ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಜಿ: ಮಕ್ಕಳ ಆಹಾರ ಹೀಗಿರಲಿ

Published 29 ಮೇ 2023, 23:32 IST
Last Updated 29 ಮೇ 2023, 23:32 IST
ಅಕ್ಷರ ಗಾತ್ರ

ಶಾಲೆಗಳು ಮತ್ತೆ ತೆರೆದಿವೆ. ತಾಯಂದಿರ ಚಿಂತೆಯೇನೆಂದರೆ ಇಂದು ಮಕ್ಕಳ ಡಬ್ಬಿಗೆ ಏನನ್ನು ಹಾಕಲಿ? ಬೆಳಗ್ಗೆ ಹೊರಡುವ ಮುನ್ನ ಏನನ್ನು ತಿನ್ನಿಸಲಿ? ಮನೆಗೆ ಬಂದ ನಂತರ ತಿನ್ನಲೇನು ಕೊಡಲಿ? ಊಟಕ್ಕೇನು? ಕುಡಿಯಲೇನು? ಯಾವ ಹಣ್ಣು-ತರಕಾರಿಯನ್ನು ಹೇಗೆ ತಿನ್ನಿಸಲಿ? ಮಲಗುವ ಮುನ್ನ ಹಾಲು, ಹಣ್ಣು ಕೊಡುವುದೋ ಬೇಡವೋ? ಹಾಲು ಮತ್ತಷ್ಟು ಪೌಷ್ಟಿಕವಾಗಲೇನು ಮಾಡಲಿ?

ಮಕ್ಕಳ ಆಹಾರದ ವಿಚಾರದಲ್ಲಿಯೂ ದೊಡ್ಡವರಿಗೆ ಅನ್ವಯಿಸುವ ನಿಯಮಗಳೇ ಇವೆ. ಅಂದರೆ, ಹಸಿವಿರುವಷ್ಟು ತಿನ್ನುವುದು, ಬಾಯಾರಿಕೆ ನೀಗುವಷ್ಟು ಕುಡಿಯುವುದು. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿಯ ಆಹಾರ-ಪಾನಗಳನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಏನನ್ನೇ ತಿನ್ನಲು, ಕುಡಿಯಲು ನೀಡುವುದು ಮಕ್ಕಳ ಜೀರ್ಣಶಕ್ತಿಗೆ ಹೊರೆಯಾಗಬಹುದು. ಜ್ವರ, ನೆಗಡಿ, ಶ್ವಾಸಕೋಶದ ತೊಂದರೆಗಳು, ಗಂಟಲುನೋವು, ವಾಂತಿ-ಭೇದಿ, ಹೊಟ್ಟೆನೋವು ಮೊದಲಾದ ಸಮಸ್ಯೆಗಳು ಮಗುವಿಗೆ ಆಗಾಗ ಕಾಡುತ್ತಿದೆಯೆಂದರೆ ಆಹಾರ-ಪಾನಗಳು ಹೆಚ್ಚು ಸಲ ಸೇವಿಸಲು ನೀಡುತ್ತಿರುವುದು ಒಂದು ಕಾರಣ. ಅಥವಾ ಮಕ್ಕಳ ದೇಹದಲ್ಲಿ ಜೀರ್ಣಕ್ರಿಯೆಗೆ ತೊಂದರೆಯಾಗುವಂತಹ ಆಹಾರ-ಪಾನಗಳನ್ನು ನೀಡಲಾಗುತ್ತಿದೆ ಎಂದೇ ಅರ್ಥ. ಹೆಚ್ಚು ಹೆಚ್ಚು ಪೋಷಣೆಯು ಮಕ್ಕಳಿಗೆ ಸಿಗಲಿ ಎಂಬ ಉದ್ದೇಶದಿಂದ ಪದೇ ಪದೇ ತಿನ್ನಿಸುವುದು, ಕುಡಿಸುವುದು ಅನಾರೋಗ್ಯಕ್ಕೆ ನಾಂದಿ. ಎಷ್ಟು ಸಲ, ಎಷ್ಟು ಪ್ರಮಾಣದಲ್ಲಿ ತಿನ್ನಲಾಗಿದೆ, ಕುಡಿಯಲಾಗಿದೆ ಎಂಬುದಕ್ಕಿಂತಲೂ ಸೇವಿಸಿದ ಆಹಾರ ಹೇಗೆ ಜೀರ್ಣವಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಮಕ್ಕಳ ತೂಕ-ಎತ್ತರ ಇವುಗಳಷ್ಟೇ ಆರೋಗ್ಯದ ಮಾಪನವಲ್ಲ.

ಮುಂಜಾನೆ ಮಕ್ಕಳು ಕಿರಿಕಿರಿಯಿಲ್ಲದೆ ಏಳಬೇಕೆಂದರೆ ರಾತ್ರಿ ಏಳರಿಂದ ಎಂಟರೊಳಗೆ ಊಟ-ನೀರು ಮುಗಿದಿರಬೇಕು. ರಾತ್ರಿಯ ಆಹಾರದ ನಂತರ ಮತ್ತೆ ಹಾಲು, ಹಣ್ಣು, ನೀರು, ಮಿಲ್ಕ್‍ಶೇಕ್, ಪ್ರೊಟೀನ್‍ಮಿಕ್ಸ್ ಇತ್ಯಾದಿ ಯಾವುದೇ ಘನ-ದ್ರವಾಹಾರವನ್ನು ಕೊಡುವುದು ಯೋಗ್ಯವಲ್ಲ. ರಾತ್ರಿ ಆಹಾರವು ತಡವಾದಷ್ಟೂ ಗಾಢನಿದ್ರೆಗೆ ಪ್ರಯಾಸವಾಗುತ್ತದೆ. ಅಲ್ಲದೆ, ಬೆಳಗ್ಗೆ ತಾವಾಗಿಯೇ ಸುಖವಾಗಿ ಎಚ್ಚರಾಗುವುದೂ ಇಲ್ಲ. ಅಮ್ಮ-ಅಪ್ಪ ಕೂಗಿ, ಬಲವಂತವಾಗಿ ಎಚ್ಚರಿಸುವುದರಿಂದಲೂ ಮಕ್ಕಳ ಇಡೀ ದಿನದ ಉತ್ಸಾಹ, ಜೀರ್ಣಶಕ್ತಿಯು ಹಾಳಾಗುತ್ತದೆ. ಜೀರ್ಣಕ್ಕೆ ಹಗುರವಾಗಿರುವಂತೆ ತಾಜಾ, ಬಿಸಿ, ದಿವಸವೂ ಮನೆಯಲ್ಲಿ ಪರಂಪರಾಗತವಾಗಿ ಅಭ್ಯಾಸವಿರುವ ಆಹಾರವೇ ಆಗಿರಲಿ. ಯಾವುದೇ ಸೀಸನ್ ಆಗಿದ್ದರೂ ರಾತ್ರಿಯ ಆಹಾರದಲ್ಲಿ ಮೊಸರನ್ನು ಸೇವಿಸಲು ಯೋಗ್ಯವಲ್ಲ. ಅಲ್ಲದೇ, ಹಾಲು ಮತ್ತು ಮಜ್ಜಿಗೆ/ಮೊಸರನ್ನು ಒಟ್ಟೊಟ್ಟಿಗೆ ಸೇರಿಸಿ ತಿನ್ನಿಸುವುದೂ ಅನಾರೋಗ್ಯಕರ. ರಾತ್ರಿಯ ಶೀತಲತೆಗೆ ಹಣ್ಣು ಅಗತ್ಯವಿಲ್ಲ. ಹಣ್ಣುಗಳನ್ನು ಹಗಲಿನ ಆಹಾರದಲ್ಲಿಯೇ ಕೊಡುವುದು ಉತ್ತಮ.

ರಾತ್ರಿಯ ಆಹಾರಕ್ಕೂ ಮೊದಲು ಸಂಜೆ ಸ್ನಾಕ್ಸ್/ಚಾಟ್ಸ್ ತಿನ್ನಿಸುವುದು ಮತ್ತೊಂದು ದುರಾಭ್ಯಾಸ. ಸಂಜೆ 4ರಿಂದ 5ರ ಸಮಯದಲ್ಲಿ ಒಂದು ಲೋಟ ಬಿಸಿಹಾಲು ಸಾಕಷ್ಟು ಪೋಷಕ. ಹುರಿದ ಬಾದಾಮಿ, ಹುರಿದ ಕಮಲದ ಬೀಜ, ಹುರಿದ ರಾಗಿ, ಹುರಿದ ಗೋಧಿನುಚ್ಚು, ಏಲಕ್ಕಿ ಇವುಗಳನ್ನು ನುಣ್ಣಗೆ ಪುಡಿಮಾಡಿ ಇಟ್ಟುಕೊಳ್ಳಬಹುದು. ಪುಡಿಯನ್ನು ಹಾಲಿನೊಂದಿಗೆ ಕಾಯಿಸಿ ಮಾಲ್ಟ್‍ನಂತೆ ಕುಡಿಯಲು ಕೊಡಬಹುದು. ಪದೇ ಪದೇ ಜ್ವರ, ನೆಗಡಿ ಮುಂತಾದ ಅನಾರೋಗ್ಯದಿಂದ ಬಳಲುವ ಮಕ್ಕಳಿಗೆ ಕೊತ್ತುಂಬರಿ, ಜೀರಿಗೆ, ಸೋಂಪು, ಶುಂಠಿಗಳ ಪುಡಿಯನ್ನು ಹಾಕಿ ಕಾಯಿಸಿದ ಹಾಲು ಸೂಕ್ತ. ಇದು ಜೀರ್ಣಶಕ್ತಿಯನ್ನು ಕಾಪಾಡುತ್ತದೆ. ಚಾಕಲೇಟ್ ಡ್ರಿಂಕ್, ಮಿಲ್ಕ್‍ಶೇಕ್, ಕಾಯ್ದಿರಿಸಿದ ಜ್ಯೂಸ್, ತಾಜಾ ಹಣ್ಣಿನ ರಸಗಳು ಮತ್ತಷ್ಟು ಜೀರ್ಣಶಕ್ತಿಗೆ ಹಾನಿಕರ. ಹಾಲಿನೊಂದಿಗೆ ಏನನ್ನಾದರೂ ತಿನ್ನಲು ಕೇಳುವ ಮಕ್ಕಳಿಗೆ ಒಣದ್ರಾಕ್ಷಿ, ಒಣಅಂಜೂರ, ಖರ್ಜೂರ, ಮೊದಲಾದ ಒಣಹಣ್ಣುಗಳನ್ನು ತಿನ್ನಲು ಕೊಡಬಹುದು. ಭತ್ತದ ಅರಳಿನ ಉಂಡೆ, ಜೋಳದ ಅರಳಿನ ಉಂಡೆ, ಮಕ್ಕಾನ(ಕಮಲದ ಬೀಜ)ಗಳನ್ನು ಕೊಡಬಹುದು. ಇವು ಅತ್ಯಂತ ಹಗುರವಾಗಿ ಜೀರ್ಣವಾಗುವುದರಿಂದ ಹಾನಿಯಲ್ಲ.

ಶಾಲೆಯಿಂದ ಬಂದ ಕೂಡಲೆ ಮತ್ತೊಮ್ಮೆ ಊಟವನ್ನು ಮಾಡುವ ಮಕ್ಕಳು ಬಹಳಷ್ಟಿದ್ದಾರೆ. ಸ್ಕೂಲ್‍ನಲ್ಲಿ ಊಟದ ಬ್ರೆಕ್ ಇದ್ದರೂ, ಲಂಚ್ ಬಾಕ್ಸ್ ತಿಂದಿದ್ದರೂ ಅಮ್ಮನ ಒತ್ತಾಯಕ್ಕೆ ಮಣಿದು ತಿಂದರೆ ವಾರ, ಎರಡು ವಾರಕ್ಕೊಮ್ಮೆ ಅಜೀರ್ಣದಿಂದ ಆರೋಗ್ಯ ಕೈಕೊಡಬಹುದು. ಆದ್ದರಿಂದ, ಮಧ್ಯಾಹ್ನದ ಊಟದ ಡಬ್ಬಿಗೆ ಮಕ್ಕಳಿಗೆ ಏನೇ ಹಾಕುವುದಿದ್ದರೂ ಊಟದಂತೆ ಸ್ವಲ್ಪ ವೈವಿಧ್ಯದಿಂದ ಕೂಡಿರುವ ಅಕ್ಕಿ/ ಗೋಧಿ/ ರಾಗಿ/ ಜೋಳಗಳ ಆಹಾರವನ್ನು ಮನೆಯ ಅಭ್ಯಾಸದಂತೆ ಹಾಕಬಹುದು. ಊಟದ ಜೊತೆಗೆ ತಾಜಾ ಹಣ್ಣುಗಳ ತುಂಡುಗಳನ್ನು ಹಾಕಿದರೆ ಮತ್ತಷ್ಟು ಹೊಟ್ಟೆ ತುಂಬುತ್ತದೆ. ರವೆಲಾಡು, ಗೋಧಿ ಹಿಟ್ಟಿನ ಉಂಡೆ, ಒಣಹಣ್ಣುಗಳ ಉಂಡೆ, ಎಳ್ಳುಂಡೆ, ರಾಜ್ಗಿರಾಚಿಕ್ಕಿ ಮೊದಲಾದ ಸೈಡ್ಸ್ ಇದ್ದರೆ ಊಟ ಮತ್ತಷ್ಟು ರುಚಿಸುತ್ತದೆ. ಮಧ್ಯಾಹ್ನ ಸಾರು-ಅನ್ನ, ಮಜ್ಜಿಗೆಅನ್ನ, ರೈಸ್‍ಬಾತ್, ರೊಟ್ಟಿ-ಚಪಾತಿ-ಪಲ್ಯಗಳಂತಹ ಆಹಾರಗಳು ಸೂಕ್ತ.
ಸ್ಕೂಲ್‍ನಲ್ಲಿ ಬೆಳಗ್ಗೆ ಶಾರ್ಟ್‍ಬ್ರೆಕ್ ಇದ್ದಾಗ ವಿಭಿನ್ನ ಒಣಹಣ್ಣುಗಳನ್ನು ತಿನ್ನಲು ಇಡಬಹುದು. ಹಸಿತರಕಾರಿ, ಮೊಳಕೆಕಾಳು, ಸಲಾಡ್‍ಗಳನ್ನು ನಿತ್ಯವೂ ತಿನ್ನಲು ಕೊಡುವುದು ಮಕ್ಕಳ ಕರುಳನ್ನು ಒರಟಾಗಿಸುತ್ತದೆ, ಮೂಳೆ ಬೇಗನೆ ಸವೆಯುತ್ತದೆ, ಕಣ್ಣಿನ ದೃಷ್ಟಿಶಕ್ತಿಯು ಹಾಳಾಗುತ್ತದೆ. ಕೂದಲು, ಚರ್ಮಗಳ ನೈಜವರ್ಣವು ಕಳೆಗುಂದುತ್ತದೆ. ಏಕೆಂದರೆ ಇಂತಹ ಕಾಳು, ಹಸಿತರಕಾರಿಗಳು ಜೀವಕೋಶಗಳ ಸವಕಳಿಗೆ ಕಾರಣ (ವಾತಕರ).

ಮುಂಜಾನೆ ತಾವಾಗಿಯೇ ಮಕ್ಕಳು ಎದ್ದ ಮೇಲೆ ಶೌಚಕ್ರಿಯೆ, ಸ್ನಾನವೆಲ್ಲಾ ಆದ ಮೇಲೆ ಮೊದಲ ಆಹಾರ-ಪಾನವಾಗಿ ತಿಂಡಿಯೊಟ್ಟಿಗೆ ಹಾಲು, ಹಾಲಿನ ಪಾನೀಯವನ್ನು ಕೊಡುವುದು ಸೂಕ್ತ. ಹಣ್ಣುಗಳನ್ನು ಜೊತೆಗೆ ತಿನ್ನಿಸಬಹುದು. ಎದ್ದ ಕೂಡಲೆ, ನೀರು-ಹಾಲು ಇತ್ಯಾದಿ ಯಾವುದೇ ದ್ರವಾಹಾರದ ಅಗತ್ಯವಿಲ್ಲ. ಕರುಳು ಸಹಜವಾಗಿಯೇ ಅಧೋವಾತ, ಮೂತ್ರ, ಮಲವಿಸರ್ಜನೆ ಮಾಡುವಂತೆ ಸಾಕಷ್ಟು ಸಮಯವನ್ನು ಕೊಡುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT