ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೀಮ ಬಲದ ‘ಯುವರಾಜ’

Last Updated 15 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಅಸೀಮ ಗುರಿಯನ್ನು ಬೆನ್ನತ್ತುವ ದಿಟ್ಟತನಕ್ಕೆ ಇನ್ನೊಂದು ಹೆಸರೇ ಯುವರಾಜ್‌ ಸಿಂಗ್‌. ತಾವು ಅಂದುಕೊಂಡದನ್ನು, ನಾಯಕನೊಪ್ಪಿಸಿದ ಕೆಲಸವನ್ನು ಮಾಡಿಯೇ ಮುಗಿಸುವ ‘ಯುವಿ’, ದೇಹಬಲವಲ್ಲದೇ ಮನೋಬಲದಿಂದಲೂ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ಇತ್ತೀಚೆಗೆ (ಡಿ.12) 38ನೇ ಹುಟ್ಟುಹಬ್ಬ ಆಚರಿಸಿಕೊಂಡ ಅವರು, ತಾವಾಡಿದ ಮೊದಲ ಪಂದ್ಯದ ತಾಜಾ ಹುರುಪು, ಅದೇ ಫಿಟ್‌ನೆಸ್‌ ಅನ್ನು ಈಗಲೂ ಉಳಿಸಿಕೊಂಡಿದ್ದಾರೆ.‌

ತಮ್ಮಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹರಿಬಿಡುವ ಫಿಟ್‌ನೆಸ್‌ ವಿಡಿಯೊಗಳು ಮತ್ತು ಚಿತ್ರಗಳು 20ರ ಹರೆಯದ ಯುವಿ ಅವರ ಕೆಚ್ಚನ್ನೇ ನೆನಪಿಸುತ್ತವೆ. ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 84 ರನ್‌ ಬಾರಿಸಿದಾಗ, ಮೊಹಮ್ಮದ್‌ ಕೈಫ್‌ ಜೊತೆಗೂಡಿ 325 ರನ್‌ಗಳ ಗುರಿ ದಾಟಿ ಲಾರ್ಡ್ಸ್ ಅಂಗಳದಲ್ಲಿಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸಿದಾಗ, 2007ರಲ್ಲಿಸತತ 6 ಸಿಕ್ಸರ್‌ ಬಾರಿಸಿ ಸ್ಟುವರ್ಟ್ ಬ್ರಾಡ್‌ ಕಂಗಳಲ್ಲಿ ಕಣ್ಣೀರು ಕಾಣಿಸಿದಾಗ ಮತ್ತು 2011ರ ವಿಶ್ವಕಪ್‌ ಟೂರ್ನಿಯುದ್ದಕ್ಕೂ ಭಾರತೀಯರ ಎದೆಯಲ್ಲಿ ಕಪ್‌ ಅನ್ನು ಜೀವಂತವಾಗಿಟ್ಟ ಕ್ಷಣಗಳು ಕಣ್ಣ ಮುಂದೆ ಬರುತ್ತವೆ.

ವಿಶ್ವಕಪ್‌ ದಿನಗಳಲ್ಲಿ ಕ್ಯಾನ್ಸರ್‌ ಅನ್ನು ಹೊತ್ತುಕೊಂಡು ಕಪ್‌ ತಂದುಕೊಟ್ಟ ‘ಯುವಿ’ ಅವರಮನೋಬಲದ ಉಚ್ಛ್ರಾಯ ಸ್ಥಿತಿಯ ದರ್ಶನಆದುದು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದಾಗಲೇ. ಅಲ್ಲಿವರೆಗೂ ಎಲ್ಲರಿಗೂ ಗೊತ್ತಿದ್ದದ್ದು ಮಿಂಚಿನ ವೇಗದಲ್ಲಿಚೆಂಡನ್ನು ಬೌಂಡರಿಗೆ ದಾಟಿಸುತ್ತಿದ್ದ ಅವರ ಬ್ಯಾಟಿಂಗ್‌ ಬಲವಷ್ಟೇ. ಗುರಿಯನ್ನು ಸಾಧಿಸುವ ಈ ಬಲಗಳ ಇಣುಕುನೋಟ ಈಗಲೂ ಇನ್‌ಸ್ಟಾಗ್ರಾಮ್‌ನ ವಿಡಿಯೊಗಳಲ್ಲಿ ಸಿಗುತ್ತಿವೆ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದವರಲ್ಲಿ ಅನೇಕರು ನಿಮ್ಮ ಫಿಟ್‌ನೆಸ್‌ ಅನ್ನು ನಮಗೂ ಕರುಣಿಸಿ ಎಂದು ಮೊರೆ ಇಟ್ಟಿದ್ದರು.

ತಟ್ಟೆಬಟ್ಟುಗಳ ದಂಡವನ್ನು ಎತ್ತುತ್ತಿರುವ ವಿಡಿಯೊವೊಂದನ್ನು ಇತ್ತೀಚೆಗೆ ಹಂಚಿಕೊಂಡಿದ್ದ ಅವರು, ‘ಕಳೆದ ವರ್ಷ ನಾನು ನಿಮಗೆ ಹೇಳಿದ್ದೆ, ಪವರ್‌ ಟ್ಟ್ರೈನಿಂಗ್‌ನಲ್ಲಿ ನಾನು ತುಂಬಾ ಅನುಭವಿ ಎಂದು. ಆದರೂ, ಈಗಲೂ ನಿತ್ಯ ಅಭ್ಯಾಸ ಮಾಡುತ್ತಿದ್ದೇನೆ. ಇದರ ವ್ಯಾಯಾಮದ ಗುರಿಗಳಿಗೆ ಅಂಟಿಕೊಂಡಿದ್ದೇನೆ. ಇವುಗಳನ್ನು ತಲುಪುವ ವರೆಗೆ ನಾನು ಮತ್ತೇನನ್ನೂ ಮಾಡಲಾರೆ. ಪ್ರತಿ ಗುರಿಯ ಹತ್ತಿರಕ್ಕೆ ಬಂದಾಗಲೂ ನನಗೆ ಹೊಸ ಗುರಿಯೊಂದು ಕಂಡಿರುತ್ತದೆ. ಹೊಸತನ್ನು ಕಾಣಲು ಮತ್ತು ಕಲಿಯಲು ವಯಸ್ಸು ಯಾರಿಗೂ ಅಡ್ಡಿಯಲ್ಲ. ಅಲ್ಲದೆ, ನಾವು ಎಂದಿಗೂ ಹೊಸ ಗುರಿಗಳ ಬಳಿಗೆ ತಡವಾಗಿ ಬಂದಿಲ್ಲ ಎಂಬುದನ್ನು ನೆನಪಿಡಬೇಕು. ಮುನ್ನುಗ್ಗಬೇಕು’ ಎಂದಿದ್ದರು.

ಪವರ್‌ ಟ್ರೈನಿಂಗ್‌:ಕ್ರೀಡೆಗಳಲ್ಲಿ ಫಿಟ್‌ನೆಸ್‌ ಕಾಯ್ದುಕೊಳ್ಳಲು ‘ಪವರ್‌ ಟ್ರೈನಿಂಗ್‌’ ತುಂಬಾ ಅವಶ್ಯಕವಾಗಿರುತ್ತದೆ. ಕ್ರೀಡೆಯಲ್ಲಿ ಓಡಲು, ನೆಗೆಯಲು, ಚಲಿಸುವ ವಸ್ತುಗಳ (ಚೆಂಡು) ದಿಕ್ಕನ್ನು ಬದಲಿಸಲು ಮತ್ತು ಗುರಿಯೆಡೆಗೆ ದಾಟಿಸಲು ದೇಹ ಮತ್ತು ಮನಸ್ಸನ್ನು ಬಲಗೊಳಿಸಬೇಕಾಗುತ್ತದೆ. ಬಾಸ್ಕೆಟ್‌ಬಾಲ್‌, ಕ್ರಿಕೆಟ್‌, ಫುಟ್ಬಾಲ್‌, ಅಥ್ಲೆಟಿಕ್ಸ್, ಗಾಲ್ಫ್‌ ಮತ್ತು ಬೇಸ್‌ ಬಾಲ್‌ ಕ್ರೀಡಾಪಟುಗಳನ್ನು ನೋಡುವಾಗ ಅವರ ‘ಪವರ್‌ ಟ್ರೈನಿಂಗ್‌’ನಲ್ಲಿನ ಪರಿಶ್ರಮ ತಿಳಿಯುತ್ತದೆ.

ಪವರ್‌ ಟ್ರೈನಿಂಗ್‌ನ ಮುಖ್ಯ ಗುರಿ ದೇಹದಲ್ಲಿ ಶಕ್ತಿಯನ್ನು ಉತ್ಪಾದಿಸುವುದು. ತೂಕದ ಬಟ್ಟುಗಳು, ಡಂಬಲ್ಸ್‌ ಅಥವಾ ಮತ್ತಾವುದೋ ವ್ಯಾಯಾಮದ ಪರಿಕರದ ತೂಕ, ಚಲನೆಯ ವೇಗ ಮತ್ತು ಸ್ಥಾನಪಲ್ಲಟದ ಮೂಲಕ ಶಕ್ತಿಯನ್ನು ತರಬೇತಿ ಮತ್ತು ಅಭ್ಯಾಸದ ಮೂಲಕ ವರ್ಧಿಸಿಕೊಳ್ಳುತ್ತಾ ಹೋಗುವುದಾಗಿದೆ. ಈ ವ್ಯಾಯಾಮಗಳು ದೇಹದ ತೂಕ ಮತ್ತು ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಜಿಗಿತ, ಓಟ, ಆಟ ಎಲ್ಲವೂ ಈ ಶಕ್ತಿ ಸಾಮರ್ಥ್ಯದಡಿಯೇ (ಪವರ್‌ ಟ್ರೈನಿಂಗ್‌) ಇರುತ್ತದೆ.

ತೂಕ ಮತ್ತು ವೇಗದ ಮಿಳಿತದಲ್ಲಿ ವ್ಯಾಯಾಮ ಪರಿಕರಗಳನ್ನು ಬಳಸುವ ಮೂಲಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಈ ವ್ಯಾಯಾಮಗಳು ದೇಹದ ಕೊಬ್ಬನ್ನು ಕರಗಿಸುವುದಲ್ಲದೆ, ಸುಂದರ ಮೈಕಟ್ಟನ್ನೂ ನೀಡುತ್ತವೆ.‌ತೂಕವನ್ನು ಎತ್ತುವುದು, ಬಾಗುವುದು ಸಹಿತ ಹಲವು ‘ಪವರ್‌ ಟ್ರೈನಿಂಗ್‌’ ವ್ಯಾಯಾಮಗಳನ್ನು ಯಾವುದೇ ವಯಸ್ಸಿನಲ್ಲಿಯೂ ಮಾಡಬಹುದು. ಆದರೆ, ಎಲ್ಲ ವ್ಯಾಯಾಮಗಳ ಆರಂಭದಲ್ಲಿ ಸ್ನಾಯು, ಮಾಂಸಖಂಡ ಮತ್ತು ಮೂಳೆಗಳ ಮೇಲೆ ಬೀಳುವ ಒತ್ತಡದಿಂದ ಉಂಟಾಗುವ ನೋವನ್ನು ಸಹಿಸಲೇ ಬೇಕಾಗುತ್ತದೆ. ಹಂತ ಹಂತವಾಗಿ ವಿಭಜಿಸಿಕೊಂಡು ವ್ಯಾಯಾಮಗಳನ್ನು ನಿತ್ಯ ಮಾಡುತ್ತಲೇ ಹೋದರೆಉದ್ದೇಶಿತ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಈ ಮೂಲಕ ನಮ್ಮಫಿಟ್‌ನೆಸ್‌ ಸ್ಥಿರತೆಯನ್ನೂ ಕಾಯ್ದುಕೊಳ್ಳಬಹುದು.

ಯುವಿ ಡಯಟ್‌:ಕ್ಯಾನ್ಸರ್‌ ವಿರುದ್ಧದ ಹೋರಾಟದ ನಂತರ ಯುವಿ ತಮ್ಮ ಡಯಟ್‌ ಮತ್ತು ವ್ಯಾಯಾಮದಲ್ಲಿ ಬದಲಾವಣೆ ಮಾಡಿಕೊಂಡರು. ತಮ್ಮ ಸಾಮರ್ಥ್ಯವನ್ನು ಮರುಸೃಷ್ಟಿಸಿಕೊಳ್ಳಲು ಪವರ್‌ ಟ್ರೈನಿಂಗ್‌ ವ್ಯಾಯಾಮಗಳತ್ತ ಮೊರೆ ಹೋದರು. ಕಾರ್ಬೋಹೈಡ್ರೇಟ್ ಆಹಾರಗಳಿಗಿಂತ ಪ್ರೋಟಿನ್‌ಯುಕ್ತ ಆಹಾರಗಳನ್ನು ಹೆಚ್ಚು ತೆಗೆದುಕೊಳ್ಳಲಾರಂಭಿಸಿದರು. ಸಿರಿ ಧಾನ್ಯಗಳು, ಹಾಲು, ಮೊಟ್ಟೆ ಮತ್ತು ಚಿಕನ್‌ ಜೊತೆಗೆ ತಮ್ಮ ಇಷ್ಟದ ಪಂಜಾಬ್‌ ತಿನಿಸು ಪೋರ್ಖಂಡಿ ಚಾವ್ಲಂದ್‌ ಪನೀರ್‌ ಅನ್ನು ಅವರು ಸೇವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT