ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ | ಕೋಪ ಬಂದಾಗ ಹೀಗೆ ಮಾಡಿ...

Last Updated 22 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಕೋಪವನ್ನಾಗಲೀ, ಕೋಪಕ್ಕೆ ಕಾರಣವಾಗಿರುವ ಸಂಗತಿಗಳನ್ನಾಗಲೀ ಅರ್ಥಮಾಡಿಕೊಂಡು, ಅದಕ್ಕೆ ರಚನಾತ್ಮಕವಾಗಿ ಪ್ರತಿಕ್ರಿಯಿಸುವುದು ಸಿಟ್ಟನ್ನು ನಿಭಾಯಿಸುವ ಅತ್ಯಂತ ಪರಿಣಾಮಕಾರಿ ವಿಧಾನ. ಆದರೆ, ಇದು ಸುಲಭವಲ್ಲ.

‘ಸಿಟ್ಟಿನ ಕೈಗೆ ಬುದ್ಧಿ ನೀಡಬಾರದು’, ‘ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತವಾದಾಗ ಮರಳಿ ಬಾರದು’ – ಹೀಗೆ ಜನಪದದಲ್ಲಿ ಸಿಟ್ಟಿನ ಕುರಿತಾಗಿ ಇರುವಷ್ಟು ಗಾದೆಗಳು ಬೇರೆ ಯಾವ ಭಾವನೆಯ ಬಗ್ಗೆಯೂ ಇರಲಾರದು. ಕೋಪವು ಸಹಜವಾದ ಮತ್ತು ಆರೋಗ್ಯಕರವಾದ, ಆದರೆ ಬಹಳ ಪ್ರಬಲವಾದ ಉದ್ವೇಗ. ಹೀಗಾಗಿ, ಅದನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ. ಇಲ್ಲವಾದರೆ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎನ್ನುವ ಮಾತಿಗೆ ನಮ್ಮ ಕೋಪವೇ ನಿದರ್ಶನವಾಗುತ್ತದೆ. ಕೋಪಕ್ಕೆ ತೀವ್ರವಾದ ಘಾತಕ ಶಕ್ತಿಯಿದೆ. ಅದು ಸಂಬಂಧಗಳನ್ನು ಹಾಳುಗೆಡವಬಲ್ಲದು; ಕೆಲಸಗಳನ್ನು ಕೆಡಿಸಬಲ್ಲದು; ಜೀವನದ ಗುಣಮಟ್ಟವನ್ನು ಇಳಿಸಬಲ್ಲದು.

ಕೋಪವನ್ನು ನಮ್ಮ ನಿಯಂತ್ರಣದಲ್ಲಿ ಇರಿಸದಿದ್ದರೆ ನಾವೇ ಅದರ ನಿಯಂತ್ರಣಕ್ಕೆ ಸಿಲುಕಿಬಿಡುವ ಅಪಾಯವಿದೆ. ಶಾಂತಸ್ಥಿತಿಯಲ್ಲಿರುವಾಗ ಈ ಮಾತುಗಳನ್ನು ಬಹುತೇಕ ಎಲ್ಲರೂ ತಿಳಿದಿರುತ್ತಾರೆ; ಒಪ್ಪುತ್ತಾರೆ. ಆದರೆ, ಕೋಪ ಆವರಿಸಿದಾಗ ಇದ್ಯಾವುದೂ ಪರಿಗಣನೆಗೆ ಬಾರದೆ ಹೋಗುತ್ತದೆ.

ಕೋಪದ ಹಂತಗಳು ಹಲವಾರು. ಸಣ್ಣ ಚಡಪಡಿಕೆಯಿಂದ ಹಿಡಿದು ತೀವ್ರ ಆಕ್ರೋಶದವರೆಗೆ ಇದರ ವ್ಯಾಪ್ತಿ. ಕೋಪದ ಸಮಯದಲ್ಲಿ ಶರೀರ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಸಿಲುಕುತ್ತದೆ; ಹಾರ್ಮೋನುಗಳ ಮಟ್ಟ ಏರುಪೇರಾಗುತ್ತದೆ; ಹೃದಯದ ಬಡಿತ ಹೆಚ್ಚುತ್ತದೆ; ರಕ್ತದ ಒತ್ತಡ ಅಧಿಕವಾಗುತ್ತದೆ; ಉಸಿರಾಟದ ಗತಿ ಬದಲಾಗುತ್ತದೆ; ಮಾಂಸಖಂಡಗಳು ಬಿಗಿಯಾಗುತ್ತವೆ; ದೃಷ್ಟಿ ಮಂಜಾಗುತ್ತದೆ; ಆಲೋಚನೆಗಳು ಮಸುಕಾಗುತ್ತವೆ. ಶರೀರದಲ್ಲಿ ಇಷ್ಟೊಂದು ಬದಲಾವಣೆಗಳನ್ನು ತರಬಲ್ಲ ಭಾವನೆಗಳು ಹೆಚ್ಚಿಲ್ಲ.

ಕೋಪಕ್ಕೆ ಕಾರಣವಾಗುವ ವಿಷಯಗಳು ಆಂತರಿಕವೂ ಇರಬಹುದು, ಬಾಹ್ಯವೂ ಆಗಬಹುದು. ಕಿರಿಕಿರಿ ಮಾಡುವ ವ್ಯಕ್ತಿಗಳು, ಹತಾಶೆಗೆ ಕಾರಣವಾಗುವ ಸಂದರ್ಭಗಳು, ಹಳೆಯ ಘಟನೆಗಳ ನೆನಪುಗಳು ಮೊದಲಾದುವು ಸಿಟ್ಟನ್ನು ತರಿಸಬಹುದು. ಕೋಪದ ಮೊದಲ ಪ್ರತಿಕ್ರಿಯೆ ಎದುರಾಳಿಯ ಮೇಲೆ ಮುಗಿಬೀಳುವ ಆಕ್ರಮಣ ಪ್ರವೃತ್ತಿ. ಇದು ಸರಿಸುಮಾರು ಎಲ್ಲ ಪ್ರಾಣಿಗಳಲ್ಲೂ ಕಾಣುವ ನಡವಳಿಕೆ. ಆದರೆ ಕಾನೂನು, ಸಭ್ಯತೆ, ಸಾಮಾನ್ಯಜ್ಞಾನ, ಸಾಮಾಜಿಕ ಕಟ್ಟುಪಾಡುಗಳ ನಿಯಂತ್ರಣದಲ್ಲಿರುವ ನಾಗರಿಕ ಸಮಾಜದಲ್ಲಿ ಈ ರೀತಿಯ ವರ್ತನೆ ಘಾತಕವಾಗಬಲ್ಲದು. ಹೀಗಾಗಿ, ಎಷ್ಟೇ ಸಹಜವಾದ ಭಾವನೆಯಾದರೂ, ಕೋಪವನ್ನು ನಿರ್ವಹಿಸುವುದು ಜೀವನದ ಅಗತ್ಯಗಳಲ್ಲಿ ಒಂದು.

ಸಿಟ್ಟಿನ ನಿಯಂತ್ರಣದಲ್ಲಿ ಹಲವಾರು ದಾರಿಗಳಿವೆ. ಮೊದಲನೆಯ ಉದಾಹರಣೆ ಕೋಪದ ಅಭಿವ್ಯಕ್ತಿ. ಆಕ್ರಮಣಶೀಲವಲ್ಲದ ರೀತಿಯಲ್ಲಿ ಸಿಟ್ಟನ್ನು ಹೊರಹಾಕುವುದು ಆರೋಗ್ಯಕರ ವಿಧಾನವೂ ಹೌದು. ಆಯಾ ಸಂದರ್ಭದಲ್ಲಿ ಕೋಪ ತರಿಸುವ ಕಾರಣವೇನು; ಆ ಕಾರಣವನ್ನು ಬದಿಗೊತ್ತಿ ಗಮ್ಯವನ್ನು ಸಾಧಿಸಲು ಸಾಧ್ಯವೇ; ಈ ಹಾದಿಯಲ್ಲಿ ಇರಬಹುದಾದ ಅಡಚಣೆಗಳೇನು; ಈ ಪರಿಸ್ಥಿತಿಯಲ್ಲಿ ಬೇರೆ ಯಾವ ಪರ್ಯಾಯಗಳಿವೆ – ಮೊದಲಾದ ವಿಷಯಗಳನ್ನು ವಿಶ್ಲೇಷಿಸಿ, ನಮ್ಮ ಅಗತ್ಯಗಳನ್ನು ಸಾಧಿಸಿಕೊಳ್ಳಬೇಕಾಗುತ್ತದೆ.

ಉದಾಹರಣೆಗೆ, ಯಾವುದೋ ತುರ್ತು ಕೆಲಸಕ್ಕೆ ಹೋಗುವಾಗ ವಾಹನಸಂಚಾರದ ದಟ್ಟಣೆಯಿಂದ ಮನಸ್ಸು ವ್ಯಗ್ರವಾಗುತ್ತದೆ. ಮುಂದೆ ಇರುವ ವಾಹನ ಹೊರಡುವುದು ಕೆಲಕ್ಷಣಗಳು ತಡವಾದರೂ ಅಸಾಧ್ಯ ಸಿಟ್ಟು ಬರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವರು ಜೋರಾಗಿ ಹಾರ್ನ್ ಒತ್ತಿ ಸದ್ದು ಮಾಡುತ್ತಾರೆ; ಕೆಲವರು ಕೆಟ್ಟ ಭಾಷೆ ಬಳಸಿ ಕೂಗಾಡುತ್ತಾರೆ; ಕೆಲವರು ಆಂಗಿಕ ಚೇಷ್ಟೆಗಳನ್ನು ಮಾಡುತ್ತಾರೆ; ಕೆಲವರು ಹೊಡೆಯಲು ಮುಂದಾಗುತ್ತಾರೆ; ಕೆಲವರು ಇತರ ವಾಹನಗಳ ಸಂಚಾರಕ್ಕೆ ಅಪಾಯವಾಗುವಂತೆ ತಮ್ಮ ವಾಹನವನ್ನು ಭರ್‍ರನೆ ಪಕ್ಕದ ಲೇನ್‌ಗೆ ತಿರುಗಿಸುತ್ತಾರೆ.

ಇವು ಹೆಚ್ಚಿನದೇನನ್ನೂ ಸಾಧಿಸಲಾರವು. ಜೊತೆಗೆ ಅಪಾಯಕಾರಿ ಕೂಡ. ಇದರ ಬದಲಿಗೆ ತಂತ್ರಜ್ಞಾನದ ಸಹಾಯ ಪಡೆಯುವುದು ಸೂಕ್ತ. ಗಮ್ಯದಲ್ಲಿರುವ ವ್ಯಕ್ತಿಗೆ ಫೋನು ಮಾಡಿ ಸಂದರ್ಭವನ್ನು ವಿವರಿಸಿ, ಕೆಲನಿಮಿಷಗಳ ಹೆಚ್ಚಿನ ಅವಧಿಯನ್ನು ಕೊಡುವಂತೆ ಕೇಳುವುದು; ವಾಹನಸಂಚಾರದ ದಟ್ಟಣೆಯನ್ನು ತೋರುವ ಆ್ಯಪ್‌ಗಳನ್ನು ಬಳಸಿ ಪರ್ಯಾಯ ಮಾರ್ಗಗಳನ್ನು ಹುಡುಕುವುದು; ಸಂಚಾರ ದಟ್ಟಣೆಯಿಂದ ಮುಕ್ತವಾಗಿರುವ ಮೆಟ್ರೊ ರೈಲುಗಳನ್ನು ಬಳಸುವುದು; ವಿಡಿಯೊ ಕರೆಗಳ ಮೂಲಕ ಕೆಲಸವನ್ನು ಸಾಧಿಸುವುದು – ಇಂತಹ ಹಲವಾರು ಮಾರ್ಗಗಳು ಎಷ್ಟೋ ಬಾರಿ ನಮ್ಮ ಖುದ್ದು ಓಡಾಟಕ್ಕೆ ಪರ್ಯಾಯವಾಗಬಲ್ಲವು. ಸಿಟ್ಟನ್ನು ನಿಯಂತ್ರಿಸಿದರೆ ಮಾತ್ರ ಇತರ ದಾರಿಗಳು ಕಾಣುತ್ತವೆ. ಇಲ್ಲವಾದರೆ ವಾಹನದ ಹಾರ್ನ್ ಕೂಡ ನಮ್ಮ ಮನಸ್ಸಿನಂತೆಯೇ ಕೆಟ್ಟುಹೋಗುತ್ತದೆ.

ಮತ್ತೊಂದು ದಾರಿ ಕೋಪವನ್ನು ನುಂಗಿಕೊಳ್ಳುವುದು. ಈ ರೀತಿ ಹತ್ತಿಕ್ಕಿದ ಕೋಪವನ್ನು ಬೇರೆ ಯಾವುದಾದರೂ ಹಾದಿಯಲ್ಲಿ ಹಾಯಿಸಬೇಕು. ಸಿಟ್ಟಿನಿಂದ ಕುದಿಯುವ ಮನಸ್ಸಿಗೆ ಯಾವುದಾದರೂ ಮಾರ್ಗೋಪಾಯ ಬೇಕು. ಇಲ್ಲವಾದರೆ ಅದು ನಮ್ಮ ಶರೀರದ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕೋಪವನ್ನು ನಿರ್ವಹಿಸಲಾಗದೇ ಆಂತರಿಕವಾಗಿ ನುಂಗಿಕೊಳ್ಳುವವರಲ್ಲಿ ಅಧಿಕ ರಕ್ತದೊತ್ತಡ, ಖಿನ್ನತೆ, ನರಗಳ ದೌರ್ಬಲ್ಯ, ಹೃದ್ರೋಗಗಳು ಕಾಡಬಹುದು. ಸಿನಿಕರು, ಹಗೆ ಸಾಧಿಸುವ ಮನಃಸ್ಥಿತಿಯವರು, ಇತರರ ಕುರಿತು ಕೀಳಾಗಿ ಮಾತನಾಡುವವರು, ಪ್ರತಿಯೊಂದು ವಿಷಯವನ್ನೂ ಅವಹೇಳನ ಮಾಡುವವರು, ಸಂಬಂಧಗಳನ್ನು ನಿಭಾಯಿಸುವ ತಾಕತ್ತು ಇಲ್ಲದವರು, ಯಾವುದೇ ಸಲಹೆಯನ್ನೂ ಪೂರ್ವಾಪರ ವಿವೇಚನೆಯಿಲ್ಲದೆ ಕುಹಕವಾಡುವ ಬಹುತೇಕ ಮಂದಿಗೆ ತಮ್ಮ ಕೋಪವನ್ನು ನಿಯಂತ್ರಿಸುವ ಸಾಮರ್ಥ್ಯ ಇರುವುದಿಲ್ಲ. ಅಂತಹವರ ಪ್ರಕ್ಷುಬ್ಧ ಮನಃಸ್ಥಿತಿಗೆ ಕಾರಣ ಬಹುಕಾಲದಿಂದ ಆಂತರಿಕವಾಗಿ ನುಂಗಿಕೊಂಡ ಸಿಟ್ಟಿನ ಪ್ರಸಂಗಗಳು.

ಆದರೆ ಆ ವಾಸ್ತವದ ಪ್ರಜ್ಞೆ ಅವರಲ್ಲಿ ಇರುವುದಿಲ್ಲ. ಸಿಟ್ಟನ್ನು ಹತ್ತಿಕ್ಕಬೇಕಾದ ಇಂತಹ ಪರಿಸ್ಥಿತಿಗಳಲ್ಲಿ ಕೂಡಲೆ ಆಲೋಚನೆಯ ಧಾಟಿಯನ್ನು ಬದಲಾಯಿಸಬೇಕು. ಯಾವುದಾದರೂ ಧನಾತ್ಮಕ ಸಂಗತಿಯ ಬಗ್ಗೆ ಯೋಚಿಸಬೇಕು. ಈ ಮುನ್ನ ಸ್ವಲ್ಪ ಸಮಯ ವಹಿಸಿ ನಿರ್ಧಾರಕ್ಕೆ ಬರಲು ಯೋಜಿಸಿದ್ದ ಇತರ ಕೆಲವು ವಿಷಯಗಳನ್ನು ಚಿಂತಿಸಬಹುದು. ಕೋಪಕ್ಕೆ ಕಾರಣವಾಗಿರುವ ಪ್ರಸಂಗದಿಂದ ಮನಸ್ಸನ್ನು ವಿಮುಖಗೊಳಿಸುವುದು ಸಿಟ್ಟಿನ ನಿರ್ವಹಣೆಯ ತಂತ್ರಗಳಲ್ಲಿ ಒಂದು.

ಕೋಪವನ್ನಾಗಲೀ, ಕೋಪಕ್ಕೆ ಕಾರಣವಾಗಿರುವ ಸಂಗತಿಗಳನ್ನಾಗಲೀ ಅರ್ಥಮಾಡಿಕೊಂಡು, ಅದಕ್ಕೆ ರಚನಾತ್ಮಕವಾಗಿ ಪ್ರತಿಕ್ರಿಯಿಸುವುದು ಸಿಟ್ಟನ್ನು ನಿಭಾಯಿಸುವ ಅತ್ಯಂತ ಪರಿಣಾಮಕಾರಿ ವಿಧಾನ. ಆದರೆ, ಇದು ಸುಲಭವಲ್ಲ. ಇದನ್ನು ಸಾಧಿಸಲು ಸಾಕಷ್ಟು ಪ್ರಯತ್ನ, ಕೆಲವೊಮ್ಮೆ ತರಬೇತಿ, ಹಿಡಿಯುತ್ತದೆ. ಕೋಪದ ವೇಳೆಯಲ್ಲಿ ನಮ್ಮ ವೈಚಾರಿಕ ಜ್ಞಾನ ಕುಂದುತ್ತದೆ; ತರ್ಕಶಕ್ತಿ ಕುಂಠಿತವಾಗುತ್ತದೆ. ಕೆಲವೊಮ್ಮೆ ಮನಸ್ಸು ಸಿಟ್ಟಿನ ಘಟನೆಯನ್ನೇ ಪದೇ ಪದೇ ನೆನೆಯುತ್ತಾ ‘ತರಚು ಗಾಯವ ಕೆರೆದು ಹುಣ್ಣನಾಗಿಸುವ’ ಕಪಿಯಂತೆ ವರ್ತಿಸುತ್ತದೆ.

ಇಂತಹ ತರ್ಕಶೂನ್ಯ ವೇಳೆಯಲ್ಲಿ ಚಿಂತನೆಗಳನ್ನು ನಿಗ್ರಹಿಸುವುದು ಕಷ್ಟಸಾಧ್ಯ. ಋಣಾತ್ಮಕ ಆಲೋಚನೆಗಳು ಪ್ರವಹಿಸುವಾಗ ‘ಎಲ್ಲವೂ ಮುಗಿದುಹೋಯಿತು’ ಎನ್ನುವುದಕ್ಕಿಂತಲೂ ‘ಇಂತಹ ಅನೇಕ ಸಂಕಷ್ಟಗಳನ್ನು ಈಗಾಗಲೇ ಅನುಭವಿಸಿ ಗೆದ್ದಿದ್ದೇನೆ. ಇದೂ ಒಂದು ಅನುಭವ ಮಾತ್ರ’ ಎನ್ನುವ ಮನಃಸ್ಥಿತಿ ಪರಿಣಾಮಕಾರಿ.

ಸಿಟ್ಟನ್ನು ಸಮರ್ಥಿಸಿಕೊಳ್ಳುವುದು ಅದಕ್ಕೆ ವಶರಾದಂತೆ. ಕೋಪವೆನ್ನುವುದು ನ್ಯಾಯಬದ್ಧವಾಗಿಯೇ ಇದ್ದರೂ, ಅದರಿಂದ ಹೊರಗೆ ನಿಂತು ಆಲೋಚಿಸವುದು ಸೂಕ್ತ. ಸಿಟ್ಟಿನ ವೇಳೆ ಆಡುವ ಅತಾರ್ಕಿಕ ಮಾತುಗಳು ನಮ್ಮ ಪರವಾಗಿ ಸಹಾನುಭೂತಿ ಇರುವವರನ್ನೂ ನಮ್ಮಿಂದ ದೂರ ಮಾಡಬಲ್ಲದು. ಎಲ್ಲ ಸಂದರ್ಭಗಳನ್ನೂ ಏಕಾಂಗಿಯಾಗಿ ನಿಭಾಯಿಸಲಾಗದು. ಇತರರ ಸಹಕಾರ ಬೇಕಾದಾಗ, ಸಿಟ್ಟನ್ನು ನಿಯಂತ್ರಿಸಬಲ್ಲ ವ್ಯಕ್ತಿಯ ಬಗ್ಗೆ ತಂಡದ ಎಲ್ಲರಿಗೂ ಗೌರವ ಬೆಳೆಯುತ್ತದೆ. ಕೋಪದ ವೇಳೆ ಉಸಿರಾಟದ ಬಗ್ಗೆ ಗಮನ ಕೊಡುವುದು, ಸ್ನಾಯುಗಳ ಬಿಗಿತವನ್ನು ಸಡಿಲಗೊಳಿಸುವುದು ಪರಿಣಾಮಕಾರಿ.

ಇದರಿಂದ ಗಮನ ಒಂದೆಡೆ ಕೇಂದ್ರೀಕೃತವಾಗಿ, ತರ್ಕಬದ್ಧ ಆಲೋಚನೆಗೆ ಸಹಕಾರಿಯಾಗುತ್ತದೆ. ಸಿಟ್ಟು ಶಾಂತವಾದಾಗ, ಯಾವ ಕಾರಣಕ್ಕಾಗಿ ಅನಗತ್ಯ ಉದ್ವೇಗಕ್ಕೆ ಒಳಗಾದವೆಂದು ವಿವೇಚಿಸಿ, ಭವಿಷ್ಯದಲ್ಲಿ ಅದಕ್ಕೆ ಆಸ್ಪದ ನೀಡದಿರುವುದು ಕೋಪದ ನಿರ್ವಹಣೆಯಲ್ಲಿ ಪ್ರಮುಖ ಬೆಳವಣಿಗೆ. ಇದ್ಯಾವುದೂ ಕೆಲಸಕ್ಕೆ ಬಾರದಿದ್ದರೆ ಮಾನಸಿಕ ತಜ್ಞರನ್ನು ಕಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT