ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನ್ಯಪಾನ ಸಪ್ತಾಹ | ಡಾ. ರವನೀತ್ ಜೋಶಿ ಸಂದರ್ಶನ: ಎದೆಹಾಲು ದ್ರವರೂಪದ ಅಪರಂಜಿ

Last Updated 6 ಆಗಸ್ಟ್ 2022, 4:12 IST
ಅಕ್ಷರ ಗಾತ್ರ

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಎದೆಹಾಲಿಗೆ ಪರ್ಯಾಯ ಅಂತ ಯಾವುದೂ ಇಲ್ಲ. ಪ್ರಸ್ತುತ ಸಮಾಜದಲ್ಲಿ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಇದೇ ಕಾರಣಕ್ಕಾಗಿ ‘ಸ್ತನ್ಯಪಾನ ಸಪ್ತಾಹ’ದ ಈ ವರ್ಷದ ಘೋಷ ವಾಕ್ಯವೂ ‘ಸ್ತನ್ಯಪಾನಕ್ಕಾಗಿ ಹೆಜ್ಜೆ: ಶಿಕ್ಷಣ ಮತ್ತು ಬೆಂಬಲ’ ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಲ್ಯಾಕ್ಟೇಶನ್‌ ಫಿಸಿಶಿಯನ್‌ ಡಾ. ರವನೀತ್ಜೋಶಿ ಅವರೊಂದಿಗೆ ರೂಪಾ ಕೆ.ಎಂ. ನಡೆಸಿದ ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ.

* ಸ್ತನ್ಯಪಾನ ವಿಚಾರದಲ್ಲಿ ನಿರೀಕ್ಷಿಸಿದಷ್ಟು ಜಾಗೃತಿ ಮೂಡಿದೆಯೇ?
ಈ ವರ್ಷದ ಘೋಷವಾಕ್ಯವನ್ನು ಗಮನಿಸಿದರೆ ಹಾಗನ್ನಿಸುವುದಿಲ್ಲ. ಆದ್ದರಿಂದಲೇ, ಸ್ತನ್ಯಪಾನದ ಬಗ್ಗೆ ಶೈಕ್ಷಣಿಕ ಜಾಗೃತಿಯ ಅಗತ್ಯವಿದೆ. ಜತೆಗೆ ಸಾಮಾಜಿಕ ಬೆಂಬಲವನ್ನೂ ನೀಡಬೇಕಿದೆ. ಮೊದಲಬಾರಿಗೆ ತಾಯಿಯಾಗುವವರಲ್ಲಿ ಹಾಲುಣಿಸುವ ಬಗ್ಗೆ ಹಲವು ಗೊಂದಲಗಳಿರುತ್ತವೆ. ಅದು ಸಹಜ ಕೂಡ. ಸೂಕ್ತ ಮಾರ್ಗದರ್ಶನದ ಮೂಲಕ ಅವರಲ್ಲಿರುವ ಗೊಂದಲಗಳನ್ನು ನಿವಾರಿಸಬೇಕಿದೆ. ಈ ಜಾಗೃತಿ ನಿರಂತರವಾಗಿರಬೇಕು. ಇದಕ್ಕೆ ಕೊನೆಯೆಂಬುದು ಇರುವುದಿಲ್ಲ.

* ಎದೆಹಾಲಿನ ಮಹತ್ವ ತಿಳಿಸಿ
ಎದೆಹಾಲು ಎನ್ನುವುದು ದ್ರವರೂಪದಲ್ಲಿರುವ ಅಪರಂಜಿ. ಅದಕ್ಕೆ ಪರ್ಯಾಯ ಹುಡುಕಲು ಸಾಧ್ಯವಿಲ್ಲ. ಎದೆ ಹಾಲು ಉಂಡ ಮಕ್ಕಳ ಬುದ್ಧಿಮತ್ತೆ ಚೆನ್ನಾಗಿರುತ್ತದೆ. ಹಾಗಾಗಿ ಸ್ವಸ್ಥ ಮತ್ತು ಸದೃಢ ಸಮಾಜದ ನಿರ್ಮಾಣದಲ್ಲಿ ಎದೆಹಾಲು ತನ್ನದೇ ಪಾತ್ರ ವಹಿಸಿದೆ. ಪ್ರತಿ ಮಹಿಳೆ ‌ಎದೆಹಾಲಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಲೇಬೇಕು. ಜತೆಗೆ ಯಾವುದೇ ಸಂದರ್ಭ, ಸ್ಥಳಗಳಲ್ಲಿಯೂ ಹಾಲುಣಿಸಬಹುದು ಎಂಬ ಧೈರ್ಯವನ್ನು ಮಹಿಳೆಯರಲ್ಲಿ ತುಂಬಬೇಕಿದೆ. ಇದಕ್ಕೆ ಸಾಮಾಜಿಕ ಬೆಂಬಲ ಸಿಗಬೇಕಿದೆ. ಹಾಲುಣಿಸುವ ಪ್ರಕ್ರಿಯೆಗೆಭಂಗ ತಂದರೆ ತಾಯಿ ಮತ್ತು ಮಗುವಿನ ಮೂಲಭೂತ ಹಕ್ಕಿಗೆ ತೊಂದರೆಯಾದಂತೆ. ಹಾಗಾಗಿ ಮಹಿಳೆಯಷ್ಟೇ ಅಲ್ಲದೇ, ಸಮಾಜದ ಎಲ್ಲ ವರ್ಗಗಳಲ್ಲೂ ಈ ಕುರಿತು ಜಾಗೃತಿ ಮೂಡಬೇಕಿದೆ.

* ಬಾಣಂತಿಯರ ಆಹಾರ ಪದ್ಧತಿಯ ಬಗ್ಗೆ ಹಲವು ಮಿಥ್ಯೆಗಳಿವೆ. ಈ ಬಗ್ಗೆ ಹೇಗೆ ಜಾಗೃತಿ ಮೂಡಿಸಬಹುದು?
ಬಾಣಂತಿ ಆಹಾರದ ಕುರಿತು ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯ ನಂಬಿಕೆ, ರೀತಿ– ರಿವಾಜುಗಳಿವೆ. ಒಂದೊಂದು ಕಡೆ ಒಂದೊಂದು ರೀತಿ ಇದೆ. ಕೆಲವು ಪ್ರದೇಶಗಳಲ್ಲಿ ಬಾಣಂತಿ ತೂಕ ಹೆಚ್ಚಬಹುದು ಎನ್ನುವ ಆತಂಕದಿಂದ ಪಥ್ಯ ಮಾಡಲಾಗುತ್ತದೆ. ಕೆಲವೆಡೆ ಬಾಣಂತಿಯರಿಗೆ ಕಡಿಮೆ ನೀರು ಕುಡಿಸಲಾಗುತ್ತದೆ. ಇವೆಲ್ಲ ತಪ್ಪು ಕಲ್ಪನೆಗಳು. ಗರ್ಭಿಣಿಯರ ಹಾಗೆಯೇ ಬಾಣಂತಿಯರಿಗೂ ನಿತ್ಯ 500 ಕ್ಯಾಲರಿ, 25 ಗ್ರಾಂನಷ್ಟು ಪ್ರೊಟೀನ್‌ ಬೇಕು. ದಿನಕ್ಕೆ ಕನಿಷ್ಠ ಮೂರು ಲೀಟರ್‌ ನೀರು ಕುಡಿಯಬೇಕು. ‌ಹೆಚ್ಚು ನೀರು ಕುಡಿದಷ್ಟು ಹಾಲು ಉತ್ಪತ್ತಿಯಾಗಲು ಸಹಕಾರಿಯಾಗುತ್ತದೆ.

*ಎದೆಹಾಲು ವೃದ್ಧಿಗೆ ಸರಳ ಮಾರ್ಗಗಳನ್ನು ತಿಳಿಸಿ.
ಬೇಡಿಕೆಗೆ ಅನುಸಾರವಾಗಿ ಹಾಲು ಉತ್ಪತ್ತಿಯಾಗುತ್ತದೆ. ಹಾಗಾಗಿ ಮಗುವಿಗೆ ಹೆಚ್ಚು ಹಾಲುಣಿಸಬೇಕು. ಮಗು ಹಾಲು ಕುಡಿದಷ್ಟು, ಹಾಲು ಉತ್ಪತ್ತಿ ಮಾಡುವ ಹಾರ್ಮೋನ್‌ಗಳು ಬಿಡುಗಡೆಯಾಗಿ, ಹಾಲು ಪೂರೈಕೆಯಾಗುತ್ತದೆ. ಹಾಗಾಗಿ ಬಿಡುವಾದಾಗೆಲ್ಲ ಮತ್ತು ಬಿಡುವು ಮಾಡಿಕೊಂಡು ಮಗುವಿಗೆ ಹಾಲುಣಿಸಬೇಕು, ಇದು ಒಂದು ಮಾರ್ಗ. ಹಾಲುಣಿಸುವ ಜೊತೆಗೆ, ತಾಯಂದಿರು ಯಥೇಚ್ಛವಾಗಿ ತರಕಾರಿ, ಹಾಲು, ಹಣ್ಣು, ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಜಂಕ್‌ಫುಡ್‌ನಿಂದ ದೂರವಿರಬೇಕು.

* ಉದ್ಯೋಗಸ್ಥ ಮಹಿಳೆಯರು ಬ್ರೆಸ್ಟ್ ಪಂಪ್ಸ್‌ ನೆರವಿನಿಂದ ಎದೆಹಾಲನ್ನು ಶೇಖರಿಸಿಡುತ್ತಿದ್ದಾರೆ. ಇದು ಸುರಕ್ಷಿತವೇ?
ಬ್ರೆಸ್ಟ್‌ ಪಂಪ್ಸ್ ಮೂಲಕ ಎದೆಹಾಲು ಶೇಖರಿಸಿಡಬಹುದು. ಆದರೆ, ಅದನ್ನು ನಿರ್ದಿಷ್ಟ ಸಮಯದೊಳಗೆ ಬಳಕೆ ಮಾಡಬೇಕು. ಕೋಣೆಯ ಉಷ್ಣತೆಯಲ್ಲಿ(ರೂಮ್‌ ಟೆಂಪರೇಚರ್‌) 4 ರಿಂದ 6 ಗಂಟೆಗಳ ಕಾಲ ಹಾಲು ಕೆಡುವುದಿಲ್ಲ. ಫ್ರಿಜ್‌ನಲ್ಲಿ 2 ದಿನ ಇಡಬಹುದು. ಫ್ರೀಜರ್‌ನಲ್ಲಿ ಮೂರು ತಿಂಗಳ ಕಾಲ ಶೇಖರಿಸಿಡಬಹುದು. ಆದರೆ, ಎಂಥ ಪರಿಸ್ಥಿತಿಯೇ ಬರಲಿ, ಎದೆಹಾಲು ನೀಡುವುದಕ್ಕೆ ಆದ್ಯತೆ ನೀಡಬೇಕು. ದಾನಿಗಳಿಂದ ಪಡೆದಹಾಲು ಎರಡನೇ ಆಯ್ಕೆಯಾಗಿರಲಿ. ಫಾರ್ಮೂಲ್‌ (ಹಾಲಿನ ಪುಡಿಯಿಂದ ತಯಾರಿಸಿದ್ದು) ಹಾಲಿನ ಬಳಕೆ ಕಡಿಮೆ ಇರಲಿ.

* ಇತ್ತೀಚೆಗೆ ಎದೆಹಾಲು ಶೇಖರಿಸಿಡುವ ‘ಮಿಲ್ಕ್‌ ಬ್ಯಾಂಕ್‌’ಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಎಷ್ಟೋ ತಾಯಂದಿರಿಗೆ, ಬೇರೆ ಬೇರೆ ಕಾರಣಗಳಿಗಾಗಿ ಎದೆಹಾಲು ಉತ್ಪತ್ತಿಯಾಗುವುದಿಲ್ಲ. ಪ್ರಸ್ತುತ ಎದೆಹಾಲು ವಂಚಿತ ನೂರಾರು ಮಕ್ಕಳಿದ್ದಾರೆ. ಅವರಿಗೆಲ್ಲ ಈ ಮಿಲ್ಕ್‌ ಬ್ಯಾಂಕ್‌ ಸಹಕಾರಿಯಾಗುತ್ತದೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ತಾಯಂದಿರು ಎದೆಹಾಲು ಉಣಿಸಲು ಸಾಧ್ಯವಾಗದಿರುವಾಗ ಅಥವಾ ಅಮ್ಮನನ್ನು ಕಳೆದುಕೊಂಡ ಹಸುಗೂಸುಗಳಿಗೆ ಈ ಬ್ಯಾಂಕ್‌ಗಳಿಂದ ತುಂಬಾ ಉಪಯೋಗವಾಗುತ್ತದೆ. ಆದರೆ, ಈ ಎದೆಹಾಲು ಸಂಗ್ರಹಿಸುವ ಕೇಂದ್ರಗಳು, ವಾಣಿಜ್ಯೀಕರಣಗೊಳ್ಳಬಾರದು. ಎದೆಹಾಲು ಮಾರಾಟಕ್ಕೆ ಇಡುವಂತಹ ವಸ್ತುವಲ್ಲ. ಆ ಎಚ್ಚರವೂ ನಮಗೆ ಇರಬೇಕು. ಹಣಕ್ಕಾಗಿ ಎದೆಹಾಲನ್ನು ಮಾರುವ ಸ್ಥಿತಿ ಬರಬಾರದು.

ಡಾ‌. ರವನೀತ್ ಜೋಶಿ
ಡಾ‌. ರವನೀತ್ ಜೋಶಿ

(ಡಾ. ರವನೀತ್ಜೋಶಿ ಮಕ್ಕಳತಜ್ಞರಾಗಿದ್ದು, ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಲ್ಯಾಕ್ಟೇಶನ್‌ ಫಿಸಿಶಿಯನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT