ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಈ ಪರಿಯ ನವೆಯೇಕೆ?

Last Updated 23 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

‘ದಿನವಿಡೀ ಕಡಿತ. ಅಲ್ಲಿ ಕೈ ಹಾಕಿ ತುರಿಸಿಕೊಳ್ಳಲೂ ನಾಚಿಕೆ. ಏನು ಮಾಡಲಿ ಈ ಸಮಸ್ಯೆಗೆ? ವೈದ್ಯರ ಬಳಿ ಹೋಗಲು ಅಂತಹ ದೊಡ್ಡ ಸಮಸ್ಯೆ ಏನಲ್ಲ..’ ಸ್ನೇಹಿತೆ ಅಲವತ್ತುಕೊಂಡಾಗ ಇದೇನು ಅಂತಹ ಗಂಭೀರ ಸಮಸ್ಯೆಯಲ್ಲದಿದ್ದರೂ ಕಿರುಕುಳ ಮಾತ್ರ ತಪ್ಪಿದ್ದಲ್ಲ ಎನಿಸಿತ್ತು. ಈ ಮೊಲೆತೊಟ್ಟು (ನಿಪಲ್‌) ನವೆ ರೇಜಿಗೆ ಹುಟ್ಟಿಸಿಬಿಡುತ್ತದೆ. ಹಗಲು ಕೆಲಸ ಮಾಡುವಾಗ ಅಲ್ಲಿ ಕೆರೆಯಲು ಮುಜುಗರ; ರಾತ್ರಿ ನಿದ್ರೆಗೂ ಕಡಿವಾಣ ಹಾಕಿಬಿಡುತ್ತದೆ ಈ ನಿರಂತರ ತುರಿಕೆ. ಆದರೆ ವೈದ್ಯರ ಪ್ರಕಾರ ಇದೇನೂ ಅಂತಹ ಗಂಭೀರ ಸಮಸ್ಯೆ ಏನಲ್ಲ, ಅಪರೂಪಕ್ಕೆ ಕೆಲವು ಪ್ರಕರಣಗಳನ್ನು ಹೊರತುಪಡಿಸಿ.

ಈ ಮೊಲೆ ತೊಟ್ಟಿನ ಕಡಿತಕ್ಕೆ ಸಾಮಾನ್ಯ ಕಾರಣವೆಂದರೆ ಎಕ್ಸಿಮಾ, ಅಂದರೆ ಇಸಬು. ಈ ಸಮಸ್ಯೆ ಶುರುವಾದರೆ ನವೆ ನಿರಂತರವಾಗಿರುತ್ತದೆ, ಹಾಗೆಯೇ ಅತಿಯಾಗಿ ಕಾಡುತ್ತದೆ. ಅದರ ಸುತ್ತ ದದ್ದು ಕಾಣಿಸಿಕೊಳ್ಳುವ ಮೊದಲೇ ಕೆರೆತ ಶುರುವಾಗುತ್ತದೆ. ದದ್ದು ಕೆಂಪಗಾಗಿ ಗುಳ್ಳೆಯಂತೆ ಕಾಣಿಸಿಕೊಂಡು ಕೆಲವೊಮ್ಮೆ ನೀರಿನಂತಹ ದ್ರವ ಬರಬಹುದು ಎನ್ನುತ್ತಾರೆ ವೈದ್ಯೆ ಡಾ.ವೈಶಾಲಿ ಎಂ.ಆರ್‌. ಜೋರಾಗಿ ಕೆರೆದುಕೊಂಡರೆ ಚರ್ಮ ಸುಲಿದಂತಾಗಿ ಸೋಂಕು ಉಂಟಾಗಬಹುದು. ಉರಿಯೂತ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸುತ್ತಾರೆ ಅವರು.

ಇದು ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲೂ ಕಾಣಿಸಿಕೊಳ್ಳಬಹುದು. ಚರ್ಮ ಹೆಚ್ಚು ಸೂಕ್ಷ್ಮವಾಗಿದ್ದರೆ, ಹಾಗೆಯೇ ಅಲರ್ಜಿ, ಆಸ್ತಮಾ ತೊಂದರೆಗಳಿದ್ದರೆ ಇದರ ಪರಿಣಾಮ ಜಾಸ್ತಿ. ಒಣ ಚರ್ಮ, ಬಳಸುವ ಸೋಪು, ಬಾಡಿ ಕ್ರೀಂ ಮೊದಲಾದವುಗಳು ಹೆಚ್ಚು ರಾಸಾಯನಿಕಗಳನ್ನು ಹೊಂದಿದ್ದರೆ, ಆ ಭಾಗ ಒದ್ದೆಯಾಗಿದ್ದರೆ, ಹಾಗೆಯೇ ಕೆಲವೊಮ್ಮೆ ಒತ್ತಡವೂ ಇದಕ್ಕೆ ಕಾರಣ ಇರಬಹುದು.

ವೈದ್ಯರು ದೈಹಿಕ ಪರೀಕ್ಷೆಯಿಂದಲೇ ಇದನ್ನು ಪತ್ತೆ ಮಾಡಿಬಿಡುತ್ತಾರೆ. ಹೆಚ್ಚಾಗಿ ತ್ವಚೆಗೆ ನೇರವಾಗಿ ಲೇಪಿಸುವ ಸ್ಟೀರಾಯ್ಡ್‌ಯುಕ್ತ ಆಯಿಂಟ್‌ಮೆಂಟ್‌ ಕೊಡಬಹುದು. ಆದರೆ ಲೋಷನ್‌ ಬೇಡ ಎನ್ನುತ್ತಾರೆ ವೈದ್ಯರು. ಲೋಷನ್‌ ಹೆಚ್ಚಾಗಿ ಚರ್ಮವನ್ನು ಒಣಗಿಸಿ ಸಮಸ್ಯೆಯನ್ನು ಇನ್ನೊಂದಿಷ್ಟು ಜಾಸ್ತಿ ಮಾಡುತ್ತದೆ.

ಕೆಲವೊಮ್ಮೆ ಕೊಬ್ಬರಿ ಎಣ್ಣೆ, ಪೆಟ್ರೋಲಿಯಂ ಜೆಲ್ಲಿ ಲೇಪಿಸುವುದು ಕೂಡ ಶಮನಕಾರಿ.

ಇದು ಬರದಂತೆ ತಡೆಗಟ್ಟುವುದು ಹೆಚ್ಚು ಸೂಕ್ತ. ಅಂದರೆ ಚರ್ಮ ಒಣಗದಂತೆ, ತೇವಾಂಶವಿರುವಂತೆ ನೋಡಿಕೊಳ್ಳಬೇಕು. ತ್ವಚೆ ಒಣಗುವಂತಹ ಸೋಪ್‌ ಬಳಸಬೇಡಿ. ಅತಿ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಸ್ನಾನವಾದ ಕೂಡಲೇ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಂಡು ತಕ್ಷಣಕ್ಕೆ ಆಯಿಂಟ್‌ಮೆಂಟ್‌ ಹಚ್ಚಿ.

ಅಪರೂಪದ ಪ್ರಕರಣಗಳಲ್ಲಿ ಈ ಲಕ್ಷಣಗಳು ತೀವ್ರತರವಾಗಿದ್ದರೆ ಮೊಲೆ ತೊಟ್ಟಿನ ಕ್ಯಾನ್ಸರ್‌ ಆಗಿರಬಹುದು. ಆದರೆ ತೀವ್ರತರದ ತುರಿಕೆ ಹಾಗೂ ಉರಿ ಕಾಣಿಸಿಕೊಳ್ಳಬಹುದು. ಮುಳ್ಳಿನಂತಹ ರಚನೆಗಳು ಕಾಣಿಸಿಕೊಂಡು ಸಾಧಾರಣ ಆಯಿಂಟ್‌ಮೆಂಟ್‌ನಿಂದ ಕಡಿಮೆಯಾಗುವುದಿಲ್ಲ. ಮೊಲೆತೊಟ್ಟಿನಿಂದ ಸ್ರಾವ ಕಾಣಿಸಿಕೊಳ್ಳಬಹುದು. ಈ ತರಹದ ಕ್ಯಾನ್ಸರ್‌ 50 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಲ್ಲಿ ತಲೆದೋರಬಹುದು ಎನ್ನುತ್ತಾರೆ ವೈದ್ಯರು. ಆಗ ಮ್ಯಾಮೊಗ್ರಾಮ್‌, ಬಯಾಪ್ಸಿ ಮೊದಲಾದ ತಪಾಸಣೆಗಳನ್ನು ಮಾಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT