ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಅಂಗಳದಿಂದ ಹೊರಬರಲಿ ಮಕ್ಕಳು: ವ್ಯಸನದ ಲಾಗ್ ಆಫ್ ಹೇಗೆ?

Last Updated 18 ಜೂನ್ 2022, 0:30 IST
ಅಕ್ಷರ ಗಾತ್ರ

ಇತ್ತೀಚೆಗಿನ ಸುದ್ದಿ. ಆನ್‌ಲೈನ್‌ ಗೇಮ್ ‘ಪಬ್‌ಜಿ’ ಆಡುವುದನ್ನು ತಡೆದಿದ್ದಕ್ಕಾಗಿ 16 ವರ್ಷದ ಮಗನೊಬ್ಬ ತನ್ನ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಆ ಬಾಲಕ ‘ಪಬ್‌ಜಿ’ ಗೇಮ್‌ನ ವ್ಯಸನಿಯಾಗಿದ್ದ ಎಂದು ವರದಿಯಾಗಿದೆ.

ಹಿಂದೆಯೂ ಇಂಥ ಘಟನೆಗಳು ನಡೆದಿರುವುದು ವರದಿಯಾಗಿತ್ತು. ಹೀಗೆ ಆನ್‌ಲೈನ್ ಗೇಮ್ಸ್‌ ಗೀಳಿಗೆ ಒಳಗಾಗುತ್ತಿರುವವರಲ್ಲಿ ಬಾಲಕರು, ಬಾಲಕಿಯರು ಹಾಗೂ ಹದಿಹರೆಯದವದವರು ಹೆಚ್ಚಾಗಿದ್ದರೂ, ಇದರಲ್ಲಿ ಬಾಲಕರ ಸಂಖ್ಯೆಯೇ ಹೆಚ್ಚು.

ಒಂದು ಅಧ್ಯಯನದ ಪ್ರಕಾರ, 4 ರಿಂದ 18 ವಯೋಮಾನದವರು ಹೆಚ್ಚಾಗಿ ವಿಡಿಯೊ ಗೇಮ್ಸ್ ಹಾಗೂ ಸಾಮಾಜಿಕ ಮಾಧ್ಯಮ ಗಳಿಗೆ ದಾಸರಾಗುತ್ತಿದ್ದಾರೆ. ಮಾಹಿತಿ, ಮನರಂಜನೆ, ವ್ಯಾಕುಲತೆ (Distraction) ಮತ್ತು ವಿಶ್ರಾಂತಿ (Relaxation) ಎಲ್ಲದಕ್ಕೂ ಈ ಡಿಜಿಟಲ್ ವೇದಿಕೆ ಏಕಮೇವ ಗಮ್ಯವಾಗಿದೆ.

ಮೊಬೈಲ್‌ ಫೋನ್ ಬಳಕೆಯೇ ಒಂದು ಗೀಳಾಗಿರುವ ಈ ಕಾಲದಲ್ಲಿ, ಸಾಮಾಜಿಕ ಜಾಲತಾಣಗಳು, ಡಿಜಿಟಲ್‌ ಗೇಮ್ಸ್‌ ಆ ಗೀಳನ್ನು ವೃದ್ಧಿಸುತ್ತಿವೆ. ಮನಸ್ಸಿನ ಆರೋಗ್ಯ ಕೆಡಿಸಿ, ಬಂಧು–ಮಿತ್ರರ ಬಾಂಧವ್ಯಗಳನ್ನೂ ಹದಗೆಡಿಸುತ್ತಿವೆ.

‘ಆಟ’ಗಳೇ ಚಟವಾದಾಗ..

ಯಾವುದೇ ಚಟುವಟಿಕೆಯನ್ನು ಅತಿಯಾಗಿ ಮಾಡುತ್ತಿದ್ದರೆ ಅದು ಗೀಳು ಅಥವಾ ಚಟ ಅಥವಾ ವ್ಯಸನವಾಗುತ್ತದೆ. ಯಾವುದೇ ಚಟುವಟಿಕೆ ದಿನಕಳೆದಂತೆ ವ್ಯಸನವಾಗಿ ರೂಪುಗೊಳುತ್ತದೆ. ಅದರಲ್ಲೂ ಇಂಥ ‘ಗೇಮ್ಸ್‌’ಗಳಲ್ಲಿ ಏನಾದರೂ ಬಹುಮಾನ (ರಿವಾರ್ಡ್‌) ಇದ್ದರಂತೂ, ಆಟವಾಡುವ ಪ್ರಮಾಣವೂ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಆಟ ಮತ್ತು ವ್ಯಕ್ತಿಯ ನಡುವೆ ಒಂದು ಭಾವನಾತ್ಮಕ ಸಂಪರ್ಕ ಬೆಳೆಯುತ್ತದೆ. ಆಟದ ವಸ್ತು ವಿಷಯ (ಕಂಟೆಂಟ್) ಊಹೆಗೆ ನಿಲುಕದಮಟ್ಟಿಗೆ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರಿ, ಆತನ ನಡತೆ ಹಾಗೂ ಗುಣಗಳೊಂದಿಗೆ ಬೆರೆತು ನಿಯಂತ್ರಿಸಲಾಗದ ಮಟ್ಟಕ್ಕೆ ಹೋಗುತ್ತದೆ. ‘ವ್ಯಸನಕ್ಕೆ’ ಒಳಗಾಗುವ ಮಗುವಿನ ಆಲೋಚನೆ, ಪ್ರೇರಣೆ, ಆಸಕ್ತಿ, ಗುರಿ, ಗಮನ ಎಲ್ಲವೂ ಗೇಮಿಂಗ್ ಬಗ್ಗೆಯೇ ಆಗಿರುತ್ತದೆ.

ಟಿವಿ ಮತ್ತು ಸಿನಿಮಾದಲ್ಲಿನ ಸಂಘರ್ಷದ ದೃಶ್ಯಗಳಿಗಿಂತಆನ್‌ಲೈನ್‌ ಗೇಮ್‌ನಲ್ಲಿರುವ ಸಂಘರ್ಷ, ಗಲಭೆಯಂತಹ ದೃಶ್ಯಗಳು ಮಕ್ಕಳ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಗೇಮ್‌ಗಳಲ್ಲಿರುವ ಹೊಡೆದಾಟ, ಎದುರಾಳಿಯನ್ನು ಕೊಲ್ಲುವಂತಹ ದೃಶ್ಯಗಳು ಮಕ್ಕಳ ಮನಸ್ಸಲ್ಲಿ ಕ್ರೋಧ ತುಂಬುತ್ತವೆ. ಕೆಲವು ಮಕ್ಕಳು ಆ ಪಾತ್ರಗಳನ್ನೇ ಅನುಕರಿಸುವಂತಾಗುತ್ತಾರೆ. ಮುಂದೇ ಇದೇ ಗೀಳಾಗುತ್ತದೆ.

ಪರಿಣಾಮ ಏನು?

ಇಂಥ ಆನ್‌ಲೈನ್‌ ಗೇಮ್‌ಗಳಲ್ಲಿರುವ ಸಂಘರ್ಷ, ಕ್ರೋಧದಂತಹ ದುಷ್ಕೃತ್ಯದ ದೃಶ್ಯಗಳು ಮಕ್ಕಳ ಮನಸ್ಸಿನಾಳಕ್ಕೆ ಇಳಿಯುತ್ತವೆ. ಅವು ಒಳಗೊಳಗೆ ನಿರಂತರವಾಗಿ ಕೆಲಸ ಮಾಡುತ್ತಿರುತ್ತವೆ. ಮಕ್ಕಳು ಆ ಸಂಘರ್ಷವನ್ನು ತಮ್ಮ ವರ್ತನೆಗಳ ಮೂಲಕ ಹೊರ ಹಾಕುವುದಕ್ಕೆ ಪ್ರಯತ್ನಿಸುತ್ತಾರೆ.

ಗೇಮ್‌ಗಳಿಗೆ ದಾಸರಾಗಿರುವ ಮಕ್ಕಳು ಜಗಳಗಂಟರಾಗುತ್ತಾರೆ. ಅವರಲ್ಲಿ ರ‍್ಯಾಗ್ ಮಾಡುವಂತಹ ಸ್ವಭಾವ ಹೆಚ್ಚಾಗುತ್ತದೆ. ಗೇಮ್‌ ಆಡುತ್ತಾ ಆಡುತ್ತಾ ಪ್ರಬಲವಾದ ಆಕ್ರಮಣಕಾರಿ ಹಾಗೂ ವಿನಾಶಕಾರಿ ನಡವಳಿಕೆಯೂ ಹೆಚ್ಚಾಗುತ್ತದೆ.ಇಂಥ ವರ್ತನೆಗೆ ಸಮೀಪದಲ್ಲಿರುವ ಪೋಷಕರು ಹಾಗೂ ಕುಟುಂಬದ ಇತರ ಸದಸ್ಯರು, ಗೆಳೆಯರು ಸುಲಭ ಹಾಗೂ ಅನುಕೂಲಕರವಾದ ಟಾರ್ಗೆಟ್ ಆಗುತ್ತಾರೆ.

‘ವ್ಯಸನ’ಕ್ಕೆ ಕಾರಣ

ಮಕ್ಕಳಿಗೆ ಕಾಡುವ ಒಂಟಿತನ, ಶೈಕ್ಷಣಿಕ ಒತ್ತಡ, ಸೋಲು–ನಷ್ಟ ಗಳು, ಕೌಟುಂಬಿಕ ಕಲಹಗಳು, ವೈಯಕ್ತಿಕ ಆಸಕ್ತಿ ಹಾಗೂ ಪ್ರವೃತ್ತಿ, ಗೆಳೆಯರ ಒತ್ತಡ, ಅತಿಯಾದ ಬಿಡುವಿನ ವೇಳೆ ಇರುವುದು... ಇತ್ಯಾದಿ.

ಈ ಆನ್‌ಲೈನ್ ಗೇಮ್‌ಗಳ ವ್ಯಸನ, ಏಕಾಗ್ರತೆ ಕೊರತೆ ಜತೆಗೆ ಅತಿಯಾಗಿ ರಂಪಾಟ ಮಾಡುವುದು(ADHD), ಕೋಪ ಮತ್ತು ಖಿನ್ನತೆ ಮತ್ತಿತರ ಮಾನಸಿಕ ಅಸ್ವಸ್ಥತೆ ಇರುವ ಮಕ್ಕಳು ದೃಷ್ಕೃತ್ಯಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ. ಇದನ್ನು ಅಂತರ್ಜಾಲ ವ್ಯಸನದ ಅಸ್ವಸ್ಥತೆ ಅಥವಾ ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್‌ (Internet Addiction Disorder – IAD) ಎಂದು ಕರೆಯಲಾಗುತ್ತದೆ.

ಐಎಡಿ ಲಕ್ಷಣಗಳು

ಈ ಐಎಡಿ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ, ನಿತ್ಯದ ಚಟುವಟಿಕೆಗಳಲ್ಲಿ ವ್ಯತ್ಯಾಸವಾಗುತ್ತದೆ. ನಿದ್ರಾಹೀನತೆ, ಸರಿಯಾಗಿ ಊಟ ಸೇರುವುದಿಲ್ಲ, ಇಲ್ಲವೇ ಅತಿಯಾಗಿ ಊಟ ಮಾಡುವುದು, ಅತಿಯಾಗಿ ಜಂಕ್ ಫುಡ್ ತಿನ್ನವುದು.. ಇಂಥ ಲಕ್ಷಣಗಳಿರುತ್ತವೆ.

ಈ ವ್ಯತ್ಯಾಸದ ಜೊತೆಗೆ, ವರ್ತನೆಯಲ್ಲೂ ಬದಲಾವಣೆಯಾ ಗುತ್ತದೆ. ಆಕ್ರಮಣಕಾರಿ ಮನೋಭಾವವಿರುತ್ತದೆ. ಅನಾವಶ್ಯಕವಾಗಿ ಕೋಪ ಮಾಡಿಕೊಳ್ಳುತ್ತಾರೆ. ಆಗಾಗ್ಗೆ ಮೂಡ್‌ ವ್ಯತ್ಯಾಸವಾಗು ತ್ತಿರುತ್ತದೆ. ಮಾಡಿದ ಕೆಲಸವನ್ನೇ ಪದೇ ಪದೇ ಮಾಡುತ್ತಿರುತ್ತಾರೆ. ವಿಳಂಬ ಪ್ರವೃತ್ತಿ ಹೆಚ್ಚು.

ಹೆಚ್ಚು ಒಂಟಿಯಾಗಿದ್ದು, ಹೆಚ್ಚು ಮೌನವಾಗಿರುತ್ತಾರೆ. ಸಾಮಾಜಿಕ ಜೀವನದಲ್ಲಿ ನಿರಾಸಕ್ತಿ. ಕುಟುಂಬದವರ ಜೊತೆಯೂ ಒಡನಾಟವಿರುವುದಿಲ್ಲ. ಸುಳ್ಳು ಹೇಳುತ್ತಾರೆ. ಕಳ್ಳತನ ಮಾಡುತ್ತಾರೆ. ಸದಾ ಗೊಂದಲದಲ್ಲಿರುತ್ತಾರೆ. ಮಾನಸಿಕ ಖಿನ್ನತೆ, ಉದ್ವೇಗ, ಏಕಾಗ್ರತೆ ಕೊರತೆ, ನೆನಪಿನ ಶಕ್ತಿ ಕುಂದುವಿಕೆ, ನಿರ್ಧಾರ ತೆಗೆದುಕೊಳ್ಳಲು ಕೊರತೆ, ಸದಾ ಸಂಘರ್ಷದಲ್ಲಿ ತೊಡಗಲು ಬಯಸುತ್ತಾರೆ.

ಕಣ್ಣು ಉರಿ, ದೃಷ್ಟಿ ಸಮಸ್ಯೆ, ಬೆನ್ನು ನೋವು, ಕುತ್ತಿಗೆ ನೋವು, ಕಾರಣವಿಲ್ಲದೇ ತೂಕ ಹೆಚ್ಚಾಗುವುದು, ತಲೆ ನೋವು, ಕೈ ಬೆರಳು ಸೆಳೆತ, ನರಗಳ ದೌರ್ಬಲ್ಯಗಳಂತಹ ಆರೋಗ್ಯ ಸಮಸ್ಯೆ ಕೂಡ ಐಎಡಿಯಿಂದ ಬಳಲುತ್ತಿರುವವರನ್ನು ಗುರುತಿಸುವ ಲಕ್ಷಣಗಳಾಗಿವೆ.

ಪರಿಹಾರ ಏನು?

ಮಕ್ಕಳು ಆಡುವ ವಿಡಿಯೊ ಗೇಮ್ಸ್‌ ಕಂಟೆಂಟ್ ಮೇಲೆ ಪೋಷಕರು ಗಮನವಿರಲಿ. ಗೇಮ್ಸ್‌, ಮಕ್ಕಳ ವಯಸ್ಸಿಗೆ ಅನುಗುಣವಾಗಿದೆಯೇ ಎಂದು ಪರಿಶೀಲಿಸಿ. ಆ ಆಟಗಳಲ್ಲಿ ಅತಿಯಾದ ಆಕ್ರಮಣಕಾರಿ, ಸಂಘರ್ಷ, ಹೊಡೆದಾಟ, ‌ಗಲಭೆಯಂತಹ ವಿಷಯ ವಸ್ತು ಇದ್ದರೆ, ಇಂಥವುಗಳಿಂದ ಮನಸ್ಸಿನ ಮೇಲೆ ಎಷ್ಟೆಲ್ಲ ಪರಿಣಾಮ ಬೀರುತ್ತವೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿ. ಯಾವ ಕಾರಣಕ್ಕೂ ಉದಾಸೀನ ಮಾಡಬೇಡಿ.

ಆನ್‌ಲೈನ್ ಗೇಮ್‌ಗಳಿಗೆ ಆದಷ್ಟು ತಡೆ ಹಾಕಿ. ಆಡಲೇಬೇಕೆಂದರೆ ಪುಟ್ಟ ಸಮಯವನ್ನು ನಿಗದಿಪಡಿಸಿ.ಹೆಚ್ಚು ಸಮಯವನ್ನು ಹೊರಾಂಗಣ ಕ್ರೀಡೆಗಳಿಗೆ ನೀಡಲು ಉತ್ತೇಜಿಸಿ. ವ್ಯಾಯಾಮ, ವಾಕಿಂಗ್ ಮಕ್ಕಳ ದಿನಚರಿಯಾಗಲಿ. ಮನಸ್ಸು ಅರಳಿಸುವ ಕಲೆ, ಸಾಹಿತ್ಯದಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ.

ಮಕ್ಕಳು, ಇಂಥ ಗೇಮ್‌ಗಳ ವ್ಯಸನಿಗಳಾಗಿದ್ದರೆ, ಥಟ್ ಎಂದು ನಿಲ್ಲಿಸಲು ಅಥವಾ ಬಲವಂತವಾಗಿ ನಿಯಂತ್ರಿಸಲು ಪ್ರಯತ್ನಿಸಬೇಡಿ. ಮಕ್ಕಳ ಮನಃಸ್ಥಿತಿಗೆ ತಕ್ಕಂತೆ ನಿಧಾನವಾಗಿ ಪರಿಹಾರ ಕಂಡುಕೊಳ್ಳಿ.

ಈ ಪ್ರಕ್ರಿಯೆಯಲ್ಲಿ ಪೋಷಕರು ಅತ್ಯಂತ ಸೂಕ್ಷ್ಮವಾಗಿರಬೇಕು. ವ್ಯಸನ ಬಿಡಿಸುವುದಕ್ಕಾಗಿ ಅತಿಯಾಗಿ ನಿಂದಿಸುವುದು, ಗದರುವುದು, ಹೊಡೆಯವುದನ್ನು ಮಾಡಬೇಡಿ. ಇದು ಸರಿಯಾದ ಕ್ರಮವಲ್ಲ. ಅಷ್ಟೇ ಅಲ್ಲ,‘ನೀನು ಇಂಥವನು’ ಎಂದು ಚುಚ್ಚು ಮಾತನಾಡಬೇಡಿ. ಬೇರೆಯವರ ಎದುರು ಜರಿಯಬೇಡಿ. ಇವೆಲ್ಲ ಮಕ್ಕಳನ್ನು ‘ವ್ಯಸನ’ದಿಂದ ಮುಕ್ತಗೊಳಿಸುವ ಬದಲು, ಇನ್ನಷ್ಟು ವ್ಯಗ್ರವಾಗಿಸುತ್ತದೆ.

ಇಷ್ಟೆಲ್ಲ ಪ್ರಯತ್ನಗಳ ನಂತರವೂ,ನಿಮ್ಮಿಂದ ಮಕ್ಕಳನ್ನು ತಿದ್ದಲು ಸಾಧ್ಯವಾಗುತ್ತಿಲ್ಲ ಎಂದಾದಾಗ ಮನಃಶಾಸ್ತ್ರಜ್ಞರ / ಆಪ್ತ ಸಮಾಲೋಚಕರ ಸಹಾಯ ಪಡೆಯಿರಿ.

(ಲೇಖಕರು: ಮನಃಶಾಸ್ತ್ರಜ್ಞರು ಮತ್ತು ಆಪ್ತ ಸಮಾಲೋಚಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT