ಸೋಮವಾರ, ಜುಲೈ 4, 2022
25 °C

ಕ್ಷೇಮ ಕುಶಲ | ಒಳ್ಳೆಯ ಜೀವನವೇ ಆರೋಗ್ಯ

ಡಾ. ಶ್ರೀನಿವಾಸ ಹರಪನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಇಂದಿನ ಧಾವಂತದ ಜೀವನಶೈಲಿಯಲ್ಲಿ ಎಲ್ಲರಿಗೂ ಆರೋಗ್ಯದ ಬಗ್ಗೆ ಚಿಂತೆಯಿರುವುದು ಸಹಜ. ‘ಅಯ್ಯೋ! ನನ್ನ ಬಿಪಿ ಕಂಟ್ರೋಲಿಗೆ ಬರ್ತಾ ಇಲ್ಲ, ಸಕ್ಕರೆ ಪ್ರಮಾಣ ಇಳೀತಾ ಇಲ್ಲ, ತೂಕ ಹೆಚ್ತಾ ಇದೆ’ ಎಂದು ಕೊರಗುವವರೇ ತುಂಬ ಜನರು ಇದ್ದಾರೆ. ಹುಟ್ಟಿನಿಂದ ಹಿಡಿದು ಸಾಯುವವರೆಗೆ ನಾವೆಲ್ಲರೂ ಹಲವಾರು ಬಾರಿಯಾದರೂ ವಿಚಾರ ಮಾಡುವ ಸಂಗತಿಯೆಂದರೆ ಆರೋಗ್ಯ. ಇದರ ಬಗ್ಗೆ ಮಾತನಾಡದ, ಯೋಚಿಸದ ಮನುಜರಿಲ್ಲ. ನಿಜಕ್ಕೂ ಆರೋಗ್ಯ ಎಂದರೇನು? ಅದೊಂದು ಅನುಭವವೇ, ಜೀವನಶೈಲಿಯೇ ಅಥವಾ ದುಡ್ಡು ತೆತ್ತು ತರಬಹುದಾದ ಸರಕೇ? 

ರೋಗಿವಿಲ್ಲದಿರುವಿಕೆಯೇ ಆರೋಗ್ಯ ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ ಅದು ಮಾತ್ರ ಆರೋಗ್ಯ ಆಗಿರಲು ಸಾಧ್ಯವಿಲ್ಲ. ಅದಕ್ಕೆಂದೇ ‘ವಿಶ್ವ ಆರೋಗ್ಯ ಸಂಸ್ಥೆ’ (WHO) 1948ರಲ್ಲಿ ಆರೋಗ್ಯದ ವ್ಯಾಖ್ಯೆಯನ್ನು ಪರಿಚಯಿಸಿತು. ಅದೇನೆಂದರೆ ‘ಆರೋಗ್ಯವು ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿಯಾಗಿದೆ ಮತ್ತು ಕೇವಲ ರೋಗ ಅಥವಾ ದುರ್ಬಲತೆಯ ಅನುಪಸ್ಥಿತಿಯಲ್ಲ’. ಕೆಲವು ವರ್ಷಗಳ ನಂತರ ಇದಕ್ಕೆ ‘ಆಧ್ಯಾತ್ಮಿಕ ಯೋಗಕ್ಷೇಮ’ವೂ ಸೇರಿತು. ಇದರ ಜೊತೆಗೆ 2000ದ ಹೊತ್ತಿಗೆ ಎಲ್ಲರೂ ಈ ಯೋಗಕ್ಷೇಮದ ಸ್ಥಿತಿಯನ್ನು ತಲುಪಬೇಕು ಎಂಬ ಆಶಯವನ್ನೂ WHO ವ್ಯಕ್ತಪಡಿಸಿತ್ತು.

ಈಗ ಆರೋಗ್ಯದ ಪರಿಕಲ್ಪನೆಯೂ ಬದಲಾಗಿದೆ. ಅದರ ಪ್ರಕಾರ ಆರೋಗ್ಯವೆಂದರೆ ‘ಸಾಮಾಜಿಕ, ದೈಹಿಕ ಮತ್ತು ಭಾವನಾತ್ಮಕ ಸವಾಲುಗಳು ನಮ್ಮಲ್ಲಿ ಇದ್ದಾಗ್ಯೂ, ಹೊಂದಿಕೊಳ್ಳುವ ಮತ್ತು ಸ್ವತಃ ನಿಭಾಯಿಸುವ ಸಾಮರ್ಥ್ಯವೇ ಆರೋಗ್ಯ’. ಎಂದರೆ ನಮ್ಮಲ್ಲಿ ಕೆಲವು ಊನಗಳಿದ್ದಾಗ್ಯೂ ಎಲ್ಲ ಕೆಲಸ-ಕಾರ್ಯಗಳನ್ನು, ಸಾಮಾಜಿಕ ಜವಾಬ್ದಾರಿಗಳನ್ನು ನಾವು ಸಸೂತ್ರವಾಗಿ ನಿರ್ವಹಿಸುತ್ತಿದ್ದೇವೆ ಎಂದರೆ ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ಇದು ತಮ್ಮ ತಮ್ಮ ಕಾಯಿಲೆಗಳನ್ನು (ಬಿಪಿ, ಸಕ್ಕರೆಕಾಯಿಲೆ ಇತ್ಯಾದಿ) ನಿಯಂತ್ರಣದಲ್ಲಿಟ್ಟುಕೊಂಡು ಧೈರ್ಯದಿಂದ ಜೀವನವನ್ನು ಸಾಗಿಸುತ್ತಿರುವ ಅನೇಕರನ್ನು ಆರೋಗ್ಯವಂತರ ವ್ಯಾಪ್ತಿಗೆ ಒಳಪಡಿಸುತ್ತದೆ.

ಇದಲ್ಲದೆ ಆರೋಗ್ಯವು ಇನ್ನೂ ಅನೇಕ ಅಂಶಗಳಿಂದ ಪ್ರಭಾವಿತವಾಗುತ್ತದೆ ಎಂದು ಕೂಡ ಪ್ರತಿಪಾದಿಸಲಾಗಿದೆ. ಉದಾಹರಣೆಗೆ, ಪರಿಸರತಜ್ಞರು ಆರೋಗ್ಯವನ್ನು ಮಾನವ ಮತ್ತು ಅವನ ಸುತ್ತಲಿನ ಪರಿಸರದ ನಡುವಿನ ಸಮತೋಲನವೆಂದೂ ಮತ್ತು ಅನಾರೋಗ್ಯವನ್ನು ಅಸಮತೋಲನವೆಂದೂ ಪರಿಗಣಿಸಿದ್ದಾರೆ. ಸಾಮಾಜಿಕ ವಿಜ್ಞಾನತಜ್ಞರು ಆರೋಗ್ಯವು ಕೇವಲ ವೈದ್ಯಕೀಯ ಅಂಶಗಳ ಸಮೀಕರಣವಲ್ಲ, ಅದು ಜನರ ಸಾಮಾಜಿಕ, ಸಾಂಸ್ಕೃತಿಕ, ಮತ್ತು ರಾಜಕೀಯ ಅಂಶಗಳಿಂದ ಕೂಡ ಪ್ರಭಾವಿತವಾಗಿದೆ ಎಂದು ತೋರಿಸಿದ್ದಾರೆ. ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳೂ ಕೂಡ ಆರೋಗ್ಯದ ಬಗ್ಗೆ ಇಂತಹುದೇ ನಿಲುವನ್ನು ಹೊಂದಿದ್ದರು. ಸಮಗ್ರ ಅಥವಾ ಹೋಲಿಸ್ಟಿಕ್ ಪರಿಕಲ್ಪನೆಯು ಆರೋಗ್ಯದ ಮೇಲೆ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಪರಿಸರದ ಪ್ರಭಾವಗಳನ್ನು ಗುರುತಿಸುತ್ತದೆ. ಒಟ್ಟಾರೆಯಾಗಿ ವ್ಯಕ್ತಿಯ ಆರೋಗ್ಯವು ಒಂದು ಬಹು ಆಯಾಮದ ಪ್ರಕ್ರಿಯೆ.

ಡ್ಯಾನಿಷ್ ಸಂಸ್ಕೃತಿಯಲ್ಲಿ ಪ್ರಚಲಿತವಿರುವ ಹ್ಯುಗಾ (Hygge) ಮನೋಭಾವನೆ ನಮ್ಮಲ್ಲಿರುವ ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಅಥವಾ ‘ನೆಮ್ಮದಿ ಚಿಕ್ಕಚಿಕ್ಕ ವಸ್ತುಗಳಲ್ಲೂ ದೊರಕುವುದು’ ಎಂಬ ಅಭಿಪ್ರಾಯವನ್ನೇ ಬಿಂಬಿಸುತ್ತದೆ. ಅದೇ ರೀತಿ ಸ್ವೀಡನ್ ದೇಶದ ಲಾಗೋಮ್ (Lagom) ಮನೋಭಾವನೆ ‘ಎಷ್ಟು ಬೇಕೋ ಅಷ್ಟು ಮಾತ್ರ ನಿಮ್ಮ ಹತ್ತಿರವಿರಲಿ’ ಎನ್ನುತ್ತದೆ. ಈ ವಿಚಾರಧಾರೆಗಳು ಆರೋಗ್ಯದ ವಿಷಯದಲ್ಲೂ ಇತ್ತೀಚಿಗೆ ಹೆಚ್ಚು ಪ್ರಾಮುಖ್ಯವನ್ನು ಪಡೆಯುತ್ತಿವೆ.

ಈ ಎಲ್ಲ ಹೊಸ ವಿಚಾರಧಾರೆಗಳ ತುಲನೆ ಮಾಡಿದಾಗ ಎರಡು ಅಂಶಗಳನ್ನು ನಾವು ಗಮನಿಸಬಹುದು. ಮೊದಲನೆಯದಾಗಿ, ಈ ವಿಚಾರಗಳು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೊದಲಿನಿಂದಲೇ ಹಾಸುಹೊಕ್ಕಾಗಿವೆ. ಕೌಟುಂಬಿಕ ಮೌಲ್ಯಗಳು, ಸಾಮಾಜಿಕ ಗೌರವ ಹಾಗೂ ಶುಚಿತ್ವ ನಮ್ಮ ಬದುಕಿನ ಭಾಗಗಳೇ ಆಗಿವೆ. ಪಾಶ್ಚಾತ್ಯ ವಿಚಾರಧಾರೆಗಳು ಈಗಲಾದರೂ ನಮ್ಮ ಸನಾತನ ವಿಚಾರಧಾರೆಗಳ ಕಡೆಗೆ ಹರಿಯುತ್ತಿರುವುದು ನಮಗೆ ಹೆಮ್ಮೆಯ ವಿಷಯವಲ್ಲವೇ? ಎರಡನೆಯದಾಗಿ, ಇವ್ಯಾವುವೂ ನಮ್ಮ ತೂಕ, ಬಿಪಿ ಅಥವಾ ರಕ್ತದಲ್ಲಿನ ಸಕ್ಕರೆ ಅಂಶ ಇಷ್ಟೇ ಪ್ರಮಾಣದಲ್ಲಿ ಇರಬೇಕು ಎಂದು ಹೇಳಿಲ್ಲ. ಇದರರ್ಥವೇನೆಂದರೆ ಆರೋಗ್ಯವಂತರಾಗಿರಲು ತೂಕ, ಬಿಪಿ ಅಥವಾ ರಕ್ತದಲ್ಲಿನ ಸಕ್ಕರೆಯ ಪ್ರಮಾಣಗಳೇ ನಮ್ಮ ಗುರಿಯಾಗಬಾರದು. ಮೇಲೆ ತಿಳಿಸಿದಂತೆ ಉತ್ತಮ ಜೀವನಶೈಲಿ, ಸಮತೋಲಿತ ಆಹಾರ, ಸುತ್ತಮುತ್ತಲಿನ ಪರಿಸರದ ಜೊತೆ ಒಂದಾಗುವುದು, ಸಾಮಾಜಿಕವಾಗಿ ಸಕ್ರಿಯವಾಗಿರುವುದು ಇತ್ಯಾದಿಗಳೇ ನಮ್ಮ ಪರಮೋಚ್ಛ ಗುರಿಗಳಾಗಬೇಕು. ಆಗ ತೂಕ, ಬಿಪಿ ಅಥವಾ ರಕ್ತದಲ್ಲಿನ ಸಕ್ಕರೆ ಅಂಶಗಳೂ ತಹಬಂದಿಯಲ್ಲೇ ಇರುತ್ತವೆ.

ಆದರೆ ಇಂದಿನ ಡಿಜಿಟಲ್‌ ಯುಗದಲ್ಲಿ ಇವೆಲ್ಲಾ ಸಾಧ್ಯವೇ ಎಂದು ಯೋಚಿಸಿದಾಗ ದೂರದಲ್ಲೆಲ್ಲೋ ಬೆಳ್ಳಿರೇಖೆಯೊಂದು ಕಂಡಂತೆ ಭಾಸವಾಗುತ್ತದೆ. ಏಕೆಂದರೆ ಇಂದಿನ ಆಧುನಿಕ ಪದ್ಧತಿಯ ವೈದ್ಯಕೀಯಶಾಸ್ತ್ರ ಕೂಡ ಒಂದು ಹಂತದಲ್ಲಿ ಇದನ್ನೇ ಪ್ರತಿಪಾದಿಸುತ್ತದೆ. ಕೇವಲ ದೇಹಕ್ಕೆ ಚಿಕಿತ್ಸೆ ನೀಡುವುದರ ಬದಲು ರೋಗ ಬರದಂತೆ ತಡೆಯಲು ಏನು ಮಾಡಬಹುದು (Primordial prevention) ಎಂಬುದರ ಬಗ್ಗೆ ಈಗ ಹೆಚ್ಚು ಒತ್ತು ನೀಡಲಾಗುತ್ತಿದೆ. ನಮ್ಮ ಆರೋಗ್ಯದ ರಕ್ಷಣೆಗೆ ವೈದ್ಯರ ಆವಶ್ಯಕತೆ ಖಂಡಿತ ಇದೆ. ಆದರೆ ಅದಕ್ಕಿಂತ ಹೆಚ್ಚು ಅವಶ್ಯವಿರುವುದು ನಮ್ಮ ದೇಹವನ್ನು ಸರಿಯಾಗಿ ತಿಳಿದುಕೊಳ್ಳುವ ಮತ್ತು ಆರೈಕೆಮಾಡುವ ಸುದೃಢ ಮನೋಭಾವವನ್ನು ಬೆಳೆಸಿಕೊಳ್ಳುವುದು. ‘A sound mind in a sound body’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು ಇದೇ ತಾನೇ!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು