ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಗ್ರತೆಗೆ ಕೆಲವು ಸೂತ್ರಗಳು

Published 20 ಫೆಬ್ರುವರಿ 2024, 0:22 IST
Last Updated 20 ಫೆಬ್ರುವರಿ 2024, 0:22 IST
ಅಕ್ಷರ ಗಾತ್ರ

ಅಧ್ಯಯನಕ್ಕೆ, ಅಭ್ಯಾಸಕ್ಕೆ, ಹೊಸ ಕಲಿಕೆಗೆ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುವುದಕ್ಕೆ ಏಕಾಗ್ರತೆ ಬಹಳ ಮುಖ್ಯ. ಮನಸ್ಸಿನ, ಅಥವಾ ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ‘ಗಮನ’ದ (attention) ಮೂಲಸ್ವಭಾವವೇ ಹೊರ ಪ್ರಪಂಚದೆಡೆಗೆ, ವಸ್ತುವಿನ ಕಡೆಗೆ ಹರಿಯುವುದು. ಮನಸ್ಸಿನ ಸ್ವಭಾವವೇ ಹೀಗೆ ‘ಅಲೆಯುವುದು’, ಮನಸ್ಸು ಅಲೆಯುವುದರಿಂದಲೇ ನಮಗೆ ಹೊಸ ಲೋಕದ, ಹೊಸ ವಿಚಾರಗಳ ಪರಿಚಯವಾಗುವುದು. ಆದರೆ ಹತ್ತು ನಿಮಿಷದಲ್ಲಿ ನೂರು ದಿಕ್ಕುಗಳಿಗೆ ಚಲಿಸುವ ಅಸ್ತವ್ಯಸ್ತವಾದ ಮನಸ್ಸು ಏನನ್ನು ತಾನೇ ಹಿಡಿದಿಟ್ಟುಕೊಳ್ಳಬಲ್ಲದು?

ಯಾವುದೇ ವಿಷಯವನ್ನು ಆಳವಾಗಿ ತಿಳಿಯಬೇಕಾದಾಗ ಅದನ್ನು ಸಾವಕಾಶವಾಗಿ ಅವಲೋಕಿಸಿ, ಧ್ಯಾನಿಸಿ, ಧಾರಣ ಮಾಡುವುದು ಅತ್ಯಾವಶ್ಯಕ. ಶೈಕ್ಷಣಿಕ ಪರೀಕ್ಷೆಗಳನ್ನು ಎದುರಿಸುವ ಮಕ್ಕಳಲ್ಲಂತೂ ಏಕಾಗ್ರತೆಯ ಕೊರತೆಯೇ ದೊಡ್ಡ ಸಮಸ್ಯೆಯಾಗುವುದುಂಟು. ಮಕ್ಕಳೇ ಇರಲಿ, ದೊಡ್ಡವರೇ ಇರಲಿ, ಯಾರಿಗೂ ಏಕಾಗ್ರತೆ ಸುಲಭಸಾಧ್ಯವಲ್ಲ; ಸತತ ಪ್ರಯತ್ನದಿಂದ ಮಾತ್ರ ಏಕಾಗ್ರತೆಯನ್ನು ಸಾಧಿಸಬಹುದು. ಏಕಾಗ್ರತೆಯ ಕೊರತೆ ಎನ್ನುವುದು ವ್ಯಕ್ತಿತ್ವದ ದೋಷವೋ, ವೈಯಕ್ತಿಕ ಗುಣಸ್ವಭಾವವೋ ಅಲ್ಲ; ಏಕಾಗ್ರತೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬಹುದು.

ಗಮನ ಎತ್ತೆತ್ತಲೋ ಹರಿಯುವುದು, ಅದರಿಂದ ಉಂಟಾಗುವ ಮಾನಸಿಕ ಆಯಾಸ, ಬೇಸರ, ಗಮನ ಕೇಂದ್ರೀಕರಿಸಿದಾಗ ಉಂಟಾಗುವ ಸಮಾಧಾನದ ಸ್ಥಿತಿ, ಅಂತಹ ಪ್ರಶಾಂತ ಮನಃಸ್ಥಿತಿಯಲ್ಲಿ ಕಲಿಕೆ ಸುಲಲಿತವಾಗಿ ಸಾಗಿದಾಗ ಉಂಟಾಗುವ ಸಂತೋಷ - ಎಲ್ಲವನ್ನೂ ಅನುಭವಿಸುತ್ತಾ ಮಕ್ಕಳು ತಮ್ಮ ಮನಸ್ಸಿನ ಬಗ್ಗೆಯೇ ತಾವು ಅರಿಯುವುದೂ ಮುಖ್ಯ. ಮನಸ್ಸಿನ ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸಿ ಅದು ನಮ್ಮ ಕ್ರಿಯೆಗಳನ್ನು ಹೇಗೆ ಪ್ರಭಾವಿಸುತ್ತದೆ ಎನ್ನುವುದೂ ಕೂಡ ಮಕ್ಕಳಿಗೆ ಮಹತ್ವಪೂರ್ಣ ಕಲಿಕೆಯೇ ಹೌದು.

ಏಕಾಗ್ರತೆಯನ್ನು ಯಾವ ಪರಿಶ್ರಮವನ್ನೂ ಪಡದೇ ಆನಂದವಾಗಿದ್ದುಕೊಂಡೇ ಸಾಧಿಸಿಬಿಡಬಹುದೇ ಹಾಗೇನಿಲ್ಲ; ಏಕಾಗ್ರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಎರಡು ಮಾನಸಿಕ ಸ್ಥಿತಿಗಳನ್ನು ಹಾದುಹೋಗಬೇಕಾಗುತ್ತದೆ; ಒಂದು ಏಕತಾನತೆ ತರುವ ‘ಬೇಸರ’ (Boredom); ಇನ್ನೊಂದು ತಲುಪಲಾರದ ಗುರಿಗಳು, ಧ್ಯೇಯಗಳು ತರುವ ‘ಆತಂಕ’ (Anxiety).

ನಮ್ಮ ಕೌಶಲಗಳು (Skills) ನಾವೆದುರಿಸಬೇಕಾದ ಸವಾಲುಗಳ (Challenges) ಮಟ್ಟವನ್ನು ಮೀರಿದ್ದಾದರೆ ಆಗ ಬೇಸರ ಉಂಟಾಗುತ್ತದೆ. ಉದಾಹರಣೆಗೆ, ಗಣಿತದಲ್ಲಿ ಪ್ರತಿಭೆಯಿರುವ ವಿದ್ಯಾರ್ಥಿಗೆ ತನ್ನ ಕೌಶಲವನ್ನು ಸರಿಗಟ್ಟದ ಸಾಧಾರಣ ಲೆಕ್ಕಗಳನ್ನು ಮಾಡಬೇಕಾದಾಗ ಬೇಸರವಾಗುತ್ತದೆ. ಹಾಗೆಯೇ ನಾವೆದುರಿಸಬೇಕಾದ ಸವಾಲುಗಳ ಮಟ್ಟ ನಮ್ಮ ಕೌಶಲಗಳನ್ನು ಮೀರಿದ್ದಾದರೆ ನಾವೆಣಿಸಿದ ಗುರಿ ತಲುಪಲಾರೆವೇನೋ ಎನ್ನುವ ಆತಂಕದಿಂದ ನಿಷ್ಕ್ರಿಯತೆ, ನಿರುತ್ಸಾಹ ಉಂಟಾಗುತ್ತದೆ. ಉದಾಹರಣೆಗೆ ಸಾಧಾರಣ ವಾಕ್ಯಗಳನ್ನೂ ರಚಿಸಲು ಕಷ್ಟಪಡುವ ವಿದ್ಯಾರ್ಥಿ ನಾಲ್ಕು ಪುಟದ ಪ್ರಬಂಧ ಬರೆಯಬೇಕಾದಾಗ ಆತಂಕವನ್ನು ಅನುಭವಿಸುತ್ತಾನೆ.

ಮೇಲೆ ವಿವರಿಸಿದ ಎರಡೂ ಸಂದರ್ಭಗಳಲ್ಲಿ ಗಮನ ಕೇಂದ್ರೀಕರಿಸುವುದು ಸಾಧ್ಯವಿಲ್ಲ. ಆದರೆ ಯಾವಾಗ ನಮ್ಮ ಕೌಶಲಗಳು ಮತ್ತು ನಾವೆದುರಿಸಬೇಕಾಗಿರುವ ಸವಾಲುಗಳು ಒಂದಕ್ಕೊಂದು ಪೂರಕವಾಗಿ, ಪ್ರೇರಕವಾಗಿ ಕೆಲಸ ಮಾಡುತ್ತದೆಯೋ ಆಗ ನಾವು ಮಾಡುತ್ತಿರುವ ಕೆಲಸವು ರೋಚಕ ಅನುಭವ ನೀಡುತ್ತದೆ, ಗುರಿ ತಲುಪಲು ಬೇಕಾದ ಎಲ್ಲ ಪರಿಶ್ರಮವನ್ನೂ ಪಡಲು ನಮ್ಮನ್ನು ಸಿದ್ಧಗೊಳಿಸುತ್ತದೆ.

ಮನಸ್ಸನ್ನು ಓದಿನಲ್ಲಿ ಏಕಾಗ್ರತೆಯಿಂದ ತೊಡಗಿಸಲು ವಿದ್ಯಾರ್ಥಿಗಳು ಕೈಗೊಳ್ಳಬಹುದಾದ ಕೆಲವು ಸುಲಭೋಪಾಯಗಳು ಇಲ್ಲಿವೆ:

1. ಅಧ್ಯಯನದಲ್ಲಿ ತೊಡಗಿದಾಗ ಮನಸ್ಸು ವಿಚಲಿತಗೊಳ್ಳುವುದು ಸ್ವಾಭಾವಿಕ. ಆದರೆ ಒಂದು ಕ್ಷಣದ ವಿಚಲಿತತೆ ಮತ್ತು ಅದು ತರುವ ಬೇಸರ ಒಂದು ಇಡೀ ದಿನವನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

2. ಪ್ರತಿದಿನದ ಪ್ರಾರಂಭವನ್ನು ಅರ್ಥಪೂರ್ಣವಾದ, ಸಂತೃಪ್ತಿ ತರುವ ಕೆಲಸದಿಂದ ಪ್ರಾರಂಭಿಸುವುದು ಇಡೀ ದಿನದ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ಸಮಯ ಹಾಳುಮಾಡುವುದು ಅಭ್ಯಾಸವಾಗಿಬಿಟ್ಟಾಗ ಗುರಿಯ ಬಗೆಗಿನ ಆಸೆ ಕ್ಷೀಣಿಸುತ್ತದೆ, ಆಗ ಏಕಾಗ್ರತೆ ಸಾಧಿಸುವುದು ಕಷ್ಟ.

3. ನಮ್ಮ ಆಹಾರ, ನಿದ್ರೆ, ದಿನಚರಿ, ಸ್ಕ್ರೀನ್ ಸಮಯ, ಸ್ನೇಹಿತರ ಒಡನಾಟ, ಭಾವನಾತ್ಮಕ ಏರುಪೇರುಗಳು, ಕೌಟುಂಬಿಕ ವಾತಾವರಣ – ಎಲ್ಲವೂ ನಮ್ಮ ಏಕಾಗ್ರತೆಯನ್ನು ಪ್ರಭಾವಿಸುತ್ತದೆ. ಇವೆಲ್ಲವನ್ನೂ ಮೀರಿಸುವ ಅಧ್ಯಯನದ ಹಂಬಲ ನಮ್ಮದಾಗಬೇಕು.

4. ಏನನ್ನಾದರೂ ಯಶಸ್ವಿಯಾಗಿ ಮಾಡಿ ಮುಗಿಸಿದ್ದರ ಅನುಭವ ಮತ್ತು ಅದರ ನೆನಪೂ ಕೂಡ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನವೂ ಏನನ್ನು ಓದಬೇಕು, ಏನನ್ನು ಹೊಸದಾಗಿ ಕಲಿಯಬೇಕು ಎನ್ನುವುದರ ಒಂದು ಪಟ್ಟಿ ತಯಾರಿಸಿಕೊಂಡು ಓದಿ, ದಿನದ ಕೊನೆಯಲ್ಲಿ ಏನು ಓದಿದೆ, ಹೇಗೆ ಕಲಿತೆ, ಕಲಿತದ್ದು ಸಮರ್ಪಕವಾಗಿದೆಯೇ, ಪರೀಕ್ಷೆಯಲ್ಲಿ ಬರೆಯಲು ಬರುತ್ತದೆಯೇ ಎನ್ನುವುದನ್ನು ವಿಮರ್ಶಿಸಿಕೊಂಡು ಬರೆದಿಟ್ಟುಕೊಳ್ಳಬಹುದು.

5. ಓದುವಾಗ ಪರಿಕಲ್ಪನೆಗಳನ್ನು, ವಿಚಾರಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು, ಅರ್ಥಮಾಡಿಕೊಂಡಿದ್ದನ್ನು ಅಭಿವ್ಯಕ್ತಿಸುವುದು, ಪ್ರಾಯೋಗಿಕವಾದ ಸಮಸ್ಯೆಗಳನ್ನು ಪರಿಹರಿಸಲು ಉಪಯೋಗಿಸುವುದು ಏಕಾಗ್ರತೆಯನ್ನು ಸಾಧಿಸುವ ಉಪಾಯಗಳಲ್ಲೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT