ಸೋಮವಾರ, ಸೆಪ್ಟೆಂಬರ್ 20, 2021
24 °C

ಅಡುಗೆ ಮನೆಯೂ ವ್ಯಾಯಾಮ ಶಾಲೆಯೂ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

ಗೃಹಿಣಿಯರಿಗೆ ಅಡುಗೆ ಮನೆ ಎಂಬುದು ಅಕ್ಷರಶಃ ಮನೆಯೇ ಎಂಬಂತಾಗಿ ಹೋಗಿದೆ. ಪ್ರತಿದಿನವೂ ಬೆಳಿಗ್ಗೆ ತಿಂಡಿಯಿಂದ ಶುರು ಆಗುವ ಅಡುಗೆ ಮನೆ ನಂಟು ರಾತ್ರಿ ಹಾಲುಹೆಪ್ಪು ಹಾಕುವಲ್ಲಿಗೆ ಮುಗಿಯುತ್ತದೆ. ಈ ಎಲ್ಲದರ ಮಧ್ಯೆ ಜಿಮ್‌, ವ್ಯಾಯಾಮಕ್ಕಾಗಿಯೇ ದಿನದ ಒಂದು ತಾಸು ವ್ಯಯಿಸುವುದು ಎಂದರೆ ಹಲವು ಗೃಹಿಣಿಯರಿಗೆ ಕಷ್ಟಸಾಧ್ಯ. ಹಾಗಾದರೆ, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗ ಯಾವುದು? ಒಂದು ವೇಳೆ ಅಡುಗೆ ಮನೆಯೇ ಜಿಮ್ಮಾದರೆ...

ಬೆಂಗಳೂರಿನ ಫಿಟ್‌ನೆಸ್‌ ತರಬೇತುದಾರ ಶೀತಲ್‌ ಕಿರಣ್‌ ಅವರು, ಅಡುಗೆ ಮನೆಯಲ್ಲಿಯೇ ಸುಲಭವಾಗಿ, ಅಡುಗೆ ಮನೆಯ ವಸ್ತುಗಳನ್ನೇ ಉಪಯೋಗ ಮಾಡಿ, ಹೇಗೆಲ್ಲಾ ವ್ಯಾಯಾಮ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದರ ವಿಡಿಯೊಗಳು ಯೂಟ್ಯೂಬ್‌ನಲ್ಲಿ ಲಭ್ಯ ಇವೆ.

‘ಹಿಂದೆಲ್ಲಾ ಅಡುಗೆ ಮನೆಯ ವಿನ್ಯಾಸವು ಬಗ್ಗಿ, ಎದ್ದು, ಕೂತು ಕೆಲಸ ಮಾಡುವಂತೆ ಇರುತ್ತಿತ್ತು. ಆದರೆ, ಈಗ ಎಲ್ಲವನ್ನೂ ನಿಂತುಕೊಂಡೇ ಮಾಡುತ್ತೇವೆ. ಇದರಿಂದ ಬೆನ್ನು ನೋವು, ಹಿಮ್ಮಡಿ ನೋವು, ಮಂಡಿ ನೋವು ಬರುತ್ತದೆ. ಹೆಚ್ಚಿನ ಮನೆಗಳಲ್ಲಿ ಅಡುಗೆ ಮಾಡುವ ಕಟ್ಟೆಗಳ ಎತ್ತರ ಕಡಿಮೆ ಇರುತ್ತವೆ. ಅದರ ಮೇಲೆ ತರಕಾರಿ ಹೆಚ್ಚುವುದು, ಹೆಚ್ಚು ಹೊತ್ತು ನಿಂತು ಬೇಯಿಸುವುದು, ಕೈಯಾಡಿಸುವುದು ಮಾಡುವುದರಿಂದ ಕುತ್ತಿಗೆ ನೋವು, ಭುಜ ನೋವು ಕಾಣಿಸಿಕೊಳ್ಳುತ್ತದೆ’ ಎನ್ನುತ್ತಾರೆ ಶೀತಲ್‌ ಕಿರಣ್‌ ಅವರು.

ಅಡುಗೆ ಮಾಡುತ್ತಲೇ ಕೆಲವು ವ್ಯಾಯಾಮ ಮಾಡುವುದರಿಂದ ಈ ಎಲ್ಲಾ ನೋವುಗಳ ನಿವಾರಣೆ ಆಗುತ್ತದೆ. ಲಟ್ಟಣಿಗೆ, ಸಿಂಕ್‌ ಮುಂದೆ ಹಾಕಿರುವ ಮ್ಯಾಟ್‌, ಗೋಡೆ ಇವುಗಳನ್ನೇ ಪರಿಕರಗಳನ್ನಾಗಿ ಬಳಸಿ ವ್ಯಾಯಾಮ ಮಾಡುವುದು ಹೇಗೆ ಎಂದು ಅವರು ವಿವರಿಸುತ್ತಾರೆ.

l ಗೋಡೆಗಿಂತ ಒಂದು ತೋಳಿನ ಅಂತರದಲ್ಲಿ ನಿಲ್ಲುವುದು. ತೋರು ಬೆರಳು ಮತ್ತು ಮಧ್ಯದ ಬೆರಳನ್ನು ನಡಿಗೆ ರೀತಿಯಲ್ಲಿ ಗೋಡೆಯ ಮೇಲ್ಮುಖವಾಗಿ ಚಲಿಸುತ್ತಾ ಹೋಗುವುದು. ಒಂದು ದೂರದವರೆಗೆ ಭುಜ ನೋಯಲು ಶುರು ಆಗುತ್ತದೆ. ನಂತರ ಬೆರಳುಗಳನ್ನು ನಿಧಾನಕ್ಕೆ ಇಳಿಸುತ್ತಾ ಬರುವುದು. ಇದರಿಂದ ಫ್ರೋಝನ್‌ ಶೋಲ್ಡರ್‌ ಸಮಸ್ಯೆ ಕೂಡ ನಿವಾರಿಸಿಕೊಳ್ಳಬಹುದು.

l ನಿಂತೇ ಇರುವುದರಿಂದ ರಕ್ತ ಚಲನೆಗೆ ಪೆಟ್ಟು ಬೀಳುತ್ತದೆ. ಪಾತ್ರೆ ತೊಳೆಯುವಾಗ, ಅಡುಗೆ ಮಾಡುವಾಗ ಅಡುಗೆ ಮನೆಯಲ್ಲಿನ ಮ್ಯಾಟ್‌ಗೆ ಕಾಲನ್ನು ಉಜ್ಜುವುದರಿಂದ ರಕ್ತ ಸಂಚಾರ ಸರಾಗವಾಗುತ್ತದೆ. ಮ್ಯಾಟ್‌ ಕೊಳ್ಳುವಾಗ ನುಣ್ಣಗೆ ಇರುವುದನ್ನು ಖರೀದಿಸಬಾರದು. ಒರಟಾದದ್ದನ್ನು ಅಥವಾ ಪಾದಕ್ಕೆ ಲಘುವಾಗಿ ಒತ್ತುವ ಮ್ಯಾಟ್‌ಗಳನ್ನು ಖರೀದಿಸಿ. ಇದು ಅಕ್ಯುಪಂಕ್ಚರ್‌ ಅನುಭವ ನೀಡುತ್ತದೆ.

l ಲಟ್ಟಣಿಗೆಯನ್ನು ತಲೆಯ ಮೇಲೆ ವೃತ್ತಾಕಾರದಲ್ಲಿ ತಿರುಗಿಸುವುದರಿಂದ ಕೂಡ ಭುಜಕ್ಕೆ ವ್ಯಾಯಾಮ ಆಗುತ್ತದೆ. ಊಟಕ್ಕೆ ಕೂರುವ ಮಣೆಯ ಮೇಲೆ ಮೊದಲು ಬಲಗಾಲು ಇಡುವುದು, ನಂತರ ಎಡಗಾಲು ಇಡುವುದು. ನಂತರ ಎಡಗಾಲು ಕೆಳಗಿಡುವುದು ಆಮೇಲೆ ಬಲಗಾಲು ಕೆಳಗಿಡುವುದು. ಇದನ್ನು ಲಯಬದ್ಧವಾಗಿ ಮಾಡುವುದು ಸಹ ಉಪಯುಕ್ತ. 3–15 ಕೌಂಟ್‌ವರಗೆ 6–7 ಸೆಟ್‌ ಮಾಡಬಹುದು. ಒಂದು ಸೆಟ್‌ನಿಂದ ಪ್ರಾರಂಭ ಮಾಡಿ, ನಿಧಾನವಾಗಿ ಸೆಟ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬಹುದು. ಇದು ಏರೋಬಿಕ್ಸ್‌ ವ್ಯಾಯಾಮದ ಅನುಭವ ನೀಡುತ್ತದೆ.

l ಅಡುಗೆ ಮನೆಯಲ್ಲೇ ತುಂಬಾ ಹೊತ್ತು ಇರುವುದರಿಂದ ಬೇಗ ಬೇಗ ಅಡುಗೆ ಮಾಡಿ ಮುಗಿಸಬೇಕು ಎನ್ನುವಂಥ ಒತ್ತಡ ಗೃಹಿಣಿಯರನ್ನು ಕಾಡುತ್ತದೆ. ಈ ಒತ್ತಡ ನಿವಾರಣೆಗೆ ಸುಲಭ ಉಪಾಯವಿದೆ. ಒತ್ತಡದಲ್ಲಿ ಕೆಲಸ ಮಾಡಿ, ಮುಗಿಸಿದ ಬಳಿಕ ಒಂದು ಐದು ನಿಮಿಷ ಓಂಕಾರ ಉಚ್ಚರಣೆ ಮಾಡುವುದು, ಇಲ್ಲವೇ ನಿಧಾನವಾಗಿ ಉಸಿರಾಡುವುದು ಮಾಡಿದರೆ, ಒತ್ತಡ ನಿವಾರಣೆ ಆಗುತ್ತದೆ.

‘ಎಷ್ಟೊ ಬಾರಿ ಮನೆ ಕಟ್ಟಿಸುವ ಸಂದರ್ಭದಲ್ಲಿ ಮಹಿಳೆಯರ ದೃಷ್ಟಿಯಿಂದ ಅಡುಗೆ ಮನೆ ವಿನ್ಯಾಸವನ್ನು ಯೋಚಿಸುವುದಿಲ್ಲ. ಅವರೇ ಹೆಚ್ಚು ಹೊತ್ತು ಅಲ್ಲಿ ಕೆಲಸ ಮಾಡುವುದರಿಂದ ಅವರ ಅನುಕೂಲ, ಅವರ ಎತ್ತರಕ್ಕೆ ಸಮನಾಗಿ ಅಡುಗೆ ಕಟ್ಟಿ ನಿರ್ಮಿಸಬೇಕು. ಡೈನಿಂಗ್‌ ಟೇಬಲ್‌ ಕೂಡ ಅಲ್ಲೇ ಇರುವುದರಿಂದ ತರಕಾರಿ ಹೆಚ್ಚುವಾಗ ಕೂತು ಹೆಚ್ಚಬಹುದು. ಇದರಿಂದ ನಿಂತೇ ಇರುವುದು, ಬಾಗಿ ಕೆಲಸ ಮಾಡುವುದು ತಪ್ಪುತ್ತದೆ’ ಎನ್ನುತ್ತಾರೆ ಶೀತಲ್‌ ಕಿರಣ್‌.

ಶೀತಲ್‌ ಕಿರಣ್ ಅವರು ಮೂಲತಃ ಬೆಂಗಳೂರಿನವರು. ಸುಮಾರು 15 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಫಿಟ್‌ನೆಸ್‌ ತರಬೇತುದಾರರಾಗಿದ್ದು, ಯೋಗವನ್ನೂ ಹೇಳಿಕೊಡುತ್ತಾರೆ.

ಕ್ರಿಕೆಟ್‌, ಕಬಡ್ಡಿ, ಕುಸ್ತಿಗಳ ಹಲವು ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ‘ಟಾಪ್‌ ಸ್ಪೋರ್ಟ್ಸ್‌ ಕೋಚ್‌ ಆಫ್‌ ಕರ್ನಾಟಕ–2018’ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು