ಮಂಗಳವಾರ, ಅಕ್ಟೋಬರ್ 27, 2020
27 °C
ಹಿರಿಯನಾಗರಿಕರನ್ನು ಬಿಟ್ಟು ಬಿಡದೇ ಕಾಡುವ ’ನೆನಪಿನ ಹಂಗು‘

PV Web Exclusive: ಅಸ್ತಿತ್ವವನ್ನು ಅಲುಗಾಡಿಸುವ ಆಲ್ಜೈಮರ್ಸ್‌

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

Prajavani

ಸಾಮಾಜಿಕವಾಗಿ ದೂರ ಉಳಿದು ಬಿಡುವ, ತನಗೆ ಗೊತ್ತಿರುವ ದೈನಂದಿನ ಕೆಲಸಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಲು ಸಾಧ್ಯವಾಗದಂತ ಸ್ಥಿತಿ. ಯಾವ ಅಸ್ತಿತ್ವಕ್ಕಾಗಿ ಜೀವನವಿಡೀ ಹೋರಾಟ ನಡೆದಿರುತ್ತೊ, ಅದಕ್ಕೂ ತನಗೂ ಸಂಬಂಧವೇ ಇರದ ಕೊಂಡಿ ತಪ್ಪಿದ ಪರಿಸ್ಥಿತಿ ಆಲ್ಜೈಮರ್ಸ್‌ನಿಂದ ಉಂಟಾಗುತ್ತದೆ.

ದೂರದ ಅಮೆರಿಕದಲ್ಲಿ ನೆಲೆಸಿರುವ ಮಗಳು, ಅಳಿಯ, ಮೊಮ್ಮೊಕ್ಕಳ ಹತ್ತಿರ ನಿತ್ಯವೂ ಮಾತನಾಡುತ್ತಿದ್ದ ಕಾವೇರಮ್ಮನಿಗೆ ಇದ್ದಕ್ಕಿದ್ದ ಹಾಗೇ ಮಗಳ ಎರಡನೇ ಮಗುವಿನ ಹೆಸರು ಮರೆತೇ ಹೋದಂತೆ. ವಾರಕ್ಕೊಮ್ಮೆಯಾದರೂ ಹೋಗಿ ಬರುತ್ತಿದ್ದ ಪಂಚಮುಖಿ ಗಣೇಶ ದೇವಸ್ಥಾನದ ಹಾದಿ ಆಗಾಗ ತಪ್ಪಿ ಗೊಂದಲಕ್ಕೆ ಒಳಗಾದಂತೆ. ಅವರಿಗೆ 70ರ ಅರಳು–ಮರಳು ಎನ್ನುವಂತಿಲ್ಲ. ಯಾಕೆಂದರೆ ಅವರಿಗಿನ್ನು 55 ಆಗಿಲ್ಲ.  

ಮೊನ್ನೆ ಮೊನ್ನೆಯಷ್ಟೆ ತಮ್ಮ ಮಗಳ ಎರಡನೇ ಮಗುವಿನ ಬಾಣಂತನವನ್ನು ಅಮೆರಿಕದಲ್ಲಿಯೇ ಮಾಡಿ, ಮಗುವಿನ ನಾಮಕರಣ ಶಾಸ್ತ್ರವನ್ನು ಮುಗಿಸಿ ಊರಿಗೆ ಖುಷಿಯಿಂದಲೇ ಮರಳಿದ್ದ ಅವರ ಬದುಕಿನಲ್ಲಿ ಎಲ್ಲವೂ ಅಚ್ಚುಕಟ್ಟುತನದಿಂದಲೇ ಕೂಡಿತ್ತು. ಆದರೆ, ಈಗ ಧುತ್ತನೆ ಎದುರಾದ ಈ ನೆನಪಿನ ಶಕ್ತಿಯ ಕೊರತೆ ಬದುಕಿನ ಮತ್ತೊಂದು ಮಗ್ಗುಲನ್ನು ತೋರಿಸಿದೆ. 

ಸ್ವಾಭಿಮಾನದಿಂದಲೇ ಬದುಕಿದ ಅವರಿಗೆ, ಈ ಹೊಸ ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎನ್ನುವುದು ಗೊತ್ತಾಗಲಿಲ್ಲ. ಜತೆಗೆ ಅಕಾಲಿಕವಾಗಿ ಬಹಳ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದ ಪತಿಯನ್ನು ನೆನೆದು ಕಣ್ಣೀರಿಡದೇ ಬೇರೆ ದಾರಿಯಿಲ್ಲ. ನಿತ್ಯ ಕೆಲಸಗಳನ್ನೆಲ್ಲ ಸಲೀಸಾಗಿ ಮಾಡುತ್ತಿದ್ದ, ಕ್ರಿಯಾಶೀಲ ವ್ಯಕ್ತಿತ್ವದ ಕಾವೇರಮ್ಮನಿಗೆ ಈಗ ಯಾವೂದರಲ್ಲೂ ಅಷ್ಟೇನೂ ಆಸಕ್ತಿಯಿಲ್ಲ

ಇದು ಮತ್ತೇನೂ ಅಲ್ಲ. ವಯಸ್ಸಾದಂತೆ ಹಿರಿಯ ನಾಗರಿಕರನ್ನು ಬಿಟ್ಟು ಬಿಡದೇ ಕಾಡುವ ಆಲ್ಜೈಮರ್ಸ್‌.

ಸಾಮಾಜಿಕವಾಗಿ ದೂರ ಉಳಿದು ಬಿಡುವ, ತನಗೆ ಗೊತ್ತಿರುವ ದೈನಂದಿನ ಕೆಲಸಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಲು ಸಾಧ್ಯವಾಗದಂತ ಸ್ಥಿತಿ. ಯಾವ ಅಸ್ತಿತ್ವಕ್ಕಾಗಿ ಜೀವನವಿಡೀ ಹೋರಾಟ ನಡೆದಿರುತ್ತೊ, ಅದಕ್ಕೂ ತನಗೂ ಸಂಬಂಧವೇ ಇರದ ಕೊಂಡಿ ತಪ್ಪಿದ ಪರಿಸ್ಥಿತಿ. 

ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಇಡೀ ಸೆಪ್ಟೆಂಬರ್‌ ತಿಂಗಳನ್ನು ಆಲ್ಜೈಮರ್ಸ್‌ ತಿಂಗಳಾಗಿ ಆಚರಿಸಲಾಗುತ್ತದೆ.

ಯಾರಲ್ಲಿ ಈ ಕಾಯಿಲೆ ಹೆಚ್ಚು: ಇದು ಹೆಚ್ಚಾಗಿ ಹಿರಿಯ ನಾಗರಿಕರನ್ನು ಕಾಡುವಂಥ ಕಾಯಿಲೆ. ಅದರಲ್ಲೂ ಆರಂಭದಲ್ಲಿ  ಪುರುಷರಿಗಿಂತ ಮಹಿಳೆಯರಲ್ಲಿಯೇ ಆಲ್ಜೈಮರ್‌ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅವರ ದೀರ್ಘಾಯುಸ್ಸೇ ಕಾರಣ ಎಂದು ನಂಬಲಾಗಿತ್ತು. ಆದರೆ, ಇತ್ತೀಚಿಗೆ ನಡೆದ ಸಂಶೋಧನೆಯ  ಪ್ರಕಾರ ಈಸ್ಟ್ರೋಜನ್ ಎನ್ನುವ ಹಾಮೋರ್ನ್‌ ಸ್ರವಿಸುವಿಕೆ ಕಡಿಮೆಯಾದಂತೆ ಈ ಸಮಸ್ಯೆ ಆವರಿಸಿಕೊಳ್ಳಬಹುದು. ಮೆನೊಪಾಸ್‌ನಂಥ ಅವಧಿಯಲ್ಲಿ ಈ ಕಾಯಿಲೆ ಕಾಡುವ ಸಾಧ್ಯತೆ ಇದೆ. 

ಫ್ರಾನ್ಸ್‌ಲ್ಲೊಂದು ಆಲ್ಜೈಮರ್ಸ್‌ ಹಳ್ಳಿ: ಇಂಥ ಸಮಸ್ಯೆಯಿಂದ ಬಳಲುತ್ತಿರುವ  ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಫ್ರಾನ್ಸಿನಲ್ಲಿ ಒಂದು ಹಳ್ಳಿಯನ್ನೇ ರೂಪಿಸಲಾಗಿದೆ. ಕೆಫೆ, ರೆಸ್ಟೋರೆಂಟ್‌, ಗ್ರಂಥಾಲಯ ಇರುವಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುವ ಈ ಹಳ್ಳಿಯಲ್ಲಿ 79 ವಯಸ್ಸಿಗೂ ಮೀರಿದವರೇ ಹೆಚ್ಚಿದ್ದಾರೆ. ಎಲ್ಲರೂ ಆಲ್ಜೈಮರ್ಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಸಹಾಯಕ್ಕಾಗಿ ಕೇರ್‌ ಟೇಕರ್‌ಗಳಿದ್ದು, ತಮ್ಮ ಮನೆಗೆ ಸುರಕ್ಷಿತವಾಗಿ ಬಿಡುತ್ತಾರೆ. ಕಳೆದು ಹೋದನೆಂಬ ಆಂತಕವಿರದ, ಎಲ್ಲಿ ಬೇಕಾದರೂ ತಿರುಗಾಡಿ ದಾರಿ ತಪ್ಪಿದರೂ ಚಿಂತೆ ಮಾಡಲು ಅವಕಾಶವೇ ಇಲ್ಲದಂತ ಹಳ್ಳಿಯಾಗಿ ಇದನ್ನು ರೂಪಿಸಲಾಗಿದೆ. 

ಹಾಗೆಂದು ಇದು ಆರೈಕೆ ಕೇಂದ್ರವಲ್ಲ. ಯಾವ ಸಿಬ್ಬಂದಿಯೂ ಇಲ್ಲ ಬಿಳಿ ಬಟ್ಟೆ ಧರಿಸುವುದಿಲ್ಲ. ಎಲ್ಲ ವಯೋವೃದ್ಧರು ಸಹಜವಾಗಿ ಬದುಕಲು ಅನುವು ಮಾಡಿಕೊಡುವಂತೆ ಈ ಹಳ್ಳಿಯನ್ನು ರೂಪಿಸಲಾಗಿದೆ. ಅವರ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಈ ಹಳ್ಳಿಯನ್ನು ಲ್ಯಾಂಡೈಸ್‌ ಆಲ್ಜೈಮರ್‌ ಎಂದೂ ಕರೆಯಲಾಗುತ್ತದೆ. ಡ್ಯಾಕ್ಸ್‌‌ ನಗರದಲ್ಲಿದ್ದು, ಪ್ಯಾರಿಸ್‌ನಿಂದ ಮೂರುವರೆ ಗಂಟೆ ಕ್ರಮಿಸಿದರೆ ಈ ಹಳ್ಳಿಯನ್ನು ತಲುಪಬಹುದು. 

ದೈಹಿಕವಾಗಿ ಕಾಡುವ ಇತರೆ ಆರೋಗ್ಯ ಸಮಸ್ಯೆಗಳು ಆಲ್ಜೈಮರ್ಸ್‌ ಉಂಟು ಮಾಡಬಹುದು. 

ಅನೀಮಿಯಾ: ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆ ಉಂಟಾಗುವ ಒಂದು ಸ್ಥಿತಿ. ಪೌಷ್ಟಿಕಾಂಶ ಆಹಾರ ಕೊರತೆ, ಸರಿಯಾದ ನಿದ್ದೆ ಇಲ್ಲದೆಯೂ ಮಿದುಳಿನ ಮೇಲೆ ಒತ್ತಡ ಉಂಟಾಗಬಹುದು. ಅನಿಮೀಯಾದಿಂದ ಮಿದುಳಿಗೆ ಸಮರ್ಪಕವಾಗಿ ಆಮ್ಲಜನಕ ಪೂರೈಕೆಯಾಗದೆ ತೊಂದರೆ ಕಾಣಿಸಿಕೊಳ್ಳಬಹುದು. 

ಖಿನ್ನತೆ ಮತ್ತು ಒತ್ತಡ: ವಯಸ್ಸಾದಂತೆ ಸಮಾಜ ಹಾಗೂ ಕುಟುಂಬದಿಂದ ಅತಿ ಕಡಿಮೆ ಸ್ಪಂದನೆ ಸಿಗುವ ಕಾರಣ ಬಹುತೇಕ ಹಿರಿಯ ನಾಗರಿಕರಲ್ಲಿ ಹೇಳಿಕೊಳ್ಳಲಾಗದ ಖಿನ್ನತೆ ಮತ್ತು ಒತ್ತಡ ಆವರಿಸುತ್ತದೆ. ಮನಸ್ಸು ಮಗುವಿನಂತಾಗುತ್ತದೆ. ಅಭದ್ರತಾ ಭಾವ ಆವರಿಸಿಕೊಳ್ಳುತ್ತದೆ. ಈ ಮಾನಸಿಕ ಕ್ಲೇಶಗಳು ಕ್ರಮೇಣ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. 

ವಿಟಮಿನ್‌ ಕೊರತೆ: ವಿಟಮಿನ್‌ ಬಿ 12ರ ಕೊರತೆಯೂ ನೆನಪಿನ ಶಕ್ತಿಯ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಈ ವಿಟಮಿನ್‌ ಕೊರತೆ ಕಾಣಿಸಿಕೊಳ್ಳುವುದಿಲ್ಲ. ಆದರೆ ದೀರ್ಘಕಾಲದ ಮಾತ್ರೆ ಹಾಗೂ ಔಷಧಿಯ ಸೇವನೆಯೂ ಕೊರತೆಯನ್ನು ತಂದೊಡ್ಡಬಹುದು. ವಿಟಮಿನ್‌ ಡಿ ಅಂಶವು ದೇಹದಲ್ಲಿ ಕಡಿಮೆಯಾಗುವುದರಿಂದಲೂ ನೆನಪಿನ ಶಕ್ತಿಯ ಮೇಲೆ ತೊಂದರೆ ಉಂಟು ಮಾಡಬಹುದು. ಸೂಕ್ತ ನಿದ್ದೆಯಿಲ್ಲದೇ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದೇ ಹೋಗಬಹುದು. 

ಅತಿಯಾದ ರಕ್ತದೊತ್ತಡ: ದೇಹದಲ್ಲಿ ರಕ್ತ ಪ್ರಮಾಣದ ಹರಿಯುವಿಕೆಯಲ್ಲಿ ಅಡಚಣೆಯುಂಟಾದಾಗ ಅದು ಮಿದುಳಿನ ಪರಿಣಾಮ ಬೀರುತ್ತದೆ. ಅತಿಯಾದ ರಕ್ತದ ಒತ್ತಡದಿಂದ ಮಿದುಳಿನ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು. ‌

ಇವುಗಳಲ್ಲದೇ ಟೈಪ್‌ 2 ಡಯಾಬಿಟೀಸ್‌‌, ಹರ್ಪಿಸ್‌ ಮತ್ತು ಇತರೆ ಸೋಂಕು, ಕಿವಿನೋವು ಕೂಡ ಮಿದುಳಿನ ಆರೋಗ್ಯದ ಮೇಲೆ ತೀವ್ರ ಹಾನಿ ಉಂಟು ಮಾಡಬಹುದು. ಆಗೆಲ್ಲ ಆಲ್ಜೈಮರ್ಸ್‌‌ ಕಾಣಿಸಿಕೊಳ್ಳಬಹುದು.

ಹಾಗೆಂದು ವಯಸ್ಸಾದಂತೆ ಸಹಜವಾಗಿ ಕೆಲವು ಸಂಗತಿಗಳು ಮರೆತು ಹೋಗುತ್ತವೆ. ನೆನಪಿನ ಶಕ್ತಿ ಮೊದಲಿನಷ್ಟು ಚುರುಕಾಗಿರುವುದಿಲ್ಲ. ಅವೆಲ್ಲವೂ ಆಲ್ಜೈಮರ್ಸ್‌‌ ಆಗಿರಬೇಕೆಂದಿಲ್ಲ. ಬದುಕನ್ನು ನಡೆಸಲು ಬೇಕಿರುವಷ್ಟು ನೆನಪಿನ ಶಕ್ತಿ ಕೈಕೊಟ್ಟಾಗ ಮಾತ್ರ  ಆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ವೈದ್ಯರನ್ನು ಕಾಣುವುದು ಒಳಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು