ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವ–ಬಾಂಧವ್ಯದ ಕೊಂಡಿ ಬೆಸೆಯಲಿ

Last Updated 2 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮಕ್ಕಳೊಡನೆ ಮಾನಸಿಕ ಬಾಂಧವ್ಯವೇ (Emotional Attachment) ಇಲ್ಲದಿದ್ದಾಗ ಮಕ್ಕಳಿಗೆ ಮಾರ್ಗದರ್ಶಕರಾಗುವುದು ಸಾಧ್ಯವಿಲ್ಲ; ಉಪದೇಶ ನೀತಿಪಾಠಗಳು ಅರ್ಥಹೀನ ಶಬ್ದಗಳಾಗುತ್ತವೆ; ಶಿಸ್ತು, ಶಿಕ್ಷೆಗಳು ತಾತ್ಕಾಲಿಕ ಪರಿಣಾಮಗಳನ್ನು ಮಾತ್ರ ನೀಡಬಹುದಷ್ಟೇ.

ಪ್ರೌಢಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೊಮ್‌ಗಳು, ಗರ್ಭನಿರೋಧಕ ಮಾತ್ರೆಗಳು, ಲೈಟರ್‌, ಸಿಗರೇಟ್‌ ಗಳು, ವೈಟ್‌ನರ್‌ಗಳು ದೊರಕಿರುವುದು ವರದಿಯಾಗಿದೆ. ಇದು ಆತಂಕಕಾರಿ ವಿಚಾರ‌. ಹೆಚ್ಚಿನ ನೀತಿಪಾಠ, ಕಟ್ಟುನಿಟ್ಟಿನ ಶಿಸ್ತು, ಕಠಿಣ ಶಿಕ್ಷೆ ಮುಂತಾದವುಗಳ ಹೊರತಾಗಿ ಬೇರೆಯ ಪರಿಹಾರಗಳು ನಮ್ಮ ಸರ್ಕಾರಗಳಿಗೆ, ಶಿಕ್ಷಣತಜ್ಞರಿಗೆ, ಮನಶ್ಯಾಸ್ತ್ರಜ್ಞರಿಗೆ ಹೊಳೆಯುತ್ತಲೇ ಇಲ್ಲ. ದುರದೃಷ್ಟವೆಂದರೆ ನಾವು ಕಟ್ಟಿಕೊಂಡಿರುವ ಆಧುನಿಕ ಸಾಮಾಜಿಕ ವ್ಯವಸ್ಥೆಯ ಅನಿವಾರ್ಯ ಪರಿಣಾಮಗಳು ಇವು ಎನ್ನುವುದನ್ನು ಯಾರೂ ಗಮನಿಸುತ್ತಿಲ್ಲ.

ನಾವೆಲ್ಲರೂ ತಪ್ಪಿದ್ದೆಲ್ಲಿ?
ಆಗಷ್ಟೇ ಜನಿಸಿದ ಮಗುವಿಗೆ ತನ್ನ ಅಗತ್ಯಗಳು ಮಾತ್ರವೇ ಪ್ರಪಂಚಾಗಿರುತ್ತದೆ. ಮಕ್ಕಳ ಮಿದುಳು ಮತ್ತು ನರಮಂಡಲ ಅಭಿವೃದ್ಧಿ ಹೊಂದುತ್ತಾ ಬಂದಂತೆ ಮಕ್ಕಳು ಹೊರಜಗತ್ತಿನೊಡನೆ ಸಂಪರ್ಕ ಕಲ್ಪಿಸಿಕೊಂಡು ವ್ಯವಸ್ಥಿತ ಬದುಕಿಗೆ ಸಿದ್ಧವಾಗತೊಡಗುತ್ತಾರೆ. 20-22 ವರ್ಷದವರೆಗೂ ಮಿದುಳು ನರಮಂಡಲಗಳ ಬೆಳವಣಿಗೆ ನಡೆಯುತ್ತಲೇ ಇರುತ್ತವೆ. ಈ ಸಮಯದಲ್ಲಿ ಮಕ್ಕಳಿಗೆ ಸಿಗುವ ಕೌಟುಂಬಿಕ ಸಾಮಾಜಿಕ ವಾತಾವರಣ ಅವರ ಮಾನಸಿಕ ಸಮತೋಲನಕ್ಕೆ ಕಾರಣವಾಗುತ್ತದೆ. ಈ ಎಲ್ಲಾ ಅಂಶಗಳಿಗೆ ವೈಜ್ಞಾನಿಕ ಪುರಾವೆಗಳಿವೆ.

ಮಕ್ಕಳಿಗೆ ಎಲ್ಲಾ ವಸ್ತು ಮತ್ತು ವಿಚಾರಗಳ ಕಡೆ ಆಕರ್ಷಣೆ ಸಹಜ. ಆದರೆ ಅಂತಹ ಆಕರ್ಷಣೆಯನ್ನು ನಿಯಂತ್ರಿಸಲು ಅಗತ್ಯವಿರುವ ಹಿಡಿತ (Impulse Control) ಕೌಟುಂಬಿಕ ಸಾಮಾಜಿಕ ಸಂದರ್ಭಗಳಲ್ಲಿ ರೂಪುಗೊಳ್ಳಬೇಕಾಗುತ್ತದೆ. ನಮ್ಮ ಮಕ್ಕಳಲ್ಲಿ ಇಂತಹ ಹಿಡಿತ ಕಾಣಿಸುತ್ತಿಲ್ಲವೆಂದರೆ ಅದರ ಮೂಲಗಳು ಎಲ್ಲಿರಬಹುದು?

ಮಕ್ಕಳ ಮಾನಸಿಕ ಅಗತ್ಯಗಳು
‘ಮಗುವೊಂದನ್ನು ಬೆಳೆಸಲು ಸಂಪೂರ್ಣ ಹಳ್ಳಿಯ ಅಗತ್ಯವಿರುತ್ತದೆ‘ ಎನ್ನುವುದು ಆಫ್ರಿಕಾದ ಬುಡಕಟ್ಟು ಜನರ ನಾಣ್ಣುಡಿ. ಗುಂಪಿನಲ್ಲಿ ಬದುಕುವ ಬುಡಕಟ್ಟು ಜನಾಂಗಗಳು, ಮಕ್ಕಳ ಆರೋಗ್ಯಕರ ಮನೋದೈಹಿಕ ಬೆಳವಣಿಗೆಗೆ ಅತ್ಯುತ್ತಮ ವಾತಾವರಣ ನೀಡುತ್ತವೆ ಎನ್ನುವುದು ಹಲವು ಸಂಶೋಧನೆಗಳಿಂದ ಸಾಬೀತಾಗಿದೆ. ಮಿದುಳು ನರಮಂಡಲಗಳ ಭಿನ್ನಭಿನ್ನ ಸಂಪರ್ಕಜಾಲಗಳ ಆರೋಗ್ಯಕರ ಬೆಳವಣಿಗೆಗೆ ಸಂಘಜೀವನ ಅತ್ಯುತ್ತಮ ವಾತಾವರಣ ಒದಗಿಸುತ್ತದೆ ಎಂದು ಅಂತರ್ವ್ಯಕ್ತಿ ನರಜೀವಶಾಸ್ತ್ರಜ್ಞರಾದ (Interpersonal Neurobiology) ಡಾ. ಡ್ಯಾನ್‌ ಸಿಗಾಲ್‌ ಹೇಳುತ್ತಾರೆ.

ಬುಡಕಟ್ಟು ಸಂಸ್ಕೃತಿಗಳಲ್ಲಿ ತಂದೆತಾಯಿಗಳ ಸಂಪರ್ಕದಲ್ಲಿ ಇಲ್ಲದಿದ್ದಾಗಲು ಮಕ್ಕಳು ಗುಂಪಿನ ಇತರ ಎಲ್ಲಾ ಸದಸ್ಯರ ಕಣ್ಗಾವಲಿನಲ್ಲಿ ಬೆಳೆಯುತ್ತಿರುತ್ತಾರೆ. ಮೂರು ನಾಲ್ಕು ತಲೆಮಾರುಗಳ ಅನುಭವ ಕಲಿಕೆಗಳು ಮಕ್ಕಳಿಗೆ ವರ್ಗಾವಣೆಯಾಗುತ್ತಿರುತ್ತವೆ. ಯಾರೇ ಜನ್ಮನೀಡಿದ ಮಕ್ಕಳಾದರೂ, ಅವರು ಸಂಪೂರ್ಣ ಗುಂಪಿಗೆ ಸೇರಿದವರಾಗಿ ರುತ್ತಾರೆ. 15 ರಿಂದ 20 ವರ್ಷಗಳವರೆಗೂ ವಯಸ್ಕರ ಒಂದು ದೊಡ್ಡ ಗುಂಪು ಮಕ್ಕಳ ಬೆಳವಣಿಗೆ ಕಲಿಕೆಗಳಿಗೆ ಆಸರೆಯಾಗಲು ಸದಾ ಸಿದ್ಧವಿರುತ್ತದೆ. ಮಾನವ ಶಿಶುಗಳಿಗಾಗಿ ಮಾತ್ರ ರೂಪಿಸಲು ಸಾಧ್ಯವಿರುವ ಇಂತಹ ವ್ಯವಸ್ಥೆಗೆ ‘ಆಲೋ ಪೇರೆಂಟಿಂಗ್‌’ ಎನ್ನುತ್ತಾರೆ.

ಈಗ ಏನಾಗುತ್ತಿದೆ?
ನಗರಕೇಂದ್ರಿತ ಮತ್ತು ಹಣಕೇಂದ್ರಿತ ಆಧುನಿಕ ನಾಗರಿಕತೆಯಲ್ಲಿ ಏನಾಗುತ್ತಿದೆ? ಹಳ್ಳಿಗಳಲ್ಲಿ ಸಂಘಜೀವನ ಕಾಣೆಯಾಗಿದೆ. ಕೂಡುಕುಟುಂಬಗಳು ಅಪಥ್ಯವಾಗಿವೆ. ನಗರಗಳಲ್ಲಿ ಅಪ್ಪ ಅಮ್ಮಂದಿರು ಮಾತ್ರ ಮಕ್ಕಳಿಗೆ ಮಾನಸಿಕ ಬೆಂಬಲವಾಗಿರಬೇಕಾಗುತ್ತದೆ. ಇವತ್ತಿನ ಜೀವನ ಶೈಲಿಯ ಅಗತ್ಯ ಗಳಿಗೆ ಪೋಷಕರಿಬ್ಬರೂ ಮನೆಯ ಹೊರಗಡೆ ದುಡಿಯುವುದು ಅನಿವಾರ್ಯವಾಗಿದೆ. 2-3 ವರ್ಷಗಳಿಂದ ಮಕ್ಕಳು ಹೆಚ್ಚಿನ ಸಮಯ ಮನೆಯಲ್ಲಿ ಏಕಾಂಗಿಗಳಾಗಿ, ಬೇಬಿಸಿಟ್ಟಿಂಗ್‌ಗಳಲ್ಲಿ, ಸ್ನೇಹಿತರೊಡನೆ ಅಥವಾ ಮಕ್ಕಳಸ್ನೇಹಿಯಾಗಿರದ ಇವತ್ತಿನ ಶಾಲೆಗಳಲ್ಲಿ ಕಳೆಯುತ್ತಾರೆ. ಮಾನಸಿಕ ಏರುಪೇರುಗಳನ್ನು ನಿಭಾಯಿಸುವ ಕಲಿಕೆ ಮತ್ತು ಆಕರ್ಷಣೆಗಳನ್ನು ಹಿಡಿತಕ್ಕೆ ತರುವು ದನ್ನು ಕಲಿಸಬಲ್ಲ ಜವಾಬ್ದಾರಿಯುತ ವಯಸ್ಕರ ಬೆಂಬಲವನ್ನು ಇವತ್ತಿನ ಮಕ್ಕಳು ಕಳೆದುಕೊಂಡಿದ್ದಾರೆ.

ಇವತ್ತು ಮಕ್ಕಳಿಗೆ ಉಳಿದಿರುವ ಮಾನಸಿಕ ಸಂಗಾತಿಗಳು ತಮ್ಮಷ್ಟೇ ಅಪ್ರಬುದ್ಧರಾಗಿರುವ ಇತರ ಮಕ್ಕಳು ಮತ್ತು ಮುಕ್ತವಾಗಿ ದೊರೆಯುತ್ತಿರುವ ಮೊಬೈಲ್‌, ಅಂತರ್ಜಾಲಗಳು ಮಾತ್ರ. ಪೋಷಕರ ನೀತಿಪಾಠಗಳೆಲ್ಲಾ ಮಕ್ಕಳಿಗೆ ಗೊತ್ತಿರುವುದೇ. ಆದರೆ ಆಕರ್ಷಣೆಗಳನ್ನು ಹಿಡಿತಕ್ಕೆ ತರುವ ಕಲಿಕೆಗಳೇ ಅವರ ನರಮಂಡಲದಲ್ಲಿ ದಾಖಲಾಗಿಲ್ಲವಲ್ಲ. ಇದರಲ್ಲಿ ಮಕ್ಕಳ ತಪ್ಪೇನಿದೆ? ಹಾಗೆ ನೋಡಿದರೆ ಪೋಷಕರು ಕೆಟ್ಟವರೇನಲ್ಲ. ಮಕ್ಕಳ ಅಗತ್ಯಗಳನ್ನು ಪೂರೈಸುವ ಒತ್ತಡದಲ್ಲಿ ಅವರಿದ್ದಾರೆ. ಪೋಷಕರಿಗೆ ಸೂಕ್ತ ಮಾರ್ಗದರ್ಶನವೂ ಸಿಗುತ್ತಿಲ್ಲ. ಆಧುನಿಕ ಜೀವನ ಶೈಲಿ, ಸಾಮಾಜಿಕ ಆರ್ಥಿಕ ರಾಜಕೀಯ ಶೈಕ್ಷಣಿಕ ರಚನೆಗಳಲ್ಲಿಯೇ ಕುಂದುಗಳಿರುವಾಗ ಪೋಷಕರೊಬ್ಬರೇ ಎಲ್ಲಾ ಬದಲಾವಣೆ ಮಾಡುವುದು ಸುಲಭವಲ್ಲ. ಸರ್ಕಾರಗಳು ಹೆಚ್ಚುಹೆಚ್ಚಿನ ನಿಯಂತ್ರಣ, ನೀತಿನಿಯಮಗಳು ಕಾನೂನು ಶಿಕ್ಷೆಗಳ ಕುರಿತು ಮಾತ್ರ ಮಾತನಾಡುತ್ತಿವೆ. ಮಕ್ಕಳನ್ನು ನಿಭಾಯಿ ಸಲು ತಜ್ಞರು ಹೇಳುವ ‘ಕಿವಿಮಾತುಗಳು’ ಇವುಗಳಲ್ಲೇ ಗಿರಕಿಹೊಡೆಯುತ್ತಿವೆ. ಆಳದ ಅನಾಹುತಗಳ ಕಡೆ ಯಾರೂ ಗಮನ ಹರಿಸುತ್ತಿಲ್ಲ. ಇಂತಹ ವಿಷಮ ವ್ಯವಸ್ಥೆಯಲ್ಲಿ ಪೋಷಕರು ಅಸಹಾಯಕಾಗಿದ್ದಾರೆ.

ಮಕ್ಕಳಿಗೆ ವಿದ್ಯೆ ಕಲಿಸಲು ಶಾಲೆ ಮನೆಪಾಠದ ವ್ಯವಸ್ಥೆಗಳಿವೆ. ಅವರ ಆರೋಗ್ಯ ಕಾಪಾಡಲು ವೈದ್ಯರಿದ್ದಾರೆ. ಆದರೆ ಅವರಿಗೆ ಭಾವನಾತ್ಮಕ ಬೆಂಬಲ ನೀಡುತ್ತಾ ಮಾನಸಿಕ ಪ್ರಬುದ್ಧತೆಯನ್ನು ಕಲಿಸಬೇಕಾಗಿರುವ ಕುಟುಂಬ ವ್ಯವಸ್ಥೆಯೇ ಕುಸಿದುಹೋಗಿದೆ. ಮಕ್ಕಳಿಗೆ ತುರ್ತಾಗಿ ಬೇಕಾಗಿರುವುದು ಮಾನಸಿಕ ಬೆಂಬಲವಾಗಿರ ಬಲ್ಲ ಅಪ್ಪ ಅಮ್ಮಂದಿರು. ಎಲ್ಲಾ ಸಮಸ್ಯೆಗಳಿಗೆ ಪೋಷಕರೇ ಕಾರಣರಲ್ಲ. ಆದರೆ ಮಕ್ಕಳಿಗೆ ಸಹಾಯ ಮಾಡುವ ಜವಾಬ್ದಾರಿ ಮತ್ತು ಸಾಧ್ಯತೆ ಅವರ ಬಳಿಯಿದೆ ಎನ್ನುವುದನ್ನು ಮರೆಯುವಂತಿಲ್ಲ.

ಪೋಷಕರೇನು ಮಾಡಬಹುದು?
ಪೋಷಕರು, ಶಾಲೆಯಿಂದ ಬಂದ ಮಕ್ಕಳನ್ನು ಊಟ, ಪಾಠ, ಹೋಮ್‌ವರ್ಕ್‌ ಬಗ್ಗೆ ಕೇಳುವುದರ ಜೊತೆಗೆ, ‘ನಿನಗೆ ಯಾವಾಗ ಬೇಸರವಾಗುತ್ತದೆ, ದುಃಖವಾಗುತ್ತದೆ, ಸಿಟ್ಟುಬರುತ್ತದೆ? ಯಾವುದರ ಆಕರ್ಷಣೆ ಉಂಟಾಗುತ್ತದೆ. ಆಗ ಏನು ಮಾಡುತ್ತೀಯಾ? ಸ್ನೇಹಿತರೆಲ್ಲಾ ಇದರ ಬಗೆಗೆ ಏನು ಚರ್ಚೆಮಾಡುತ್ತೀರಾ? ಆಕರ್ಷಣೆಯನ್ನು ಹೇಗೆ ನಿಭಾಯಿಸುತ್ತೀರಾ? ಎಂಬಂತಹ ಮನಸ್ಸಿಗೆ ಸಂಬಂಧಿಸಿದ ವಿಚಾರಗಳನ್ನು ಕೇಳಬೇಕು.

ಮೊಬೈಲ್‌, ಅಂತರ್ಜಾಲಗಳಂತಹ ಯಾಂತ್ರಿಕ ಸಾಧನಗಳನ್ನು ಬಿಸಾಕಿ, ದಿನದ ಒಂದು ಗಂಟೆಯಾದರೂ ಕುಟುಂಬದ ಸದಸ್ಯರು ಒಟ್ಟಾಗಿ ನಗುತ್ತಾ ಕಿಚಾಯಿಸಿಕೊಳ್ಳುತ್ತಾ ಆಗಾಗ ಜಗಳವನ್ನೂ ಆಡುತ್ತಾ ಕಳೆಯಬೇಕು. ಇಂಥವು ಕೊರತೆಯಾದಾಗ ಮಕ್ಕಳು ಪೋಷಕರಿಂದ ಮಾನಸಿಕವಾಗಿ ದೂರವಾಗುವುದು ಅನಿವಾರ್ಯ ಪರಿಣಾಮ.

ಇನ್ನು, ಹಣಪಡೆದು ನಡೆಸುವ ಬೇಬಿ ಸಿಟ್ಟಿಂಗ್‌ಗಳಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪೋಷಕರು ತಮ್ಮ ತಮ್ಮಲ್ಲೇ ಗುಂಪುಗಳನ್ನು ಮಾಡಿಕೊಂಡು ಮಕ್ಕಳಿಗೆ ಪರಸ್ಪರ ಬೆಂಬಲ ನೀಡುವ ವ್ಯವಸ್ಥೆ ರೂಪಿಸಿಕೊಳ್ಳಬಹುದು.

ಮತ್ತೊಂದೆಡೆ,ಬೇಬಿ ಸಿಟ್ಟರ್‌ಗಳಿಗೆ, ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಕ್ಕಳನ್ನು ನಿಭಾಯಿ ಸುವ ವಿಶೇಷ ತರಬೇತಿಯ ಅಗತ್ಯವಿರುತ್ತದೆ. ಇದೆಲ್ಲದರ ಕುರಿತು ತಜ್ಞರು ಚರ್ಚಿಸಿ ಸರ್ಕಾರಕ್ಕೆ ಒತ್ತಡ ಹೇರಬೇಕಾಗಿದೆ. ಬದಲಾದ ಸಾಮಾಜಿಕ ಸಂದರ್ಭಗಳಲ್ಲಿ ಬುಡಕಟ್ಟು ಜನಾಂಗಗಳ ಸಂಘಜೀವನದ ಅನುಭವವನ್ನು ಮಕ್ಕಳಿಗೆ ನೀಡುವುದು ಹೇಗೆ ಎಂದು ಚಿಂತಿಸಬೇಕಾಗಿದೆ.

(ಲೇಖಕರು: ಮಾನಸಿಕ ಆರೋಗ್ಯ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT