ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಾರಿತು ಎಂದು...

Last Updated 20 ಮಾರ್ಚ್ 2023, 7:30 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಮುಂಜಾನೆಯೇ ಎದ್ದು ತಯಾರಾಗಿ, ಮನೆಯಿಂದ ಹೊರಟಾಗ ತಡೆಯಲಾರದಷ್ಟು ಚಳಿ. ಸೂರ್ಯೋದಯವಾಗಿ, ಸ್ವಲ್ಪ ಸ್ವಲ್ಪ ಸೂರ್ಯ ನೆತ್ತಿಯ ಮೇಲೆ ಸರಿಯುತ್ತಿದ್ದಂತೆ, ಬೀಸುವ ಗಾಳಿಯೂ ಬಿಸಿ, ನೆಲವೂ ಬಿಸಿ, ತಲೆಯ ಮೇಲೆ ಕೆಂಡ ಸುರಿದಂತಹ ಅನುಭವ.. ಬಿಸಿ ಏರಿದಷ್ಟು ನೀರು ಕುಡಿಯುತ್ತಲೇ ಇದ್ದೆ. ಆದರೂ ಇನ್ನಷ್ಟು ನೀರು ಬೇಕೆನ್ನುವ ದಾಹ. ಕಾದ ಕಾವಲಿಗೆ ನೀರು ಸುರಿದಂತೆ ಆಗುತ್ತಿತ್ತು. ಮತ್ತೆ ಮತ್ತೆ ತಂಪು ನೀರು ಕುಡಿಯುವಂತೆ ಅನ್ನಿಸುತ್ತಿತ್ತು...!

ಇದು ಈ ಬಾರಿಯ ಬಿಸಿಲಿನ ಪರಿಣಾಮದ ಒಂದು ಸಣ್ಣ ಚಿತ್ರಣ..!

ಹವಾಮಾನ ವಿಚಿತ್ರವಾಗಿ ಬದಲಾಗುತ್ತಿದೆ. ದಿನ ದಿನಕ್ಕೆ ಹೆಚ್ಚುತ್ತಿರುವ ಬಿಸಿಲು, ಏರುತ್ತಿರುವ ತಾಪಮಾನ, ಇಳಿಕೆಯಾಗುತ್ತಿರುವ ತೇವಾಂಶ.. ಹೀಗಾಗುವುದಕ್ಕೆ ಕಾರಣಗಳು ಹಲವಿರಬಹುದು, ಆದರೆ, ಅದರ ಪರಿಣಾಮ ಮಾತ್ರ ವಿಪರೀತ..

ಏನೆಲ್ಲ ಪರಿಣಾಮಗಳಾಗಬಹುದು ?

ಮೊದಲನೆಯದಾಗಿ, ದೇಹದ ಉಷ್ಣತೆಯನ್ನು ಸಮತೋಲನದ ಲ್ಲಿಡಲು ಚರ್ಮಕ್ಕೆ ರಕ್ತ ಸಂಚಾರ ಹೆಚ್ಚಾಗುತ್ತದೆ. ಬೆವರು ಉತ್ಪತ್ತಿ ಹೆಚ್ಚಾಗಿ, ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಹಾಗೆಯೇ, ಬೆವರಿನ ಮೂಲಕ ದೇಹದಲ್ಲಿನ ನೀರು– ಲವಣಾಂಶ ಹೊರಗೆ ಹೋಗುತ್ತದೆ. ಕಿಡ್ನಿ ಮೂತ್ರ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಬಾಯಾರಿಕೆ ಉಂಟಾಗಿ ಹೆಚ್ಚಿನ ನೀರನ್ನು ಕುಡಿಯಲು ಪ್ರೇರೇಪಿಸುತ್ತದೆ.

ಬೆವರು ಹೆಚ್ಚಾದಾಗ, ದೇಹದಲ್ಲಿ ಸುಸ್ತು, ಸಂಕಟ, ಬಳಲಿಕೆ, ಬಾಯಾರಿಕೆ, ತಲೆನೋವು, ಅದು ವಿಪರೀತವಾಗಿ ವಾಂತಿ, ಮಾಂಸಖಂಡಗಳಲ್ಲಿ ಬಿಗಿತ ತಲೆ ನಿಶ್ಯಕ್ತಿಯಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇಷ್ಟೇ ಅಲ್ಲದೇ, ಚರ್ಮದಲ್ಲಿ ಉರಿ ಉಂಟಾಗಬಹುದು, ಸೂರ್ಯನ ಕಿರಣಗಳು ನೇರಳಾತೀತ ಕಿರಣ (ಯುವಿ ರೇಸ್ ) ಇವುಗಳಿಂದ ಸನ್ ಬರ್ನ್ ಆಗಬಹುದು.

ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಎದ್ದು ತುರಿಕೆ ಉಂಟಾಗಬಹುದು. ಆ ತುರಿಕೆಯಿಂದ ಗಾಯಗಳಾಗಿ ಮುಂದೆ ಕೀವು ಆಗಬಹುದು.
ವಿಪರೀತ ಬೆವರುವಿಕೆಯಿಂದ ಚರ್ಮ ಒದ್ದೆಯಾಗುವುದರಿಂದ ಫಂಗಸ್ ನಂಜು ಪ್ರಾರಂಭವಾಗಬಹುದು. ಮೊದಲೇ ನಂಜು ಇದ್ದ ಪಕ್ಷದಲ್ಲಿ ನಂಜು ಉಲ್ಬಣವಾಗಬಹುದು.

ಬಾಯಾರಿಕೆ ತಣಿಸಲು, ಸಿಕ್ಕ ಸಿಕ್ಕಲ್ಲಿ ನೀರು ಕುಡಿದರೆ(ಶುದ್ಧವಲ್ಲದ ನೀರು) ಅದರಲ್ಲಿದ್ದ ವೈರಲ್ ಬ್ಯಾಕ್ಟೀರಿಯ ಅಮೀಬೀಯ ಇವುಗಳಿಂದ ಹೊಟ್ಟೆ ನೋವು , ವಾಂತಿ , ಭೇದಿ ಉಂಟಾಗಬಹುದು. ಅದರಲ್ಲೂ ಸಣ್ಣ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣುತ್ತೇವೆ.

ದಾಹ ತಣಿಸಲು ಹೆಚ್ಚು ತಂಪು ಪಾನೀಯಗಳನ್ನು ಸೇವಿಸುತ್ತವೆ. ಇದರಿಂದ, ಗಂಟಲಿನಲ್ಲಿ ಸಹಜ ಉಷ್ಣತೆಯ ಸ್ಥಿತಿಗಿಂತ ಕಡಿಮೆಯಾದಾಗ, ನಿಶ್ಚಲ ಸ್ಥಿತಿಯಲ್ಲಿದ್ದ ಬ್ಯಾಕ್ಟೀರಿಯಗಳು ತಕ್ಷಣ ಸಾವಿರಾರು ಪಟ್ಟು ಸಂಖ್ಯೆಯಲ್ಲಿ ಬೆಳೆದು ಗಂಟಲಿನಲ್ಲಿ ನಂಜು ಉಂಟು ಮಾಡುವುದಲ್ಲದೆ ನೋವು ಕಾಣಿಸಿಕೊಳ್ಳಬಹುದು.

ಬೆವರಿನಲ್ಲಿ ನೀರು–ಲವಣಾಂಶ ಎರಡೂ ಹೊರ ಹೋಗಿರುತ್ತದೆ. ಆಗ, ಬಾಯಾರಿಕೆ ತಣಿಸಲು ಬರೀ ನೀರನ್ನೇ ಕುಡಿದರೆ, ಶರೀರದಲ್ಲಿ ಲವಣಾಂಶದ ಸಾಂದ್ರತೆ ಕಡಿಮೆಯಾಗುತ್ತದೆ. ನರಗಳು ಮತ್ತು ಮಾಂಸ ಖಂಡಗಳ ಕೆಲಸ ಕಾರ್ಯಕ್ಕೆ ಇಂತಿಷ್ಟೇ ಪ್ರಮಾಣದಲ್ಲಿ ಸೋಡಿಯಂ ಅಂಶ ಇರುವುದು ಅವಶ್ಯಕ. ಅದಕ್ಕಿಂತ ಅದು ಕಡಿಮೆಯಾದಾಗ ತಲೆನೋವು, ಗಲಿಬಿಲಿ, ಸುಸ್ತು, ತಲೆ ಸುತ್ತು, ವಾಂತಿ ,ಕಣ್ಣುರಿ ಮಾಂಸಖಂಡಗಳಲ್ಲಿ ನಿಶ್ಯಕ್ತಿ ಇತ್ಯಾದಿ ಕಾಣಿಸಿಕೊಳ್ಳಬಹುದು.

ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ, ಬೀಸುವ ಗಾಳಿಯೂ ಬಿಸಿಯಾಗುತ್ತದೆ. ಬಿಸಿ ಗಾಳಿ ಉಸಿರಾಡುವಾಗ ಮೂಗಿನಲ್ಲಿ ಉರಿ ಕಾಣಿಸಿಕೊಳ್ಳಬಹುದು. ಸೂಕ್ಷ್ಮವಾಗಿರುವ ಮೂಗಿನೊಳಗಿನ ರಕ್ತನಾಳಗಳು ಒಡೆದು ಅಲ್ಲಿಂದ ರಕ್ತಸ್ರಾವೂ ಆಗಬಹುದು. ಮದ್ರಾಸ್ ಐ ಕಾಣಿಸಿಕೊಳ್ಳುವುದೂ ಕೂಡ ಇಂಥದ್ದೇ ಹವಾಮಾನದಲ್ಲಿ.

ಅಗತ್ಯದಷ್ಟು ನೀರು ಕುಡಿಯದಿದ್ದರೆ, ಡಿಹೈಡ್ರೇಷನ್ ಆಗಿ, ತಲೆನೋವು, ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಬಿ.ಪಿ ಕಡಿಮೆಯಾಗಿ, ಪ್ರಜ್ಞೆ ತಪ್ಪಬಹುದು.

ಮೂತ್ರದ ಉತ್ಪತ್ತಿ ಕಡಿಮೆಯಾಗಿ, ಅಸಿಡಿಕ್ ಮೂತ್ರ ಉತ್ಪತ್ತಿಯಾಗುತ್ತದೆ. ಇದರಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಉಂಟಾಗಬಹುದು.

ಹೆಣ್ಣು ಮಕ್ಕಳಲ್ಲಿ ಮೂತ್ರನಾಳದ ಉದ್ದ ಕೇವಲ ನಾಲ್ಕು ಸೆಂಟಿ ಮೀಟರ್ ಇದ್ದು ಅದು ಯೋನಿಗೆ ಸಮೀಪವಿರುವ ಕಾರಣ ಬ್ಯಾಕ್ಟೀರಿಯಾ ಗಳು ಮೂತ್ರನಾಳವನ್ನು ಪ್ರವೇಶಿಸಿ ನಂಜುಂಟು ಮಾಡಬಹುದು. ಮೂತ್ರನಾಳಗಳ ಜೀವಕೋಶಗಳಿಗೆ ಸೂಕ್ಷ್ಮ ಗಾಯಗಳಾಗಿ ಮೂತ್ರ ಶಂಕೆ ಹಾಗೂ ಉರಿ ಮೂತ್ರ ಉಂಟಾಗಬಹುದು.

ಸಾಮಾನ್ಯವಾಗಿ ಧಾರಾಳ ಮೂತ್ರ ಉತ್ಪತ್ತಿಯಾದಾಗ ಬ್ಯಾಕ್ಟೀರಿಯಾಗಳ ಚಲನೆ ಕೆಳಮುಖವಾಗಿ ಇರುತ್ತದೆ . ಮೂತ್ರ ಉತ್ಪತ್ತಿ ಕಡಿಮೆಯಾಗಿ, ಸ್ವಲ್ಪ ಸ್ವಲ್ಪವೇ ಮೂತ್ರ ವಿಸರ್ಜನೆ ಆಗುತ್ತಿದ್ದಾಗ, ಆ ವಾತಾವರಣದಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಿ ನಂಜು ಉಂಟಾಗಲು ಕಾರಣವಾಗುತ್ತದೆ. ತಿಳಿ ಹಳದಿ ಬಣ್ಣದ ಮೂತ್ರ ವಿಸರ್ಜನೆಯಾಗುವಷ್ಟು ನೀರು ಕುಡಿಯಬೇಕು.

ಪರಿಹಾರ– ಹೀಗಿರಲಿ ಕ್ರಮಗಳು :

l ಹೆಚ್ಚು ದ್ರವ ಆಹಾರ ಸೇವಿಸಬೇಕು. ರಾಗಿ ಗಂಜಿ / ರವೆ ಗಂಜಿ ಇತ್ಯಾದಿ ಕುಡಿಯಬಹುದು.

l ನಿಂಬೆಹಣ್ಣಿನ ಪಾನೀಯಕ್ಕೆ ಸ್ವಲ್ಪ ಉಪ್ಪು ಸೇರಿಸಿದರೆ ಒಳ್ಳೆಯದು

l ಹಣ್ಣಿನ ಜ್ಯೂಸ್ ಬಳಸಬಹುದು. ರಸಭರಿತ ಹಣ್ಣುಗಳಾದ ಕಲ್ಲಂಗಡಿ ಕರಬೂಜ ಹಣ್ಣುಗಳನ್ನು ಸೇವಿಸಬಹುದು (ನಮಗೆ ಉಪಯೋಗವಾಗಲೆಂದೇ ಈ ಋತುಮಾನದಲ್ಲಿ ಇಂತಹ ಹಣ್ಣುಗಳೇ ಹೆಚ್ಚು ಹೆಚ್ಚು ಬೆಳೆಯುತ್ತವೆ)

l ನೀರು ಮಜ್ಜಿಗೆ, ಎಳನೀರು ಕುಡಿಯಬಹುದು.

l ದೇಹದ ನಿರ್ಜಲೀಕರಣ ನಿವಾರಿಸಲು ಓಆರ್‌ಎಸ್‌ ಕುಡಿಯಬಹುದು. (ಓಆರ್ ಎಸ್ – ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಒಂದು ಗ್ಲಾಸ್ ನೀರಿಗೆ ಒಂದು ಚಮಚ ಸಕ್ಕರೆ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಬೇಕು. ರುಚಿ ಸಾಧಾರಣವಾಗಿ ಕಣ್ಣೀರಿನ ಉಪ್ಪಿನಷ್ಟು ಇದ್ದರೆ ಸಾಕು.)

l ಹೆಚ್ಚು ಖಾರ ಹಾಗೂ ಎಣ್ಣೆಯಲ್ಲಿ ಕರಿದ ತಿಂಡಿಗಳ ಸೇವನೆ ಒಳ್ಳೆಯದಲ್ಲ .

l ಮಕ್ಕಳು ಹೆಚ್ಚು ನೀರು ಕುಡಿಯುವುದರಿಂದ ಆಹಾರ ಸೇವಿಸುವುದನ್ನು ಕಡಿಮೆ ಮಾಡುತ್ತಾರೆ. ಹಾಗಾಗಿ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯೂ ಕಂಡು ಬರಬಹುದು. ಮಕ್ಕಳು ಆಟದ ಕಡೆ ಗಮನಹರಿಸುವಾಗ ನೀರು ಕುಡಿಯುವುದನ್ನು ಮರೆಯುತ್ತಾರೆ. ಹಾಗಾಗಿ ಹೆಚ್ಚು ಬಾರಿ ಡಿಹೈಡ್ರೇಶನ್‌ಗೆ ಒಳಗಾಗಿ ತೊಂದರೆ ಅನುಭವಿಸಬೇಕಾಗುತ್ತದೆ.

ಮನೆ ಒಳಗೂ – ಹೊರಗೂ..

l ಮನೆಯಿಂದ ಹೊರ ಹೋಗುವಾಗ ತಲೆಗೆ ಟೋಪಿ ಬಳಸಿ, ಇಲ್ಲವೇ ಛತ್ರಿ ಬಳಸಿ. ನೆರಳಿರುವ ಜಾಗದಲ್ಲಿ ನಿಲ್ಲಿ. ನೆರಳಿನಲ್ಲೇ ವಾಹನ ನಿಲ್ಲಿಸಿ. ಕಾರು ಪಾರ್ಕ್ ಮಾಡಿದಾಗ ಮಕ್ಕಳು–ಹಿರಿಯರನ್ನು ಕಾರಿನ ಒಳಗಡೆ ಕುಳ್ಳಿರಿಸಬೇಡಿ.

l ಹತ್ತಿಯ ಬಟ್ಟೆಯ ಉಡುಪು ಬಳಸಿ. ಆದಷ್ಟು ಸಡಿಲವಾಗಿರಲಿ. ಬಿಳಿ ಅಥವಾ ಗಾಢವಲ್ಲದ ಬಣ್ಣದ ಉಡುಪು ಒಳ್ಳೆಯದು. ಕಪ್ಪು ಬಟ್ಟೆ ಆದಷ್ಟು ಉಪಯೋಗಿಸದೆ ಇರುವುದು ಕ್ಷೇಮ. ಯಾಕೆಂದರೆ ಅದು ಸೂರ್ಯನ ಕಿರಣಗಳನ್ನು ಹೀರಿಕೊಂಡು ದೇಹಕ್ಕೆ ಹೆಚ್ಚಿನ ಉಷ್ಣತೆಯನ್ನು ಕೊಡುತ್ತದೆ.

ಇದೆಲ್ಲ ಮಾಡಬೇಡಿ:

l ದಾಹ ನೀಗಿಸಿಕೊಳ್ಳಲು ನೀರನ್ನಷ್ಟೇ ಕುಡಿಯಬೇಡಿ. ಅದರ ಜೊತೆಗೆ, ಬೇರೆ ದ್ರವಪದಾರ್ಥಗಳನ್ನು ಸೇವಿಸಿ.

l ಅತಿಯಾದ ತಂಪು ಪಾನೀಯವೂ ಒಳ್ಳೆಯದಲ್ಲ. ಮಂಜುಗಡ್ಡೆ ಐಸ್ ಕ್ಯೂಬ್ಸ್ ಬಳಸುವಾಗ ಜಾಗ್ರತೆ ಇರಲಿ.

l ಶುದ್ಧ ನೀರನ್ನೇ ಕುಡಿಯಬೇಕು. ದಿನಕ್ಕೆ ಮೂರರಿಂದ ನಾಲ್ಕು ಲೀಟರ್‌ನಷ್ಟಾದರೂ ನೀರು ದೇಹ ಸೇರಬೇಕು. ಪ್ರತಿ ಗಂಟೆಗೊಮ್ಮೆ ಅರ್ಧದಿಂದ ಒಂದು ಗ್ಲಾಸ್ ನಷ್ಟು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು. ಏಕೆಂದರೆ ತುಂಬಾ ನೀರು ಕುಡಿದಾಗ ವಾಂತಿಯಾಗುವ ಸಂದರ್ಭವೂ ಇದೆ.

l ನಮ್ಮ ಮೂತ್ರದ ಬಣ್ಣವನ್ನು ಗಮನಿಸುವ ಮೂಲಕ ನಾವು ಕುಡಿಯುವ ನೀರಿನ ಪ್ರಮಾಣ ಸರಿ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಬಹುದು.

ಲೇಖಕರು: ಸ್ತ್ರೀಆರೋಗ್ಯ ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT