ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸಾಜ್‌ಗೆ ಹೋಗುತ್ತಿದ್ದೀರಾ? ತಜ್ಞರ ಸಲಹೆ ಇರಲಿ

Last Updated 23 ಡಿಸೆಂಬರ್ 2020, 1:54 IST
ಅಕ್ಷರ ಗಾತ್ರ

ಚ ಳಿ ಶುರುವಾಗಿ ಕೆಲವು ವಾರಗಳೇ ಕಳೆದವು. ಈ ಚಳಿಗೆ ಮೈ, ಮನಸ್ಸು ಜಡ್ಡುಗಡ್ಡಿದಂಥ ಭಾವ, ಆಲಸ್ಯ ಸಹಜ. ಜೊತೆಗೆ ದೇಹದಲ್ಲಿ ಹಳೆಯ ಸಣ್ಣಪುಟ್ಟ ನೋವು ಕೆಣಕುವುದುಂಟು. ಹೀಗಾಗಿ ದೇಹಕ್ಕೊಂದಿಷ್ಟು ಚೈತನ್ಯ ನೀಡಲು ಮಸಾಜ್‌ ನೆರವಿಗೆ ಬರುತ್ತದೆ.

ಕೋವಿಡ್‌–19 ಸಂಖ್ಯೆ ಕಡಿಮೆ ಆಗುತ್ತಿದ್ದಂತೆಯೇ ಮಸಾಜ್‌ ಕೇಂದ್ರಗಳು ಬಣ್ಣ ಬಣ್ಣದ ಜಾಹೀರಾತುಗಳಿಂದ ಗ್ರಾಹಕರನ್ನು ಆಕರ್ಷಿಸಲು ಶುರು ಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ಪಾಪ್‌ಅಪ್‌ಗಳು ಕಾಣಿಸಿಕೊಳ್ಳುವುದು ಮಾಮೂಲು. ಕೆಲವರಂತೂ ಮನೆಗೇ ಬಂದು ಮಸಾಜ್‌ ಮಾಡುತ್ತೇವೆ ಎನ್ನುವವರಿದ್ದಾರೆ. ಅದೇನೇ ಇದ್ದರೂ ಮಸಾಜ್‌ ಮಾಡಿಸಿಕೊಳ್ಳುವ ಮುನ್ನ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನೀವು ಏಕೆ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದೀರಿ?

ದೇಹಕ್ಕೊಂದಿಷ್ಟು ಹಿತವೆನಿಸುವ ಸಲುವಾಗಿಯೋ ಅಥವಾ ನೋವುಗಳಿರುವ ಕಾರಣಕ್ಕೋ ಅಥವಾ ಚರ್ಮದ ಕಾಂತಿ ಹೆಚ್ಚುವ ಸಲುವಾಗಿಯೋ ಅಥವಾ ಪುನಶ್ಚೇತನಗೊಳಿಸಲೋ!

ಮೊದಲ ಮೂರು ಕಾರಣಗಳಿಗಾಗಿಯೇ ಎನ್ನುವುದಾದರೆ ಆಯುರ್ವೇದ ವೈದ್ಯರ ಸಲಹೆ ಪಡೆದೇ ಅವರ ಶಿಫಾರಸ್ಸಿನೊದಿಗೆ ಮಸಾಜ್‌ ಕೇಂದ್ರಗಳಿಗೆ ಹೋಗುವುದು ಸೂಕ್ತ.

ತಜ್ಞರ ಶಿಫಾರಸ್ಸಿನ ಮೂಲಕ ಮಸಾಜ್‌ಗೆ ಹೋದಲ್ಲಿ ನಿಮ್ಮ ದೇಹ ಪ್ರಕೃತಿ, ಅದರ ಅಗತ್ಯಗಳು, ನಿಮಗೆ ಬೇಕಾದ ತೈಲ, ಮಿಶ್ರಣಗೊಳಿಸಬೇಕಾದ ಔಷಧೀಯ ವಸ್ತುಗಳು, ತೈಲ ಪ್ರಮಾಣ, ದೇಹದ ಮೇಲೆ ಒತ್ತಡ ಹಾಕಬೇಕಾದ ಪ್ರಮಾಣ ಇತ್ಯಾದಿಯನ್ನು ನಿಖರವಾಗಿ ಹೇಳಬಲ್ಲರು. ಮಸಾಜ್‌ ಪೂರ್ವ ಸಿದ್ಧತೆ, ಮಸಾಜ್‌ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹೇಳಬಲ್ಲವರು ಆಯುರ್ವೇದ ವೈದ್ಯರು ಹಾಗೂ ಮಸಾಜ್‌ನಲ್ಲಿ ತರಬೇತಿ ಪಡೆದವರು.

ಉದಾಹರಣೆಗೆ ಬೆನ್ನುನೋವು ಇದೆ ಎಂದಿಟ್ಟುಕೊಳ್ಳಿ. ಸುಖಾಸುಮ್ಮನೆ ಮಸಾಜ್‌ ಹೆಸರಿನಲ್ಲಿ ದೇಹ ತಟ್ಟಿಸಿಕೊಂಡರೆ ಇನ್ನಷ್ಟು ಅಧ್ವಾನವೇ ಆದೀತು. ಕಟಿ ಬಸ್ತಿಯಂಥ ಚಿಕಿತ್ಸೆಯನ್ನು ವೈದ್ಯರು ಸೂಚಿಸುತ್ತಾರೆ. ಮೂಲ ಚಿಕಿತ್ಸೆಯ ಬಳಿಕ ದಿನಬಿಟ್ಟು ದಿನ ಹಂತಹಂತವಾಗಿ ಮಸಾಜ್‌ ಮಾಡಲಾಗುತ್ತದೆ. ಇದು ಸೊಂಟ ನೋವಿಗೂ ಪರಿಹಾರ, ದೇಹಕ್ಕೂ ಹಿತ.

ಯಾವುದೇ ಮಸಾಜ್‌ನ ಪರಿಣಾಮಕಾರಿ ಆಗಬೇಕಾದರೆ ಕನಿಷ್ಠ ಒಂದು ವಾರ ಮಾಡಿಸಿಕೊಳ್ಳಬೇಕು. ಪ್ರತಿದಿನ ಅಥವಾ ಎರಡು ದಿನಗಳಿಗೊಮ್ಮೆ. ಇದನ್ನು ‘ಆಕರ್ಷಕ’ ಮಸಾಜ್‌ ಕೇಂದ್ರಗಳಲ್ಲಿ ಮಾಡಿಸಿಕೊಂಡರೆ ನಿಮ್ಮ ಜೇಬು ಖಾಲಿಯಾಗುವುದು ಖಾತ್ರಿ. ಅಂಗೀಕೃತ ಆಯುರ್ವೇದ ಕೇಂದ್ರಗಳು, ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ವಾರದ ಪ್ಯಾಕೇಜ್‌ ಕೈಗೆಟಕುವ ದರದಲ್ಲಿ ಸಿಗುತ್ತದೆ. ಅದೂ ತಜ್ಞರ ಮಾರ್ಗದರ್ಶನದೊಂದಿಗೆ. ನಿಮ್ಮ ಸಮಸ್ಯೆಯನ್ನು ನೋಡಿಕೊಂಡು ಶಿರೋಧಾರಾ, ಹಬೆ/ಧೂಮ ಚಿಕಿತ್ಸೆಯನ್ನೂ ಸಲಹೆ ಮಾಡಬಹುದು. ಆಹಾರ ಕ್ರಮವನ್ನೂ ವೈದ್ಯರು ಸೂಚಿಸುತ್ತಾರೆ. ಸಮಸ್ಯೆ ಇದ್ದು ಮಸಾಜ್‌ಗೆ ಹೋಗುತ್ತೀರಾದರೆ ಕೆಲವು ಆರೋಗ್ಯ ವಿಮೆಗಳಲ್ಲಿ ಇಂಥ ಚಿಕಿತ್ಸೆಗೂ ಅವಕಾಶ ಇದೆ. ವೈದ್ಯರು ಮತ್ತು ವಿಮಾ ಕಂಪನಿಗಳೊಂದಿಗೆ ಚರ್ಚಿಸಿ ಹೋಗಬಹುದು.

ಮಸಾಜ್‌ ದೇಹದ ಹೊರಗಷ್ಟೇ ಅಲ್ಲ. ದೇಹದೊಳಗೂ ಪರಿಣಾಮ ಉಂಟುಮಾಡುತ್ತದೆ. ನಿದ್ರಾಹೀನತೆ, ಅಜೀರ್ಣ, ದೇಹದ ನಂಜು ಹೊರಹಾಕಲು ಮಸಾಜ್‌ ಅತ್ಯುತ್ತಮ ಮಾರ್ಗ.

ಮಸಾಜ್‌ ಕೇಂದ್ರದಲ್ಲಿ...

ಮಸಾಜ್‌ ಕೇಂದ್ರದ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ. ಸದ್ಯದ ಕಾಲಘಟ್ಟದಲ್ಲಿ ಸ್ವಚ್ಛತೆಗೆ ಅತಿಹೆಚ್ಚು ಆದ್ಯತೆ ಕೊಡಬೇಕು. ಅದು ಮಾರ್ಗಸೂಚಿ ಪ್ರಕಾರ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಮಸಾಜ್‌ ಮಾಡುವವರ (ಥೆರಪಿಸ್ಟ್‌) ಶೈಕ್ಷಣಿಕ ಹಿನ್ನೆಲೆ ತಿಳಿದುಕೊಳ್ಳುವುದು ಒಳ್ಳೆಯದು. ಆಯುರ್ವೇದ ಆಸ್ಪತ್ರೆಗಳಲ್ಲಾದರೆ ಥೆರಪಿಸ್ಟ್‌ ಕೋರ್ಸ್‌ ಅಧ್ಯಯನ ಮಾಡಿದವರೇ ಇರುತ್ತಾರೆ ಅಥವಾ ಆಸ್ಪತ್ರೆಯವರೇ ತರಬೇತಿ ಕೊಟ್ಟಿರುತ್ತಾರೆ. ಪಂಚಕರ್ಮ ಚಿಕಿತ್ಸೆಯ ತಜ್ಞ ವೈದ್ಯರು ಹಾಗೂ ಫಿಸಿಯೋಥೆರಪಿಸ್ಟ್‌ ಮೇಲ್ವಿಚಾರಣೆಯಲ್ಲೇ ಇಲ್ಲಿ ಮಸಾಜ್‌ ನಡೆಯುತ್ತದೆ. ನಿಮ್ಮ ಅಗತ್ಯ, ನೀವು ಕೊಡುವ ಹಣಕ್ಕೆ ಮೌಲ್ಯ, ದೀರ್ಘಕಾಲದ ಸಕಾರಾತ್ಮಕ ಪರಿಣಾಮ ಇಂಥ ಕಡೆ ಸಿಗುತ್ತದೆ.

ಮಸಾಜ್‌ ಮುನ್ನ ಹೊಟ್ಟೆ ಖಾಲಿ ಇರಬೇಕು. ಸಾಮಾನ್ಯ ನೀರಿನಲ್ಲಿ ಸ್ನಾನ ಮಾಡಿಹೋಗಿ. ನಿಮಗೆ ಯಾವುದಾದರೂ ಅಲರ್ಜಿ ಇದ್ದರೆ ಮೊದಲೇ ತಿಳಿಸಿ. ಮಸಾಜ್‌ಗೆ ಹೋಗುವಾಗ ಸರಳ, ಸಡಿಲ (ಹಳೆಯ ಉಡುಪಾದರೂ ಪರವಾಗಿಲ್ಲ) ಬಟ್ಟೆಗಳನ್ನೇ ಧರಿಸಿ. ಎಣ್ಣೆಯ ಕಲೆಗಳು ಇಲ್ಲಿ ಬಟ್ಟೆಗೆ ಅಂಟಿಕೊಳ್ಳುತ್ತವೆ.

ಏನೂ ಸಮಸ್ಯೆ ಇಲ್ಲದೇ ದೇಹದ ಪುನಶ್ಚೇತನ (ರೆಜುವೆನೇಟ್‌)ಕ್ಕೆ ಕೂಡ ಮಸಾಜ್‌ ಮಾಡಿಸಿಕೊಳ್ಳಬಹುದು. ವರ್ಷಕ್ಕೊಮ್ಮೆ ಈ ತರಹದ ಮಸಾಜ್‌ ಅಂಗಾಂಗಗಳಿಗೆ ಪುಶ್ಚೇತನ ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT