ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ: ನವಜಾತ ಶಿಶುವಿಗೂ ಕೆಂಪುಮುಟ್ಟಾಗಲು ಸಾಧ್ಯವೇ?

Last Updated 23 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

1. ನನಗೆ ಹೆರಿಗೆಯಾಗಿ ಈಗ ಆರನೇ ದಿನ. ಎರಡು ದಿನಗಳ ಹಿಂದೆ ಮಗುವಿಗೆ ಯೋನಿಭಾಗದಿಂದ ರಕ್ತಸ್ರಾವ ಆಯಿತು. ಈಗ ನಿಂತಿದೆ. ಎಲ್ಲರೂ ಮುಂದೆ ತೊಂದರೆ ಎಂದು ಹೆದರಿಸುತ್ತಾರೆ. ಆಸ್ಪತ್ರೆಯಲ್ಲಿ ಇದೆಲ್ಲಾ ನಾರ್ಮಲ್‌ ಎನ್ನುತ್ತಾರೆ. ಮುಂದೆ ಏನಾದರೂ ತೊಂದರೆ ಇದೆಯಾ ಡಾಕ್ಟರ್?

ಸಾಹೀರಬಾನು, ದಾವಣಗೆರೆ

ಉತ್ತರ: ಸಾಹೀರರವರೇ ಕೆಲವು ವಜಾತ ಹೆಣ್ಣು ಶಿಶುಗಳಲ್ಲಿ, ಹುಟ್ಟಿದ 2 ರಿಂದ 10 ದಿನಗಳೊಳಗಾಗಿ ಯಾವಾಗ ಬೇಕಾದರೂ ಈ ತರಹ ಯೋನಿಯಿಂದ ಮುಟ್ಟಿನ ತರಹದ ಸ್ರಾವ ಆಗಬಹುದು. ಇದನ್ನು ‘ಸುಳ್ಳುಮುಟ್ಟು‘ ಎನ್ನುತ್ತಾರೆ.

ನವಜಾತ ಶಿಶುವಿನಲ್ಲಿ ಈ ಸ್ರಾವವೂ ಕೆಂಪಾಗಿ ಇಲ್ಲವೇ ತಿಳಿಕೆಂಪಾಗಿ, ಮೂರರಿಂದ ನಾಲ್ಕುದಿನದವರೆಗೆ ಆಗಬಹುದು. ಅದಕ್ಕೂ ಹೆಚ್ಚಾದರೆ ತಜ್ಞವೈದ್ಯರನ್ನ ಸಂಪರ್ಕಿಸಿ. ಇಷ್ಟೇ ಅಲ್ಲ ಕೆಲವು ಹೆಣ್ಣು ಶಿಶುಗಳಲ್ಲಿ ಜನನ ನಂತರ ಹತ್ತು ದಿನಗಳೊಳಗೆ ಈಸ್ಟ್ರೋಜನ್ ಹಾರ್ಮೋನು ಕಡಿಮೆಯಾಗಿ ಯೋನಿಯಿಂದ ದಪ್ಪಗೆ ಬಿಳಿ ಅಥವಾ ಬೂದು ಬಣ್ಣದ ಸ್ರಾವವೂ ಆಗಬಹುದು ಮತ್ತು ಯೋನಿಭಾಗವೂ ಸ್ವಲ್ಪ ಊದಿ ಕೆಂಪು ಕೂಡಾ ಆಗಬಹುದು. ಇನ್ನೂ ಕೆಲವು ಶಿಶುಗಳಲ್ಲಿ ಹೆಣ್ಣು ಅಥವಾ ಗಂಡು ಶಿಶು ಎಂಬ ಬೇಧವಿಲ್ಲದೆ ಸ್ತನಗಳ ಬಾವು ಉಂಟಾಗ ಬಹುದು. ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾಲೂ ಉತ್ಪಾದನೆಯಾಗಬಹುದು (ಮಾಟಗಾತಿ ಹಾಲು). ಇವಕ್ಕೆಲ್ಲಾ ಯಾವುದೇ ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲ. ತಾನೇ ತಾನಾಗಿ ಸರಿಹೋಗುತ್ತದೆ. ಭಯ, ಆತಂಕಪಡುವುದು ಬೇಡ.

2. ಗಂಡ ಗಾಢ ನಿದ್ರೆಯಲ್ಲಿದ್ದಾಗ (ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ನಿದ್ರಿಸುತ್ತಿರುವಾಗ) ತನ್ನ ಲೈಂಗಿಕ ಬಯಕೆಗಳನ್ನು ತೀರಿಸಿಕೊಂಡು ಗರ್ಭಿಣಿಯಾಗಿರುವುದಾಗಿ ಗೆಳೆತಿಯೊಬ್ಬಳು ಹೇಳಿಕೊಳ್ಳುತ್ತಿ ದ್ದಾಳೆ. ತನಗೆ ಗೊತ್ತಿಲ್ಲದೆ ಗರ್ಭಿಣಿಯಾಗಿರುವುದನ್ನು ತಿಳಿದ ಗಂಡ ಕೋಪಗೊಂಡಿದ್ದು, ಇಬ್ಬರ ನಡುವೆ ಸಂಬಂಧ ಕೆಟ್ಟಿದೆ. ಪ್ರಜ್ಞೆಇಲ್ಲದೆ ನಿದ್ರಿಸುತ್ತಿರುವ ಪುರುಷನೊಡನೆ ಲೈಂಗಿಕಕ್ರಿಯೆ ನಡೆಸಿ ಗರ್ಭಧರಿಸಲು ಸಾಧ್ಯವೇ ?

ಹೆಸರು ಊರು ಬೇಡ.

ಉತ್ತರ: ನಿದ್ದೆಯಲ್ಲಿದ್ದಾಗ ಲೈಂಗಿಕಕ್ರಿಯೆ ಸಾಧ್ಯವಿಲ್ಲ. ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಲೈಂಗಿಕ ಚಟುವಟಿಕೆ ಅತಿ ಮುಖ್ಯ(ಪ್ರನಾಳಶಿಶು ಹೊರತಾಗಿ). ಗಂಡಸಿನ ವೃಷಣದಲ್ಲಿ ಪ್ರಾಪ್ತವಯಸ್ಸಿಗೆ ವೀರ್ಯಾಣುಗಳು ನಿರಂತರ ಉತ್ಪಾದನೆಯಾಗಲು ಆರಂಭವಾಗುತ್ತದೆ. ಮಹಿಳೆಯರಲ್ಲೂ ಪ್ರಾಪ್ತವಯಸ್ಸಿಗೆ ಋತುಚಕ್ರ ಆರಂಭವಾಗಿ ತಿಂಗಳಿಗೆ ಒಂದೇ ಅಂಡಾಣು ಬಿಡುಗಡೆಯಾಗುತ್ತದೆ. ಅಂಡಾಣು ವೀರ್ಯಾಣುಗಳ ಸಮಾಗಮದಿಂದ ಭ್ರೂಣೋತ್ಪತ್ತಿಯಾಗುತ್ತದೆ. ಮಿದುಳಿನಲ್ಲಿನ ಲಿಂಬಿಕ್ ವ್ಯವಸ್ಥೆ ಲೈಂಗಿಕ ಕ್ರಿಯೆಯನ್ನು ನಿರ್ವಹಿಸುತ್ತದೆ. ಈ ಲೈಂಗಿಕ ಕ್ರಿಯೆಯು ಸಂಪೂರ್ಣ ಎಚ್ಚರದ ಸ್ಥಿತಿಯಲ್ಲಿ ಮಾಡುವ ಪ್ರಕ್ರಿಯೆ.

ವಿವಾಹವಾದಾಗ ಕೆಲವು ನೈತಿಕ ಕಟ್ಟುಪಾಡುಗಳನ್ನು ಪಾಲಿಸುವುದು ಉತ್ತಮ. ಅದನ್ನು ಮೀರಿ ತಪ್ಪುಗಳಾಗಿ ದ್ದಲ್ಲಿ ತಿದ್ದಿಕೊಳ್ಳಲಿ. ಇದು ಅವರ ವೈಯಕ್ತಿಕ ಸಮಸ್ಯೆ. ವೈದ್ಯಕೀಯವಾಗಿ/ಲೈಂಗಿಕವಾಗಿ ಸಮಸ್ಯೆಗಳಿದ್ದಲ್ಲಿ ತಜ್ಞರನ್ನ ಅವರು ಸಂರ್ಪಕಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT