ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಪಸ್‌; ಹಲವು ಅಂಗಗಳ ಕಾಯಿಲೆ

Last Updated 31 ಮೇ 2022, 8:40 IST
ಅಕ್ಷರ ಗಾತ್ರ

ಇದೇ ಮೇ 10ರಂದು ವಿಶ್ವ ಲೂಪಸ್‌ ದಿನಾಚರಣೆಯನ್ನು ಆಚರಿಸಲಾಯಿತು. ಲೂಪಸ್‌ ಕಾಯಿಲೆಯು ಹೆಚ್ಚಾಗಿ 20–50 ವಯಸ್ಸಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಪುರುಷರು ಹಾಗೂ ಮಕ್ಕಳಲ್ಲಿ ಕೂಡ ಕಾಣಿಸಿಕೊಳ್ಳಬಹುದು. ವಿನಾ ಕಾರಣ ದೇಹದಲ್ಲಿ ಶುರುವಾಗುವ ಈ ಕಾಯಿಲೆಯನ್ನು ‘ಆಟೋ–ಇಮ್ಯುನ್‌ ಕಾಯಿಲೆ’ ಎಂದು ಕರೆಯುತ್ತೇವೆ. ನಮ್ಮ ದೇಹದ ವಿವಿಧ ಅಂಗಾಂಗಳನ್ನು ‘ನಮ್ಮದಲ್ಲವೆಂದು’ ಪರಿಗಣಿಸಿ ದೇಹದ ರೋಗನಿರೋಧಕ ವ್ಯವಸ್ಥೆಯು ಕಾಯಿಲೆಯನ್ನು ಉಂಟುಮಾಡುತ್ತದೆ. ನಮ್ಮ ದೇಹದ ಹಲವು ಅಂಗಗಳಲ್ಲಿ ಕಾಣಿಸಿಕೊಳ್ಳುವ ‘ಲೂಪಸ್‌’, ನಮ್ಮ ಜೀವನಪರ್ಯಂತವಿರುವ ಕಾಯಿಲೆ.

ನಿರಂತರ ಜ್ವರ, ಕೀಲುನೋವು, ಬಾಯಿಹುಣ್ಣು, ಸೂರ್ಯಸ್ಪರ್ಶವಾಗುವ ದೇಹದ ಭಾಗಗಳಲ್ಲಿ ಕೆಂಪು ದದ್ದುಗಳು, ಮುಖದ ಮೇಲೆ ಚಿಟ್ಟೆಯಾಕಾರದ ದದ್ದು, ಕೂದಲು ಉದುರುವುದು – ಇವು ಲೂಪಸ್‌ನ ಸಾಮಾನ್ಯ ಲಕ್ಷಣಗಳು. ಸಾವಿರದಲ್ಲಿ ಒಬ್ಬರಿಗಷ್ಟೆ ಬರುವ ಲೂಪಸ್‌, ಶೇ 60ರಷ್ಟು ಜನರಲ್ಲಿ ಮೂತ್ರಪಿಂಡಗಳಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ. ಕೆಲವರಲ್ಲಿ ಹೃದಯ, ಶ್ವಾಸಕೋಶ, ಮಿದುಳು ಮತ್ತು ನರಗಳಲ್ಲಿ ಕೂಡ ಲೂಪಸ್‌ ಕಾಣಿಸಿಕೊಳ್ಳಬಹುದು. ಆರಂಭಿಕ ಹಂತದಲ್ಲಿ ಲೂಪಸ್‌ ಪತ್ತೆಯಾಗದಿದ್ದರೆ, ದೇಹದ ವಿವಧ ಅಂಗಗಳಲ್ಲಿ ಇದು ತೀವ್ರ ಸ್ವರೂಪವನ್ನು ತಾಳುತ್ತವೆ; ಆ ಅಂಗಗಳ ಕಾರ್ಯಾಚರಣೆಗೆ ಇದರಿಂದ ತೊಂದರೆಯಾಗುತ್ತದೆ. ಕೆಲವೊಮ್ಮೆ ರೋಗಿಯ ಪ್ರಾಣಕ್ಕೂ ತೊಂದರೆ ಎದುರಾಗಬಹುದು.

ಗರ್ಭಿಣಿಯರಲ್ಲಿ ಲೂಪಸ್‌ ಹೆಚ್ಚು ತೊಂದರೆಯನ್ನು ಉಂಟುಮಾಡಬಹುದು. ಈ ಕಾಯಿಲೆಯ ಲಕ್ಷಣಗಳು ಇವರಲ್ಲಿ ಹೆಚ್ಚು ಕಾಣಿಸಿಕೊಳ್ಳಬಹುದು; ಗರ್ಭಪಾತವಾಗುವ ಸಾಧ್ಯತೆಯೂ ಹೆಚ್ಚು. ಗರ್ಭಧಾರಣೆಗೆ ಮುನ್ನ ಕಾಯಿಲೆಯು ನಿಯಂತ್ರಣವಾದಲ್ಲಿ, ತಾಯಿ ಮತ್ತು ಮಗುವಿಗೆ ಹಾನಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ರಕ್ತ ಮತ್ತು ಮೂತ್ರದ ಪರೀಕ್ಷೆಯಿಂದ ಲೂಪಸ್‌ ಕಾಯಿಲೆಯನ್ನು ಪತ್ತೆಹಚ್ಚಬಹುದು.

ಜನರಲ್ಲಿ ಲೂಪಸ್‌ ಕಾಯಿಲೆಯ ಬಗ್ಗೆ ಅರಿವನ್ನು ಮೂಡಿಸಲು ಪ್ರತಿ ವರ್ಷ ಮೇ ತಿಂಗಳನ್ನು ‘ಲೂಪಸ್‌ಮಾಸ’ವನ್ನಾಗಿ ಆಚರಿಸುತ್ತೇವೆ. ಈ ಕಾಯಿಲೆಯ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಹತ್ತಿರದ ಸಂಧಿವಾತತಜ್ಞರನ್ನು (ರೂಮಟಾಲಜಿಸ್ಟ್‌) ಸಾಧ್ಯವಾದಷ್ಟು ಶೀಘ್ರವಾಗಿ ಕಾಣಬೇಕು. ಈಗ ಈ ಕಾಯಿಲೆಗೆ ಬಹಳಷ್ಟು ಉತ್ಕೃಷ್ಟವಾದ ಔಷಧಗಳಿವೆ. ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಸರಿಯಾದ ಔಷಧಗಳನ್ನು ತೆಗೆದುಕೊಂಡರೆ, ರೋಗ ಉಲ್ಭಣವಾಗದಂತೆ ತಡೆಗಟ್ಟಬಹುದು. ಹೈಡ್ರಾಕ್ಸಿಕ್ಲೋರೋಕ್ವಿನ್‌, ಸ್ಟಿರಾಯ್ಡ್ ಹಾಗೂ ಇಮ್ಯುನೋಸಪ್ರೆಸಿವ್‌ ಔಷಧಗಳನ್ನು ಬಳಸಲಾಗುವುದು. ಸೂರ್ಯನ ಕಿರಣಗಳಿಂದ, ಲೂಪಸ್‌ನ ಚರ್ಮದ ದದ್ದುಗಳು ಹೆಚ್ಚಾಗುತ್ತವೆ. ರೋಗಿಗಳು ಸಾಧ್ಯವಾದಷ್ಟರ ಮಟ್ಟಿಗೆ ಬಿಸಿಲಿಗೆ ಹೋಗದಿರುವುದು ಒಳ್ಳೆಯದು. ಒಂದು ವೇಳೆ ಹೋಗಲೇಬೇಕಾದ ಸಂದರ್ಭಬಂದರೆ ಅಂಥವರು ಸನ್‌ಸ್ಕ್ರೀನ್‌ ಮುಲಾಮನ್ನು ಬಳಸಬೇಕು. ಬಿಸಿಲಿಗೆ ಮೈ ಒಡ್ಡುವುದನ್ನು ತಪ್ಪಿಸಿಕೊಳ್ಳಲು ಛತ್ರಿಯನ್ನು ಉಪಯೋಗಿಸಬೇಕು; ಸಾಧ್ಯವಾದಷ್ಟು ದೇಹವನ್ನು ಆವರಿಸುವಂಥ ಉಡುಗೆಗಳನ್ನು ತೊಡುವುದು ಕೂಡ ಪ್ರಯೋಜನಕಾರಿ.

ಲೂಪಸ್‌ ಬಗ್ಗೆ ಅರಿವಿರಲಿ; ಆದರೆ ಭಯ ಬೇಡ. ವಿಶ್ವದ ಹಲವರು ಪ್ರಸಿದ್ಧ ಕಲಾವಿದರು, ಕ್ರೀಡಾಪಟುಗಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜನರಿಗೆ ಈ ಸಮಸ್ಯೆಯ ಬಗ್ಗೆ ಅರಿವನ್ನು ಮೂಡಿಸಲು ಅವರಲ್ಲಿ ಹಲವರು ತಮ್ಮ ಕಾಯಿಲೆಯ ಬಗ್ಗೆ ಬಹಿರಂಗವಾಗಿ ಸ್ವಪ್ರೇರಣೆಯಿಂದ ಘೋಷಿಸಿಕೊಂಡಿದ್ದಾರೆ. ಅಮೆರಿಕದ ಸುಪ್ರಸಿದ್ಧ ಗಾಯಕಿಯರಾದ ಸೆಲಿನಾ ಗೋಮೇಜ್‌, ಲೇಡಿ ಗಾಗಾ, ನಿಕ್‌ ಕಾನನ್‌, ಟೋನಿ ಬ್ರಾಕ್ಸ್‌ಟಿನ್‌; ಬ್ರಿಟನ್‌ನ ಗಾಯಕ ಸೀಲ್‌, ರಾಪರ್‌ ಟ್ರಿಕ್‌ ಡ್ಯಾಡಿ; ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗಳಿಸಿದ ಕ್ರೀಡಾಪಟು ಶಾನನ್ ಬಾಕ್ಸ್‌; ನಟಿ ಮಾರಿಸ್ಸ ಟಾನ್‌ಚಿರಾನ್‌ ಹಾಗೂ ಕ್ರಿಸ್ಟೀನ್‌ ಜಾನ್‌ಸ್ಟನ್‌ – ಇವರು ತಮಗೆ ಲೂಪಸ್‌ ಕಾಯಿಲೆ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಘೋಷಿಸಿಕೊಂಡಿದ್ದಾರೆ.

ಸಂಧಿವಾತತಜ್ಞರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನು ಪಡೆದರೆ ಲೂಪಸ್‌ನಿಂದ ಮುಕ್ತರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT