ಬುಧವಾರ, ಸೆಪ್ಟೆಂಬರ್ 30, 2020
25 °C

ಫುಡ್‌ ಟಿಪ್ಸ್‌: ಬ್ರೆಡ್‌ಗೆ ಕೊಬ್ಬುರಹಿತ ಬೆಣ್ಣೆಯ ಸ್ಪ್ರೆಡ್‌

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಕಾಲದಲ್ಲಿ ಹೊರಗಡೆ ತಿನ್ನುವುದು ಅಷ್ಟೊಂದು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಬ್ರೆಡ್ ಸೇವನೆಯ ಪ್ರಮಾಣ ಹೆಚ್ಚಾಗಿದೆ. ಡಯೆಟ್ ಪಾಲನೆ ಮಾಡುವವರು ಮೊದಲಿನಿಂದಲೂ ಬ್ರೆಡ್ ಆಮ್ಲೆಟ್ ಹಾಗೂ ಗೋಧಿ ಬ್ರೆಡ್ ಸೇವನೆಯನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಹಲವರಿಗೆ ಬರೀ ಬ್ರೆಡ್ ಅಥವಾ ಟೋಸ್ಟ್‌ ಮಾಡಿ ಸೇವಿಸುವುದು ಇಷ್ಟವಾಗುವುದಿಲ್ಲ. ಹೀಗಾಗಿ ಬ್ರೆಡ್‌ನೊಂದಿಗೆ ಜಾಮ್‌, ಬೆಣ್ಣೆ, ನಟೆಲ್ಲಾವನ್ನು ಸವರಿಕೊಂಡು ತಿನ್ನುವುದು ಅಭ್ಯಾಸ. ಕೆಲವರು ಆಲಿವ್ ಎಣ್ಣೆ, ಬೆಣ್ಣೆಹಣ್ಣಿನ ತಿರುಳು, ಕಡಿಮೆ ಕೊಬ್ಬಿನಾಂಶ ಇರುವ ಚೀಸ್ ಸವರಿಕೊಂಡು ತಿನ್ನುತ್ತಾರೆ. ಇನ್ನು ಕೆಲವರು ‌ಡೈರಿ ಉತ್ಪನ್ನವಾದ ಬೆಣ್ಣೆ, ಮಾರ್ಗರಿನ್‌ನಂತಹ ಉತ್ಪನ್ನಗಳನ್ನು ಬಳಸುತ್ತಾರೆ.

ಬ್ರೆಡ್‌ನೊಂದಿಗೆ ಸಂಸ್ಕರಿಸಿದ ಕೊಬ್ಬಿನಾಂಶವಿರುವ ಅಥವಾ ಆರೋಗ್ಯಕ್ಕೆ ಯೋಗ್ಯವಾದ ಒಳ್ಳೆಯ ಕೊಬ್ಬಿನಾಂಶ ಇರುವ ಸ್ಪ್ರೆಡ್‌ ಅನ್ನು ಸವರಿಕೊಂಡು ತಿನ್ನಬಹುದು. ಇದು ಡಯೆಟ್ ಪಾಲನೆಯ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಎನ್ನುತ್ತಾರೆ ಪೌಷ್ಟಿಕ ತಜ್ಞರು. ನಾಲಿಗೆಗೂ ರುಚಿ ಎನ್ನಿಸಿ, ಆರೋಗ್ಯಕ್ಕೂ ಉತ್ತಮ ಎನ್ನಿಸುವ ಪದಾರ್ಥಗಳನ್ನು ಬ್ರೆಡ್‌ನೊಂದಿಗೆ ಸೇವಿಸಬೇಕು. ಸಸ್ಯಜನ್ಯ ಖಾದ್ಯತೈಲದಿಂದ ತಯಾರಾದ ಉತ್ಪನ್ನಗಳನ್ನು ಸೇವಿಸುವುದು ಉತ್ತಮ. ಇದರಿಂದ ದೇಹಕ್ಕೆ ಕೊಬ್ಬಿನಂಶ ಸೇರುವುದು ಕಡಿಮೆಯಾಗುತ್ತದೆ.

ಪೀನಟ್‌ ಬಟರ್‌
ಈ ಕಾರಣಕ್ಕೆ ಕಡಲೆಬೀಜದಿಂದ ತಯಾರಾದ ಬೆಣ್ಣೆ– ಪೀನಟ್‌ ಬಟರ್‌ ಬಳಕೆ ಉತ್ತಮ. ಇದರಲ್ಲಿ ಪ್ರೊಟೀನ್ ಅಂಶವು ಅಧಿಕವಾಗಿದೆ. ಅದರೊಂದಿಗೆ ಬಾದಾಮಿ, ಗೋಡಂಬಿ ಹಾಗೂ ಪಿಸ್ತಾಗಳಿಂದ ತಯಾರಾದ ಬೆಣ್ಣೆ ಕೂಡ ಬ್ರೆಡ್‌ನೊಂದಿಗೆ ತಿನ್ನಲು ಹೆಚ್ಚು ಸೂಕ್ತ. ಅಲ್ಲದೇ ಸೂರ್ಯಕಾಂತಿ, ಎಳ್ಳು, ಕುಂಬಳಕಾಯಿ ಅಥವಾ ಕಲ್ಲಂಗಡಿ ಬೀಜಗಳಿಂದ ತಯಾರಾದ ಬೆಣ್ಣೆಯನ್ನು ಕೂಡ ಬ್ರೆಡ್‌ನೊಂದಿಗೆ ಸೇವಿಸಬಹುದು. ಅವುಗಳಲ್ಲಿ ಪರಿಷ್ಕರಿಸಿದ ಕೊಬ್ಬಿನಾಂಶದ ಪ್ರಮಾಣ ಕಡಿಮೆ ಇರುತ್ತದೆ. ಅಲ್ಲದೇ ಅವುಗಳಲ್ಲಿ ನಾರಿನಾಂಶ ಹಾಗೂ ವಿಟಮಿನ್ ಇ ಅಂಶ ಅಧಿಕವಿರುತ್ತದೆ

‘ಗೋಡಂಬಿ, ಬಾದಾಮಿಯಂತಹ ಒಣ ಹಣ್ಣುಗಳಿಂದ ತಯಾರಾದ ಬೆಣ್ಣೆಯನ್ನು ಬ್ರೆಡ್‌ ನೊಂದಿಗೆ ಸೇವಿಸಬಹುದು. ಇದರಲ್ಲಿರುವ ಬೀಟಾ ಕ್ಯಾರೊಟಿನ್ ಅಂಶವು ದೇಹಕ್ಕೆ ಬೇಕಾಗುವ ವಿಟಮಿನ್ ಎ ಅಂಶವನ್ನು ಒದಗಿಸುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಸಹಕಾರಿ. 1 ಟೇಬಲ್ ಚಮಚ ನಟ್ಸ್ ಹಾಗೂ ಬೀಜದ ಬೆಣ್ಣೆಯಲ್ಲಿ 12 ಗ್ರಾಂ ಕೊಬ್ಬಿನಾಂಶ ಇರುತ್ತದೆ. ಇದು ಹೆಚ್ಚು ಕ್ಯಾಲೊರಿ ಹೊಂದಿದ್ದು ದೇಹಾರೋಗ್ಯಕ್ಕೂ ಒಳ್ಳೆಯದು’ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆಗಳ ಸಂಶೋಧಕ ಡಾ.ಟಿ.ಎಸ್‌.ತೇಜಸ್‌.

ಸಸ್ಯಜನ್ಯ ಬೆಣ್ಣೆ
ಸಸ್ಯಜನ್ಯ ಬೆಣ್ಣೆ ಅಥವಾ ಪ್ಲಾಂಟ್‌ ಬಟರ್‌ ಹೆಸರು ಕೇಳಲು ಕೊಂಚ ಹೊಸತು ಎನ್ನಿಸಬಹುದು. ಇದಕ್ಕೆ ಬಳಸುವ ಪದಾರ್ಥಗಳು ಸಸ್ಯಜನ್ಯ ಎಣ್ಣೆಗೆ ಬಳಸುವ ಪದಾರ್ಥಗಳು. ಇದನ್ನು ಸೋಯಾಬೀನ್, ಕೆನೊಲಾ, ಆಲಿವ್ ಹಾಗೂ ಅವಕಾಡೊ ಸೇರಿಸಿ ತಯಾರಿಸಿರುತ್ತಾರೆ. ಇದರಲ್ಲಿ ಡೈರಿ ಬೆಣ್ಣೆಗಿಂತ ಕಡಿಮೆ ಕ್ಯಾಲೊರಿ ಹಾಗೂ ಪರಿಷ್ಕರಿಸಿದ ಕೊಬ್ಬಿನಾಂಶವಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು