ಮಂಗಳವಾರ, ಜನವರಿ 18, 2022
22 °C

ಸ್ಪಂದನ: ಹೆರಿಗೆ ಸಮಯದಲ್ಲಿ ಬಿಪಿ ಅಪಾಯವೇ?

ಡಾ. ವೀಣಾ ಎಸ್. ಭಟ್ Updated:

ಅಕ್ಷರ ಗಾತ್ರ : | |

ನನ್ನ ತಂಗಿ ಬಿಪಿ(ರಕ್ತದೊತ್ತಡ) ತೊಂದರೆಯಿಂದ ಬಳಲುತ್ತಿದ್ದಾಳೆ. ಬಿಪಿಯಿಂದಾಗಿ ಎರಡು ಮಕ್ಕಳನ್ನು ಕಳೆದುಕೊಂಡಿದ್ದಾಳೆ. ಹೆರಿಗೆಯ ಸಮಯದಲ್ಲಿ ಅವಳಿಗೆ ಬಿಪಿ ಬರುತ್ತದೆ. ದಯವಿಟ್ಟು ಪರಿಹಾರ ತಿಳಿಸಿ?
-
ಹೆಸರು, ಊರು ತಿಳಿಸಿಲ್ಲ

ಗರ್ಭಿಣಿಯರಲ್ಲಾಗುವ ಏರುರಕ್ತದೊತ್ತಡ, ಗರ್ಭಧಾರಣೆ ನಂತರ, ಐದು ತಿಂಗಳಿಂದ ಆರಂಭವಾಗಿ ಹೆರಿಗೆಯ ನಂತರ 12 ವಾರದೊಳಗೆ ಸಹಜ ಸ್ಥಿತಿಗೆ ಬರುತ್ತದೆ. ಈಗ ಹೆರಿಗೆಯಾಗಿ ಎಷ್ಟು ದಿನಗಳಾಗಿವೆ ಎಂಬುದು ನೀವು ತಿಳಿಸಿಲ್ಲ. ಹೆರಿಗೆಯಾಗಿ ಮೂರು ತಿಂಗಳಾಗಿದ್ದರೆ ನಿಮ್ಮ ತಂಗಿ ವೈದ್ಯರ ಹತ್ತಿರ ಬಿಪಿ ತಪಾಸಣೆಯನ್ನು ಮಾಡಿಸಿಕೊಳ್ಳಲಿ. ಈಗ ಬಿಪಿ ಹೆಚ್ಚಿಲ್ಲವೆಂದರೆ ಸಾಕಷ್ಟು ಮುಂಜಾಗೃತೆ ವಹಿಸಿ ಗರ್ಭಧಾರಣೆಗೆ 2 ತಿಂಗಳು ಮೊದಲು ದಿನವೂ ಫೋಲಿಕ್ ಆಸಿಡ್ 5ಎಂಜಿ ಮಾತ್ರೆಯನ್ನು ತೆಗೆದುಕೊಳ್ಳಲಿ. ವಿಟಮಿನ್ ‘ಸಿ’ಯುಕ್ತ ನಿಂಬೆ, ಕಿತ್ತಳೆ, ನೆಲ್ಲಿಕಾಯಿ ಮತ್ತು ಪೊಟ್ಯಾಸಿಯಂ ಅಂಶವುಳ್ಳ ಬಾಳೆಹಣ್ಣು, ನೈಟ್ರೆಟ್‌ ಅಂಶವುಳ್ಳ ಬೀಟ್‌ರೂಟ್ ಇವುಗಳೆಲ್ಲವೂ ಸ್ವಲ್ಪ ಮಟ್ಟಿಗೆ ಸಹಜವಾಗಿಯೇ ಬಿಪಿಯನ್ನು ನಿಯಂತ್ರಣದಲ್ಲಿಡುತ್ತವೆ. ಇವುಗಳನ್ನೆಲ್ಲ ದಿನವೂ ಬಳಸುತ್ತಾ ಜೊತೆಗೆ ತಜ್ಞ ವೈದ್ಯರ ನಿಯಮಿತ ತಪಾಸಣೆಯ ಮೇಲೆ ಇನ್ನೊಂದು ಮಗುವನ್ನು ಪಡೆಯಲು ಪ್ರಯತ್ನಿಸಲಿ.

***

ನಾವು ಪ್ರೀತಿಸಿ ಮದುವೆಯಾಗಿದ್ದೇವೆ. ನನ್ನ ಹೆಂಡತಿ ನನಗಿಂತ 2 ವರ್ಷ ದೊಡ್ಡವಳು. ಮುಂದೆ ಮಕ್ಕಳಾಗಲು ಏನಾದರೂ ತೊಂದರೆ ಆಗುತ್ತಾ ಇಲ್ಲವಾ ತಿಳಿಸಿ?
-ಹೆಸರು, ಊರು ತಿಳಿಸಿಲ್ಲ

ನೀವು ಗಂಡ–ಹೆಂಡತಿಗೆ ವಯಸ್ಸೆಷ್ಟು ಎಂಬುದನ್ನು ತಿಳಿಸಿಲ್ಲ. ನಿಮ್ಮ ಹೆಂಡತಿಗೆ 30 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದರೆ ಅಂತಹ ಸಂದರ್ಭದಲ್ಲಿ ಆರೋಗ್ಯವಂತ ಅಂಡಾಣು ಬಿಡುಗಡೆಯಾಗುವ ಪ್ರಕ್ರಿಯೆ ಕಡಿಮೆಯಾಗುತ್ತದೆ. ಫಲವಂತಿಕೆಯೂ ಕ್ಷೀಣಿಸುತ್ತಾ, ಗರ್ಭಧಾರಣೆಯ ಸಂಭವವೂ ಕಡಿಮೆಯಾಗಬಹುದು. ತಡವಾದ ತಾಯ್ತನದಿಂದ ಗರ್ಭಿಣಿಯರಲ್ಲಿ ಮಧುಮೇಹ ಹಾಗೂ ಏರುರಕ್ತದೊತ್ತಡ  ಜೊತೆಗೆ ಡೌನ್‌ ಸಿಂಡ್ರೋಮ್ ಬರುವ ಸಂಭವ ಹೆಚ್ಚು. ಅಷ್ಟೇ ಅಲ್ಲ ಹೆರಿಗೆಯಲ್ಲಿ ಹಾಗೂ ಸ್ತನ್ಯಪಾನದಲ್ಲಿಯೂ ಕೂಡಾ ತೊಡಕಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾಧ್ಯವಾದಷ್ಟು ಬೇಗ ನಿಮ್ಮ ಪತ್ನಿ ಗರ್ಭಧರಿಸಲಿ. ಅಗತ್ಯವಿದ್ದರೆ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ.

***

ನನಗೆ 27 ವರ್ಷಗಳು. ಆರಂಭದಿಂದಲೂ ಸರಿಯಾಗಿ ಮುಟ್ಟಾಗುವುದಿಲ್ಲ. ಪ್ರತಿ ಬಾರಿಯು ಮೆಪ್ರೇಟ್ ಮಾತ್ರೆಗಳನ್ನು ತೆಗೆದುಕೊಂಡರೆ ಮಾತ್ರ ಮುಟ್ಟಾಗುತ್ತದೆ. ಆರು ತಿಂಗಳು ಅಥವಾ ಇನ್ನೂ ತಡವಾಗಿಯೇ ಸಹಜವಾಗಿ ಮುಟ್ಟಾಗುತ್ತದೆ. ನನಗೆ ಇತ್ತೀಚೆಗೆ ಮದುವೆ ಆಗಿದೆ. ಸರಿಯಾಗಿ ಮುಟ್ಟಾಗುವುದಿಲ್ಲವಾದ್ದರಿಂದ ಈಗ ಸದ್ಯಕ್ಕೆ ಮಕ್ಕಳ ಬಗ್ಗೆ ಯೋಚನೆ ಇಲ್ಲದಿದ್ದರೂ ಮುಂದೆ ಮಕ್ಕಳಾಗುತ್ತೋ ಇಲ್ಲವೋ ಎಂಬ ಚಿಂತೆಯಾಗುತ್ತದೆ. ವೈದ್ಯರ ಪ್ರಕಾರ ನನಗೆ ಗರ್ಭಾಶಯದ ಒಳಪದರ (ಎಂಡೋಮೆಟ್ರಿಯಂ) ಕೇವಲ 3.7 ಮಿಲಿಮೀಟರ್ ಇದೆ ಮತ್ತು ಸ್ಕ್ಯಾನಿಂಗ್‌ನಲ್ಲಿ ಪಿಸಿಒಡಿ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಹೇಗೆಂದು ಮಾರ್ಗದರ್ಶನ ನೀಡಿ?
-ಕೀರ್ತನಾ, ಊರು ತಿಳಿಸಿಲ್ಲ

ಕೀರ್ತನಾರವರೇ, ನೀವೇ ಹೇಳುತ್ತಿರುವ ಹಾಗೇ ನಿಮಗೆ ಪಿಸಿಒಡಿ ಸಮಸ್ಯೆ ಇದೆ. ನೀವು ನಿಮ್ಮ ಜೀವನಶೈಲಿಯನ್ನು ಹೇಗೆ ಬದಲಿಸಿಕೊಳ್ಳಬೇಕೆಂದು ಈ ಹಿಂದಿನ ಅಂಕಣಗಳಲ್ಲಿ ತಿಳಿಸಿದ್ದೇನೆ. ನಿಮಗೆ ಈಗಾಗಲೇ 27ವರ್ಷ ಮತ್ತು ಮಗು ಬೇಕೆಂದ ತಕ್ಷಣ ಆಗುವುದಿಲ್ಲ. ಪಿಸಿಒಡಿ ಸಮಸ್ಯೆ ಇದ್ದವರು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಸೂಕ್ತ ಔಷಧಗಳು, ಉತ್ತಮ ಪೋಷಕಾಂಶಗಳುಳ್ಳ ಆಹಾರ ಜೊತೆಗೆ ನಿಯಮಿತ ದೈಹಿಕ ಚಟುವಟಿಕೆ, ರಾತ್ರಿ 6 ರಿಂದ 8 ತಾಸು ನಿದ್ರೆ, ಇವೆಲ್ಲ ಅಳವಡಿಸಿಕೊಂಡರೂ ಗರ್ಭಧರಿಸಲು ಕೆಲವೊಮ್ಮೆ ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ ನೀವು ಸಮಯ ವ್ಯರ್ಥ ಮಾಡದೆ ಬೇಗನೆ ಚಿಕಿತ್ಸೆ ಆರಂಭಿಸಿ ಸಾಧ್ಯವಾದಷ್ಟು ಬೇಗ ಮಗುವನ್ನು ಪಡೆಯಲು ಪ್ರಯತ್ನಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು