ಗುರುವಾರ , ಏಪ್ರಿಲ್ 9, 2020
19 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಪ್ರಜಾವಾಣಿ ಫೋನ್‌ ಇನ್‌: ತೂಕ ಇಳಿಸಿಕೊಳ್ಳಿ, ಒತ್ತಡದಿಂದ ದೂರವಿರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಾಕ್ಟರ್‌ ಮುಟ್ಟು ಸರಿಯಾಗಿ ಆಗ್ತಿಲ್ರಿ, ಉರಿ ಮೂತ್ರ ಸಮಸ್ಯೆ ಇದೇರಿ, ಬಿಳಿಸೆರಗು ಹೋಗ್ತದ್ರಿ, ಜಾಸ್ತಿ ಬ್ಲೀಡಿಂಗ್‌ ಆಗ್ತಿದೆ, ಋತುಸ್ರಾವ ತುಂಬಾ ಕಡಿಮೆ ಇದೇರಿ, ಮದುವೆಯಾಗಿ 14 ವರ್ಷವಾದ್ರೂ ಮಕ್ಕಳೇ ಆಗಿಲ್ರೀ... ಮುಂತಾದ ಪ್ರಶ್ನೆಗಳು ಮಂಗಳವಾರ ಪ್ರಜಾವಾಣಿ ಹುಬ್ಬಳ್ಳಿ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದ ಕರೆಗಳು. ಪ್ರಜಾವಾಣಿ ಓದುಗರು ಕೇಳಿದ ಪ್ರಶ್ನೆಗಳಿಗೆ ಹುಬ್ಬಳ್ಳಿಯ ಸುಚಿರಾಯು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಓಬಿ ಆ್ಯಂಡ್‌ ಗೈನಾಕಲಜಿಸ್ಟ್ ಡಾ. ಬಿ.ಆರ್‌. ಬಾರಕೋಲ ಹಾಗೂ ಬಿಜಿಒ ಸ್ತ್ರೀರೋಗ ತಜ್ಞೆ ಡಾ. ರಶ್ಮಿ ಹಿರೇಮಠ ಅವರು ಸಮಾಧಾನದಿಂದ, ಮನವರಿಕೆಯಾಗುವ ರೀತಿಯಲ್ಲಿ ಉತ್ತರಿಸಿದರು.

ಅನಿಯಮಿತ ಋತುಸ್ರಾವಕ್ಕೆ ದೇಹದ ತೂಕವೂ ಕಾರಣವಾಗಲಿದೆ. ತೂಕ ಇಳಿಸಿಕೊಂಡರೆ, ತಿಂಗಳ ಮುಟ್ಟು ನಿಯಮಿತವಾಗಲಿದೆ. ಅಷ್ಟಕ್ಕೂ ಸಮಸ್ಯೆ ಮುಂದುವರೆದಲ್ಲಿ ಹಾರ್ಮೋನ್‌ ಟೆಸ್ಟ್‌ ಮಾಡಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. 

ಒತ್ತಡದಿಂದ ದೂರವಿದ್ದರೆ ಅದೆಷ್ಟೋ ಕಾಯಿಲೆಗಳಿಂದ ಮುಕ್ತರಾಗಬಹುದು. ರಾಸಾಯನಿಕ ಮುಕ್ತ ಜೀವನ ಹಾಗೂ ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಂಡಲ್ಲಿ ರೋಗಗಳಿಂದ ದೂರವಿರಬಹುದು.

ಮೇಲಿಂದ ಮೇಲೆ ಕಾಡುವ ಉರಿಮೂತ್ರ, ಮೂತ್ರನಾಳದ ಸೋಂಕು, ಬಂಜೆತನದಂಥ ಕೆಲವು ಸಮಸ್ಯೆಗಳಿಗೆ ಪತಿ, ಪತ್ನಿ ಇಬ್ಬರೂ ತಪಾಸಣೆಗೊಳಪಡುವುದು ಅಗತ್ಯ ಎಂಬ ಸಲಹೆಗಳನ್ನೂ ಡಾ. ಬಿ.ಆರ್‌. ಬಾರಕೋಲ, ಡಾ. ರಶ್ಮಿ ಹಿರೇಮಠ ಹೇಳಿದರು.

ಋತುಸ್ರಾವ ಹಾಗೂ ಮಹಿಳೆಯರ ಆರೋಗ್ಯದ ಕುರಿತ ತಪ್ಪು ತಿಳಿವಳಿಕೆಗಳನ್ನು ದೂರ ಮಾಡಲು ಶಿಕ್ಷಣ, ಜಾಗೃತಿ ಅಗತ್ಯವಾಗಿದೆ. ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸಬೇಕು.  

ಹದಿಹರೆಯದವರಲ್ಲಿ ಗರ್ಭಾವಸ್ಥೆ ಪ್ರಮಾಣ ಹೆಚ್ಚಾಗಿದ್ದು, ಅವರಿಗೆ ಲೈಂಗಿಕ ಶಿಕ್ಷಣ ನೀಡಬೇಕಾದ ಅಗತ್ಯವಿದೆ. ಪ್ರೌಢಾವಸ್ಥೆಯಲ್ಲಿನ ಬದಲಾವಣೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ವೈದ್ಯರ ಸಲಹೆ, ಸೂಚನೆಗಳನ್ನು ಪಾಲಿಸಿದರೆ ಘೋರ ಸಮಸ್ಯೆಗಳಿಂದ ಪಾರಾಗಬಹುದಾಗಿದೆ ಎಂಬುದು ತಜ್ಞರು ನೀಡಿದ ಮಹತ್ವದ ಸಲಹೆಗಳು.

ಓದುಗರು ಕೇಳಿದ ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಿದ್ದು ಹೀಗೆ...

* ಸವಿತಾ, ವಿಜಯಪುರ: ನನಗೆ 36 ವರ್ಷ. ಒಂದು ಮಗುವಿದೆ. ಹೈಪೋಥೈರಾಯ್ಡ್‌ ಸಮಸ್ಯೆಯಿಂದ ಎರಡು ಬಾರಿ ಗರ್ಭಪಾತವಾಗಿದೆ. ಅಧಿಕ ರಕ್ತಸ್ರಾವದಿಂದಾಗಿ 3 ವರ್ಷದಿಂದ ಮತ್ತೊಂದು ಮಗು ಪಡೆಯಲು ಸಾಧ್ಯವಾಗಿಲ್ಲ. ಪರಿಹಾರ ತಿಳಿಸಿ.

– ನಿಮಗೆ 36 ವರ್ಷವಾಗಿರುವುದರಿಂದ ವಯೋ ಸಂಬಂಧಿತ ಸಮಸ್ಯೆಗಳು ಸಜಹ. ಥೈರಾಯ್ಡ್‌ ಉತ್ತೇಜಕ ಹಾರ್ಮೋನ್‌ಗಳ(ಟಿಎಸ್‌ಎಚ್‌) ಪ್ರಮಾಣವನ್ನು ಸಮರ್ಪಕವಾಗಿ ಇಟ್ಟುಕೊಂಡು ಮತ್ತೊಂದು ಮಗು ಪಡೆಯಲು ಪ್ರಯತ್ನಿಸಬಹುದು. ಒಮ್ಮೆ ವೈದ್ಯರ ಬಳಿ ಸಲಹೆ ಪಡೆಯಿರಿ.

* ನಿರ್ಮಲಾ, ಬೆಂಗಳೂರು: 3–4 ತಿಂಗಳಿಗೊಮ್ಮೆ ಮುಟ್ಟು ಆಗುತ್ತಿದೆ. ಏನಾದರೂ ಸಮಸ್ಯೆ ಆಗಲಿದೆಯೇ?

– ನಿಮ್ಮ ಹಾರ್ಮೋನ್‌ಗಳ ಪ್ರೊಫೈಲ್‌ ಪರಿಶೀಲಿಸಬೇಕು. ಥೈರಾಯ್ಡ್‌ ಸಮಸ್ಯೆ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಿರಿ. ದೇಹದ ತೂಕ ಹೆಚ್ಚಿದ್ದರೂ ಮುಟ್ಟಿನ ಅವಧಿ ವ್ಯತ್ಯಾಸ ಆಗಲಿದೆ. ಪರಿಸರ ಮಾಲಿನ್ಯದಿಂದ ಮಹಿಳೆಯರಲ್ಲಿ  ಪಿಸಿಒಎಸ್‌ ಇತ್ತೀಚೆಗೆ ಸಾಮಾನ್ಯ ಎನಿಸಿದೆ.

*  ಆಯೂಷ್‌, ವಿಜಯಪುರ: ಮದುವೆಯಾಗಿ 5 ವರ್ಷವಾಗಿದೆ. ನಮಗೆ ಮಕ್ಕಳಾಗಿಲ್ಲ. ಪತ್ನಿಗೆ ಉರಿಮೂತ್ರದ ಸಮಸ್ಯೆ ಇದೆ. ಏನು ಮಾಡಬೇಕು? ಸಂಭೋಗದ ನಂತರ ಇಬ್ಬರಿಗೂ ಉರಿಯುವ ಸಮಸ್ಯೆ ಕಾಡುತ್ತದೆ.

–  ಒಮ್ಮೊಮ್ಮೆ ಉರಿಮೂತ್ರದ ಸಮಸ್ಯೆ ಪತಿಯಿಂದ ಪತ್ನಿಗೂ ವರ್ಗಾವಣೆ ಆಗುವ ಸಾಧ್ಯತೆಗಳಿರುತ್ತವೆ. ಒಮ್ಮೆ ಸುಚಿರಾಯು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ.

* ಛಾಯಾ ಕುಲಕರ್ಣಿ, ಬಾಗಲಕೋಟೆ: ನನ್ನ ವಯಸ್ಸು 38 ವರ್ಷಗಳು. ಉಷ್ಣ ಹೆಚ್ಚಾಗಿ, ಉರಿ ಮೂತ್ರವೂ ಆಗುತ್ತಿದೆ. ಪರಿಹಾರವೇನು?

-ಸಾಮಾನ್ಯ ಉಷ್ಣದಿಂದ ಇದ್ದರೆ ಎಳೆನೀರು, ಮಜ್ಜಿಗೆ ಕುಡಿಯುವುದು ಒಳ್ಳೆಯದು. ಕೆಲವೊಮ್ಮೆ ಸಕ್ಕರೆ ಕಾಯಿಲೆ ಇದ್ದಾಗಲೂ ಹೀಗೆ ಆಗುವ ಸಾಧ್ಯತೆ ಇರುತ್ತದೆ. ಹಾಗೇನಾದರೂ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

* ವೀಣಾ, ಬನಶಂಕರಿ, ಬೆಂಗಳೂರು: ನಾನು ಉದ್ಯೋಗಸ್ಥ ಯುವತಿ. 24 ವರ್ಷಗಳು. ನನ್ನ ದೇಹದ ತೂಕ 60ಕೆ.ಜಿ ಇದೆ. ಕೂದಲೂ ಹೆಚ್ಚಾಗುತ್ತಿದೆ. ಋತುಸ್ರಾವದಲ್ಲೂ ಏರುಪೇರಾಗುತ್ತಿದೆ. ಏನು ಮಾಡಲಿ?

- ಇದು ಪಿಸಿಒಡಿ ಸಮಸ್ಯೆಯ ಲಕ್ಷಣಗಳಾಗಿವೆ. ಥೈರಾಯ್ಡ್‌ ಇದ್ದಾಗಲೂ ಋತುಸ್ರಾವದಲ್ಲಿ ಏರುಪೇರು ಉಂಟಾಗುತ್ತದೆ. ಮುಖ್ಯವಾಗಿ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಿ. ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವನೆ ಮಾಡಿ. ತೂಕ ಕಡಿಮೆ ಮಾಡಲು ನಿತ್ಯ ವ್ಯಾಯಾಮ ಮಾಡಿ. ಹಾರ್ಮೊನಲ್‌ ಚಿಕಿತ್ಸೆ ಪಡೆಯಲು ವೈದ್ಯರನ್ನು ಸಂಪರ್ಕಿಸಿ.

* ನಂದಿನಿ, ಬೆಳಗಾವಿ ಜಿಲ್ಲೆ: ಬಿಳಿ ಸೆರಗು ಹೆಚ್ಚಾಗಿ ಕಿರಿಕಿರಿ ಆಗುತ್ತಿದೆ. ಇದರಿಂದ ಏನಾದರೂ ಸಮಸ್ಯೆ ಆಗುತ್ತದೆಯೇ?

- ಹೆಣ್ಣು ಮಕ್ಕಳಲ್ಲಿ ಬಿಳಿ ಸೆರಗು ಸಾಮಾನ್ಯ. ಆದರೆ, ನೋವು, ಕೆರೆತ, ಬಣ್ಣದಲ್ಲಿ ಬದಲಾವಣೆ ಕಂಡು ಬಂದರೆ ತುರ್ತು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

* ಶಿವಾನಿ, ದಾವಣಗೆರೆ: ನನಗೆ 35 ವರ್ಷಗಳಾಗಿದ್ದು, ಅವಿವಾಹಿತೆ. ಋತುಸ್ರಾವ ಸಂದರ್ಭದಲ್ಲಿ ಎರಡನೇ ದಿನ ರಕ್ತಸ್ರಾವ ಹೆಚ್ಚಾಗುತ್ತದೆ. ಮಾನಸಿಕ ಖಿನ್ನತೆಗೆ ಒಳಗಾಗುತ್ತೇನೆ. ಇದರಿಂದ ಹೇಗೆ ಹೊರಬರಲಿ?

- ಇದು ಹಾರ್ಮೋನಿಗೆ ಸಂಬಂಧಿಸಿದೆ. ಇದರ ಬಗ್ಗೆ ಜಾಗೃತರಾಗಿ, ಚಿಂತೆ ಮಾಡುವುದನ್ನು ಬಿಡಿ. 35 ವರ್ಷಗಳ ನಂತರವೂ ಎರಡನೆಯ ದಿನ ರಕ್ತಸ್ರಾವ ಹೆಚ್ಚು ಕಂಡು ಬಂದರೆ, ಥೈರಾಯ್ಡ್‌ ಸಾಧ್ಯತೆಯೂ ಇರುತ್ತದೆ. ಈ ಬಗ್ಗೆ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.

* ಸುಧಾಕರ ಪಾಟೀಲ, ಚಿಕ್ಕೋಡಿ: ನನ್ನ ಪತ್ನಿಗೆ ಋತುಚಕ್ರದಲ್ಲಿ ಏರುಪೇರಾಗಿದೆ. 2 ತಿಂಗಳಿಂದ ಸಮಸ್ಯೆ ಎದುರಾಗಿದೆ. ಆಕೆಯ ತೂಕ ಸರಿಯಾಗಿದೆ. ಸ್ಕ್ಯಾನಿಂಗ್ ಸಹ ಮಾಡಿಸಲಾಗಿದ್ದು, ಥೈರಾಯ್ಡ್‌ ಪ್ರಮಾಣ ಸಹಜವಾಗಿದೆ ಎಂದು ಬಂದಿದೆ. ಈ ಸಮಸ್ಯೆಗೆ ಪರಿಹಾರವೇನು?

ಪಾಲಿಸೈಸ್ಟಿಕ್ ಓವರಿಸ್‌ ಸಮಸ್ಯೆ ಇದ್ದರೆ ಹೀಗಾಗುವ ಸಾಧ್ಯತೆ ಇರುತ್ತದೆ. ಚಿಕಿತ್ಸೆ ಮೂಲಕ ಋತುಚಕ್ರ ಸಹಜವಾಗುವಂತೆ ಮಾಡಲಾಗುತ್ತದೆ. ಹೊರಗಿನಿಂದ ಹಾರ್ಮೋನ್  ಚಿಕಿತ್ಸೆಯ ಮೂಲಕ  ಈ ಪ್ರಕ್ರಿಯೆ ಹೊಸತನ ಪಡೆಯುತ್ತದೆ.

* ಲಕ್ಷ್ಮಣ, ವಿಜಯಪುರ: ನನ್ನ ಆಪ್ತರು ಮದುವೆಯಾಗಿ 14 ವರ್ಷವಾದರೂ ಮಕ್ಕಳಾಗಿಲ್ಲ. ದಂಪತಿ ಸುಮಾರು 40 ವರ್ಷ ವಯಸ್ಸಿನವರು. ಇನ್ನು ಮಕ್ಕಳಾಗುವ ಸಾಧ್ಯತೆ ಇದೆಯೇ?

ದಂಪತಿಯನ್ನು ಚಿಕಿತ್ಸೆಗೆ ಒಳಪಡಿಸಿದ ನಂತರವಷ್ಟೇ ಸಮಸ್ಯೆ ಏನೆಂದು ತಿಳಿದುಬರುತ್ತದೆ. ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿ.

* ಚಂದನಾ, ಹೊನ್ನಾಳಿ: ನನಗೆ ಮದುವೆ ಆಗಿ ಒಂದು ವರ್ಷವಾಗಿದೆ. ಋತುಸ್ರಾವದಲ್ಲಿ ಏರುಪೇರು ಉಂಟಾಗುತ್ತಿದೆ. ಎರಡು ಬಾರಿ ಪರೀಕ್ಷೆ ಮಾಡಿಸಿದಾಗಲೂ ಸಮಸ್ಯೆ ಕಂಡುಬಂದಿಲ್ಲ. ತೂಕ ಹೆಚ್ಚಿದೆ. 

ಮೊದಲು ಥೈರಾಯ್ಡ್‌ ಪರೀಕ್ಷೆ ಮಾಡಿಸಬೇಕು. ಥೈರಾಯ್ಡ್‌ ಪ್ರಮಾಣ ಸಹಜವಾಗಿದ್ದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ತೂಕದಲ್ಲಿ ಸಮತೋಲ ಕಾಯ್ದುಕೊಳ್ಳುವುದು ಅವಶ್ಯ. ವೈದ್ಯರ ಸಲಹೆಯಂತೆ ನಿಯಮಿತ ಆಹಾರ, ವ್ಯಾಯಾಮ ಮಾಡುವುದು ಉತ್ತಮ.

* ಸುಷ್ಮಾ, ಬೆಂಗಳೂರು: ನನಗೀಗ 36 ವರ್ಷ. ಜ.10ರ ನಂತರ ಋತುಚಕ್ರದಲ್ಲಿ ಸಮಸ್ಯೆ ಉಂಟಾಗಿದೆ. ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದೇನೆ. ಆದರೂ ಸರಿಯಾಗಿಲ್ಲ.

ಇದಕ್ಕೆ ಆತಂಕಪಡುವ ಅಗತ್ಯವಿಲ್ಲ. ಒಮ್ಮೊಮ್ಮೆ ತಡವಾಗುವ ಸಾಧ್ಯತೆಗಳಿರುತ್ತದೆ. ವೈದ್ಯರ ಚಿಕಿತ್ಸೆ ಮುಂದುವರಿಸಿ. ಅಗತ್ಯ ಔಷಧ ಪಡೆಯಿರಿ. ಮುಂದೆ ಋತುಚಕ್ರ ಸಹಜವಾಗುತ್ತದೆ.

ಇಸ್ಟ್ರೋಜೆನ್‌ ಮತ್ತು ಸೋಯಾಬಿನ್‌

ಎಷ್ಟೋ ಮಹಿಳೆಯರು ಕಾರಣವಿಲ್ಲದೆ ಅಳುತ್ತಾರೆ, ಸಿಟ್ಟಿಗೊಳಗಾಗುತ್ತಾರೆ. ಏನಾಗ್ತಿಗೆ ಅನ್ನೋದು ಅವರಿಗೇ ಗೊತ್ತಾಗದ ಸ್ಥಿತಿಯಲ್ಲಿ ಅವರಿರುತ್ತಾರೆ. ಇದನ್ನು ಮನೋಪಲ್ಲಟ ಎಂದು ಹೇಳಲಾಗುವುದು. ಇದಕ್ಕೆ ಮೂಲ ಕಾರಣ ಇಸ್ಟ್ರೋಜೆನ್‌ ಕೊರತೆ. ಇದರಿಂದ ತೂಕ ಹೆಚ್ಚಬಹುದು, ಇಲ್ಲವೆ ಇಳಿಯಬಹುದು, ತಲೆಕೂದಲು ಉದುರಲಿದೆ. ಮನೋಪಲ್ಲಟ ಸಮಸ್ಯೆಯಿಂದ ಬಳಲುತ್ತಿರುವವರು ಕೌನ್ಸೆಲಿಂಗ್‌ ಹಾಗೂ ಚಿಕಿತ್ಸೆಗೆ ಒಳಪಡುವುದು ಅಗತ್ಯ. ಅಲ್ಲಿ ಹಾರ್ಮೋನ್‌ ಚಿಕಿತ್ಸೆಯನ್ನು ಅನುಸರಿಸಲಾಗುವುದು. ಸೋಯಾಬಿನ್‌ಯುಕ್ತ ಆಹಾರ ಸೇವನೆಯಿಂದ ಇಸ್ಟ್ರೋಜೆನ್‌ ಲೆವೆಲ್‌ ಅನ್ನು ಕಾಯ್ದುಕೊಳ್ಳಬಹುದು.

ತಡ ಮದುವೆ; ಹಲವು ತೊಂದರೆ

ಮಹಿಳೆಯ 22ರಿಂದ 27ನೇ ವಯಸ್ಸಿನ ಅವಧಿ ಉತ್ತಮ ಫಲವಂತಿಕೆಯ ಅವಧಿ ಎನ್ನಬಹುದು. ಆದರೆ ಈಗ 27 ಆದರೂ ಮದುವೆಯೇ ಆಗುತ್ತಿಲ್ಲ. ಹೆಚ್ಚಿನ ಓದು, ಕೆಲಸವೂ ಅದಕ್ಕೆ ಕಾರಣವಿರಬಹುದು. ಮದುವೆ ವಯಸ್ಸು 28,29, 30ಕ್ಕೆ ಮುಂದುಡಿದಾಗ ಉತ್ತಮ ಫಲವಂತಿಕೆ ವಯಸ್ಸು ಮುಗಿದು ಹೋಗಿರುತ್ತದೆ. 35ನೇ ವಯಸ್ಸಿನ ನಂತರ ಅಂಡಾಣುಗಳ ಫಲವಂತಿಕೆ ಕುಗ್ಗಲಿದೆ. ಅದರಿಂದ ಗರ್ಭಧಾರಣೆ, ಮಕ್ಕಳು ಹೆರಲು ತೊಂದರೆ ಜಾಸ್ತಿಯಾಗುತ್ತಿದೆ.

ಮೊನೊಪಾಸ್‌ ಮತ್ತು ಮಾನಸಿಕತೆ

ಮಹಿಳೆಯ ಜೀವನದಲ್ಲಿ ಮೊನೊಪಾಸ್‌ ಮಹತ್ವದ ಘಟ್ಟ. ಮಹಿಳೆ ತನ್ನ 40ರಿಂದ 45ರ ವಯಸ್ಸಿನಲ್ಲಿ ಮೊನೊಪಾಸ್‌ ಎದುರಿಸಬೇಕಿರುವುದು ಸಹಜ ಪ್ರಕ್ರಿಯೆ. ಈ ಸಂದರ್ಭದಲ್ಲಿ ಮಹಿಳೆಯ ಮಾನಸಿಕತೆಯಲ್ಲಿ ಏರು ಪೇರಾಗಲಿದೆ. ಈ ವೇಳೆಯಲ್ಲಿ ತೂಕ ಹೆಚ್ಚಲಿದೆ. ಮಾನಸಿಕವಾಗಿ ಖಿನ್ನತೆಗೊಳಗಾಗುತ್ತಾರೆ. ಈ ಸಂದರ್ಭದಲ್ಲಿ ನಿಯಮಿತ ತಪಾಸಣೆ, ಸ್ಕ್ಯಾನಿಂಗ್‌ಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು. ಇನ್ನು ಕೆಲವರಿಗೆ 50 ದಾಟಿದರೂ ಮುಟ್ಟು ನಿಂತಿರುವುದಿಲ್ಲ. ಅಂಥವರಿಗೆ ಸಹಜ ಸ್ರಾವವಿದ್ದಲ್ಲಿ ಸಮಸ್ಯೆಯೇನಿಲ್ಲ. ಹೆಚ್ಚುಗಟ್ಟಿದ ರೀತಿಯಲ್ಲಿ ಸ್ರಾವವಿದ್ದರೆ ತಜ್ಞರನ್ನು ಕಂಡು ಚಿಕಿತ್ಸೆ ಪಡೆಯುವುದು ಅಗತ್ಯ.

ರಾಸಾಯನಿಕದಿಂದ ಪರಿಣಾಮ

ಒತ್ತಡದ ಬದುಕು ಋತುಚಕ್ರದ ಏರುಪೇರಿಗೆ ಕಾರಣವಾಗುವಂತೆ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಕೂಡ ಹಲವು ಸಮಸ್ಯೆಗಳಿಗೆ ದಾರಿಯಾಗಲಿವೆ. ಲಿಪ್‌ಸ್ಟಿಕ್‌, ಟಾಲ್ಕಂ ಪೌಡರ್‌, ಸೋಪ್‌, ಸ್ಪ್ರೇಗಳಲ್ಲಿ ರಾಸಾಯನಿಕವು ಹೇರಳವಾಗಿರುವುದರಿಂದ ಅವು ಬಳಸುವವರ ಮೇಲೆ ಪರಿಣಾಮ ಬೀರಲಿದೆ. ಆಹಾರ ಬೆಳೆಗಳಲ್ಲಿ ಬಳಸುವ ಕೀಟನಾಶಕಗಳು ಕೂಡ ಪುರುಷರ ಬಂಜೆತನಕ್ಕೆ ಕಾರಣವಾಗುತ್ತಿದೆ. ಟಾಲ್ಕಂ ಪೌಡರ್‌ ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗಲಿದೆ. ಹಿಂದೆಲ್ಲ ನೈಸರ್ಗಿಕವಾಗಿ/ಸಾವಯವ ರೀತಿಯಲ್ಲಿ ಬೆಳೆದ ಆಹಾರ ಬೆಳೆಗಳು ಇದ್ದವು. ಈಗೆಲ್ಲ ರಾಸಾಯನಿಕಮುಕ್ತ ಆಹಾರ ಸಿಗುವುದೇ ಇಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ 2030ರ ವೇಳೆಗೆ ಸಹಜ ಗರ್ಭಧಾರಣೆ ಬದಲು ಐವಿಎಫ್‌ ಮೂಲಕವೇ ಮಕ್ಕಳನ್ನು ಹೆರುವಂತಾಗಬಹುದು. ಆದ್ದರಿಂದ ನಾವು ಈಗಲೇ ಎಚ್ಚೆತ್ತುಕೊಳ್ಳುವುದು ಅತ್ಯಗತ್ಯ. ನಾವು ನಮ್ಮ ಮೊದಲಿನ ಜೀವನಪದ್ಧತಿಗೆ ಮರಳುವುದು ಅನಿವಾರ್ಯ. ಪುರುಷರಲ್ಲಿ ಬಂಜೆತನಕ್ಕೆ ಸಿಗರೇಟ್‌, ಗುಟ್ಕಾ ಸೇವನೆ, ಬಿಗಿಯಾದ ಉಡುಪು ಧರಿಸುವುದು ಕೂಡ ಕಾರಣವಾಗುತ್ತಿದೆ. ಮದುವೆಯಾದ ದಂಪತಿ ಒಂದು ವರ್ಷ ಯಾವುದೇ ಗರ್ಭಧಾರಣೆ ಸುರಕ್ಷಾ ಕ್ರಮಗಳನ್ನು ಬಳಸದೆ, ಒಟ್ಟಿಗೆ ಇದ್ದೂ ಮಕ್ಕಳಾಗದಿದ್ದ ಸಂದರ್ಭದಲ್ಲಿ ಅವರು ವೈದ್ಯರನ್ನು ಕಂಡು ತಪಾಸಣೆಗೊಳಗಾವುದು ಮುಖ್ಯ.

ಸಮತೋಲಿತ ಪಥ್ಯ ಅಗತ್ಯ

ಗರ್ಭಿಣಿಯರಲ್ಲಿ ಕಬ್ಬಿಣಾಂಶದ ಕೊರತೆಗೆ ಸಮತೋಲಿತ ಪಥ್ಯವೇ ಪರಿಹಾರ. ಬರೀ ಪೌಷ್ಟಿಕ ಆಹಾರವಷ್ಟೇ ನೀಡಿದರೆ ಕಬ್ಬಿಣಾಂಶ ಸಿಗುವುದಿಲ್ಲ. ಅದೇ ರೀತಿ ಕಬ್ಬಿಣಾಂಶದ ಮಾತ್ರೆ ನೀಡಿದರೂ ಅನಿಮಿಯಾ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಮತೋಲಿತ ಪಥ್ಯಾಹಾರ ಅನುಸರಿಸಬೇಕು.

ಬದಲಾದ ಋತುಸ್ರಾವದ ಅವಧಿ

ಜೀವನಶೈಲಿ, ಆಹಾರ ಪದ್ಧತಿಯಿಂದಾಗಿ ಬಾಲಕಿಯರಲ್ಲಿ ಋತುಸ್ರಾವದ ಅವಧಿ ಬದಲಾಗಿದೆ. ಈ ಹಿಂದೆ 13–14ನೇ ವಯಸ್ಸಿಗೆ ಋತುಮತಿ ಆಗುತ್ತಿದ್ದರು. ಆದರೆ, ಈಗ ಆ ವಯಸ್ಸು 10–11 ವರ್ಷಕ್ಕೆ ಇಳಿದಿದೆ. ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನ, ದೈಹಿಕ ಬೆಳವಣಿಗೆಯಿಂದಾಗಿ ಬೇಗನೇ ಋತುಮತಿ ಆಗುತ್ತಿದ್ದಾರೆ. ತೂಕ ಹೆಚ್ಚಳದಿಂದಲೂ ಕೆಲವರು ಬೇಗ ಋತುಮತಿ ಆಗುತ್ತಾರೆ. 10 ವರ್ಷದ ಬಾಲಕಿಗೆ ಋತುಸ್ರಾವ ಸಂದರ್ಭ ಸಂಭಾಳಿಸುವುದು ಕಷ್ಟಕರವಾಗಬಹುದು. ಅದಕ್ಕಾಗಿ ಶಾಲೆಗಳಲ್ಲಿ ಪರಿಸ್ಥಿತಿ ನಿಭಾಯಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮಾನಸಿಕ ಸಮಾಲೋಚನೆ, ಯೋಗ ಮೂಲಕ ಪರಿಸ್ಥಿತಿ ಎದುರಿಸುವ ಧೈರ್ಯ ತುಂಬಲಾಗುತ್ತಿದೆ.

ಋತುಮತಿಯಾಗುವ ವಯಸ್ಸು

ಬಾಲಕಿಯರ ಬೆಳವಣಿಗೆ ಸಾಮಾನ್ಯವಾಗಿದ್ದು, 14 ವರ್ಷದವರೆಗೆ ಋತುಮತಿಯಾಗಬಹುದು. 14 ವರ್ಷವಾದರೂ ಋತುಮತಿ ಆಗದಿದ್ದರೆ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದರೆ ಬಾಲಕಿಯಲ್ಲಿ ಗರ್ಭಧಾರಣೆ ಅವಕಾಶ ಕ್ಷೀಣಿಸಬಹುದು. ಮಹಿಳೆಯು 30 ವರ್ಷದೊಳಗೆ ಮಕ್ಕಳನ್ನು ಹಡೆದರೆ ಉತ್ತಮ, ಆದರೆಮ ಇಂದು ಶಿಕ್ಷಣ, ಉದ್ಯೋಗದ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಮಸ್ಯೆಗಳು ಸಾಮಾನ್ಯವಾಗಿವೆ.

ಶಿಶು ಮರಣ ಪ್ರಮಾಣ ಇಳಿಕೆ

ಶೇ 80 ರಷ್ಟು ಮಹಿಳೆಯರಲ್ಲಿ ವರ್ಣತಂತುಗಳ ಅಪಸಾಮಾನ್ಯ ವರ್ತನೆಯಿಂದ ಗರ್ಭಪಾತ ಸಂಭವಿಸುತ್ತದೆ. ವರ್ಣ ತಂತುಗಳ (23+23=46) ಪ್ರಮಾಣದಲ್ಲಿ ಇಳಿಕೆಯಾದರೆ ಡೌನ್‌ಸಿಂಡ್ರೋಮ್ಸ್‌ ಆಗಲಿದೆ. ಆಗ ಶಿಶು ಮರಣ ಹೆಚ್ಚಲಿದೆ. ಶಿಶು ಮರಣ ಪ್ರಮಾಣ ಗಣನೀಯವಾಗಿ ತಗ್ಗುತ್ತಿದೆ. ಇದು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಲಿದೆ. ಕೇರಳದಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಇದ್ದರೆ, ಕರ್ನಾಟಕದಲ್ಲಿ ಮಧ್ಯಮ ಕ್ರಮಾಂಕದಲ್ಲಿದೆ. ಬಿಹಾರ, ರಾಜಸ್ತಾನದಲ್ಲಿ ಪ್ರಮಾಣ ಹೆಚ್ಚಿದೆ.

ಅಧಿಕ ಮತ್ತು ಸ್ವಾಭಾವಿಕ ರಕ್ತಸ್ರಾವದ ವ್ಯತ್ಯಾಸ

ಸ್ವಾಭಾವಿಕ ಪ್ರಕ್ರಿಯೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದಿಲ್ಲ. ಅಧಿಕ ರಕ್ತಸ್ರಾವದಲ್ಲಿ ರಕ್ತ ಹೆಪ್ಪುಗಟ್ಟಿರುತ್ತದೆ. ರಕ್ತಸ್ರಾವವು ಸ್ವಾಭಾವಿಕವೋ ಅಥವಾ ಅಧಿಕವೋ ಎಂಬುದನ್ನು ತಿಳಿಯಲು ನಿಖರ ಮಾನದಂಡಗಳಿಲ್ಲ. ಆದರೆ, ಋತುಸ್ರಾವಕ್ಕೆ ಒಳಗಾದ ಮಹಿಳೆ ದಿನಕ್ಕೆ ಎಷ್ಟು ಪ್ಯಾಡ್‌ ಬದಲಿಸುತ್ತಾರೆ ಎಂಬುದರ ಮೇಲೆ ಅಧಿಕವೋ, ಸ್ವಾಭಾವಿಕವೋ ನಿರ್ಧರಿಸಲಾಗುತ್ತಿದೆ. ದಿನಕ್ಕೆ 3–4 ಪ್ಯಾಡ್‌ ಬದಲಿಸಿದರೆ ಅಧಿಕ ರಕ್ತಸ್ರಾವದ ಲಕ್ಷಣ, ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಫೋನ್‌ ಇನ್‌ ನಿರ್ವಹಣೆ: ರಶ್ಮಿ ಎಸ್, ಆರ್‌. ಮಂಜುನಾಥ್‌, ಕೃಷ್ಣಿ, ಚಂದ್ರಪ್ಪ, ಸಬೀನಾ ಎ., ಗೋವರ್ಧನ್‌ ಎಸ್‌.ಎನ್‌. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು