ಲ ಚರ್ಮದ ಹೊಳಪನ್ನೂ ಹೆಚ್ಚಿಸುತ್ತದೆ. ಅನೇಕ ಸೆಲೆಬ್ರೆಟಿಗಳು ತಮ್ಮ ತ್ವಚೆಯ ಅಂದ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಾರೆ. ಫೇಶಿಯಲ್ ಯೋಗದ ಅಭ್ಯಾಸದಿಂದ ಮುಖದ ಮೇಲಿನ ನೆರಿಗೆಗಳು ಹಾಗೂ ಗೆರೆಗಳನ್ನು ನಿವಾರಿಸಬಹುದು. ದವಡೆಯ ಬಳಿ ಕೈಬೆರಳನ್ನು ಇರಿಸಿ ಚರ್ಮವನ್ನು ನಿಧಾನಕ್ಕೆ ಕಿವಿಯವರೆಗೆ ಎಳೆಯಿರಿ. ಈ ಸರಳ ವ್ಯಾಯಾಮ ದವಡೆಯಲ್ಲಿನ ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ. ನೀವು ಪ್ರತಿನಿತ್ಯ ಬಳಸುವ ಕ್ರೀಮ್‌ ಅನ್ನು ಹಚ್ಚಿ ಕೈಯ ಹಿಂಭಾಗದಿಂದ ಮಸಾಜ್ ಮಾಡಿ. ಕುತ್ತಿಗೆಯ ಬಳಿ ಹೊರ ಮುಖವಾಗಿ ಹಾಗೂ ಮೇಲ್ಮುಖವಾಗಿ ಮಸಾಜ್ ಮಾಡಿ.

ಫೇಸ್‌ಪ್ಯಾಕ್‌ಗಳು: ನೈಸರ್ಗಿಕ ಫೇಸ್‌ಪ್ಯಾಕ್‌ಗಳು ಚರ್ಮದ ಕೋಶಗಳಿಗೆ ಮರುಜೀವ ನೀಡುತ್ತವೆ. ಲೋಳೆಸರ, ತುಳಸಿ, ಜೇನುತುಪ್ಪ, ಅರಿಸಿನ, ಮೊಸರು ಹಾಗೂ ಯಾವುದೇ ಹಣ್ಣಿನ ಫೇಸ್‌ಪ್ಯಾಕ್ ವಯಸ್ಸಿನ ಲಕ್ಷಣಗಳ ವಿರುದ್ಧ ಹೋರಾಡುತ್ತವೆ. ಅಲ್ಲದೇ ಚರ್ಮದ ಅಂದವನ್ನು ಹೆಚ್ಚಿಸುತ್ತವೆ. ಚರ್ಮದ ಅಂದವನ್ನು ಹೆಚ್ಚಿಸುವ ಇನ್ನೊಂದು ಪ್ರಮುಖ ಪ್ಯಾಕ್ ಎಂದರೆ ಐಸ್ ಪ್ಯಾಕ್‌. ಮಸ್ಲಿನ್‌ ಬಟ್ಟೆಯಲ್ಲಿ ಮಂಜುಗಡ್ಡೆಯನ್ನು ಸುತ್ತಿ ಮುಖದ ಮೇಲೆ ಸುರುಳಿಯಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ಮಂಜುಗಡ್ಡೆಯನ್ನು ನೇರವಾಗಿ ಮುಖಕ್ಕೆ ತಾಕಿಸಬೇಡಿ.

ಅಭ್ಯಂಗ: ಅಭ್ಯಂಗ ಚರ್ಮದ ಮೇಲಿನ ಕೊಳೆಯನ್ನು ತೊಡೆದುಹಾಕುವುದಲ್ಲದೇ ಚರ್ಮದ ಒಳಪದರಗಳಿಗೂ ಪುನಶ್ಚೇತನ ಕೊಡುತ್ತದೆ. ಇದರಿಂದ ಚರ್ಮ ಬಿಗಿಯಾಗುವುದಲ್ಲದೇ ಒಳಗಿನಿಂದಲೇ ಚರ್ಮದ ಅಂಗಾಂಶವನ್ನು ಪೋಷಿಸುತ್ತದೆ. ಅಲ್ಲದೇ ಇದು ರಕ್ತಸಂಚಾರವನ್ನು ಸರಾಗಗೊಳಿಸುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ಇದು ಮೂಳೆಯನ್ನು ಸದೃಢಗೊಳಿಸುತ್ತದೆ. ಚರ್ಮಕ್ಕೆ ಕಾಂತಿ ನೀಡುತ್ತದೆ.

ಸಕ್ಕರೆ ಹಾಗೂ ಕಾಫಿ: ಒಣಚರ್ಮವನ್ನು ನಿವಾರಿಸಲು ಸಕ್ಕರೆ ಹಾಗೂ ಕಾಫಿಯ ಸ್ಕ್ರಬ್‌ ತುಂಬಾನೇ ಸಹಾಯ ಮಾಡುತ್ತದೆ. ಇದು ಚರ್ಮವನ್ನು ಸ್ವಚ್ಛಗೊಳಿಸುವುದಲ್ಲದೇ ಚರ್ಮ ಉರಿ ಬರುವುದನ್ನು ತಪ್ಪಿಸುತ್ತದೆ. ಈ ಎರಡರ ಮಿಶ್ರಣದ ಸ್ಕ್ರಬ್‌ ಅನ್ನು ಮಸಾಜ್ ಮಾಡಿಕೊಳ್ಳುವುದರಿಂದ ರಕ್ತಸಂಚಾರವೂ ಚೆನ್ನಾಗಿ ಆಗುತ್ತದೆ.

ಗ್ರೀನ್ ಟೀ ಮತ್ತು ಜೇನುತುಪ್ಪ ಸೇವಿಸಿ: ಪ್ರತಿನಿತ್ಯ ಗ್ರೀನ್ ಟೀ ಹಾಗೂ ಜೇನುತುಪ್ಪ ಸೇವನೆಯೂ ಚರ್ಮಕ್ಕೆ ವಯಸ್ಸಾಗದಂತೆ ಕಾಪಾಡಲು ಸಹಕಾರಿ. ಇದು ದೇಹದಲ್ಲಿ ಕೊಬ್ಬಿನಂಶ ಕಡಿಮೆ ಮಾಡಿ ಚರ್ಮದಲ್ಲಿ ನೆರಿಗೆ ಮೂಡುವುದನ್ನು ತಡೆಯುತ್ತದೆ. ‌

(ಲೇಖಕ: ಆಯುರ್ವೇದ ವೈದ್ಯರು, ಆಯುರ್ವೇದಿಸಂ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT