ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್‌ನೆಸ್‌ ಮ್ಯಾರಥಾನ್‌ ‘ಅನುಭವ’

Last Updated 1 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ದೇಹ ತೂಕವನ್ನು ಇಳಿಸಿಕೊಳ್ಳಲು 8 ವರ್ಷಗಳ ಹಿಂದೆ ಓಡಲು ಆರಂಭಿಸಿದವರು ಅನುಭವ್‌ ಕರ್ಮಾಕರ್‌. ಇದು ಅವರನ್ನು ಮ್ಯಾರಥಾನ್‌ ಅಥ್ಲಿಟ್‌ ಆಗಿ ರೂಪಿಸಿದೆ. ರನ್ನಿಂಗ್‌, ಸೈಕ್ಲಿಂಗ್‌ನಲ್ಲಿ ನುರಿತ ಅಥ್ಲಿಟ್‌ ಆಗಿರುವ ಅವರು ತಮ್ಮ ಫಿಟ್‌ನೆಸ್‌ ಗುಟ್ಟನ್ನು ತೆರೆದಿಟ್ಟಿದ್ದಾರೆ

ಮ್ಯಾರಥಾನ್‌ ಅಥ್ಲಿಟ್‌ ಆಗುವುದು ಸುಲಭದ ಮಾತಲ್ಲ. ಕಿ.ಮೀ ಗಟ್ಟಲೆ ದೂರದ ಗುರಿಯನ್ನು ಮುಟ್ಟಬೇಕಾದರೆ ಹಲವು ವರ್ಷ ಬೆವರು ಹರಿಸಬೇಕಾಗುತ್ತದೆ. ಕಾಲುಗಳಲ್ಲಿ ಬಲ ಇರಬೇಕಾಗುತ್ತದೆ. ಅದರಲ್ಲೂ ಮೀನಖಂಡಗಳು ಗಟ್ಟಿ ಇರಬೇಕಾಗುತ್ತದೆ. ಅಂತಿಮ ಗೆರೆ ದಾಟುವ ಒಂದು ಕ್ಷಣಕ್ಕಾಗಿ ವರ್ಷಗಟ್ಟಲೆ ತಾಳ್ಮೆಯಿಂದ ಕಾಯಬೇಕಾಗುತ್ತದೆ.

ಎಂಟು ವರ್ಷಗಳ ಕಾಲದ ತಮ್ಮ ಓಟದ ಅನುಭವವನ್ನೇ ಮೈವೆತ್ತಿರುವ ಬೆಂಗಳೂರಿನ ‘ಅನುಭವ್‌ ಕರ್ಮಾಕರ್‌’ ಈಗ ಅಂತರರಾಷ್ಟ್ರೀಯ ಮ್ಯಾರಥಾನ್‌ ಸ್ಪರ್ಧೆಗಳಲ್ಲಿ ತಮ್ಮ ಗೆಲುವಿನ ಅಭಿಯಾನವನ್ನು ಆರಂಭಿಸಿದ್ದಾರೆ. 2011ರಲ್ಲಿ ದೇಹತೂಕವನ್ನು ಇಳಿಸಿಕೊಳ್ಳಲು ಆರಂಭಿಸಿದ ಓಟ ಅವರನ್ನು ಅಥ್ಲಿಟ್‌ ಆಗಿ ರೂಪಿಸಿದೆ. ಇದೀಗ ದೇಶದ ಅನುಭವಿ ಮ್ಯಾರಥಾನ್‌ ಅಥ್ಲೀಟ್‌ಗಳಲ್ಲಿ ಅನುಭವ್‌ ತಮ್ಮದೇ ಛಾಪು ಮೂಡಿಸಿದ್ದಾರೆ.

ನವೆಂಬರ್‌ನಲ್ಲಿ ನಡೆದ ನ್ಯೂಯಾರ್ಕ್‌ ಮ್ಯಾರಥಾನ್‌ನಲ್ಲಿ 53,519 ಸ್ಪರ್ಧಿಗಳಲ್ಲಿ 237ನೇ ಸ್ಥಾನ ಪಡೆದದ್ದು ಕಡಿಮೆ ಸಾಧನೆ ಏನೂ ಅಲ್ಲ.ಗೆಲುವಿನ ಗೆರೆಯನ್ನು ಮುಟ್ಟಿದ 379 ಭಾರತೀಯರಲ್ಲಿ ಮೊದಲನೆಯವರು ಎಂಬ ಶ್ರೇಯ ಅನುಭವ್‌ ಅವರದ್ದು. 30-34ರ ವಯೋಮಾನದ 4,075 ಸ್ಪರ್ಧಿಗಳಲ್ಲಿ57ನೆಯವರಾಗಿ 15 ಕಿ.ಮೀ ದೂರವನ್ನು 2 ಗಂಟೆ 41 ನಿಮಿಷ 7 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅನುಭವ್‌ ಕರ್ಮಾಕರ್‌ ದಾಖಲೆ ಬರೆದರು.

ಅಥ್ಲಿಟ್‌ ಆದ ಬಗೆ
ಹೈದರಾಬಾದ್‌ನ ಕಾರ್ಪೊರೇಟ್‌ ಕಂಪನಿ ಯೊಂದರಲ್ಲಿ ಅನುಭವ್‌ ದುಡಿಯುವಾಗ 79 ಕೆ.ಜಿಯಷ್ಟು ದೇಹ ತೂಕ ಹೊಂದಿದ್ದರು. ಸ್ಥೂಲಕಾಯವನ್ನು ಕರಗಿಸಿಕೊಳ್ಳಲು ಜಿಮ್‌ ಸೇರಿದರು. ಒಂದು ವರ್ಷ ಜಿಮ್‌ನಲ್ಲಿ ದೇಹ ದಂಡಿಸಿ ಮೈ–ಕೈ ಹುರಿಗಟ್ಟಿಸಿದರು. ಮೊದಲ ಆರುತಿಂಗಳಲ್ಲೇ ದೇಹತೂಕವನ್ನುಬರೋಬ್ಬರಿ 25 ಕೆ.ಜಿಯಷ್ಟು ಇಳಿಸಿಕೊಂಡರು. ಆದರೆ, ಜಿಮ್‌ನಲ್ಲಿ ವ್ಯಾಯಾಮಾಭ್ಯಾಸ ಮುಂದುವರಿಸುವಲ್ಲಿ ಆಸಕ್ತಿ ಕಳೆದುಕೊಂಡರು.ಮುಂದೇನು ಮಾಡುವುದು ಎಂಬ ಆಲೋಚನೆಯಲ್ಲಿದ್ದಾಗ ಹೊಳೆದದ್ದೇ ‘ಓಟ’.ಸೈಕ್ಲಿಂಗ್‌ ಕೂಡ ಓಟದ ಜೊತೆಗೆ ಸೇರಿತು. ಇದೆಲ್ಲದರ ಪರಿಣಾಮ ಈಗ ಅವರ ದೇಹದ ತೂಕ 54 ಕೆ.ಜಿ.‌

ಓಟಗಾರರು ಕಾರಣ‌
ಮ್ಯಾರಥಾನ್‌ ಅಥ್ಲೀಟ್‌ ಆಗಿ ಹೊರಹೊಮ್ಮಲು ಅವರೊಂದಿಗೆ ಸಹಕಾರ ನೀಡಿದ ಅನುಭವಿ ಓಟಗಾರರು ಕಾರಣ. ಬಹುದೂರ ಓಡುವ ಮ್ಯಾರಥಾನ್‌ ಅಥ್ಲಿಟ್‌ಗಳೊಂದಿಗೆ ನಡೆಸಿದ ಮಾತುಕತೆಗಳು, ಅನುಭವಗಳ ವಿನಿಮಯ ಅವರನ್ನು ಅಥ್ಲಿಟ್‌ ಆಗಿ ರೂಪಿಸಲು ಕಾರಣವಾಯಿತು.

ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿರುವ ‘ಹೈದರಾಬಾದ್‌ ರಾಕ್ಸ್‌’ನಲ್ಲಿ ಆರಂಭಿಸಿದ ಓಟದ ಅಭ್ಯಾಸ ಜಾಗತಿಕ ಮ್ಯಾರಥಾನ್‌ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿತು.

ಮ್ಯಾರಥಾನ್‌ ಅಭಿಯಾನ
2018ರಿಂದ ಅಂತರರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಜಗತ್ತಿನ ಆರು ಶ್ರೇಷ್ಠ ಮ್ಯಾರಥಾನ್‌ ಸ್ಪರ್ಧೆಗಳಾದ ಬೋಸ್ಟನ್‌, ಟೋಕಿಯೊ, ಬರ್ಲಿನ್‌, ನ್ಯೂಯಾರ್ಕ್‌, ಷಿಕಾಗೊ ಮತ್ತು ಲಂಡನ್‌ ಮ್ಯಾರಥಾನ್‌ಗಳಲ್ಲಿ ಭಾಗವಹಿಸುವ ಅಭಿಲಾಷೆಯನ್ನು ಬಹಳ ವರ್ಷಗಳಿಂದ ಇಟ್ಟುಕೊಂಡಿದ್ದರು.ಬೋಸ್ಟನ್‌ ಮ್ಯಾರಥಾನ್‌, ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಸ್ಪರ್ಧೆಯಾಗಿದ್ದರಿಂದ ಸ್ಪರ್ಧಿಸುವ ಆಸೆ ಹೊತ್ತುಈ ವರ್ಷದ ಆರಂಭದಲ್ಲಿ ಅಮೆರಿಕಕ್ಕೆ ಹೋದ ಅನುಭವ್‌ ಅವರಿಗೆ ನಿರಾಸೆಯೇನೂ ಆಗಲಿಲ್ಲ. ಅಲ್ಲಿ ಉದ್ದೇಶಿತ ಗುರಿಯನ್ನು 2 ತಾಸು 45 ನಿಮಿಷ 45 ಸೆಕೆಂಡುಗಳಲ್ಲಿ ಮುಟ್ಟಿದರು. ಇದರಿಂದ ನ್ಯೂಯಾರ್ಕ್‌ ಮ್ಯಾರಥಾನ್‌ಗೆ ಅರ್ಹತೆ ಲಭಿಸಿತು.

ನಿರಂತರ ಅಭ್ಯಾಸ
ನ್ಯೂಯಾರ್ಕ್‌ ಮ್ಯಾರಥಾನ್‌ಗಾಗಿಕಳೆದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 15 ವಾರಗಳ ಅಭ್ಯಾಸ ನಡೆಸಿದರು. ಈ ಅವಧಿಯಲ್ಲಿ 1500 ಕಿ.ಮೀಯಷ್ಟು ಓಡಿದ್ದಾರೆ. ಮ್ಯಾರಥಾನ್‌ ಅಥ್ಲಿಟ್‌ಗಳು ವಾರದಲ್ಲಿ 50ರಿಂದ 70 ಕಿ.ಮೀ ಓಡಬೇಕು ಎನ್ನುತ್ತಾರೆ ಅನುಭವ್‌.ಸ್ಪರ್ಧೆಯಿಂದ ಮತ್ತೊಂದು ಸ್ಪರ್ಧೆಗೆ ತಮ್ಮ ಪ್ರದರ್ಶನವನ್ನು ಉತ್ತಮ ಪಡಿಸಿಕೊಳ್ಳುತ್ತಲೇ ಸಾಗಿದರೆ ಮಾತ್ರ ಒಂದಲ್ಲ ಒಂದು ಮೊದಲನೆಯವರಾಗಬಹುದು ಎನ್ನುತ್ತಾರೆ ಅನುಭವ್‌.

ಫಿಟ್‌ನೆಸ್‌ ಗುಟ್ಟು
ನಿತ್ಯ ಬೆಳಿಗ್ಗೆ 4.30 ಗಂಟೆಗೆ ಎದ್ದು ಅನುಭವ್ ಓಟವನ್ನು ಆರಂಭಿಸುತ್ತಾರೆ. ಅದೂ ಒಂದು ಕಾಫಿ ಕುಡಿದು. ಎರಡು ಗಂಟೆ ಓಡಿದ ನಂತರ ಇನ್ನಿತರ ಅಥ್ಲಿಟ್‌ಗಳೊಂದಿಗೆ ಅನುಭವ ಹಂಚಿಕೊಳ್ಳುತ್ತಾರೆ. ಸಂಜೆ ಸೈಕ್ಲಿಂಗ್‌ ಅಭ್ಯಾಸವನ್ನು ಮಾಡುತ್ತಾರೆ. ಮ್ಯಾರಥಾನ್‌ ಸ್ಪರ್ಧೆಗಳು ಕೆಲ ತಿಂಗಳು ಹತ್ತಿರ ಇರುವಾಗ ಸಂಜೆಯೂ ಓಡುತ್ತಾರೆ.

ಆಹಾರ ಕ್ರಮ
ನಿಯಮಿತವಾಗಿ ಸರಿಯಾದ ಸಮಯಕ್ಕೆ ಆಹಾರ ತೆಗೆದು ಕೊಳ್ಳುತ್ತಾರೆ. ಬೆಳಿಗ್ಗೆ ಓಟವನ್ನು ಆರಂಭಿಸುವ ಮುಂಚೆ ಕಾಫಿ. ಓಡಿದ ನಂತರ ಮತ್ತೆ ಕಾಫಿ. ಅರ್ಧ ಗಂಟೆ ಬಿಟ್ಟು ಬಾಳೆಹಣ್ಣು, ಮೊಟ್ಟೆ, ಓಟ್ಸ್ ಮತ್ತು ಯುಗರ್ಟ್ ತೆಗೆದುಕೊಳ್ಳುತ್ತಾರೆ. ಮಧ್ಯಾಹ್ನ ಅನ್ನ– ರಸಂ, ಹಸಿ ತರಕಾರಿಗಳು– ರಾತ್ರಿ ಸಲಾಡ್‌, ಕಾರ್ಬೊಹೈಡ್ರೇಟ್‌ ಇರುವ ಆಹಾರ ಸೇವನೆ. ತರಬೇತಿಗೆ ತಕ್ಕಂತೆ ಅನುಭವ್‌ ಸೇವಿಸುವ ಆಹಾರ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ.

ಮ್ಯಾರಥಾನ್‌ ಓಡುವಾಗ...
ನಿತ್ಯ ಅಭ್ಯಾಸ ನಡೆಸುವಾಗ ಬೇರೆಲ್ಲ ಯೋಚನೆಗಳು ಸುಳಿಯುತ್ತವೆ. ಆದರೆ, ಸ್ಪರ್ಧೆಯ ಅಂಗಳದಲ್ಲಿ ಇದ್ದಾಗ. ಗುರಿ ಯೊಂದೇ ಮುಖ್ಯವಾಗುತ್ತದೆ. ಪ್ರತಿ ಹೆಜ್ಜೆಯಲ್ಲೂ ದೇಹ ಏನು ಹೇಳುತ್ತದೆ ಎಂಬುದನ್ನು ಕೇಳಬೇಕು ಎನ್ನುತ್ತಾರೆ ಅನುಭವ್‌. ಗೆಲುವಿನ ತಂತ್ರಗಳಿಗೆ ದೇಹ ಸ್ಪಂದಿಸಬೇಕು.

ಬೇರೇನೂ ಯೋಚನೆಗಳು ಸುಳಿಯಬಾರದು. ಪ್ರತಿಸ್ಫರ್ಧಿಗಳನ್ನು ಸೋಲಿಸುವುದೇ ಗುರಿಯಾದರೆ ಗೆಲುವು ಒಲಿಯುವುದಿಲ್ಲ. ಆಯಾಸಗೊಂಡು ಸ್ಪರ್ಧೆಯಿಂದ ಹೊರಬೀಳಬೇಕಾಗುತ್ತದೆ. ದೇಹದ ಪ್ರತಿ ಅಂಗಾಂಶವನ್ನು ಮನಸ್ಸು ಸ್ಪರ್ಶಿಸಬೇಕಾಗುತ್ತದೆ. 15–20 ವಾರಗಳಿಂದ ನಿಯಮಿತವಾಗಿ ನಡೆಸಿದ ಅಭ್ಯಾಸವು ಸ್ಪರ್ಧೆಯಲ್ಲಿ ಕೈಹಿಡಿಯುತ್ತದೆ ಎನ್ನುತ್ತಾರೆ ಅವರು.

‘ಗೆಲುವು ಮುಖ್ಯ ಅಲ್ಲ‌’
‘ಮ್ಯಾರಥಾನ್‌ ಓಟವು ಶಿಸ್ತನ್ನು ಬಯಸುತ್ತದೆ. ಇಲ್ಲಿ ಅಂತಿಮ ಗುರಿಯನ್ನು ಮುಟ್ಟುವುದಷ್ಟೇ ಗುರಿಯಾಗಿರುತ್ತದೆ. ಎಷ್ಟನೇ ಸ್ಥಾನ ಪಡೆದೆವು ಎಂಬುದು ಮುಖ್ಯ ಅಲ್ಲ. ಸ್ಪರ್ಧೆಯಿಂದ ಸ್ಪರ್ಧೆಗೆ ಪ್ರದರ್ಶನವನ್ನು ಸುಧಾರಣೆಗೊಳಿಸಿಕೊಳ್ಳತ್ತ ಹೋಗಬೇಕು. ಅಂತರರಾಷ್ಟ್ರೀಯ ಮ್ಯಾರಥಾನ್‌ ಸ್ಪರ್ಧೆಗಳಲ್ಲಿ 50,000ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಾರೆ. ಇವರಲ್ಲಿ ಶೇ 75ರಷ್ಟು ಸ್ಪರ್ಧಿಗಳು ಗೆಲುವಿನ ಗೆರೆ ಮುಟ್ಟುತ್ತಾರೆ. ಮ್ಯಾರಥಾನ್‌ ಫಿಟ್‌ನೆಸ್‌ ಪ್ರಜ್ಞೆಯನ್ನು ಬೆಳೆಸುವ ಕ್ರೀಡೆಯಾಗಿದೆ. ಫಿಟ್‌ ಇಂಡಿಯಾ ಯೋಜನೆಯಡಿ ಮ್ಯಾರಥಾನ್‌ ಸ್ಪರ್ಧೆಗಳನ್ನು ಯೋಜಿತವಾಗಿ ಆಯೋಜಿಸಲು ಸರ್ಕಾರ ಯೋಚಿಸಬೇಕು’ ಎಂದು ಹೇಳುತ್ತಾರೆ ಅನುಭವ್‌.

ಆಯೋಜನೆಯಲ್ಲಿ ಶಿಸ್ತಿನ ಕೊರತೆ!
ಜಾಗೃತಿ ಅಭಿಯಾನಗಳ ಭಾಗವಾಗಿ ಭಾರತದಲ್ಲಿ ಮ್ಯಾರಥಾನ್‌ ಆಯೋಜಿಸುತ್ತಾರೆ. ಇದರಲ್ಲಿ ಶಿಸ್ತಿನ ಕೊರತೆ ಹೆಚ್ಚು ಎನ್ನುತ್ತಾರೆ ಅನುಭವ್‌. ಸರಿಯಾದ ಟ್ರ್ಯಾಕ್‌ ರೂಪಿಸುವುದಿಲ್ಲ. ಮ್ಯಾರಥಾನ್‌ ರಸ್ತೆಗಳಲ್ಲಿ ವಾಹನಗಳೂ ಅಡ್ಡ ಬರುತ್ತವೆ. ಅಲ್ಲದೆ, ಕನಿಷ್ಟ ನೀರಿನ ಸೌಲಭ್ಯವನ್ನು ಕೆಲವೆಡೆ ಒದಗಿಸಿರುವುದಿಲ್ಲ. ಇನ್ನು ಜಾಗೃತಿ ಮೂಡಿಸುವುದು ಹೇಗೆ. ಇಲ್ಲಿ ಭಾಗವಹಿಸುವ ಸ್ಪ‍ರ್ಧಿಗಳಲ್ಲಿ ಶೇ 10 ಸ್ಪರ್ಧಿಗಳು ಮಾತ್ರ ಅಂತಿಮ ಗೆರೆಯನ್ನು ದಾಟುತ್ತಾರೆ.ಮುಂಬೈ ಮತ್ತು ಹೈದರಾಬಾದ್‌ ಮ್ಯಾರಥಾನ್‌ಗಳನ್ನು ಹೊರತು ಪಡಿಸಿದರೆ ಇನ್ನೆಲ್ಲೂ ಮ್ಯಾರಥಾನ್‌ ಅನ್ನು ಶಿಸ್ತಿನಿಂದ ವರ್ಷ ವರ್ಷವೂ ಆಯೋಜಿಸುತ್ತಿಲ್ಲ ಎಂದು ದೂರುವ ಅವರು ಅಂತರರಾಷ್ಟ್ರೀಯ ಮ್ಯಾರಥಾನ್‌ ಸ್ಪರ್ಧೆಗಳ ಮಾದರಿಯಲ್ಲಿ ದೇಶದಲ್ಲಿ ಆಯೋಜಿಸುವಂತಾಗಬೇಕು ಎನ್ನುತ್ತಾರೆ.

ಅನುಭವ್‌ ನೀಡುವ ಸಲಹೆ

*ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಬೇಕಾದರೆ ದೇಹತೂಕ ಇಳಿಸಿಕೊಳ್ಳಬೇಕು

*ದಿನದಿಂದ ದಿನಕ್ಕೆ ಓಟದ ದೂರವನ್ನು ಹೆಚ್ಚಿಸಿಕೊಳ್ಳಬೇಕು

*ಸರಿಯಾದ ಲಯದಲ್ಲಿ, ದೇಹಕ್ಕೆ ತ್ರಾಸ ನೀಡದೆ ಓಡಬೇಕು.

*ಸರಿಯಾದ ಶೂಗಳನ್ನು ಧರಿಸಲು ಗಮನ ನೀಡಬೇಕು‌. ಸ್ಪರ್ಧೆಗೂ ಮುಂಚೆ ಇದರಲ್ಲೇ ಅಭ್ಯಾಸ ಮಾಡಬೇಕು.

*ಸುಮ್ಮನೇ ಓಡಬಾರದು. ಗರಿಷ್ಠ ವೇಗದ ಶೇ 70ರಷ್ಟರಲ್ಲಿ ಮಾತ್ರವೇ ಮ್ಯಾರಥಾನ್‌ ಓಡಬೇಕು. ಓಡುವಾಗ ಮೊಣಕೈ 90 ಡಿಗ್ರಿ ಕೋನದಲ್ಲಿ ಇರಬೇಕು.

*ಈಜು, ಸೈಕ್ಲಿಂಗ್‌, ಪಿಲೆಟ್ಸ್, ಯೋಗ ಸೇರಿದಂತೆ ಇಷ್ಟವಾಗುವ ವ್ಯಾಯಾಮಾಭ್ಯಾಸ ಮಾಡಬೇಕು.

*ಮೂಳೆ ಸಾಂದ್ರತೆ ಯನ್ನು ಹೆಚ್ಚಿಸಲು ಕ್ಯಾಲ್ಸಿಯಂ ಯುಕ್ತ ಆಹಾರ ಸೇವಿಸ ಬೇಕು‌

*ಅಭ್ಯಾಸದ ವೇಳೆ ಹೃದಯ ಬಡಿತ ಅಳೆಯುವ ಸಾಧನ ಜೊತೆಗಿದ್ದರೆ ಹೆಚ್ಚು ಅನುಕೂಲ.

ಬೆಂಗಳೂರು ‘ಕರ್ಮ’ಭೂಮಿ
ಅನುಭವ್‌ ಹುಟ್ಟಿದ್ದು ಕೋಲ್ಕತ್ತಾದಲ್ಲಿ. ಶಿಕ್ಷಣ ಮತ್ತು ನೌಕರಿಗಾಗಿ ಮುಂಬೈ, ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ನೆಲೆಸಿದ್ದರು. ಇದೀಗ ತಮ್ಮ ಕ್ರೀಡಾ ಅಭಿಲಾಷೆಗಾಗಿ ನೆಲೆಸಿದ್ದು ಬೆಂಗಳೂರಿನಲ್ಲಿ. ಇಲ್ಲಿನ ಹಲವು ರಸ್ತೆಗಳು, ಪ್ರಮುಖ ಉದ್ಯಾನಗಳು ಇವರ ಓಟವನ್ನು ಕಂಡಿವೆ. ಕಳೆದ ಎರಡೂವರೆ ವರ್ಷದಿಂದ ಅನುಭವ್‌ ಕರ್ಮಾಕರ್‌ ಬೆಂಗಳೂರನ್ನು ತಮ್ಮ ಕರ್ಮಭೂಮಿಯಾಗಿ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ– ಅಂತರರಾಷ್ಟ್ರೀಯ ಮ್ಯಾರಥಾನ್‌ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಲೇ ಉದಯೋನ್ಮುಖ ಅಥ್ಲಿಟ್‌ಗಳಿಗೆ ತಮ್ಮ ‘ಅಥ್‌ಲಾಫ್ಟ್’ ಜಾಲತಾಣದ ಮೂಲಕ (https://www.ath*oft.com/) ಆನ್‌ಲೈನ್‌ ತರಬೇತಿ ನೀಡುತ್ತಿದ್ದಾರೆ. 2020ರಿಂದ ತರಬೇತಿ ಕೇಂದ್ರವನ್ನು ಆರಂಭಿಸುವ ಯೋಚನೆಯೂ ಅವರಲ್ಲಿದೆ.‌

ಇವರ ಮೊಬೈಲ್‌ ಸಂಖ್ಯೆ: 7702586060

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT