ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಕ್ಷಮೆಗಿಂತ ಕ್ಷೇಮವೇ ಉತ್ತಮ

Last Updated 22 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಯಾವ ರೀತಿಯ ವ್ಯಾಯಾಮ ಉತ್ತಮ? ಜಿಮ್, ಪೆಲಾಟಿಸ್, ಏರೋಬಿಕ್ಸ್, ಹಿಪ್ ಹಾಪ್ ಡ್ಯಾನ್ಸ್, ಝಂಬ ಡ್ಯಾನ್ಸ್, ನಡಿಗೆ, ಓಟ, ವಿವಿಧ ಆಟ, ಇದರೊಂದಿಗೆ ಯೋಗ – ಇವುಗಳಲ್ಲಿ ಯಾವುದು ಅಳವಡಿಸಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು? ಬರೀ ಆರೋಗ್ಯಕ್ಕಾಗಿ ಅಷ್ಟೇ ಅಲ್ಲ, ಸಿಕ್ಸ್ ಪ್ಯಾಕ್ ಸಿದ್ಧಿಸಿದರೆ ಸಾಕು ಎನ್ನುವವರು ಕೆಲವರು, ಝೀರೋ ಫಿಗರ್‍ಗಾಗಿ ಹಪಾಹಪಿಸುವವರು ಅನೇಕರು. ಇದರೊಟ್ಟಿಗೆ ಆಂಟಿ, ಅಂಕಲ್ ಹಣೆಪಟ್ಟಿಯಿಂದ ಜಾರಿಕೊಳ್ಳಲಿಚ್ಚಿಸುವವರ ಸಂಖ್ಯೆ ಕಡಿಮೆ ಇಲ್ಲ. ಯಾವ ಮಾರ್ಗದಲ್ಲಿ ಇದು ಸಾಧ್ಯ? ಫಲಿತಾಂಶ ಖಚಿತವೋ? ಎಷ್ಟ ತಿಂಗಳು ಮಾಡಬೇಕು? ಒಂದು ವಿಧಾನ ಅಳವಡಿಸಿಕೊಂಡರೆ ಸಾಕಾ? ಅಥವಾ, ಎರಡು-ಮೂರು ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾ? ಪ್ರಶ್ನೆಗಳ ಅನುಮಾನಗಳ ಭರಾಟೆ. ಅಯ್ಯೋ! ಆ ವಿಧಾನ ಸರಿ ಇಲ್ಲ, ಅದರಿಂದ ಕೆಡಕೂ ಆಗಬಹುದು, ಅಷ್ಡಕ್ಕೂ ಇದೆಲ್ಲ ಏಕೆ ಬೇಕು? ಎಂಬ ಆಕ್ಷೇಪಣೆಗಳಿಗೂ ಕಡಿಮೆ ಇಲ್ಲ.

ಈ ಪ್ರಶ್ನೆಗಳ ಸರಮಾಲೆಗೆ, ಅನುಮಾನ-ಆಕ್ಷೇಪಣೆಗಳಿಗೆ ಇತ್ತೀಚಿನ ಸೇರ್ಪಡೆ – ಇವುಗಳಲ್ಲಿ ಅಪಾಯವೂ ಉಂಟೆ? ಉತ್ಸಾಹದಿಂದ ವ್ಯಾಯಾಮಕ್ಕೆ ಹೊರಡುತ್ತಿದ್ದವರಲ್ಲೂ ಹಿಂಜರಿಕೆ.

ಪ್ರತಿನಿತ್ಯ ವ್ಯಾಯಾಮ ಮಾಡುವುದು ಈ ಆಧುನಿಕ ಜೀವನಶೈಲಿಗೆ ಅತಿ ಅಗತ್ಯವೆಂಬುದು ಸಂಶೋಧನೆಗಳಿಂದ ಸ್ಥಿರವಾಗಿರುವ ಸತ್ಯ. ಆದರೆ ಎಲ್ಲ ನಿಯಮಗಳಿಗೂ ಒಂದು ಅಪವಾದ (exception) ಇದ್ದೇ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅರಿಯದ ಕಾರಣಗಳಿಂದಾಗಿ ಘಾಸಿ ಉಂಟಾಗಬಹುದು. ಒಂದು ನಿರ್ದಿಷ್ಟ ವ್ಯಾಯಾಮ ಬಹುತೇಕರಿಗೆ ತೊಂದರೆ ಉಂಟುಮಾಡಿದರೆ ಆಗ ಆ ನಿರ್ದಿಷ್ಟ ವಿಧಾನದಲ್ಲಿ ದೋಷವಿದೆಯೆಂದು ಪರಿಗಣಿಸಬಹುದು. ಅನೇಕ ವೇಳೆಗಳಲ್ಲಿ ವ್ಯಾಯಾಮದಿಂದ ಉಂಟಾಗುವ ತೊಂದರೆ ಕಾಕತಾಳಿಯವೂ ಇರಬಹುದು. ಹಾಗಾಗಿ ವ್ಯಾಯಾಮದ ಕುರಿತಾಗಿ ಅನಗತ್ಯ ಶಂಕೆ ಬೇಡ. ಆದರೂ, ಎಚ್ಚರಿಕೆ ಅಗತ್ಯ.

ಎಷ್ಟು ವ್ಯಾಯಾಮ ಮಾಡಬೇಕು – ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಕೊಡುವುದು ಕಷ್ಟಕರ. ಕೆಲವು ನಿಯಮಗಳನ್ನು ಪಾಲಿಸುವುದು ಉತ್ತಮ.

ದೇಹಧರ್ಮ: ದೇಹದ ಬಾಗುವಿಕೆಯ ಪ್ರಮಾಣ, ಕೀಲುಗಳಲ್ಲಿರ ಬಹುದಾದ ಪೆಡೆಸುತನಗಳನ್ನು ಗಮನಿಸಿ. ಅದಕ್ಕನುಗುಣವಾಗಿ ಚಲನೆಗಳನ್ನು ಮಾಡಬೇಕು.

ವಯೋಧರ್ಮ: ದೇಹಕ್ಕೆ ವಯಸ್ಸಾಗುತ್ತಾ ಅದರ ಕಾರ್ಯಕ್ಷಮತೆ ಕುಗ್ಗುತ್ತಾ ಹೋಗುತ್ತದೆ. ಘಾಸಿಯಾದಾಗ ಸುಧಾರಿಸಿಕೊಳ್ಳಲು ಬೇಕಾದ ಅವಧಿ ವಯಸ್ಸಾದಂತೆಲ್ಲಾ ಹೆಚ್ಚುತ್ತಾ ಹೋಗುತ್ತದೆ.

ಮನೋಧರ್ಮ: ಯಾವ ವಯಸ್ಸಿನಲ್ಲಿ ಅಭ್ಯಾಸ ಪ್ರಾರಂಭಿಸುತ್ತೇವೆ ಮತ್ತು ಎಷ್ಟು ಅವಧಿಯಿಂದ ನಿರಂತರ ಅಭ್ಯಾಸ ಮಾಡುತ್ತೇವೆ ಎಂಬುದರ ಮೇಲೆ ಮನೋಧರ್ಮ ನಿಂತಿರುತ್ತದೆ. ವ್ಯಾಯಾಮಕ್ಕೆ ದೇಹವನ್ನಷ್ಟೇ ಅಲ್ಲದೆ ಮನಸ್ಸನ್ನೂ ಒಗ್ಗಿಸಬೇಕು. ವ್ಯಾಯಾಮದ ಪ್ರಾರಂಭಿಕ ವಯಸ್ಸು ಜಾಸ್ತಿಯಾದಷ್ಟೂ ಹಾಗೂ ಅಭ್ಯಾಸದ ಅವಧಿ ಕಡಿಮೆಯಾದಷ್ಟೂ ಮನಸ್ಸು ಬಾಗುವುದು ಕಠಿಣವಾಗುತ್ತದೆ.

ಸುಖಾನುಭವ ಸೂಚನೆ: ನಾವು ಮಾಡುವ ವಿಧಾನಗಳು ನಮ್ಮ ದೇಹ-ಮನಸ್ಸುಗಳಿಗೆ ಸುಖದಾಯಕ ಅನುಭವ ನೀಡುತ್ತಿದೆಯೇ ಅಥವಾ ಇಲ್ಲವೇ, ಎಂಬುದನ್ನು ಪರಿಶೀಲಿಸುತ್ತಿರಬೇಕು. ಅನ್ಯಥಾ ಪರಿಣಾಮಗಳಿದ್ದರೆ, ವಿಧಾನಗಳನ್ನು ಸೂಕ್ತವಾಗಿ ಮಾರ್ಪಸಿಕೊಳ್ಳಬೇಕು.

ಕ್ಷಮೆಗಿಂತ ಕ್ಷೇಮವೇ ಉತ್ತಮ: ಇದು ಯಾವುದೇ ವ್ಯಾಯಾಮ ವಿಧಾನದ ಭೋಧಕರು ನೆನಪಿರಿಸಿಕೊಳ್ಳಬೇಕಾದ ಘೋಷಣಾ ವಾಕ್ಯ. ಅಜಾಗರೂಕತೆಯಿಂದ ಅಥವಾ ಅಚಾತುರ್ಯದಿಂದ ಘಾಸಿಗೊಳಪಡಿಸಿ ನಂತರ ‘ಕ್ಷಮಿಸಿ’ ಎನ್ನುವುದಕ್ಕಿಂತ ಅಭ್ಯಾಸಿಯ ಕ್ಷೇಮವೇ ಮುಖ್ಯವಾಗಬೇಕು. ಅಂತೆಯೇ, ಅಭ್ಯಾಸಿಯು ಅಗತ್ಯಕ್ಕಿಂತ ಹೆಚ್ಚು ಮಾಡಿ ಘಾಸಿಗೊಂಡು ತನ್ನವರಿಗೆ ತೊಂದರೆ ತಂದು ‘ಕ್ಷಮಿಸಿ’ ಎನ್ನುವುದಕ್ಕಿಂತ ಕ್ಷೇಮವಾಗಿರುವಂತೆ ತನ್ನ ಅಭ್ಯಾಸವನ್ನು ರೂಪಿಸಿಕೊಳ್ಳಬೇಕು.

ಪ್ರತಿ ವ್ಯಾಯಾಮವಿಧಾನಕ್ಕೂ ತನ್ನದೇ ಆದ ಪ್ರತ್ಯೇಕತೆ ಮತ್ತು ವಿಶೇಷತೆಗಳಿದ್ದರೂ, ನಮ್ಮ ದೇಶದ ಯೋಗವಿಧಾನದ ಸೂರ್ಯನಮಸ್ಕಾರವನ್ನು ಉದಾಹರಣೆಯಾಗಿ ಗಮನಿಸೋಣ. ಯೋಗದ ಆಯಾಮವು ಬಹು ವಿಸ್ತಾರವಾಗಿದ್ದು ಈ ಲೇಖನದ ವ್ಯಾಪ್ತಿಯನ್ನು ಮೀರಿದೆ. ಸೂರ್ಯನಮಸ್ಕಾರವು ಸರ್ವಾಂಗೀಣ ಸಾಧನವಾಗಿದ್ದು, ಹತ್ತು ಹಂತಗಳನ್ನು ಒಳಗೊಂಡಿದೆ.

ಸೂರ್ಯನಮಸ್ಕಾರದ ಅಭ್ಯಾಸದ ತೀವ್ರತೆಯು ನಿರ್ಧರಿಸುವಲ್ಲಿ ಆವರ್ತನಗಳ ಸಂಖ್ಯ, ಮಾಡುವ ವೇಗ, ಅವಧಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ದೇಹಧರ್ಮ, ವಯೋಧರ್ಮ, ಮನೋಧರ್ಮಗಳಿಗನುಗುಣವಾಗಿ ಇವುಗಳನ್ನು ಹೊಂದಿಸಿಕೊಳ್ಳಬೇಕು.

ಮೊದಲಿಗೆ ಒಂದೊಂದು ಆಸನವನ್ನೂ ಪ್ರತ್ಯೇಕವಾಗಿ ಅಭ್ಯಾಸ ಮಾಡಿ. ಬಾಗುವಿಕೆಯ ಪ್ರಮಾಣವನ್ನು ನಿಮ್ಮ ದೇಹ ಮತ್ತು ವಯೋ ಧರ್ಮಗಳು ನಿರ್ಧರಿಸಲಿ. ಸುಮಾರು ಒಂದೆರಡು ವಾರಗಳ ಕಾಲ ಅಭ್ಯಾಸ ಹೀಗೇ ಮುಂದುವರಿಯಲಿ. ನಂತರ ಆವರ್ತಗಳ ಪ್ರಾರಂಭ ಮಾಡಿ. ಆವರ್ತಗಳ ಸಂಖ್ಯೆ 6 ಅಥವಾ 12ಕ್ಕೆ ಸೀಮಿತವಾಗಿರಲಿ. ಆವರ್ತಗಳ ನಡುವೆ ಅಲ್ಪ ವಿಶ್ರಾಂತಿಯನ್ನು ಪಡೆಯಿರಿ. ಆವರ್ತದ ಅವಧಿ ನಿಮಿಷಕ್ಕೆ ಒಂದಂತಿರಲಿ. ಇದೂ ಒಂದೆರಡು ವಾರ ಹೀಗೇ ಇರಲಿ. ನಂತರ ಆವರ್ತಗಳ ಸಂಖ್ಯೆಯನ್ನು ನಿಮ್ಮ ಸುಖಾನುಭವವನ್ನು ಅವಲಂಬಿಸಿ ನಿರ್ಧರಿಸಿಕೊಳ್ಳಿ.

ದೇಹ, ವಯೋ ಹಾಗೂ ಮನೋಧರ್ಮಗಳು ಸಮರ್ಪಕವಾಗಿರುವ ಪರಿಣತರು 108 ಸೂರ್ಯನಮಸ್ಕಾರಗಳನ್ನು 35 ನಿಮಿಷದಲ್ಲಿ ಮಾಡುವುದೂ ಉಂಟು; ಮಧ್ಯದಲ್ಲಿ ವಿರಮಿಸದೇ 12 ಆವರ್ತಗಳನ್ನು 60 ನಿಮಿಷಗಳಲ್ಲಿ ಮಾಡುವುದೂ ಉಂಟು. ಆದರೆ, ನೆನಪಿರಲಿ, ಆತುರದಿಂದ ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಬೇಡ.

(ಲೇಖಕ ಯೋಗಗುರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT