ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಹೃದಯದ ಆರೈಕೆ ಹೇಗೆ ಮಾಡಬೇಕು?

ಇತ್ತೀಚೆಗೆ ಮೂವತ್ತರ ಹರೆಯದ, ತಕ್ಕಮಟ್ಟಿಗೆ ಆರೋಗ್ಯಕರ ಜೀವನವನ್ನೇ ನಡೆಸುತ್ತಿದ್ದರೆಂದು ಭಾವಿಸುವವರಿಗೆ ಹೃದಯಾಘಾತವಾಯಿತು ಎಂದು ಸುದ್ಧಿ ಬಂದರೆ ಭೀತಿಯಾಗುತ್ತದೆ.
Published 14 ಆಗಸ್ಟ್ 2023, 23:47 IST
Last Updated 14 ಆಗಸ್ಟ್ 2023, 23:47 IST
ಅಕ್ಷರ ಗಾತ್ರ

–ಡಾ. ಕಿರಣ್‌ ವಿ. ಎಸ್‌

ಯಾರಾದರೂ ಪರಿಚಿತರೋ ಅಥವಾ ಹೆಸರು ಮಾಡಿರುವವರೋ ಮರಣಿಸಿದಾಗ ಮೊದಲು ಸಂಕಟವಾಗುತ್ತದೆ. ಅವರ ಮರಣದ ಕಾರಣ ಹೃದಯಾಘಾತ ಎಂದೇನಾದರೂ ತಿಳಿದರೆ ಆತಂಕವಾಗುತ್ತದೆ. ಅದರಲ್ಲೂ ಇತ್ತೀಚೆಗೆ ಮೂವತ್ತರ ಹರೆಯದ, ತಕ್ಕಮಟ್ಟಿಗೆ ಆರೋಗ್ಯಕರ ಜೀವನವನ್ನೇ ನಡೆಸುತ್ತಿದ್ದರೆಂದು ಭಾವಿಸುವವರಿಗೆ ಹೃದಯಾಘಾತವಾಯಿತು ಎಂದು ಸುದ್ಧಿ ಬಂದರೆ ಭೀತಿಯಾಗುತ್ತದೆ. ಸುದ್ದಿಯ ಪರಿಣಾಮ ಮನಸ್ಸಿನ ಮೇಲೆ ಇರುವಾಗ ಆಸ್ಪತ್ರೆಗಳಿಗೆ, ಪ್ರಯೋಗಾಲಯಗಳಿಗೆ, ತಜ್ಞವೈದ್ಯರ ಬಳಿಗೆ ಹೋಗುವವರು ಎಷ್ಟೋ ಮಂದಿ. ಆದರೆ, ವೈದ್ಯರು ಹೇಳುವ ಜಾಗರೂಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವವರು ವಿರಳ. ಕೆಲದಿನಗಳ ನಂತರ ‘ಎಲ್ಲರಿಗೂ ಏನೇನೋ ಆಗುತ್ತಿದ್ದರೂ ನನಗೇನೂ ಆಗುವುದಿಲ್ಲ’ ಎನ್ನುವ ಮನೋಭಾವ ಬೆಳೆಯುತ್ತದೆ. ಕೆಲಕಾಲದ ನಂತರ ಮತ್ತೊಂದು ಇಂತಹುದೇ ಸುದ್ದಿ, ಮತ್ತಷ್ಟು ಆತಂಕದ ದಿನಗಳು - ಈ ರೀತಿಯ ವರ್ತುಲ ವರ್ತನೆ ಕಾಣುತ್ತಿದ್ದೇವೆ. ಸರಳವಾಗಿ ‘ಹೃದಯದ ಆರೈಕೆ ಹೇಗೆ ಮಾಡಬೇಕು’ ಎನ್ನುವುದರ ಜಿಜ್ಞಾಸೆ ಇಲ್ಲಿದೆ.

ಕಳೆದ ಎರಡು-ಮೂರು ದಶಕಗಳಲ್ಲಿ ಜನಸಾಮಾನ್ಯರ ಜೀವನಶೈಲಿ ಅನೂಹ್ಯ ಬದಲಾವಣೆಗಳನ್ನು ಕಂಡಿದೆ. ನಮ್ಮ ಹಿಂದಿನ ತಲೆಮಾರಿನ ಸಮಸ್ಯೆಗಳು, ಅಗತ್ಯಗಳು ನಮ್ಮ ತಲೆಮಾರಿಗೆ ಅನ್ವಯವಾಗುವುದಿಲ್ಲ. ಅಂತೆಯೇ, ಪ್ರಾಯಶಃ ನಮ್ಮ ಸಮಸ್ಯೆಗಳು ನಮ್ಮ ಮುಂದಿನ ಪೀಳಿಗೆಗೆ ಬದಲಾಗಿರುತ್ತವೆ. ಪ್ರಗತಿಯ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಯುವಜನತೆಯ, ಮಧ್ಯವಯಸ್ಕರ ಬದುಕಿನ ಭಾಗವೇ ಆಗಿಹೋಗಿದೆ. ಮಾನಸಿಕ ಒತ್ತಡವನ್ನು ಸಹಿಸಲು ಅನಾರೋಗ್ಯಕರ ಚಟಗಳಿಗೆ ಮೊರೆ ಹೋಗುವ ಜೀವನಶೈಲಿ, ಆದ್ಯತೆಗಳು ಬದಲಾದಂತೆ ಕಡಿಮೆಯಾಗುತ್ತಿರುವ ಕೌಟುಂಬಿಕ ಭದ್ರತೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಬೀಸುಬೀಡಾದ ಆಹಾರ ಸೇವನೆ, ಸಾಮಾಜಿಕ ಬಾಂಧವ್ಯಗಳ ನಿರ್ವಹಣೆಯ ಹೆಸರಿನಲ್ಲಿ ಮದ್ಯಪಾನ, ಮಾದಕ ವಸ್ತುಗಳ ಚಟ. ಮೊದಲಾದುವು ಹೃದಯ ಮೇಲೆ ಬೀಳುವ ತೀವ್ರ ಒತ್ತಡಕ್ಕೆ ಕೊಡುಗೆಯಾಗಿವೆ. ಇವೆಲ್ಲವೂ ಒಂದು ಹಂತದಲ್ಲಿ ‘ಹಿಂದುರಗಲಾಗದ’ ನಿರ್ಣಾಯಕ ಮಟ್ಟವನ್ನು ತಲುಪುತ್ತದೆ. ಸಾವಿನ ಸುದ್ದಿಯೇನೋ ನಮ್ಮನ್ನು ತಲುಪುತ್ತದೆ; ಆದರೆ, ಅದಕ್ಕೆ ಕಾರಣವಾದ ನೈಜ ಅಂಶಗಳು ಸಾರ್ವಜನಿಕಗೊಳ್ಳುವುದು ತೀರಾ ಅಪರೂಪ. ಹೀಗಾಗಿ, ಇತರರ ಮರಣದ ಸುದ್ಧಿ ನಮ್ಮನ್ನು ಕಂಗೆಡಿಸುತ್ತದಾದರೂ, ಅದನ್ನು ಹೇಗೆ ತಡೆಯಬಹುದಿತ್ತು ಎನ್ನುವ ಮಾರ್ಗಗಳು ಸ್ಪಷ್ಟವಾಗುವುದಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರೂ ತಂತಮ್ಮ ಆರೋಗ್ಯಪರಿಸ್ಥಿತಿಯ ಆತ್ಮಾವಲೋಕನ ಮಾಡಿಕೊಳ್ಳುತ್ತಾ, ಪರಿಹಾರಗಳನ್ನು ಕಂಡುಕೊಳ್ಳುವುದು ಮುಖ್ಯ.

ಜೀವನಶೈಲಿ

ಹೃದಯದ ಆರೋಗ್ಯಕ್ಕೆ ಎರವಾಗುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಡೆಗಟ್ಟಬಹುದಾದ ಅಂಶಗಳೇ ಹೆಚ್ಚಾಗಿ ಇರುವುದು ಆಶಾದಾಯಕ ಸಂಗತಿ. ಅದನ್ನು ಪಾಲಿಸಬಲ್ಲ ಮನಃಸ್ಥಿತಿಯ ಕೊರತೆಯೇ ಸದ್ಯಕ್ಕೆ ಪ್ರಮುಖ ಸಮಸ್ಯೆ. ತಂಬಾಕು, ಮದ್ಯಪಾನ, ಮಾದಕ ವಸ್ತುಗಳಿಂದ ದೂರವಿರುವುದು; ಮಧುಮೇಹ, ಅಧಿಕ ರಕ್ತದೊತ್ತಡಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು; ದೈನಂದಿನ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳ ಪಾಲನೆ; ಆಹಾರ ಸೇವನೆಯಲ್ಲಿ ಶಿಸ್ತು; ದಿನಕ್ಕೆ ಏಳು ಗಂಟೆಗಳಿಗಿಂತ ಕಡಿಮೆಯಿಲ್ಲದಂತೆ ನಿದ್ರೆ; ಹಣ ಮತ್ತು ಆರೋಗ್ಯದ ನಿರ್ವಹಣೆಯನ್ನು ತೂಗಬಲ್ಲ ಉದ್ಯೋಗದ ಆಯ್ಕೆ; ಕೌಟುಂಬಿಕ ಸಂಬಂಧಗಳ ಆರೋಗ್ಯಕರ ಪೋಷಣೆ; ಮನಸ್ಸಿನ ದುಗುಡಗಳನ್ನು ಚರ್ಚಿಸಿ, ದಾರಿ ಕಾಣಿಸಬಲ್ಲ ಸ್ನೇಹಿತರ, ಬಂಧುಗಳ ಆಪ್ತವಲಯದ ನಿರ್ಮಾಣ; ವೈಯಕ್ತಿಕ ಆರೋಗ್ಯದ ನಿರ್ವಹಣೆಗೆ ನಿಯಮಿತ ವೈದ್ಯರೊಬ್ಬರ ಸಲಹೆಗಳು; ಮಾನಸಿಕ ನೆಮ್ಮದಿಗೆ ಬೇಕಾದ ಜೀವನಶೈಲಿ, ಮೊದಲಾದುವು ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರ ಆವಶ್ಯಕತೆಗಳಾಗಬೇಕು. ಮೂವತ್ತರ ಹರೆಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತಗಳು ಎಚ್ಚರಿಕೆಯ ಗಂಟೆಗಳಾಗಿ, ದಿಕ್ಕು ತಪ್ಪುತ್ತಿರುವ ಬದುಕನ್ನು ಸರಿಯಾದ ಹಾದಿಯಲ್ಲಿ ತಿರುಗಿಸಬಲ್ಲ ಮಾರ್ಗದರ್ಶಿಯಾಗಬೇಕು.

ಧೂಮಪಾನ ಮತ್ತು ಮದ್ಯಪಾನಗಳು ಹೃದಯದ ಶತ್ರುಗಳು. ಉಪ್ಪು ಅಥವಾ ಸಕ್ಕರೆಯ ಅಂಶ ಅಧಿಕವಾಗಿರುವ ತಿನಿಸು ಮತ್ತು ಪಾನೀಯಗಳು, ಅಧಿಕ ಜಿಡ್ಡಿನ ಆಹಾರಗಳು ಹೃದಯದ ಅನಾರೋಗ್ಯಕ್ಕೆ ಕಾರಣ. ಹೃದ್ರೋಗವನ್ನು ದೂರವಿಡುವಲ್ಲಿ ಇಂತಹುವುಗಳ ಬಳಕೆಯನ್ನು ಕಡಿಮೆಗೊಳಿಸುವುದು ಸಹಾಯಕ. ನಿಯಮಿತವಾಗಿ ಸೇವಿಸುವ ಆರೋಗ್ಯ ಸಂಬಂಧಿ ಔಷಧಗಳನ್ನು ಅಕಾರಣವಾಗಿ ಎಂದಿಗೂ ತಪ್ಪಿಸಬಾರದು. ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆಗಳನ್ನು ಸಾಧ್ಯವಾದಷ್ಟೂ ನಿಯಂತ್ರಣದಲ್ಲಿ ಇಡಬೇಕು. ಹೃದಯದ ಆರೋಗ್ಯ ಮತ್ತು ಆಹಾರ ಜೊತೆಜೊತೆಯಾಗಿ ಸಾಗುತ್ತವೆ. ಸಾತ್ವಿಕ ಆಹಾರವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಬೇಕು. ತಾಜಾ ಹಣ್ಣು, ತರಕಾರಿ, ಧಾನ್ಯಗಳು, ಪ್ರೊಟೀನ್ ಅಂಶ ಅಧಿಕವಾಗಿರುವ ಆಹಾರ, ಜಿಡ್ಡಿನ ಅಂಶ ಕಡಿಮೆ ಇರುವ ಹೈನುಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

ನಿಯಮಿತ ವ್ಯಾಯಾಮ ಔಷಧಗಳಷ್ಟೇ ಮಹತ್ವದ್ದು. ‘ಕೂರುವುದು ಆಧುನಿಕ ಧೂಮಪಾನ’ ಎನ್ನುವ ಮಾತಿದೆ. ಯಾವುದೇ ಚಟುವಟಿಕೆಯಿಲ್ಲದೆ ವಿನಾ ಕಾರಣ ಕೂರುವುದರಿಂದ ಆರೋಗ್ಯದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳು ಧೂಮಪಾನದಿಂದ ಆಗುವಷ್ಟೇ ತೀವ್ರವಾದ ಮಟ್ಟದವು ಎಂದು ಅಧ್ಯಯನಗಳು ತೋರಿವೆ. ಆರೋಗ್ಯಕರ ಹೃದಯಕ್ಕೆ ವ್ಯಾಯಾಮ ಬಹಳ ಮುಖ್ಯ. ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಉಸಿರಾಟದ ಗತಿಯನ್ನು ಏರಿಸುವ ಶಾರೀರಿಕ ವ್ಯಾಯಾಮ ಮಾಡಬೇಕು. ಇದರಲ್ಲಿ ವಾರಕ್ಕೆ ಎರಡು ದಿನ ಮಾಂಸಖಂಡಗಳ ಬಲವನ್ನು ಹೆಚ್ಚಿಸುವ ವ್ಯಾಯಾಮ ಇರಬೇಕು. ವಾರದಲ್ಲಿ ಇಂತಿಷ್ಟು ದಿನ ಎನ್ನುವುದಕ್ಕಿಂತ ಪ್ರತಿದಿನವೂ ತಪ್ಪದೆ ವ್ಯಾಯಾಮ ಮಾಡುವುದು ಸರಿಯಾದ ವಿಧಾನ. ವಿಪರೀತ ದೇಹತೂಕ ಹೃದಯದ ಮೇಲೆ ತೀವ್ರವಾದ ಒತ್ತಡವನ್ನು ಹೇರುತ್ತದೆ. ಶರೀರದ ತೂಕವನ್ನು ನಿಯಂತ್ರಣದಲ್ಲಿ ಇಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಆಧುನಿಕ ಕಾಲದಲ್ಲಿ ಬೊಜ್ಜನ್ನು ಸಮರ್ಥಿಸುವ ಜನರಿದ್ದಾರೆ. ವೈಯಕ್ತಿಕ ನಿಲುವುಗಳು ಏನೇ ಇದ್ದರೂ, ಅದರ ವ್ಯತಿರಿಕ್ತ ಪರಿಣಾಮಗಳು ಹೃದಯದ ಮೇಲೆ ಆಗುವುದನ್ನು ತಪ್ಪಿಸಲಾಗದು. ಬೊಜ್ಜಿನಿಂದ ಬಳಲುವವರು ತಮ್ಮ ಆರೋಗ್ಯದತ್ತ ಹೆಚ್ಚು ಜತನ ವಹಿಸಬೇಕು. ಆಹಾರತಜ್ಞರ ಸಲಹೆಯ ಮೇರೆಗೆ ಅಗತ್ಯ ಪೋಷಕಾಂಶಗಳುಳ್ಳ ಸಮತೋಲಿತ ಆಹಾರವನ್ನು ಸೇವಿಸುವುದು, ಅಧಿಕ ಕ್ಯಾಲರಿ ಆಹಾರಪದಾರ್ಥಗಳಿಂದ ದೂರವಿರುವುದು ಎಲ್ಲರಿಗೂ ಅನ್ವಯಿಸುತ್ತದೆ.

ಒತ್ತಡ ಬೇಡ

ದೈಹಿಕ ಮತ್ತು ಮಾನಸಿಕ ಒತ್ತಡದ ನಿಗ್ರಹ ಹೃದಯದ ಮೇಲೆ ಉತ್ತಮ ಪರಿಣಾಮ ಬೀರಬಲ್ಲದು. ಕೋಪ, ತುಮುಲಗಳು ಹೃದಯದ ರಕ್ತನಾಳಗಳನ್ನು ಸಂಕೋಚಿಸಿ, ಆಘಾತ ಉಂಟುಮಾಡಬಲ್ಲವು. ಮಾನಸಿಕ ಅಶಾಂತಿ, ಕೆಲಸದ ಒತ್ತಡಗಳ ಕಾರಣದಿಂದ ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಉದ್ವೇಗಗಳಿಗೆ ಸಿಲುಕಿ ಧೂಮಪಾನ, ಮದ್ಯಪಾನಗಳ ಚಟ ಬೆಳೆಸಿಕೊಂಡವರು ಇಬ್ಬಗೆಯಿಂದ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ತೀವ್ರ ಒತ್ತಡದಿಂದ ಬಳಲುವವರು ಮಾನಸಿಕ ಆರೋಗ್ಯ ಸಲಹೆಗಾರರ ಸಹಾಯ ಪಡೆಯಬೇಕು. ನಿಗದಿತ ಪ್ರಾಣಾಯಾಮ, ಧ್ಯಾನಗಳು ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಹೃದಯದ ಆರೋಗ್ಯದ ಮೇಲೆ ನಿದ್ರೆಯ ಪರಿಣಾಮ ಗಾಢವಾದದ್ದು. ಧಾವಂತದ ಜೀವನಶೈಲಿ ನಿದ್ರೆಯ ಬಗ್ಗೆ ತಾತ್ಸಾರ ವಹಿಸುತ್ತದೆ. ಇದರ ಪರಿಣಾಮವಾಗಿ ಸಣ್ಣ ವಯಸ್ಸಿನಲ್ಲೇ ಹೃದ್ರೋಗಗಳಿಗೆ ತುತ್ತಾಗುವವರ ಸಂಖ್ಯೆ ಬೆಳೆಯುತ್ತಿದೆ. ಉತ್ತಮ ಗುಣಮಟ್ಟದ, ಸರಿಯಾದ ಕಾಲಾವಧಿಯ ನಿದ್ರೆ ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳನ್ನು ಗುಣಪಡಿಸುತ್ತದೆ; ಹೃದಯದ ಕೆಲಸಕ್ಕೆ ಅಗತ್ಯವಾದ ಚೋದಕಗಳನ್ನು ಸರಿದೂಗಿಸುತ್ತದೆ; ಶರೀರದ ರಕ್ಷಕ ವ್ಯವಸ್ಥೆಯನ್ನು ಚುರುಕಾಗಿ ಇಟ್ಟು, ಕಾಯಿಲೆಗಳನ್ನು ದೂರವಿಡುತ್ತದೆ.

ಉತ್ತಮ ಆರೋಗ್ಯ ಪದ್ಧತಿಗಳನ್ನು ರೂಢಿಸಿಕೊಳ್ಳುವುದು; ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು; ಕಾಯಿಲೆಯ ಪರಿಣಾಮಗಳನ್ನು ತಹಬಂದಿಗೆ ತರುವುದು; ಮತ್ತು ಕಾಯಿಲೆಯಿಂದ ಈಗಾಗಲೇ ಆಗಿರುವ ಶಾರೀರಿಕ ಸಮಸ್ಯೆಗಳನ್ನು ನಿಧಾನವಾಗಿ ಸಹಜಸ್ಥಿತಿಗೆ ತರುವುದು - ಈ ಹಂತಗಳು ಹೃದಯದ ಕಾಯಿಲೆಗಳ ನಿರ್ವಹಣೆಯಲ್ಲಿ ಪ್ರಮುಖ ಮೈಲಿಗಲ್ಲುಗಳು. ಹೃದಯದ ಆರೈಕೆಯಲ್ಲಿ ಶಿಸ್ತುಬದ್ಧ ಬದುಕಿನ ವಿಧಾನಗಳು ಮತ್ತು ಜೀವನಶೈಲಿಯ ಸುಧಾರಣೆಗಳು ಪ್ರತಿಯೊಬ್ಬರಿಗೂ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT