ಭಾನುವಾರ, ಫೆಬ್ರವರಿ 28, 2021
23 °C

ಎದೆಹಾಲೆಂಬ ಅಮೃತಧಾರೆ

ವಿದ್ಯಾಶ್ರೀ ಎಸ್. Updated:

ಅಕ್ಷರ ಗಾತ್ರ : | |

ತಾಯಿ ಆಗುವುದು ವಿಶೇಷವಾದ ಅನುಭೂತಿ. ಒಂಬತ್ತು ತಿಂಗಳ ನಂತರ ಮಗು ಮಡಿಲು ಸೇರಿದ ಖುಷಿ ಒಂದೆಡೆಯಾದರೆ, ಈ ದಿನಗಳಲ್ಲಿ ಬಾಣಂತಿ ಎದುರಿಸುವ ಗೊಂದಲಗಳು ಇನ್ನೊಂದು ಕಡೆ.

ನಿದ್ರೆಗೆಡುವ ರಾತ್ರಿಗಳ ನಡುವೆಯೂ ಮನಸ್ಸನ್ನು ಚಟುವಟಿಕೆಯಿಂದ ಇರಿಸಿಕೊಳ್ಳುವ ಒದ್ದಾಟದ ಜೊತೆಗೆ ಎಂತಹ ಆಹಾರ ಸೇವಿಸಬೇಕು, ಮಗುವನ್ನು ಸಂತೈಸುವುದು ಹೇಗೆ... ಹೀಗೆ ಆಕೆಯ ಮನಸ್ಸಿನಲ್ಲಿ ಗೊಂದಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವುಗಳೆಲ್ಲಕ್ಕಿಂತ ದೊಡ್ಡ ಸವಾಲೆಂದರೆ ಮಗುವಿಗೆ ಹಾಲುಣಿಸುವುದು. ಅದರಲ್ಲೂ ಮೊದಲ ಬಾರಿ ತಾಯ್ತನದ ಸಂಭ್ರಮ ಅನುಭವಿಸುತ್ತಿರುವವರಲ್ಲಿ ಇಂತಹ ಜಿಜ್ಞಾಸೆ ಬಹಳಷ್ಟಿರುತ್ತದೆ.

ಎದೆಹಾಲು ಕಡಿಮೆ ಇದೆ ಎಂಬುದು ಈಗಿನ ಬಹುತೇಕ ತಾಯಂದಿರ ಅಳಲು. ಸೋರುವಷ್ಟು ಹಾಲಿದ್ದರೂ, ಮಗು ಹಾಲು ಕುಡಿಯುವುದೇ ಇಲ್ಲ ಎಂಬ ಬೇಗುದಿ ಇನ್ನು ಕೆಲವರದ್ದು. ಮಗು ನಿದ್ದೆ ಮಾಡುವುದೇ ಕಡಿಮೆ, ಮಗುವಿಗೆ ಹಾಲು ಸಾಕಾಗುತ್ತಿದೆಯೇ, ಇಲ್ಲವೇ ಎಂಬ ಊಹಾಪೋಹಗಳೊಂದಿಗೆ ಆರು ತಿಂಗಳೊಳಗೆ ಮಗುವಿಗೆ ಮೇಲು ಹಾಲು ಕೊಡುವವರು ಬಹಳಷ್ಟಿದ್ದಾರೆ.

ಆರಂಭಿಕ ಒಂದು ವರ್ಷದ ಅವಧಿಯಲ್ಲಿ ತಾಯಿಹಾಲಿನಿಂದ ಸಿಗುವ ಅಮೋಘ ಚೈತನ್ಯ, ನೂರು ವಸಂತಗಳುದ್ದಕ್ಕೂ ಕಂದನನ್ನು ಕಾಪಾಡುತ್ತದೆ. ಇದು ಕೇವಲ ಭಾವನಾತ್ಮಕ ನಂಬುಗೆಯಷ್ಟೇ ಅಲ್ಲ, ವೈದ್ಯ ವಿಜ್ಞಾನವೂ ಇದನ್ನೇ ಪುಷ್ಟೀಕರಿಸುತ್ತದೆ.

‘ಬಾಣಂತಿಯರಿಗೆ ಹಾಲಿಲ್ಲದೇ ಇರುವುದು ತೀರಾ ಅಪರೂಪ. ಎಲ್ಲಾ ತಾಯಂದಿರಿಗೂ ಹಾಲು ಇದ್ದೇ ಇರುತ್ತದೆ. ಮೊದಲ ದಿನದಿಂದಲೂ ಎಷ್ಟು ಪರಿಣಾಮಕಾರಿ ಹಾಲುಣಿಸುತ್ತೀರಿ ಎಂಬುದರ ಮೇಲೆ ಹಾಲು ಉತ್ಪತ್ತಿಯ ಪ್ರಮಾಣ ಅವಲಂಬಿತವಾಗಿರುತ್ತದೆ’ ಎನ್ನುತ್ತಾರೆ ಬೆಂಗಳೂರಿನ ಮದರ್‌ಹುಡ್ ಆಸ್ಪತ್ರೆಯ ನವಜಾತು ಶಿಶು ಮತ್ತು ಮಕ್ಕಳ ತಜ್ಞೆ ಡಾ. ಅರುಣಾ ಸವೂರ್‌. ಹಾಲುಣಿಸುವಿಕೆಯ ಮಹತ್ವದ ಕುರಿತು ಅವರ ವಿವರಣೆ ಹೀಗಿದೆ...

ಮಗುವಿಗೆ ಹಾಲುಣಿಸುವುದು ಕಲೆ. ಇದನ್ನು ಸಿದ್ಧಿಸಿಕೊಂಡರೆ ಮಗುವಿನೊಂದಿಗಿನ ಖುಷಿಯ ಕ್ಷಣಗಳನ್ನು ಮನದುಂಬಿ ಅನುಭವಿಸಬಹುದು. ಮಗು ಹುಟ್ಟಿದ ನಂತರ ತಾಯಿಯೂ ನೋವು ಅನುಭವಿಸುತ್ತಿರುತ್ತಾಳೆ. ಮಗುವೂ ಅಳುತ್ತಿರುತ್ತದೆ. ಆ ಸಮಯದಲ್ಲಿ ತಿಳಿವಳಿಕೆ ನೀಡುವುದು ಕಷ್ಟವಾಗುತ್ತದೆ. ಹಾಗಾಗಿ ಗರ್ಭಿಣಿಯರಿಗೆ ಮಗುವನ್ನು ಎತ್ತಿಕೊಳ್ಳುವ ಹಾಗೂ ಹಾಲುಣಿಸುವ ರೀತಿ, ಎದೆಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸುತ್ತೇವೆ. ಈ ಹೊಸ ಜವಾಬ್ದಾರಿಗಳನ್ನು ಹೊರೆ ಎಂದುಕೊಳ್ಳದೇ ಸಂತಸದಿಂದ ಬರ ಮಾಡಿಕೊಳ್ಳುವುದರಿಂದ ಪ್ರತಿಕ್ಷಣವನ್ನು ತಾಜಾ ಆಗಿರಿಸಬಹುದು.

ಒತ್ತಡ ಬೇಡ

ಒತ್ತಡ, ಚಿಂತೆ, ಆತಂಕವು ಹಾಲಿನ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಬಾಣಂತಿ ಆತ್ಮವಿಶ್ವಾಸದಿಂದ ಇರುವುದು ಅಗತ್ಯ. ತಾಯಿ ಶಾಂತಚಿತ್ತ ಮತ್ತು ಪ್ರೀತಿಯಿಂದ ಹಾಲುಣಿಸಿದರೆ ಮಗುವಿನ ಮಾನಸಿಕ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಮೊದಲ ದಿನದಿಂದಲೂ ಮಗುವಿಗೆ ಹಾಲುಣಿಸುವ ರೀತಿ ಅದರ ಉತ್ಪತ್ತಿಯನ್ನು ಅವಲಂಬಿಸಿರುತ್ತದೆ. ಮಗು ಜನಿಸಿದ ಒಂದು ಗಂಟೆಯೊಳಗಾಗಿ ಸ್ತನ್ಯಪಾನ ಮಾಡಿಸಬೇಕು. ನಂತರ ಪ್ರತಿ ಎರಡು ಗಂಟೆಗೊಮ್ಮೆ ಎದೆಹಾಲು ನೀಡಬೇಕು. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಆದರೆ ಹಾಲು ಕಡಿಮೆ ಇರುತ್ತದೆ ಎಂಬುದು ಕೆಲವರ ನಂಬಿಕೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಆದರೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ವೇಳೆ ತಾಯಿ ಕಷ್ಟಪಟ್ಟಾದರೂ, ಮಗುವಿಗೆ ಹಾಲು ನೀಡಬೇಕು. ನೋವಾಗುತ್ತಿದೆ ಎಂದು ಮಗುವಿಗೆ ಹಾಲು ನೀಡದೇ ಹೋದರೆ ಎದೆಹಾಲು ಕ್ಷೀಣಿಸುತ್ತದೆ. ಮಗು ಮೊಲೆಯನ್ನು ಚೀಪಿದಷ್ಟೂ ಹಾಲಿನ ಪ್ರಮಾಣ ಹೆಚ್ಚುತ್ತದೆ. ಮೊದಲ ದಿನ ಹಾಲಿಲ್ಲದೇ ಹೋದರೂ ಎರಡು, ಮೂರನೇ ದಿನದಿಂದ ಹಾಲು ಬರಲು ಪ್ರಾರಂಭವಾಗುತ್ತದೆ.

ತಾಯಿ ಮತ್ತು ಮಗು ನಡುವಿನ ಬಂಧವೂ, ಹಾಲು ಉತ್ಪತ್ತಿಗೆ ಸಹಕಾರಿ. ಕಾಂಗರೂ ಕಾಳಜಿ ಇದರ ಮತ್ತೊಂದು ವಿಧಾನ. ಈ ಥೆರಪಿಯ ಮೂಲಕ ಅಮ್ಮನ ಬೆಚ್ಚನೆಯ ನೈಸರ್ಗಿಕ ಅನುಭವವನ್ನು ಮಗುವಿಗೆ ನೀಡಲಾಗುತ್ತದೆ. ತಾಯಿ ಮತ್ತು ಮಗುವಿನ ನಡುವೆ ಚರ್ಮ- ಚರ್ಮದ ಸಂಪರ್ಕ(ಸ್ಕಿನ್‌ ಟು ಸ್ಕಿನ್ ಕನೆಕ್ಷನ್) ಬೆಳೆಸುತ್ತೇವೆ.  

ಮಗು ಅಳುತ್ತಿದೆ ಎಂದು ಅಗತ್ಯವಿಲ್ಲದಿದ್ದರೂ, ಫಾರ್ಮುಲಾ ಹಾಲನ್ನು ಮಗುವಿಗೆ ಕುಡಿಸಬಾರದು. ಇದು ಮಗು ಮತ್ತು ತಾಯಿ ಇಬ್ಬರಿಗೂ ಒಳ್ಳೆಯದಲ್ಲ. ಒಮ್ಮೆ ಮಗು ಫಾರ್ಮುಲಾ ಹಾಲನ್ನು ಕುಡಿಯಲು ಪ್ರಾರಂಭಿಸಿದರೆ ಮೊಲೆ ಚೀಪುವುದನ್ನು ನಿಲ್ಲಿಸುತ್ತದೆ. ಮಗು ಎಷ್ಟೇ ಹಟ ಮಾಡಿದರೂ, ಎದೆಹಾಲನ್ನೇ ಕುಡಿಸಲು ಪ್ರಯತ್ನಿಸಬೇಕು.

ಹಾಲಿನ ಕೊರತೆ ಕಂದನ ಅಳುವಿಗೆ ಕಾರಣ

ಮಗು ಅಳುತ್ತಿದೆ ಎಂದರೆ ಹಾಲು ಸಾಕಾಗುತ್ತಿಲ್ಲ ಎಂಬುದಷ್ಟೇ ಕಾರಣವಾಗಿರುವುದಿಲ್ಲ. ನಾಲ್ಕು ತಿಂಗಳ ನಂತರ ಮಗು ಅಳಲು ಪ್ರಾರಂಭಿಸಿದರೆ ಹಾಲು ಸಾಕಾಗುತ್ತಿಲ್ಲ ಎಂಬ ಊಹೆಯಲ್ಲಿ ಹಸುವಿನ ಅಥವಾ ಮೇಲುಹಾಲು ಕುಡಿಸಲು ಪ್ರಾರಂಭಿಸುತ್ತಾರೆ. ಆರು ತಿಂಗಳವರೆಗೆ ಮಗುವಿಗೆ ತಾಯಿಯ ಎದೆಹಾಲಿನ ಹೊರತಾಗಿ ಬೇರೆ ಆಹಾರವನ್ನು ನೀಡುವ ಅಗತ್ಯವೇ ಇರುವುದಿಲ್ಲ. ಮಗುವಿನ ತೂಕ ಸರಿಯಿದ್ದು, ದಿನದಲ್ಲಿ ಆರು ಬಾರಿ ಮೂತ್ರ ಮಾಡುತ್ತಿದ್ದರೆ ಸಾಮಾನ್ಯವಾಗಿ ಎದೆಹಾಲು ಸಾಲುತ್ತಿದೆ ಎಂದೇ ಅರ್ಥ. ಯಾವುದಕ್ಕೂ, ಒಮ್ಮೆ ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದುಕೊಳ್ಳುವುದು ಉತ್ತಮ.

ಎದೆ ಹಾಲು ಶೇಖರಣೆ

ಇನ್ನು, ಉದ್ಯೋಗಸ್ಥ ಮಹಿಳೆಯರಿಗೆ ಆರು ತಿಂಗಳ ನಂತರ ಮೊದಲಿನಂತೆ ಸರಿಯಾದ ಸಮಯದಲ್ಲಿ ಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಈ ವೇಳೆ ಅವರು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು. ಎದೆಹಾಲನ್ನು ಹಿಂಡಿ ತೆಗೆದು ಶೇಖರಿಸಿಡುವ ಮೂಲಕ ಮಗುವಿಗೆ ನೀಡಬಹುದು. ಒಮ್ಮೆ ಹಾಲನ್ನು ತೆಗೆದ ಬಳಿಕ ಸುಮಾರು ನಾಲ್ಕು ಗಂಟೆಗಳವರೆಗೆ ಕೋಣೆಯ ಸಾಮಾನ್ಯ ತಾಪಮಾನದಲ್ಲೇ ಇಡಬಹುದು. ಫ್ರಿಜ್‌ನಲ್ಲಿ ನಾಲ್ಕು ದಿನ ಮತ್ತು ಫ್ರೀಜರ್‌ನಲ್ಲಿ ಆರು ತಿಂಗಳಿನವರೆಗೆ ಹಾಲನ್ನು ಶೇಖರಿಸಿಡಬಹುದು. ಕೆಲಸಕ್ಕೆ ಹೋಗುವ ಮೊದಲು ಮತ್ತು ಬಂದ ನಂತರ ಹಾಲು ಕುಡಿಸಬೇಕು. ರಜಾದಿನಗಳಲ್ಲಿ ಮತ್ತು ರಾತ್ರಿ ಹೊತ್ತು ಹೆಚ್ಚು ಹಾಲು ಕುಡಿಸಬೇಕು.

ಮಗುವಿಗೆ ಹಾಲುಣಿಸುವಾಗ ಒಂದೇ ಸ್ತನದಿಂದ ಹಾಲುಣಿಸಬಾರದು. ಆಗಾಗ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಬದಲಾಯಿಸಿ ಎರಡೂ ಸ್ತನಗಳಿಂದ ಹಾಲು ಕುಡಿಸಿ. ಹಾಲುಣಿಸುವಾಗ ಕನಿಷ್ಠ ಎರಡರಿಂದ ಮೂರು ಬಾರಿ ಈ ರೀತಿ ಮಾಡಿದರೆ ಹಾಲು ಬತ್ತುವ ಸಮಸ್ಯೆ ಬರುವುದಿಲ್ಲ.

ಎದೆಹಾಲಿಗೆ ಪರ್ಯಾಯವಾದುದು ಬೇರೊಂದಿಲ್ಲ. ಮಗುವಿನ ಬೆಳವಣಿಗೆಗೆ ಅನುಗುಣವಾಗಿ ಎದೆಹಾಲಿನ ಸ್ವರೂಪದಲ್ಲೂ ಬದಲಾವಣೆ ಆಗುತ್ತದೆ. ಮಗುವಿನ ದೇಹಗುಣಕ್ಕೆ ಅಗತ್ಯವಾದ ಹಾಲನ್ನು ತಾಯಿ ಮಾತ್ರವೇ ನೀಡಲು ಸಾಧ್ಯ. ಹಸು ಅಥವಾ ಫಾರ್ಮುಲಾ ಹಾಲು ಇದಕ್ಕೆ ಪರ್ಯಾಯವಲ್ಲ. ಎದೆಹಾಲುಣಿಸುವುದು ತಾಯಿ ಮತ್ತು ಮಗು ಇಬ್ಬರ ಆರೋಗ್ಯ ದೃಷ್ಟಿಯಿಂದಲೂ ಒಳಿತು.

ಆಹಾರ ಸೇವನೆ ಹೀಗಿರಲಿ..

ಬಾಣಂತಿ ಪಥ್ಯ ಹೆಸರಿನಲ್ಲಿ ದ್ರವ ಆಹಾರ ಸೇವಿಸದೇ ಇರುವುದು, ಕೇವಲ ಕಾಳುಮೆಣಸಿನ ಸಾರು,ಅನ್ನವನ್ನಷ್ಟೇ ತಿನ್ನುವುದರಿಂದ ಅಪೌಷ್ಟಿಕತೆ ಉಂಟಾಗಬಹುದು. ಆದಷ್ಟು ನೀರು ಕುಡಿಯುವುದು ಅಗತ್ಯ. ದೇಹ  ನಿರ್ಜಲೀಕರಣಗೊಳ್ಳದಂತೆ ಎಚ್ಚರ ವಹಿಸಬೇಕು. ಮೆಂತ್ಯೆಯಲ್ಲಿ ಕಬ್ಬಿಣದ ಅಂಶ ಇರುವುದರಿಂದ ಮೆಂತ್ಯೆ ಗಂಜಿ ಮಾಡಿ ತಿನ್ನುವುದು ಒಳ್ಳೆಯದು. ಬೆಳ್ಳುಳ್ಳಿ, ಓಟ್ಸ್, ತರಕಾರಿ, ಸೊಪ್ಪು, ಹಣ್ಣುಗಳನ್ನು ಸೇವಿಸುವುದು ಅಗತ್ಯ. ಒಂದು ತಿಂಗಳವರೆಗೆ ಮಾಂಸಾಹಾರ ಸೇವನೆ ಒಳಿತಲ್ಲ. 

ಏನಿದು ಕಾಂಗರೂ ಕಾಳಜಿ?

ಕಾಂಗರೂ ಅಂದಾಕ್ಷಣ ಅದು ತನ್ನ ಉದರ ಚೀಲದಲ್ಲಿ ಕಂದನನ್ನು ಬೆಚ್ಚಗಿಟ್ಟುಕೊಂಡು ಓಡಾಡುವ ದೃಶ್ಯ ಕಣ್ಣಮುಂದೆ ಬರುತ್ತದೆ. ಅದೇ ತರಹ ತಾಯಿಯ ಅಪ್ಪುಗೆಯಲ್ಲಿ ಪ್ರಿಮೆಚ್ಯುರ್ ಬೇಬಿಯ ಆರೋಗ್ಯವನ್ನು ವೃದ್ಧಿಸುವ ಥೆರಪಿ ಇದು. ಬಟ್ಟೆಯಿಂದ ಪೌಚ್ ಅಥವಾ ಚೀಲದ ರೀತಿ ಮಾಡಿ ಮಗುವನ್ನು ತಾಯಿ ದೇಹಕ್ಕೆ ನೇರ ಸಂಪರ್ಕ ಬರುವಂತೆ ಮಲಗಿಸಲಾಗುತ್ತದೆ. ಇದರಿಂದ ಅಮ್ಮನ ದೇಹದ ಶಾಖ ಮಗುವಿಗೆ ತಗುಲಿ ಇನ್‌ಕ್ಯುಬೇಟರ್ ಅಥವಾ ಬೆಚ್ಚನೆಯ ಅನುಭವ ನೈಸರ್ಗಿಕವಾಗಿಯೇ ಮಗುವಿಗೆ ಸಿಗುತ್ತದೆ.

ಮಗುವಿನ ಮುಖದಲ್ಲಿಯೂ ಭದ್ರತೆಯ ಹಾಗೂ ನಿರಾಳ ಭಾವ ವ್ಯಕ್ತವಾಗುತ್ತದೆ. ಮಗುವಿನ ಜೊತೆ ಹೆಚ್ಚು ಸಮಯ ಕಳೆಯುವುದರ ಜೊತೆಗೆ ಪ್ರೀತಿ, ಕಾಳಜಿ ತೋರಿಸಿದರೆ ಸಹಜವಾಗಿಯೇ ಮಗು ಬಲವಾಗುತ್ತದೆ. ಎದೆಹಾಲು ಕಡಿಮೆ ಇರುವವರಿಗೂ ಈ ಥೆರಪಿಯನ್ನು ಪ್ರಯೋಗಿಸಲಾಗುತ್ತದೆ. ತಾಯಿ– ಮಗು ನಡುವಿನ ನಂಟು ಹೆಚ್ಚಾದಂತೆ ಹಾಲು ಉತ್ಪತ್ತಿಯೂ ಹೆಚ್ಚುತ್ತದೆ ಎನ್ನಲಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು