ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಯುಬ್ಬರವೇ? ಆಹಾರದ ಕ್ರಮ ಬದಲಾಯಿಸಿ

Last Updated 18 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ವಾಯು ಮತ್ತು ಹೊಟ್ಟೆಯುಬ್ಬರ ಸಮಸ್ಯೆ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದಕ್ಕೆ ಪರಿಹಾರವೆಂದರೆ ನೀವು ನಿತ್ಯ ಸೇವಿಸುವ ಆಹಾರ ಕ್ರಮದಲ್ಲಿ ಅಲ್ಪ ಬದಲಾವಣೆ ಮಾಡಿಕೊಳ್ಳುವುದು.

ನೀವು ತುಂಬಾ ಮುಖ್ಯವಾದ ಸಂದರ್ಶನವನ್ನು ಎದುರಿಸುತ್ತಿದ್ದೀರಾ ಎಂದುಕೊಳ್ಳಿ. ಆದರೆ ನಿಮ್ಮ ಹೊಟ್ಟೆಯೊಳಗಿನ ನುಲಿತ, ಚಿತ್ರವಿಚಿತ್ರ ಸದ್ದು ಸಂದರ್ಶನದ ನಿಮ್ಮ ಆತಂಕವನ್ನು ಇನ್ನಷ್ಟು ಜಾಸ್ತಿ ಮಾಡಿಬಿಡುತ್ತದೆ. ಸಂದರ್ಶನವನ್ನು ಮುಗಿಸುವುದು ಸಾಧ್ಯವೇ ಇಲ್ಲ ಎಂಬ ಅನುಮಾನವನ್ನು ಗಟ್ಟಿ ಮಾಡಿಬಿಡುತ್ತದೆ. ಇದಕ್ಕೆಲ್ಲ ಕಾರಣ ಹೊಟ್ಟೆಯುಬ್ಬರ ಹಾಗೂ ವಾಯು ಸಮಸ್ಯೆ.

ಹೌದು, ಇದರ ಬಗ್ಗೆ ಇತರರ ಜೊತೆ ಚರ್ಚಿಸಲು ನಿಮಗೆ ಮುಜುಗರವಾದರೂ ಕೂಡ ಈ ಸಮಸ್ಯೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಮ್ಮಷ್ಟಕ್ಕೇ ಇಂದು ಬೆಳಿಗ್ಗೆ ಏನನ್ನು ತಿಂದೆ, ಅದರಿಂದ ವಾಯು ಪ್ರಕೋಪ ಶುರುವಾಯಿತೇ ಅಥವಾ ನಂತರ ಸೇವಿಸಿದ ಕುರುಕಲು ತಿಂಡಿಯೇ ಎಂಬ ಯೋಚನೆ ಶುರುವಾಗುತ್ತದೆ.

ಈ ಸಮಸ್ಯೆಗೆ ಕಾರಣವೇನು? ಯಾವ ಔಷಧ ಸೇವಿಸಬೇಕು? ಯಾವ ರೀತಿಯ ಆಹಾರ ಪಥ್ಯ ಮಾಡಬೇಕು. ಇದೇ ಮೊದಲಾದ ಪ್ರಶ್ನೆಗಳು ಏಳುವುದು ಸಹಜ.

ಕಾರಣವೇನು?

ಜೀರ್ಣಾಂಗವ್ಯೂಹದಲ್ಲಿ ವಾಯು ಉತ್ಪಾದನೆಯಾಗುವುದು ಜೀರ್ಣಕ್ರಿಯೆಯ ಒಂದು ಭಾಗ. ಈ ವಾಯು ತೇಗಿನ ಅಥವಾ ಅಪಾನವಾಯುವಿನ ಮೂಲಕ ಹೊರಹೋಗಬಹುದು. ಆದರೆ ಇದನ್ನು ಹೊರಹಾಕಲು ಸಾಧ್ಯವಾಗದಿದ್ದಾಗ ಅದು ನೋವು ಕೊಡಲು ಶುರು ಮಾಡುತ್ತದೆ. ಹೊಟ್ಟೆ ತುಂಬಿದಂತೆ, ಉಬ್ಬರವಾದಂತೆ ಅನಿಸುವುದು. ಸಾಮಾನ್ಯವಾಗಿ ನೀವು ಸೇವಿಸಿದ ಆಹಾರ ಇದಕ್ಕೆ ಕಾರಣ. ಅಂತಹ ಆಹಾರ ಸೇವನೆ ತ್ಯಜಿಸಿದರೆ ಕಡಿಮೆಯಾಗುತ್ತದೆ. ಕೆಲವು ಸಲ ಸಮಸ್ಯಾತ್ಮಕ ಮಲ ವಿಸರ್ಜನೆ, ಲ್ಯಾಕ್ಟೋಸ್‌ ಅಲರ್ಜಿ, ಗೋಧಿ ಅಲರ್ಜಿಯಿಂದ ಶುರುವಾಗಿ ಸಿಲಿಯಾಕ್‌ ಕಾಯಿಲೆ ಅಥವಾ ಕೆಲವು ಔಷಧಗಳು ಇದಕ್ಕೆ ಕಾರಣವಾಗುತ್ತವೆ. ಅಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆದು ಔಷಧಿ ಸೇವಿಸಿ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.

ಆಹಾರವನ್ನು ನಿಧಾನವಾಗಿ ಅಗಿದು ತಿನ್ನಬೇಕು. ಅವಸರದಲ್ಲಿ ಆಹಾರವನ್ನು ನುಂಗುವುದರಿಂದ ಹೊಟ್ಟೆಯಲ್ಲಿ ವಾಯು ಉತ್ಪನ್ನವಾಗುವುದು ಸಹಜ.

ಯಾವುದೋ ಒಂದು ಆಹಾರ ಪದಾರ್ಥ ವಾಯು ಪ್ರಕೋಪಕ್ಕೆ ಕಾರಣವಾದರೆ ಅದಕ್ಕೆ ಮನೆಯ ಮದ್ದನ್ನು ಮಾಡಬಹುದು. ಆ ಆಹಾರವನ್ನು ಕೆಲವು ಕಾಲ ಸೇವಿಸದೇ ಇತರ ಸೂಪರ್‌ ಫುಡ್‌ ಸೇವಿಸಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು. ಅಂತಹ ಕೆಲವು ಸೂಪರ್‌ ಫುಡ್‌ ಇಲ್ಲಿವೆ.

ಯೋಗ್ಹರ್ಟ್‌/ ಮೊಸರು: ವಾಯು ಹಾಗೂ ಹೊಟ್ಟೆಯುಬ್ಬರಕ್ಕೆ ಹೇಳಿ ಮಾಡಿಸಿದಂತಹ ಆಹಾರ. ಸಕ್ಕರೆ ಸೇರಿಸದೇ ಮನೆಯಲ್ಲೇ ಮಾಡಿದ ಮೊಸರನ್ನು ಸೇವಿಸಿ. ಇದರಲ್ಲಿರುವ ಲ್ಯಾಕ್ಟೋಬ್ಯಾಸಿಲಸ್‌, ಆ್ಯಸಿಡೊಫಿಲಸ್‌ ಮೊದಲಾದ ಬ್ಯಾಕ್ಟೀರಿಯಾಗಳು ವಾಯುವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ದೀರ್ಘಕಾಲದವರೆಗೆ ಮೊಸರು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ.

ಪಾಲಕ್‌: ಬೇಯಿಸಿದ ಪಾಲಕ್‌ ಅನ್ನು ಅಡುಗೆಯಲ್ಲಿ ಬಳಸಿ ಅಥವಾ ಸ್ಮೂದಿ ಮಾಡಿ ಸೇವಿಸಿ. ಇದರಲ್ಲಿ ಕರಗದ ನಾರಿನಂಶ ಇರುವುದರಿಂದ ವಾಯು ದೂರ ಮಾಡುತ್ತದೆ. ಆದರೆ ಹಸಿ ಪಾಲಕ್‌ ಸೇವಿಸಬೇಡಿ.

ಕಲ್ಲಂಗಡಿ: ನೀರಿನಂಶ ಹಾಗೂ ನಾರಿನಂಶ ಹೆಚ್ಚಿರುವ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ಉತ್ತಮ ಆಹಾರ. ಇದರಲ್ಲಿರುವ ಪೊಟ್ಯಾಶಿಯಂ ವಾಯು ಹಾಗೂ ಹೊಟ್ಟೆಯುಬ್ಬರ ಕಡಿಮೆ ಮಾಡುತ್ತದೆ.

ಸೋಂಪು: ಹೋಟೆಲ್‌ನಲ್ಲಿ ಊಟದ ನಂತರ ಸೋಂಪು ಇಡುವುದನ್ನು ಗಮನಿಸಿರಬಹುದು. ಇದರಲ್ಲಿರುವ ಎಣ್ಣೆ ಅಂಶ ವಾಯುವನ್ನು ಹೊರಹಾಕುತ್ತದೆ.

ಸೌತೆಕಾಯಿ: ವಿಟಮಿನ್‌ ಸಿ ಅಧಿಕವಿರುವ ಇದು ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರು ಶೇಖರಣೆಯನ್ನು ತಡೆದು ಹೊಟ್ಟೆಯುಬ್ಬರಕ್ಕೆ ಕಡಿವಾಣ ಹಾಕುತ್ತದೆ.

ಅವೊಕೆಡೊ: ವಿಟಮಿನ್‌ ಸಿ ಅಂಶ ಹೆಚ್ಚಿರುವ ಇದರಲ್ಲಿ ಮೊನೊಸ್ಯಾಚುರೇಟೆಡ್‌ ಕೊಬ್ಬು ಕೂಡ ಜಾಸ್ತಿ ಇರುತ್ತದೆ. ನಿತ್ಯ ಒಂದು ಅವೊಕೆಡೊ ಸೇವಿಸಿದರೆ ಉತ್ತಮ.

ಲಿಂಬೆ ನೀರು: ಉಗುರು ಬೆಚ್ಚಗಿನ ನೀರಿಗೆ ಲಿಂಬೆ ರಸ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ವಿರೇಚಕವಾಗಿ ವರ್ತಿಸಿ ಜೀರ್ಣಾಂಗವ್ಯೂಹವನ್ನು ಶುಚಿಗೊಳಿಸುತ್ತದೆ.

ವಾಯು ಹಾಗೂ ಹೊಟ್ಟೆಯುಬ್ಬರಕ್ಕೆ ಕಾರಣವಾಗುವ ಕೆಲವು ಆಹಾರ ಪದಾರ್ಥಗಳು

* ಇಡಿ ಗೋಧಿ

* ಹೆಚ್ಚು ನಾರಿನಂಶವುಳ್ಳ ಆಹಾರದ ಅಧಿಕ ಸೇವನೆ

* ಬೀನ್ಸ್‌ ಮತ್ತು ಮೊಳಕೆ ಕಾಳು

* ಸೋಡಾ ಇರುವ ಲಘು ಪಾನೀಯ

* ಬೇಕರಿ ತಿನಿಸು

* ಕರಿದ ಪದಾರ್ಥಗಳು

* ಕ್ಷೀರೋತ್ಪನ್ನಗಳು

* ಹೆಚ್ಚು ಸಕ್ಕರೆ ಸೇವನೆ

(ಲೇಖಕರು ಬೆಂಗಳೂರು ಸ್ಮೈಲ್ಸ್‌ ಆಸ್ಪತ್ರೆಯಲ್ಲಿಕೊಲೊರೆಕ್ಟಲ್‌ ಸರ್ಜನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT