ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದಿಂದ ಸೋಂಕು ಹರಡದು

Last Updated 29 ಜನವರಿ 2021, 19:30 IST
ಅಕ್ಷರ ಗಾತ್ರ

ಕಳೆದ ವಾರ ಐಸ್‌ ಕ್ರೀಂ ಪೆಟ್ಟಿಗೆಗಳಿಗೆ ಕೊರೊನಾ ವೈರಸ್‌ ಅಂಟಿಕೊಂಡಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಚೀನಾದಲ್ಲಿ 29 ಸಾವಿರಕ್ಕಿಂತ ಅಧಿಕ ಐಸ್‌ ಕ್ರೀಂ ಪೆಟ್ಟಿಗೆಗಳನ್ನು ವಾಪಸ್‌ ಪಡೆಯಲಾಯಿತು. ಈ ವರದಿಯಿಂದಾಗಿ ಆಹಾರದ ಮೂಲಕ ಕೊರೊನಾ ಸೋಂಕು ಹರಡಬಹುದೇ ಎಂಬ ಅನುಮಾನ ಹಲವರಲ್ಲಿ ಮೂಡಿದೆ. ಆದರೆ ಯಾವುದೇ ಆಹಾರೋತ್ಪನ್ನಗಳನ್ನು ಮುಟ್ಟುವುದರಿಂದಾಗಲಿ ಅಥವಾ ಅದನ್ನು ತಿನ್ನುವುದರಿಂದಾಗಲಿ ಕೋವಿಡ್‌–19 ಬರುವುದಿಲ್ಲ ಎಂದು ಸಿಡಿಸಿ (ಸೆಂಟರ್ಸ್‌ ಫಾರ್‌ ಡಿಸೀಸ್‌ ಪ್ರಿವೆನ್ಶನ್‌ ಅಂಡ್‌ ಕಂಟ್ರೋಲ್‌) ಸ್ಪಷ್ಟಪಡಿಸಿದೆ.

ಮನುಷ್ಯರ ಮಧ್ಯೆ ಪರಸ್ಪರ ನೇರ ಸಂಪರ್ಕ ಇದ್ದಾಗ ಮಾತ್ರ ಸಾರ್ಸ್‌ ಕೋವ್‌–2 ವೈರಸ್‌ನ ಸೋಂಕು ಹರಡಲು ಸಾಧ್ಯ. ಇದಕ್ಕೆ ಕಾರಣ ಈ ವೈರಸ್‌ ಮೇಲೆ ಹೆಚ್ಚುವರಿ ಹೊದಿಕೆ ಇರುತ್ತದೆ. ಸಾಮಾನ್ಯವಾಗಿ ಆತಿಥೇಯ ಅಂದರೆ ಇಲ್ಲಿ ಮನುಷ್ಯ ದೇಹದಿಂದ ಪಡೆದ ಪೊರೆಯನ್ನು ಮಾರ್ಪಡಿಸಿಕೊಂಡ ಹೊದಿಕೆ ವೈರಸ್‌ ಮೇಲಿರುತ್ತದೆ. ಹೀಗಾಗಿ ಅದು ಮನುಷ್ಯರ ದೇಹದಿಂದ ಹೊರಗೆ ಇದ್ದರೆ ಸಾಯುತ್ತದೆ ಎಂದು ಸಿಡಿಸಿ ಸ್ಪಷ್ಟನೆ ನೀಡಿದೆ.

ಹೀಗಾಗಿ ವೈರಸ್‌ ಆಹಾರದ ಮೇಲಿದ್ದರೂ ತಕ್ಷಣ ಸಾಯುತ್ತದೆ ಎಂದು ನ್ಯೂಯಾರ್ಕ್‌ನ ಕಾರ್ನೆಲ್‌ ವಿಶ್ವವಿದ್ಯಾಲಯದ ಆಹಾರ ಸುರಕ್ಷತೆ ವಿಭಾಗದ ಪ್ರಾಧ್ಯಾಪಕ ಮಾರ್ಟಿನ್‌ ವೀಡ್ಮನ್‌, ವಿಶ್ವವಿದ್ಯಾಲಯದ ಜರ್ನಲ್‌ನಲ್ಲಿ ಬರೆದ ಲೇಖನದಲ್ಲಿ ಹೇಳಿದ್ದಾರೆ. ಆಹಾರದಲ್ಲಿ ವೈರಸ್‌ ಪರೀಕ್ಷೆ ಪಾಸಿಟಿವ್‌ ಬರುವುದು ತೀರಾ ಅಪರೂಪ. ವೈರಸ್‌ನ ಜೆನೆಟಿಕ್‌ ವಸ್ತು ಕೂಡ ಆಹಾರೋತ್ಪನ್ನಗಳ ಮೇಲೆ ಕಂಡು ಬಂದಿಲ್ಲ. ಏಷ್ಯಾದಿಂದ ಬಂದ ವರದಿಯಲ್ಲೂ ಕೂಡ ವರ್ಚುವಲ್‌ ಜೆನೆಟಿಕ್‌ ವಸ್ತು ಇದೆ ಎಂದು ಹೇಳಲಾಗಿದೆಯೇ ಹೊರತು ಜೀವಂತ ವೈರಸ್‌ ಅಲ್ಲ ಎಂದು ಅವರು ತಿಳಿಸಿದ್ದಾರೆ. ಚೀನಾದಲ್ಲಿ ನಡೆಸಿದ ಪರೀಕ್ಷೆಯ ವರದಿಯಲ್ಲಿ ಪಾಸಿಟಿವಿಟಿ ದರ 10 ಸಾವಿರಕ್ಕೆ 0.48ರಷ್ಟಿತ್ತು. (ಅಂದರೆ ನಡೆಸಿದ ಎಲ್ಲಾ ಪರೀಕ್ಷೆಗಳ ಶೇಕಡಾವಾರು ಪಾಸಿಟಿವ್‌ ವರದಿಯನ್ನು ಇದು ಸೂಚಿಸುತ್ತದೆ). ಇದು ತೀರಾ ಕಡಿಮೆಯಿದ್ದು, ಆಹಾರದ ಮೂಲಕ ಸಾರ್ಸ್‌ ಕೋವ್‌–2 ಹರಡುತ್ತದೆ ಎಂದು ಭಯ ಪಡುವುದು ಬೇಡ ಎಂದು ವೀಡ್ಮನ್‌ ಲೇಖನದಲ್ಲಿ ಹೇಳಿದ್ದಾರೆ.

ಆದರೂ ಕೂಡ ಕೈಗಳ ಸ್ವಚ್ಛತೆ ಬಗ್ಗೆ ಗಮನ ನೀಡುವುದು ಸೂಕ್ತ. ಮನೆಯಲ್ಲೇ ಅಡುಗೆ ತಯಾರಿಸುವುದಾದರೆ ಮುನ್ನೆಚ್ಚರಿಕೆ ಕ್ರಮವಾಗಿ 20 ಸೆಕೆಂಡ್‌ ಕಾಲ ಸೋಪ್‌ ಮತ್ತು ಬಿಸಿ ನೀರಿನಿಂದ ಕೈ ತೊಳೆದುಕೊಳ್ಳಿ. ರೆಸ್ಟೋರೆಂಟ್‌ಗೆ ಹೋಗಿ ಊಟ– ತಿಂಡಿ ತಿನ್ನುವುದು ಸದ್ಯಕ್ಕೆ ಬೇಡ ಎಂದೂ ಸಿಡಿಸಿ ಹೇಳಿದೆ.

ಹಾಗೆಯೇ ಹೆಚ್ಚು ಉಷ್ಣಾಂಶದಲ್ಲಿ ವೈರಸ್‌ ಬದುಕುಳಿಯುವುದಿಲ್ಲ. ಬೇಯಿಸುವುದು, ಕುದಿಸುವುದು, ಮೈಕ್ರೋವೇವ್‌, ಬೇಕಿಂಗ್‌ ಮೊದಲಾದವುಗಳಿಂದ ವೈರಸ್‌ ನಾಶವಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಹಾರ ಪದಾರ್ಥಗಳನ್ನು ಚೆನ್ನಾಗಿ ತೊಳೆದು, ಬೇಯಿಸಿ ತಿನ್ನಬೇಕು.

ಕೋವಿಡ್‌ ಸೋಂಕಿತ ವ್ಯಕ್ತಿಯ ಉಸಿರಾಟ ಅಥವಾ ಕೆಮ್ಮಿನಿಂದ ಹೊರಬೀಳುವ ಹನಿಯಿರುವ ಗಾಳಿಯನ್ನು ಇತರರೂ ಉಸಿರಾಡುವುದರಿಂದ ಹರಡುತ್ತದೆ. ಹೀಗಾಗಿ ರೆಸ್ಟೋರೆಂಟ್‌ನಲ್ಲಿ ತಿನ್ನುವಾಗ ಸಮೀಪವಿರುವ ಇನ್ನೊಬ್ಬ ವ್ಯಕ್ತಿಯಿಂದ ಸೋಂಕು ಬರಬಹುದೇ ವಿನಃ ಆಹಾರದಿಂದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅಲ್ಲಿಯೂ ಅಂತರ ಕಾಯ್ದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT