ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ಲಸಿಕೆ ಅಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ?

Last Updated 16 ಜನವರಿ 2021, 4:38 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ಸೋಂಕಿಗೆ ಕಡಿವಾಣ ಹಾಕಿ, ವಿಶ್ವವನ್ನು ಸಹಜ ಸ್ಥಿತಿಗೆ ತರುವ ಭರವಸೆ ಹುಟ್ಟಿಸುವ ಲಸಿಕೆಗಾಗಿ ಇಡೀ ವಿಶ್ವ ಕಾತರದಿಂದ ಕಾಯುತ್ತಿದ್ದ ಸಂದರ್ಭದಲ್ಲೇ ಹಲವು ಲಸಿಕೆಗಳು ವಿಶ್ವದಲ್ಲಿ ತುರ್ತು ಬಳಕೆ ಅನುಮತಿ ಪಡೆದಿವೆ.ಭಾರತದಲ್ಲಿಆಕ್ಸ್ ಫರ್ಡ್‌ ವಿಶ್ವವಿದ್ಯಾಲಯದ ಕೋವಿಶೀಲ್ಡ್‌ ಮತ್ತು ಭಾರತ್‌ ಬಯೊಟೆಕ್‌ನ ಕೊವ್ಯಾಕ್ಸಿನ್‌ ಬಳಕೆಗೆ ಮಾತ್ರ ಅನುಮತಿ ಸಿಕ್ಕಿದೆ.

ವಿಶ್ವದಲ್ಲಿ ಸುಮಾರು 165 ಸಂಸ್ಥೆಗಳು ಲಸಿಕೆಯ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಆದರೆ, ಕೋವಿಶೀಲ್ಡ್‌, ಫೈಜರ್‌, ಸ್ಪೂಟ್ನಿಕ್‌ ಸೇರಿದಂತೆಕೆಲವು ಮಾತ್ರವೇ ಬಳಕೆಗೆ ಅನುಮತಿ ಪಡೆದಿವೆ.

ಸುರಕ್ಷಿತ ಲಸಿಕೆಯೊಂದು ಸಿದ್ಧವಾಗಲು ಹಲವು ವರ್ಷಗಳ ಸಂಶೋಧನೆ ಅತ್ಯಗತ್ಯ. ಆದರೆ ಈ ಬಾರಿ ಮಾತ್ರ ವಿಜ್ಞಾನಿಗಳು ಒಂದು ವರ್ಷದೊಳಗೆ ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಅದಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.

ಅಷ್ಟಕ್ಕೂ ಈ ಲಸಿಕೆ ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ವೈರಸ್‌ ಅಥವಾ ಬ್ಯಾಕ್ಟೀರಿಯಾಗಳಿಂದ ಉಂಟಾಗಬಹುದಾದ ಅಪಾಯಕಾರಿ ಅಥವಾ ಮಾರಕ ರೋಗಗಳನ್ನು ಲಸಿಕೆಗಳು ತಡೆಯುತ್ತವೆ. ಯಾವುದೇ ಸೋಂಕಿನ ಅಪಾಯಗಳನ್ನು ತಡೆಯುವ ಸಲುವಾಗಿ ಲಸಿಕೆಗಳು ದೇಹದ ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆ ಜೊತೆಗೆ ಕೆಲಸ ಮಾಡುತ್ತವೆ. ಅಲ್ಲದೆ, ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಸುರಕ್ಷಿತವಾಗಿ ಅಭಿವೃದ್ಧಿಪಡಿಸುತ್ತವೆ.

ಹೇಗೆ ಕೆಲಸ ಮಾಡುತ್ತದೆ ಲಸಿಕೆ?

ಸೋಂಕಿಗೆ ಕಾರಣವಾಗುವ ವೈರಸ್‌ ಅಥವಾ ಬ್ಯಾಕ್ಟೀರಿಯಾಗಳ ತದ್ರೂಪನ್ನು ಲಸಿಕೆಯಲ್ಲಿ ಬಳಸಲಾಗುತ್ತದೆ. ವ್ಯಕ್ತಿಯ ದೇಹ ಪ್ರವೇಶಿಸುವ ಈ ತದ್ರೂಪಿ ಸೂಕ್ಷ್ಮಾಣುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡುತ್ತವೆ. ವೈರಸ್‌/ಬ್ಯಾಕ್ಟೀರಿ ತದ್ರೂಪನ್ನು ಲಸಿಕೆಯ ಮೂಲಕ ದೇಹಕ್ಕೆ ನೀಡಲಾಗುತ್ತದೆಯಾದರೂ, ಅದು ಅನಾರೋಗ್ಯಕ್ಕೆ ಕಾರಣವಾಗುವುದಿಲ್ಲ, ಆದರೆ, ಸೋಂಕಿನ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೃಷ್ಟಿ ಮಾಡುತ್ತದೆ. ಟಿ-ಲಿಂಪೊಸೈಟ್ಸ್ (ಟಿ-ಲಿಂಫೋಸೈಟ್ಸ್ ಎಂದರೆ ರಕ್ಷಣಾತ್ಮಕ ಬಿಳಿ ರಕ್ತ ಕಣಗಳ ಒಂದು ವಿಧ. ಈಗಾಗಲೇ ಸೋಂಕಿಗೆ ಒಳಗಾದ ದೇಹದ ಜೀವಕೋಶಗಳ ಮೇಲೆ ಕಣಗಳು ದಾಳಿ ಮಾಡುತ್ತವೆ) ಮತ್ತು ಬಿ–ಲಿಪೋಸೈಟ್‌ (ಬಿ-ಲಿಂಫೋಸೈಟ್ಸ್ ಎಂದರೆ, ರಕ್ಷಣಾತ್ಮಕ ಬಿಳಿ ರಕ್ತ ಕಣಗಳೇ ಆಗಿವೆ. ಪ್ರತಿಜನಕಗಳ ವಿರುದ್ಧ ಹೋರಾಡಲು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ) ಪ್ರತಿಕಾಯಗಳ ಉತ್ಪಾದನೆಗೆ ಕಾರಣವಾಗುತ್ತದೆ.

ಲಸಿಕೆಗಳಲ್ಲಿ ಸೋಂಕಿನ ತದ್ರೂಪು ಇರುತ್ತದೆಯಾದ ಕಾರಣಕ್ಕೆ ಕೆಲವು ಬಾರಿ ಲಸಿಕೆ ಪಡೆದವರಿಗೆ ನಿರ್ದಿಷ್ಟ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರವೂ ಬರುತ್ತದೆ. ಆದರೆ, ಕಾಯಿಲೆಗೆ ದೂಡುವುದಿಲ್ಲ.

ಲಸಿಕೆ ನೀಡಿದಾಗ ಕಂಡು ಬರುವ ಜ್ವರ ಮತ್ತಿತರೆ ಸಹಜ ಲಕ್ಷಣಗಳು ನಿರೀಕ್ಷಿತ ಕೂಡ. ಈ ಲಕ್ಷಣಗಳೆಲ್ಲವೂ ಸೋಂಕಿನ ವಿರುದ್ಧ ದೇಹವು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಟಿ– ಲಿಂಪೋಸೈಟ್‌ಗಳನ್ನ ಸೃಷ್ಟಿಸಿಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯೂ ಹೌದು.

ಸಹಜ ಲಕ್ಷಣಗಳು ಮರೆಯಾದ ನಂತರ ದೇಹದಲ್ಲಿ ನಿರ್ದಿಷ್ಟ ಸೋಂಕಿನ ವಿರುದ್ಧ ಹೋರಾಡಿದ ಟಿ–ಲಿಂಪೋಸೈಟ್‌ಗಳ ಜ್ಞಾಪಕ ಕೋಶಗಳು, ಬಿ–ಲಿಂಪೋಸೈಟ್‌ಗಳು ಉಳಿದುಕೊಳ್ಳುತ್ತವೆ. ಭವಿಷ್ಯದಲ್ಲಿ ನಿರ್ದಿಷ್ಟ ಸೋಂಕು ದೇಹವನ್ನೇನಾದರೂ ಪ್ರವೇಶಿಸಿದರೆ ಅದರ ವಿರುದ್ಧ ಹೇಗೆ ಹೋರಾಡಬೇಕು, ಹೇಗೆ ನಿಗ್ರಹಿಸಬೇಕು ಎಂಬುದು ಈ ಟಿ–ಲಿಂಪೋಸೈಟ್‌ ಜ್ಞಾಪಕ ಕೋಶಗಳು ಮತ್ತು ಬಿ–ಲಿಂಪೋಸೈಟ್‌ಗಳಿಗೆ ತಿಳಿದಿರುತ್ತದೆ. ವೈರಸ್‌ ಅಥವಾ ಬ್ಯಾಕ್ಟೀರಿಯ ವಿರುದ್ಧ ಹೋರಾಡಲು ಸಜ್ಜಾಗಿ ನಿಲ್ಲುತ್ತವೆ. ಆ ಮೂಲಕ ಕಾಯಿಲೆ ಉಂಟಾಗದಂತೆ ಇವು ತಡೆಯುತ್ತವೆ.

ಲಸಿಕೆ ಹಾಕಿಸಿಕೊಂಡ ನಂತರ ಟಿ–ಲಿಂಪೋಸೈಟ್‌ಗಳು ಮತ್ತು ಬಿ–ಲಿಂಪೋಸೈಟ್‌ಗಳು ದೇಹದಲ್ಲಿ ಸೃಷ್ಟಿಯಾಗಲು ಕೆಲ ವಾರಗಳು ಬೇಕಾಗುತ್ತವೆ. ಹೀಗಾಗಿ ಲಸಿಕೆ ಪಡೆಯುವ ಮೊದಲು ಮತ್ತು ನಂತರದ ಕೆಲವೇ ದಿನಗಳಲ್ಲೇನಾದರೂ ಸೋಂಕು ಏನಾದರೂ ತಗುಲಿದರೆ, ನಿರ್ದಿಷ್ಟ ವ್ಯಕ್ತಿಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ.

ಮಾಹಿತಿ:ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ), ಅಮೆರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT