ಶನಿವಾರ, ಅಕ್ಟೋಬರ್ 16, 2021
22 °C

ಆರೋಗ್ಯ: ಶಬ್ದಗಳಿಗೆ ‘ಕಿವಿ ಹಿಂಡಿ’

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಧ್ವನಿವರ್ಧಕಗಳನ್ನು ಅಳವಡಿಸಿ ಆಯೋಜಿಸಿದ ಕಾರ್ಯಕ್ರಮವನ್ನು ವೀಕ್ಷಿಸಿದ ನಂತರ, ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆಯ ಬಳಿಕ ಅಥವಾ ಅತಿಯಾದ ವಾಹನ ದಟ್ಟಣೆಯಿಂದ ಹೊರ ಬಂದ ನಂತರದ ಒಂದಿಷ್ಟು ಸಮಯ ಎಷ್ಟೋ ಜನರಿಗೆ ತಲೆನೋವು, ಆಯಾಸ, ಮನಸ್ಸಿನಲ್ಲಿ ಕಿರಿ ಕಿರಿಯಂತಹ ಅನುಭವವಾಗುವುದು ಸಹಜ. ಅಷ್ಟೇ ಅಲ್ಲ, ಒಂದೆರಡು ನಿಮಿಷಗಳು ಕಿವಿಯಲ್ಲಿ ಒಂದು ಬಗೆಯ ‘ಗುಯ್’ ಶಬ್ದ ಬಂದಂತಾಗಿ ಎದುರಿನವರು ಮಾತನಾಡಿದ್ದನ್ನು ಕೇಳಿಸಿಕೊಳ್ಳಲೂ ಕಷ್ಟವೆನಿಸಬಹುದು.

ಹೌದು, ಅಬ್ಬರದ ಅಥವಾ ಜೋರಾದ ಶಬ್ದಗಳಿಗೆ ಕಿವಿಗಳನ್ನು ನಿರಂತರವಾಗಿ ಒಡ್ಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಖಂಡಿತ ಒಳ್ಳೆಯದಲ್ಲ. ಇದು ತಾತ್ಕಾಲಿಕ ಮತ್ತು ಶಾಶ್ವತ ಕಿವುಡತನದ ಜೊತೆಯಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಸಮಸ್ಯೆಗಳು ಯಾವುವೆಂದರೆ
* ಅತಿಯಾದ ಆತಂಕ, ಭಯ
* ವ್ಯಕ್ತಿಯ ಕಾರ್ಯಕ್ಷಮತೆ ಕ್ಷೀಣಿಸುವಿಕೆ
* ಏರು ರಕ್ತದೊತ್ತಡ.
* ಆಯಾಸ, ತಲೆನೋವು
* ಮಾನಸಿಕ ಕಿರಿಕಿರಿ/ ಒತ್ತಡ
* ನಿದ್ರಾಹೀನತೆ
* ಏಕಾಗ್ರತೆ, ಗ್ರಹಿಕಾ ಶಕ್ತಿ ಕ್ಷೀಣಿಸುವಿಕೆ
* ನೆನಪಿನ ಶಕ್ತಿಯ ಕುಂದುವಿಕೆ, ಮೊದಲಾದುವು

ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿರುವಂತೆ, ಮನುಷ್ಯನ ಕಿವಿಗಳಿಗೆ ಎಂಬತ್ತೈದು ಡೆಸಿಬೆಲ್‍ಗಳಿಗಿಂತ ಕಡಿಮೆ ಪರಿಮಾಣದ ಶಬ್ದವಷ್ಟೇ ಸುರಕ್ಷಿತ. ಅದಕ್ಕಿಂತ ಹೆಚ್ಚು ತೀವ್ರತೆಯ ಶಬ್ದದ ನಿರಂತರ ಆಲಿಕೆಯು ಕಿವಿಗಳಿಗೆ ಅಪಾಯ. ತೀವ್ರವಾದ ಶಬ್ದದ ತರಂಗಗಳು ಒಳಕಿವಿಯಲ್ಲಿ ಕೂದಲಿನಂತಿರುವ ಸೂಕ್ಷ್ಮಾತಿಸೂಕ್ಷ್ಮ ಜೀವಕೋಶಗಳಿಗೆ ಹಾನಿ ಉಂಟುಮಾಡುತ್ತವೆ. ಆ ಜೀವಕೋಶಗಳು ಒಮ್ಮೆ ನಶಿಸಿಹೋದರೆ, ದುರಸ್ಥಿ ಕಷ್ಟ ಸಾಧ್ಯ. ಆದ್ದರಿಂದಲೇ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರದಿಂದ ಇರಬೇಕು.

ವ್ಯಕ್ತಿಯ ವಾಸಸ್ಥಳವು ಬಸ್ಸು ಅಥವಾ ರೈಲು ಸಂಚಾರದ ರಸ್ತೆಗಳಿಗೆ, ವಿಮಾನ ನಿಲ್ದಾಣಗಳಿಗೆ, ಅತಿಯಾದ ಶಬ್ದ ಹೊರಸೂಸುವ ಕಾರ್ಖಾನೆಗಳಿಗೆ ಅತಿ ಹತ್ತಿರವಿದ್ದಾಗ ಜೀವನದ ಬಹುಪಾಲಿನ ದಿನಗಳಲ್ಲಿ ತೀವ್ರ ಪರಿಮಾಣದ ಶಬ್ದವನ್ನು ಕೇಳಿಸಿಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ. ಅಷ್ಟೇ ಅಲ್ಲ ಕಾರ್ಖಾನೆ, ರೈಲು ಮತ್ತು ವಿಮಾನ ನಿಲ್ದಾಣ, ಗಣಿಗಾರಿಕೆ, ಕಟ್ಟಡ ನಿರ್ಮಾಣ, ಮರ ಮತ್ತು ಕಬ್ಬಿಣದ ಕೆಲಸಗಳಲ್ಲಿ ತೊಡಗಿರುವವರು ಸಹ ಹೆಚ್ಚು ಸಮಯದವರೆಗೆ ಕರ್ಕಶವಾದ ಶಬ್ದವನ್ನು ಕೇಳಬೇಕಾಗಿ ಬರುತ್ತದೆ. ಈ ಪಟ್ಟಿಯಲ್ಲಿ ರ್‍ಯಾಪ್‌ ಸಂಗೀತಗಾರರು ಕೂಡ ಸೇರುತ್ತಾರೆ. ಮನೆಗಳಲ್ಲಿಯೂ ಇತ್ತೀಚೆಗೆ ಚಿತ್ರಮಂದಿರಂತಹ ವ್ಯವಸ್ಥೆಯನ್ನು ನಿರ್ಮಿಸಿ ಅತಿ ದೊಡ್ಡ ದನಿಯಲ್ಲಿ ಸಂಗೀತವನ್ನು ಆಲಿಸುವ, ದೂರದರ್ಶನವನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅವರಷ್ಟೇ ಅಲ್ಲದೆ ಅಕ್ಕ ಪಕ್ಕದ ಮನೆಯವರೂ ತೊಂದರೆಗೀಡಾಗುವ ಸಂಭವವಿರುತ್ತದೆ. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯು ಕ್ರಮೇಣ ಶಾಶ್ವತ ಕಿವುಡುತನ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ.

ಪರಿಹಾರೋಪಾಯಗಳೇನು?
* ಅತಿಯಾದ ಶಬ್ದಕ್ಕೆ ಕಿವಿಗೊಡಬೇಕಾದ ಅನಿವಾರ್ಯತೆ ಇರುವವರು ಆ ಅಲೆಗಳನ್ನು ಕಿವಿಯ ಹೊರಭಾಗದಲ್ಲಿಯೇ ತಡೆಯುವಂತಹ ಅಥವಾ ಅದರ ತೀವ್ರತೆಯನ್ನು ಕಡಿಮೆಗೊಳಿಸುವಂತಹ ಸುರಕ್ಷಾ ಸಲಕರಣೆಗಳನ್ನು (ಇಯರ್ ಮಫ್ಸ್ ಅಥವಾ ಇಯರ್ ಪ್ಲಗ್ಸ್) ಕಡ್ಡಾಯವಾಗಿ ಬಳಸಿ.

* ಮಕ್ಕಳನ್ನು ಅಬ್ಬರದ ಸದ್ದು ಹೊರಸೂಸುವ ಸ್ಥಳಗಳಿಗೆ ಕರೆದೊಯ್ಯಬೇಡಿ.

* ನಿಮ್ಮ ಮನೆಯ ಟಿ.ವಿ., ರೇಡಿಯೊ ಅಥವಾ ಧ್ವನಿವರ್ಧಕಗಳ ಶಬ್ದದ ಪರಿಮಾಣವನ್ನು ಆದಷ್ಟು ಕಡಿಮೆ ಮಟ್ಟದಲ್ಲಿಡಿ. ಇದರಿಂದ ನೀವೂ ಮತ್ತು ನಿಮ್ಮ ನೆರೆಯವರೂ ಸುರಕ್ಷಿತ.

* ನೀವು ಕೆಲಸ ಮಾಡುವ ಸ್ಥಳಗಳಲ್ಲಿನ ಉಪಕರಣಗಳನ್ನು ಕಾಲ ಕಾಲಕ್ಕೆ ನವೀಕರಿಸಿ, ಸಮತೋಲನ ಸ್ಥಿತಿಯಲ್ಲಿರಿಸಿ ಅಥವಾ ದುರಸ್ಥಿಗೊಳಿಸಿ.

* ನಿಮ್ಮ ವಾಹನಗಳನ್ನು ನಿಯಮಿತವಾಗಿ ತಪಾಸಣೆ ಮಾಡಿಸಿ, ಸುಸ್ಥಿತಿಯಲ್ಲಿಟ್ಟುಕೊಳ್ಳಿ.

* ಸಾಧ್ಯವಾದೆಡೆಗಳಲ್ಲಿ ಕಡಿಮೆ ಸದ್ದು ಮಾಡುವ ವಸ್ತುಗಳನ್ನೇ ಕೊಂಡುಕೊಳ್ಳಿ. ಉದಾ: ಬ್ಯಾಟರಿ ಚಾಲಿತ ವಾಹನ ಮತ್ತು ಆಟೋಟಿಕೆಗಳು.

* ಸುದೀರ್ಘ ಸಮಯದವರೆಗೆ ನೀವು ಹೆಚ್ಚು ತೀವ್ರವಾದ ಶಬ್ದವನ್ನು ಕೇಳಿಸಿಕೊಳ್ಳಬೇಕಾದ ಸಂದರ್ಭವಿದ್ದಾಗ ತಪ್ಪದೇ ಮಧ್ಯೆ ಬಿಡುವು ತೆಗೆದುಕೊಳ್ಳಿ.

* ಮೊಬೈಲ್ ಇಯರ್ ಫೋನ್‍ಗಳಿಂದ ಎಂಬತ್ತೈದು ಡೆಸಿಬೆಲ್ ಗಿಂತಲೂ ಹೆಚ್ಚಿನ ಮಟ್ಟದ ಶಬ್ದ ಹೊರಹೊಮ್ಮುವುದರಿಂದ ಅವುಗಳ ಬಳಕೆ ಮಿತಿಯಲ್ಲಿಡಿ.

ನೆನಪಿಡಿ, ನಿಮ್ಮಿಂದ ಮೂರು ಅಡಿ ದೂರದಲ್ಲಿರುವ ವ್ಯಕ್ತಿ ಸಹಜವಾಗಿ ಮಾತನಾಡಿದ್ದನ್ನು ನೀವು ಕೇಳಿಸಿಕೊಳ್ಳಲು ಅಸಮರ್ಥರಾಗಿದ್ದೀರೆಂದರೆ ಅಲ್ಲಿ ನಿಮ್ಮ ಕಿವಿಗಳು ಅಸುರಕ್ಷಿತ ಮಟ್ಟದ ಶಬ್ದಕ್ಕೆ ತೆರೆದುಕೊಂಡಿವೆ ಎಂದರ್ಥ. ತಡಮಾಡದೆಯೇ ವೈದ್ಯರ ಸಲಹೆ ಪಡೆದು, ಸುರಕ್ಷಾ ಸಲಕರಣೆಗಳನ್ನು ಬಳಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು